ಮೂರ್ ವುಡ್ಸ್: ಅಪರೂಪದ ನೈಸರ್ಗಿಕ ಸಂಪತ್ತು

ಕೆಲವೇ ದಶಕಗಳ ಹಿಂದೆ ಭೂಮಿಯ ಅರ್ಧದಷ್ಟನ್ನು ಕಾಡುಗಳು ಆವರಿಸಿದ್ದವು; ಈಗ ಕಾಡುಗಳು ಭೂಮಿಯ ಕೇವಲ 9.4%ರಷ್ಟನ್ನು ಮಾತ್ರ ಆವರಿಸಿದೆ. ಅರಣ್ಯನಾಶಕ್ಕೆ ಮುಖ್ಯ ಕಾರಣಗಳೆಂದರೆ ವ್ಯಯಸಾಯ, ಕೈಗಾರಿಕೆಗಳು ಮತ್ತು ನಗರೀಕರಣ. ಇದರ ಪರಿಣಾಮವಾಗಿ, ನಮ್ಮ ಸುತ್ತಮುತ್ತಲಿನ ಪರಿಸರ ನಾಶವಾಗುತ್ತಿದೆ; ಪೃಥ್ವಿ ಬಿಸಿಯಾಗುತ್ತಿದೆ;

ಪ್ರಕೃತಿಯ ವಿಕೋಪ ಎಲ್ಲೆಲ್ಲೂ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಜಾಗತಿಕ ತಾಪಮಾನವನ್ನು ನಿಯಂತ್ರಿಸುವಲ್ಲಿ ಮಾನವನಿಗೆ ಅರಿವು ಮತ್ತು ಜಾಗ್ರತೆಯನ್ನು ಮೂಡಿಸುವ ವಿಶೇಷವಾದ ಸ್ಥಳಕ್ಕೆ ಹೋಗುವಾಗ ಮನಸ್ಸಿನಲ್ಲಿ ಸ್ವಾಭಾವಿಕವಾಗಿಯೇ ಉತ್ಸಾಹ ಮೂಡುತ್ತದೆ; ಎಲ್ಲವನ್ನೂ ನೋಡುವ, ಅನುಭವಿಸುವ ತವಕ ಹೆಚ್ಚಾಗುತ್ತದೆ.

ಇಂತಹ ಚಿಂತನೆಗಳಲ್ಲಿದ್ದ ನನಗೆ, ಬಸ್ಸಿನ ಧ್ವನಿವರ್ಧಕದಲ್ಲಿ ಹೇಳುತ್ತಿದ್ದ ಮಾರ್ಗದರ್ಶಕರ ಸೂಚನೆ ಕೇಳಲಿಲ್ಲ; ಪಕ್ಕದಲ್ಲಿದ್ದ ನನ್ನ ಶ್ರೀಮತಿ ಎಚ್ಚರಿಸದಳು. ‘ಗೋಲ್ಡನ್ ಗೇಟ್ ಬ್ರಿಡ್ಜಿಗೆ ಉಪಯೋಗಿಸಿರುವ ಉಕ್ಕಿನ ತಂತಿಗಳೆಷ್ಟೆಂದರೆ, ಈ ಪೃಥ್ವಿಗೆ ಮೂರು ಪ್ರದಕ್ಷಿಣೆ ಹಾಕುವಷ್ಟು’,

ಮಾರ್ಗದರ್ಶಕರು ಸ್ಯಾನ್ ಫ್ರಾನ್ಸಿಸ್ಕೊದ ಗೋಲ್ಡನ್ ಗೇಟ್ ಬ್ರಿಡ್ಜ್ ಬಗ್ಗೆ ವಿವರಿಸುತ್ತಿದ್ದರು. ಆದರೆ, ಅಸಾಧಾರಣವಾದ ಸಮೃದ್ಧಿಯಿಂದ ಕೂಡಿದ್ದ ಮೂರ್ ವುಡ್ಸ್‍ನ್ನು ನೋಡುವ ಉತ್ಸುಕತೆಯ ಜೊತೆಗೆ, ಮೂವತ್ತೆರಡು ವರ್ಷಗಳ ಹಿಂದೆ ಇದೇ ಸ್ಥಳಕ್ಕೆ ಬಂದಿದ್ದ ನನ್ನ ತಂದೆ ಹಿರಿಯ ಸಮಾಜವಾದಿ ಎಸ್.ವೆಂಕಟರಾಮ್, ಪ್ರದಕ್ಷಿಣೆ’ ಪ್ರವಾಸ ಕಥನದಲ್ಲಿ ಬರೆದ, ಅವರ ನೆನಪುಗಳನ್ನೂ

