ಪರಿಣಾಮಕಾರಿ ಸಂವಹನ ಹೇಗೆ?

ಕೆಲವು ತಿಂಗಳ ಹಿಂದೆ ನಡೆದ ಘಟನೆ: ಮ್ಯಾನೇಜ್‍ಮೆಂಟ್ ಇನ್‍ಸ್ಟಿಟ್ಯೂಟ್ ಒಂದರ ನಿರ್ದೇಶಕರೊಡನೆ ಕ್ಯಾಂಪಸ್ ನೇಮಕಾತಿಯ ಬಗ್ಗೆ ಚರ್ಚಿಸುತ್ತಿದ್ದೆ. ಆಗ ನಿರ್ದೇಶಕರು ಹೇಳಿದ ಮಾತು, “ನಮ್ಮಲ್ಲಿನ ಅನೇಕ ವಿಧ್ಯಾರ್ಥಿಗಳಿಗೆ ಸಂವಹನ [ಕಮ್ಯೂನಿಕೇಷನ್] ಕೌಶಲವೇ ಇಲ್ಲ. ಇವರ ನೇಮಕಾತಿಯನ್ನು ಏರ್ಪಡಿಸುವುದು ಹೇಗೆ?”.

ಅವರ ಮಾತಿನಲ್ಲಿ ಸತ್ಯವಿದೆ. ಏಕೆಂದರೆ, ನಾವು ಆಡುವ ಮಾತುಗಳಿಗೆ, ಬಳಸುವ ಪದಗಳಿಗೆ ಸಂದೇಶವನ್ನು ತಲುಪಿಸುವ ಅಥವಾ ಧ್ವಂಸ ಮಾಡುವ ವಿಸ್ಮಯಕಾರಿ ಪ್ರಭಾವವಿರುತ್ತದೆ. ಆದ್ದರಿಂದ, ನಾನೇ ನೋಡಿರುವಂತೆ, ಸಂವಹನ ಕೌಶಲವಿಲ್ಲದ ವಿಧ್ಯಾರ್ಥಿಗಳ ನೇಮಕಾತಿ ನಿಜಕ್ಕೂ ಅಸಾಧ್ಯ.

ವಿಷಾದಕರ ಸಂಗತಿಯೆಂದರೆ, ನಮ್ಮ ಶಾಲಾ ಕಾಲೇಜುಗಳ ಪಠ್ಯಕ್ರಮ ಮತ್ತು ಬೋಧನಾ ಶೈಲಿಯಲ್ಲಿ ಸಂವಹನದ ಮಹತ್ವದ ಅರಿವÀನ್ನು ಮೂಡಿಸಿ, ಕೌಶಲವನ್ನು ವೃದ್ಧಿಸಲು ಸೂಕ್ತವಾದ ತರಬೇತಿಗಳಿಲ್ಲ. ಪಠ್ಯಕ್ರಮ ಮತ್ತು ಬೋಧನಾ ಶೈಲಿಯ ನ್ಯೂನತೆಗಳು, ಮಾರ್ಗದರ್ಶನದ ಕೊರತೆಗಳು ಮತ್ತು ಪರಿಸರದ ಕಾರಣಗಳಿಂದ, ವಿಧ್ಯಾರ್ಥಿಗಳ ಸಂವಹನ ಕೌಶಲದ ಮಟ್ಟದಲ್ಲಿ ವ್ಯಾಪಕವಾದ ವ್ಯತ್ಯಾಸಗಳೂ, ಅಂತರಗಳೂ ಇರುವುದು ಸ್ವಾಭಾವಿಕ. ಜೊತೆಗೆ, ಮಾಮೂಲಿ ಮತ್ತು ಔಪಚಾರಿಕ ಸನ್ನಿವೇಶಗಳಲ್ಲಿ ಹೇಗೆ ಸಂವಹಿಸಬೇಕೆನ್ನುವ ಅರಿವಿನ ಕೊರತೆಯೂ ಸಾಮಾನ್ಯ. ಈ ನಿಟ್ಟಿನಲ್ಲಿ ವಿಧ್ಯಾರ್ಥಿಗಳನ್ನು ದೂರುವ ಹಾಗಿಲ್ಲವಾದರೂ, ನಿಮ್ಮ ವೈಯಕ್ತಿಕ ಬದುಕನ್ನು ರೂಪಿಸಲು, ಈ ಕೌಶಲವನ್ನು ಹೇಗೆ ಅಭಿವೃದ್ಧಿಸಿಕೊಳ್ಳಬೇಕೆಂದು ಅರಿಯುವುದು ಅತ್ಯವಶ್ಯ.

