ಉದ್ಯೋಗಕ್ಕೆ ಬೇಕು ಈ ನಾಲ್ಕು ಕೌಶಲಗಳು

ಅಭ್ಯರ್ಥಿಗಳಿಗೆ ಸರಿಯಾದ ಉದ್ಯೋಗ ಸಿಗುವುದು ಎಷ್ಟು ಕಷ್ಟವೋ ಉದ್ಯೋಗದಾತರಿಗೆ ಕೌಶಲಯುಕ್ತ ಅಭ್ಯರ್ಥಿಗಳು ಸಿಗುವುದೂ ಸಹ ಅಷ್ಟೇ ಕಷ್ಟ! ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲಾಭಿವೃದ್ಧಿಗೆ ಆದ್ಯತೆಯಿಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ. ಅನುಷ್ಠಾನದ ಹಂತದಲ್ಲಿರುವ ನೂತನ ಶಿಕ್ಷಣ ನೀತಿಯಲ್ಲಿ ಈ ಸಮಸ್ಯೆಗೆ ಪರಿಹಾರವಿದೆಯಾದರೂ ವಿಧ್ಯಾರ್ಥಿಗಳ ಕೌಶಲಾಭಿವೃದ್ಧಿಯಾಗಿ ಸರಾಗವಾಗಿ ಉದ್ಯೋಗಗಳು ಸಿಗುವುದಕ್ಕೆ ಇನ್ನೂ ಒಂದಷ್ಟು ವರ್ಷಗಳು ಬೇಕಾಗುತ್ತದೆ.

ಕೌಶಲವೆಂದರೆ, ಅಪೇಕ್ಷಿತ ಅಥವಾ ಪೂರ್ವನಿರ್ಧಾರಿತ ಮಾನದಂಡದಂತೆ ಕೆಲಸಕಾರ್ಯಗಳಲ್ಲಿ ಪರಿಣಾಮಗಳನ್ನು ಮೂಡಿಸುವಂತಹ ಸಾಮರ್ಥ್ಯ. ಆದ್ದರಿಂದ ವಿದ್ಯಾಭ್ಯಾಸದ ಮುಕ್ತಾಯ ಹಂತದಲ್ಲಿರುವ ವಿದ್ಯಾರ್ಥಿಗಳೂ ಮತ್ತು ಉದ್ಯೋಗವನ್ನು ಅರಸುತ್ತಿರುವವರೂ ಈ ನಾಲ್ಕು ಸಾಮಾನ್ಯ ಕೌಶಲಗಳನ್ನು ಕಲಿತರೆ ಉದ್ಯೋಗಗಳು ಸಿಗುವ ಸಾಧ್ಯತೆಗಳು ಹೆಚ್ಚಾಗುತ್ತದೆ.

1. ಯೋಜನೆ ಮತ್ತು ಸಮಯದ ನಿರ್ವಹಣೆ: ಯೋಜನೆಯೆಂದರೆ ಅಪೇಕ್ಷಿತ ಗುರಿಗಳನ್ನು  ಸಾಧಿಸಲು ಅಗತ್ಯವಿರುವ ಚಟುವಟಿಕೆಗಳ ಬಗ್ಗೆ ಸಮಗ್ರವಾಗಿ ಯೋಚಿಸುವ ಪ್ರಕ್ರಿಯೆ. ಈ ಜವಾಬ್ದಾರಿಯನ್ನು ನಿರ್ವಹಿಸಲು ಪರಿಕಲ್ಪನಾ ಸಾಮಥ್ರ್ಯದ ಜೊತೆಗೆ ಸಮಯದ ನಿರ್ವಹಣೆಯ ಕೌಶಲ ಅಗತ್ಯ.

2. ಸಂವಹನ ಕೌಶಲಗಳು: ಸಕ್ರಿಯವಾಗಿ ಆಲಿಸುವುದು, ಪರಿಣಾಮಕಾರಿಯಾಗಿ ಮಾತನಾಡುವುದು, ಬರೆಯುವುದು, ಪ್ರಸ್ತುತ ಪಡಿಸುವುದು ಹಾಗೂ ಮುಗುಳ್ನಗೆಯುಕ್ತ ದೇಹಭಾಷೆ, ಈ ಕೌಶಲಗಳೆಲ್ಲವೂ  ಉದ್ಯೋಗ ಗಳಿಸಲು ಮತ್ತು ಅದನ್ನು ಯಶಸ್ವಿಯಾಗಿ ನಿರ್ವಹಿಸಲು ಅತ್ಯಗತ್ಯ.

