Q & A for Students – April 2022

Q1. ನಮಸ್ತೆ ಸರ್, ಐಸಿಎಸ್‌ಇ ಮತ್ತು ಸಿಬಿಎಸ್‌ಸಿ ಪಠ್ಯಕ್ರಮಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿ. ನಮ್ಮ ಅಕ್ಕನ ಮಗ 6 ನೇ ತರಗತಿಯವರೆಗೂ ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ ಓದಿದ್ದು ಕಾರಣಾಂತರದಿಂದ ಬೇರೆ ಸ್ಥಳಕ್ಕೆ ಹೋಗಬೇಕಾಗಿರುವುದರಿಂದ ಅಲ್ಲಿ ಐಸಿಎಸ್‌ಇ ಶಾಲೆ ಇದೆ. ಆದ್ದರಿಂದ, ಐಸಿಎಸ್‌ಇ ಶಾಲೆಗೆ ಸೇರಿಸುವುದರಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಸಮಸ್ಯೆ ಆಗುತ್ತದೆಯೇ?.

ಪೋಷಕರು ವರ್ಗಾವಣೆಯಾಗಬಹುದಾದ ವೃತ್ತಿಯಲ್ಲಿದ್ದರೆ, ವಿದ್ಯಾರ್ಥಿಗಳಿಗೆ ರಾಜ್ಯ ಪಠ್ಯಕ್ರಮದ ಬದಲು ಐಸಿಎಸ್‌ಇ ಅಥವಾ ಸಿಬಿಎಸ್‌ಸಿ ಹೆಚ್ಚು ಸಮಂಜಸವೆನಿಸುತ್ತದೆ. ರಾಜ್ಯ/ಸಿಬಿಎಸ್‌ಸಿ ಪಠ್ಯಕ್ರಮಗಳಿಗೆ ಹೋಲಿಸಿದರೆ ಐಸಿಎಸ್‌ಇ ಪಠ್ಯಕ್ರಮದಲ್ಲಿ ಗಣಿತ, ವಿಜ್ಞಾನದ ವಿಷಯಗಳ ಜೊತೆ ಭಾಷೆ, ಚರಿತ್ರೆ, ಭೂಗೋಳ ಶಾಸ್ತç, ಸಮಾಜ ವಿಜ್ಞಾನ, ಕಲೆ, ಸಾಹಿತ್ಯದಂತಹ ವಿಷಯಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ನೃತ್ಯ, ಸಂಗೀತ ಇತ್ಯಾದಿಯನ್ನೂ ಕಲಿಯುವ ಅವಕಾಶವಿರುತ್ತದೆ. ಈ ಕಾರಣಗಳಿಂದ, ಐಸಿಎಸ್‌ಇ ಹೆಚ್ಚು ಸಮಗ್ರ ಮತ್ತು ಪ್ರಾಯೋಗಿಕವೆನಿಸುತ್ತದೆ. ಐಸಿಎಸ್‌ಇ ಪದ್ದತಿಯ ಸಂಕೀರ್ಣತೆಯಿಂದ ವಿದ್ಯಾರ್ಥಿಗಳು ರಾಜ್ಯ/ಸಿಬಿಎಸ್‌ಸಿ  ಶಿಕ್ಷಣದಲ್ಲಿ ಪಡೆದಷ್ಟು ಅಂಕ ಗಳಿಸುವುದು ಕಷ್ಟ. ಸಿಬಿಎಸ್‌ಸಿ ಶಾಲೆಯಿಲ್ಲದ ಸ್ಥಳಗಳಲ್ಲಿ ಐಸಿಎಸ್‌ಇ ಶಾಲೆಯನ್ನು ಸೇರುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ; ಆದರೆ, ಮುಂದಿನ ಶಿಕ್ಷಣದ ಯೋಜನೆಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗೆ ಟ್ಯೂಷನ್ ಅಗತ್ಯವಿದೆಯೇ ಎಂದು ಪರಿಶೀಲಿಸುವುದು ಸೂಕ್ತ. ವಿದೇಶದಲ್ಲಿ ಐಸಿಎಸ್‌ಇ ಶಿಕ್ಷಣಕ್ಕೆ ಹೆಚ್ಚು ಮನ್ನಣೆಯಿರುವುದರಿಂದ ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಬಯಸುವ ವಿದ್ಯಾರ್ಥಿಗಳಿಗೆ ಈ ಶಿಕ್ಷಣ ಅನುಕೂಲಕರವಾಗಬಹುದು.  ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.catalyzecenter.com/blog/2018/april/differences-between-CBSE-and-ICSE-curricula.html

Q2. ನಾನು ಬಿಎಸ್‌ಸಿ (ಬಯೋಟೆಕ್ನಾಲಜಿ) ಓದಿದ್ದೇನೆ. ನನಗೆ ಮುಂದೇನು ಮಾಡಬೇಕು ಎಂಬುವುದರ ಬಗ್ಗೆ ತುಂಬಾ ಗೊಂದಲವಾಗುತ್ತಿದೆ. ಎಂಎಸ್‌ಸಿ ಮಾಡಿದರೆ ಉಪಯೋಗವಿದೆಯೇ? ಬೇರೆ ಏನಾದರೂ ಆಯ್ಕೆಗಳಿವೆಯೇ? ದಯವಿಟ್ಟು ಸಲಹೆ ಕೊಡಿ.

ಒಂದು ನಿರ್ಧಿಷ್ಟವಾದ ವೃತ್ತಿ ಮತ್ತು ಅದಕ್ಕೆ ಅನುಗುಣವಾಗಿ ಶಿಕ್ಷಣದ ಯೋಜನೆಯಿಲ್ಲದೆ ಕೋರ್ಸ್ ಮಾಡಿದರೆ ಇಂತಹ ಗೊಂದಲಗಳು ಸಾಮಾನ್ಯ. ಈಗಲೂ, ನಿಮ್ಮ ಆಸಕ್ತಿ, ಅಭಿರುಚಿಯಂತೆ ವೃತ್ತಿ ಯೋಜನೆಯನ್ನು ಮಾಡಿದರೆ ಮುಂದೇನು ಮಾಡಬೇಕೆನ್ನುವ ನಿಟ್ಟಿನಲ್ಲಿರುವ ಗೊಂದಲ ನಿವಾರಣೆಯಾಗುತ್ತದೆ.

ಬಿಎಸ್‌ಸಿ ನಂತರ ನೇರವಾಗಿ ಕೆಲಸಕ್ಕೆ ಸೇರುವುದಾದರೆ, ಸರ್ಕಾರಿ ಮತ್ತು ಖಾಸಗೀ ವಲಯದ ಬಯೋಟೆಕ್ನಾಲಜಿ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಆಸ್ಪತ್ರೆಗಳು, ಔಷಧ, ಆಹಾರ, ರಸಗೊಬ್ಬರ, ಕಾಸ್ಮೆಟಿಕ್ಸ್ ಇತ್ಯಾದಿ ತಯಾರಿಕ ಸಂಸ್ಥೆಗಳು, ಲ್ಯಾಬೋರೇಟರೀಸ್ ಮುಂತಾದ ಕ್ಷೇತ್ರಗಳಲ್ಲಿ ವೃತ್ತಿಯನ್ನು ಅರಸಬಹುದು.

