ದುಬೈ ಡೈರಿ

2003ನೇ ಸೆಪ್ಟೆಂಬರ್ ತಿಂಗಳ 17ನೇ ದಿನದ ನಡು ರಾತ್ರಿಯಲ್ಲಿ ನಡು ವಯಸ್ಸಿನ ನಾನು ಕೆಲಸಕ್ಕಾಗಿ ಬೇರೊಂದು ರಾಷ್ಟ್ರಕ್ಕೆ ಹೊರಡುವ ಹುಚ್ಚು ಸಾಹಸದ ತಯಾರಿಯಲ್ಲಿದ್ದೆ. ಮನೆಯಲ್ಲಿ  ಆತ್ಮೀಯ ಸ್ನೇಹಿತರು ಮತ್ತು ಬಂಧುಗಳ ನಡುವೆ ಸಮಯ ಹೊಗಿದ್ದೇ ಗೊತ್ತಾಗಲಿಲ್ಲ.  ಪ್ರಾಯಶಃ 2003ನೇ ವರುಷದಲ್ಲಾದಷ್ಟು ಬದಲಾವಣೆ ನನ್ನ ಜೀವನದಲ್ಲಿ ಇನ್ನಾವ ವರುಷದಲ್ಲೂ ಆಗಿರಲಿಕ್ಕಿಲ್ಲ.

23 ವರುಷ ಸತತವಾಗಿ ಕೆಲಸ ಮಾಡಿ ಪ್ರತಿಶ್ಟಿತ ಟಾಟಾ ಸಂಸ್ಥೆಯಲ್ಲಿದ್ದ ದೊಡ್ಡ ಹುದ್ದೆಯನ್ನು ಬೇಸತ್ತು ಬಿಟ್ಟಾಗ ಎಲ್ಲರ ಕಣ್ಣಿನ ಹುಬ್ಬು ಎದ್ದಿದ್ದು ಅಚ್ಚರಿಯೇನಲ್ಲ.ಇದರ ಮದ್ಯೆ ವಿಶಾಲವಾಗಿ ಮತ್ತು ಸುಂದರವಾಗಿ ಬಹಳಷ್ತು ಸಾಲದ ಹೊರೆ ಹೊತ್ತು ಕಟ್ಟಿದ ಮನೆಯನ್ನೂ ಮಾರಿದ ಮೇಲಂತೂ ಇವನಿಗೇನು ಬಂತು ಕೇಡು ಎಂದುಕೊಂಡಿರಲೂ ಸಾಕು!   ನನಗೂ ಬರೆಯುವ ಆಸಕ್ತಿ,ಹಂಬಲ ಇದೆ  ಮತ್ತು ನನಗೆ ಸ್ವಲ್ಪ ವಿರಾಮ ಬೇಕಾಗಿದೆ ಎಂದು ವಿವರಿಸಿದ ಮೇಲೂ ನಂಬದ ಎಷ್ಟೋ ಆತ್ಮೀಯ ಮಹಾನುಭಾವರುಗಳಿಗೆ ನನ್ನ ಕೋಣೆಯ ಕಂಪ್ಯೂಟರ್ನಲ್ಲಿ ಆಗಾಗಲೇ ಬರೆದಿದ್ದ 200ಕ್ಕೂ ಹೆಚ್ಚಿನ ಪುಟಗಳನ್ನು ನೋಡಿದ ಮೇಲಷ್ಟೇ ಸಮಾಧಾನ ಆಗಿರಬಹುದೆಂದುಕೊಂಡಿದ್ದೇನೆ.

ವಿಮಾನ ನಿಲ್ದಾಣದ ಎಲ್ಲಾ ಕೆಲಸಗಳನ್ನು ಮುಗಿಸಿ ವಿಮಾನದಲ್ಲಿ ಕುಳಿತಾಗ ಭಾವನಾಜೀವಿಯಾದ ನನಗೆ ಕಣ್ಣಲ್ಲಿ ನೀರು ಬಂದದ್ದು ಹೊಸದೇನಲ್ಲ. ಇಂತ ಸನ್ನಿವೇಷಗಳಲ್ಲೂ ಮತ್ತು ಕೆಲವೊಂದು ಅತಿಭಾವುಕತೆಯ  ಚಿತ್ರಗಳನ್ನು ನೋಡಿದಾಗಲೂ ಅಷ್ಟೇ ಸಹಜವಾಗಿ ಬರುವ ಕಣ್ಣೀರನ್ನು ಲೇಖಕನಾಗಬೇಕೆಂದುಕೊಂಡಿರುವ ನನಗೆ ಇರುವ ಸಂವೇದನಾಶಕ್ತಿಯ ಪ್ರತೀಕ ಎಂದುಕೊಂಡು ನನಗೆ ನಾನೇ ಸಮಧಾನ ತಂದುಕೊಂಡೆ.