3. ಅಂತರ್-ವೈಯಕ್ತಿಕ ನೈಪುಣ್ಯತೆ:  ಅನುಭೂತಿ ಮತ್ತು ತಾಳ್ಮೆಗಳಂತಹ ಮನೋಭಾವದ ಜೊತೆಗೆ, ಪ್ರತಿಯೊಬ್ಬರನ್ನು ಅನನ್ಯ ವ್ಯಕ್ತಿಯಂತೆ ಗುರುತಿಸಿ, ವಿನಾಕಾರಣ ಇತರರನ್ನು ಟೀಕಿಸದೆ, ಎಲ್ಲರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು, ವಾದವಿವಾದಗಳಿಲ್ಲದೆ ಸುಲಲಿತವಾಗಿ ಕೆಲಸಕಾರ್ಯಗಳನ್ನು ನಿರ್ವಹಿಸುವುದೇ ಅಂತರ್-ವೈಯಕ್ತಿಕ ನೈಪುಣ್ಯತೆ. ಈ ಕೌಶಲವನ್ನು ಎಲ್ಲಾ ಉದ್ಯೋಗಿಗಳಿಂದ ನಿರೀಕ್ಷಿಸಲಾಗುತ್ತದೆ.

4. ನಾಯಕತ್ವದ ಕೌಶಲಗಳು: ಉಪಕ್ರಮ ಶಕ್ತಿ, ಉತ್ಸಾಹ, ಹೊಣೆಗಾರಿಕೆ, ಮುಂದಾಲೋಚನೆ, ಕಾರ್ಯತತ್ಪರತೆ, ಸ್ವಯಂಶಿಸ್ತು, ತಮ್ಮನ್ನು ಮತ್ತು ಇತರರನ್ನು ಪ್ರೇರೇಪಿಸುವ ಪರಿ, ವಿಶ್ವಾಸಾರ್ಹತೆ, ಪ್ರಾಮಾಣಿಕತೆ, ಬದ್ಧತೆ ಇವೆಲ್ಲವನ್ನು ಮೈಗೂಡಿಸಿಕೊಂಡರೆ, ಉದ್ಯೋಗ ಸಿಗುವುದಲ್ಲದೆ,  ನಾಯಕತ್ವದ ಸ್ಥಾನಮಾನಕ್ಕೆ ಮುಂದೆ ಅರ್ಹರಾಗಬಲ್ಲರು.

ವೈಯಕ್ತಿಕ ಸಂದರ್ಶನಗಳಲ್ಲಿ ಈ ಪ್ರಮುಖ ಕೌಶಲಗಳಿವೆಯೇ ಎನ್ನುವುದನ್ನು ಪರಿಶೀಲಿಸುವುದು ಸಂದರ್ಶನಕಾರರ ಜವಾಬ್ದಾರಿ. ಹಾಗಾಗಿ, ಉದ್ಯಮದ ಸನ್ನಿವೇಶಗಳನ್ನು ಸೃಷ್ಠಿಸಿ, ಪ್ರಶ್ನೆಗಳನ್ನು ಕೇಳುತ್ತಾ, ಅಭ್ಯರ್ಥಿಗಳ ವ್ಯಕ್ತಿತ್ವದ ಪರಿಪೂರ್ಣತೆ ಮತ್ತು ಕೊರತೆಗಳನ್ನೂ ಅಂದಾಜು ಮಾಡುತ್ತಾರೆ. ಸತ್ಯಾರ್ಹತೆ, ಪ್ರಾಮಾಣಿಕತೆ, ಸ್ವಯಂಶಿಸ್ತು, ಕಾರ್ಯತತ್ಪರತೆಗಳಂತಹ ಪ್ರಾರ್ಥಮಿಕ ಕೌಶಲಗಳಿಲ್ಲದಿದ್ದಲ್ಲಿ, ಅಭ್ಯರ್ಥಿಗಳು ಅಯ್ಕೆಯಾಗುವುದಿಲ್ಲ; ಏಕೆಂದರೆ, ಇಂತಹ ಪ್ರಾರ್ಥಮಿಕ ಕೌಶಲಗಳ ಕೊರತೆಗಳನ್ನು ಹೋಗಲಾಡಿಸುವುದು ಅಸಾಧ್ಯವೆನ್ನುವುದು ಮಾನವ ಸಂಪನ್ಮೂಲ ಅಧಿಕಾರಿಗಳ ಅಭಿಪ್ರಾಯ.

