Q & A for students – November 2023

1. ನಾನು ಕಳೆದ ವರ್ಷ ಬಿಟೆಕ್ (ಮೆಕ್ಯಾನಿಕಲ್) ಮಾಡಿದ್ದು ಈವರೆಗೆ ಯಾವ ಉದ್ಯೋಗವೂ ಸಿಕ್ಕಿಲ್ಲ. ಸಿಗುವ ಕೆಲವೇ ಸಂದರ್ಶನಗಳಲ್ಲಿ ಎನೋ ಎಡವಟ್ಟಾಗುತ್ತಿದೆ ಎನಿಸುತ್ತಿದೆ. ಮುಂದೆ ಎಂಟೆಕ್ ಮಾಡುವುದೋ ಅಥವಾ ಉದ್ಯೋಗಕ್ಕೇ ತಯಾರಾಗುವುದೋ ತಿಳಿಯುತ್ತಿಲ್ಲ. ನಿಮ್ಮ ಮಾರ್ಗದರ್ಶನ ನೀಡಿ.

ಬಿಟೆಕ್ (ಮೆಕ್ಯಾನಿಕಲ್) ಮಾಡಿದ ನಂತರವೂ ಉತ್ತಮ ಉದ್ಯೋಗ ಸಿಗದಿರಲು ಕಾರಣಗಳೇನು ಎಂದು ಸ್ವಯಂ-ಮೌಲ್ಯಮಾಪನ ಮಾಡಬೇಕು. ಸಾಮಾನ್ಯವಾಗಿ, ಉದ್ಯೋಗದಲ್ಲಿ ಯಶಸ್ವಿಯಾಗಲು ಎಂಜಿನಿಯರಿAಗ್ ಜ್ಞಾನದ ಜೊತೆಗೆ ಪ್ರಾಥಮಿಕ ಮತ್ತು ವೃತ್ತಿ ಸಂಬಂಧಿತ ಕೌಶಲಗಳ ಅಗತ್ಯವಿರುತ್ತದೆ. ಉದ್ಯೋಗದ ಸಂದರ್ಶನಗಳಲ್ಲಿ, ಇವುಗಳು ಅಭ್ಯರ್ಥಿಗಳಲ್ಲಿವೆಯೇ ಎಂದು ಪರೀಕ್ಷಿಸಲಾಗುತ್ತದೆ. ಉದಾಹರಣೆಗೆ, ಪ್ರಾಥಮಿಕ ಕೌಶಲಗಳಾದ ಸಮಯದ ನಿರ್ವಹಣೆ, ಸಂವಹನ ಕೌಶಲ, ಅಂತರ್-ವೈಯಕ್ತಿಕ ಕೌಶಲ ಮತ್ತು ನಾಯಕತ್ವದ ಕೌಶಲಗಳು ಯಾವುದೇ ವೃತ್ತಿಯಲ್ಲಿ ಮುಖ್ಯವಾಗುತ್ತದೆ. ಹಾಗೂ, ವೃತ್ತಿ ಸಂಬಂಧಿತ ಕೌಶಲಗಳಾದ ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ, ವಿಶ್ಲೇಷಾತ್ಮಕ ಕೌಶಲ, ಇತ್ಯಾದಿ ಕೌಶಲಗಳೂ  ಎಂಜಿನಿಯರಿಂಗ್ ಉದ್ಯೋಗದ ಆಕಾಂಕ್ಷಿಗಳಲ್ಲಿರಬೇಕು.

ಹಾಗಾಗಿ, ನಿಮ್ಮ ಶಕ್ತಿ, ಸಾಮರ್ಥ್ಯ, ಕುಂದು ಕೊರತೆಗಳನ್ನರಿತು, ಪ್ರಾಮಾಣಿಕ ಪ್ರಯತ್ನಗಳಿಂದ ಈ ಕೌಶಲಗಳನ್ನು ವ್ಯಕ್ತಿತ್ವದಲ್ಲಿ  ಮೈಗೂಡಿಸಿಕೊಳ್ಳಬೇಕು. ವ್ಯಕ್ತಿತ್ವ ಮತ್ತು ವೃತ್ತಿಗೆ ಸಂಬAಧಿಸಿದ ಕೌಶಲಗಳನ್ನು ಕಲಿಯಲು ಇಂದು ವಿಭಿನ್ನವಾದ ಮತ್ತು ವಿಸ್ತಾರವಾದ ಅವಕಾಶಗಳಿವೆ. ವ್ಯಕ್ತಿತ್ವ ವೃದ್ಧಿಸುವ ಕೇಂದ್ರಗಳು, ಕೌಶಲ ತರಬೇತಿ ಕೇಂದ್ರಗಳು, ಕೌಶಲ ಆಯೋಗಗಳು, ಆನ್‌ಲೈನ್ ತರಗತಿಗಳು, ಸಾಧಕರ ಯಶಸ್ಸಿನ ಕಥೆಗಳು, ವಿಡಿಯೊಗಳು, ಪುಸ್ತಕಗಳು ಇತ್ಯಾದಿಗಳನ್ನು ಉಪಯೋಗಿಸಿಕೊಂಡು ವ್ಯಕ್ತಿತ್ವದ ಪರಿಪೂರ್ಣತೆಯನ್ನು ಗಳಿಸಿ, ವೃತ್ತಿ ಜೀವನವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಬಹುದು. ಕೆಲವು ವರ್ಷಗಳ ಅನುಭವದ ನಂತರ ಅಗತ್ಯವೆನಿಸಿದರೆ, ಸಂಜೆ/ವಾರಾಂತ್ಯ ತರಗತಿಗಳ ಮೂಲಕ ಎಂಟೆಕ್ ಮಾಡಬಹುದು.

ಅಚ್ಚುಕಟ್ಟಾದ ಬಯೋಡೇಟ ಬರೆಯುವುದರ ಬಗ್ಗೆ ಮತ್ತು  ಸಂದರ್ಶನಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=faQz_iLCWEk

2. ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಮಾಡುತ್ತಿದ್ದು, ಮೆಡಿಕಲ್/ಎಂಜಿನಿಯರಿಂಗ್ ಅಲ್ಲದೆ ಬೇರೆ ಯಾವ ಕೋರ್ಸ್ ಮಾಡಬಹುದು? ಬಿ.ಎಸ್ಸಿ (ಫಾರೆಸ್ಟಿç) ಬಗ್ಗೆ ಮಾಹಿತಿ ನೀಡಬಹುದೇ?