ಬೆಂಗಳೂರಿನಿಂದ ದುಬೈಗೆ ಸುಮಾರು ನಾಲ್ಕು ಗಂಟೆಗಳ ಪ್ರಯಾಣ.  ಪ್ರಯಾಣದ ಕಡೆಯ ಮೂವತ್ತು ನಿಮಿಷಗಳಲ್ಲಿ ನಾನು ಪಟ್ಟ ಪಾಡು ಅಶ್ಟಿಷ್ಟಲ್ಲ. ಭಯಂಕರವಾದ ಕಿವಿಯ ನೋವಿನಲ್ಲಿ ನರಳುತ್ತಾ, ಹನ್ನೆರಡು ವರುಷಗಳ ಹಿಂದೆ ದೆಹಲಿಯಿಂದ ಬರುವಾಗ ಆದ ಕಿವಿಯ ರಂದ್ರದ ಆಗು ಹೋಗುಗಳನ್ನು ನೆನಪಿಸುತ್ತಾ  ನಿಮಿಷಗಳನ್ನು ಎಣಿಸುತ್ತಾ ಮುಳ್ಳಿನ ಮೇಲೆ ಕುಳಿತಂತೆ ಕುಳಿತಿದ್ದೆ. ಆದರೂ ಹುಟ್ಟಿ ಬೆಳೆದ ಬೆಂಗಳೂರಿನಲ್ಲಿ ಇತ್ತೀಚಿಗಷ್ಟೇ ಆದ ಸಾಕಷ್ಟು ಕಹಿ ನೋವುಗಳ ಮದ್ಯೆ ಇದೇನು ಮಹಾ ಎಂದುಕೊಂದು ಹೊಸ ರಾಷ್ಟ್ರದ ಹೊಸ ಅನುಭವಗಳ ಹಾಗೂ ಅದರ ಜೊತೆಗೇ ಬರುವ ಹೊಸ ಜವಾಬ್ದಾರಿಗಳ ಯೋಚನೆಯಲ್ಲಿ ಉಳಿದ ಸಮಯವನ್ನು ಕಳೆದ ನನಗೆ ದುಬೈನಲ್ಲಿ ವಿಮಾನ ಇಳಿದಾಗ ಆದ ನಿರಾಳ ಅಶ್ಟಿಷ್ಟಲ್ಲ.

ದುಬೈ ವಿಮಾನ ನಿಲ್ದಾಣದಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ವಿಮಾನಗಳು ಬಂದು ಹೋಗುತ್ತವೆ ಎಂಬ ಪ್ರಖ್ಯಾತಿ ಪಡೆದಿದೆ. ಇಲ್ಲಿ ಪ್ರತಿ ಮೂರು ನಿಮಿಷಗಳಿಗೆ ಒಂದು ವಿಮಾನ ಇಳಿಯುತ್ತದೆ ಎಂಬ ಖ್ಯಾತಿಯೂ ಇದೆ. ಈ ಪ್ರಯಾಣ ದುಬೈಗೆ ನನ್ನ ಮೂರನೆಯದು ಎಂದು ನೆನಪಾದೊಡನೆ ಇಲ್ಲಿನ ನಿಲ್ದಾಣದ ಶಿಸ್ತು ಮತ್ತು ಅಚ್ಚು ಕಟ್ಟಾದ ವ್ಯವಸ್ತೆಯ ನೆನಪೂ ಕೂಡ ಆಯಿತು. ಎಲ್ಲೂ ಯಾರನ್ನೂ ಕೂಡ ಯಾವುದಕ್ಕೂ ಕೇಳುವ ಪ್ರಮೇಯವೇ ಇಲ್ಲ. ಬಹುತೇಕ ಎಲ್ಲಾ ಅಂತರರಾಷ್ಟ್ರೀಯ ವಿಮಾನ ನಿಲ್ದಾನಗಳಲ್ಲೆಲ್ಲಾ ಹೀಗೆ; ಭಾರತ ದೇಶ ಹಾಗು ಉಳಿದ ಕೆಲವೊನ್ನು ಬಿಟ್ಟಂತೆ. ವಿಮಾನದಿಂದ ಏರೊಬ್ರಿಡ್ಜ್ ಮುಖಾಂತರ ಹೊರ ಬರುತ್ತಿದ್ದಂತೆ ಕಾಣಿಸಿತು:ಕೇರಳದ ಭಾರತೀಯನೊಬ್ಬ ಗಾಜಿನ ಕಿಟಕಿಯನ್ನು ಒರೆಸುತ್ತಿದ್ದ ದ್ರುಶ್ಯ.ದುಬೈನ ಜನಸಂಖ್ಯೆಯ ಶೇಖಡ ಐವತ್ತರಷ್ತು ದಕ್ಷಿಣ ಏಶಿಯ ದೇಶಗಳಿಂದ ವಲಸೆ ಬಂದವರು.ಅದರಲ್ಲಿ ಶೇಖಡ ಐವತ್ತರಷ್ಟು ಕೇರಳೀಯರು.