ಸಂವಹನ ಕೌಶಲದ ಪ್ರಾಮುಖ್ಯತೆ

ಹುಟ್ಟಿನಿಂದ ಕೊನೆಯವರೆಗೂ, ಮಾನವ ತನ್ನ ವೈಯಕ್ತಿಕ ಮತ್ತು ವೃತ್ತಿ ಬದುಕಿನ ಪರಿಸರದ ಸಮುದಾಯದೊಂದಿಗಿನ ಒಡನಾಟದಲ್ಲಿ, ಆಲಿಸುವ ಮತ್ತು ಮಾತನಾಡುವ ವಿಸ್ತಾರವಾದ ಪ್ರಕ್ರಿಯೆಯೇ ‘ಸಂವಹನ’. ದಿನನಿತ್ಯದ ವೈಯಕ್ತಿಕ ಅಥವಾ ವೃತ್ತಿ ಬದುಕಿನಲ್ಲಿ ವ್ಯವಹರಿಸುವಾಗ, ಇತರರನ್ನು ಪ್ರೇರೇಪಿಸುವÀ, ಮನವೊಪ್ಪಿಸುವ ಅಥವಾ ಒತ್ತಾಯಿಸುವ ಸಂದರ್ಭಗಳು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಸಂವಹನ ಅತ್ಯಂತ ಪರಿಣಾಮಕಾರಿಯಾಗಿದ್ದು, ಉದ್ದೇಶವನ್ನು ಸಾಧಿಸುವಂತಿರಬೇಕು. ಆದರೆ, ಈ ಕೌಶಲ ಎಲ್ಲರಲ್ಲೂ ಒಂದೇ ಮಟ್ಟದಲ್ಲಿರುವುದಿಲ್ಲ.

ಉದಾಹರಣೆಗೆ, ಜೀವನದಲ್ಲಿ ಯಾವ ಕೊರತೆಗಳಿಲ್ಲದಿದ್ದರೂ, ಚೈತನ್ಯರಹಿತ ನಿರಾಶಾವಾದಿಗಳನ್ನು ನೋಡುತ್ತಿರುತ್ತೇವೆ; ಕೆಲವರು ಮಾತನಾಡುವ ಶೈಲಿಯಿಂದ ನಕಾರಾತ್ಮಕ ಅನಿಸಿಕೆ, ಅನುಭವಗಳಾಗುತ್ತವೆ. ನಾವು ಅಭಿಪ್ರಾಯಗಳನ್ನೂ, ಭಾವನೆಗಳನ್ನೂ ವ್ಯಕ್ತಪಡಿಸುವ ರೀತಿಯಿಂದ ಇತರರಿಗೆ ಬೇಸರ, ಕಿರಿಕಿರಿ ಉಂಟಾಗಿ, ನಕಾರಾತ್ಮಕ ಪ್ರತಿಕ್ರಿಯೆಗಳು ಮೂಡುತ್ತವೆ. ಈ ರೀತಿಯ ಸಂವಹನದಿಂದ ವ್ಯಕ್ತಿಗತ ಮತ್ತು ವ್ಯವಹಾರ ಸಮಸ್ಯೆಗಳು ಉಲ್ಬಣಗೊಂಡು, ನಾವು ಪರಿಣಾಮಕಾರಿಯಾಗಿ ಕೆಲಸಮಾಡಲಾಗುವುದಿಲ್ಲ. ಅಮೇರಿಕದ ಪ್ರಭುದ್ಧ ರಾಜಕಾರಣಿ, ಲೇಖಕ ಬೆಂಜಮಿನ್ ಫ್ರಾಂಕ್ಲಿನ್ ಹೇಳುವಂತೆ, ‘ನೀವು ಬೇರೆಯವರಿಗೆ ಒಳ್ಳೆಯವರಾಗಿದ್ದಾಗ, ನಿಮಗೆ ನೀವು ಅತ್ಯುತ್ತಮರಾಗಿರುತ್ತೀರ’. ಆದ್ದರಿಂದಲೇ, ವೈಯಕ್ತಿಕ ಮತ್ತು ವೃತ್ತಿ ಬದುಕಿನ ಯಶಸ್ಸಿಗೆ, ಮೂಲತಃ ಸಂವಹನ ಕೌಶಲದಿಂದ ಸಾಧಿಸುವ, ಅಂತರ್‍ವೈಯಕ್ತಿಕ ನೈಪುಣ್ಯತೆಯೇ ಆಧಾರ ಸ್ಥಂಭ.

