ಸ್ವಯಂ ಪ್ರೇರಣೆ: ವಿಧ್ಯಾರ್ಥಿಗಳ ಸಿದ್ದಿಗೆ ಸಂಜೀವಿನಿ

ಕಳೆದ ವರ್ಷದ ದ್ವಿತೀಯ ಪಿ.ಯು.ಸಿ. ಪರೀಕ್ಷೆ, ಕೋವಿಡ್ ಮೊದಲನೇ ಅಲೆಯ ನಡುವೆಯೇ ನಡೆಯಿತು. ತನ್ನ ಭವಿಷ್ಯದ ಬಗ್ಗೆ ಅನೇಕ ಕನಸುಗಳನ್ನು ಕಟ್ಟುಕೊಂಡಿದ್ದ ಆರತಿಗೆ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಆದರೆ ಅವಳು ಎದೆಗುಂದಲಿಲ್ಲ; ಅವಳೇ ತಂದೆತಾಯಿಯರಿಗೆ ಸಾಂತ್ವನ ಹೇಳಿ ಮುಂಬರುವ ಸಪ್ಲಿಮೆಂಟರಿ ಪರೀಕ್ಷೆಗೆ ಇನ್ನೂ ಹೆಚ್ಚಿನ ತಯಾರಿ ನಡೆಸುವುದಾಗಿಯೂ ಮತ್ತು ತನ್ನ ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸುವ ಯೋಜನೆಗಳಲ್ಲಿ ಯಾವ ಬದಲಾವಣೆಯೂ ಇಲ್ಲವೆಂದು ತಿಳಿಸಿದಳು.

ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ಗಳಿಸಿ ಕಂಪ್ಯೂಟರ್ ಸೈನ್ಸ್ ಕೋರ್ಸಿಗೆ ಮೆರಿಟ್ ಸೀಟ್ ಗಿಟ್ಟಿಸಿಕೊಂಡ ಆರತಿಯಂತಹ ಯುವತಿಯರು ಎಲ್ಲರಿಗೂ ಮಾದರಿಯಾಗಬಲ್ಲರು. ಇಂತಹ ಹದಿಹರೆಯದ ಯುವಕ ಯುವತಿಯರ ಬಗ್ಗೆ ಹೆಮ್ಮೆಯಾಗುತ್ತದೆ, ಅಲ್ಲವೇ?

ಈ ಕಾಲಘಟ್ಟದಲ್ಲಿ ಹಿಂದೆAದೂ ಕಂಡರಿಯದ ಸವಾಲುಗಳನ್ನೂ ಅನಿಶ್ಚತೆಯನ್ನೂ ನಾವೆಲ್ಲರೂ ನೋಡುತ್ತಿದ್ದೇವೆ. ಕೈಯಲ್ಲಿರುವ ಉದ್ಯೋಗವನ್ನು ಕಾಪಾಡಿಕೊಳ್ಳುವ ಸವಾಲು ಉದ್ಯೋಗಸ್ಥರಿಗಾದರೆ ಭವಿಷ್ಯದ ಉದ್ಯೋಗವನ್ನರಿಸಿ ನೂರಾರು ಕನಸುಗಳ ಬೆನ್ನೇರಿರುವ ವಿದ್ಯಾರ್ಥಿಗಳ ಆತಂಕ, ಅನುಮಾನ ಇನ್ನೊಂದೆಡೆ. ಅನಿಷ್ಚತೆಯ ಈ ದಿನಗಳಲ್ಲಿ,  ನಿಮ್ಮ ಕನಸುಗಳನ್ನು ಸಾಕಾರಗಳಿಸಬೇಕಾದರೆ, ಸ್ವಯಂಪ್ರೇರಣೆಯೇ ಸಾಧನೆಗೆ ಸಂಜೀವಿನಿಯಾಗಬೇಕು.

ಪ್ರೇರಣೆಯೆಂದರೆ, ನಮ್ಮ ಗುರಿಗಳತ್ತ ನಮ್ಮನ್ನು ಕ್ರಿಯಾತ್ಮಕವಾಗಿಸುವ ಚಾಲನಾ ಶಕ್ತಿ. ಏಕೆಂದರೆ, ಅತ್ಯಂತ ಶಕ್ತಿಶಾಲಿಯಾದ ಆಂತರಿಕ ಪ್ರೇರಣೆಯೇ ನಮ್ಮ ಸ್ಪೂರ್ತಿಗೂ, ಚೈತನ್ಯಕ್ಕೂ, ಕಾರ್ಯತತ್ಪರತೆಗೂ ಮೂಲ. ಪ್ರೇರಣೆ, ಬದುಕಿನ ಕನಸುಗಳನ್ನು ಕಾಣುವುದರ ಜೊತೆಗೆ ನಮ್ಮಲ್ಲಿ ಅವುಗಳನ್ನು ಸಾಧಿಸುವ ಛಲ, ಆತ್ಮವಿಶ್ವಾಸವನ್ನು ಹುಟ್ಟುಹಾಕುತ್ತದೆ.  