ಕೇರಳೀಯರ ವಲಸೆ ಹೋಗುವ ಪ್ರವ್ರುತ್ತಿಗೊಂದು ಜೋಕ್!

ಬಹಳ ವರುಷಗಳ ಹಿಂದೆ ಹಿಮಾಲಯ ಪರ್ವತವನ್ನು ಯಾರು ಮೊದಲು ಹತ್ತಿದರು ಗೊತ್ತೇ? ನಾವೆಲ್ಲರೂ ಅಂದುಕೊಂಡಂತೆ ತೇನ್ಸಿಂಗ್ ಮತ್ತು ಹಿಲೇರಿ ಅಲ್ಲ.ಯಾಕೆಂದರೆ ಅವರಿಬ್ಬರೂ ಪರ್ವತವನ್ನು ಹತ್ತಿದಾಗ ಅಲ್ಲೊಬ್ಬ ಕೇರಳೀಯ ಚಾಯ, ಚಾಯ ಎಂದು ಕೂಗುತ್ತ ಬಂದು ಅವರಿಬ್ಬರಿಗೂ ಚಾಯ ಕುಡಿಸಿದನಂತೆ!

ಈಗ ಕೇರಳೀಯರು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಇರುವುದಕ್ಕೊಂದು ಉಪಕತೆ! ಬಹಳ ವರ್ಷಗಳ ಹಿಂದೆ ವ್ಯಾಪಾರದಲ್ಲಿದ್ದ ಅರಬರು ತಮ್ಮ ವ್ಯವಹಾರವನ್ನು ನೋಡಿಕೊಳ್ಳಲು ಯುರೋಪಿಯನ್ನರನ್ನು ಅವಲಂಬಿಸಿದ್ದರಂತೆ. ಕಾಲ ಕ್ರಮೇಣ ಯುರೋಪಿಯನ್ನರ ದಬ್ಬಾಳಿಕೆ ಮತ್ತು ಅವಲಂಬನವನ್ನು ತಡೆಗಟ್ಟಲು ಅರಬರಿಗೆ ನಂಬಿಕಸ್ತ ಜನರು ಬೇಕಾಗಿದ್ದಾಗ ಸಿಕ್ಕಿದವರು ನಮ್ಮ ಕೇರಳೀಯರು!ಕಡಿಮೆ ಸಂಬಳದಲ್ಲಿ ಒಳ್ಳೆ ಕೆಲಸ ಮಾಡುವ ಕೇರಳೀಯರು ಕ್ರಮೇಣ ಅರಬರ ನಂಬಿಕೆಯನ್ನು ಸಂಪಾದಿಸಿದರು.ಇದರ ಜೊತೆಗೆ ಕೇರಳೀಯರು ತಮ್ಮವರಿಗೆ ಮಾಡುವ ಸಹಾಯ ಪ್ರವ್ರುತ್ತಿಯಿಂದ ಒಬ್ಬರಿಂದ ಇನ್ನೊಬ್ಬರು ಬಂದು ಈಗ ಇಲ್ಲಿ

ಇಷ್ಟೊಂದು ಕೇರಳೀಯರು!

ವಿಮಾನದಿಂದ ಇಳಿದ ಕೆಲವೇ ನಿಮಿಷಗಲ್ಲೇ ನನ್ನ ಕಿವಿಯ ನೋವು ಮಾಯವಾಯಿತು. ಹೊರಗೆ ಬರುತ್ತಿದ್ದಂತೆ ಕಂಪನಿಯ ಡ್ರೈವರ್ ಹಾಜರಿದ್ದರು.ದುಬೈ ವಿಮಾನ ನಿಲ್ದಾಣ ಊರಿಗೆ ಅಂಟಿಕೊಂಡಂತೆ ಇದೆ. ಹೀಗಾಗಿ ನನಗಾಗಿ ಕಾದಿರಿಸಿದ್ದ ಹೋಟೆಲ್ ಅಪಾಟ್ರ್ಮೆಂಟ್ ಸೇರಲು ಕೇವಲ ಹದಿನೈದೇ ನಿಮಿಷಗಳಾಯಿತು.

