ಪರಿಣಾಮಕಾರಿ ಕಲಿಕೆಗೆ ಇರಲಿ ಪ್ರಶ್ನಿಸುವ ಕಲೆ

ಕೆಲವು ವರ್ಷಗಳ ಹಿಂದೆ, ನಮ್ಮ ವಿದ್ಯಾರ್ಥಿಗಳಿಗೂ ಅಮೇರಿಕದ ವಿದ್ಯಾರ್ಥಿಗಳಿಗೂ ಒಂದೇ ಶೈಕ್ಷಣಿಕ ವರ್ಷದಲ್ಲಿ ಭೋಧಿಸುತ್ತಿದ್ದ ಸಮಯ. ಪದವಿ ಕೋರ್ಸ್‍ನಲ್ಲಿ ಓದುತ್ತಿದ್ದ ಅಮೇರಿಕದ ವಿದ್ಯಾರ್ಥಿಗಳು ನಿರಂತರವಾಗಿ ಪ್ರಶ್ನೆಗಳನ್ನು ಕೇಳಿ ತಮ್ಮ ಗೊಂದಲವನ್ನು ಪರಿಹರಿಸಿಕೊಳ್ಳುತ್ತಿದ್ದರೆ, ಸ್ನಾತಕೋತ್ತರ ಕೋರ್ಸ್‍ನಲ್ಲಿದ್ದ ನಮ್ಮ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುತ್ತಿದ್ದದ್ದೇ ಅಪರೂಪ. ಈ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳಲ್ಲಿನ ಹಿಂಜರಿಕೆ ಸಾಮಾನ್ಯವೆಂದೇ ಬಹುತೇಕ ಭೋಧಕರ  ಅಭಿಪ್ರಾಯ.

ಹಾಗಾಗಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂವಹನದ ಕೊರತೆಯಿಂದ ಪ್ರಸ್ತುತ ಕಲಿಕೆಯ ವಿಧಾನಗಳು ಮೇಲ್ನೋಟಕ್ಕೆ ನಿಷ್ಪರಿಣಾಮಕಾರಿ ಎನಿಸುವುದು ಸಹಜ. ನಮ್ಮ ವಿದ್ಯಾರ್ಥಿಗಳಲ್ಲಿನ ಹಿಂಜರಿಕೆ, ಬಹುಶಃ ಯಥಾಸ್ಥಿತಿಯನ್ನು ಪ್ರಶ್ನಿಸದ ಅಥವಾ ಸವಾಲು ಮಾಡದ ನಮ್ಮ ಸಂಸ್ಕಾರದಿಂದಲೂ  ಪ್ರಭಾವಿತವಾಗಿದೆ. ಕಾರಣಗಳೇನೇ ಇರಲಿ, ಪ್ರಶ್ನೆಗಳಿಲ್ಲದ, ಸಂವಹನವಿರದ ಸ್ಕೂಲು, ಕಾಲೇಜುಗಳಲ್ಲಿನ ಕಲಿಕೆ ಅಪೂರ್ಣ.

ಜಗತ್ತಿನ ಮೂವರು ಶ್ರೇಷ್ಠ ಚಿಂತಕರಾದ ಸರ್ ಐಸಾಕ್ ನ್ಯೂಟನ್, ಚಾಲ್ರ್ಸ್ ಡಾರ್ವಿನ್ ಮತ್ತು ಆಲ್ಬರ್ಟ್ ಐನ್‍ಸ್ಟೈನ್‍ರವರಲ್ಲಿ ಒಂದು ವಿಶೇಷ ಗುಣವಿತ್ತು. ಉದ್ದೇಶ, ಪ್ರಸ್ತುತತೆ ಮತ್ತು ವ್ಯಾಖ್ಯಾನದ ಪ್ರಶ್ನೆಗಳು, ಅವರ ವಿಮರ್ಶಾತ್ಮಕ ಚಿಂತನೆ ಮತ್ತು ಬುದ್ಧಿಶಕ್ತಿಗೆ ಅಪಾರವಾದ ಶಕ್ತಿಯನ್ನು ತುಂಬಿದ್ದವು. ಇವೆಲ್ಲವೂ ಕಲಿಕೆಗೆ ಅತ್ಯವಶ್ಯ.