ಸಮುದಾಯದೊಡಗಿನ ನಮ್ಮ ಸಂಪರ್ಕವನ್ನು ನಾಲ್ಕು ವಿಧದಲ್ಲಿ ವಿಂಗಡಿಸಬಹುದು: ನಾವು ಏನು ಮಾಡುತ್ತೇವೆ, ಹೇಗೆ ಕಾಣಿಸಿಕೊಳ್ಳುತ್ತೇವೆ, ಏನು ಮಾತನಾಡುತ್ತೇವೆ ಮತ್ತು ಹೇಗೆ ಮಾತನಾಡುತ್ತೇವೆ. ಹಾಗೂ, ಸಂವಹನ ಪ್ರಕ್ರಿಯೆಯ ಎರಡು ಅಂಶಗಳೆಂದರೆ, ಸಂದೇಶವನ್ನು ನೀಡುವುದು ಮತ್ತು ಸ್ವೀಕರಿಸುವುದು. ಈ ಪ್ರಕ್ರಿಯೆಯಲ್ಲಿ ನಾವು ಬಳಸುವ ಭಾಷೆ ಮತ್ತು ಧಾಟಿಯ ಮೇಲೆ ಮುಖ್ಯವಾಗಿ ಗಮನ ಕೊಡಬೇಕು. ಏಕೆಂದರೆ, ನಮ್ಮ ಮಾತುಗಳು ಕೇವಲ ಅರ್ಥವಾದರೆ ಮಾತ್ರ ಸಾಕಾಗದು; ಅದು ಕೇಳುಗರ ಹೃದಯವನ್ನೂ ಮುಟ್ಟಬೇಕು. ಆಗಲೇ, ಸಂವಹನ ಪರಿಣಾಮಕಾರಿ.

ಪರಿಣಾಮಕಾರಿ ಸಂವಹನ ಕೌಶಲವನ್ನು ಬೆಳೆಸಿಕೊಳ್ಳುವುದು ಹೇಗೆ?

ಸಂವಹನ ಕೌಶಲದ ಅಭಿವೃದ್ಧಿಗೆ ಕೆಳಗೆ ವಿವರಿಸಿರುವ ನಾಲ್ಕು ಪ್ರಕ್ರಿಯೆಗಳನ್ನು ಪಾಲಿಸಿ.

