Q & A for Students – July 2021

Q&A for 5th July, 2021

Q1. ನಾನು ಅಂತಿಮ ವರ್ಷದ ಸಿವಿಲ್ ಎಂಜಿನಿಯರಿಂಗ್ ಮಾಡುತ್ತಿದ್ದೇನೆ. ನಾನು ಜರ್ಮನಿಯ ವಿಶ್ವವಿದ್ಯಾಲಯದಲ್ಲಿ  ಎಂಎಸ್ ಸಿವಿಲ್ ಎಂಜಿನಿಯರಿಂಗ್ ಮಾಡಲು ಯೋಜಿಸಿದ್ದೇನೆ. ಪ್ರವೇಶ ನಿಯಮಾವಳಿಗಳಲ್ಲದೆ, ಹಿಂದುಳಿದ ಜಾತಿಗೆ ಲಭ್ಯವಿರುವ ಸ್ಕಾಲರ್‍ಶಿಪ್ ಬಗ್ಗೆ ತಿಳಿಸಿ.

ಸಾಮಾನ್ಯವಾಗಿ ಜರ್ಮನಿಯ ಸ್ನಾತಕೋತ್ತರ ಸಿವಿಲ್ ಎಂಜಿನಿಯರಿಂಗ್ ಕೋರ್ಸ್‍ಗಳಲ್ಲಿ ನಾಲ್ಕು ಸೆಮಿಸ್ಟರ್‍ಗಳಿರುತ್ತವೆ. ಆನ್‍ಲೈನ್ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅರ್ಹತೆಯ ಆಧಾರದ ಮೇಲೆ ಮುಂದಿನ ಪ್ರಕ್ರಿಯೆ ಅಂದರೆ ಸಂದರ್ಶನ, ಆಟ್ಟಿಟ್ಯೂಡ್ ಟೆಸ್ಟ್ ಮಾಡಲಾಗುತ್ತದೆ. ಇಂಗ್ಲೀಷ್ ಭಾಷಾ ಪರಿಣತಿಗೆ ಐಇಎಲ್‍ಟಿಎಸ್‍ನಂತಹ ಪರೀಕ್ಷೆಯಲ್ಲಿ ಪಾಸಾಗಿರಬೇಕು.

ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅರ್ಹತೆ ಮತ್ತು ಆದಾಯವನ್ನು ಪರಿಗಣಿಸಿ ಸ್ಕಾಲರ್‍ಶಿಪ್ ಸೌಲಭಗಳು ಲಭ್ಯವಿರುತ್ತದೆ. ಜೊತೆಗೆ ಸಹಾಯಧನ, ಅರೆಕಾಲಿಕ ನೌಕರಿಗಳಂತಹ ಸೌಲಭ್ಯಗಳೂ ಇವೆ. ಅನೇಕ ಖಾಸಗೀ ಸಂಸ್ಥೆಗಳೂ ವಿದ್ಯಾರ್ಥಿಗಳಿಗೆ ನೆರವಾಗುವ ಕಾರ್ಯದಲ್ಲಿ ವಿಶ್ವವಿದ್ಯಾಲಯಗಳ ಜೊತೆ ಕೈಗೂಡಿಸಿವೆ. ಹೆಚ್ಚಿನ ವಿವರಗಳಿಗಾಗಿ ನೀವು ಸೇರ ಬಯಸುವ ವಿಶ್ವವಿದ್ಯಾಲಯದ ವೆಬ್‍ಸೈಟನ್ನು ಪರಿಶೀಲಿಸಿ.

ಇದಲ್ಲದೆ, ಕೇಂದ್ರ ಸರ್ಕಾರದ ನ್ಯಾಷನಲ್ ಓವರ್‍ಸೀಸ್ ಸ್ಕಾಲರ್‍ಶಿಪ್ ಸ್ಕೀಮ್ ಅಡಿಯಲ್ಲಿಯೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ಸೌಲಭ್ಯವಿದೆ. ಹೆಚ್ಚಿನ ವಿವರಗಳಿಗಾಗಿ ಕೇಂದ್ರ ಸರ್ಕಾರದ ಸೋಷಿಯಲ್ ಜಸ್ಟೀಸ್ ಅಂಡ್ ಎಂಪವರ್‍ಮೆಂಟ್ ಇಲಾಖೆಯ ವೆಬ್‍ಸೈಟನ್ನು ಪರಿಶೀಲಿಸಿ.

Q2. ಬಿಟೆಕ್ [ಎಐ ಮತ್ತು ಮೆಷೀನ್ ಲರ್ನಿಂಗ್] ಮತ್ತು ಬಿಟೆಕ್ [ಡೇಟ ಸೈನ್ಸ್] ಕೋರ್ಸ್‍ಗಳ ಬಗ್ಗೆ ಮಾಹಿತಿಯನ್ನು ತಿಳಿಸಿ.

ಇತ್ತೀಚಿನ ವರ್ಷಗಳಲ್ಲಿ ಎಐ, ಮೆಷೀನ್ ಲರ್ನಿಂಗ್, ಡೇಟ ಸೈನ್ಸ್ ತಂತ್ರಜ್ಞಾನಗಳ ಬಳಕೆ ಉದ್ಯಮಗಳಲ್ಲಿ ಹೆಚ್ಚಾಗಿವೆ. ಏಕೆಂದರೆ, ಗ್ರಾಹಕರ ಅನುಭವವನ್ನು ಬದಲಾಯಿಸಿ ಅಥವಾ ಹೆಚ್ಚಿಸಿ, ಉದ್ಯಮಗಳು ತಮ್ಮ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಲು ಈ ತಂತ್ರಜ್ಞಾನಗಳು ನೆರವಾಗುತ್ತವೆ. ವಿಶೇಷವಾಗಿ, ಈಗ ಕ್ಷಿಪ್ರವಾಗಿ ಅಭಿವೃದ್ಧಿಯಾಗುತ್ತಿರುವ ಬ್ಯಾಂಕಿಂಗ್, ಫೈನಾಂನ್ಸ್, ಇನ್ಶೂರೆನ್ಸ್, ಇ-ಕಾಮರ್ಸ್, ಆರೋಗ್ಯ, ಮನರಂಜನೆ, ರೀಟೇಲ್, ಒಟಿಟಿ ಕ್ಷೇತ್ರಗಳಲ್ಲಿ ಇದರ ಬಳಕೆ ಮತ್ತು ವ್ಯಾಪ್ತಿ ಹೆಚ್ಚುತ್ತಿದೆ. ಹಾಗಾಗಿ ಈ ವಿಷಯಗಳಿಗೆ ಸಂಬಂಧಿತ ಕೋರ್ಸ್‍ಗಳ ಪದವೀಧರರಿಗೆ ಸ್ವಾಭಾವಿಕವಾಗಿಯೇ ಬೇಡಿಕೆ ಹೆಚ್ಚಾಗಿದೆ. ಈ ಕ್ಷೇತ್ರದಲ್ಲಿನ ಉದ್ಯೋಗಿಗಳು ತಮ್ಮ ವೃತ್ತಿ ಸಂಬಂಧಿತ ಜ್ಞಾನ ಮತ್ತು ಕೌಶಲ್ಯಗಳನ್ನು ಆಗಾಗ್ಗೆ ಪರಿಷ್ಕರಿಸುತ್ತಿರಬೇಕು.