ಪಿಯುಸಿ (ವಿಜ್ಞಾನ) ನಂತರ ಅಪಾರವಾದ ಕೋರ್ಸ್ ಆಯ್ಕೆಗಳಿವೆ.  ಉದಾಹರಣೆಗೆ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್, ಐಟಿ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಕೃಷಿ, ಪಶುಸಂಗೋಪನೆ, ಹೈನುಗಾರಿಕೆ, ಬಯೋಟೆಕ್ನಾಲಜಿ, ನರ್ಸಿಂಗ್, ಪ್ಯಾರಾಮೆಡಿಕಲ್, ಆಹಾರ ತಂತ್ರಜ್ಞಾನ ಸೇರಿದಂತೆ ಹಲವಾರು ಆಯ್ಕೆಗಳು), ಬಿ.ಫಾರ್ಮಾ,  ಬಿಕಾಂ, ಬಿಕಾಂ (ಹಾನರ್ಸ್), ಬಿಎ, ಬಿಎ (ಹಾನರ್ಸ್) ಬಿಸಿಎ, ಬಿಬಿಎ, ಬಿ.ಡಿಸೈನ್, ಸಿಎ, ಎಸಿಎಸ್, ಸಿಎಂಎ ಇತ್ಯಾದಿ ಕೋರ್ಸ್ಗಳನ್ನು ಮಾಡಬಹುದು.

ಹಾಗೂ, ಇತ್ತೀಚಿನ ವರ್ಷಗಳಲ್ಲಿ ಮುನ್ನೆಲೆಗೆ ಬಂದಿರುವ ನಾಲ್ಕು ವರ್ಷದ ಬಿ.ಎಸ್ಸಿ (ಅರಣ್ಯ ಶಾಸ್ತ್ರ) ಕೋರ್ಸ್ ಮುಖಾಂತರ ಆಕರ್ಷಕವಾದ ವೃತ್ತಿಯನ್ನು ರೂಪಿಸಿಕೊಳ್ಳಬಹುದು. ಜಾಗತಿಕ ತಾಪಮಾನದ ಏರಿಕೆ ಮತ್ತು ಪರಿಸರ ವ್ಯವಸ್ಥೆಯ ಬಗ್ಗೆ ಕಾಳಜಿ, ವನ್ಯಜೀವಿಗಳ ಮೂಲಭೂತ ಅಂಶಗಳು, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ, ಜಲವಿಜ್ಞಾನ, ಮಣ್ಣು ಮತ್ತು ನೀರಿನ ಸಮಸ್ಯೆ, ತೋಟಗಾರಿಕೆ ಇಂತಹ ವಿಷಯಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು, ಈ ಕೋರ್ಸ್ ಮಾಡಬಹುದು. ಸಿರ್ಸಿ ನಗರ ಮತ್ತು ಕೊಡಗಿನ ಪೊನ್ನಂಪೇಟೆಯಲ್ಲಿರುವ ಎರಡು ಕಾಲೇಜುಗಳಿಗೆ ಸಿಇಟಿ ಪರೀಕ್ಷೆಯ ಮೂಲಕ ಸೀಟ್ ಹಂಚಿಕೆಯಾಗುತ್ತದೆ.

ಈ ಕೋರ್ಸ್ ನಂತರ ಸರ್ಕಾರದ ಅರಣ್ಯ ಇಲಾಖೆ ಮತ್ತು ಖಾಸಗಿ ವಲಯದ ಕೃಷಿ ವ್ಯಾಪಾರೋದ್ಯಮ ಕಂಪನಿಗಳಲ್ಲಿ ಉದ್ಯೋಗವನ್ನು ಅರಸಬಹುದು. ಹೆಚ್ಚಿನ ತಜ್ಞತೆಗಾಗಿ ಎಂ.ಎಸ್ಸಿ/ಪಿ.ಎಚ್‌ಡಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=JlMo33YxTiA

3. ಸರ್, ನಾನು ಮುಂದಿನ ವರ್ಷಕ್ಕೆ ಸಿವಿಲ್ ಇಂಜಿನಿಯರಿಂಗ್ ಮುಗಿಸುತ್ತೇನೆ.  ನಂತರ, ಯಾವ ಕ್ಷೇತ್ರದಲ್ಲಿ ಬೇಗ ಕೆಲಸ ದೊರಕಬಹುದು? ಅಥವಾ ಬೇರೆ ಯಾವ ಕ್ಷೇತ್ರದಲ್ಲಿ ಪ್ರಯತ್ನ ಮಾಡಬೇಕು?

ನಿಮ್ಮ ಆಸಕ್ತಿಗೆ ಅನುಗುಣವಾಗಿ ಹೆದ್ದಾರಿ ಯೋಜನೆಗಳು, ರಸ್ತೆ ಮತ್ತು ಸೇತುವೆ ನಿರ್ಮಾಣ, ರೈಲ್ವೆ, ಅಣೆಕಟ್ಟು ಮತ್ತು ನೀರಾವರಿ ಯೋಜನೆಗಳು, ಗ್ರಾಮೀಣಾಭಿವೃದ್ಧಿ,  ನಗರಗಳಲ್ಲಿ ಮೂಲ ಸೌಕರ್ಯ ನಿರ್ಮಾಣ, ವಿದ್ಯುಚ್ಛಕ್ತಿ ಉತ್ಪಾದನಾ ಯೋಜನೆಗಳು, ವಸತಿ ಮುಂತಾದ ವಲಯಗಳಲ್ಲಿ ವೃತ್ತಿಯನ್ನು ಅರಸಬಹುದು. ಹಾಗೂ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಹುದ್ದೆಗಳನ್ನು ಪಡೆದುಕೊಳ್ಳಬಹುದು. ನಮ್ಮ ಅಭಿಪ್ರಾಯದಂತೆ, ನೀವು ಓದಿರುವ ಕೋರ್ಸಿಗೂ ವೃತ್ತಿಗೂ ಸಾಮ್ಯತೆಯಿದ್ದರೆ, ವೃತ್ತಿ ಜೀವನದ ಸಾಧನೆಗೆ ನೆರವಾಗುತ್ತದೆ.

4. ಸರ್, ನಾನು ಬಿ.ಎಸ್ಸಿ ಮುಗಿಸಿದ್ದು, ಇದೇ ವರ್ಷ ಬಿ.ಇಡಿ ಕೋರ್ಸ್ ಪೂರ್ಣವಾಗಲಿದೆ. ಮುಂದೆ ಎಂ.ಎಸ್ಸಿ (ರಸಾಯನ ಶಾಸ್ತç) ಮಾಡಿ, ಸರ್ಕಾರಿ ಕೆಲಸವನ್ನು ಮಾಡುವ ಆಸೆಯಿದೆ. ಎಂ.ಎಸ್ಸಿ ಮಾಡುವುದರಿಂದಾಗುವ ಅನುಕೂಲಗಳೇನು? ನನ್ನ ಆದ್ಯತೆಯನ್ನು ಸರ್ಕಾರಿ ಕೆಲಸವನ್ನು ಪಡೆಯಲು ನೀಡಬೇಕಾ ಅಥವಾ ಎಂ.ಎಸ್ಸಿ ಕೋರ್ಸ್ಗೆ ನೀಡಬೇಕಾ ಎನ್ನುವ ಗೊಂದಲದಲ್ಲಿದ್ದೇನೆ. ನಿಮ್ಮ ಸಲಹೆಯನ್ನು ನೀಡಿ.