ಹಾಗಾಗಿ, ಉದ್ಯೋಗವನ್ನು ಬಯಸುವ ಅಭ್ಯರ್ಥಿಗಳು ಮತ್ತು ವೃತ್ತಿಜೀವನದಲ್ಲಿ ಯಶಸ್ಸಿನ ಅನ್ವೇಷಣೆಯಲ್ಲಿರುವ ಉದ್ಯೋಗಿಗಳು, ತಮ್ಮ ಶಕ್ತಿ, ಸಾಮಥ್ರ್ಯ, ಕುಂದು ಕೊರತೆಗಳನ್ನರಿತು, ಪ್ರಾಮಾಣಿಕ ಪ್ರಯತ್ನಗಳಿಂದ ಈ ಕೌಶಲಗಳನ್ನು ತಮ್ಮ ವ್ಯಕ್ತಿತ್ವದಲ್ಲಿ  ಮೈಗೂಡಿಸಿಕೊಳ್ಳಬೇಕು. ಈ ಕೌಶಲಗಳ ಜೊತೆ ವೃತ್ತಿ ಸಂಭಂದಿತ ಕೌಶಲಗಳಿರಬೇಕು [ಉದಾಹರಣೆ: ಸೇವಾ ಮನೋಭಾವ, ಜ್ಞಾಪಕ ಶಕ್ತಿ, ವ್ಯಾಪಾರೋಧ್ಯಮ ಕೌಶಲ, ತಾಂತ್ರಿಕ ಕೌಶಲ, ವಿಶ್ಲೇಷಾತ್ಮಕ ಕೌಶಲ, ಆರ್ಥಿಕ ನಿರ್ವಹಣೆ, ಕಾನೂನು ತಜ್ಞತೆ ಇತ್ಯಾದಿ ವೃತ್ತಿಗೆ ಸಂಭಂದಿಸಿದಂತೆ]. ಆಗಲೇ, ಅಭ್ಯರ್ಥಿಗಳ ವ್ಯಕ್ತಿತ್ವ ಉದ್ಯೋಗದ ಅವಶ್ಯಕತೆಗೆ ಹೊಂದಾಣಿಕೆಯಾಗಬಲ್ಲದು.

ವ್ಯಕ್ತಿತ್ವ ಮತ್ತು ವೃತ್ತಿಗೆ ಸಂಭಂದಿಸಿದ ಕೌಶಲಗಳನ್ನು ಕಲಿಯಲು ಇಂದು ಭಿನ್ನವಾದ ಮತ್ತು ವಿಸ್ತಾರವಾದ ಅವಕಾಶಗಳಿವೆ. ವ್ಯಕ್ತಿತ್ವ ವೃದ್ಧಿಸುವ ಕೇಂದ್ರಗಳು, ಕೌಶಲ ತರಬೇತಿ ಕೇಂದ್ರಗಳು, ಕೌಶಲ ಆಯೋಗಗಳು, ಆನ್‍ಲೈನ್ ತರಗತಿಗಳು, ಕ್ರಮಶಿಕ್ಷಣಗಳು, ಅರ್ಹತಾ ಪರೀಕ್ಷಣಾ ಕೇಂದ್ರಗಳು, ಸಾಧಕರ ಯಶಸ್ಸಿನ ಕಥೆಗಳು, ವೀಡಿಯೋಗಳು, ಪುಸ್ತಕಗಳು ಇತ್ಯಾದಿಗಳನ್ನು ಉಪಯೋಗಿಸಿಕೊಂಡು ವ್ಯಕ್ತಿತ್ವದ ಪರಿಪೂರ್ಣತೆಯನ್ನು ಗಳಿಸಿ, ವೃತ್ತಿ ಜೀವನವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಬಹುದು.

ಹಾಗಾಗಿ, ನೀವು ಕಲಿತ ವಿದ್ಯೆಗೂ, ನಿಮ್ಮ ವ್ಯಕ್ತಿತ್ವಕ್ಕೂ ಹೊಂದುವಂತಹ, ನಿಮ್ಮ ಅಭಿರುಚಿಗೆ ಅನುಗುಣವಾದ ವೃತ್ತಿಯನ್ನು ಆರಿಸಿ. ಮುಖ್ಯವಾಗಿ ವೃತ್ತಿ ಜೀವನದಲ್ಲಿ ಯಶಸ್ವಿಯಾಗಬೇಕೆನ್ನುವ ಹಂಬಲದ ಜೊತೆಗೆ ಅದನ್ನು ಸಾಧಿಸಲು ಪರಿಶ್ರಮ ಪಡಬೇಕು.

[ಲೇಖಕ: ಮ್ಯಾನೇಜ್‍ಮೆಂಟ್ ಮತ್ತು ವೃತ್ತಿ ಸಲಹಾಗಾರರು]

Download PDF document

About author View all posts Author website

V Pradeep Kumar

Leave a Reply

Your email address will not be published. Required fields are marked *