ಹೆಚ್ಚಿನ ತಜ್ಞತೆಗಾಗಿ ಎಂಎಸ್‌ಸಿ ( ಬಯೋಟೆಕ್ನಾಲಜಿ,  ಬಯೋಕೆಮಿಸ್ಟ್ರಿ, ಮೈಕ್ರೊಬಯಾಲಜಿ, ಫುಡ್ ಸೈನ್ಸ್ ಮತ್ತು ನ್ಯೂಟ್ರಿಷನ್, ಫೊರೆನ್ಸಿಕ್ ಸೈನ್ಸ್, ಲೈಫ್ ಸೈನ್ಸ್, ಜೆನೆಟಿಕ್ಸ್, ಕ್ಲಿನಿಕಲ್ ರಿಸರ್ಚ್ ಇತ್ಯಾದಿ) ಕೋರ್ಸನ್ನು ರೆಗ್ಯುಲರ್ ಅಥವಾ ಕೆಲಸದಲ್ಲಿದ್ದುಕೊಂಡು ದೂರಶಿಕ್ಷಣದ ಮುಖಾಂತರವೂ ಮಾಡಬಹುದು. ಹಾಗೂ, ಮಾರ್ಕೆಟಿಂಗ್‌ನಲ್ಲಿ ಆಸಕ್ತಿಯಿದ್ದರೆ ಎಂಬಿಎ (ಬಯೋಟೆಕ್ನಾಲಜಿ),   ಸಂಶೋಧನೆಯಲ್ಲಿ ಆಸಕ್ತಿಯಿದ್ದರೆ   ಪಿಎಚ್.ಡಿ ಮಾಡಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: 

Q3. ನಾನು ಎಂಕಾಮ್ ಮಾಡುತ್ತಿದ್ದೇನೆ. ನನಗೆ ಆಡಿಟರ್ ಆಗಬೇಕೆಂಬ ಆಸೆ ಇದೆ. ಆದರೆ, ಮುಂದೇನು ಮಾಡಬೇಕು ಎಂದು ತಿಳಿಯುತ್ತಿಲ್ಲ. ದಯವಿಟ್ಟು ತಿಳಿಸಿ.

ಬಿಕಾಂ/ಎಂಕಾಮ್ (ಕನಿಷ್ಠ ಶೇಕಡ 55) ನಂತರ ಸಿಎ ಇಂಟರ್‌ಮೀಡಿಯೆಟ್ ಕೋರ್ಸಿಗೆ ನೇರವಾಗಿ ನೋಂದಾಯಿಸಿಕೊಳ್ಳಬಹುದು. ಜೊತೆಗೆ 3 ವರ್ಷದ ಆರ್ಟಿಕಲ್ ಟ್ರೆನಿಂಗ್‌ಗೆ ಸೇರಬೇಕು. ಇಂಟರ್‌ಮೀಡಿಯೆಟ್ ಪಾಸಾದ ನಂತರ ಫೈನಲ್‌ಗೆ ನೋಂದಾಯಿಸಿ, ಪರೀಕ್ಷೆಯಲ್ಲಿ ಪಾಸಾಗಬೇಕು. ಫೈನಲ್ ಪರೀಕ್ಷೆಗೆ ಮುಂಚೆ ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಒಟ್ಟಾರೆ, ಸಿಎ ಕೋರ್ಸ್ ಮಾಡಲು ಕನಿಷ್ಠ 3-4 ವರ್ಷ ಬೇಕಾಗುತ್ತದೆ.

ಈ ವೃತ್ತಿಯಲ್ಲಿ ಯಶಸ್ವಿಯಾಗಲು ನಿಷ್ಠೆ, ಪ್ರಾಮಾಣಿಕತೆಯ ಜೊತೆಗೆ ಸಂಖ್ಯಾ ಕೌಶಲ, ವಿಶ್ಲೇಷಾತ್ಮಕ ಕೌಶಲ, ಆರ್ಥಿಕ ನಿರ್ವಹಣೆ ಮತ್ತು ವ್ಯಾಪಾರೋದ್ಯಮ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಚಾರ್ಟರ್ಡ್ ಅಕೌಂಟೆAಟ್‌ಗಳಿಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ. ಹಲವು ವರ್ಷಗಳ ಅನುಭವದ ನಂತರ ಸ್ವತಂತ್ರವಾಗಿ ಪ್ರಾಕ್ಟೀಸ್ ಮಾಡಬಹುದು. ಹೆಚ್ಚಿನ ವಿವರಗಳಿಗೆ ಪರಿಶೀಲಿಸಿ: https://icai.org/

Q4. ಡಿಫಾರ್ಮಾ ಮುಗಿದ ಮೇಲೆ ಮುಂದೇನು ಮಾಡಬಹುದು? ಭಾರತ ಹಾಗೂ ವಿದೇಶದಲ್ಲಿರುವ ಉದ್ಯೋಗಾವಕಾಶಗಳೇನು?

ಡಿಫಾರ್ಮಾ ನಂತರ ಫಾರ್ಮಾ ಉತ್ಪಾದನೆ, ಮಾರ್ಕೆಟಿಂಗ್ ಮತ್ತು ಸಂಶೋಧನೆ ಸಂಸ್ಥೆಗಳು, ಆಸ್ಪತ್ರೆಗಳು, ಕ್ಲಿನಿಕ್ಸ್, ಕಮ್ಯೂನಿಟಿ ಸೆಂಟರ್ಸ್, ಮೆಡಿಕಲ್ ಸ್ಟೋರ್ಸ್ ಇತ್ಯಾದಿ ಕ್ಷೇತ್ರಗಳಲ್ಲಿ ವೃತ್ತಿಯನ್ನು ಅರಸಬಹುದು. ಹಾಗೂ, ಸರ್ಕಾರಿ ಕ್ಷೇತ್ರದ ಹುದ್ದೆಗಳಿಗೂ ಪ್ರಯತ್ನಿಸಬಹುದು.

ಹೆಚ್ಚಿನ ತಜ್ಞತೆಗಾಗಿ, ಡಿಫಾರ್ಮಾ ನಂತರ ಎರಡು ವರ್ಷದ ಬಿಫಾರ್ಮಾ ಮಾಡಿ, ನಂತರ ಎಂಫಾರ್ಮಾ ಮಾಡಬಹುದು. ಅನೇಕ ಹೊರರಾಷ್ಟçಗಳಲ್ಲಿ ಭಾರತದ ಫಾರ್ಮಸಿಸ್ಟ್ಗಳಿಗೆ ಬೇಡಿಕೆಯಿದೆ. ವಿದೇಶದಲ್ಲಿ ಉದ್ಯೋಗವನ್ನು ಅರಸುವ ಆಕಾಂಕ್ಷೆಯಿದ್ದಲ್ಲಿ, ಭಾರತದಲ್ಲಿ ಫಾರ್ಮಸಿಸ್ಟ್ ಎಂದು ನೋಂದಾಯಿಸಿಕೊAಡ ನಂತರ, ಆಯಾ ದೇಶಕ್ಕೆ  ಅನುಗುಣವಾಗುವ ವಲಸೆ/ಉದ್ಯೋಗದ ನಿಯಮಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬೇಕು.

Q5. ಎಷ್ಟು ಓದಿದರೂ ಎಲ್ಲವೂ ಮರೆತುಹೋಗುತ್ತದೆ. ಓದುವುದು ಹೇಗೆ?

ಓದಿದ ವಿಷಯ ಮರೆತುಹೋಗುವುದು ಒಂದು ಸಾಮಾನ್ಯವಾದ ಹಾಗೂ ಗಂಭೀರವಾದ ಸಮಸ್ಯೆ. ಪರಿಣಾಮಕಾರಿ ಕಾರ್ಯತಂತ್ರಗಳನ್ನು ಓದುವಿಕೆಯಲ್ಲಿ ಅಳವಡಿಸದಿರುವುದರಿಂದ ಓದಿದ ವಿಷಯಗಳು ನಿಮ್ಮ ಅಲ್ಪಾವಧಿ ಸ್ಮರಣೆಯಲ್ಲಿ ಮಾತ್ರ ಇರುತ್ತದೆ. ಹಾಗಾಗಿ, ಪರೀಕ್ಷೆ/ಟೆಸ್ಟ್ಗಳಲ್ಲಿ ಓದಿದ ವಿಷಯ ಜ್ಞಾಪಕಕ್ಕೆ ಬರದೆ, ಸಮಸ್ಯೆಯಾಗುವುದು ಸಾಮಾನ್ಯ. ಓದಿದ ವಿಷಯಗಳು ದೀರ್ಘಾವಧಿ ಸ್ಮರಣೆಯಲ್ಲಿರಬೇಕಾದರೆ, ಓದುವಿಕೆ ಪರಿಣಾಮಕಾರಿಯಾಗಿರಬೇಕು. ಓದುವಿಕೆಯ ಕಾರ್ಯತಂತ್ರಗಳಲ್ಲಿ ಓದುವ ಪ್ರಕ್ರಿಯೆಯ ಜೊತೆ ಸಮೀಕ್ಷೆ, ಪ್ರಶ್ನಿಸುವಿಕೆ, ಪುನರುಚ್ಛಾರಣೆ ಮತ್ತು ಪುನರಾವರ್ತನೆ ಇರಬೇಕು. ಇದಲ್ಲದೆ ತರಗತಿಗಳಲ್ಲಿ, ಉಪನ್ಯಾಸದ ನೋಟ್ಸ್‌ನ್ನು ಸರಿಯಾದ ಕ್ರಮದಲ್ಲಿ, ಓದುವಿಕೆಗೆ ಪೂರಕವಾಗುವಂತೆ ಬರೆಯಬೇಕು. ಹಾಗೂ, ಮನೆಯಲ್ಲಿ ಓದುವಾಗ ಕಣ್ಣಿಗೂ, ಮನಸ್ಸಿಗೂ ತರಬೇತಿಯ ಅಗತ್ಯವಿರುತ್ತದೆ.

