ಮಾರ್ಕೆಟಿಂಗ್: ಯಶಸ್ಸಿನ ಏಣಿ

ಬೆಂಗಳೂರಿನ ಪ್ರಖ್ಯಾತ ಮ್ಯಾನೇಜ್‍ಮೆಂಟ್ ಕಾಲೇಜಿನ ಉಪನ್ಯಾಸದಲ್ಲಿ ನಡೆದ ಘಟನೆಯಿದು. ಎಲ್ಲಾ ವಿಧ್ಯಾರ್ಥಿಗಳು ಎಂ.ಬಿ.ಎ. ಕೋರ್ಸಿನ ಅಂತಿಮ ಸೆಮೆಸ್ಟರ್‍ನಲ್ಲಿದ್ದು, ಕೆಲವೇ ದಿನಗಳಲ್ಲಿ ನಡೆಯಲಿದ್ದ ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ ಭಾಗವಹಿಸುವ ಉತ್ಸಾಹದಲ್ಲಿದ್ದರು. ಸಭಾಂಗಣದಲ್ಲಿದ್ದ ಸುಮಾರು 60 ವಿಧ್ಯಾರ್ಥಿಗಳಿಗೆ, ಮಾರ್ಕೆಟಿಂಗ್ ವೃತ್ತಿಯ ಬಗ್ಗೆ ತಿಳಿವಳಿಕೆಯನ್ನು ನೀಡುವುದೇ ನನ್ನ ಉಪನ್ಯಾಸದ ಉದ್ದೇಶವಾಗಿತ್ತು.

ನಾನು ವಿಧ್ಯಾರ್ಥಿಗಳನ್ನು ಕೇಳಿದ ಮೊದಲ ಪ್ರಶ್ನೆ: “ನಿಮ್ಮ ಮುಂದಿನ ವೃತ್ತಿಯ ಬಗ್ಗೆ ನೀವು ಈಗಾಗಲೇ ನಿರ್ಧರಿಸಿದ್ದೀರಾ?”

ಸುಮಾರು 45 ವಿಧ್ಯಾರ್ಥಿಗಳು ಕೈಯೆತ್ತಿ ಹೌದೆಂದು ತಿಳಿಸಿದರು. ಆದರೆ, ಈ ವಿಧ್ಯಾರ್ಥಿಗಳಲ್ಲಿ ಯಾರೂ ಸಹ ಮಾರ್ಕೆಟಿಂಗ್ ವೃತ್ತಿಯನ್ನು ಆರಿಸಿಕೊಂಡಿರಲಿಲ್ಲವೆಂದು ತಿಳಿದು ಆಶ್ಚರ್ಯವೇ ಆಯಿತು.

“ಮಾರ್ಕೆಟಿಂಗ್ ವೃತ್ತಿಯ ಬಗ್ಗೆ ನಿಮಗೇನು ತಿಳಿದಿದೆ?” ಎಂದು ಕೇಳಿದೆ.

ಅವರ ಉತ್ತರಗಳು ಹೀಗಿದ್ದವು.

“ಮಾರ್ಕೆಟಿಂಗ್ ಅಂದರೆ ಬೀದಿ-ಬೀದಿಯನ್ನು ಸುತ್ತಬೇಕು” – ಶೃತಿ

“ಅನಿಗದಿತ ಭೇಟಿಗಳಿಂದ ಆಗುವ ಗ್ರಾಹಕರ ತಿರಸ್ಕಾರ, ಅದರಿಂದಾಗುವ ಮಾನಸಿಕ ಒತ್ತಡ ಅಗಾಧ” – ಜಾನ್ಸನ್

“ಈ ಬೀದಿ-ಬೀದಿಗಳನ್ನು ಸುತ್ತುವ ಪರಿಪಾಠ, ವರ್ಷಗಳಾದರೂ ಬದಲಾಗುವುದೇ ಇಲ್ಲ” – ರಾಘವ್

“ಸುಡುಬಿಸಿಲು, ಮಳೆ, ಚಳಿ, ಗಾಳಿಗಳನ್ನು ಲೆಕ್ಕಿಸದೆ, ಮಾಡಬೇಕಾಗುವ ಮಾರ್ಕೆಟಿಂಗ್ ಎಲ್ಲರಿಗೂ ಅಸಾಧ್ಯ” – ಪ್ರಿಯ