ಹೋಟೆಲ್ ಅಪಾಟ್ರ್ಮೆಂಟ್ ದುಬೈನ ಪ್ರತಿಷ್ತಿತ ಏರಿಯಗಳಲ್ಲಿ ಒಂದಾದ ಬರ್ ದುಬೈನಲ್ಲಿತ್ತು.ಬೆಂಗಳೂರಿನ ಎಂಜಿ ರಸ್ತೆಯಂತೆ,ಅಥವ ದೆಹಲಿಯ ಕನಾಟ್ ಪ್ಲೇಸ್, ಮುಂಬೈನ ಕೊಲಾಬ,ಸಿಂಗಪೂರಿನ ಆರ್ಚರ್ಡ್ ರಸ್ತೆ ಏರಿಯಗಳಂತೆ.ಈ ಮೊದಲು ನಾನೆಂದೂ ಹೋಟೆಲ್ ಅಪಾಟ್ರ್ಮೆಂಟ್ನಲ್ಲಿ ಇರಲಿಲ್ಲ. ಒಂದು ಕೊನೆಯಲ್ಲಿ ಕಿಟಕಿಯ ಅಂಚಿನಲ್ಲಿ ಮೆತ್ತನೆಯ ಸೋ¥sóÀ, ಅದರ ಪಕ್ಕದಲ್ಲಿ ವಿಶಾಲವಾದ ಕಿಂಗ್ ಸೈeóï ಮಂಚ, ರೂಮಿನ ಇನ್ನೊಂದು ಕೊನೆಯಲ್ಲಿ ಎಲ್ಲಾ ಆಧುನಿಕ ವ್ಯವಸ್ತೆಗಳಿದ್ದ ಬಾತ್ ರೂಮ್. ಬಾತ್ ರೂಮಿನ ಪಕ್ಕದಲ್ಲಿ ಅಡುಗೆ ಮನೆ ಮತ್ತು ಅದಕ್ಕೆ ಹೊಂದಿಕೊಂಡಂತಿದ್ದ ಡೈನಿಂಗ್ ಏರಿಯ. ಒಟ್ಟಿನಲ್ಲಿ ದೇಶ ಮತ್ತು ಮನೆ ಬಿಟ್ಟು ಬಂದಿದ್ದ ನನಗೆ ಒಮ್ಮೆಲೇ ಇನ್ನೊಂದು ಹೊಸ ಮನೆಗೆ ಬಂದ ಅನುಭವ.