ಮೆಲುಕು ಹಾಕುತ್ತಿದ್ದೆ ಮೂರ್ ವುಡ್ಸ್ ಪ್ರಪಂಚದ ಪುರಾತನ ಕಾಡುಗಳಲ್ಲೊಂದು. ವಿಶೇಷವೆಂದರೆ, ಸ್ಯಾನ್ ಫ್ರಾನ್ಸಿಸ್ಕೋದಂತ ಬೃಹತ್ ನಗರದ ಗೋಲ್ಡನ್ ಗೇಟ್ ಬ್ರಿಡ್ಜಿನಿಂದ ಕೆಲವೇ ಮೈಲುಗಳ ದೂರದಲ್ಲಿದ್ದರೂ, ಪರಿಸರದ ಪ್ರಭಾವದಿಂದ ನಗರದಿಂದ ಅದೆಷ್ಟೋ ಜ್ಯೋತಿವರ್ಷಗಳಷ್ಟು ದೂರ ಹೋದಂತೆ ಅನಿಸುವುದು ಸಹಜ. ಪೆಸಿಫಿಕ್ ಸಾಗರವನ್ನು ಗೋಲ್ಡನ್ ಗೇಟ್ ಬ್ರಿಡ್ಜಿನ ಮುಖಾಂತರ ದಾಟುತ್ತಿದ್ದಂತೆ, ಸ್ಥಳದ ನಕ್ಷೆಯೇ ಬದಲಾಯಿತು. ಎಡಕ್ಕೂ-ಬಲಕ್ಕೂ ಬಳಕುತ್ತಾ ತಿರುಗುತ್ತಿದ್ದ ರಸ್ತೆ, ಬೆಟ್ಟಗುಡ್ಡ ಕಣಿವೆಗಳ ಪ್ರದೇಶದಲ್ಲಿ ದಟ್ಟವಾಗಿದ್ದ ಮಂಜಿನ ನಡುವೆ, ಆಗೊಮ್ಮೆ-ಈಗೊಮ್ಮೆ ಕಾಣಿಸುತ್ತಿದ್ದ ಹೇರಳ ವನರಾಶಿ, ನಮ್ಮ ಪಶ್ಚಿಮ ಘಟ್ಟವನ್ನು ನೆನಪಿಸುತ್ತಿತ್ತು.

ಸಮಸ್ತ ಜೀವರಾಶಿಗಳಲ್ಲಿ, ಅತ್ಯಂತ ದೀರ್ಘಕಾಲ ಬಾಳುವ ಮರಗಳ ಬಗ್ಗೆ ಈಗ ತೀರ್ವವಾದ ಅರಿವು ಮತ್ತು ಕಾಳಜಿ ಉಂಟಾಗಿದೆ. ಮಹತ್ವದ ವಿಷಯವೆಂದರೆ, ಒಂದು ಮರ ವರ್ಷಕ್ಕೆ ಸುಮಾರು 250 ಪೌಂಡ್ ಆಮ್ಲಜನಕವನ್ನು ಉತ್ಪಾದಿಸುತ್ತದೆ. ಅಷ್ಟೇ ಅಲ್ಲ! ಒಂದು ಎಕರೆಯಲ್ಲಿನ ಮರಗಳು ವರ್ಷಕ್ಕೆ ಹೀರಿಕೊಳ್ಳುವ ಕಾರ್ಬನ್ ಡೈ ಆಕ್ಸೈಡ್, ಒಂದು ಕಾರು 26,000 ಮೈಲಿ ಪ್ರಯಾಣದಲ್ಲಿ ಉತ್ಪಾದಿಸುವಷ್ಟು. ಮರ ತನ್ನ ಜೀವದ ಅವಧಿಯಲ್ಲಿ, 1 ಟನ್ ಕಾರ್ಬನ್ ಡೈ ಆಕ್ಸೈಡ್‍ನ್ನು ಹೀರಿಕೊಳ್ಳುತ್ತದೆ. ಮರಗಳು ಶಬ್ದ ಮಾಲಿನ್ಯವನ್ನೂ ತಡೆಯುತ್ತವೆ. ಆದ್ದರಿಂದಲೇ, ಮೂರ್ ವುಡ್ಸ್ ಪ್ರವೇಶಿಸಿದ ತಕ್ಷಣ ಅಚ್ಚರಿ ಮೂಡಿಸುವ ನಿಶ್ಯಬ್ದ. ಪರಿಚಯಸ್ಥರೇ ಹೆಚ್ಚಾಗಿದ್ದ ನಮ್ಮ ಪ್ರವಾಸದಲ್ಲಿ ಯಾವಾಗಲೂ ಮಾತುಕತೆಯ ಆರ್ಭಟ. ಆದರೆ, ಬಸ್ಸು ನಿಂತ ಕ್ಷಣದಿಂದ ಮಾತಿನ ಧಾಟಿ, ಪರಿಮಾಣ ಕುಗ್ಗಿ, ಒಡನೆಯೇ ವಾತಾವರಣಕ್ಕೆ ಹೊಂದಿಕೊಂಡಿತ್ತು.