“ಮಾರ್ಕೆಟಿಂಗ್‍ನಲ್ಲಿ ಮಾತುಗಾರಿಕೆಯೇ ಬಂಡವಾಳ. ಆದ್ದರಿಂದ ಸಂಕೋಚ ಸ್ವಭಾವದವರಿಗೆ, ಅಂತರ್ಮುಖಿಗಳಿಗೆ ಈ ವೃತ್ತಿ ಆಗದು” – ವಿಜಯ್

ಈ ರೀತಿಯ ಭೀತಿ, ಆತಂಕಗಳೇ ಬಹುತೇಕ ವಿಧ್ಯಾರ್ಥಿಗಳಲ್ಲಿದ್ದುದರಿಂದ ಸರಿಯಾದ ಮಾಹಿತಿಯನ್ನು ಒದಗಿಸಿ, ಅವರ ಆತಂಕಗಳನ್ನು ದೂರಮಾಡುವುದನ್ನೇ ಉಪನ್ಯಾಸದ ಮೊದಲ ಆದ್ಯತೆಯನ್ನಾಗಿಸಿಕೊಂಡೆ.

ದಿನವೆಲ್ಲಾ ಸುತ್ತಬೇಕು

ಈ ವಾದದಲ್ಲಿ ಈಗ ತಿರುಳಿಲ್ಲ. ಒಂದು ಕಾಲದಲ್ಲಿ ಮಾರ್ಕೆಟಿಂಗ್ ಅಂದರೆ, ಗ್ರಾಹಕರನ್ನು ನಿರ್ವಹಿಸುವಲ್ಲಿ ದಿನವೆಲ್ಲಾ ಕಳೆಯುವ ಪರಿಸ್ಥಿತಿಯಿತ್ತು. ಆದರೆ, ಈಗಿನ ಮಾರ್ಕೆಟಿಂಗ್ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿವೆ. ತಂತ್ರಜ್ಞಾನದ ಅಭಿವೃದ್ಧಿಯಿಂದ ಗ್ರಾಹಕರೊಂದಿಗೆ ನಿಗದಿತ ಭೇಟಿಗಳೇ ಹೆಚ್ಚಾಗಿದ್ದು, ಸಣ್ಣ ವಿಷಯಗಳನ್ನು ದೂರವಾಣಿ ಅಥವಾ ಇ-ಮೇಲ್ ಮುಖಾಂತರ ವ್ಯವಹರಿಸುವುದು ವಾಡಿಕೆಯಾಗಿದೆ. ಹಾಗಾಗಿ, ವ್ಯವಹಾರಗಳು ಅಂತಿಮ ಘಟ್ಟವನ್ನು ತಲುಪಿದ ಮೇಲೆ ಅಥವಾ ಗ್ರಾಹಕರು ನಿರ್ಧಾರಗಳನ್ನು ತೆಗೆದುಕೊಳ್ಳುವ ಮನಸ್ಥಿತಿಯಲ್ಲಿರುವಾಗ ಮಾತ್ರ, ಖುದ್ದಾಗಿ ಅವರನ್ನು ಕಾಣುವುದು ಅವಶ್ಯಕ. ಈಗ ವಿಶೇಷವಾಗಿ, ಗ್ರಾಹಕರ ಮಾಹಿತಿಯನ್ನು ಸಂಗ್ರಹಿಸಲು, ಅವರೊಡನೆ ಭೇಟಿಗಳನ್ನು ನಿಗದಿಗೊಳಿಸಲು ಮತ್ತು ಮಾಹಿತಿಯನ್ನು ಗ್ರಾಹಕರಿಗೆ ನೀಡುವುದಕ್ಕಾಗಿಯೇ ಟೆಲಿ ಎಕ್ಸಿಕ್ಯೂಟಿವ್ಸ್‍ಗಳಿರುತ್ತಾರೆ.

ದೈನಂದಿನ ಭೇಟಿಗಳ ನಂತರ, ಇಂದಿನ ದಟ್ಟವಾದ ಟ್ರಾಫಿಕ್‍ನಲ್ಲಿ ಆಗುವ ಸಮಯದ ವ್ಯರ್ಥವನ್ನು ತಡೆಯಲು, ಸಂಜೆ ಕಛೇರಿಗೆ ಮರಳಿ ಅಧಿಕಾರಿಗಳಿಗೆ ವರದಿಯನ್ನು, ಕೊಡುವ ಪರಿಪಾಠವನ್ನು ಹೆಚ್ಚುಕಡಿಮೆ ನಿಲ್ಲಿಸಲಾಗಿದೆ. ಈ ವರದಿಯನ್ನು ದೂರವಾಣಿ ಮತ್ತು ಇಮೇಲ್ ಮುಖಾಂತರ ತಿಳಿಸಿದರೆ ಸಾಮಾನ್ಯವಾಗಿ ಸಾಕಾಗುತ್ತದೆ. ಇನ್ನು ಕೆಲವು ವರ್ಷಗಳಲ್ಲಿ, ಕಛೇರಿಗೆ ವಾರಕ್ಕೊಮ್ಮೆ ಹೋದರೆ ಸಾಕೆನ್ನುವ ಸಾಧ್ಯತೆಗಳಿವೆ.