Q3. ನಾನು ಬಿಎಸ್‍ಸಿ [ಸಿಬಿಝೆಡ್] ಆದ ಮೇಲೆ  ಎಂಎ ಮಾಡಬಹುದೆ?

ಸಾಮಾನ್ಯವಾಗಿ ಪದವಿಯಲ್ಲಿ ಓದಿರುವ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‍ಗಳನ್ನು ಮಾಡಬಹುದು. ಹಾಗಾಗಿ ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ನಿಯಮಾವಳಿಗಳಿವೆ.  ಆದರೂ, ಬಿಎಸ್‍ಸಿ [ಸಿಬಿಝೆಡ್] ಆದ ಮೇಲೆ ಕೆಲವು ನಿಯಮಿತ ವಿಷಯಗಳಲ್ಲಿ ಮಾತ್ರ ಎಂಎ ಮಾಡುವ ಅವಕಾಶಗಳಿವೆ. ಉದಾಹರಣೆಗೆ, ಮೈಸೂರು ವಿಶ್ವವಿದ್ಯಾಲಯದಲ್ಲಿ ಅನೇಕ ವಿಷಯಗಳಲ್ಲಿ ನೀವು ಎಂಎ ಮಾಡುವ ಸಾಧ್ಯತೆಯಿದೆ.

ಈಗ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ [2020] ಯಂತೆ ಸ್ನಾತಕೋತ್ತರ ಮತ್ತು ಪಿಎಚ್‍ಡಿ ಪದವಿಗಳ ಉದ್ದೇಶ, ನಿಯಮ ಮತ್ತು ಪ್ರವೇಶ ಪ್ರಕ್ರಿಯೆಯಲ್ಲ್ಲಿ ತೀವ್ರವಾದ ಬದಲಾವಣೆಗಳಿವೆ. ಆದರೆ, ಅನುಷ್ಠಾನದ  ಪ್ರಕ್ರಿಯೆ ಈಗಷ್ಟೇ ಶುರುವಾಗುತ್ತಿದೆ. ಹಾಗಾಗಿ, ಯಾವ ವಿಷಯದಲ್ಲಿ ನೀವು ಎಂಎ ಮಾಡಬೇಕೆಂದು ನಿರ್ಧರಿಸಿ, ನಿಖರವಾದ ಮಾಹಿತಿಗಾಗಿ ನೀವು ಇಚ್ಛಿಸಿರುವ ವಿಶ್ವವಿದ್ಯಾಲಯದಲ್ಲಿ ವಿಚಾರಿಸಿ.

Q&A for 12th July, 2021

ಎಂಬಿಎ ಕೋರ್ಸ್ ಮಾಹಿತಿ, ಪ್ರವೇಶ ಹೇಗೆ?

Q1. ನಾನು ಸ್ನಾತಕೋತ್ತರ ಎಂಜಿನಿಯರಿಂಗ್ ಪದವಿಯನ್ನು ಮುಗಿಸಿದ್ದೇನೆ. ಎಂಬಿಎ ಕೋರ್ಸ್‍ನ ಮಾಹಿತಿ, ಪ್ರವೇಶ ಮತ್ತು ಸ್ಕಾಲರ್‍ಶಿಪ್ ಬಗ್ಗೆ ತಿಳಿಸಿ.

ಉದ್ಯಮಗಳ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದೇ ಮ್ಯಾನೇಜ್‍ಮೆಂಟ್‍ನ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು, ಸಮಗ್ರವಾದ ಜ್ಞಾನ ಮತ್ತು ಕೌಶಲಗಳನ್ನು ಎಂಬಿಎ ಕೋರ್ಸಿನಲ್ಲಿ ನೀಡಲಾಗುತ್ತದೆ. ಇದಲ್ಲದೆ, ಉದ್ಯಮಗಳಲ್ಲಿ ಪ್ರಾಯೋಗಿಕವಾದ ತರಬೇತಿಯನ್ನು ಪ್ರಾಜೆಕ್ಟ್‍ಗಳ ಮುಖಾಂತರ ನೀಡುವುದರಿಂದ ಕಲಿಕೆ ಪರಿಪೂರ್ಣವಾಗುತ್ತದೆ. ನಿಮ್ಮ ನೈಪುಣ್ಯತೆ ಮತ್ತು ಚತುರತೆ ವರ್ಧಿಸಿ, ಯಾವುದೇ ಕೆಲಸವನ್ನು ನಿಭಾಯಿಸುವ ಆತ್ಮವಿಶ್ವಾಸ ಬೆಳೆಯುತ್ತದೆ. ಒಟ್ಟಾರೆ, ಎಂಬಿಎ ಕಲಿಕೆಯ ವೈವಿಧ್ಯತೆಗಳಿಂದ ನಿಮ್ಮ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಆದ್ದರಿಂದಲೇ, ಎಂಬಿಎ ಕೋರ್ಸ್ ಜನಪ್ರಿಯ. ನಮ್ಮ ದೇಶದಲ್ಲಿ ಸುಮಾರು 5000ಕ್ಕೂ ಹೆಚ್ಚಿನ ಎಂಬಿಎ ಕಾಲೇಜುಗಳಿದ್ದು, ಸಿಎಟಿ, ಪಿಜಿಸಿಯಿಟಿ ಗಳಂತಹ ಪರೀಕ್ಷೆಗಳ ಮೂಲಕ ಪ್ರವೇಶದ ಆಯ್ಕೆಯಾಗುತ್ತದೆ. ಅರ್ಹತೆ, ಆದಾಯಗಳ ಆಧಾರದ ಮೇಲೆ ಅನೇಕ ಸ್ಕಾಲರ್‍ಶಿಪ್ ಯೋಜನೆಗಳಿವೆ. ನೀವು ಈಗಾಗಲೇ ಸ್ನಾತಕೋತ್ತರ ಪದವಿಯನ್ನು ಗಳಿಸಿರುವುದರಿಂದ, ಕೆಲಸಕ್ಕೆ ಸೇರಿ ವಾರಾಂತ್ಯದ ಎಗ್ಸಿಕ್ಯೂಟಿವ್ ಎಂಬಿಎ ಕೋರ್ಸ್‍ನ್ನು ಮಾಡುವ ಅವಕಾಶವೂ ನಿಮಗಿದೆ.