ಪ್ರಶ್ನೆಗಾರಿಕೆ: ಕಲಿಕೆಯ ಪ್ರಮುಖ ತಂತ್ರ

ಪ್ರಶ್ನೆಗಳನ್ನು ಕೇಳುವ ಸಾಮಥ್ರ್ಯ ಪರಿಣಾಮಕಾರಿ ಕಲಿಕೆಯಲ್ಲಿ ನಿರ್ಣಾಯಕ ಅಂಶವಾಗಿದೆ. ಏಕೆಂದರೆ, ಪ್ರಶ್ನೆಗಳು ತರಗತಿಗಳಲ್ಲಿ ಚರ್ಚೆಯನ್ನು ಹುಟ್ಟುಹಾಕುತ್ತದೆ ಮತ್ತು ಸ್ವಗತದ ಆಯಾಸವನ್ನು ನಿವಾರಿಸುತ್ತದೆ. ಏಕತಾನತೆ ಮತ್ತು ಮಂದವಾದ ತರಗತಿಯ ಪರಿಸರ ಇದ್ದಕ್ಕಿದ್ದಂತೆ ಜ್ಞಾನೋದಯವನ್ನು ಬೆಳಗಿಸುವ ಉತ್ತೇಜಕ ಪ್ರಯತ್ನವಾಗುತ್ತದೆ. ಹಾಗಾಗಿ, ಶಿಕ್ಷಕರು ಪ್ರಶ್ನೆಗಳನ್ನು ಇಷ್ಟಪಡುವುದಿಲ್ಲವೆನ್ನುವ ಅಭಿಪ್ರಾಯ ಸತ್ಯಕ್ಕೆ ದೂರ.

ಸಕ್ರಿಯವಾದ ಪ್ರಶ್ನೆಗಾರಿಕೆಯಿಂದ ವಿಧ್ಯಾರ್ಥಿಗಳಿಗೆ ಅನೇಕ ಅನುಕೂಲಗಳಿವೆ:

• ವಿಮರ್ಶಾತ್ಮಕ ಚಿಂತನಾ ಕೌಶಲ್ಯಗಳ ಅಭಿವೃದ್ಧಿ

• ವಿಷಯದ ಬಗ್ಗೆ ಒಳನೋಟಗಳು

• ಆಲಿಸುವಿಕೆ ಮತ್ತು ಸಂವಹನ ಕೌಶಲ್ಯಗಳ ಅಭಿವೃದ್ಧಿ

• ಹೆಚ್ಚಿನ ಆತ್ಮ ವಿಶ್ವಾಸ

• ಶಿಕ್ಷಕ-ಮಾರ್ಗದರ್ಶಕರೊಡನೆ ಉತ್ತಮ ಭಾಂಧವ್ಯ

ಪ್ರಶ್ನೆಗಳ ವೈವಿಧ್ಯತೆ

ಪರಿಕಲ್ಪನೆಗಳಿಂದಲೂ, ಆಲೋಚನೆಗಳಿಂದಲೂ, ಸವಾಲುಗಳಿಂದಲೂ ಆವರಿಸಿದ ವಿಭಿನ್ನವಾದ ವಿಷಯಗಳನ್ನು ಕಲಿಯುವ ನಿಟ್ಟಿನಲ್ಲಿ, ವೈವಿಧ್ಯಮಯ ಪ್ರಶ್ನೆಗಳನ್ನು ಕೇಳಬಹುದು.

ಉದಾಹರಣೆಗೆ, ಎಂಬಿಎ ಕೋರ್ಸ್‍ನ ಮಾರ್ಕೆಟಿಂಗ್ ವಿಭಾಗದಲ್ಲಿ ‘ನಾಲ್ಕು ಪಿ’ (ಉತ್ಪನ್ನ, ಬೆಲೆ, ಪ್ರಚಾರ ಮತ್ತು ಸ್ಥಳ) ಗಳ ಪ್ರಮುಖ ವಿಷಯವನ್ನು  ತೆಗೆದುಕೊಳ್ಳೋಣ:

ಪರಿಕಲ್ಪನಾತ್ಮಕ  ಪ್ರಶ್ನೆಗಳು: ‘ನಾಲ್ಕು ಪಿ’ ಪರಿಕಲ್ಪನೆಯ ಹಿಂದಿನ ತತ್ವಗಳೇನು?

• ಅನ್ವೇಷಣಾತ್ಮಕ ಪ್ರಶ್ನೆಗಳು: ಈ ಪರಿಕಲ್ಪನೆಯು ಹೇಗೆ ಅಭಿವೃದ್ಧಿಗೊಂಡಿದೆ? ಪರಿಕಲ್ಪನೆಯು ಸಾರ್ವತ್ರಿಕವಾಗಿ ಅನ್ವಯವಾಗುತ್ತದೆಯೇ? ಇಂತಹ ಪ್ರಶ್ನೆಗಳು ತರಗತಿಯ ಪರಿಸರವನ್ನು ಉತ್ತೇಜಿಸಿ, ಚರ್ಚೆಗಳನ್ನು ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯುತ್ತವೆ.