ದುರದೃಷ್ಟವಶಾತ್, ಹೆಚ್ಚಿನ ಶಾಲಾ/ಕಾಲೇಜುಗಳಲ್ಲಿ ಪರಿಣಾಮಕಾರಿ ಓದುವಿಕೆಯ ಈ ಕಾರ್ಯತಂತ್ರಗಳ ಕುರಿತು ತರಬೇತಿ ನೀಡಿರುವುದಿಲ್ಲ. ಪರಿಣಾಮಕಾರಿ ಓದುವಿಕೆಯ ಕಾರ್ಯತಂತ್ರಗಳು ಮತ್ತು ನೋಟ್ಸ್ ಬರೆಯುವ ಕ್ರಮ ಇತ್ಯಾದಿ ವಿಷಯಗಳ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ಚಾನೆಲ್ ವೀಕ್ಷಿಸಿ ಮತ್ತು ನಿಮ್ಮ ಓದುವಿಕೆಯಲ್ಲಿ ಈ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡರೆ ನಿಮ್ಮ ಸಮಸ್ಯೆಯ ಪರಿಹಾರವಾಗುತ್ತದೆ: https://www.youtube.com/c/EducationalExpertManagementCareerConsultant

Q6. ನಾನು ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿ. ಮುಂದೆ ಎಂಬಿಎ ಮಾಡಬೇಕೆಂಬ ಆಸೆ ಇದೆ. ನಾನು ಯಾವ ರೀತಿ ತಯಾರಿ ನಡೆಸಬೇಕು?

ಬಿಕಾಂ ನಂತರ ಎಂಬಿಎ ಮಾಡುವುದು ಉತ್ತಮ ಆಯ್ಕೆ. ಎಂಬಿಎ ಕೋರ್ಸ್ ಅನ್ನು ಮಾರ್ಕೆಟಿಂಗ್, ಎಚ್‌ಆರ್, ಪ್ರೊಡಕ್ಷನ್, ಫೈನಾನ್ಸ್, ಲಾಜಿಸ್ಟಿಕ್ಸ್ ಇತ್ಯಾದಿ ವಿಭಾಗಗಳಲ್ಲಿ ಮಾಡಬಹುದು. ನಿಮ್ಮ ಆಸಕ್ತಿ, ಅಭಿರುಚಿಯಂತೆ ಯಾವ ವಿಭಾಗದಲ್ಲಿ ಎಂಬಿಎ ಮಾಡಬೇಕು ಎಂದು ನಿರ್ಧರಿಸಿ, ಅದರಂತೆ ದೀರ್ಘಾವಧಿ ವೃತ್ತಿ ಜೀವನದ ಯೋಜನೆಯನ್ನು ಮಾಡಬೇಕು.

ಎಲ್ಲಾ ಎಂಬಿಎ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪರೀಕ್ಷೆಯಿರುತ್ತದೆ; ಉದಾಹರಣೆಗೆ ಕಾಮನ್ ಅಡ್ಮಿಷನ್ ಟೆಸ್ಟ್ (ಕ್ಯಾಟ್), ಮ್ಯಾನೇಜ್‌ಮೆಂಟ್ ಅಡ್ಮಿಷನ್ ಟೆಸ್ಟ್ (ಮ್ಯಾಟ್), ಗ್ರಾಜುಯೇಟ್ ಮ್ಯಾನೇಜ್‌ಮೆಂಟ್ ಅಡ್ಮಿಷನ್ ಟೆಸ್ಟ್ (ಜಿಮ್ಯಾಟ್), ಬಿಸಿನೆಸ್ಸ್ ಅನಲಿಟಿಕ್ಸ್ ಆಪ್ಟಿಟ್ಯೂಡ್ ಟೆಸ್ಟ್ (ಬ್ಯಾಟ್), ಪಿಜಿಸಿಇಟಿ, ಕೆಲವು ಪ್ರತಿಷ್ಟಿತ ಸಂಸ್ಥೆಗಳಲ್ಲಿ ಎಂಬಿಎ ಪ್ರವೇಶದ ಅರ್ಹತೆಯನ್ನು ನಿರ್ಧರಿಸುವ ಪರೀಕ್ಷೆಗಳು. ಈ ಪರೀಕ್ಷೆಗಳ ಪ್ರಾಮುಖ್ಯತೆ, ಕಠಿಣತೆಯ ಮಟ್ಟ, ನಿಮ್ಮ ಧ್ಯೇಯ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಸೂಕ್ತ ಕಾರ್ಯತಂತ್ರವನ್ನು ರೂಪಿಸಿ, ನಿಮ್ಮ ಆದ್ಯತೆಯಂತೆ ಪ್ರವೇಶ ಪರೀಕ್ಷೆಗಳ ಮೂಲಕ ಎಂಬಿಎ ಕೋರ್ಸ್ಗೆ ಸೇರಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: https://collegedunia.com/mba/karnataka-colleges

Q7. ಸರ್, ನನ್ನ ತಂದೆ,ತಾಯಿಯವರ ಹೆಸರುಗಳು, ಅವರ ಮತ್ತು ನನ್ನ ದಾಖಲೆಗಳಲ್ಲಿ ವ್ಯತ್ಯಾಸಗಳಿವೆ. ಇದನ್ನು ಸರಿಪಡಿಸುವುದು ಹೇಗೆ?

ನಿಮ್ಮ ದಾಖಲೆಗಳಲ್ಲಿ ತಿದ್ದುಪಡಿ ಮಾಡಬೇಕೆಂದರೆ ಸಂಬAಧಿಸಿದ ಸಿವಿಲ್ ನ್ಯಾಯಾಲಯದ ನ್ಯಾಯಾದೀಶರಿಗೆ ಸಾಮಾನ್ಯವಾಗಿ ಲಭ್ಯವಿರುವ ಅರ್ಜಿಯ ಪ್ರಕಾರ, ಸೂಕ್ತ ದಾಖಲೆಗಳೊಂದಿಗೆ ಪ್ರಮಾಣಪತ್ರ ಸಲ್ಲಿಸಬೇಕು. ನ್ಯಾಯಾದೀಶರ ಅನುಮೋದನೆಯ ನಂತರ ಪ್ರಮಾಣಪತ್ರ ಮತ್ತು ಇನ್ನಿತರ ದಾಖಲೆಗಳೊಂದಿಗೆ ನಿಮ್ಮ ಶಾಲೆಯ/ಕಾಲೇಜಿನ ಮೂಲಕ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ/ವಿಶ್ವವಿದ್ಯಾಲಯಕ್ಕೆ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿ.