ನಿಗದಿತ ಭೇಟಿಗಳಿಲ್ಲದೆ, ಆಗುವ ಮಾನಸಿಕ ಒತ್ತಡಗಳು

ನಿಗದಿತ ಭೇಟಿಗಳಿಲ್ಲದೆ ಬರುವ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್‍ಗಳನ್ನು ಗ್ರಾಹಕರು ಕಾಯಿಸುವುದು ಸಾಮಾನ್ಯ. ಸ್ವಾಗತಕಾರರ ಕೊಠಡಿಯಲ್ಲಿ ಕಾಯುತ್ತಾ, ಸಮಯ ವ್ಯರ್ಥವಾಗುವುದು ಸ್ವಲ್ಪ ಮಟ್ಟಿಗೆ ನಿಜವಾದರೂ, ಅನಿಗದಿತ ಭೇಟಿಗಳೇ [ಕೋಲ್ಡ್ ಕಾಲ್] ಹೆಚ್ಚು ಫಲದಾಯಕವೆಂದು, ಅನೇಕ ಸಂಶೋಧನೆಗಳಿಂದಲೂ ಮತ್ತು ನನ್ನ ದೀರ್ಘ ಅನುಭವದಿಂದಲೂ ತಿಳಿದುಬಂದಿದೆ. ಆದ್ದರಿಂದ, ಅನಿಗದಿತ ಭೇಟಿಗಳಿಂದ ಮಾನಸಿಕ ಒತ್ತಡ ಉಂಟಾದರೂ, ವ್ಯಾಪಾರ ಕುದುರುವುದರಲ್ಲಿ ಇಂತಹ ಭೇಟಿಗಳು ಫಲದಾಯಕ ಕೂಡ.

ಪ್ರತಿಕೂಲ ಹವಾಮಾನ

ಮಾರ್ಕೆಟಿಂಗ್ ವೃತ್ತಿಯೆಂದರೆ ಬಿಸಿಲು, ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ಕೆಲಸ ಮಾಡಬೇಕಾಗಬಹುದಾದರೂ, ಇದು ಎಲ್ಲಾ ಸಂದರ್ಭಗಳಲ್ಲೂ ಅನ್ವಯಿಸುವುದಿಲ್ಲ. ಮೇಲಾಗಿ, ಇದು ಎಷ್ಟು ನಿಖರವಾಗಿ ನಿಮ್ಮ ದೈನಂದಿನ ಕಾರ್ಯಕ್ರಮವನ್ನು ರೂಪಿಸುತ್ತೀರಿ ಎನ್ನುವುದನ್ನು ಅವಲಂಬಿಸುತ್ತದೆ. ಉದಾಹರಣೆಗೆ, ದಿನದಲ್ಲಿ 4 ಗ್ರಾಹಕರ ಭೇಟಿಗಳು ಸಾಧ್ಯವಾಗುವುದಾದರೆ, ಈ ಭೇಟಿಗಳನ್ನು ಆದಷ್ಟು ಒಂದೇ ಪ್ರದೇಶದಲ್ಲಿ-ಉದಾಹರಣೆಗೆ ಎಂ.ಜಿ.ರೋಡ್, ಇಂದಿರಾನಗರ, ಜಯನಗರ, ಇತ್ಯಾದಿ-ನಿಗದಿಸಿ, ಪ್ರತಿಕೂಲ ಹವಾಮಾನದ ಅಡಚಣೆಗಳಿಂದ ಸಾಕಷ್ಟು ಮಟ್ಟಿಗೆ ಪಾರಾಗಬಹುದು. ಮಾರ್ಕೆಟಿಂಗ್ ಪ್ರಕ್ರಿಯೆಯಲ್ಲಿನ ದೌರ್ಬಲ್ಯಗಳು ಮತ್ತು ದೋಷಗಳಿಂದ ಕೆಲವೊಮ್ಮೆ ವ್ಯಾಪಾರದ ಇಳಿತವಾಗಬಹುದು. ಆದರೆ, ಇದಕ್ಕೆ ಪ್ರತಿಕೂಲ ಹವಾಮಾನವೇ ಕಾರಣವೆಂದು, ಎಕ್ಸಿಕ್ಯೂಟಿವ್ಸ್ ಸಬೂಬು ಕೊಡುವ ಸಾಧ್ಯತೆಗಳಿದೆ.