ಮೂರ್ ವುಡ್ಸ್ ಇತಿಹಾಸ

ಈ ಕಾಡಿನ ಇತಿಹಾಸ ಕುತೂಹಲಕಾರಿ. ಇದರ ಸಂರಕ್ಷಣೆಗೆ ನಡೆಸಿದ ಹೋರಾಟದ ಪರಿಶ್ರಮವೇ, ಇಂದು ಮೂರ್‍ವುಡ್ಸ್ ರಾಷ್ಟ್ರೀಯ ಸ್ಮಾರಕವಾಗಲು ಕಾರಣ. ನಮ್ಮ ದೇಶದಲ್ಲಿ ಡಿ-ನೋಟಿಫಿಕೇಶನ್, ಭೂ-ಕಬಳಿಕೆ, ಒತ್ತುವರಿ ಮತ್ತು ಪರಿಸರ ನಾಶದ ಹಗರಣಗಳ ಹಿನ್ನೆಲೆಯಲ್ಲಿ, ನೂರು ವರ್ಷಗಳ ಹಿಂದೆಯೇ ಪರಿಸರ ಸಂರಕ್ಷಣೆಗಾಗಿ, ಅಮೇರಿಕದ ಸಂಸದೀಯ ವಿಲಿಯಮ್ ಕೆಂಟ್ ನಡೆಸಿದ ಹೋರಾಟ ಮತ್ತು ತ್ಯಾಗದ ಕತೆ ಅನುಕರಣೀಯ. 1905ರಲ್ಲಿ ಕೆಂಟ್, ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಲ್ಲಿ 611 ಎಕರೆಯ ರೆಡ್‍ವುಡ್ ಅರಣ್ಯವನ್ನು ಖರೀದಿಸಿದರು. ತರುವಾಯ, ಇದೇ ಪ್ರದೇಶದಲ್ಲಿ ಖಾಸಗಿ ನೀರು ಸರಬರಾಜು ಸಂಸ್ಥೆಯೊಂದು ಅಣೆಕಟ್ಟು ನಿರ್ಮಿಸಲು ಮುಂದಾದಾಗ, ಅದನ್ನು ಕೆಂಟ್ ತೀರ್ವವಾಗಿ ವಿರೋಧಿಸಿದರು. ಸಮಸ್ಯೆ ಬಗೆಹರಿಸಲು ಆ ಸಂಸ್ಥೆ ಕೋರ್ಟ್ ಮೊರೆಹೋದಾಗ, ಕೆಂಟ್ ತಮ್ಮ ಜಮೀನಿನ 295 ಎಕರೆಯನ್ನು ಸರ್ಕಾರಕ್ಕೆ ಕೊಡುಗೆಯಾಗಿ ನೀಡಿ, ಅರಣ್ಯ ನಾಶವಾಗುವುದನ್ನು ತಡೆಗಟ್ಟಿದರು. ಪ್ರಭಾವಶಾಲೀ ರಾಜಕಾರಣಿಯಾಗಿದ್ದ ಕೆಂಟ್, ತಮ್ಮ ಅನುಭವ ಮತ್ತು ವ್ಯಕ್ತಿತ್ವವನ್ನು ಸದುಪಯೋಗಿಸಿಕೊಂಡು, ಅಂದಿನ ರಾಷ್ಟ್ರಪತಿ ರೂಸ್‍ವೆಲ್ಟ್‍ರೊಂದಿಗೆ ಸಮಾಲೋಚಿಸಿ, 1908ರಲ್ಲಿ ಈ ಕಾಡನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸುವಲ್ಲಿ ಯಶಸ್ವಿಯಾದರು. ವೈಯಕ್ತಿಕ ಆಸ್ತಿಯಿಂದ ನಿರ್ಮಿತ, ಏಕೈಕ ರಾಷ್ಟ್ರೀಯ ಸ್ಮಾರಕದ ರೂವಾರಿ ಕೆಂಟ್‍ರವರ ಹೆಸರನ್ನು ಈ ಕಾಡಿಗಿಡಲು ರೂಸ್‍ವೆಲ್ಟ್ ಸೂಚಿಸಿದರು. ಆದರೆ, ನಿಸ್ವಾರ್ಥಿಯಾದ ಕೆಂಟ್, ಇದಕ್ಕೆ ಒಪ್ಪದೆ ಪರಿಸರವಾದಿ ಜಾನ್ ಮೂರ್‍ರವರ ಹೆಸರಿನಲ್ಲಿ, ಈ ಸ್ಮಾರಕವನ್ನು ನಿರ್ಮಿಸಿದರು.