Q8. ನಾನು ಸ್ನಾತಕೋತ್ತರ ಪದವಿಯ ನಂತರ, ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗಬೇಕು ಎಂದುಕೊAಡಿದ್ದೇನೆ. ಆದರೆ, ಇದರೊಂದಿಗೆ ನನಗೆ ಕುಟುಂಬಕ್ಕೂ ಆರ್ಥಿಕ ನೆರವು ನೀಡಬೇಕಾಗಿದೆ. ಈ ಕಾರಣಕ್ಕೆ, ಪರೀಕ್ಷೆ ತಯಾರಿ ನಡೆಸಲು ನನ್ನ ಆತ್ಮವಿಶ್ವಾಸ ಕಡಿಮೆಯಾಗುತ್ತಿದೆ. ನಾನು ನನ್ನ ಗುರಿ ತಲುಪಲು ಏನು ಮಾಡಬೇಕು?

ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ. ಹಾಗಾಗಿ, ನಿಮ್ಮ ಈಗಿನ ಪರಿಸ್ಥಿತಿಯಿಂದ ಎದೆಗುಂದದೆ ದೀರ್ಘಾವಧಿ ಕನಸುಗಳನ್ನು ಸಾಕಾರಗೊಳಿಸುವ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ. ಸ್ನಾತಕೋತ್ತರ ಪದವಿಯ ಅಧಾರದ ಮೇಲೆ ಪೂರ್ಣಾವಧಿ/ಅರೆಕಾಲಿಕ ಕೆಲಸಗಳನ್ನು ಮಾಡುತ್ತಾ ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗುವುದು ಅಸಂಭವವಲ್ಲ. ದೃಡವಾದ ಸಂಕಲ್ಪ, ಸಮಯದ ನಿರ್ವಹಣೆ ಮತ್ತು ಪರಿಶ್ರಮದಿಂದ, ನಿಮ್ಮ ಗುರಿಯನ್ನು ಸೇರಬಹುದು. ನೆನಪಿರಲಿ; ಮನಸ್ಸಿದ್ದರೆ ಮಾರ್ಗವೆಂಬುದು ಜನಪ್ರಿಯ ನುಡಿಗಟ್ಟು ಮಾತ್ರವಲ್ಲ; ಅದರಲ್ಲಿದೆ ಮಾನವನ ಅಂತರಾಳದಲ್ಲಿರುವ ಅಪಾರವಾದ ಶಕ್ತಿಯನ್ನು ಕೇಂದ್ರೀಕರಿಸಿ, ಗುರಿಯನ್ನು ಮುಟ್ಟುವ ಗುಟ್ಟು. ಶುಭಹಾರೈಕೆಗಳು.

Q9. ಬಿಎ ಕೋರ್ಸ್ ಮಾಡಿದರೆ ಮುಂದೆ ನಾವು ಯಾವ ರೀತಿಯ ಕೆಲಸಕ್ಕೆ ಸೇರಬಹುದು ತಿಳಿಸಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದೇ?

ಸಾಮಾನ್ಯ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಬಿಎ ನಂತರದ ಆಯ್ಕೆಯಲ್ಲಿ ವಿಪುಲತೆಯೂ ವೈವಿಧ್ಯತೆಯೂ ಇದೆ. ಬಿಎ ನಂತರ ಯುಪಿಎಸ್‌ಸಿ, ಕೆಪಿಎಸ್‌ಸಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುದ್ದೆಗಳನ್ನು ಪಡೆದುಕೊಳ್ಳಬಹುದು. ಹಾಗೂ, ನಿಮ್ಮ ಆಸಕ್ತಿಯ ಅನುಸಾರ ಬಿಎಸ್‌ಡಬ್ಲು÷್ಯ, ಎಲ್‌ಎಲ್‌ಬಿ, ಬಿಲಿಬ್, ಬಿಪಿಇಡಿ, ಸಿಎ, ಎಂಎ, ಎಂಬಿಎ ಮುಂತಾದ ಕೋರ್ಸ್ಗಳನ್ನು ಮಾಡಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

Q10. ನನ್ನ ತಮ್ಮ ಈಗ ದ್ವಿತೀಯ ಪಿಯುಸಿ ಮಾಡುತ್ತಿದ್ದು ಮುಂದೆ ಸಿಎ ಮಾಡುವ ಉತ್ಸಾಹದಲ್ಲಿದ್ದಾನೆ. ದಯವಿಟ್ಟು ಈ ಕೋರ್ಸಿನ ಕುರಿತ ಮಾಹಿತಿ ಹಾಗೂ ಮುಂದಿನ ಭವಿಷ್ಯದ ಬಗ್ಗೆ ತಿಳಿಸಿ.

ಪಿಯುಸಿ ಮುಗಿಸಿ ಸಿಎ ಫೌಂಡೇಷನ್ ಕೋರ್ಸ್ ಮಾಡಿ ಇಂಟರ್‌ಮೀಡಿಯೆಟ್ ಕೋರ್ಸಿಗೆ ನೋಂದಾಯಿಸಿಕೊಳ್ಳಬೇಕು. ಜೊತೆಗೆ 3 ವರ್ಷದ ಆರ್ಟಿಕಲ್ ಟ್ರೆನಿಂಗ್‌ಗೆ ಸೇರಬೇಕು. ಇಂಟರ್‌ಮೀಡಿಯೆಟ್ ಪಾಸಾದ ನಂತರ ಫೈನಲ್‌ಗೆ ನೋಂದಾಯಿಸಿ, ಪರೀಕ್ಷೆಯಲ್ಲಿ ಪಾಸಾಗಬೇಕು. ಫೈನಲ್ ಪರೀಕ್ಷೆಗೆ ಮುಂಚೆ, ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಒಟ್ಟಾರೆ, ಸಿಎ ಕೋರ್ಸ್ ಮಾಡಲು ಕನಿಷ್ಟ 5-6 ವರ್ಷ ಬೇಕಾಗುತ್ತದೆ.

ಈ ವೃತ್ತಿಯಲ್ಲಿ ಯಶಸ್ವಿಯಾಗಲು ನಿಷ್ಠೆ, ಪ್ರಾಮಾಣಿಕತೆಯ ಜೊತೆಗೆ ಸಂಖ್ಯಾ ಕೌಶಲ, ವಿಶ್ಲೇಷಾತ್ಮಕ ಕೌಶಲ, ಆರ್ಥಿಕ ನಿರ್ವಹಣೆ ಮತ್ತು ವ್ಯಾಪಾರೋದ್ಯಮ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಹಾಗಾಗಿ, ಈ ವೃತ್ತಿಗೆ ಬೇಕಾದ ಕೌಶಲಗಳ ಜೊತೆಗೆ ಸ್ವಾಭಾವಿಕ ಆಸಕ್ತಿ ಮತ್ತು ಅಭಿರುಚಿಯಿದ್ದರೆ, ಸಿಎ ಕೋರ್ಸ್ ಮಾಡಬಹುದು. ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ. ಹಲವು ವರ್ಷಗಳ ಅನುಭವದ ನಂತರ ಸ್ವತಂತ್ರವಾಗಿ ಪ್ರಾಕ್ಟೀಸ್ ಮಾಡಬಹುದು. ಹೆಚ್ಚಿನ ವಿವರಗಳಿಗೆ ಪರಿಶೀಲಿಸಿ: https://icai.org/

Q11. ನಾನೀಗ ಬಿ ಫಾರ್ಮಾ ಕೊನೆಯ ವರ್ಷದಲ್ಲಿ ಓದುತ್ತಿದ್ದೇನೆ. ಉದ್ಯೋಗದ ಹಾಗೂ ಸಂಬಂಧಿತ ಉನ್ನತ ಶಿಕ್ಷಣದ ಅವಕಾಶಗಳ ಬಗ್ಗೆ ತಿಳಿಸಿ.