Q2. ನನ್ನ ತಂಗಿ ದ್ವಿತೀಯ ಪಿಯುಸಿ (ಆಟ್ರ್ಸ್) ಕನ್ನಡ ಮಾಧ್ಯಮದಲ್ಲಿ ಪೂರ್ಣಗೊಳಿಸಿದ್ದು, ಮುಂದೆ ಯಾವ ಕೋರ್ಸ್ ಆಯ್ದುಕೊಳ್ಳಬಹುದು? ಏನು ಭವಿಷ್ಯವಿದೆ? ಉತ್ತಮ ಉದ್ಯೋಗವಕಾಶಗಳ ಬಗ್ಗೆ ಸಲಹೆ ನೀಡಿ.

ನಿಮ್ಮ ಆದ್ಯತೆಯಂತೆ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಮುಂದುವರೆಸಬಹುದು ಅಥವಾ ಇಂಗ್ಲೀಷ್ ಮಾಧ್ಯಮಕ್ಕೆ ಬದಲಾಯಿಸಿಕೊಳ್ಳಬಹುದು. ಕನ್ನಡ ಭಾಷೆಯನ್ನು ಕಲಿಯುವ ಆಸಕ್ತಿಯಿದ್ದರೆ ಬಿಎ ಮಾಡಿ ಎಂಎ ಮಾಡಬಹುದು. ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯಿರುವ ವಿಷಯಗಳಲ್ಲಿ ಶಿಕ್ಷಣ ಮುಂದುವರೆಸುವುದು ಉತ್ತಮ. ಹಾಗೂ, ಶಿಕ್ಷಣದ ನಂತರದ ಬದುಕಿನ ಕನಸುಗಳೇನು ಎನ್ನುವುದರ ಬಗ್ಗೆ ಸ್ಪಷ್ಟತೆಯಿರಬೇಕು. ಆ ಕನಸುಗಳನ್ನು ನನಸಾಗಿಸಲು ಸೂಕ್ತವಾದ ವೃತ್ತಿಯ ಬಗ್ಗೆ ಮೊದಲೇ ನಿಶ್ಚಯಿಸಬೇಕು. ಏಕೆಂದರೆ, ಯಶಸ್ಸಿನ ಹಾದಿಯಲ್ಲಿ ವೈಯಕ್ತಿಕ ಬದುಕಿನ ಕನಸುಗಳೇ ಪ್ರೇರಣೆ.

ಶಿಕ್ಷಣದ ನಂತರ, ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಸೇರಿದಂತೆ ಮಾಧ್ಯಮಗಳು, ಪ್ರಕಾಶನ ಸಂಸ್ಥೆಗಳು, ಚಿತ್ರೋಧ್ಯಮ, ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಇ-ಕಾಮರ್ಸ್, ಕೋಚಿಂಗ್ ತರಗತಿಗಳು, ಶಿಕ್ಷಣ ಸೇರಿದಂತೆ ಅನೇಕ ವಲಯಗಳಲ್ಲಿ ವೃತ್ತಿಯ ಅವಕಾಶಗಳಿವೆ.

Q3. ನನ್ನ ತಂಗಿಯ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮುಗಿದಿದೆ. ಸಿವಿಲ್ ಎಂಜಿನಿಯರಿಂಗ್ ಮಾಡಬೇಕು ಅನ್ನುವುದು ಅವಳ ಆಸೆ. ಅವಳ ಮುಂದಿನ ಮಾರ್ಗ ತಿಳಿಸಿ.

ಸಿವಿಲ್ ಎಂಜಿನಿಯರಿಂಗ್ ಕಾಲೇಜುಗಳ ಸಂಪನ್ಮೂಲಗಳು, ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಾಪಕ ವರ್ಗ, ಪ್ಲೇಸ್‍ಮೆಂಟ್ ಮಾಹಿತಿ, ಗ್ರಂಥಾಲಯ, ಶುಲ್ಕಗಳು ಇತ್ಯಾದಿಗಳ ಕುರಿತು ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸಿ, ವಿಶ್ಲೇಷಿಸಿ. ಪದವಿಯನ್ನು ಯಾವ ಕಾಲೇಜಿನಲ್ಲಿ ಮಾಡಬೇಕೆನ್ನುವುದರ ಆದ್ಯತೆಯ ಅನುಗುಣವಾಗಿ ಪ್ರವೇಶ ಪರೀಕ್ಷೆಗಳಿಗೆ ತಯಾರಾಗುವುದೇ ಮುಂದಿನ ಹಂತ. ಉದಾಹರಣೆಗೆ ಸಿಇಟಿ, ಜೆಇಇ ಇತ್ಯಾದಿ.

ಸಿವಿಲ್ ಎಂಜಿನಿಯರಿಂಗ್ ವಲಯದಲ್ಲಿ ಅನೇಕ ವೃತ್ತಿಗಳ ಅವಕಾಶಗಳಿವೆ. ಹಾಗಾಗಿ, ವೃತ್ತಿಯ ಆಯ್ಕೆ ಮತ್ತು ವೃತ್ತಿ ಜೀವನದ ಧ್ಯೇಯಗಳನ್ನು ನಿಶ್ಚಯಿಸಿ. ಈ ಆದ್ಯತೆಗಳಂತೆ, ಯಾವ ಹಂತದವರೆಗೆ ಓದಬೇಕು ಎನ್ನುವುದನ್ನು ಈಗಲೇ ನಿರ್ಧರಿಸುವುದು ಒಳ್ಳೆಯದು. ಶುಭಹಾರೈಕೆಗಳು.