ಅಂತರ್ಮುಖಿಗಳಿಗಲ್ಲ

ಈ ವಾದದಲ್ಲೂ ಸಂಪೂರ್ಣ ಸತ್ಯವಿಲ್ಲ. ಏಕೆಂದರೆ, ಉಲ್ಲಾಸದಿಂದ ಪರಿಚಯವಿಲ್ಲದವರೊಡನೆ ಬೆರೆತು, ಸಲೀಸಾಗಿ ಮಾತನಾಡಬಲ್ಲ ವ್ಯಕ್ತಿತ್ವದವರಿಗೆ ಮಾರ್ಕೆಟಿಂಗ್ ವೃತ್ತಿ ಸುಲಭವೆನಿಸಿದರೂ, ಇದೊಂದೇ ಕಾರಣದಿಂದ ವೃತ್ತಿಯ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಮಾರ್ಕೆಟಿಂಗ್ ವೃತ್ತಿಯ ಯಶಸ್ಸಿಗೆ ಮಾತಿನ ಚಾಕಚಕ್ಯತೆಯ ಜೊತೆಗೆ ಮಾರಾಟ ಕೌಶಲ, ಅಚ್ಚುಕಟ್ಟಾದ ವ್ಯಕ್ತಿತ್ವ, ಸಂವಹನ ಕೌಶಲ, ಸಮಯ ಪ್ರಜ್ಞೆ, ತಾಳ್ಮೆ, ಸಾಧಿಸುವ ಛಲ ಇತ್ಯಾದಿಗಳೂ ಇರಬೇಕು. ಅಂತರ್ಮುಖಿಗಳಿಗೆ ಸಂಕೋಚ ಸಾಮಾನ್ಯವಾದರೂ, ನಾನು ನೋಡಿರುವಂತೆ, ಅನುಭವದಿಂದ ಕಾಲಕ್ರಮೇಣ ಇದನ್ನು ಸರಿಪಡಿಸಿಕೊಳ್ಳಬಹುದು.

ರೂಪರೇಷೆಗಳು ಬದಲಾಗುವುದೇ ಇಲ್ಲ

ಈ ವಾದದಲ್ಲೂ ತಿರುಳಿಲ್ಲ. ಏಕೆಂದರೆ, ಮೊದಲೇ ತಿಳಿಸಿದಂತೆ ಮಾರ್ಕೆಟಿಂಗ್ ವೃತ್ತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮೇಲಧಿಕಾರಿಗಳು ಗ್ರಾಹಕರನ್ನು ಭೇಟಿ ಮಾಡಲು ಹೋಗುವುದು ನಿಜವಾದರೂ, ಆ ಭೇಟಿಗಳ ಉದ್ದೇಶ ಯಾವುದೇ ಸರಕು ಅಥವಾ ಸೇವೆಯ ಮಾರ್ಕೆಟಿಂಗ್ ಮಾಡುವುದಕ್ಕಿಂತ ಹೆಚ್ಚಾಗಿ, ಬಳಕೆದಾರರ ಮತ್ತು ಗ್ರಾಹಕರ ಜೊತೆ ಬಾಂಧವ್ಯವನ್ನು ಬೆಳೆಸಿಕೊಂಡು, ಉತ್ಪನ್ನಗಳ ಮತ್ತು ಕಂಪನಿಯ ಬಗ್ಗೆ, ಸೂಕ್ತ ಅಭಿಪ್ರಾಯವನ್ನು ಮೂಡಿಸುವುದಾಗಿರುತ್ತದೆ. ಉದಾಹರಣೆಗೆ, ಗ್ರಾಹಕರ ಜೊತೆಗಿನ ಭೇಟಿಯಲ್ಲಿ ಎಕ್ಸಿಕ್ಯೂಟಿವ್ ಮಾತನಾಡುವ ವಿಷಯ, ಸಾಮಾನ್ಯವಾಗಿ ಕಂಪನಿಯ ಉತ್ಪನ್ನಗಳ ಮಾರಾಟಕ್ಕೆ ಸೀಮಿತವಾಗಿರುತ್ತದೆ. ಆದರೆ, ಮೇಲಧಿಕಾರಿಗಳು ಭೇಟಿ ಮಾಡುವ ಸಂಧರ್ಭಗಳಲ್ಲಿ, ಮಾತುಕತೆಯ ವಿಷಯಗಳ – ಆರ್ಥಿಕ ಸ್ಥಿತಿ, ಉದ್ಯಮದ ಸಮಸ್ಯೆಗಳು, ಇತ್ಯಾದಿ – ವಿಸ್ತಾರವೇ ಬೇರೆ ಇರುವುದು ವಾಡಿಕೆ. ಆದ್ದರಿಂದ, ಉದ್ಯೋಗದಲ್ಲಿ ಅನುಭವ ಮತ್ತು ಜವಾಬ್ದಾರಿ ಹೆಚ್ಚುತ್ತಿದ್ದಂತೆ, ದಿನಚರಿಯಲ್ಲೂ ಬದಲಾವಣೆಗಳಾಗಿ, ಆರಂಭದಲ್ಲಿರುವಂತೆಯೇ ಇರುವುದಿಲ್ಲ.

