ಏನಿದು ಎಸ್‌ಕ್ಯುಎಲ್?
ಇಂದಿನ ಉದ್ಯಮ ಜಗತ್ತಿನಲ್ಲಿ ದತ್ತಾಂಶ (ಡೇಟಾ) ಅತ್ಯಂತ ಮಹತ್ವದ್ದಾಗಿದೆ. ಉದಾಹರಣೆಗೆ, ಕೃತಕ ಬುದ್ಧಿಮತ್ತೆಯ ವ್ಯಾಪಕವಾದ ಬಳಕೆಯ ಹಿಂದಿರುವ ಪ್ರಮುಖ ಸಂಪನ್ಮೂಲವೇ ದತ್ತಾಂಶ. ಈ ದತ್ತಾಂಶದ ಸಂಗ್ರಹಣೆ, ಸಂಘಟನೆ, ಗಣಿಗಾರಿಕೆ ಮತ್ತು ನಿರ್ವಹಣೆಗೆ ‘ಸಂರಚಿಸಿದ ಭಾಷಾ ಪ್ರಶ್ನಾವಳಿ’ (ಸ್ಟçಕ್ಚರ್ಡ್ ಕ್ವೇರಿ ಲಾಂಗ್ವೇಜ್-ಎಸ್‌ಕ್ಯುಎಲ್), ಪ್ರಮುಖ ಪ್ರೋಗ್ರಾಮಿಂಗ್ ಭಾಷೆಯಾಗಿದ್ದು, ದತ್ತಾಂಶದ ಮಾಹಿತಿಯನ್ನು ಎಸ್‌ಕ್ಯುಎಲ್ ಡೇಟಾಬೇಸ್‌ನಲ್ಲಿ ಸಾಲುಗಳು ಮತ್ತು ಕಾಲಂಗಳ ಕೋಷ್ಟಕದಲ್ಲಿ (ಟೇಬಲ್ಸ್) ಸಂಗ್ರಹಿಸಲಾಗುತ್ತದೆ. ಉದ್ಯಮದ ಅಗತ್ಯಕ್ಕೆ ತಕ್ಕಂತೆ ದತ್ತಾಂಶ ಕುರಿತ ಪ್ರಶ್ನೆಗಳಿಗೆ ಎಸ್‌ಕ್ಯುಎಲ್ ಮೂಲಕ ಉತ್ತರಗಳನ್ನು ಪಡೆಯಬಹುದು.
ಕಲಿಯುವುದೆಲ್ಲಿ? ಹೇಗೆ?
ಎಸ್‌ಕ್ಯುಎಲ್ ಕಲಿಯಲು ಯಾವುದೇ ಪೂರ್ವಾಪೇಕ್ಷಿತ ಅರ್ಹತೆಗಳಿಲ್ಲ; ವಿಶೇಷವಾದ ಸಾಫ್ಟ್ವೇರ್ ಅಥವಾ ದುಬಾರಿ ಪುಸ್ತಕಗಳ ಅಗತ್ಯವಿಲ್ಲ. ಕಲಿಯುವ ಆಸಕ್ತಿ, ಇಂಟರ್‌ನೆಟ್ ಮತ್ತು ಕಂಪ್ಯೂಟರ್ ಇದ್ದರೆ ಸಾಕು. ರೆಗ್ಯುಲರ್/ಆನ್‌ಲೈನ್ ಮಾಧ್ಯಮದ ಮೂಲಕ ಸುಮಾರು ೧ ರಿಂದ ೩ ತಿಂಗಳುಗಳಲ್ಲಿ, ತಜ್ಞತೆಯ ಅಗತ್ಯಕ್ಕೆ ತಕ್ಕಂತೆ ಎಸ್‌ಕ್ಯುಎಲ್ ಕಲಿಯಬಹುದು. ಯುಡೆಮಿ, ಕೋರ್ಸೆರ, ಕೋಡ್‌ಅಕಾಡೆಮಿ, ಡೇಟಾಕ್ಯಾಂಪ್ ಮುಂತಾದ ಇನ್‌ಸ್ಟಿಟ್ಯೂಟ್‌ಗಳಲ್ಲಿ ಈ ಕೋರ್ಸ್ ಮಾಡಬಹುದು.