ವೈವಿಧ್ಯಮಯ ಜೀವರಾಶಿ

ದಟ್ಟವಾದ ಮಂಜೇ ಇಲ್ಲಿನ ಕಾಡು ಪ್ರದೇಶಕ್ಕೆ ಸಂಜೀವಿನಿ. ಏಕೆಂದರೆ, ಸಮುದ್ರತೀರದ ಈ ರೆಡ್‍ವುಡ್ ಕಾಡಿಗೆ ವಾತಾವರಣದಲ್ಲಿನ ತೇವಾಂಶ ಅವಶ್ಯಕ. ಇಲ್ಲಿನ ಕಾಡಿನಲ್ಲಿ ವೈವಿಧ್ಯಮಯ ಜೀವರಾಶಿಗಳಿವೆ. ವಿವಿಧ ಪ್ರಭೇದಗಳ ಸಸ್ಯಗಳು, ಮರಗಳು, ಸಸ್ತನಿಗಳು ಮತ್ತು ಪಕ್ಷಿಗಳಿಗೆ ಇದು ವಾಸಸ್ಥಾನ. ವಿರಳವಾಗುತ್ತಿರುವ ಮತ್ತು ವಿನಾಶದ ಅಂಚಿನಲ್ಲಿರುವ ಅನೇಕ ಮೃಗ, ಪಕ್ಷಿ ಮತ್ತು ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವುದು ಇಂತಹ ಕಾಡುಗಳಲ್ಲೇ ಸಾಧ್ಯ. ಇಲ್ಲಿನ ಪ್ರಾಣಿವರ್ಗದಲ್ಲಿ ಸ್ಕಂಕ್ [ಒಂದು ಬಗೆಯ ಸಸ್ತನಿ], ತೋಳ, ನರಿ, ಸಿಂಹ, ಜಿಂಕೆ, ಕರಡಿ ಮುಖ್ಯವು.

ಇಲ್ಲಿನ ಸಸ್ಯ ಮತ್ತು ಪ್ರಾಣಿವರ್ಗದ ವೈವಿಧ್ಯತೆ ವಿಸ್ಮಯಕಾರಿಯಾಗಿ ಕೆಲವೊಮ್ಮೆ ಗ್ರಹಿಕೆಗೆ ಸಿಲುಕದು; ಅಥವಾ ಎದೆಗುಂದಿಸಬಹುದು. ಇದೊಂದು ಸದ್ದುಗದ್ದಲವಿಲ್ಲದ ಪ್ರಾಕೃತಿಕ ಸಹಜ ವಾಸಸ್ಥಾನ. ಆದ್ದರಿಂದ, ನಿಶ್ಯಬ್ದವಾಗಿ ನಡೆಯುತ್ತಾ, ಇಲ್ಲಿನ ಅನುಭವಗಳನ್ನು ಪಡೆದುಕೊಳ್ಳಬೇಕು. ನೈಸರ್ಗಿಕವಾಗಿ ಸಂರಕ್ಷಿಸಿದ ಮೂರ್ ವುಡ್ಸಿನಲ್ಲಿ ಒಡಾಡಲು ಕಾಲುದಾರಿಗಳನ್ನು ಮಾಡಿದ್ದಾರೆ. ಕಾಲುದಾರಿಗಳನ್ನು 30ರಿಂದ 90 ನಿಮಿಷಗಳ ಮಾರ್ಗಗಳಾಗಿ ವಿಂಗಡಿಸಿ, ಪ್ರವಾಸಿಗರಿಗೆ ಮಾರ್ಗಗಳ ದೂರ ಮತ್ತು ನಕ್ಷೆಯ ಮಾಹಿತಿಯನ್ನು ನೀಡಿರುವುದರಿಂದ, ನಮ್ಮ ಚೈತನ್ಯ ಮತ್ತು ಸಮಯಕ್ಕೆ ಅನುಗುಣವಾಗಿ ಮಾರ್ಗಗಳ ಆಯ್ಕೆ ಮಾಡಿಕೊಳ್ಳಬಹುದು.