Q4. ನಾನು ಬಿಎಸ್‍ಸಿ [ಪಿಸಿಎಂ] ಮಾಡಿದ್ದು, ಎಂಎಸ್‍ಸಿ [ಫಿಸಿಕ್ಸ್] ನಂತರದ ಅವಕಾಶಗಳ ಬಗ್ಗೆ ತಿಳಿಸಿ.

ಎಂಎಸ್‍ಸಿ [ಫಿಸಿಕ್ಸ್] ಕೋರ್ಸನ್ನು ನ್ಯೂಕ್ಲಿಯರ್ ಫಿಸಿಕ್ಸ್, ಬಯೋ ಫಿಸಿಕ್ಸ್, ಥರ್ಮೋಡೈನಾಮಿಕ್ಸ್, ಕ್ವಾಂಟಮ್ ಮೆಕಾನಿಕ್ಸ್ ಸೇರಿದಂತೆ ಅನೇಕ ವಿಷಯಗಳಲ್ಲಿ ಮಾಡಬಹುದು. ಎಂಎಸ್‍ಸಿ ನಂತರ  ಡಿಫೆನ್ಸ್, ಸ್ಪೇಸ್, ಏರೋಸ್ಪೇಸ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಐಟಿ, ರಿಸರ್ಚ್ ಹೀಗೆ ಅನೇಕ  ವಲಯಗಳ ಸಂಸ್ಥೆಗಳಲ್ಲಿ ವೃತ್ತಿಯ ಅವಕಾಶಗಳಿರುತ್ತವೆ. ಸರ್ಕಾರಿ ವಲಯದ ಅನೇಕ ಇಲಾಖೆಗಳಲ್ಲಿಯೂ ಅವಕಾಶಗಳಿವೆ. ಇದಲ್ಲದೆ, ಡಾಕ್ಟರೇಟ್ ಮಾಡಿ ಅಥವಾ ಎಂಎಸ್‍ಸಿ  ನಂತರವೂ ಶಿಕ್ಷಕ ವೃತ್ತಿಯನ್ನು ಆರಿಸಿಕೊಳ್ಳಬಹುದು.

Q&A for 19th July, 2021

Q1. ನಾನು ಬಿಬಿಎ ಪದವಿ ಓದುತ್ತಿದ್ದೇನೆ. ಚಾರ್ಟರ್ಡ್ ಅಕೌಂಟೆಂಟ್ ಆಗುವ ಇಚ್ಛೆ ಇದೆ. ಈ ವೃತ್ತಿ ಬಗ್ಗೆ ಮಾಹಿತಿ ನೀಡಿ. – ಹೆಸರು

ಬಿಬಿಎ ಪರೀಕ್ಷೆಯಲ್ಲಿ ಶೇಕಡ 60 ಅಂಕಗಳನ್ನು [ಬಿಕಾಂ/ಎಂಕಾಂ ಆಗಿದ್ದರೆ ಶೇಕಡ 55] ಗಳಿಸಿದಲ್ಲಿ ಇಂಟರ್‌ಮೀಡಿಯೆಟ್ ಕೋರ್ಸಿಗೆ ನೇರವಾಗಿ ನೋಂದಾಯಿಸಿಕೊಳ್ಳಬಹುದು. ಜೊತೆಗೆ 3 ವರ್ಷದ ಆರ್ಟಿಕಲ್ ಟ್ರೈನಿಂಗ್‍ಗೆ  ಸೇರಬೇಕು. ಇಂಟರ್‌ಮೀಡಿಯೆಟ್ ಪಾಸಾದ ನಂತರ ಫೈನಲ್‍ಗೆ ನೋಂದಾಯಿಸಿ, ಪರೀಕ್ಷೆಯಲ್ಲಿ ಪಾಸಾಗಬೇಕು. ಫೈನಲ್ ಪರೀಕ್ಷೆಗೆ ಮುಂಚೆ ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಒಟ್ಟಾರೆ, ಸಿಎ ಕೋರ್ಸ್ ಮಾಡಲು ಕನಿಷ್ಟ 3-4 ವರ್ಷ ಬೇಕಾಗುತ್ತದೆ.

ಈ ವೃತ್ತಿಯಲ್ಲಿ ಯಶಸ್ವಿಯಾಗಲು ನಿಷ್ಠೆ, ಪ್ರಾಮಾಣಿಕತೆಯ ಜೊತೆಗೆ ಸಂಖ್ಯಾ ಕೌಶಲ, ವಿಶ್ಲೇಷಾತ್ಮಕ ಕೌಶಲ, ಆರ್ಥಿಕ ನಿರ್ವಹಣೆ ಮತ್ತು ವ್ಯಾಪಾರೋದ್ಯಮ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.

ಚಾರ್ಟರ್ಡ್ ಅಕೌಂಟೆಂಟ್‍ಗಳಿಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ. ಹಲವು ವರ್ಷಗಳ ಅನುಭವದ ನಂತರ ಸ್ವತಂತ್ರವಾಗಿ ಪ್ರಾಕ್ಟೀಸ್ ಮಾಡಬಹುದು.   ಹೆಚ್ಚಿನ ವಿವರಗಳಿಗೆ ಪರಿಶೀಲಿಸಿ: https://icai.org/

Q2. ನನಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್‍ನಲ್ಲಿ ಆಸಕ್ತಿಯಿದೆ. ಆದ್ದರಿಂದ ಯಾವ ಕೋರ್ಸ್ ಮಾಡುವುದು ಒಳ್ಳೆಯದು?