ನನ್ನ ಉಪನ್ಯಾಸದ ಮೊದಲ ಭಾಗ ಮುಗಿಯುತ್ತಿದ್ದಂತೆ, ವಿಧ್ಯಾರ್ಥಿಗಳಿಗೆ ಮಾರ್ಕೆಟಿಂಗ್ ಬಗ್ಗೆ ಇದ್ದ ತಪ್ಪು ಕಲ್ಪನೆಗಳು ದೂರವಾಗಿದ್ದಂತೆ ತೋರಿತು. ನನ್ನ ಅನಿಸಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತೆ ವಿಧ್ಯಾರ್ಥಿಗಳನ್ನು ಕೇಳಿದೆ, “ಈಗ ಮಾರ್ಕೆಟಿಂಗ್ ವೃತ್ತಿಗೆ ಸೇರಲು ಬಯಸುತ್ತೀರಾ?” ಸುಮಾರು 25 ವಿಧ್ಯಾರ್ಥಿಗಳು, ಕೈಯೆತ್ತಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವಿಧ್ಯಾರ್ಥಿಗಳನ್ನು ಅಭಿನಂದಿಸುತ್ತಾ, “ನಿಮ್ಮ ಅಭಿಪ್ರಾಯಗಳು, ಸ್ನೇಹಿತರು ಮತ್ತು ಪರಿಸರ ಸೇರಿದಂತೆ, ನಿಮ್ಮ ಬಾಹ್ಯ ಲೋಕದ ಪ್ರಭಾವಕ್ಕೆ ಒಳಗಾಗಿರುತ್ತದೆ. ಆದರೆ, ವೃತ್ತಿಯಂತಹ ಗಂಭೀರವಾದ ವಿಷಯದ ಬಗ್ಗೆ ಯಾವುದೇ ಅಭಿಪ್ರಾಯಕ್ಕೆ ಬರುವುದಕ್ಕೆ ಮುಂಚೆ, ನೀವು ಕೂಲಂಕಷವಾಗಿ ವಿಶ್ಲೇಷಿಸಬೇಕು. ಮುಖ್ಯವಾಗಿ, ನೀವು ಮಾಡುವ ಉದ್ಯೋಗವನ್ನು ಮನಸಾರೆ ಇಚ್ಛಿಸದೆ ಇದ್ದರೆ, ನಿಜವಾದ ಯಶಸ್ಸನ್ನು ಗಳಿಸುವುದು ಸಾಧ್ಯವಿಲ್ಲ”, ಎಂದು ತಿಳಿಸಿದೆ.