ಸಕ್ರಿಯವಾಗಿ ಆಲಿಸುವುದು

ಸಂವಹನ ಕೌಶಲವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ, ಮೊಟ್ಟಮೊದಲ ಆದ್ಯತೆಯೆಂದರೆ, ಇತರರು ನೀಡುವ ಸಂದೇಶವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು. ಕೆಲವೊಮ್ಮೆ, ಬೇರೆಯವರು ಮಾತನಾಡುತ್ತಿರುವಾಗ ಮನಸ್ಸಿನ ನಿಯಂತ್ರಣ ತಪ್ಪಿ, ನಮ್ಮ ಉಪಸ್ಥಿತಿ ಕೇವಲ ದೈಹಿಕವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸೂಕ್ಷತೆಗಳ ಅರಿವಾಗದೆ, ಸಂದೇಶದ ಸಂಪೂರ್ಣ ಅರ್ಥವಾಗುವುದಿಲ್ಲ. ಆದ್ದರಿಂದ ಬೇರೆಯವರೊಂದಿಗೆ ವ್ಯವಹರಿಸುವಾಗ, ಅವರ ಹಾವಭಾವಗಳನ್ನು ಗಮನಿಸಿ, ಪರಸ್ಪರ ದೃಷ್ಟಿ ಸಂಪರ್ಕದಿಂದ, ಮಾತುಗಳನ್ನು ಸಕ್ರಿಯವಾಗಿ ಆಲಿಸಬೇಕು. ಹಾಗೂ, ಸಮಯ, ಸಂದರ್ಭಕ್ಕೆ ಅನುಗುಣವಾಗಿ ‘ಇದನ್ನು ವಿವರಿಸಿ, ನಿಜ, ಹೌದು, ವಿಚಾರಿಸೋಣ, ಇತ್ಯಾದಿ’ ಪ್ರತಿಕ್ರಿಯೆಗಳಿಂದ ಸ್ಪಂದಿಸಬೇಕು.ಈ ರೀತಿ ಸಕ್ರಿಯವಾಗಿ ಆಲಿಸುವುದನ್ನು ರೂಢಿ ಮಾಡಿಕೊಂಡಲ್ಲಿ, ಕಾಲೇಜಿನ ಉಪನ್ಯಾಸಗಳ ಸಂಪೂರ್ಣ ಲಾಭ ಪಡೆದು, ಹೆಚ್ಚುವರಿ ಟ್ಯೂಶನ್‍ನ ಅವಶ್ಯಕತೆಯಿಲ್ಲದೆ ಅಧ್ಯಯನವನ್ನು ನಿಭಾಯಿಸಬಹುದು. ಅದೇ ರೀತಿ, ಕ್ಯಾಂಪಸ್ ನೇಮಕಾತಿಯ ಸಂದರ್ಶನಗಳಲ್ಲೂ ಮತ್ತು ವೈಯಕ್ತಿಕ ಸಂದರ್ಭಗಳಲ್ಲಿಯೂ, ಸಂವಹನ ಪರಿಣಾಮಕಾರಿಯಾಗುವುದಕ್ಕೆ ಸಹಾಯಕವಾಗುತ್ತದೆ.

ದೇಹಭಾಷೆ [ಬಾಡಿ ಲ್ಯಾಂಗ್ವೇಜ್]

ತಜ್ಞರ ಪ್ರಕಾರ ಮಾತಿಗಿಂತ, ದೇಹಭಾಷೆಯೇ ಮುಖ್ಯ. ಉದಾಹರಣೆಗೆ, ನಾವು ಬೇರೆಯವರನ್ನು ಅಭಿನಂದಿಸುವಾಗ, ಮುಖದ ಭಾವ, ಕಣ್ಣುಸಂಪರ್ಕ, ನಿಲುವು, ಹಸ್ತಲಾಘವ, ಧ್ವನಿ ಮಟ್ಟ, ಶೈಲಿ, ಧಾಟಿ ಇವೆಲ್ಲವೂ ಆಡುವ ಮಾತಿಗಿಂತಲೂ ಪ್ರಮುಖ. ಅಂದರೆ, ನಮ್ಮ ಮಾತಿಗೆ, ದೇಹಭಾಷೆ ಪೂರಕವಾಗಿದ್ದಲ್ಲಿ ಮಾತ್ರ ಸಂವಹನ ಪರಿಣಾಮಕಾರಿ. ಜಗತ್ತಿನಲ್ಲಿ ಸಾವಿರಾರು ಭಾಷೆಗಳಿವೆ; ಅವೆಲ್ಲವನ್ನು ಮೀರಿರುವ ಭಾಷೆಯೇ ಮುಗುಳುನಗೆ. ಆದ್ದರಿಂದ, ಈ ಭಾಷೆಯನ್ನು ಸಾಧ್ಯವಾದಷ್ಟು ಬಳಸಿ. ಈ ತತ್ವಗಳು, ದೂರವಾಣಿ ಸಂಪರ್ಕದಲ್ಲೂ ಅನ್ವಯಿಸುತ್ತದೆಂದು ಮರೆಯಬಾರದು.ಆದ್ದರಿಂದ, ನಿಮ್ಮ ದೇಹಭಾಷೆಗೂ ಆಲೋಚನೆಗಳಿಗೂ ಸಾಮ್ಯತೆಯಿದ್ದು, ಸಂವಹನದಲ್ಲಿ ಪ್ರಾಮಾಣಿಕತೆಯಿರಲಿ. ದೇಹದ ನಿಲುವು ಮತ್ತು ಚಲನೆ, ನಿಮ್ಮೊಳಗಿನ ಆಲೋಚನೆಗಳಿಗೆ ಪೂರಕವಾಗಿರಲಿ.