ವರ್ಷದ ಬಿಫಾರ್ಮಾ ಕೋರ್ಸ್ ರಾಸಾಯನಿಕ ವಿಜ್ಞಾನ, ಆರೋಗ್ಯ, ಔಷದೋಪಚಾರ ಮತ್ತು ಸ್ವಾಸ್ಥಕ್ಕೆ ಸಂಬಂಧಿಸಿದ ಮತ್ತು ಬೇಡಿಕೆಯಲ್ಲಿರುವ ಕ್ಷೇತ್ರ. ಈ ಪದವಿಯ ನಂತರ, ಸರ್ಕಾರಿ ಮತ್ತು ಖಾಸಗಿ ವಲಯದ ಆಸ್ಪತ್ರೆಗಳು, ಫಾರ್ಮಾ ಕಂಪನಿಗಳು, ಸಂಶೋಧನಾ ಸಂಸ್ಥೆಗಳು, ಆರೋಗ್ಯ ಮತ್ತು ಡ್ರಗ್ ಕಂಟ್ರೋಲ್ ಇಲಾಖೆಗಳು, ಪ್ರಯೋಗಾಲಯಗಳು, ಕಾಲೇಜುಗಳು, ಮೆಡಿಕಲ್ ಟ್ರಾನ್‌ಸ್ಕಿçಪ್ಷನ್ ಸಂಸ್ಥೆಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವೃತ್ತಿಯ ಅವಕಾಶಗಳಿವೆ. ಉನ್ನತ ಶಿಕ್ಷಣಕ್ಕಾಗಿ, ಬಿಫಾರ್ಮಾ ಪದವಿಯ ನಂತರ ನೇರವಾಗಿ 3 ವರ್ಷದ ಡಾಕ್ಟರ್ ಅಫ್ ಫಾರ್ಮಸಿ ಕೋರ್ಸ್(ಫಾರ್ಮ್ ಡಿ) ಅಥವಾ 2 ವರ್ಷದ ಎಂಫಾರ್ಮಾ ಕೋರ್ಸ್ ಮಾಡಬಹುದು.

Q12. ಸರ್, ನಾನು ವನ್ಯಜೀವಿ ಸಂರಕ್ಷಣಾ ಕ್ಷೇತ್ರದ ಕೋರ್ಸ್ಗಳನ್ನು ಕಲಿಯಬೇಕೆಂದಿರುವೆ. ಆದರೆ, ನಾನು ದ್ವಿತೀಯ ಪಿಯುಸಿಯಲ್ಲಿ ಮತ್ತು ಪದವಿಯಲ್ಲಿ ಜೀವಶಾಸ್ತç ಓದಿಲ್ಲ. ವನ್ಯಜೀವಿಗಳ ಸಂರಕ್ಷಣೆ ವಿಭಾಗದಲ್ಲಿ ಕೆಲಸ ಮಾಡಲು ಆಸಕ್ತಿ ಇದೆ. ದಯವಿಟ್ಟು ಮಾಹಿತಿ ಕೊಡಿ.

ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟಿನ ಎಂಎಸ್‌ಸಿ ಕೋರ್ಸ್ ನಿಮಗೆ ಸೂಕ್ತವಾಗಬಹುದು. ಪ್ರವೇಶ ಪರೀಕ್ಷೆ, ಆಪ್ಟಿಟ್ಯೂಡ್ ಟೆಸ್ಟ್ ಮತ್ತು ಸಂದರ್ಶನದ ಮುಖಾಂತರ ಪ್ರವೇಶಾತಿಯಾಗುತ್ತದೆ. ಇದಲ್ಲದೆ, ದೂರ ಶಿಕ್ಷಣದ ಮುಖಾಂತರ ವನ್ಯಜೀವಿ ಸಂಬಂಧಿತ ಡಿಪ್ಲೊಮಾ ಕೋರ್ಸ್ಗಳನ್ನೂ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://collegedunia.com/college/19250-wildlife-institute-of-india-wii-dehradun/admission

Q13. ನಾನು ದ್ವಿತೀಯ ಪಿಯುಸಿ ನಂತರ, ಬಿಎ ಪದವಿಯಲ್ಲಿ (ಎಚ್‌ಕೆಎಸ್) ತೆಗೆದುಕೊಳ್ಳಬೇಕು ಎಂದುಕೊಂಡಿದ್ದೇನೆ. ಈ ವಿಷಯಗಳ ಬಗ್ಗೆ ಮಾಹಿತಿ ನೀಡಿ. ಹಾಗೂ ಸೂಕ್ತವಾದ ಕಾಲೇಜುಗಳ ಮಾಹಿತಿ ತಿಳಿಸಿ.

ಉತ್ತಮ ಕಾಲೇಜುಗಳ ಆಯ್ಕೆಗೆ ಅಂತರ್ಜಾಲದಲ್ಲಿ ನ್ಯಾಷನಲ್ ಇನ್‌ಫರ್ಮೇಷನ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್ ಮತ್ತು ಇನ್ನಿತರ ಸಂಸ್ಥೆಗಳ ರ‍್ಯಾಂಕಿಂಗ್ ಮಾಹಿತಿಯನ್ನು ಪರಾಮರ್ಶಿಸಿ. ನೀವು ಬಿಎ ಪದವಿಯಲ್ಲಿ ತೆಗೆದುಕೊಳ್ಳಲು ಬಯಸುತ್ತಿರುವ ವಿಷಯಗಳ ಕುರಿತ ಸಂಪೂರ್ಣ ಮಾಹಿತಿಗಾಗಿ ಗಮನಿಸಿ: http://davangereuniversity.ac.in/ug-syllabus/

Q14. ನಾನು ಬಿಎಸ್‌ಸಿ ಮುಗಿಸಿ ಮುಂದೆ ಎಂಎಸ್‌ಸಿ (ಫೊರೆನ್ಸಿಕ್ ಸೈನ್ಸ್) ಮಾಡುವ ಇಚ್ಛೆ ಇದೆ. ಈ ಕೋರ್ಸ್ಗೆ ಹೇಗೆ ಸೇರಬಹುದು?

ಅಪರಾಧಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ವಿಧಿ ವಿಜ್ಞಾನ (ಫೊರೆನ್ಸಿಕ್ ಸೈನ್ಸ್), ಬೇಡಿಕೆಯಲ್ಲಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಸ್ವಾಭಾವಿಕ ಅಸಕ್ತಿಯಿದ್ದು, ವೃತ್ತಿಯ ಯಶಸ್ಸಿಗೆ ಬೇಕಾಗುವ ಕೌಶಲಗಳೆಂದರೆ ತಾರ್ಕಿಕ ಯೋಚನಾ ಶಕ್ತಿ, ವಿವರಗಳ ಕಡೆ ಗಮನ, ಒತ್ತಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ಸಮಯದ ನಿರ್ವಹಣೆ ಇತ್ಯಾದಿ. ಸಾಮಾನ್ಯವಾಗಿ, ಕಾಲೇಜು/ವಿಶ್ವವಿದ್ಯಾಲಯವನ್ನು ಅವಲಂಬಿಸಿ ಪ್ರವೇಶ ಪರೀಕ್ಷೆ/ನೇರವಾದ ಪ್ರವೇಶಾತಿಯಿರುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: https://collegedunia.com/courses/master-of-science-msc-forensic-science    

Q15. ಸರ್, ನಾನು ಎಂಜಿನಿಯರಿAಗ್ ಪದವಿಯ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆದುಕೊಳ್ಳುತ್ತಿದ್ದೇನೆ. ಇದೇ ಸಮಯದಲ್ಲಿ, ಕಾನೂನು ಪದವಿಯನ್ನು ಕೂಡಾ ಪಡೆಯಬೇಕೆಂದುಕೊAಡಿರುವೆ. ಕಾನೂನು ಕಾಲೇಜುಗಳ ಬಗ್ಗೆ ಮಾಹಿತಿ ನೀಡಿ.

ಕಾನೂನು ವೃತ್ತಿಗಾಗಿ, ಯಾವುದಾದರೂ ಪದವಿಯ ನಂತರ 3 ವರ್ಷದ ಎಲ್‌ಎಲ್‌ಬಿ ಕೋರ್ಸ್ ಮಾಡಬೇಕು.