ಮಾರ್ಕೆಟಿಂಗ್: ಹಣಗಳಿಕೆ ಮತ್ತು ಉನ್ನತಿಯ ಮಾರ್ಗ

ಮಾರ್ಕೆಟಿಂಗ್ ವೃತ್ತಿಯಲ್ಲಿ ಅನೇಕ ಸವಾಲುಗಳ ಜೊತೆಯಲ್ಲೇ, ಅತ್ಯುತ್ತಮ ಅವಕಾಶಗಳೂ ಇರುತ್ತವೆ. ಉದ್ಯಮಗಳಲ್ಲಿ ಎಕ್ಸಿಕ್ಯೂಟಿವ್ಸ್‍ಗಳಿಗೆ ತರಬೇತಿ, ಉತ್ತಮ ವೇತನ, ದಿನನಿತ್ಯದ ಭತ್ಯ, ಬೋನಸ್ ಮತ್ತು ನಿಮ್ಮನ್ನು ಕಾರ್ಯಪ್ರವೃತ್ತರನ್ನಾಗಿಸುವ ಅನೇಕ ಇನ್ಸೆಂಟಿವ್‍ಗಳನ್ನೂ ಆಯೋಜಿಸುತ್ತಾರೆ. ಕಂಪನಿಗಳಲ್ಲಿ ತಿಂಗಳ ಸಂಬಳಕ್ಕಿಂತ, ಇನ್ಸೆಂಟಿವ್ ಮೊತ್ತವೇ ಅಧಿಕವಾಗಿರುವ ಅನೇಕ ಯೋಜನೆಗಳನ್ನು ನಾನೇ ವಿವಿಧ ಕಂಪನಿಗಳಲ್ಲಿ ಕಾರ್ಯಗತಗೊಳಿಸಿದ್ದೀನಿ. ಆದ್ದರಿಂದ, ಎಕ್ಸಿಕ್ಯೂಟಿವ್ಸ್‍ಗಳ ತಿಂಗಳ ಒಟ್ಟು ಆದಾಯ ಅವರ ಮೇಲಧಿಕಾರಿಗಳಿಗಿಂದ ಅಧಿಕವಾಗಿರುವುದು ಸಾಮಾನ್ಯ. ಈ ಕಾರಣಗಳಿಂದಲೇ, ಮಾರ್ಕೆಟಿಂಗ್ ವೃತ್ತಿಯಲ್ಲಿ ಹಣಗಳಿಕೆಯೊಂದಿಗೆ, ಶೀಘ್ರವಾದ ಉನ್ನತಿಯನ್ನೂ ಗಳಿಸಹುದು.

ಹಾಗಾಗಿ, ಬಹುಪಾಲು ಉದ್ಯಮಗಳ ಮುಖ್ಯಸ್ತರ ಹಿನ್ನೆಲೆ ಹೆಚ್ಚಾಗಿ ಮಾರ್ಕೆಟಿಂಗ್ ಆಗಿರುತ್ತದೆ. ನಿಮ್ಮ ಪರಿಶ್ರಮದಂತೆ ಉದ್ಯೋಗದಲ್ಲಿ ಉನ್ನತಿ ಮತ್ತು ಹಣಗಳಿಕೆಯ ಎಲ್ಲಾ ಸಾಧ್ಯತೆಗಳಿರುವುದರಿಂದಲೇ, ಮಾರ್ಕೆಟಿಂಗ್ ಇಂದಿಗೂ ಅತ್ಯಂತ ಜನಪ್ರಿಯ ವೃತ್ತಿ.

ಮಾರ್ಕೆಟಿಂಗ್ ಉದ್ಯೋಗಗಳ ವೈವಿಧ್ಯತೆ

ಮಾರ್ಕೆಟಿಂಗ್ ಉದ್ಯೋಗಗಳಲ್ಲಿ ಮುಖ್ಯವಾಗಿ ನಾಲ್ಕು ವರ್ಗಗಳಿರುತ್ತದೆ:

  • ದಿನನಿತ್ಯದ ಬಳಕೆಯ ಅಲ್ಪ ಮೌಲ್ಯದ ಉತ್ಪನ್ನಗಳು
    [ಆಹಾರ ಧಾನ್ಯಗಳು, ಹಾಲು, ತುಪ್ಪ, ಎಣ್ಣೆ, ಸೋಪ್, ಟೂತ್ ಪೇಸ್ಟ್, ಇತ್ಯಾದಿ]
  • ದೀರ್ಘಕಾಲ ಉಪಯೋಗಿಸುವ ಉತ್ಪನ್ನಗಳು
    [ಮೋಟಾರ್ ವಾಹನಗಳು, ಟಿ.ವಿ., ರೆಫ್ರಿಜರೇಟರ್, ಮೊಬೈಲ್ ಫೋನ್, ಇತ್ಯಾದಿ]
  • ಕೈಗಾರಿಕೆಗಳಲ್ಲಿ, ಉದ್ದಿಮೆಗಳಲ್ಲಿ ಬಳಸುವ ಉತ್ಪನ್ನಗಳು
    [ಉಕ್ಕು, ಕಬ್ಬಿಣ, ಕಚ್ಚಾ ಪದಾರ್ಥಗಳು, ಸಂಸ್ಕರಿಸಿದ ಪದಾರ್ಥಗಳು, ಇತ್ಯಾದಿ]
  • ಗ್ರಾಹಕರ ಸೇವೆ, ನೆರವು ನೀಡುವ ಸರ್ವೀಸಸ್
    [ವಿಮಾನಯಾನ, ಹೋಟೆಲ್, ಆಸ್ಪತ್ರೆ, ಮೊಬೈಲ್ ಸರ್ವೀಸ್, ಮಾಧ್ಯಮ ಮತ್ತು ಪ್ರಚಾರ, ಇತ್ಯಾದಿ]
  • ಗ್ರಾಹಕ ಕೇಂದ್ರಿತ ದೃಷ್ಟಿಕೋನದಿಂದ ಮತ್ತು ಉತ್ಪನ್ನಗಳ ವರ್ಗ, ಪ್ರಾಮುಖ್ಯತೆ ಮತ್ತು ವಿತರಣಾ ಶೈಲಿಯನ್ನಾಧಾರಿಸಿ, ಮಾರ್ಕೆಟಿಂಗ್ ನೀತಿ ಮತ್ತು ನಿಯಮಗಳನ್ನು ರಚಿಸಲಾಗುತ್ತದೆ.