ಮಾತುಗಾರಿಕೆಯ ಕೌಶಲ

ನಾವು ಮಾತಿನ ಮೂಲಕ ಮಾಹಿತಿಯನ್ನು ರವಾನಿಸುವ ಪ್ರಕ್ರಿಯೆಯೇ ಮೌಖಿಕ ಸಂವಹನ. ಉದಾಹರಣೆಗಳೆಂದರೆ, ಉಪನ್ಯಾಸಗಳು, ಚರ್ಚೆಗಳು, ಪ್ರಶ್ನೆಗಳು, ಭಾಷಣಗಳು, ಸಂವಾದ, ಸಂಭಾಷಣೆ ಇತ್ಯಾದಿ.ವಿದ್ಯೆಯೆಂದರೆ ಕೇವಲ ಓದು, ಬರಹ, ಪರೀಕ್ಷೆಗಳಷ್ಟೇ ಅಲ್ಲ; ವಿದ್ಯೆಯ ಮೂಲ ಉದ್ದೇಶ ಜ್ಞಾನಾರ್ಜನೆ. ಕಾಲೇಜಿನಲ್ಲಿ ಹೇಗೆ ಕಲಿಸುತ್ತಾರೆ ಎಂಬುದರ ಜೊತೆಗೆ ನೀವು ಹೇಗೆ ಕಲಿಯುತ್ತೀರವೆನ್ನುವುದು ಮುಖ್ಯ. ಅದೇ ರೀತಿ, ಕಾಲೇಜಿನಲ್ಲಿ ಉಪನ್ಯಾಸದ ಅಂಶಗಳು ಅರ್ಥವಾಗದಿದ್ದಾಗ, ಪ್ರಶ್ನೆಗಳನ್ನು ಕೇಳಬೇಕು. ಸಹಪಾಟಿಗಳು ಅಪಹಾಸ್ಯ ಮಾಡುವರೆಂಬ ಭಯದಿಂದಲೂ, ಸಂಕೋಚದಿಂದಲೂ ಪ್ರಶ್ನೆಗಳನ್ನು ಕೇಳಲು ಅನುಮಾನಿಸದಿರಿ. ಪ್ರಶ್ನೆಗಳನ್ನು ಕೇಳುವುದೂ ಒಂದು ಕಲೆ; ದುರ್ಬಲ ಧ್ವನಿಯಿಂದಲೋ ಅಥವಾ ವ್ಯಂಗ್ಯವಾಗಿಯೋ, ಮೇಲರಿಮೆಯಿಂದಲೋ ಅಥವಾ ಕೀಳರಿಮೆಯಿಂದಲೋ ಪ್ರಶ್ನೆಗಳನ್ನು ಕೇಳಬಾರದು. ನಮ್ಮ ಪ್ರಶ್ನೆಗಳಲ್ಲಿ, ಕಲಿಯುವ ಪ್ರಾಮಾಣಿಕತೆಯಿರಬೇಕು; ಕೇಳುವ ಧಾಟಿ, ಧ್ವನಿಯ ಏರಿಳಿತ ಮತ್ತು ಧೋರಣೆ ಗೌರವಪೂರ್ವಕವಾಗಿರಬೇಕು. ಪ್ರಶ್ನೆಗಳನ್ನು ಕೇಳುವ ಕಲೆಯನ್ನು ಬೆಳೆಸಿಕೊಂಡರೆ, ನಿಮ್ಮ ಕಲಿಕೆ ಸಂಪೂರ್ಣವಾಗುವುದಲ್ಲದೆ, ವಿಶ್ವಾಸಾತ್ಮಕ ಸಂವಹನಕ್ಕೆ ನೆರವಾಗುತ್ತದೆ.ಇಂದಿನ ಸ್ಪರ್ದಾತ್ಮಕ ಜೀವನದಲ್ಲಿ ಮಾತುಗಾರಿಕೆಯೇ ಬಂಡವಾಳ. ಅದ್ದರಿಂದ, ಉಪನ್ಯಾಸಗಳಲ್ಲಿ, ಚರ್ಚೆ, ಸಂವಾದಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ. ಅದೇ ರೀತಿ, ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಮಾತುಗಾರಿಕೆಯ ಕಲೆಯನ್ನು ಬೆಳೆಸಿಕೊಳ್ಳಬೇಕು. ಇದರಿಂದ, ಸಂವಹನ ಪರಿಣಾಮಕಾರಿಯಾಗುವುದರ ಜೊತೆಗೆ, ಎಲ್ಲರೂ ಮೆಚ್ಚುವ ವ್ಯಕ್ತಿತ್ವ ನಿಮ್ಮದಾಗುತ್ತದೆ.