ಕುಶಾಲ ಕಂಬಾರ, ಮುತಗಾ, ಬೆಳಗಾವಿ

ಕಂಪ್ಯೂಟರ್ ಪ್ರೋಗ್ರಾಮಿಂಗ್ ಕ್ಷೇತ್ರದಲ್ಲಿ ಪ್ರಮುಖವಾದ ವಲಯಗಳೆಂದರೆ ವೆಬ್ ಡೆವಲಪ್‍ಮೆಂಟ್ [ಫ್ರಂಟ್‍ಎಂಡ್ ಮತ್ತು ಬ್ಯಾಕ್‍ಎಂಡ್], ಮೊಬೈಲ್ ಡೆವಲಪ್‍ಮೆಂಟ್, ಡೇಟಾಬೇಸ್ ಮ್ಯಾನೇಜ್‍ಮೆಂಟ್,  ಗೇಮ್ ಡೆವಲಪ್‍ಮೆಂಟ್, ಸಿಸ್ಟಮ್ಸ್ ಡೆವಲಪ್‍ಮೆಂಟ್, ಡೆಸ್ಕ್‌ಟಾಪ್ ಅಪ್ಲಿಕೇಷನ್ಸ್ ಇತ್ಯಾದಿ. ಹಾಗಾಗಿ, ನಿಮಗೆ ಯಾವ ವಲಯದಲ್ಲಿ  ಆಸಕ್ತಿಯಿದೆ ಎಂದು ಗುರುತಿಸಿ, ಆ ವಲಯಕ್ಕೆ ಬೇಕಾದ ಪ್ರೋಗ್ರಾಮಿಂಗ್ ಕಲಿಯಬೇಕು. ಉದಾಹರಣೆಗೆ ಜಾವಾ, ಜಾವಾ ಸ್ಕ್ರಿಪ್ಟ್, ಸಿ, ಸಿ++, ಎಚ್‍ಟಿಎಮ್‍ಎಲ್, ಪೈಥಾನ್, ಸ್ವಿಫ್ಟ್, ಯೂನಿಟಿ, ಗೋ, ರಸ್ಟ್ ಇತ್ಯಾದಿ. ನಿಮಗಿರುವ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ವೃತ್ತಿಯ ಆಯ್ಕೆಗೆ ಅನುಗುಣವಾಗಿ ಯಾವ ಕೋರ್ಸ್ ಮಾಡಬೇಕು ಎನ್ನುವುದನ್ನು ನಿರ್ಧರಿಸಬಹುದು.

Q3. ನಾನು ದ್ವಿತೀಯ ಪಿಯುಸಿ ಸೈನ್ಸ್ [ಪಿಸಿಎಂಇ] ಮಾಡಿದ್ದೇನೆ. ಯಾವ ಎಂಜಿನಿಯರಿಂಗ್ ಕೋರ್ಸ್ ಮಾಡಬಹುದು. ಬಿಬಿಎ ಮಾಡುವುದಾದರೆ ಯಾವ ವಿಷಯದಲ್ಲಿ ಮಾಡಬಹುದು.

ರಾಕೇಶ್.

ನೀವು ದ್ವಿತೀಯ ಪಿಯುಸಿಯಲ್ಲಿ ಆಯ್ಕೆ ಮಾಡಿರುವ ವಿಷಯಗಳಲ್ಲಿ ಆಸಕ್ತಿಯಿದ್ದಲ್ಲಿ ಎಂಜಿನಿಯರಿಂಗ್ ಕೋರ್ಸನ್ನು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ಸ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗಗಳಲ್ಲಿ ಮಾಡಬಹುದು.

ಬಿಬಿಎ ಕೋರ್ಸನ್ನು ಮಾರ್ಕೆಟಿಂಗ್, ಫೈನಾನ್ಸ್, ಬ್ಯಾಂಕಿಂಗ್, ಐಟಿ, ಎಚ್‍ಆರ್ ಸೇರಿದಂತೆ ಅನೇಕ ವಿಭಾಗಗಳಿವೆ.

ಕೋರ್ಸ್ ನಿರ್ಧಾರಕ್ಕೆ ಮುಂಚೆ ನಿಮ್ಮ ವೃತ್ತಿ ಜೀವನದ ಬಗ್ಗೆ ಚಿಂತಿಸಿ, ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯಿರುವ ವೃತ್ತಿಯನ್ನು ಆರಿಸುವುದು ಒಳ್ಳೆಯದು. ವೃತ್ತಿಯ ಆಯ್ಕೆಯಂತೆ ಕೋರ್ಸ್ ಆಯ್ಕೆ ಮಾಡುವುದು ಸುಲಭ.

Q4. ಎಂಡಿ [ಪಿಡಿಯಾಟ್ರಿಕ್ಸ್] ಮಾಡಿದ ಮೇಲೆ ವೃತ್ತಿಯ ಅವಕಾಶಗಳ ಬಗ್ಗೆ ತಿಳಿಸಿ. – ಹೆಸರು

ಎಂಡಿ [ಪಿಡಿಯಾಟ್ರಿಕ್ಸ್] ಬೇಡಿಕೆಯಲ್ಲಿರುವ ಕ್ಷೇತ್ರ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಮ್ಸ್, ಫಾರ್ಮಾ ಮತ್ತು ರಿಸರ್ಚ್ ಕಂಪನಿಗಳು, ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳು, ಮತ್ತು ಅನೇಕ ಸರ್ಕಾರಿ ಇಲಾಖೆಗಳಲ್ಲಿ ವೃತ್ತಿಯ ಅವಕಾಶಗಳಿವೆ.

Q&A for 26th July, 2021

Q1. ನಾನು ಎಂಕಾಂ (ಫೈನಾನ್ಸ್ ಮತ್ತು ಅಕೌಂಟಿಂಗ್) ಫೈನಲ್ ಓದುತ್ತಿದ್ದೇನೆ.  ಫೈನಾನ್ಸ್ ವಲಯದಲ್ಲಿ ವೃತ್ತಿಜೀವನವನ್ನು ದೃಢವಾಗಿ ರೂಪಿಸಿಕೊಳ್ಳಲು ಯಾವ ಸರ್ಟಿಫಿಕೇಷನ್ ಕೋರ್ಸ್ ಮಾಡಬೇಕು. ಬ್ಯುಸಿನೆಸ್ ಅನಲಿಟಿಕ್ಸ್ ಮತ್ತು ದೇಟ ಸೈನ್ಸ್ ಮಾಡಬಹುದು ಎಂಬ ಸಲಹೆಗಳಿವೆ. ನಿಮ್ಮ ಸಲಹೆ ಬೇಕು. – ಸುಷ್ಮಿತ, ಬೆಂಗಳೂರು.