ಮಾರ್ಕೆಟಿಂಗ್ ವೃತ್ತಿಯ ಸವಾಲುಗಳು, ಅವಕಾಶಗಳು

ಎಲ್ಲಾ ವೃತ್ತಿಗಳಲ್ಲಿರುವಂತೆ ಮಾರ್ಕೆಟಿಂಗ್‍ನಲ್ಲಿಯೂ ಅನೇಕ ಸವಾಲುಗಳಿರುವುದು ಸಾಮಾನ್ಯ. ಇವುಗಳಲ್ಲಿ ಮುಖ್ಯವಾದುದು ಉತ್ಪನ್ನಗಳ ಮಾರಾಟದ ಗುರಿ ಅಥವಾ ಟಾರ್ಗೆಟ್.

ಕಂಪನಿಯ ಯೋಜನೆಗಳನ್ನು ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯಂತೆ, ಅನೇಕ ಹಂತಗಳ ದೃಷ್ಟಿಕೋನದಿಂದ, ಹಿರಿಯ ಅಧಿಕಾರಿಗಳೊಂದಿಗೆ ತೀರ್ಮಾನಿಸಲಾಗುತ್ತದೆ. ಈ ಯೋಜನೆಗಳನ್ನು ವ್ಯಾಪಕವಾದ ಗ್ರಾಹಕರ ಬೇಡಿಕೆ ಮತ್ತು ಪೂರೈಕೆ, ಆಸಕ್ತಿ ಮತ್ತು ಅಭಿರುಚಿಯ ಸಂಶೋಧನೆ, ದೇಶದ ಆರ್ಥಿಕ ಅಭಿವೃದ್ಧಿ ನೀತಿ, ಉದ್ಯಮದ ಸ್ಥಿತಿಗತಿ, ಪ್ರತಿಸ್ಪರ್ದಿಗಳ ಸಾಮಥ್ರ್ಯ ಮತ್ತು ದೌರ್ಬಲ್ಯಗಳು ಸೇರಿದಂತೆ, ಅನೇಕ ಅಂಶಗಳನ್ನು ಆಧಾರಿಸಿ, ತರ್ಕಬದ್ಧವಾಗಿ ನಿರ್ಧರಿಸಲಾಗುತ್ತದೆ.

ಕಂಪನಿಯ ಮಾರ್ಕೆಟಿಂಗ್‍ನ ಧ್ಯೇಯ ಮತ್ತು ಟಾರ್ಗೆಟ್‍ಗಳನ್ನು ನಿರ್ಧರಿಸುವ ಮೊದಲು, ಗ್ರಾಹಕರ ನಿಷ್ಠೆಯನ್ನು ಉಳಿಸಿ ಮತ್ತು ಬೆಳೆಸುವ ನಿಟ್ಟಿನಲ್ಲಿ, ಅನೇಕ ಕಾರ್ಯತಂತ್ರಗಳನ್ನು ರಚಿಸಲಾಗುತ್ತದೆ. ಜೊತೆಗೆ, ಮಾರ್ಕೆಟಿಂಗ್ ವಿಭಾಗದಲ್ಲಿ ಮಾರಾಟವನ್ನು ಹೆಚ್ಚಿಸಲು ಪ್ರಚೋದಿಸುವ ಅನೇಕ ಸೂತ್ರಗಳಿದ್ದು, ಅಲ್ಲಿನ ವಾತಾವರಣವನ್ನು ಸ್ಪರ್ದಾತ್ಮಕವಾಗಿಯೂ, ಸ್ಪೂರ್ತಿಯುತವಾಗಿಯೂ ಸೃಷ್ಟಿಸಲಾಗುತ್ತದೆ. ಜೊತೆಗೆ, ನಿಮ್ಮ ವಲಯದಲ್ಲಿ, ಕಾರ್ಯತಂತ್ರಗಳನ್ನು ರೂಪಿಸುವ ಸ್ವಾತಂತ್ರ ನಿಮಗಿರುತ್ತದೆ. ಈ ರೀತಿ, ಎಲ್ಲರ ಕಾರ್ಯಕ್ಷಮತೆಯಿಂದ, ಆದಾಯ ಮತ್ತು ಮಾರುಕಟ್ಟೆಯಲ್ಲಿನ ಪಾಲು ವರ್ಧಿಸಿ, ಕಂಪನಿ ಪ್ರಗತಿಯ ಪಥದಲ್ಲಿ ಸಾಗುತ್ತದೆ; ಮತ್ತು ಇದು ನೌಕರವರ್ಗದ ಉನ್ನತಿಗೂ ಕಾರಣವಾಗುತ್ತದೆ.