ಬರವಣಿಗೆಯ [ಲಿಖಿತ] ಕೌಶಲ

ಲಿಖಿತ ಸಂವಹನಕ್ಕೂ ಮೌಖಿಕ ಸಂವಹನದಷ್ಟೇ ಪ್ರಾಮುಖ್ಯತೆಯಿದೆ. ಶಾಲೆ ಕಾಲೇಜುಗಳ ಪರೀಕ್ಷೆಗಳಲ್ಲಿ ವಿಷಯಗಳ ಅರಿವಿನ ಜೊತೆಗೆ ಪ್ರಶ್ನೆಯ ವ್ಯಾಪ್ತಿಯನ್ನರಿತು ಸಮರ್ಪಕವಾಗಿ ಉತ್ತರವನ್ನು ಬರೆಯುವುದೇ ಯಶಸ್ಸಿಗೆ ಮೂಲ. ಉದಾಹರಣೆಗೆ, ಎರಡು ಅಂಕದ ಮತ್ತು ಹತ್ತು ಅಂಕದ ಪ್ರಶ್ನೆಗಳ ವ್ಯಾಪ್ತಿಯಲ್ಲಿನ ಅಂತರವನ್ನು ಗಮನಿಸಿ, ಸೂಕ್ತವಾಗಿ ಉತ್ತರಿಸಬೇಕು.
ವ್ಯಾವಹಾರಿಕ ಜಗತ್ತಿನಲ್ಲಿ, ಮೊದಲಿನಷ್ಟು ಬರವಣಿಗೆಯಿಲ್ಲದಿದ್ದರೂ, ಬರವಣಿಗೆಯ ಉದ್ದೇಶ, ಸ್ವರೂಪಗಳು ಬದಲಾಗಿವೆ. ಇಂದಿನ ವೇಗದ ಯುಗದಲ್ಲಿ, ಇಮೇಲ್ ಬಳಕೆ ಹೆಚ್ಚಾಗಿರುವುದರಿಂದ, ಕಡಮೆ ಪದಗಳಲ್ಲಿ, ಸ್ಪಷ್ಟವಾದ ಸಂದೇಶವನ್ನು ರಚಿಸಬೇಕಾಗುತ್ತದೆ. ವೃತ್ತಿಯಲ್ಲಿ ಅನೇಕರೊಡನೆ-ಮೇಲಧಿಕಾರಿಗಳು, ನೌಕರರು, ಸಹೋದ್ಯೋಗಿUಳು, ಗ್ರಾಹಕರು-ಲಿಖಿತ ರೂಪದಲ್ಲಿ ಸಂದೇಶಗಳನ್ನು ಕಳುಹಿಸುವುದು ಅಗತ್ಯ.ಲಿಖಿತ ಸಂವಹನದಲ್ಲಿ ನಾಲ್ಕು ತತ್ವಗಳನ್ನು ಬಳಸಿದರೆ, ನಮ್ಮ ಬರವಣಿಗೆ ಪರಿಣಾಮಕಾರಿಯಾಗಿ ಮೂಡಿಬರುತ್ತದೆ. ಈ ತತ್ವಗಳೆಂದರೆ: ಅಟೇಂಷನ್, ಇಂಟರೆಷ್ಟ್, ಡಿಸೈರ್ ಮತ್ತು ಆಕ್ಷನ್ [ಂIಆಂ]. ಅಂದರೆ, ನಾವು ಕಳುಹಿಸುವ ಸಂದೇಶವನ್ನು ಸ್ವೀಕರಿಸುವವರ ಗಮನ ಸೆಳೆದು, ಆಸಕ್ತಿ, ಕುತೂಹಲ ಮೂಡಿಸಿ, ವಿಷಯಲಾಲಸೆಯೊಂದಿಗೆ ಕ್ರಮ ತೆಗೆದುಕೊಳ್ಳುವಂತಿರಬೇಕು. ಹಾಗಾಗಿ, ಬರವಣಿಗೆಯ ಮುನ್ನ, ಮಾಹಿತಿ ಸಂಗ್ರಹಣೆ, ಸಂಯೋಜನೆ, ವಿಶ್ಲೇಷಣೆ ಮತ್ತು ನಿರೂಪಣೆಯ ಬಗ್ಗೆ ಚಿಂತಿಸಿ, ಸಂದರ್ಭಕ್ಕೆ ತಕ್ಕಂತೆ ಆಶಯ, ಧಾಟಿ, ಭಾಷೆ ಮತ್ತು ಪದಗಳನ್ನು ಬಳಸಬೇಕು.ಆದ್ದರಿಂದ, ಸಾಂಪ್ರದಾಯಿಕ ಬರವಣಿಗೆಯನ್ನು ಇಂದಿನ ಮಾಧ್ಯಮಕ್ಕೆ, ಉದ್ದೇಶಕ್ಕನುಗುಣವಾಗಿ, ಸಂದೇಶವನ್ನು ಸ್ವೀಕರಿಸುವವರನ್ನು ಗಮನದಲ್ಲಿಟ್ಟುಕೊಂಡು ಅಳವಡಿಸಿಕೊಳ್ಳಿ.ಇಂದು ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಸಂವಹನ ಕುರಿತಾದ ಅಲ್ಪಾವಧಿ ಕೋರ್ಸ್ ಮತ್ತು ತರಬೇತಿಯ ಸೌಲಭ್ಯವಿದೆ. ಹಾಗೆಯೇ, ವ್ಯಾವಹಾರಿಕ ಸಂವಹನ [ಬಿಸಿನೆಸ್ ಕಮ್ಯೂನಿಕೇಶನ್] ವಿಷಯವನ್ನು ಕಡ್ಡಾಯವಾಗಿ ಮ್ಯಾನೇಜ್‍ಮೆಂಟ್ ಇನ್‍ಸ್ಟಿಟ್ಯೂಟ್‍ಗಳಲ್ಲಿ ಸಿದ್ದಾಂತ, ತತ್ವಗಳೊಡನೆ ಪ್ರಾಯೋಗಿಕ ತರಬೇತಿಯನ್ನೂ ನೀಡಲಾಗುತ್ತದೆ.