ಫೈನಾನ್ಸ್ ವಿಸ್ತಾರವಾದ ಕ್ಷೇತ್ರ. ಅಕೌಂಟಿಂಗ್, ಬ್ಯಾಂಕಿಂಗ್, ಇನ್ಶೂರೆನ್ಸ್, ಇನ್ವೆಸ್ಟ್‍ಮೆಂಟ್, ಕಾರ್ಪೊರೇಟ್ ಫೈನಾನ್ಸ್, ರಿಸರ್ಚ್, ರಿಸ್ಕ್ ಮ್ಯಾನೇಜ್‍ಮೆಂಟ್ ಸೇರಿದಂತೆ ಅನೇಕ ವಿಭಾಗಗಳಿವೆ. ನಿಮಗೆ ಯಾವ ವಿಭಾಗದಲ್ಲಿ ಆಸಕ್ತಿಯಿದೆ ಎನ್ನುವುದು ಮುಖ್ಯ. ಈ ಎಲ್ಲಾ ವಲಯಗಳಲ್ಲೂ ಬ್ಯುಸಿನೆಸ್ ಅನಲಿಟಿಕ್ಸ್ ಮತ್ತು ಡೇಟ ಸೈನ್ಸ್ ಕೋರ್ಸ್‍ಗಳು ಸಹಾಯವಾಗುತ್ತದೆ.

Q2. ನಾನು ಮದುವೆಯಾಗಲಿರುವ ಹುಡುಗಿಯು ಆಂದ್ರಪ್ರದೇಶದಲ್ಲಿ ಪಿಯುಸಿ ಮುಗಿಸಿದ್ದು ನಾನಿರುವ ಕರ್ನಾಟಕದಲ್ಲಿ ಮದುವೆಯಾದ ಬಳಿಕ ಟೀಚರ್ಸ್ ಟ್ರೈನಿಂಗ್ ಮಾಡುವ ಇಚ್ಛೆ ಹೊಂದಿದ್ದಾಳೆ. ಅನ್ಯ ರಾಜ್ಯದ ವಿದ್ಯಾರ್ಥಿಗಳು ನಮ್ಮಲ್ಲಿ ಓದುವುದರ ಬಗ್ಗೆ ಹಾಗೂ ನಂತರ ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸಬಹುದೇ? ದಯವಿಟ್ಟು ತಿಳಿಸಿ. – ಅರುಣ್, ಭದ್ರಾವತಿ.

ಕರ್ನಾಟಕದಲ್ಲಿ ಡಿಎಡ್/ಬಿಎಡ್ ಕೋರ್ಸ್ ಮಾಡಿ,  ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಯಲ್ಲಿ ಉತ್ತೀರ್ಣರಾದ ನಂತರ, ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ ಗಮನಿಸಿ: http://www.schooleducation.kar.nic.in/

Q3. ನನ್ನ ಮಗ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‍ಮೆಂಟ್ ಮಾಡಲು ಇಚ್ಛಿಸಿದ್ದಾನೆ. ಈ ಕೋರ್ಸ್ ಮಾಡಿದ ನಂತರ ಸರ್ಕಾರಿ ಕೆಲಸ ಮಾಡಬಹುದಾ? – ಹೆಸರು

ಯಾವುದೇ ಕೋರ್ಸ್ ನಿರ್ಧಾರಕ್ಕೆ ಮುಂಚೆ ವೃತ್ತಿ ಜೀವನದ ಬಗ್ಗೆ ಚಿಂತಿಸಿ, ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯಿರುವ ವೃತ್ತಿಯನ್ನು ಆರಿಸುವುದು ಒಳ್ಳೆಯದು. ವೃತ್ತಿಯ ಆಯ್ಕೆಯಂತೆ ಕೋರ್ಸ್/ಸ್ಟ್ರೀಮ್ ಆಯ್ಕೆ ಮಾಡುವುದು ಸುಲಭ. ಹಾಗಾಗಿ, ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‍ಮೆಂಟ್ ಕೋರ್ಸ್ ಮಾಡುವ ಹಿಂದಿರುವ ಆಲೋಚನೆ, ಕಾರಣಗಳನ್ನು ವಿಮರ್ಶಿಸಿ. ಹಾಗೂ, ಸೇರಬಯಸುವ ಕಾಲೇಜಿನಲ್ಲಿ ಈ ವಿಭಾಗದ ಪ್ಲೇಸ್‍ಮೆಂಟ್ ಮಾಹಿತಿಯನ್ನೂ ಪರಿಗಣಿಸಿ. ಸರ್ಕಾರಿ ಕ್ಷೇತ್ರದಲ್ಲಿಯೂ ವೃತ್ತಿಯ ಅವಕಾಶಗಳಿರುತ್ತದೆ. 

Q4. ಬಿಎಸ್‍ಸಿ, ಬಿಎಡ್ ಮುಗಿಸಿರುವ ನನಗೆ ಕೆಎಎಸ್ ಅಧಿಕಾರಿಯಾಗುವ ಇಚ್ಛೆಯಿದೆ. ಕೋಚಿಂಗ್ ಕ್ಲಾಸಿಗೆ ಹೋಗಬೇಕಾ ಅಥವಾ ಮನೆಯಲ್ಲಿ ಓದಿದರೆ ಸಾಕೇ? ಕೆಎಎಸ್ ಬಗ್ಗೆ ಮಾಹಿತಿ ನೀಡಿ. – ಅನಿತಾ ಖಟಾವಕರ, ಗೋಕಾಕ.

Q5. ನಾನು ಪದವಿ ಕೋರ್ಸ್ ಮಾಡುತ್ತಿದ್ದೇನೆ ಮತ್ತು ಐಎಎಸ್ ಪರೀಕ್ಷೆಯನ್ನು ಬರೆಯುವ ಗುರಿ ಇದೆ. ಮಾಹಿತಿ ನೀಡಿ. – ರಕ್ಷಿತ

Q6. ನಾನು ಪಿಯುಸಿ ಸೈನ್ಸ್ ಮಾಡಿದ್ದೇನೆ ಮತ್ತು ಐಎಎಸ್ ಮಾಡಲು ಇಚ್ಛಿಸಿದ್ದೇನೆ. ಮುಂದೆ ಎಂಜಿನಿಯರಿಂಗ್ ಕೋರ್ಸ್ ಮಾಡಬಹುದಾ? – ಹೆಸರು

ಕೆಎಎಸ್ ಮತ್ತು ಐಎಎಸ್ ಪರೀಕ್ಷೆಗಳಲ್ಲಿ ಸಾಮ್ಯತೆಯಿದೆ. ಈ ಎರಡೂ ಪರೀಕ್ಷೆಗಳನ್ನು ಯಾವುದೇ  ಪದವಿಯ ನಂತರ ಮಾಡಬಹುದು. ಈ ಪ್ರಕ್ರಿಯೆಯಲ್ಲಿ ಮೂರು ಹಂತಗಳಿವೆ.