ಎಂ.ಎಸ್ಸಿ ಮಾಡಿದ ನಂತರ ಪದವಿ ಪೂರ್ವ/ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಬಹುದು. ಮುಂದೆ ಪಿ.ಎಚ್‌ಡಿ ಮಾಡಿದರೆ, ಉನ್ನತ ಶಿಕ್ಷಣ ಸಂಸ್ಥೆ/ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕ/ಪ್ರಾಧ್ಯಾಪಕರಾಗಬಹುದು. ಹಾಗಾಗಿ, ರಸಾಯನ ಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆಯುವುದರಿಂದ (ಎಂ.ಎಸ್ಸಿ/ಪಿ.ಎಚ್‌ಡಿ) ಶಿಕ್ಷಣ ಕ್ಷೇತ್ರದಲ್ಲಿ, ಪ್ರಗತಿಯನ್ನು ಸಾಧಿಸಬಹುದು.

ನಮ್ಮ ಅಭಿಪ್ರಾಯದಂತೆ, ಸರ್ಕಾರಿ/ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಯನ್ನು ಅನುಸರಿಸುತ್ತಾ ಸಂಜೆ ಕಾಲೇಜು/ದೂರ ಶಿಕ್ಷಣದ ಮೂಲಕ ಎಂ.ಎಸ್ಸಿ ಮಾಡಿ, ನಂತರ ಪಿ.ಎಚ್‌ಡಿ ಮಾಡುವ ಸಾಧ್ಯತೆಯನ್ನು ಪರಿಶೀಲಿಸಬಹುದು. ಪ್ರಮುಖವಾಗಿ, ನಿಮ್ಮ ಆಸಕ್ತಿ, ಅಭಿರುಚಿ, ಕೌಶಲಗಳನ್ನು ಗಮನಿಸಿ, ದೀರ್ಘಾವಧಿ ವೃತ್ತಿಯೋಜನೆಯನ್ನು ಮಾಡಿ, ಅದರಂತೆ ಉನ್ನತ ಶಿಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತ. ಉನ್ನತ ಶಿಕ್ಷಣದ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/oyUMPrEKPPU

5. ನಾನು ಬಿ.ಎಸ್ಸಿ (ಕೃಷಿ) ಮಾಡಿ ಈಗ ಕೆಲಸದಲ್ಲಿದ್ದೇನೆ. ಮುಂದಿನ ಉನ್ನತ ಶಿಕ್ಷಣದ ಆಯ್ಕೆಗಳೇನು? ದೂರ ಶಿಕ್ಷಣದ ಮೂಲಕ ಎಂ.ಎಸ್ಸಿ ಮಾಡಬಹುದೇ?

ಬಿ.ಎಸ್ಸಿ (ಕೃಷಿ) ನಂತರ ಸಂಬಂಧಪಟ್ಟ ವಿಷಯಗಳಲ್ಲಿ ( ಕೃಷಿ, ಕೃಷಿ ವ್ಯಾಪಾರೋದ್ಯಮ, ಆಹಾರ, ತೋಟಗಾರಿಕೆ ಇತ್ಯಾದಿ) ಎಂ.ಎಸ್ಸಿ/ಪಿ.ಎಚ್‌ಡಿ (ರೆಗ್ಯುಲರ್) ಮಾಡಬಹುದು. ಹಾಗೂ, ದೂರಶಿಕ್ಷಣದ ಮೂಲಕ ಸಂಬಂಧಪಟ್ಟ ವಿಷಯಗಳಲ್ಲಿ ಎಂ.ಎಸ್ಸಿ/ಡಿಪ್ಲೊಮಾ/ಸರ್ಟಿಫಿಕೆಟ್ ಕೋರ್ಸ್ಗಳನ್ನು ಮಾಡಬಹುದು. ಉದಾಹರಣೆಗೆ, ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಕೋರ್ಸನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿರ್ವಹಣೆ, ಆಹಾರ ಪೋಷಣೆ ವಿಷಯಗಳಲ್ಲಿ ಮಾಡಬಹುದು. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನ, ಆಹಾರ ಮತ್ತು ಪೌಷ್ಟಿಕಾಂಶ ವಿಜ್ಞಾನದಲ್ಲಿ ಎಂ.ಎಸ್ಸಿ ಮಾಡಬಹುದು. ಆದರೆ, ನಮಗೆ ತಿಳಿದಂತೆ ಎಂ.ಎಸ್ಸಿ (ಕೃಷಿ) ಕೋರ್ಸ್ ದೂರಶಿಕ್ಷಣದ ಮೂಲಕ   ಲಭ್ಯವಿಲ್ಲ. ಇದಲ್ಲದೆ, ಇನ್ನಿತರ ವಿಶ್ವವಿದ್ಯಾಲಯಗಳಲ್ಲಿ ಅನೇಕ ಉನ್ನತ ಶಿಕ್ಷಣದ ಆಯ್ಕೆಗಳಿವೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://ksoumysuru.ac.in/academic_programme_msc.php

6. ಮುಂದಿನ ದಿನಗಳಲ್ಲಿ ಬಿ.ಎಸ್ಸಿ (ತೋಟಗಾರಿಕೆ) ಕ್ಷೇತ್ರದಲ್ಲಿ ವೃತ್ತಿಯ ಅವಕಾಶಗಳೇನು? ಕರ್ನಾಟಕ ಸರ್ಕಾರದಲ್ಲಿನ ಅವಕಾಶಗಳೇನು?

ಬಿ.ಎಸ್ಸಿ (ತೋಟಗಾರಿಕೆ) ಕೋರ್ಸ್ನಲ್ಲಿ ಅನೇಕ ಉಪಯುಕ್ತ ಮತ್ತು ಕುತೂಹಲಕಾರಿ ವಿಷಯಗಳನ್ನು ಕಲಿಸಲಾಗುತ್ತದೆ. ಉದಾಹರಣೆಗೆ, ತೋಟಗಾರಿಕೆ, ಹೂವು, ಹಣ್ಣು ಮತ್ತು ತರಕಾರಿ ವಿಜ್ಞಾನ, ಪ್ಲಾಂಟೇಷನ್ ಬೆಳೆಗಳು, ತಳಿ ಶಾಸ್ತç, ಜೇನು ಕೃಷಿ, ಸಾವಯವ ಕೃಷಿ, ಸಸ್ಯ ರೋಗಶಾಸ್ತç, ತೋಟಗಾರಿಕಾ ವ್ಯವಹಾರ ನಿರ್ವಹಣೆ ಇತ್ಯಾದಿ ವಿಷಯಗಳಿರುತ್ತದೆ. ಆಸಕ್ತಿಯಿರುವ ವಿಷಯದಲ್ಲಿ, ಉನ್ನತ ಶಿಕ್ಷಣಕ್ಕಾಗಿ ಎಂ.ಎಸ್ಸಿ/ಪಿ.ಎಚ್‌ಡಿ ಮಾಡಬಹುದು.