ಪರಿಣಾಮಕಾರಿ ಸಂವಹನವೇ ಯಶಸ್ಸಿಗೆ ಮೂಲ

ಮಾನವ ಸಂಪಲ್ಮೂನ ಪರಿಣಿತರೂ ಮತ್ತು ಸಿ.ಯಿ.ಒ.ಗಳ ಅಭಿಪ್ರಾಯದಂತೆ ಉದ್ಯೋಗಿಗಳಲ್ಲಿರಬೇಕಾದ ಅತ್ಯಂತ ಪ್ರಮುಖ ಕೌಶಲವೆಂದರೆ, ಸಂವಹನ. ಏಕೆಂದರೆ, ನಿಮ್ಮಲಿರುವ ಶೈಕ್ಷಣಿಕ ಮತ್ತು ತಾಂತ್ರಿಕ ಜ್ಞಾನ, ಮತ್ತಿತರ ಕೌಶಲವನ್ನು ಮೇಲಧಿಕಾರಿಗಳಿಗೂ, ಸಹೋದ್ಯೋಗಿಗಳಿಗೂ ಪರಿಚಯ ಮಾಡಿಕೊಡಬೇಕಾದಾಗ, ಪರಸ್ಪರ ಪ್ರತಿಕ್ರಿಯಿಸುವಾಗ, ಸಂವಹನ ಕೌಶಲ ಅವಶ್ಯ. ನಿಮ್ಮ ಕಾರ್ಯಕ್ಷೇತ್ರ-ಮಾರ್ಕೆಟಿಂಗ್, ಅಕೌಂಟ್ಸ್, ಮಾನವ ಸಂಪಲ್ಮೂನ, ಉತ್ಪಾದನೆ-ಯಾವುದೇ ಇರಲಿ, ಪರಿಣಾಮಕಾರಿ ಸಂವಹನವಿಲ್ಲದೆ ಕಾರ್ಯಕ್ಷಮತೆಗೆ ಧಕ್ಕೆಯಾಗಿ, ನಿಮ್ಮಿಂದ ನಿರೀಕ್ಷಿತ ಫಲಿತಾಂಶ ಹೊರಹೊಮ್ಮಲು ಸಾಧ್ಯವಿರುವುದಿಲ್ಲ.