ಹಾಗಾದರೆ ಸ್ವಯಂಪ್ರೇರಣೆಯನ್ನು ಬೆಳೆಸಿಕೊಂಡು, ಅಲ್ಪಾವಧಿ ಮತ್ತು ದೀರ್ಘಾವಧಿ ಗುರಿಗಳನ್ನು ಸಾಧಿಸುವುದು ಹೇಗೆ? 

  1. ಬದುಕಿನ ಗುರಿಗಳು: ಸ್ಪಷ್ಟವಾದ, ಸಾಧಿಸಬಹುದಾದ  ವೃತ್ತಿ ಮತ್ತು ವೈಯಕ್ತಿಕ ಬದುಕಿನ ಗುರಿಗಳು ದೃಢವಾಗಿದ್ದರೆ, ಸ್ವಯಂ ಪ್ರೇರಣೆ ತಾನೇ ತಾನಾಗಿ ಮೂಡುತ್ತದೆ. ನಿಮ್ಮ ಆಸಕ್ತಿ, ಅಭಿರುಚಿಯ ಆಧಾರದ ಮೇಲೆ ಮಾರ್ಗದರ್ಶಕರೊಡನೆ ಸಮಾಲೋಚಿಸಿ, ವೃತ್ತಿಯ ಗುರಿಗಳನ್ನು ನಿರ್ಧರಿಸಿ.
  2. ಸವಾಲುಗಳನ್ನು ನಿರೀಕ್ಷಿಸಿ: ಸಾಧನೆಯ ಹಾದಿಯಲ್ಲಿ ಅನೇಕ ಅಡಚಣೆಗಳು, ವೈಫಲ್ಯಗಳು, ವಿಳಂಬಗಳು ಸರ್ವೇಸಾಮಾನ್ಯ. ಆರತಿಯಂತಹ ಅನೇಕರು ಎದುರಿಸಿದಂತ ಸವಾಲುಗಳು, ತೆಗೆದುಕೊಂಡ ನಿರ್ಧಾರಗಳು ಮತ್ತು ಅವರು ಕಂಡುಕೊAಡ ಪರಿಹಾರದ ಮಾರ್ಗಗಳು ನಿಮಗೆ ಪ್ರಚೋದನೆಯಾಗಿರಲಿ. ಹಾಗಾಗಿ ಅಡಚಣೆಗಳನ್ನು ನಿರೀಕ್ಷಿಸಿ. ಮನಸ್ಸು ಸ್ಥಿತಪ್ರಜ್ಞೆಯಿಂದಿದ್ದರೆ ಸೃಜನಶೀಲ ಚಿಂತನೆ ಸಾಧ್ಯವಾಗಿ, ಸಾಧನೆಯ ಹಾದಿ ಸುಗಮವಾಗುತ್ತದೆ.
  3. ಸಕಾರಾತ್ಮಕ ಪರಿಸರ: ಸುತ್ತಮುತ್ತಲಿನ ಪರಿಸರ ಸಕಾರಾತ್ಮಕವಾಗಿರಲಿ. ನಿಷ್ಟೆಯಿಂದಿರುವ ಉತ್ತಮವಾದ ಸ್ನೇಹಿತರು ನಿಮ್ಮಲ್ಲಿನ ಪ್ರತಿಭೆಗೆ ಸಕಾರಾತ್ಮಕ ಪ್ರಚೋದನೆ ನೀಡಬಲ್ಲರು;  ಆದ್ದರಿಂದ, ಸ್ನೇಹಿತರ ಆಯ್ಕೆಯಲ್ಲಿ ಜಾಣ್ಮೆಯಿರಲಿ. ಏನೇ ಸಮಸ್ಯೆಗಳಿದ್ದರೂ ಮಾರ್ಗದರ್ಶಕರು, ಪೋಷಕರು, ಶಿಕ್ಷಕರು ಮತ್ತು ಸ್ನೇಹಿತರೊಡನೆ ಹಂಚಿಕೊಳ್ಳಿ. ಕ್ರೀಡೆಗಳು, ಮನರಂಜನೆಯ ಜೊತೆಗೆ ಉತ್ತಮವಾದ ಸಂದೇಶವಿರುವ ಚಲನಚಿತ್ರಗಳು, ಟಿ.ವಿ. ಕಾರ್ಯಕ್ರಮಗಳು, ಪುಸ್ತಕಗಳು, ವೀಡಿಯೋಗಳಲ್ಲಿ ನಿಯಮಿತವಾದ ಆಸಕ್ತಿಯನ್ನು ಬೆಳೆಸಿಕೊಳ್ಳಿ.
  4. ಸಾಧನೆಯ ಮೈಲಿಗಲ್ಲುಗಳು: ಹತ್ತನೇ ತರಗತಿಯ ನಂತರ ಸ್ನಾತಕೋತ್ತರ ಕೋರ್ಸ್ವರೆಗೆ ೮-೧೦ ವರ್ಷಗಳ ಪಯಣ. ಈ ದೀರ್ಘಾವಧಿಯಲ್ಲಿನ ಸಾಧನೆಗಳನ್ನು ಸಂಭ್ರಮಿಸಿ; ಆ ಸಾಧನೆಗಳ ಹಿಂದಿರುವ ಪರಿಶ್ರಮ, ಕಾರಣಗಳನ್ನು ಅವಲೋಕಿಸಿ, ಮುಂದಿನ ಮೈಲಿಗಲ್ಲಿನ ಯೋಜನೆಗಳಲ್ಲಿ  ಸೂಕ್ತವಾದ ರೀತಿಯಲ್ಲಿ ಅಳವಡಿಸಿ. 
  5. ಸಾಧಕರ ಕಥೆಗಳು: ಮಹಾತ್ಮ ಗಾಂಧಿಯವರAತ ರಾಷ್ಟç ನಾಯಕರು,  ಸಿ.ವಿ. ರಾಮನ್‌ರಂತಹ ವಿಜ್ಞಾನಿಗಳು ಮತ್ತು ಜೆ.ಆರ್.ಡಿ. ಟಾಟರವರಂತ ಹಿರಿಯ ಕೈಗಾರಿಕೋದ್ಯಮಿಗಳ ಯಶಸ್ಸಿನ ಹಿಂದಿರುವ ಪರಿಶ್ರಮದ ಕಥೆಗಳನ್ನು ಓದಿ, ನಿಮ್ಮ ಉತ್ಸಾಹವನ್ನೂ, ಸ್ವಯಂಪ್ರೇರಣೆಯನ್ನೂ ವೃದ್ಧಿಸಿಕೊಳ್ಳಿ.