ಬಿ.ಎಸ್ಸಿ (ತೋಟಗಾರಿಕೆ) ಪದವಿಯ ನಂತರ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ವೃತ್ತಿಯನ್ನು ಅರಸಬಹುದು. ಉದಾಹರಣೆಗೆ, ತೋಟಗಾರಿಕೆ ಅಸಿಸ್ಟೆಂಟ್, ಫರ್ಸ್ಟ್ ಕ್ಲಾಸ್ ಅಸಿಸ್ಟೆಂಟ್, ಸಹಾಯಕ ತೋಟಗಾರಿಕೆ ಅಧಿಕಾರಿ, ಕೃಷಿ ಅಧಿಕಾರಿ, ತೋಟಗಾರಿಕೆ ಅಧಿಕಾರಿ ಸೇರಿದಂತೆ ಹಲವಾರು ಸರ್ಕಾರಿ ಹುದ್ದೆಗಳನ್ನು ಪಡೆಯಬಹುದು. ಖಾಸಗಿ ವಲಯದಲ್ಲಿ ನರ್ಸರಿ ಮ್ಯಾನೇಜರ್, ತೋಟಗಾರಿಕಾ ತಜ್ಞ, ತೋಟಗಾರಿಕಾ ವ್ಯವಸ್ಥಾಪಕ, ಲ್ಯಾಂಡ್‌ಸ್ಕೇಪ್ ಡಿಸೈನರ್, ಫಾರ್ಮ್ ಮ್ಯಾನೇಜರ್ ಮುಂತಾದ ವೃತ್ತಿಗಳನ್ನು ಅರಸಬಹುದು. ಇದಲ್ಲದೆ, ಈ ಕ್ಷೇತ್ರಕ್ಕೆ ಸಂಬAಧಿಸಿದ ಸ್ವಯಂ-ಉದ್ಯೋಗವನ್ನೂ ಮಾಡಬಹುದು.

ಮುಖ್ಯವಾಗಿ, ಈ ಕ್ಷೇತ್ರದಲ್ಲಿ ಆಸಕ್ತಿ ಮತ್ತು ಸ್ವಾಭಾವಿಕ ಅಭಿರುಚಿಯಿದ್ದರೆ, ವೃತ್ತಿಯೋಜನೆಯನ್ನು ಮಾಡಿ  ಮುಂದುವರೆಯುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/MHnPg_sp6E0

7. ನಾನು ಬಿಕಾಂ ಅಂತಿಮ ವರ್ಷ ಓದುತ್ತಿದ್ದು, ಮುಂದೆ ಬಿ.ಇಡಿ ಮಾಡಬೇಕು ಎ೦ದುಕೊಂಡಿದ್ದೇನೆ. ನಮ್ಮದು ಎನ್‌ಇಪಿ ಪಠ್ಯಕ್ರಮ.  ಹಾಗಾಗಿ, ಬಿ.ಇಡಿ ಎಷ್ಟು ವರ್ಷ ಇರಬಹುದು ಎ೦ದು ತಿಳಿಸಿ. ಬಿ.ಇಡಿ ಕೋರ್ಸ್ ಬಗ್ಗೆ ಮಾಹಿತಿ ನೀಡಿ.

ಎನ್‌ಇಪಿ ಪಠ್ಯಕ್ರಮದ ಅನುಸಾರ ನಾಲ್ಕು ವರ್ಷದ ಬಿ.ಎಸ್ಸಿ, ಬಿ.ಎ, ಬಿಕಾಂ ಮತ್ತು  ಬಿ.ಇಡಿ (ಸಂಯೋಜಿತ ಕೋರ್ಸ್) ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ನೀವು ಸಂಯೋಜಿತ ಬಿ.ಇಡಿ ಕೋರ್ಸ್ ಆಯ್ಕೆ ಮಾಡಿಲ್ಲದಿದ್ದರೆ, ಎರಡು ವರ್ಷದ ಕೋರ್ಸ್ ಬಿಇಡಿ ಮಾಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.collegedekho.com/articles/bed-after-bcom-eligibility-fee-admission-process/

8. ಸದ್ಯಕ್ಕೆ ಹಾಗೂ ಮುಂಬರುವ ದಿನಗಳಲ್ಲಿ, ಎಂ.ಎಸ್ಸಿ (ಕೃಷಿ ವಿಸ್ತರಣೆ) ಕ್ಷೇತ್ರದಲ್ಲಿ ವೃತ್ತಿಯ ಅವಕಾಶಗಳು ಯಾವುವು? ಸರ್ಕಾರದಲ್ಲಿನ ಅವಕಾಶಗಳೇನು? ಸ್ವಂತ ಉದ್ಯಮ ಪ್ರಾರಂಭಿಸಬೇಕು ಎನ್ನುವ ಆಕಾಂಕ್ಷಿಗಳಿಗೆ ಈ ಪದವಿ ಹೇಗೆ ಸಹಕಾರಿ? ದಯವಿಟ್ಟು ತಿಳಿಸಿ.

ಕೃಷಿ ವಿಸ್ತರಣೆ ಕಾರ್ಯಕ್ರಮಗಳಿಂದ, ವೈಜ್ಞಾನಿಕ ಮತ್ತು ನೂತನ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಮತ್ತು ಗ್ರಾಮೀಣ ಸಮುದಾಯಗಳಿಗೆ, ಅಗತ್ಯವಾದ ಮಾಹಿತಿ, ಜ್ಞಾನ ಮತ್ತು ತಂತ್ರಜ್ಞಾನವನ್ನು ಪರಿಚಯಿಸಿ, ಕೃಷಿ ಉತ್ಪಾದನೆಯನ್ನು ಹೆಚ್ಚಿಸಬಹುದು. ಈ ರೀತಿ ರೈತರ ದೃಷ್ಟಿಕೋನವನ್ನು ಆಧುನೀಕರಿಸಿ, ಅವರನ್ನು ಹೆಚ್ಚು ಉದ್ಯಮಶೀಲರನ್ನಾಗಿ ಮಾಡಬಹುದು. ಆದ್ದರಿಂದ, ನಮ್ಮ ಕೃಷಿ ಅವಲಂಬಿತ ದೇಶದಲ್ಲಿ, ಕೃಷಿ ಪದವೀಧರರಿಗೆ ಮತ್ತು ತಂತ್ರಜ್ಞರಿಗೆ  ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಬೇಡಿಕೆಯನ್ನು ನಿರೀಕ್ಷಿಸಬಹುದು.

