ಕಳೆದ ಕೆಲವು ವಾರಗಳಲ್ಲಿ ನಡೆಸಿದ ಸಂವಾದ ಮತ್ತು ಪ್ರಶ್ನೋತರಗಳನ್ನು ಅವಲೋಕಿಸಿದ ನಂತರ ಅನೇಕ ವಿದ್ಯಾರ್ಥಿಗಳು ಭವಿಷ್ಯದ ವೃತ್ತಿ ಮತ್ತು ಕೋರ್ಸ್ ಆಯ್ಕೆಯಲ್ಲಿ ಎಡವುತ್ತಿರುವುದು ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳ ಕೆಲವು ಪ್ರತಿಕ್ರಿಯೆಯನ್ನು ಗಮನಿಸಿದರೆ ಈ ಸಂದೇಹಗಳು ಖಾತರಿಯಾಗುವಂತಿದೆ.
- ಪಿಯುಸಿ (ಆಟ್ರ್ಸ್) ನಂತರ ಯಾವ ಕೋರ್ಸ್ ಮಾಡಬಹುದು? ಉದ್ಯೋಗಾವಕಾಶಗಳೇನು?
- ನಾನು ಪಿಯುಸಿ (ವಿಜ್ಞಾನ) ಮಾಡಿದ್ದೇನೆ. ಮುಂದೆ ಸಿಎ ಮಾಡಬಹುದೇ?
- ನಾನು ಬಿಕಾಂ ಮಾಡಿದ್ದೇನೆ. ಈಗ ಎಂಎ (ಅರ್ಥಶಾಸ್ತ್ರ) ಮಾಡಬಹುದೇ?
ಈ ಪ್ರಶ್ನೆಗಳು ಉದಾಹರಣೆಗಳಷ್ಟೇ; ಹಾಗೂ, ಇಂತಹ ಪ್ರಶ್ನೆಗಳು, ಗೊಂದಲಗಳು ಬರಬಾರದೆಂದಲ್ಲ. ವಾಸ್ತವವಾಗಿ, ವೃತ್ತಿ ಮತ್ತು ಕೋರ್ಸ್ ಆಯ್ಕೆಯಲ್ಲಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿದರೆ ಇಂತಹ ಪ್ರಶ್ನೆಗಳು ಉದ್ಭವಿಸುವುದಿಲ್ಲ.
ಪಿಯುಸಿ ನಂತರದ ಕೋರ್ಸ್ ಆಯ್ಕೆಯಲ್ಲಿ ಇನ್ನೊಂದು ಪ್ರಮುಖ ಸಮಸ್ಯೆಯಿದೆ. ಅನೇಕ ವರ್ಷಗಳಿಂದ, ಮೂಲ ವಿಜ್ಞಾನ ಮತ್ತು ಮಾನವಿಕ ಶಾಸ್ತ್ರದ ಕೋರ್ಸ್‍ಗಳಿಂದ ದೂರ ಸರಿಯುತ್ತಿರುವ ವಿದ್ಯಾರ್ಥಿಗಳ ಆಕರ್ಷಣೆ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕೋರ್ಸ್‍ಗಳತ್ತ ಮುಂದುವರಿಯುತ್ತಿದೆ. ಆರೋಗ್ಯ ಮತ್ತು ಸ್ವಾಸ್ಥ್ಯ ವಲಯದಲ್ಲಿರುವ ಸವಾಲು ಮತ್ತು ಅವಕಾಶಗಳನ್ನು ಗಮನಿಸಿದರೆ ಮೆಡಿಕಲ್ ವೃತ್ತಿಯ ಆಕರ್ಷಣೆ ಸೂಕ್ತವೆನಿಸಿದರೂ ಎಂಜಿನಿಯರಿಂಗ್ ಕೋರ್ಸ್ ಮತ್ತು ವೃತ್ತಿಯ ವಾಸ್ತವಾಂಶಗಳೇ ಬೇರೆ. ಬೇಡಿಕೆಗಿಂತಲೂ ಅಧಿಕವಾದ ಪೂರೈಕೆಯಿಂದ ಎಂಜಿನಿಯರಿಂಗ್ ಪದವೀಧರರಲ್ಲಿ ನಿರುದ್ಯೋಗ ಹೆಚ್ಚಾಗಿ ವಿಧಿಯಿಲ್ಲದೆ ಇನ್ನಿತರ ವೃತ್ತಿಗಳನ್ನು ಅನುಸರಿಸುತ್ತಿದ್ದಾರೆ. ಜೊತೆಗೆ, ಬಹುತೇಕ ಎಂಜಿನಿಯರಿಂಗ್ ಪದವೀಧರರಲ್ಲಿ ವೃತ್ತಿ ಸಂಬಂಧಿಸಿದ ಕೌಶಲಗಳ ಕೊರತೆಯಿಯಿದೆಯೆಂಬ ಉದ್ದಿಮೆಗಳ ಅಭಿಪ್ರಾಯವೂ ಇದೆ. ಈ ಕಾರಣಗಳಿಂದ, ಎಂಜಿನಿಯರಿಂಗ್ ಸೀಟುಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗದೆ ಕಳೆದ ಐದು ವರ್ಷಗಳಲ್ಲಿ ದೇಶದ ಸುಮಾರು 400 ಎಂಜಿನಿಯರಿಂಗ್ ಕಾಲೇಜುಗಳು ಮುಚ್ಚಿವೆ.