ನೀವು ಕನಸುಗಳನ್ನು ಕಾಣಬಲ್ಲವರಾದಲ್ಲಿ ನಿಶ್ಚಯವಾಗಿಯೂ ನೀವು ಅವುಗಳನ್ನು ಸಾಕಾರಗೊಳಿಸಬಲ್ಲಿರಿ; ಏಕೆಂದರೆ, ನಿಮ್ಮಲ್ಲಿದೆ ಅಪಾರವಾದ ಶಕ್ತಿ. ಕೋವಿಡ್ ವೈರಾಣುವಿಂದ ಉದ್ಭವಿಸಿರುವ ಅನಿಶ್ಚತೆ, ಗೊಂದಲ, ಆತಂಕದ ಇಂದಿನ ಪರಿಸ್ಥಿತಿ ತಾತ್ಕಾಲಿಕ; ಹಾಗಾಗಿ ಎದೆಗುಂದದಿರಿ ಮತ್ತು ನಿಮ್ಮ  ದೀರ್ಘಾವಧಿ ಕನಸುಗಳಿಂದ ದೂರ ಸರಿಯದಿರಿ. ಪ್ರಮುಖವಾಗಿ, ನಿಮ್ಮ ಇಷ್ಟ, ಅಭಿರುಚಿಗೆ ಸ್ಪಂದಿಸುವAತಹ ವೃತ್ತಿ ಮತ್ತು ಅದಕ್ಕೆ ಅಗತ್ಯವಿರುವ ವಿದ್ಯೆಯನ್ನು ಅರಸಿ. ನಿಮಗೆ ಒಲವಿರುವ ವೃತ್ತಿಜೀವನದಲ್ಲಿ ನಿಮ್ಮ ಸ್ವಾಭಾವಿಕ ಪ್ರತಿಭೆ ಅರಳಿ, ವೃತ್ತಿಯಲ್ಲೂ ವೈಯಕ್ತಿಕ ಬದುಕಿನಲ್ಲೂ ಯಶಸ್ಸು ನಿಮ್ಮದಾಗಬಲ್ಲದು. 

Download PDF Document

About author View all posts Author website

V Pradeep Kumar

Leave a Reply

Your email address will not be published. Required fields are marked *