ಎಂ.ಎಸ್ಸಿ ಕೋರ್ಸ್ ನಂತರ ಸರ್ಕಾರದ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ, ರೇಷ್ಮೆ, ನೀರಾವರಿ, ಪಶುಸಂಗೋಪನೆ ಮುಂತಾದ ಇಲಾಖೆಗಳಲ್ಲಿ ವೃತ್ತಿಯನ್ನು ಅರಸಬಹುದು. ಬೆಳೆಯುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ನಗರೀಕರಣ, ಬದಲಾಗುತ್ತಿರುವ ಜೀವನ ಶೈಲಿ ಇತ್ಯಾದಿ ಕಾರಣಗಳಿಂದ ಕೃಷಿ ಸಂಬAಧಿತ ಆಹಾರ ಸಂಸ್ಕರಣಾ ಕ್ಷೇತ್ರ, ಅಭಿವೃದ್ಧಿಯ ಪಥದಲ್ಲಿದೆ. ಕಚ್ಛಾ ಧಾನ್ಯಗಳು ಮತ್ತು ಇನ್ನಿತರ ಆಹಾರ ಪದಾರ್ಥಗಳ ಸಂಗ್ರಹಣೆ, ಶುದ್ಧೀಕರಣ, ಸಂಸ್ಕರಣೆ, ಸುರಕ್ಷತೆ ಮತ್ತು ಸೂಕ್ತ ಪ್ಯಾಕಿಂಗ್ ನಂತರ ಬಳಕೆಗೆ ಯೋಗ್ಯ ರೀತಿಯಲ್ಲಿ ಸಿದ್ದಪಡಿಸುವ ಕ್ಷೇತ್ರಗಳಿಗೆ, ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದ್ದು ಸ್ವಂತ ಉದ್ದಿಮೆಗೆ ವಿಪುಲವಾದ ಅವಕಾಶಗಳಿವೆ. ಖಾಸಗಿ ಕ್ಷೇತ್ರದ ಕೃಷಿ ಮತ್ತು ಆಹಾರ ಸಂಬAಧಿತ ಸಂಸ್ಥೆಗಳಲ್ಲೂ, ವೃತ್ತಿಯ ಅವಕಾಶಗಳಿವೆ ಎನ್ನುವುದು ನಿಮ್ಮ ಗಮನದಲ್ಲಿರಲಿ.

ಇದಲ್ಲದೆ, ನಿಮಗೆ ಆಸಕ್ತಿಯಿದ್ದಲ್ಲಿ, ಯುಪಿಎಸ್‌ಸಿ/ಕೆಪಿಎಸ್‌ಸಿ ಮೂಲಕ ಸರ್ಕಾರದ ಉನ್ನತ ಹುದ್ದೆಗಳನ್ನು ಪಡೆದು, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆಯನ್ನು ನೀಡಬಹುದು. ಹಾಗೂ, ನೀವು ಪಡೆಯುವ ಜ್ಞಾನ, ಅನುಭವ ಮತ್ತು ಕೌಶಲಗಳ ಸದುಪಯೋಗದಿಂದ ಸ್ವಂತ ಕೃಷಿ ಆರಂಭಿಸಿ, ಪ್ರಯೋಗಶೀಲ ರೈತರಾಗಿ, ನಾಡಿನ ಇನ್ನಿತರ ರೈತರಿಗೂ ಮಾದರಿಯಾಗಬಹುದು.

ಹಾಗಾಗಿ, ಎಂ.ಎಸ್ಸಿ (ಕೃಷಿ ವಿಸ್ತರಣೆ) ಕೋರ್ಸ್ ನಂತರ ಭವಿಷ್ಯವನ್ನು ರೂಪಿಸಿಕೊಳ್ಳಲು ಹಲವಾರು ಅವಕಾಶಗಳಿವೆ. ನಿಮ್ಮ ಆಸಕ್ತಿ, ಅಭಿರುಚಿಯಂತೆ ವೃತ್ತಿಯೋಜನೆಯನ್ನು ಮಾಡಿ, ಅದರಂತೆ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ವೃತ್ತಿಯೋಜನೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/MHnPg_sp6E0

9. ಐಚ್ಛಿಕ ಕನ್ನಡ ಮಾಡುವುದರಿಂದ ಏನು ಪ್ರಯೋಜನವಿದೆ? ಮತ್ತು ಇಂಗ್ಲೀಷ್ ಕಲಿಯುವುದು ಹೇಗೆ?

ಕನ್ನಡ ಭಾಷೆಯನ್ನು ಕಲಿಯುವ ಆಸಕ್ತಿಯಿದ್ದರೆ, ಉನ್ನತ ಶಿಕ್ಷಣವನ್ನು ಮುಂದುವರೆಸಬಹುದು. ಹಾಗೂ, ಶಿಕ್ಷಣದ ನಂತರದ ಬದುಕಿನ ಕನಸುಗಳೇನು ಎನ್ನುವುದರ ಬಗ್ಗೆ ಸ್ಪಷ್ಟತೆಯಿರಬೇಕು. ಆ ಕನಸುಗಳನ್ನು ನನಸಾಗಿಸಲು ಸೂಕ್ತವಾದ ವೃತ್ತಿಯ ಬಗ್ಗೆ ಮೊದಲೇ ನಿಶ್ಚಯಿಸಬೇಕು. ಏಕೆಂದರೆ, ಯಶಸ್ಸಿನ ಹಾದಿಯಲ್ಲಿ ವೈಯಕ್ತಿಕ ಬದುಕಿನ ಕನಸುಗಳೇ ಪ್ರೇರಣೆ.

ಶಿಕ್ಷಣದ ನಂತರ, ಪ್ರಿಂಟ್, ಎಲೆಕ್ಟಾçನಿಕ್ ಮತ್ತು ಡಿಜಿಟಲ್ ಸೇರಿದಂತೆ ಮಾಧ್ಯಮಗಳು, ವಿಷಯಾಭಿವೃದ್ಧಿ, ಪ್ರಕಾಶನ ಸಂಸ್ಥೆಗಳು, ಚಿತ್ರೋಧ್ಯಮ, ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಇ-ಕಾಮರ್ಸ್, ಕೋಚಿಂಗ್ ತರಗತಿಗಳು, ಶಿಕ್ಷಣ ಸೇರಿದಂತೆ ಅನೇಕ ವಲಯಗಳಲ್ಲಿ ವೃತ್ತಿಯ ಅವಕಾಶಗಳಿವೆ.

ಭಾಷೆಯ ತಜ್ಞತೆಯಿದ್ದರೆ ಮನೆಯಿಂದಲೇ ಮಾಡಬಹುದಾದ ವಿಷಯಾಭಿವೃದ್ಧಿ, ಅನುವಾದ, ಸಬ್‌ಟೈಟಲ್ಸ್, ಟ್ರಾನ್ಸ್ಕ್ರಿಪ್ಷನ್ ಇತ್ಯಾದಿ ಅವಕಾಶಗಳವೂ ಇವೆ.

ಇಂಗ್ಲಿಷ್ ಕಲಿಯುವಿಕೆಗೆ ಸಹಾಯವಾಗಬಹುದಾದ ಈ ವಿಡಿಯೊ ವೀಕ್ಷಿಸಿ: https://youtu.be/NoFcIQAFDCA

10. ನನ್ನ ಮಗಳು ಬಿ.ಎಸ್ಸಿ (ಮೈಕ್ರೊಬಯಾಲಜಿ) ಮುಗಿಸಿ, ಎಂ.ಎಸ್ಸಿ (ಮೈಕ್ರೊಬಯಾಲಜಿ) ಸೇರಿದ್ದಾಳೆ. ಮುಂದಿನ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ. ಓದಿರುವ ಯಾವ ವಿಷಯಗಳಲ್ಲಿ ಸ್ವಂತ ಉದ್ಯೋಗ ಮಾಡಬಹುದು. ಯಾವ ವಿಷಯದ ಬಗ್ಗೆ ಕಂಪ್ಯೂಟರ್ ಕೋರ್ಸ್ ಮಾಡಿದರೆ ಅನುಕೂಲವಾಗುತ್ತದೆ? ದಯವಿಟ್ಟು ತಿಳಿಸಿ.