ನಾವು ಆರಿಸಿದ ಮಾರ್ಗದಲ್ಲಿ ನಡೆಯುತ್ತಾ ಹೋದಾಗ ಓಕ್, ಪೈನ್, ಸೆಡರ್ ಇತ್ಯಾದಿ ಮರಗಳೂ, ವರ್ಷವಿಡೀ ಎಲೆಗಳಿರುವ ನಿತ್ಯಹರಿದ್ವರ್ಣ ಮರಗಳೂ ಹೇರಳವಾಗಿದ್ದವು. ಶಂಕುವಿನಾಕಾರದಲ್ಲಿ ಬೆಳೆಯುವ ರೆಡ್‍ವುಡ್ ಮರಗಳು ಪ್ರಪಂಚದಲ್ಲಿ ಅತಿಹೆಚ್ಚು ಎತ್ತರಕ್ಕೆ ಬೆಳೆಯುತ್ತವೆ. 379 ಅಡಿಯಷ್ಟು ಎತ್ತರ ಮತ್ತು 2000 ವರ್ಷಗಳಷ್ಟು ಕಾಲ ಬಾಳಿದ ನಿದರ್ಶನಗಳಿವೆ. ಆಳವಾದ ಸುಕ್ಕುಗಳಿಂದಲೂ, ನಾರುಗಳಿಂದಲೂ ಕೂಡಿರುವ ತೊಗಟೆಯಿರುವ ಈ ಮರಗಳ ಕಾಂಡ ಗುಂಡಾಗಿದ್ದು, ಸುಮಾರು 10-14 ಅಡಿಗಳಷ್ಟು ಅಗಲವಿರುತ್ತದೆ. ಮೂರ್ ವುಡ್ಸ್‍ನಲ್ಲಿರುವ ಮರಗಳ ಸರಾಸರಿ ಎತ್ತರ 258 ಅಡಿ ಮತ್ತು ಇಲ್ಲಿ 1200 ವರ್ಷಗಳಷ್ಟು ಪ್ರಾಚೀನ ಮರವಿದೆ.

ವಿಚಿತ್ರ, ಆದರೂ ಸತ್ಯ! ಕ್ಯಾಲಿಫೆÇೀರ್ನಿಯ ರಾಜ್ಯದಲ್ಲಿ, ವಿಶಿಷ್ಟ ಅನುಭವ ನೀಡುವ ಅನೇಕ ಬೃಹತ್ ರೆಡ್‍ವುಡ್ ‘ಡ್ರೈವ್-ತ್ರೂ’ ಮರಗಳಿವೆ. ಮೂರ್ ವುಡ್ಸಿನಿಂದ ಉತ್ತರಕ್ಕೆ ಪ್ರಯಾಣಿಸಿದರೆ, ಸಿಗುವ ಈ ಮರಗಳ ನಡುವೆ ಡ್ರೈವ್ ಮಾಡಬಹುದು.

ಕತ್ತಲ ವಿರುದ್ಧ, ಬೆಳಕಿನ ಯುದ್ಧ

ದಟ್ಟವಾದ ಮಂಜಿನಿಂದಲೂ, ಹೇರಳವಾದ ಸಸ್ಯಸಂಪತ್ತಿನ ಮೇಲ್ಛಾವಣಿಯಿಂದಲೂ, ಇಲ್ಲಿ ಸೂರ್ಯನ ಬೆಳಕು ಕಮ್ಮಿ. ಸ್ವಲ್ಪ ಮಟ್ಟಿನ ಕತ್ತಲಿನಲ್ಲಿ, ಕಣ್ಣಿಗೆ ಕಾಣದಷ್ಟೆತ್ತರದ ಮರಗಳನು ನೋಡುತ್ತಿದ್ದಾಗ, ಮನದಾಳದಲ್ಲೊಂದು ಪ್ರಶ್ನೆ; ಈ ಮರಗಳೇಕೆ 250-300 ಅಡಿಗಳಷ್ಟು ಎತ್ತರ ಬೆಳೆಯುತ್ತದೆ? ಈ ಕತ್ತಲ ಕಾಡಿನಲ್ಲಿ, ಪ್ರಾಯಶ: ಮರಗಳಲ್ಲೂ ಸೂರ್ಯನ ಬೆಳಕಿಗೆ ಪೈಪೆÇೀಟಿ ಇರಬಹುದಲ್ಲವೇ?

ಆತಿಯಾದ ಎತ್ತರದ ಈ ಮರಗಳು, ಸೂರ್ಯನ ಕಿರಣಗಳನ್ನು ತನ್ನ ಮೇಲ್ಛಾವಣಿಯಲ್ಲಿ ಸೆರೆಹಿಡಿದು, ನಿಯಮಿತ ಪ್ರಮಾಣದಲ್ಲಿ ಭೂಮಿಗೆ ಹರಿಸುವ ಪ್ರಕ್ರಿಯೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಮನಸಾಯಿತು. ಹಸಿರು ಸಂಪತ್ತಿನ ಕತ್ತಲಿನಲ್ಲಿ, ವಿಚಿತ್ರವಾದ ಭಂಗಿಯಲ್ಲಿ ಕುಳಿತು, ಕ್ಯಾಮೆರವನ್ನು ಆಕಾಶದತ್ತ ಹಿಡಿಯುತ್ತಿದ್ದಂತೆ, ನಾಡಿನ ಶ್ರೇಷ್ಟ ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರು ಬರೆದ, ಟಿ.ಎನ್. ಸೀತಾರಾಮ್ ಅವರ ಮುಕ್ತ-ಮುಕ್ತ ಧಾರಾವಾಹಿಯ ಶೀರ್ಷಿಕೆ ಗೀತೆಯ ಸಾಲು-‘ಇರುಳ ವಿರುದ್ಧ, ಬೆಳಕಿನ ಯುದ್ಧ-ನೆನಪಾಯಿತು. ಕತ್ತಲೆ-ಬೆಳಕುಗಳ ನಿರಂತರ ಹೋರಾಟವನ್ನು ಸೆರೆಹಿಡಿಯಲು ಕುಳಿತ ಭಂಗಿ, ಮಾಡಿದ ಪ್ರಯತ್ನ ಫಲಕಾರಿಯಾಯಿತು. ಆದರೆ, ಈ ದಟ್ಟ ಕಾಡಿನ ತೇವಾಂಶದಿಂದ ಹರಡಿದ್ದ ಎಲೆಗೊಂಚಲು ಮತ್ತು ಮಣ್ಣಿನ ತಾಜಾ ಪರಿಮಳವನ್ನು ಬಣ್ಣಿಸಲು ಅಸಾಧ್ಯ; ಅದು ಇಂದ್ರಿಯಗಳಿಂದ ಅನುಭವಿಸಲು ಮಾತ್ರ ಸಾಧ್ಯ!