ಪಿಯುಸಿ ನಂತರದ ಶೈಕ್ಷಣಿಕ ಅವಧಿ 5-8 ವರ್ಷಗಳಷ್ಟೇ; ಆದರೆ, ವೃತ್ತಿಯೆಂದರೆ 30-40 ವರ್ಷಗಳ ದೀರ್ಘಾವಧಿ ಪಯಣ. ಆದ್ದರಿಂದ, ವಿದ್ಯಾರ್ಥಿಗಳು ಖಚಿತವಾದ ವೃತ್ತಿಯ ಆಯ್ಕೆಯ ನಂತರವೇ ಕೋರ್ಸ್ ಆಯ್ಕೆ ಮಾಡಬೇಕು. ಹಾಗಾದರೆ, ಸರಿಯಾದ ವೃತ್ತಿ ಮತ್ತು ಕೋರ್ಸ್ ಆಯ್ಕೆಯ ಪ್ರಕ್ರಿಯೆ ಹೇಗೆ?
- ವೃತ್ತಿ ಮತ್ತು ಕೋರ್ಸ್ ಆಯ್ಕೆ: ನೀವು ಇಷ್ಟ ಪಡುವ ವೃತ್ತಿಗೂ ನಿಮ್ಮಲ್ಲಿರುವ ಪ್ರತಿಭೆಗೂ ಸಾಮ್ಯತೆ ಇರಬೇಕು. ಶಾಲಾ ಕಾಲೇಜುಗಳಲ್ಲಿ ಸೌಲಭ್ಯವಿದ್ದರೆ ಅಥವಾ ಆನ್‍ಲೈನ್‍ನಲ್ಲಿ ಆಪ್ಟಿಟ್ಯೂಡ್ ಟೆಸ್ಟ್ ಮಾಡಿ, ನಿಮ್ಮ ಸಾವi.ಥ್ರ್ಯ ಮತ್ತು ದೌರ್ಬಲ್ಯಗಳನ್ನು ಅರಿಯಿರಿ. ಇದರ ಆಧಾರದ ಮೇಲೆ ಸೂಕ್ತವಾದ ವೃತ್ತಿ ಮತ್ತು ಅದರಂತೆ ಕೋರ್ಸ್ ಆಯ್ಕೆಯಿರಲಿ. ಪ್ರಮುಖವಾಗಿ, ಶಿಕ್ಷಣ ಮುಗಿಯುವ ವೇಳೆಗೆ [5-8 ವರ್ಷ] ಆ ವೃತ್ತಿಯ ಕ್ಷೇತ್ರಕ್ಕೆ ಬೇಡಿಕೆಯಿರುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ. ಶೈಕ್ಷಣಿಕ ಜೀವನದ ನಿರ್ಣಾಯಕ ಹಂತಗಳಲ್ಲಿ ನಿಮಗೆ ಮಾರ್ಗದರ್ಶನ ಬೇಕಾಗುತ್ತದೆ. ಆದ್ದರಿಂದ, ಮಾರ್ಗದರ್ಶಕರನ್ನು ಗುರುತಿಸಿ.
- ಜೀವನದ ಧ್ಯೇಯಗಳನ್ನು ನಿಶ್ಚಯಿಸಿ: ನಿಮ್ಮ ವೃತ್ತಿ ಮತು ಖಾಸಗಿ ಜೀವನದ ಧ್ಯೇಯಗಳೇನು? ಶಿಕ್ಷಣದ ನಂತರದ ಬದುಕಿನ ನಿಮ್ಮ ಕನಸುಗಳೇನು? ಬದುಕಿಗೆ ಅತಿ ಮುಖ್ಯವಾದ, ಈ ಪ್ರಶ್ನೆಗಳ ಬಗ್ಗೆ ಚಿಂತಿಸಿ, ಉತ್ತರಗಳನ್ನು ಕಂಡುಕೊಳ್ಳಿ.