  • ಪೂರ್ವಭಾವಿ ಪರೀಕ್ಷೆ.
  • ಮುಖ್ಯ ಪರೀಕ್ಷೆ.
  • ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ.

ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ, ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು. ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ಉಪಯುಕ್ತ ವಿಡಿಯೋಗಳನ್ನು ವೀಕ್ಷಿಸಿ. ಈ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದುವಿಕೆ ಇರಬೇಕು. ಜೊತೆಗೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ. 

Q7. ನಾನು ಬಿಕಾಂ  ಮಾಡಿ ಐಸಿಎಮ್‍ಎಐ ಕೋರ್ಸ್ ಮಾಡಬೇಕೆಂದುಕೊಂಡಿದ್ದೇನೆ. ಈ ಬಗ್ಗೆ ಮಾಹಿತಿ ನೀಡಿ. – ಚೈತ್ರ,

ನೀವು ಬಿಕಾಂ ಮಾಡಿರುವುದರಿಂದ ನೇರವಾಗಿ ಮತ್ತೆ ಇಂಟರ್‍ಮೀಡಿಯೆಟ್ ಕೋರ್ಸ್‍ಗೆ ನೋಂದಾಯಿಸಿ. ಎರಡು ಗ್ರೂಪ್‍ಗಳಿಂದ ಒಟ್ಟು 8 ಪರೀಕ್ಷೆಗಳಿರುತ್ತವೆ. ವಿದ್ಯಾರ್ಥಿಗಳಿಗೆ ಸಹಾಯವಾಗುವ  ಅನೇಕ ಸಂಪನ್ಮೂಲಗಳು ಇನ್‍ಸ್ಟಿಟ್ಯೂಟಿನ ವೆಬ್‍ಸೈಟ್‍ನಲ್ಲಿವೆ. ಉದಾಹರಣೆಗೆ ವಿಷಯ ಸೂಚಿಕೆ, ಪುಸ್ತಕಗಳು, ಅಣಕ ಪ್ರಶ್ನೆಪತ್ರಿಕೆಗಳು, ಕೋಚಿಂಗ್ ಸೆಂಟರ್ ವಿವರಗಳು, ಟ್ರೈನಿಂಗ್ ಮಾಹಿತಿ, ವೆಬಿನಾರ್‍ಗಳು, ವೀಡಿಯೋಗಳು ಇತ್ಯಾದಿ. ಈ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಿಕೊಂಡು ಸೂಕ್ತ ಸಮಯದ ನಿರ್ವಹಣೆಯೊಂದಿಗೆ ಪರೀಕ್ಷೆಗೆ ತಯಾರಿ ಮಾಡಬಹುದು. ಹೆಚ್ಚಿನ ವಿವರಗಳಿಗೆ ಗಮನಿಸಿ: https://icmai.in/studentswebsite

Q8. ನಾನು ದ್ವಿತೀಯ ಪಿಯುಸಿ (ಆಟ್ರ್ಸ್) ಇಂಗ್ಲೀಷ್ ಮಾಧ್ಯಮದಲ್ಲಿ ಮಾಡಿದ್ದೇನೆ. ಪದವಿಯಲ್ಲಿ ಯಾವ ಕೋರ್ಸ್ ಮತ್ತು ಬಿಎ ಮಾಡುವುದಾದರೆ, ಯಾವ ವಿಷಯ ತೆಗೆದುಕೊಳ್ಳಬೇಕು? – ಹೆಸರು

ಪಿಯುಸಿ ನಂತರ ನಿಮಗೆ ಹಲವಾರು ಕೋರ್ಸ್ ಆಯ್ಕೆಗಳಿವೆ. ಉದಾಹರಣೆಗೆ, ಬಿಎ (ಅನೇಕ ವಿಷಯಗಳಲ್ಲಿ), ಬಿಎ(ಹಾನರ್ಸ್),ಬಿಬಿಎ, ಬಿಬಿಎಂ, ಬಿಲಿಬ್, ಬಿಎಸ್‍ಡಬ್ಲ್ಯು, ಜರ್ನಲಿಸಮ್, ಫೈನ್ ಆಟ್ರ್ಸ್, ಕಾನೂನು, ಡಿಸೈನ್, ಸಿಎ, ಎಸಿಎಸ್, ಐಸಿಡಬ್ಲ್ಯು ಇತ್ಯಾದಿ ಹಾಗೂ ಅನೇಕ ಸ್ನಾತಕೋತ್ತರ ಪದವಿಯ ಇಂಟಗ್ರೇಡೆಡ್ ಕೋರ್ಸ್‍ಗಳೂ ಇವೆ. ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯ ಆಧಾರದ ಮೇಲೆ ವೃತ್ತಿ ಜೀವನದ ಯೋಜನೆಯನ್ನು ರೂಪಿಸಿದರೆ, ಕೋರ್ಸ್ ಆಯ್ಕೆ ಸುಲಭವಾಗುತ್ತದೆ.

Q9. ಬಿಎಸ್‍ಸಿ ನಂತರ ಎಂಎಸ್‍ಸಿ (ಕೆಮಿಸ್ಟ್ರಿ) ಮಾಡಬೇಕು. ಅದರಲ್ಲಿನ ಆಯ್ಕೆಗಳು ಮತ್ತು ತಯಾರಿಯ ಬಗ್ಗೆ ತಿಳಿಸಿ. – ವೈಭವ್

ಎಂಎಸ್‍ಸಿ ಕೋರ್ಸ್‍ನಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಸ್ಪೆಷಲೈಜೇಷನ್‍ಗಳೆಂದರೆ ಜನರಲ್ ಕೆಮಿಸ್ಟ್ರಿ, ಆರ್ಗಾನಿಕ್ ಕೆಮಿಸ್ಟ್ರಿ, ಅನಲಿಟಿಕಲ್ ಕೆಮಿಸ್ಟ್ರಿ,  ಬಯೋ ಕೆಮಿಸ್ಟ್ರಿ, ಫಾರ್ಮಸ್ಯೂಟಿಕಲ್ ಕೆಮಿಸ್ಟ್ರಿ ಇತ್ಯಾದಿ. ಸಾಮಾನ್ಯವಾಗಿ ವಿಶ್ವವಿದ್ಯಾಲಯದ ನಿಯಮಾವಳಿಗಳಂತೆ ಪದವಿ ಪರೀಕ್ಷೆಯಲ್ಲಿ ಶೇ 50 ರಿಂದ ಶೇ 60 ರಷ್ಟು ಅಂಕಗಳನ್ನು ಗಳಿಸಿರಬೇಕು ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ನೀವು ಇಚ್ಛಿಸುವ ವಿಶ್ವವಿದ್ಯಾಲಯದ ಪರೀಕ್ಷೆಯ ಮಾದರಿಯನ್ನು ಪರಿಶೀಲಿಸಿ ಅದರಂತೆ ಅಭ್ಯಾಸ ಮಾಡಬೇಕು.