ಮಳೆಕಾಡಿನಲ್ಲಿ ಮಳೆಯ ಅನುಭವವಿರದಿದ್ದರೆ ಹೇಗೆ? ನಡೆದಾಡುತ್ತಿದ್ದಂತೆ ರಭಸದ ಮಳೆ ಶುರು! ವಿಮಾನ ಪಯಣದಲ್ಲಿ ಸಿಗುವ ನಿಯಮಿತ ಬ್ಯಾಗೇಜ್‍ನಲ್ಲಿ ಬಹುಪಾಲು ಉಣ್ಣೆ ಬಟ್ಟೆಗಳಿಗೇ ಮೀಸಲು; ‘ಮಳೆ ಬರಲಿ, ಛತ್ರಿ ಇರಲಿ’ ಎನ್ನುವ ಮುಂದಾಲೋಚನೆ ನಮ್ಮಲ್ಲಿರಲಿಲ್ಲ. ಚಳಿ-ಮಳೆಯಲ್ಲಿ ನಡುಗುತ್ತಾ, ಗಡಿಬಿಡಿಯಿಂದ ದಾಪುಗಾಲು ಹಾಕಲಾರಂಭಿಸಿದೆವು. ಅದೃಷ್ಟವಶಾತ್, ಹತ್ತಿರದಲ್ಲೇ ಜೋಪಡಿಯೊಂದು ಕಾಣಿಸಿತು. ಆ ಜೋಪಡಿಯಲ್ಲಿ, ಬೃಹತ್ ಮರದ ಕಾಂಡವನ್ನು ಕತ್ತರಿಸಿ, ಮಾಹಿತಿ ಫಲಕದಂತೆ ಬಳಸಿರುವ ರೀತಿ ಕುತೂಹಲವನ್ನು ಕೆರಳಿಸಿ, ಇತಿಹಾಸದ ಪುಟಗಳನ್ನು ತಿರುವಿಹಾಕಿದಂತಿತ್ತು. ಕಾಂಡದ ವಾರ್ಷಿಕ ರೇಖೆಗಳನ್ನು ಗುರುತಿಸಿ, ‘1908-ಮೂರ್ ವುಡ್ಸ್ ಸ್ಥಾಪನೆ; 1776-ಸ್ವಾತಂತ್ರದ ಘೋಷಣೆ; 1492- ಅಮೇರಿಕ ದೇಶಕ್ಕೆ ಕೊಲಂಬಸ್ ಸಮುದ್ರಯಾನ ಮಾಡಿದ; 909-ಈ ಮರ ಹುಟ್ಟಿದ ವರ್ಷ’ ಇತ್ಯಾದಿ ಮಾಹಿತಿಗಳನ್ನು ವಿನೂತನ ರೀತಿಯಲ್ಲಿ, ಅರ್ಥಗರ್ಭಿತವಾಗಿ ನೀಡಿರುವುದು ಮೆಚ್ಚುವಂತಿತ್ತು.