ಸಾಮಾನ್ಯವಾಗಿ ಈ ಕೋರ್ಸಿಗೆ ಸಿಎಲ್‌ಎಟಿ/ಎಲ್‌ಎಸ್‌ಎಟಿ ಪ್ರವೇಶ ಪರೀಕ್ಷೆ ಬರೆಯಬೇಕು. ಆದರೆ, ಕೆಲವು ಕಾಲೇಜುಗಳಲ್ಲಿ ನೇರವಾಗಿಯೂ ಪ್ರವೇಶಾತಿಯಾಗುತ್ತದೆ. ಪ್ರಮುಖವಾಗಿ, ನೀವು ಮಾಡುವ ಕೋರ್ಸಿಗೆ, ಬಾರ್ ಕೌಂಸಿಲ್ ಅಫ್ ಇಂಡಿಯ ಮಾನ್ಯತೆಯಿರಬೇಕು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://law.careers360.com/colleges/list-of-llb-colleges-in-karnataka

Q16. ನಾನು 2021 ರಲ್ಲಿ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಸೇರ್ಪಡೆಯಾಗಿರುತ್ತೇನೆ. ಆ ಸಮಯದಲ್ಲಿ, ನಾನು ಪದವಿಯ 5 ನೇ ಸೆಮಿಸ್ಟರ್‌ನಲ್ಲ್ಲಿ ಓದುತ್ತಿದ್ದೆ. ಹಾಗಾಗಿ ಈ ಸಲ 6 ನೇ ಸೆಮಿಸ್ಟರ್ ಪರೀಕ್ಷೆ ಬರೆಯಬಹುದೇ? ಇದರಿಂದ ಮುಂದೆ ಪದವಿಯ ಮಾನ್ಯತೆ ಸರಿಯಾಗಿರುವುದೇ?

ನಮಗಿರುವ ಮಾಹಿತಿಯಂತೆ, ನಿಮ್ಮ ಇಲಾಖೆಯ ಅನುಮತಿಯನ್ನು ತೆಗೆದುಕೊಂಡು ಪರೀಕ್ಷೆಯನ್ನು ಬರೆಯಬಹುದು. ಪದವಿಯನ್ನು ಗಳಿಸಿದ ನಂತರ ಮಾನ್ಯತೆಯ ಸಮಸ್ಯೆ ಉದ್ಭವಿಸುವುದಿಲ್ಲ.

ನಾನು ಬಿಎಸ್‌ಸಿ(ಪಿಎಂಎಸ್) ಮುಗಿಸಿ, ಕೆಎಎಸ್‌ಗೆ ಕೋಚಿಂಗ್ ತೆಗೆದುಕೊಳ್ಳುತ್ತಿದ್ದೇನೆ. ನನಗೆ ಖಾಸಗಿಯಾಗಿ ಭೌತಶಾಸ್ತçದಲ್ಲಿ ಎಂಎಸ್‌ಸಿ ಮಾಡಬೇಕೆಂದಿದೆ. ಈ ಬಗ್ಗೆ ಮಾಹಿತಿ ನೀಡಿ.

ಇಂದಿರಾ ಗಾಂಧಿ ರಾಷ್ಟಿçÃಯ ಮುಕ್ತ ವಿಶ್ವವಿದ್ಯಾಲಯ ಸೇರಿದಂತೆ ಯುಜಿಸಿ ಮಾನ್ಯತೆ ಪಡೆದ ಅನೇಕ ವಿಶ್ವವಿದ್ಯಾಲಯಗಳಲ್ಲಿ, ದೂರಶಿಕ್ಷಣದ ಮೂಲಕ ಎಂಎಸ್‌ಸಿ (ಭೌತಶಾಸ್ಟ್ರ) ಮಾಡಬಹುದು.

Q17. ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಓದುತ್ತಿದ್ದೇನೆ. ಪರೀಕ್ಷೆಗೆ ಸಾಧ್ಯವಾದಷ್ಟು ಓದಿದ್ದೇನೆ; ಕಡಿಮೆ ಅಂಕಗಳು ಬಂದರೆ ಆತ್ಮಹತ್ಯೆ ಮಾಡಿಕೊಳ್ಳೋಣ ಅಂತ ಅನಿಸುತ್ತಿದೆ. ನನಗೆ ವಿಎಫ್‌ಎಕ್ಸ್/ಅನಿಮೇಷನ್ ಕ್ಷೇತ್ರದಲ್ಲಿ ಆಪಾರ ಜ್ಞಾನ ಇದೆ. ಆದರೆ ಮನೆಯಲ್ಲಿ ಈ ಕ್ಷೇತ್ರಕ್ಕೆ ಬೆಲೆ ಕೊಡುತ್ತಿಲ್ಲ. ನೀನು ಎಂಜಿನಿಯರಿಂಗ್ ಓದು ಅಂತ ಹೇಳುತ್ತಿದ್ದಾರೆ. ಆದರೆ, ನನಗೆ ಇಷ್ಟ ಇಲ್ಲ. ನಾನು ಏನು ಮಾಡಲಿ? ಜೀವನದಲ್ಲಿ ಅಂಕಗಳು ಬಹು ಮುಖ್ಯವೇ?

ಪರೀಕ್ಷೆಗಳ ಅಂಕಪಟ್ಟಿಯೇ ಜೀವನದ ಸರ್ವಸ್ವವಲ್ಲ. ನಮ್ಮ ದೇಶದ ಶ್ರೇಷ್ಟ ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು, ಆಟಗಾರರು, ಚಿಂತಕರು, ಸಾಹಿತಿಗಳು ರ‍್ಯಾಂಕ್ ಪಡೆದೇ ಸಾಧಕರಾಗಲಿಲ್ಲ. ಅವರಲ್ಲಿ ಹೆಚ್ಚಿನವರು, ಬದುಕಿನ ಅನುಭವದಿಂದ, ನಿರಂತರ ಪರಿಶ್ರಮದಿಂದ ಕಲಿತವರು.

ಆದ್ದರಿಂದ, ನೀವು ವೃತ್ತಿಯಲ್ಲೂ, ವೈಯಕ್ತಿಕ ಜೀವನದಲ್ಲೂ ಬೆಳೆದು ಸಂತೃಪ್ತಿಯನ್ನು ಪಡೆಯಬೇಕಾದರೆ, ನಿಮಗೆ ಆಸಕ್ತಿಯಿರುವ, ಇಷ್ಟವಿರುವ, ಸ್ವಾಭಾವಿಕ ಪ್ರತಿಭೆಯಿರುವ ವೃತ್ತಿಯನ್ನೇ ಅರಸಬೇಕು. ಹಾಗಾಗಿ, ನಿಮ್ಮ ಆಸಕ್ತಿ, ಅಭಿರುಚಿ, ವೃತ್ತಿಯ ಆಯ್ಕೆಗೆ ಪೂರಕವಾಗುವ ಸಾಮರ್ಥ್ಯ ಮತ್ತು ಸನ್ನದ್ದತೆಯನ್ನು ನಿಮ್ಮ ಪೋಷಕರಿಗೆ ಮನವರಿಕೆ ಮಾಡಿ, ಅವರ ಆತಂಕವನ್ನು ಹೋಗಲಾಡಿಸಿ. ಏಕೆಂದರೆ, ಮಕ್ಕಳ ಭವಿಷ್ಯದ ಬಗ್ಗೆ ಪೋಷಕರ ಆಸಕ್ತಿ, ಚಿಂತನೆ, ಆತಂಕ ಇವೆಲ್ಲವೂ ಸಾಮಾನ್ಯ. ಒಂದು ಮುಕ್ತ ವಾತಾವರಣದಲ್ಲಿ ಪರಸ್ಪರ ಚರ್ಚಿಸಿ, ವೃತ್ತಿಯ ಆಯ್ಕೆ ಮತ್ತು ಯೋಜನೆಯನ್ನು ಮಾಡಿ, ಅದರಂತೆ ಕೋರ್ಸ್ ಆಯ್ಕೆಯನ್ನು ಮಾಡಿ, ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ.