ಎಲ್ಲರೂ ಜನ್ಮಸಿದ್ಧ ವಾಗ್ಮಿಗಳಾಗಿರುವುದಿಲ್ಲವೆನ್ನುವುದು ನಿಜವಾದರೂ, ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಸಂವಹನ ಕಲೆಯ ಪರಿಪೂರ್ಣತೆ ಸಾಧ್ಯವಾಗುತ್ತದೆ. ನೀವು ವಿದ್ಯಾರ್ಥಿಗಳಾಗಿರಲಿ ಅಥವಾ ಉದ್ಯೋಗಿಗಳಾಗಿರಲಿ, ನಿಮ್ಮ ಕಾರ್ಯಕ್ಷೇತ್ರ ಯಾವುದೇ ಇರಲಿ, ವೃತ್ತಿಯಲ್ಲಿನ ಅಂತಸ್ತು, ದರ್ಜೆಗಳೇನೇ ಇರಲಿ, ಶೈಕ್ಷಣಿಕ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಗುರಿಗಳ ಸಾಧನೆಗೆ, ಸಂವಹನ ಕೌಶಲವೇ ಪ್ರಮುಖ ಸಾಧನ. ಆದ್ದರಿಂದ, ವ್ಯಕ್ತಿತ್ವಕ್ಕೊಂದು ಮೆರುಗು ನೀಡುವ, ಸಂವಹನ ಕೌಶಲವನ್ನು ಬೆಳೆಸಿಕೊಂಡರೆ, ನಿಮ್ಮ ಕಾರ್ಯಕ್ಷಮತೆ ವರ್ಧಿಸಿ, ಸಾಧನೆಯ ಶಿಖರಕ್ಕೇರಿ, ಜೀವನದ ಯಶಸ್ಸು ನಿಮ್ಮದಾಗುತ್ತದೆ.

ಸಂವಹನ ಕೌಶಲಕ್ಕೆ ಸೂತ್ರಗಳು

  • ನೇರ ದೃಷ್ಟಿ ಸಂಪರ್ಕದಿಂದ, ಸಕ್ರಿಯವಾಗಿ ಆಲಿಸಿ; ಅದೇ ರೀತಿ ಪ್ರತಿಕ್ರಿಯಿಸಿ.
  • ಮಾತಿಗೂ ದೇಹಭಾಷೆಗೂ ಹೊಂದಾಣಿಕೆಯಿರಲಿ.
  • ಮೇಲರಿಮೆ ಅಥವಾ ಕೀಳರಿಮೆಯಿಲ್ಲದೆ, ಬೇರೆಯವರ ಭಾವನೆಗಳಿಗೆ ಪ್ರತಿಸ್ಪಂದಿಸಿ.
  • ನಿಮ್ಮ ಮಾತು ಸ್ಪಷ್ಟವಾಗಿ, ನೇರವಾಗಿರಲಿ; ಪುನರುಚ್ಚಾರವನ್ನು ಅವಶ್ಯಕತೆಯಿದ್ದಲ್ಲಿ ಮಾತ್ರ ಉಪಯೋಗಿಸಿ.
  • ನಿಮ್ಮ ಅಭಿಪ್ರಾಯಗಳನ್ನು ಬೇರೆಯವರ ಮೇಲೆ ಹೇರದೆ, ಮನದಟ್ಟು ಮಾಡುವ ಕೌಶಲವನ್ನು ಬೆಳೆಸಿಕೊಳ್ಳಿ.
  • ಟೀಕೆಗಳನ್ನು ಸಮಾಧಾನದಿಂದ ಸಕಾರಾತ್ಮಕವಾಗಿ ಸ್ವೀಕರಿಸಿ; ಅದರಲ್ಲಿ ಅಡಕವಾಗಿರಬಹುದಾದ ಸತ್ಯಾಂಶದ ಬಗ್ಗೆ ಯೋಚಿಸಿ, ಕ್ರಮ ಕೈಗೊಳ್ಳಿ.

Download PDF document

About author View all posts Author website

V Pradeep Kumar

Leave a Reply

Your email address will not be published. Required fields are marked *