Q10. ಬಿಎಸ್‍ಸಿ(ಫಿಸಿಯೋತೆರಪಿ) ಪದವಿಯ ನಂತರದ ವೃತ್ತಿಯ ಅವಕಾಶಗಳೇನು? – ಪ್ರೀತಿ

ಬಿಎಸ್‍ಸಿ(ಫಿಸಿಯೋತೆರಪಿ) ಪದವಿಯ ನಂತರ ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್ಸ್, ಕಾರ್ಪೊರೇಟ್ ಸಂಸ್ಥೆಗಳು, ರಿಸರ್ಚ್,  ಲ್ಯಾಬೋರೇಟರೀಸ್, ಸ್ಪೋಟ್ರ್ಸ್ ಸೆಂಟರ್ಸ್, ಜಿಮ್ಸ್, ಆರೋಗ್ಯ ಸೇವಾ ಕೇಂದ್ರಗಳು, ಎನ್‍ಜಿಒ ಸಂಸ್ಥೆಗಳು, ಹಿರಿಯ ನಾಗರಿಕರ ಸೇವಾ ಕೇಂದ್ರಗಳು ಹೀಗೆ ಅನೇಕ ವಲಯಗಳಲ್ಲಿ ಫಿಸಿಯೋತೆರಪಿಸ್ಟ್‍ಗಳ ಅವಶ್ಯಕತೆಯಿರುತ್ತದೆ. ಇದಲ್ಲದೆ,  ಅನುಭವದ ನಂತರ ಸ್ವತಂತ್ರವಾಗಿ ಪ್ರಾಕ್ಟೀಸ್ ಮಾಡಬಹುದು ಮತ್ತು ಶಿಕ್ಷಕ ವೃತ್ತಿಯನ್ನೂ ಆರಿಸಿಕೊಳ್ಳಬಹುದು.

Q11. ಬಿಎಸ್‍ಸಿ (ಕಂಪ್ಯೂಟರ್ ಸೈನ್ಸ್) ನಂತರದ ವೃತ್ತಿಯ ಅವಕಾಶಗಳೇನು? – ರೋಹಿತ್ ಪ್ರಶಾಂತ್

ಈ ಕ್ಷೇತ್ರದಲ್ಲಿನ ವೃತ್ತಿಗಳೆಂದರೆ ಡೇಟಾ ಸೈನ್ಸಿಸ್ಟ್, ಡೇಟಾಬೇಸ್ ಅಡ್ಮಿನಿಸ್ಟ್ರೇಟರ್, ಅಪ್ಲಿಕೇಷನ್ ಅನಲಿಸ್ಟ್, ವೆಬ್ ಡಿಸೈನರ್, ಟೆಕ್ನಿಕಲ್ ಸಪೋರ್ಟ್, ಸೈಬರ್ ಸೆಕ್ಯೂರಿಟಿ, ಮೊಬೈಲ್ ಆಪ್ ಡೆವಲಪ್‍ಮೆಂಟ್ ಇತ್ಯಾದಿ. ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಈ ವೃತ್ತಿಗಳನ್ನು ಅನುಸರಿಸಬಹುದು.

Q12. ಬಿಎಸ್‍ಸಿ (ಸಿಬಿಝೆಡ್) ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು ಅರಣ್ಯ ಇಲಾಖೆಯ ಆರ್‍ಎಫ್‍ಒ ಮತ್ತು ಡಿಆರ್‍ಎಫ್‍ಒ ಕೆಲಸಗಳಿಗೆ ಸೇರುವ ಆಸೆ ಇದೆ. ಸೂಕ್ತ ಸಲಹೆ ನೀಡಿ. – ಶಂಕರಗೌಡ ತಡಹಾಳ, ಆಳಗವಾಡಿ

ಆರ್‍ಎಫ್‍ಒ ಹುದ್ದೆಗೆ ಪದವಿ ಪರೀಕ್ಷೆಯಲ್ಲಿ ಕನಿಷ್ಟ ಶೇ 50 ಅಂಕ ಗಳಿಸಿರಬೇಕು. ಕರ್ನಾಟಕ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ ನಂತರ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇದಾದ ನಂತರ ದೇಹದಾಢ್ರ್ಯತೆ, ವೈದ್ಯಕೀಯ ಮತ್ತು ದೈಹಿಕ ತಾಳ್ವಿಕೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಈ ಎಲ್ಲಾ ಪರೀಕ್ಷೆಗಳ ಆಧಾರದ ಮೇಲೆ ನೇಮಕಾತಿಯಾಗುತ್ತದೆ. ಡಿಆರ್‍ಎಫ್‍ಒ ಹುದ್ದೆಗೆ ಪಿಯುಸಿ ಪರೀಕ್ಷೆಯ ನಂತರ ಅರ್ಹತೆ ಸಿಗುತ್ತದೆ. ನೇಮಕಾತಿ ಪ್ರಕ್ರಿಯೆ ಎರಡು ಹುದ್ದೆಗಳಿಗೂ ಸಮಾನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://kfdrecruitment.in/

Q13. ನಾನು ಡಿಪ್ಲೊಮ ಕೋರ್ಸ್/ಎನ್‍ಐಒಎಸ್ ಕೋರ್ಸ್ ನಂತರ ಸಬ್ ಇನ್‍ಸ್ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಬಹುದೇ? – ಹೆಸರು

ಎನ್‍ಐಒಎಸ್ ಕೋರ್ಸ್‍ಗಳಿಗೆ ಸರ್ಕಾರದ ಮಾನ್ಯತೆಯಿದೆ. ಸಬ್ ಇನ್‍ಸ್ಪೆಕ್ಟರ್ ಹುದ್ದೆಗೆ ಯಾವುದಾದರೂ ಪದವಿ ಅಥವಾ ತತ್ಸಮಾನ ಕೋರ್ಸ್ ಮಾಡಿರಬೇಕು.