• ಪರಿಶೋಧನಾತ್ಮಕ ಪ್ರಶ್ನೆಗಳು: ಸೇವಾ ಉದ್ಯಮದಲ್ಲಿ ಮಾನವ ಸಂಪಲ್ಮೂಲನದ ಅಂಶ ಏಕೆ ಮುಖ್ಯವಾಗಿದೆ?

• ತುಲನಾತ್ಮಕ ಪ್ರಶ್ನೆಗಳು: ಮಾರ್ಕೆಟಿಂಗ್ ಪ್ರಕ್ರಿಯೆಯು ಭಾರತ ಮತ್ತು ಯುರೋಪಿನಲ್ಲಿ ಎಷ್ಟು ಭಿನ್ನವಾಗಿದೆ?

• ಕಾಲ್ಪನಿಕ ಪ್ರಶ್ನೆಗಳು: ಒಂದು ಸಂಸ್ಥೆಯಲ್ಲಿ ಮಾನವ ಸಂಪಲ್ಮೂಲನಕ್ಕೆ ಸರಿಯಾದ ಪ್ರಾಮುಖ್ಯತೆ ನೀಡದಿದ್ದರೆ ಪರಿಣಾಮಗಳೇನು? ವಸ್ತುವಿನ ಬೆಲೆಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡಿದರೆ  ಬೇಡಿಕೆಯ ಮೇಲೆ ಆಗುವ ಪರಿಣಾಮಗಳೇನು?

• ಸಂಬಂಧಾತ್ಮಕ ಪ್ರಶ್ನೆಗಳು: ಉತ್ಪನ್ನದ ಜೀವನ ಚಕ್ರವನ್ನು ಮೊಟಕುಗೊಳಿಸಿದರೆ ಉಂಟಾಗುವ ಸವಾಲುಗಳೇನು?

ಈ ರೀತಿಯ ಪ್ರಶ್ನೆಗಳನ್ನು ಕೇಳುವುದರಿಂದ ತರಗತಿಗಳಲ್ಲಿ ಚೈತನ್ಯಭರಿತ ಮತ್ತು ವಿಮರ್ಶಾತ್ಮಕ ಚರ್ಚೆಗಳಾಗಿ, ವಿಷಯದ ಕಲಿಕೆ ಸಂಪೂರ್ಣವಾಗುತ್ತದೆ.

ಪ್ರಶ್ನಿಸುವ ಕಲೆಯನ್ನು ಕರಗತ ಮಾಡಿಕೊಳ್ಳಿ

ನಮ್ಮ ಸಾಮಥ್ರ್ಯದ  ಒಂದು ಕನಿಷ್ಠ ಭಾಗವನ್ನಷ್ಟೇ ನಾವು ಸಕ್ರಿಯಗೊಳಿಸುತ್ತೇವೆ ಎಂದು ಅನೇಕ ಮನಶ್ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ, ಪ್ರಸ್ತುತ ಕಲಿಕೆಯ ಶೈಲಿಯನ್ನು ಪರೀಕ್ಷಿಸಿ ಮತ್ತು ನಿಮ್ಮ ಅನನ್ಯ ಕಲಿಕೆಯ ಶೈಲಿಯನ್ನು ಬೆಳೆಸಿಕೊಳ್ಳಿ. ಆಗಲೇ, ಕಲಿಕೆ ಸಂಪೂರ್ಣವಾಗಿ ನಿಮ್ಮ  ಉಜ್ವಲ ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸಬಹುದು. ಆದ್ದರಿಂದ, ಸಹಪಾಠಿಗಳ ಲೇವಡಿ ಅಥವಾ ಅಪಹಾಸ್ಯದ ಭಯದಿಂದ ಮುಕ್ತಗೊಂಡು ಸೂಕ್ತವಾದ ಪ್ರಶ್ನೆಗಾರಿಕೆಯಿಂದ  ನಿಮ್ಮ ಕಲಿಕೆಯನ್ನು ಪರಿಣಾಮಕಾರಿಯಾಗಿಸಿ.

ಸಕ್ರಿಯವಾದ ಚರ್ಚೆಗಳನ್ನು ಹುಟ್ಟುಹಾಕುವ ಪ್ರಶ್ನೆಗಳಿಂದ, ವಿಧ್ಯಾರ್ಥಿ-ಶಿಕ್ಷಕರ ಪರಸ್ಪರ ಭಾಗವಹಿಸುವಿಕೆ ಹೆಚ್ಚಾಗಿ, ಕಲಿಕೆ ಸಂಪೂರ್ಣವಾಗಿಯೂ, ಸಮಗ್ರವಾಗಿಯೂ ಆಗುತ್ತದೆ.

Download PDF Document

About author View all posts Author website

V Pradeep Kumar

Leave a Reply

Your email address will not be published. Required fields are marked *