- ಶಿಕ್ಷಣದ ಅವಶ್ಯಕತೆಗಳನ್ನು ತೀರ್ಮಾನಿಸಿ: ಸ್ನಾತಕೋತ್ತರ ಪದವಿ ಅಥವಾ ಡಾಕ್ಟರೇಟ್ ಮಾಡಬೇಕೆ? ವಿದೇಶದಲ್ಲಿ ಉನ್ನತ ಶಿಕ್ಷಣದ ಅವಶ್ಯಕತೆಯಿದೆಯೇ? ಜೀವನದ ಧ್ಯೇಯಗಳ ಪ್ರಕಾರ ಎಲ್ಲಿಯವರೆಗೆ ಓದಬೇಕು ಮತ್ತು ಹೆಚ್ಚುವರಿ ಭಾಷೆ, ಕೌಶಲಗಳ ಕೋರ್ಸ್ ಅವಶ್ಯಕತೆಗಳ ಬಗ್ಗೆ ನಿರ್ಧರಿಸಿ.
- ಸ್ಪರ್ಧಾತ್ಮಕ ಪರೀಕ್ಷೆಗಳು: ನಿಮ್ಮ ಕೋರ್ಸಿಗೆ ತಕ್ಕಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಸವಾಲುಗಳನ್ನು ಗುರುತಿಸಿ, ಅಗತ್ಯಕ್ಕೆ ಅನುಗುಣವಾಗಿ ತಯಾರಾಗಿ.
- ಕಾಲೇಜುಗಳ ಅದ್ಯತೆಗಳನ್ನು ಪರಿಗಣಿಸಿ: ಕಾಲೇಜಿನ ಸಂಪನ್ಮೂಲಗಳು, ಅಧ್ಯಾಪಕ ವರ್ಗ, ಪ್ಲೇಸ್‍ಮೆಂಟ್, ಗ್ರಂಥಾಲಯ, ಶುಲ್ಕಗಳು, ರ್ಯಾಂಕಿಂಗ್ ಇತ್ಯಾದಿಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸಿ. ಈ ರ್ಯಾಂಕಿಂಗ್‍ಗಳ ಮಾಹಿತಿ ಅಂತರ್ಜಾಲದಲ್ಲಿ ಸಿಗುತ್ತದೆ. ನಿಮ್ಮ ಆಯ್ಕೆಗಳ ಹಿಂದೆ ಮಾರ್ಗದರ್ಶಕರ ಬೆಂಬಲ ಇರಬೇಕು. ಸ್ವಲ್ಪ ಸಂಶಯವಿದ್ದರೂ, ಖುದ್ದಾಗಿ ಕಾಲೇಜಿಗೆ ಹೋಗಿ ಪರೀಕ್ಷಿಸಿ.
ನಿಮ್ಮ ವೃತ್ತಿಯ ಸಂಪೂರ್ಣ ಯೋಜನೆಯನ್ನು ವಿವರಗಳೊಂದಿಗೆ ಡೈರಿಯಲ್ಲಿ ದಾಖಲಿಸಿ ಆಗಿಂದಾಗ್ಗೆ ಪರಿಶೀಲಿಸುತ್ತಿರಿ.
ಬದುಕಿನ ನಿಮ್ಮ ಕನಸುಗಳು ಮಹತ್ವಾಕಾಂಶೆಯಾಗಿ, ಸಾಧಿಸಬಹುದಾದ ಗುರಿಗಳಾಗಲಿ. ಅದನ್ನು ಸಾಧಿಸಲು ನಿಮ್ಮ ಶಕ್ತಿ, ಸಾಮಥ್ರ್ಯದಲ್ಲಿ ಪ್ರಬಲವಾದ ನಂಬಿಕೆ, ಆತ್ಮವಿಶ್ವಾಸವಿರಲಿ. ಇಂತಹ ಪ್ರಬಲವಾದ ಆತ್ಮವಿಶ್ವಾಸವೇ ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು ಅತ್ಯವಶ್ಯಕವಾದ ಸ್ವಯಂಪ್ರೇರಣೆ.