ಎಲ್ಲಕ್ಕಿಂತ ಹೆಚ್ಚಿನದಾಗಿ, ಇಲ್ಲಿ ಗಿಡಮರಗಳ ಬಗ್ಗೆ ವಿಶೇಷವಾದ ಕಾಳಜಿ, ಮಮತೆಯಿದೆ. ಇಲ್ಲಿ ಇತ್ತೀಚೆಗಷ್ಟೇ, ಹಳೆಯ ರೆಡ್‍ವುಡ್ ಮರವೊಂದು ಉರುಳಿ ಬಿದ್ದಿದೆ. ಇದೊಂದು ಸ್ವಾಭಾವಿಕ ಬೆಳವಣಿಗೆಯಾದರೂ, ಬಿದ್ದ ಮರವನ್ನು ಎತ್ತಿ ಬಿಸಾಕಿಲ್ಲ; ಅದನ್ನು ಕಾಲುದಾರಿಗೆ ಅಡ್ಡವಾಗದಂತೆ ಪಕ್ಕಕ್ಕೆ ಸರಿಸಿ, ಆಸಕ್ತರು ವೀಕ್ಷಿಸಲು, ಇಂತಹ ಬೃಹತ್ ಮರ ಬೀಳುವ ಕಾರಣಗಳನ್ನು ಸಂಶೋಧಿಸಲು ನೆರವಾಗಿದ್ದಾರೆ.
ಮೂರ್ ವುಡ್ಸ್, ಸ್ಯಾನ್ ಫ್ರಾನ್ಸಿಸ್ಕೊ ನಗರದಿಂದ 19 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ, ನೀವು ಖಾಸಗಿ ಅಥವಾ ಸಾರ್ವಜನಿಕ ವಾಹನಗಳಲ್ಲಿ ಬರಬಹುದು. ಅಥವಾ, ಪೆಸಿಫಿಕ್ ಕೊಲ್ಲಿಯ ಉತ್ತರದ ದಡದಲ್ಲಿರುವ ಸಾಸಲಿಟೊಗೆ ದೋಣಿಯಲ್ಲಿ ಬಂದು, ಅಲ್ಲಿಂದ ಬಸ್ಸುಗಳಲ್ಲಿ ಬರಬಹುದು. ನಿಮಗೆ ಟ್ರೆಕ್ಕಿಂಗ್‍ನಲ್ಲಿ ಆಸಕ್ತಿಯೇ? ಹಾಗಿದ್ದಲ್ಲಿ, ಸಾಸಲಿಟೊ ಪಟ್ಟಣದಿಂದ 10 ಕಿ.ಮೀ. ಟ್ರೆಕ್ ಮಾಡಬಹುದು.

ನೀವು ಸ್ಯಾನ್ ಫ್ರಾನ್ಸಿಸ್ಕೊಗೆ ಬಂದರೆ ಅಪರೂಪದ ಮೂರ್ ವುಡ್ಸಿಗೆ ಬರಲು ಮರೆಯದಿರಿ. ಹತ್ತಿರದಲ್ಲೇ, ಮೂರ್ ಬೀಚ್ ಸಹ ಇದೆ; ಆದರೆ, ಇಲ್ಲಿ ಈಜಾಡುವಂತಿಲ್ಲ. ಸಾಸಲಿಟೊ ಪಟ್ಟಣ ಒಂದು ಮೋಹಕ ತಾಣ ಮತ್ತು ಹೆಚ್ಚಾಗಿ ಸ್ಯಾನ್ ಫ್ರಾನ್ಸಿಸ್ಕೊ ಶ್ರೀಮಂತರೇ ವಾಸಿಸುವ ಪ್ರದೇಶ. ಇಲ್ಲಿನ ಮುಖ್ಯಬೀದಿಯಲ್ಲಿ ಅಡ್ಡಾಡಿ, ಅನೇಕ ಆರ್ಟ್ ಮತ್ತು ಪ್ರಾಚೀನ ವಸ್ತುಗಳ ಗ್ಯಾಲರಿಗಳಿಗೆ ಭೇಟಿ ನೀಡಬಹುದು. ಪೆಸಿಫಿಕ್ ಕೊಲ್ಲಿಯ ತೀರದಿಂದ, ಅಲ್ಲಿರುವ ರೆಸ್ಟೊರೆಂಟ್‍ಗಳಿಂದ, ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಗೋಲ್ಡನ್ ಗೇಟ್ ಬ್ರಿಡ್ಜಿನ ಅಮೋಘವಾದ ದೃಶ್ಯಗಳನ್ನು ನೋಡಬಹುದು.

ರೈಸ್ ಅಫ್ ದಿ ಪ್ಲಾನೆಟ್ ಅಫ್ ಏಪ್ಸ್

ಜನಪ್ರಿಯವಾದ ಮೂರ್ ವುಡ್ಸ್, ಅನೇಕ ಹಾಲಿವುಡ್ ಚಿತ್ರಗಳಲ್ಲಿ, ಚಿತ್ರೀಕರಣವಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ‘ರೈಸ್ ಅಫ್ ದಿ ಪ್ಲಾನೆಟ್ ಅಫ್ ಏಪ್ಸ್’ ಚಿತ್ರದಲ್ಲಿ ಮಂಗಗಳು ಸ್ಯಾನ್ ಫ್ರಾನ್ಸಿಸ್ಕೊ ನಗರದಿಂದ ಮೂರ್ ವುಡ್ಸಿಗೆ ಮಂಗಮಾಯವಾಗುವ ದೃಶ್ಯವಿದೆ. ಈ ಚಿತ್ರದ ಬಿಡುಗಡೆಯ ನಂತರ, ಮೂರ್ ವುಡ್ಸಿಗೆ ಮಂಗಗಳನ್ನು ಹುಡುಕಿಕೊಂಡು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆಯಂತೆ!