ಎಂ.ಎಸ್ಸಿ ನಂತರ ಬಯೋಮೆಡಿಕಲ್ ಸೈಂಟಿಸ್ಟ್, ಫಾರ್ಮಾಕಾಲಜಿಸ್ಟ್, ರಿಸರ್ಚ್ ಅಸೋಸಿಯೇಟ್, ಮೈಕ್ರೊಬಯಾಲಜಿಸ್ಟ್, ಲ್ಯಾಬೊರೇಟರಿ ಮ್ಯಾನೇಜರ್,  ಇಕಾಲಜಿಸ್ಟ್, ಆಹಾರ ತಂತ್ರಜ್ಞ, ಆಹಾರ ಗುಣಮಟ್ಟ ನಿಯಂತ್ರಕ, ಉಪನ್ಯಾಸಕ ಮುಂತಾದ ಹುದ್ದೆಗಳನ್ನು ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಫಾರ್ಮಾ ಉದ್ದಿಮೆಗಳು, ಸಂಶೋಧನಾ ಸಂಸ್ಥೆಗಳು,  ಆಹಾರ ಪದಾರ್ಥ ಮತ್ತು ಪಾನೀಯ ತಯಾರಿಕಾ ಉದ್ದಿಮೆಗಳು, ಆಹಾರ ಸಂಬAಧಿತ ಉದ್ದಿಮೆಗಳು, ಸಾವಯವ ಉದ್ದಿಮೆಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಆಹಾರ ಪರೀಕ್ಷಾ ಪ್ರಯೋಗಾಲಯಗಳು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವಿಪುಲವಾದ ಉದ್ಯೋಗಾವಕಾಶಗಳಿವೆ. ಈ ವೃತ್ತಿಗಳಲ್ಲಿ ಯಶಸ್ಸನ್ನು ಗಳಿಸಲು ಪರಿಣಾಮಕಾರಿಯಾಗಿ ಎಂಎಸ್ (ಆಫೀಸ್) ಬಳಸುವ ಸಾಮರ್ಥ್ಯವಿದ್ದರೆ ಸಾಕಾಗುತ್ತದೆ. ಸಂಶೋಧನೆ ಮಾಡಬೇಕಾದ ಸಂದರ್ಭಗಳಲ್ಲಿ, ಎಸ್‌ಪಿಎಸ್‌ಎಸ್ ಸಾಫ್ಟ್ವೇರ್ ಉಪಯುಕ್ತ.

ಈ ವೈವಿಧ್ಯಮಯ ಕ್ಷೇತ್ರದಲ್ಲಿ ಅಭಿರುಚಿ, ಆಸಕ್ತಿ, ಕೌಶಲಗಳು ಮತ್ತು ಅನುಭವದ ಆಧಾರದ ಮೇಲೆ ಸ್ವಯಂ-ಉದ್ಯೋಗ ಅಥವಾ ಸ್ವಂತ ಉದ್ದಿಮೆಯನ್ನು ಆರಂಭಿಸಬಹುದು. ಹಾಗೂ, ಈ ನಿರ್ಧಾರ ತೆಗೆದುಕೊಳ್ಳುವ ಮುಂಚೆ, ಗ್ರಾಹಕರ ಆದ್ಯತೆಗಳು ಮತ್ತು ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆ ಮುಂತಾದ ವಿಷಯಗಳ ಕುರಿತು ಸಂಶೋಧನೆ ಮಾಡುವುದು ಸೂಕ್ತ.

11. ಬಿ.ಇಡಿ ಜೊತೆಗೆ ಯುಪಿಎಸ್‌ಸಿ ತಯಾರಿಯ ಕುರಿತು ಮಾಹಿತಿ ನೀಡಿ.

ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಐಎಎಸ್, ಐಪಿಎಸ್, ಐಎಫ್‌ಎಸ್ ಮುಂತಾದ ಪ್ರತಿಷ್ಠಿತ ಹಾಗೂ ಪ್ರಭಾವಿ ಅಧಿಕಾರಿಗಳಾಗಿ, ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಯುಪಿಎಸ್‌ಸಿ ಪರೀಕ್ಷೆಗೆ ಯಾವುದೇ ಪದವಿಯ ನಂತರ ಅರ್ಹತೆಯಿರುತ್ತದೆ. ಹಾಗಾಗಿ, ನಿಮಗೆ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾದ ಆಸಕ್ತಿಯಿದ್ದಲ್ಲಿ, ನಾಲ್ಕು ವರ್ಷದ ಬಿ.ಇಡಿ (ಬಿ.ಎಸ್ಸಿ, ಬಿಕಾಂ, ಬಿ.ಎ ಕೋರ್ಸ್ ಜೊತೆ ಸಂಯೋಜಿತ) ಕೋರ್ಸ್ ಮಾಡಬಹುದು. ಅಥವಾ, ಆನ್‌ಲೈನ್/ದೂರಶಿಕ್ಷಣದ ಮೂಲಕ ಬಿ.ಇಡಿ ಕೋರ್ಸ್ ಮಾಡುತ್ತಾ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಭಾಗವಹಿಸಬಹುದು. ಆದರೆ, ಬಿ.ಇಡಿ ಕೋರ್ಸ್ ಮಾಡಲು ಪ್ರಬಲವಾದ ಕಾರಣಗಳಿರಬೇಕು; ಮುಖ್ಯವಾಗಿ, ನಿಮ್ಮ ವೃತ್ತಿಯೋಜನೆಗೆ ಅನುಗುಣವಾಗಿರಬೇಕು. ಏಕೆಂದರೆ, ಕಠಿಣವಾದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಏಕಾಗ್ರತೆ, ಸಮಯದ ನಿರ್ವಹಣೆ ಮತ್ತು ಸಾಕಷ್ಟು ಪರಿಶ್ರಮ ಅತ್ಯವಶ್ಯ. ವೃತ್ತಿಯೋಜನೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/MHnPg_sp6E0

12. ನಾನು ಪಿಯುಸಿ ಮುಗಿಸಿದ್ದು, ಫೊರೆನ್ಸಿಕ್ ಕ್ಷೇತ್ರದಲ್ಲಿ ಆಸಕ್ತಿಯಿದೆ. ಯಾವ ಕೋರ್ಸ್ ಮಾಡಬೇಕು?

ವಿಧಿವಿಜ್ಞಾನ (ಫೊರೆನ್ಸಿಕ್) ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ, ಬಿ.ಎಸ್ಸಿ (ವಿಧಿವಿಜ್ಞಾನ) ಕೋರ್ಸ್ ಮಾಡಬೇಕು.