ಮಾರ್ಕೆಟಿಂಗ್‍ನ ಇನ್ನೊಂದು ಆಕರ್ಷಣೆಯೆಂದರೆ, ನಿಮ್ಮ ದೈನಂದಿನ ಚಟುವಟಿಕೆಗಳು ನೀರಸವಾಗಿರದೆ, ವೈವಿಧ್ಯಮಯವಾಗಿರುತ್ತದೆ. ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಿ, ಅವರ ನಿಷ್ಠೆಯನ್ನು ಉಳಿಸಿ, ಹೊಸ ಗ್ರಾಹಕರನ್ನು ಬೆಳೆಸುತ್ತಿದ್ದಂತೆ, ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಿ, ಬದುಕಿನ ಸವಾಲುಗಳನ್ನು ಎದುರಿಸುವ ಸೂತ್ರಗಳ ಅರಿವು, ಸಹಜವಾಗಿಯೇ ನಿಮ್ಮಲ್ಲಾಗುತ್ತದೆ.

ವೃತ್ತಿಯ ಜೊತೆ ಬದುಕಿನಲ್ಲೂ ತ್ವರಿತವಾಗಿ ಅಭಿವೃದ್ಧಿಯಾಗುವ ಹಂಬಲವಿದ್ದು ಮತ್ತು ಅದನ್ನು ಕಷ್ಟಪಟ್ಟು ಸಾಧಿಸುವ ಛಲವಿದ್ದರೆ, ಮಾರ್ಕೆಟಿಂಗ್ ವೃತ್ತಿಯನ್ನು ಆರಿಸಿಕೊಳ್ಳಿ. ಮೂಲಭೂತವಾಗಿ, ಈ ವೃತ್ತಿಯಲ್ಲಿ ಯಶಸ್ವಿಯಾಗಲು, ಕಂಪನಿ ಮತ್ತು ಅದರ ಉತ್ಪನ್ನಗಳ ಮೇಲೆ ನಿಮಗೆ ಸಂಪೂರ್ಣ ವಿಶ್ವಾಸವಿರಬೇಕು; ಆ ಉತ್ಪನ್ನಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ದೃಢನಂಬಿಕೆಯಿರಬೇಕು. ಈ ಅಚಲವಾದ ವಿಶ್ವಾಸ ಮತ್ತು ನಂಬಿಕೆಯೇ ನಿಮ್ಮ ಪ್ರತಿಭೆಯನ್ನು ಅರಳಿಸಿ, ಅಪಾರವಾದ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಈ ಶಕ್ತಿಯನ್ನು ಕ್ರಿಯಾತ್ಮಕವಾಗಿ ಬಳಸಿ, ಸುವ್ಯವಹಾರದ ನಿಯಮಗಳೊಡನೆ ಸೂಕ್ತವಾದ ಮಾರಾಟತಂತ್ರಗಳನ್ನೂ ಅನುಸರಿಸಿದರೆ, ನಿಮ್ಮೆಲ್ಲಾ ಕನಸುಗಳು ಸಾಕಾರವಾಗಿ, ಜೀವನದಲ್ಲಿ ನಿಮ್ಮ ಮಿತಿಯನ್ನೂ ಮೀರಿ ಯಶಸ್ವಿಯಾಗಲು ಸಾಧ್ಯವಿದೆ.

Download PDF Document

About author View all posts Author website

V Pradeep Kumar

Leave a Reply

Your email address will not be published. Required fields are marked *