ಮುಖ್ಯವಾಗಿ, ಆತ್ಮಹತ್ಯೆಯಂತಹ ಕ್ಷಣಿಕ ನಕಾರಾತ್ಮಕ ಆಲೋಚನೆಯಿಂದ ದೂರ ಸರಿದು, ಸಕಾರಾತ್ಮಕ ದೃಷ್ಟಿಕೋನ ಉಳ್ಳವರಾಗಿ. ಮನೋವಿಜ್ಞಾನಿಗಳ ಅಭಿಪ್ರಾಯದಂತೆ ಸ್ವ-ಸಲಹೆಗಳು [ಆಟೋ ಸಜೆಷನ್], ಆಂತರಿಕ ಪ್ರೇರಣೆಗೆ ಪ್ರಯೋಜನಕಾರಿ. ಉದಾಹರಣೆಗೆ, ‘ಏಷ್ಟೇ ಕಷ್ಟವಾದರೂ ನಾನು ನನ್ನ ವೃತ್ತಿಯ ಗುರಿಯಿಂದ ವಿಮುಖನಾಗುವುದಿಲ್ಲ’, ಎನ್ನುವ ಚಿಂತನೆಗಳು ನಿಮಗೆ ಪ್ರೇರಣಕಾರಿ. ನಿಮ್ಮ ಸಾಮರ್ಥ್ಯದಲ್ಲಿ ನಂಬಿಕೆ, ವಿಶ್ವಾಸವನ್ನು ಬೆಳೆಸಿಕೊಂಡರೆ, ನಿಮ್ಮ ಪೋಷಕರ ಮನವೊಲಿಕೆ ಸುಲಭವಾಗುತ್ತದೆ. ವೃತ್ತಿ ಯೋಜನೆಯನ್ನು ಮಾಡುವುದರ ಕುರಿತ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ:

https://www.youtube.com/c/EducationalExpertManagementCareerConsultant

ಹೆಚ್ಚಿನ ಸಹಾಯ, ಮಾರ್ಗದರ್ಶನಕ್ಕಾಗಿ ಸಂಕೋಚವಿಲ್ಲದೆ, ಈ ಅಂಕಣದ ಮೂಲಕ ನಮ್ಮನ್ನು ಸಂಪರ್ಕಿಸಿ.

Q18. ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಮುಂದೆ ಜಿಲ್ಲಾಧಿಕಾರಿ ಆಗಬೇಕೆನ್ನುವುದು ನನ್ನ ಆಸೆ. ಅದಕ್ಕಾಗಿ ಹೇಗೆ ತಯಾರಿ ಮಾಡಬೇಕು ಎಂದು ತಿಳಿಸಿಕೊಡಿ.

ಪಿಯುಸಿ ಓದುತ್ತಿರುವ ನಿಮಗೆ ಜಿಲ್ಲಾಧಿಕಾರಿ ಆಗಬೇಕೆಂದಿರುವ ಕನಸು ಶ್ಲಾಘನೀಯ. ಯಾವುದೇ ಪದವಿಯನ್ನು ಪೂರ್ಣಗೊಳಿಸಿದ ನಂತರ ಯುಪಿಎಸ್‌ಸಿ ನಡೆಸುವ ಮೂರು ಹಂತದ ನಾಗರಿಕ ಸೇವಾ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಮೊದಲನೆ ಹಂತದಲ್ಲಿ ಪೂರ್ವಭಾವಿ ಪರೀಕ್ಷೆ, ಎರಡನೇ ಹಂತದಲ್ಲಿ ಮುಖ್ಯ ಪರೀಕ್ಷೆ ಹಾಗು ಮೂರನೇ ಹಂತದಲ್ಲಿ ಸಂದರ್ಶನವನ್ನು ನಡೆಸಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯು ಬಹು ಆಯ್ಕೆ ಮಾದರಿಯಲ್ಲಿದ್ದು, ಮುಖ್ಯ ಪರೀಕ್ಷೆಯು ವಿಸ್ತöÈತ ಮಾದರಿಯಲ್ಲಿರುತ್ತದೆ. ಮುಖ್ಯ ಪರೀಕ್ಷೆಯಲ್ಲಿ ನೀವು ಒಂದು ಐಚ್ಛಿಕ ವಿಷಯವನ್ನು ಆಯ್ದುಕೊಳ್ಳಬೇಕು. ಈ ಪರೀಕ್ಷೆಯಲ್ಲಿ ಅತ್ಯುನ್ನತ ರ‍್ಯಾಂಕ್ ಗಳಿಸಿದರೆ ನಿಮ್ಮ ಆಸೆ ನೆರವೇರುವ ಸಾಧ್ಯತೆಯಿರುತ್ತದೆ. ಇಲ್ಲದಿದ್ದರೆ, ಐಎಎಸ್ ಅಧಿಕಾರಿಯಾಗಿ ಸರ್ಕಾರದ ಸೇವೆಯಲ್ಲಿದ್ದುಕೊಂಡು ನಿಮ್ಮ ದಕ್ಷತೆ ಮತ್ತು ಹಿರಿತನದ ಆಧಾರದ ಮೇಲೆ ಕಾಲಕ್ರಮೇಣ ಜಿಲ್ಲಾಧಿಕಾರಿಯಾಗಬಹುದು.

ಕಠಿಣವಾದ ಈ ಪರೀಕ್ಷೆಯ ಯಶಸ್ಸಿಗೆ ಸೂಕ್ತವಾದ ಕಾರ್ಯತಂತ್ರ, ಸಾಕಷ್ಟು ಪರಿಶ್ರಮ ಹಾಗೂ ಏಕಾಗ್ರತೆಯಿರಬೇಕು. ಇದಕ್ಕೆ ಬೇಕಾದ ಪುಸ್ತಕಗಳನ್ನು ಖರೀದಿಸಿ ಸ್ವತಂತ್ರವಾಗಿ ತಯಾರಾಗಬಹುದು ಅಥವಾ ಹೆಚ್ಚಿನ ಮಾರ್ಗದರ್ಶನಕ್ಕಾಗಿ ಕೋಚಿಂಗ್ ಇನ್‌ಸ್ಟಿಟ್ಯೂಟ್ ಸೇರಬಹುದು. ಈ ವೃತ್ತಿಯಲ್ಲಿ ಯಶಸ್ಸನ್ನು ಗಳಿಸಲು, ಆಡಳಿತಾತ್ಮಕ ವಿಷಯಗಳ ಕುರಿತ ಜ್ಞಾನ ಮತ್ತು ಕೌಶಲಗಳ ಜೊತೆಗೆ ಸಕಾರಾತ್ಮಕ ಆಲೋಚನೆ, ನಿಷ್ಠೆ, ಪ್ರಾಮಾಣಿಕತೆ, ಸ್ವಯಂಪ್ರೇರಣೆ ಮತ್ತು ಆತ್ಮವಿಶ್ವಾಸವಿರಬೇಕು. ಶುಭಹಾರೈಕೆಗಳು.

Q19. ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಶೇ 50 ಬೋರ್ಡ್ ಪರೀಕ್ಷೆಯ ಅಂಕಗಳನ್ನು ಪರಿಗಣಿಸುವ ಬಗ್ಗೆ ಮತ್ತು ರ‍್ಯಾಂಕಿಂಗ್ ಪ್ರಕ್ರಿಯೆ ಬಗ್ಗೆ ತಿಳಿಸಿ.