ಪಿಯುಸಿ ನಂತರ ಬಿ.ಎಸ್ಸಿ (ವಿಧಿ ವಿಜ್ಞಾನ) ಕೋರ್ಸ್ ಉತ್ತಮ ಆಯ್ಕೆ ಎನ್ನುವುದರಲ್ಲಿ ಸಂದೇಹವಿಲ್ಲ. ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸ್ವಾಭಾವಿಕವಾದ ಒಲವು ಮತ್ತು ಆಸಕ್ತಿಯಿದ್ದು ವಿವೇಚನೆ, ಉತ್ತಮ ಸಂವಹನ, ನಾಯಕತ್ವದ ವ್ಯಕ್ತಿತ್ವ, ನೈತಿಕ ಅರಿವು, ದತ್ತಾಂಶ ಸಂಗ್ರಹಣೆ ಮತ್ತು ನಿರ್ವಹಣೆ, ತಾರ್ಕಿಕ ಪ್ರತಿಪಾದನಾ ಕೌಶಲ, ವಿಶ್ಲೇಷಣಾ ಮತ್ತು ಸಂಶೋಧನಾ ಕೌಶಲ, ಸಮಯ ಪ್ರಜ್ಞೆ ಇತ್ಯಾದಿ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ, ಈ ವಿಷಯದ ಬಗ್ಗೆ ವಿಸ್ತöÈತವಾದ ಈ ಲೇಖನವನ್ನು ಗಮನಿಸಿ: http://www.vpradeepkumar.com/forensic-science/

13. ನಾನು ಎಂಜಿನಿಯರಿಂಗ್ ಓದುತ್ತಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಸಕ್ತಿಯಿದೆ. ಮುಂದೆ ಪರೀಕ್ಷೆಗಳ ಆಯ್ಕೆ ಪ್ರಕ್ರಿಯೆ ಹೇಗೆ?

ನೀವು ಯಾವ ವಿಭಾಗದಲ್ಲಿ ಎಂಜಿನಿಯರಿಂಗ್ ಮಾಡುತ್ತಿದ್ದೀರಿ ಎಂದು ತಿಳಿಸಿಲ್ಲ. ಸರ್ಕಾರಿ ವಲಯದಲ್ಲಿ ಎಂಜಿನಿಯರಿಂಗ್ ಪದವೀಧರರಿಗೆ ಹಲವಾರು ಉದ್ಯೋಗಾವಕಾಶಗಳಿವೆ. ಉದಾಹರಣೆಗೆ, ಮೂಲಸೌಕರ್ಯ ಅಭಿವೃದ್ಧಿ,  ಲೋಕೋಪಯೋಗಿ, ಇಂಧನ, ಮಾಹಿತಿ ತಂತ್ರಜ್ಞಾನ, ನೀರಾವರಿ, ಯೋಜನೆ, ಸಾರಿಗೆ, ನಗರಾಭಿವೃದ್ಧಿ ಮುಂತಾದ ಇಲಾಖೆಗಳಲ್ಲಿ ಉದ್ಯೋಗವನ್ನು ಅರಸಬಹುದು. ಹಾಗೂ, ಯುಪಿಎಸ್‌ಸಿ, ಕೆಪಿಎಸ್‌ಸಿ, ರೈಲ್ವೇಸ್, ಬ್ಯಾಂಕಿAಗ್  ಕ್ಷೇತ್ರಗಳಲ್ಲಿಯೂ ಮತ್ತು ಇಸ್ರೋ, ಡಿಆರ್‌ಡಿಒ, ಬಿಎಆರ್‌ಸಿ, ಸಿಎಸ್‌ಐಆರ್ ಮುಂತಾದ ಪ್ರತಿಷ್ಠಿತ ಸರ್ಕಾರಿ ಸಂಸ್ಥೆಗಳಲ್ಲಿಯೂ ವೃತ್ತಿಯನ್ನು ಅರಸಬಹುದು.

ಸ್ಪರ್ಧಾತ್ಮಕ ಪರೀಕ್ಷೆಗಳ ಆಯ್ಕೆಗೆ ಮುನ್ನ ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ ಮತ್ತು ಕೌಶಲಗಳನ್ನು ಗಮನಿಸಿ ವೃತ್ತಿಯೋಜನೆಯನ್ನು ಮಾಡಿ, ಅದರಂತೆ ಮುಂದುವರೆಯುವುದು ಸೂಕ್ತ. ವೃತ್ತಿಯೋಜನೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/MHnPg_sp6E0

14. ನಾನು ಎರಡು ವರ್ಷದ ಡಿಪ್ಲೊಮಾ (ಕೃಷಿ) ಕೋರ್ಸನ್ನು ರಾಯಚೂರಿನ ಕೃಷಿ ವಿದ್ಯಾಲಯದಲ್ಲಿ ಮಾಡಿದ್ದೇನೆ. ಸರ್ಕಾರಿ/ಖಾಸಗಿ ಕ್ಷೇತ್ರದ ಉದ್ಯೋಗಾವಕಾಶಗಳೇನು? ಈ ಡಿಪ್ಲೊಮಾ ಪಿಯುಸಿಗೆ ತತ್ಸಮಾನವೇ?

ಕೃಷಿ ವಿಶ್ವವಿದ್ಯಾಲಯ, ರಾಯಚೂರು ನೀಡಿರುವ ಮಾಹಿತಿಯಂತೆ ಎರಡು ವರ್ಷದ ಡಿಪ್ಲೊಮಾ ಕೋರ್ಸನ್ನು ಪಿಯುಸಿಗೆ ತತ್ಸಮಾನವೆಂದು ಇದುವರೆಗೂ ಪರಿಗಣಿಸಿಲ್ಲ. ಹಾಗೂ, ಬಿ.ಎಸ್ಸಿ (ಕೃಷಿ) ಕೋರ್ಸಿಗೆ ಪರ್ಯಾಯ ಪ್ರವೇಶದ ಅವಕಾಶವಿಲ್ಲವಾದರೂ, ಈ ಡಿಪ್ಲೊಮಾ ಮಾಡಿರುವ ವಿದ್ಯಾರ್ಥಿಗಳಿಗೆ ಶೇಕಡಾ ೫ ಮೀಸಲಾತಿಯಿದೆ.

ವೃತ್ತಿಯನ್ನು ಅರಸಲು ಸರ್ಕಾರಿ ವಲಯದ ಕೃಷಿ, ತೋಟಗಾರಿಕೆ, ರೈಲ್ವೇಸ್, ಬ್ಯಾಂಕಿAಗ್, ಎಸ್‌ಎಸ್‌ಸಿ, ಪೊಲೀಸ್, ಅಂಚೆ ಇಲಾಖೆ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರಯತ್ನಿಸಿ. ಖಾಸಗಿ ಕ್ಷೇತ್ರದಲ್ಲಿ ನಿಮ್ಮ ಆಸಕ್ತಿ ಮತ್ತು ಕೌಶಲಗಳಿಗೆ ಅನುಗುಣವಾಗಿ, ವೃತ್ತಿಯ ಅವಕಾಶಗಳನ್ನು ಅರಸಬಹುದು.  ಭವಿಷ್ಯದ ದೃಷ್ಟಿಯಿಂದ, ಆನ್‌ಲೈನ್/ದೂರಶಿಕ್ಷಣದ ಮೂಲಕ ಶಿಕ್ಷಣವನ್ನು ಮುಂದುವರೆಸುವುದು ಸೂಕ್ತ.