ಪ್ರವಾಸದಲ್ಲಿ ಸ್ಮಾರಕಗಳ ಅಂಗಡಿಗೆ ಹೋಗುವುದೊಂದು ವಾಡಿಕೆ. ಮೂರ್ ವುಡ್ಸಿನ ಅಂಗಡಿಯನ್ನು ನೋಡುತ್ತಿದ್ದಂತೆ, ಅಲ್ ಗೋರ್ ಅವರ ‘ಇನ್‍ಕನ್ವೀನಿಯೆಂಟ್ ಟ್ರೂತ್’ ಪುಸ್ತಕ ಕಾಣಿಸಿತು. ಕ್ಯಾಶ್ ಕೌಂಟರಿನಲ್ಲಿ ಮಾರಾಟಗಾರ್ತಿ, ನನ್ನನ್ನೂ ಪುಸ್ತಕವನ್ನೂ ನೋಡಿ ನಗುತ್ತಾ ಕೇಳಿದಳು, ‘ವೆರಿ ಗುಡ್ ಬುಕ್. ಅಲ್ ಗೋರ್ ಯಾರೆಂದು ಗೊತ್ತೇ’? ಅವಳ ಪ್ರಶ್ನೆಯಲ್ಲಿ ವ್ಯಂಗ್ಯವಿರಲಿಲ್ಲ; ಅವರ ದೇಶದ ಪ್ರಭುದ್ಧ ಮಾಜಿ ಉಪರಾಷ್ಟ್ರಪತಿಗಳ ಬಗ್ಗೆ ಅಭಿಮಾನವಿತ್ತು. ನಾನೂ ನಗುತ್ತಲೇ ಉತ್ತರಿಸಿದೆ, ‘ಮಾಜಿ ಉಪರಾಷ್ಟ್ರಪತಿ, ಲೇಖಕರು ಮತ್ತು ಹೆಸರಾಂತ ಪರಿಸರವಾದಿ. ನೋಬಲ್ ಪ್ರಶಸ್ತಿ ವಿಜೇತರು’. ನನಗಿದ್ದ ಮಾಹಿತಿಯನ್ನು ಕೇಳಿ, ಹಸನ್ಮುಖಳಾದಳು.

ಕುತೂಹಲದಿಂದ ಪುಸ್ತಕದ ಪುಟಗಳನ್ನು ತಿರುಗಿಸುತ್ತಾ ಹೊರಬಂದೆ. ಮಳೆಯಿಂದ ಭೂಮಿ ತೇವವಾಗಿತ್ತು. ಅಲ್ಲೇ ನಡೆಯುತ್ತಿದ್ದ ಮಗುವೊಂದು ನನ್ನ ನೋಟವನ್ನು ಸೆಳೆಯಿತು. ತನ್ನ ತಂದೆಯ ಹಿಂದೆ, ಅವರ ಹೆಜ್ಜೆಗುರುತಿನ ಮೇಲೆ ತನ್ನ ಪುಟ್ಟ ಕಾಲುಗಳನ್ನಿಟ್ಟು, ನಡೆಯಲೂ ಆಗದ, ಆದರೂ ಬಿಡದ ಮಗುವಿನ ಮುಗ್ಧ ಮುಖದಲ್ಲೆನೋ ಸಾಧಿಸುವ ಛಲವಿತ್ತು. ಪ್ರಕೃತಿಯ ಮಡಿಲಲ್ಲಿನ ಆ ಪ್ರತೀಕ, ನನ್ನಲ್ಲಿನ ಸುಪ್ತ ಭಾವನೆಗಳನ್ನು ಪ್ರತಿಬಿಂಬಿಸುತ್ತಿತ್ತು. ನಾನೂ ಸಹ ಕಾಲಚಕ್ರದಲ್ಲಿ ಎಂದೋ ಕಣ್ಮರೆಯಾಗಿದ್ದ ಹೆಜ್ಜೆಗುರುತುಗಳನ್ನರಸಿ, ಜೀವನಚಕ್ರದಲ್ಲಿ ಮುನ್ನಡೆಯಲು, ನನಗಾಗಿ ಕಾಯುತ್ತಿದ್ದ ಸ್ನೇಹಿತರ ಗುಂಪಿನತ್ತ ನಡೆದೆ.

Download PDF Document

About author View all posts Author website

V Pradeep Kumar

Leave a Reply

Your email address will not be published. Required fields are marked *