ಎಂಜಿನಿಯರಿಂಗ್, ಬಿಫಾರ್ಮಾ, ಬಿಎಸ್‌ಸಿ (ಕೃಷಿ) ಇತ್ಯಾದಿ ಕೋರ್ಸ್ಗಳ ಪ್ರವೇಶವನ್ನು ನಿರ್ಧರಿಸಲು ಸಿಇಟಿ ಪರಿಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯೋಜಿಸುತ್ತದೆ. ಉದಾಹರಣೆಗೆ, ವಿದ್ಯಾರ್ಥಿಗಳು, ಸಿಇಟಿ-2022 ರಲ್ಲಿ ಭೌತಶಾಸ್ಟ್ರ ರಸಾಯನಶಾಸ್ಟ್ರ, ಮತ್ತು ಗಣಿತಶಾಸ್ಟ್ರ ವಿಷಯಗಳಲ್ಲಿ ಗಳಿಸಿದ ಅಂಕಗಳನ್ನು ಮತ್ತು ಅರ್ಹತಾ ಪರೀಕ್ಷೆ(ಪಿಯುಸಿ/ತತ್ಸಮಾನ-ಕನಿಷ್ಠ ಶೇಕಡ 45 ಅಂಕಗಳು) ಯಲ್ಲಿ ಭೌತಶಾಸ್ತç, ರಸಾಯನಶಾಸ್ತç ಮತ್ತು ಗಣಿತಶಾಸ್ತç ವಿಷಯಗಳಲ್ಲಿ ಗಳಿಸಿದ ಅಂಕಗಳನ್ನು ಸಮಾನ ಪ್ರಮಾಣದಲ್ಲಿ ಪರಿಗಣಿಸಿ ಎಂಜಿನಿಯರಿಂಗ್ ರ‍್ಯಾಂಕ್ ಪಟ್ಟಿಯನ್ನು ನಿರ್ಧರಿಸಲಾಗುವುದು. ಸಿಇಟಿ ಪರೀಕ್ಷೆಯಲ್ಲಿ ಇಂತಿಷ್ಟೇ ಅಂಕಗಳನ್ನು ಪಡೆಯಬೇಕೆಂಬ ನಿಯಮವಿಲ್ಲ. ಇದೇ ರೀತಿ ಇನ್ನಿತರ ಕೋರ್ಸ್ಗಳಿಗೂ ನಿಗದಿತ ಮಾನದಂಡದಂತೆ ರ‍್ಯಾಂಕ್ ಪಟ್ಟಿಯನ್ನು ನಿರ್ಧರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://cetonline.karnataka.gov.in/kea/cet2022

Q20. ನಾನು ಎರಡನೇ ಬಿಕಾಂ ಓದುತ್ತಿದ್ದೇನೆ. ಪದವಿ ಮುಗಿದ ಮೇಲೆ ಬ್ಯಾಂಕಿಂಗ್ ಕೋರ್ಸ್ ಮಾಡಬೇಕೆಂದಿದ್ದೇನೆ. ಬ್ಯಾಂಕ್ ಕ್ಷೇತ್ರಕ್ಕೆ ಯಾವ ರೀತಿ ತಯಾರಿ ನಡೆಸಬೇಕು? ಯಾವ ಪರೀಕ್ಷೆ ಬರೆಯಬೇಕು? ದಯವಿಟ್ಟು ಮಾಹಿತಿ ನೀಡಿ.

ಬಿಕಾಂ ಪದವಿಯ ನಂತರ ಐಬಿಪಿಎಸ್ ಅಥವಾ ಆಯಾ ಬ್ಯಾಂಕ್ ನಡೆಸುವ ಅರ್ಹತಾ ಪರೀಕ್ಷೆಯ ಮುಖಾಂತರ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಹುದ್ದೆಗಳಿಗೆ ಪ್ರಯತ್ನಿಸಬಹುದು. ಸಾಮಾನ್ಯವಾಗಿ, ಪ್ರೊಬೆಷನರಿ ಆಫೀಸರ್ ಹುದ್ದೆಗೆ ಮೂರು ಹಂತದಲ್ಲಿ ಆಯ್ಕೆ ಪ್ರಕ್ರಿಯೆ ಇರುತ್ತದೆ.

  • ಪೂರ್ವಭಾವಿ ಪರೀಕ್ಷೆ
  • ಮುಖ್ಯ ಪರೀಕ್ಷೆ
  • ವೈಯಕ್ತಿಕ ಸಂದರ್ಶನ

ವೈಯಕ್ತಿಕ ಸಂದರ್ಶನದ ನಂತರ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಸಾಮಾನ್ಯವಾಗಿ, ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಆಗಿರಬೇಕು; ಗರಿಷ್ಠ 30 ವರ್ಷ ವಯೋಮಿತಿ ಮೀರಿರಬಾರದು. ಈ ಆಯ್ಕೆ ಪ್ರಕ್ರಿಯೆಯ ಹಂತಗಳು, ಮಾದರಿ, ಪಠ್ಯಕ್ರಮ, ಅವಕಾಶಗಳು, ಸವಾಲುಗಳು ಇತ್ಯಾದಿಗಳನ್ನು ಅರಿತು ಖುದ್ದಾಗಿ ನೀವೇ ತಯಾರಾಗಬಹುದು ಅಥವಾ ಕೋಚಿಂಗ್ ಇನ್‌ಸ್ಟಿಟ್ಯೂಟ್ ಸೇರಬಹುದು. ಉನ್ನತ ಶಿಕ್ಷಣಕ್ಕಾಗಿ ಎಂಬಿಎ (ಬ್ಯಾಂಕಿಂಗ್ ಮತ್ತು ಫೈನಾನ್ಸ್) ಮಾಡಬಹುದು.

ನಾನು ಕರ್ನಾಟಕ ಪೊಲೀಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ ನನ್ನ ಪ್ರಾಥಮಿಕ ಶಿಕ್ಷಣ ಅಂದರೆ 5 ನೇ ತರಗತಿಯವರೆಗೆ ಆಂಧ್ರಪ್ರದೇಶದ ಗಡಿನಾಡಿನ ಕನ್ನಡ ಮಾದ್ಯಮ ಶಾಲೆಯಲ್ಲಿ ಅಭ್ಯಾಸ ಮಾಡಿದ್ದು, ನಂತರದ ವಿದ್ಯಾಭ್ಯಾಸವನ್ನು ಕರ್ನಾಟಕದಲ್ಲಿ ಮಾಡಿದ್ದೇನೆ, ನನ್ನ ಈ ಪೊಲೀಸ್ ಪರೀಕ್ಷೆಗೆ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳನ್ನು ತಿಳಿಸಿ.

ನೀವು ಯಾವ ಪೊಲೀಸ್ ಹುದ್ದೆಯ ಪರೀಕ್ಷೆಗೆ ತಯಾರಾಗುತ್ತಿದ್ದೀರಿ ಎಂದು ತಿಳಿಯದು. ನಮಗಿರುವ ಮಾಹಿತಿಯಂತೆ ನೀವು ಕನಿಷ್ಠ 6 ವರ್ಷ ಸತತವಾಗಿ ಕರ್ನಾಟಕದ ನಿವಾಸಿಯಾಗಿದ್ದರೆ, ನಿವಾಸಿ ಪ್ರಮಾಣ ಪತ್ರವನ್ನು ಸಲ್ಲಿಸಿ ಪೊಲೀಸ್ ಇಲಾಖೆಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಕನ್ನಡ ಆಡಳಿತ ಭಾಷೆಯಾಗಿರುವುದರಿಂದ, ಕನ್ನಡ ಮಾತನಾಡುವ, ಓದುವ ಮತ್ತು ಬರೆಯುವ ನಿಪುಣತೆಯಿರಬೇಕು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://prepp.in/karnataka-police-exam

Q21. ನಾನು ಎಂಎ ಪದವಿ ಮುಗಿಸಿದ್ದೇನೆ. ನಾನು ಯಾವ ಸರ್ಕಾರಿ ಹುದ್ದೆಗಳಿಗೆ ಪ್ರಯತ್ನಿಸಬಹುದು?

ನಿಮಗೆ ಸರ್ಕಾರದ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಎಂದು ತಿಳಿದು ದೀರ್ಘಾವದಿ ವೃತ್ತಿಯೋಜನೆಯನ್ನು ಮಾಡಬೇಕು. ಅದರಂತೆ, ಆಯಾ ಕ್ಷೇತ್ರ/ಇಲಾಖೆಗೆ ಸಂಬಂಧಪಟ್ಟ ಹುದ್ದೆಗಳಿಗೆ ಪ್ರಯತ್ನಿಸಬಹುದು. ಸರ್ಕಾರದ ಪ್ರತಿಷ್ಟಿತ ಹುದ್ದೆಗಳಿಗಾಗಿ, ಕೆಪಿಎಸ್‌ಸಿ/ಯುಪಿಎಸ್‌ಸಿ ಪರೀಕ್ಷೆಗಳ ಮುಖಾಂತರ ಪ್ರಯತ್ನಿಸಿ.