ಯಾವ ಕೌಶಲಗಳ ಅಗತ್ಯವಿರುತ್ತದೆ?
ಬಿಟೆಕ್, ಬಿ.ಎಸ್ಸಿ, ಬಿಸಿಎ, ಬಿಬಿಎ, ಬಿಕಾಂ, ಡಿಪ್ಲೊಮಾ, ಪಿಯುಸಿ ಸೇರಿದಂತೆ ಆಸಕ್ತಿಯಿರುವ ಎಲ್ಲಾ ಪದವೀಧರರು/ಪದವೀಧರರಲ್ಲದವರೂ ಸಹ ತಮ್ಮ ವೃತ್ತಿಜೀವನದ ಅಗತ್ಯಕ್ಕೆ ತಕ್ಕಂತೆ ಎಸ್‌ಕ್ಯುಎಲ್ ಕಲಿಯಬಹುದು. ಇಂಗ್ಲಿಷ್ ಭಾಷೆಯ ಪರಿಣತಿ ಸಾಧಾರಣ ಮಟ್ಟಕ್ಕಿದ್ದರೆ ಸಾಕು. ಆದರೆ, ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ಸಂವಹನ, ಸಂಖ್ಯಾಶಾಸ್ತçದ ಅರಿವು, ಕ್ರಮಾವಳಿ ಮುಂತಾದ ಕೌಶಲಗಳಿರಬೇಕು ಅಥವಾ ಈ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.
ಉದ್ಯೋಗಾವಕಾಶಗಳು ಹೇಗಿವೆ?
ಎಸ್‌ಕ್ಯುಎಲ್ ವ್ಯಾಪಕವಾಗಿ ಬಳಸುವ ಪ್ರೋಗ್ರಾಮಿಂಗ್ ಭಾಷೆಯಾಗಿದ್ದು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಗಳಾದ ಟಿಸಿಎಸ್, ಇನ್ಫೋಸಿಸ್, ಒರೇಕಲ್, ಎಚ್‌ಸಿಎಲ್, ವಿಪ್ರೊ, ಅಕ್ಸೆಂಚೂರ್ ಸೇರಿದಂತೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಹುತೇಕ ಸಂಸ್ಥೆಗಳಲ್ಲಿ ಆಕರ್ಷಕ ಉದ್ಯೋಗಾವಕಾಶಗಳಿವೆ. ಎಸ್‌ಕ್ಯುಎಲ್ ಜೊತೆಗೆ, ಪೈಥಾನ್, ಆರ್, ಜಾವ, C++ ಮುಂತಾದ ಭಾಷೆಗಳನ್ನು ಕಲಿತರೆ ವೃತ್ತಿಪರ ಕೌಶಲಗಳ ವೃದ್ಧಿಯಾಗಿ ಉದ್ಯೋಗಾವಕಾಶಗಳು ಇನ್ನಷ್ಟು ಹೆಚ್ಚಾಗುತ್ತದೆ. ಆದರೆ, ಈ ಕೋರ್ಸ್ ಮೂಲಕ ಪಡೆದ ಜ್ಞಾನ ಮತ್ತು ಕೌಶಲಗಳನ್ನು ಪರಿಣಾಮಕಾರಿಯಾಗಿ ಬಳಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಹಾಗೂ, ಅದು ಯಾವ ರೀತಿ, ಯಾವ ಕಾರ್ಯ ಮತ್ತು ಸಂದರ್ಭದಲ್ಲ್ಲಿ ಬಳಸುತ್ತೀರಾ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಈ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಪಡೆಯಬಹುದಾದ ಹುದ್ದೆಗಳೆಂದರೆ ಎಸ್‌ಕ್ಯುಎಲ್ ಡೆವಲಪರ್, ಡೇಟಾ ಸೈಂಟಿಸ್ಟ್, ಡೇಟಾ ಅನಲಿಸ್ಟ್, ಡೇಟಾ ಅಡ್‌ಮಿನಿಸ್ಟೆçÃಟರ್, ಡೇಟಾ ಎಂಜಿನಿಯರ್, ಡೇಟಾಬೇಸ್ ಮ್ಯಾನೇಜರ್ ಇತ್ಯಾದಿ.