15. ಸರ್, ಡಿಪ್ಲೊಮಾ (ಪತ್ರಿಕೋದ್ಯಮ) ಮತ್ತು ಬಿ.ಎಸ್‌ಡಬ್ಲ್ಯು ಪದವಿ ಮಾಡಿದರೆ ಮುಂದಿನ ಅವಕಾಶಗಳೇನು?

ಪತ್ರಿಕೋದ್ಯಮ ಡಿಪ್ಲೊಮಾ ನಂತರ, ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ವೃತ್ತಿ ಸಂಬಂಧಿತ ಕೌಶಲಗಳಾದ ಸಂವಹನ (ಓದುವಿಕೆ, ಬರವಣಿಗೆ, ಮಾತುಗಾರಿಕೆ, ನಿರೂಪಣೆ ಇತ್ಯಾದಿ), ಭಾಷಾ ಪರಿಣತಿ, ವಿಶ್ಲೇಷಾತ್ಮಕ ಕೌಶಲ, ದಿಟ್ಟತನ, ಸಮಯದ ನಿರ್ವಹಣೆ ಇತ್ಯಾದಿಗಳನ್ನೂ ಬೆಳೆಸಿಕೊಳ್ಳಬೇಕು. ಯಾವುದೇ ವಿಚಾರವನ್ನು ಒಪ್ಪಿಕೊಳ್ಳುವ ಮುನ್ನ  ತನಿಖೆ ಅಥವಾ ಪರಿಶೋಧನೆ ಮಾಡುವ ಮನಸ್ಥಿತಿ ಇರಬೇಕು. ಹಾಗೂ, ಪ್ರಾಮಾಣಿಕತೆ, ನಿಷ್ಠೆ, ಬದ್ದತೆಯನ್ನು ನಿಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಳ್ಳಬೇಕು. ಅತ್ಯಂತ ವಿಸ್ತಾರವಾದ ಈ ಕ್ಷೇತ್ರದಲ್ಲಿ ಮುದ್ರಣ ಮಾಧ್ಯಮ (ದಿನ ಪತ್ರಿಕೆಗಳು, ನಿಯತಕಾಲಿಕೆಗಳು ಇತ್ಯಾದಿ), ಟೆಲಿವಿಷನ್, ರೇಡಿಯೊ, ಸಾಮಾಜಿಕ ಮಾಧ್ಯಮ, ವೆಬ್‌ಸೈಟ್ಸ್, ಬ್ಲಾಗ್ಸ್, ವಿಡಿಯೊ, ಪಾಡ್‌ಕಾಸ್ಟ್ ಇತ್ಯಾದಿ ವಲಯಗಳಲ್ಲಿದ್ದು, ನಿಮ್ಮ ಆಸಕ್ತಿ, ಅಭಿರುಚಿಯಂತೆ ಆಯ್ಕೆಯನ್ನು ಮಾಡಿಕೊಳ್ಳಬಹುದು.

ಸಂಸ್ಥೆಗಳ ಕಾರ್ಯಾಚರಣೆಯಲ್ಲಿ ಮಾನವ ಸಂಪನ್ಮೂಲದ ನಿರ್ವಹಣೆ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. ಹಾಗಾಗಿ, ಬಿ.ಎಸ್‌ಡಬ್ಲ್ಯು  ಪದವೀಧರರಿಗೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಮಾನವ ಸಂಪನ್ಮೂಲದ ಅಭಿವೃದ್ಧಿ ಮತ್ತು ನಿರ್ವಹಣೆ, ಕಾರ್ಮಿಕ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ, ಸಮುದಾಯದ ಅಭಿವೃದ್ಧಿ ಇತ್ಯಾದಿ ವಲಯಗಳಲ್ಲಿ ವ್ಯಾಪಕವಾದ  ಉದ್ಯೊಗಾವಕಾಶಗಳಿವೆ.

ನೀವು ಪರಿಶೀಲಿಸುತ್ತಿರುವ ಎರಡೂ ಕೋರ್ಸ್ ಆಯ್ಕೆಗಳನ್ನು ಮಾಡಿದರೆ, ಮಾಧ್ಯಮ ಕ್ಷೇತ್ರದ ಮಾನವ ಸಂಪನ್ಮೂಲ ವಿಭಾಗದಲ್ಲಿ ವೃತ್ತಿಯನ್ನು ಅರಸಬಹುದು. ಆದ್ದರಿಂದ, ಯಾವ ವೃತ್ತಿಯನ್ನು ಅನುಸರಿಸಬೇಕು ಎನ್ನುವುದನ್ನು ವೃತ್ತಿ ಯೋಜನೆಯ ಮೂಲಕ ಗುರುತಿಸಿ, ಅದಕ್ಕೆ ಅನುಗುಣವಾಗಿ ಕೋರ್ಸ್ ಆಯ್ಕೆ ಇರಲಿ. ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/MHnPg_sp6E0

16. ನಾನು ಅಂತಿಮ ವರ್ಷದ ಬಿ.ಎ ಮಾಡುತ್ತಿದ್ದು ಮುಂದೆ ನನಗೆ ಪೊಲೀಸ್ ಆಗುವ ಕನಸಿದೆ. ತಯಾರಿ ಮಾಡುವುದು ಹೇಗೆ?

ಪದವಿಯನ್ನು ಪೂರ್ಣಗೊಳಿಸಿದ ನಂತರ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್‌ಐ) ಹುದ್ದೆಗೆ ಅರ್ಹತೆಯಿರುತ್ತದೆ. ಪದವಿಯ ಜೊತೆ ನಾಯಕತ್ವದ ಕೌಶಲ,  ದಿಟ್ಟತನ, ಸಹಭಾಗಿತ್ವದ ಕೌಶಲ, ಉತ್ತಮ ಸಂವಹನ, ಪರಿಶೋಧನಾ ಕೌಶಲ, ಸಮಸ್ಯೆಗಳನ್ನು ಪರಿಹರಿಸುವ ಕೌಶಲಗಳ ಜೊತೆ ಸಕಾರಾತ್ಮಕ ಧೋರಣೆಯಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಪಿಎಸ್‌ಐ ನೇಮಕಾತಿಯಲ್ಲಿ ಭಾಗವಹಿಸಿ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಲು ಯೋಜನಾ ಶಕ್ತಿ, ಏಕಾಗ್ರತೆ, ಪರಿಶ್ರಮ, ಸಮಯದ ನಿರ್ವಹಣೆ ಮತ್ತು ನಿರಂತರ ಅಭ್ಯಾಸವಿರಬೇಕು. ನಿಮ್ಮ ಸಾಮರ್ಥ್ಯ, ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.

ಕರ್ನಾಟಕ ಪೊಲೀಸ್ ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳ ವಿವರ ಮತ್ತು ವಿಷಯಸೂಚಿಗೆ ಗಮನಿಸಿ: https://prepp.in/karnataka-police-exam