ತಕ್ಷಣ ನನ್ನ ಹಳೆ ಸ್ನೇಹಿತರಿಗೆ ಫೆÇೀನ್ ಮಾಡಿದೆ.ನನಗಾಗಿ ಕೆಲವು ಮನೆಗಳನ್ನು ನೋಡಿರಬೇಕೆಂದು ಈ ಮೊದಲೇ ಅವರಿಗೆ ಸಂದೇಶವನ್ನು ಕೊಟ್ಟಿದ್ದೆ. ಆದರೆ ಅವರು ಇದುವರಗೆ ಏನನ್ನು ಮಾಡಿರಲಿಲ್ಲ ಎಂದು ತಿಳಿಯಿತು.ಮಧ್ಯಾನದ ಮೇಲೆ ಸಿಗುತ್ತೀವಿ ಮತ್ತು ಮನೆ ಸಿಗುವುದು ಇಲ್ಲಿ ಬಹಳ ಸುಲಭ ಎಂದು ಹೇಳಿದರು.ಆದರೂ ನನಗೆ ಸಮಾಧಾನ ಆಗಲಿಲ್ಲ.ನಾಲ್ಕು ದಿನಗಳ ಅವಧಿಯಲ್ಲಿ ನಾನು ಹೋಟೆಲ್ ಬಿಟ್ಟು ಹೊಸ ಮನೆ ಸೇರುವ ಪರಿಸ್ಥಿತಿಯಲ್ಲಿದ್ದೆ.ಹಾಗಾಗಿ ನಾನು ಯೋಚನೆ ಮಾಡಿ ಗುರುವಾರ ಬೆಳಗ್ಗೆ ದುಬೈಗೆ ಬಂದಿದ್ದೆ.ಗುರುವಾರ ಇಲ್ಲಿ ವೀಕೆಂಡ್.ಇದರ ಲಾಭವನ್ನು ಪಡೆದು ಆದಷ್ಟು ಬೇಗ ಮನೆ ನೋಡುವ ಯೋಜನೆ ನಂದಿತ್ತು.ನನ್ನ ಇನ್ನೊಬ್ಬ ಪರಿಚಿತರಾದ ತ್ರಿಪಾಟಿಯವರಿಗೆ ಫೆÇೀನ್ ಮಾಡಿದೆ. ಬಹಳ ಹಿಂದೆ ಮುಂಬೈನಲ್ಲಿ ಕೆಲವೇ ನಿಮಿಷಗಳ ಪರಿಚಯ.ಬಹಳ ಆತ್ಮೀಯವಾಗಿ ಮಾತಾಡಿ ಕೆಲವು ಸಲಹೆಗಳನ್ನು ಕೊಟ್ಟರು.ಅದರ ಜೊತೆಗೇ ಶಾಕ್ ಸಹ! ” ಈ ದಿನ ಗುರುವಾರ. ಮಧ್ಯಾನದ ಒಳಗೆ ನೀವು ಅಪ್ಪಾಂಟ್ಮೆಂಟ್ಸ್ ಮಾಡಿಕೊಳ್ಳಿ.ಆಮೆಲೆ ಶನಿವಾರದವೊರಗೆ ನಿಮ್ಮ ಕೈಗೆ ಯಾರೂ ಸಿಗುವುದಿಲ್ಲ” ಎಂದಾಗ ನನಗೆ ಶಾಕಲ್ಲದೆ ಇನ್ನೇನು ಆಗಲು ಸಾಧ್ಯ? ಬೆಂಗಳೂರೂ ಸೇರಿದಂತೆ ಭಾರತದ ಎಲ್ಲ ನಗರಗಳಲ್ಲೂ ಸಾಮಾನ್ಯವಾಗಿ ಇಂತಹ ಕೆಲಸಗಳು ಹೆಚ್ಚಾಗಿ ಆಗುವುದು ವೀಕೆಂಡಿನಲ್ಲಿ. ಸಾಕಷ್ಟು ತರಾತುರಿಯಲ್ಲಿ ಬೆಂಗಳೂರಿನಿಂದ ಹೊರಟಿದ್ದ ನನಗೆ ಬೇರೊಂದು ರಾಷ್ಟ್ರದ ಜೀವನ ಶೈಲಿಯಲ್ಲಿ ಇರುವ ಸೂಕ್ಷ್ಮಗಳನ್ನು ಗಮನಿಸದೆ ಮಾಡಿದ ದೊಡ್ಡ ತಪ್ಪಿನ ಅರಿವಾಗಿದ್ದು,ಫೆÇೀನ್ನಲ್ಲಿ ಯಾರೂ ಸರಿಯಾಗಿ ಸಿಕ್ಕದಿದ್ದಾಗ.

ಆದರೂ ನಾನು ಎದೆಗೊಂಡಲಿಲ್ಲ.ದುಬೈನ ಕ್ಲಾಸಿ¥sóÉೈಡ್ ನ್ಯೂಸ್ ಪೇಪರ್ ತರಿಸಿದೆ.

ಕೇವಲ ಪ್ರಾಪರ್ಟೀಸ್ ಬಗ್ಗೆ ಇರುವ ಭಾಗದಲ್ಲಿ 32 ಪುಟಗಳನ್ನು ಕಂಡು ಒಂದು ಸಮಾದಾನ!ಇಷ್ಟೊಂದು ಫೆÇೀನ್ ನಂಬರ್ ಇರುವಾಗ ನನಗೆ ಕೆಲವರಾದರೂ ಸಿಗುವುದಿಲ್ಲವೇ ಎಂದುಕೊಂಡು ನೋಡಲು ಶುರು ಮಾಡಿದೆ.ದುಬೈನಲ್ಲಿ ಪ್ರತಿ ಹತ್ತು ಜನರಲ್ಲಿ ಆರು ಜನಗಳಲ್ಲಿ ಮೊಬೈಲ್ ಫೆÇೀನ್ ಇರುತ್ತದೆ.ಮತ್ತು ಕೆಲಸ ಮಾಡುವ ಎಲ್ಲರಲ್ಲೂ ಫೆÇೀನ್ ಇರುವುದರಿಂದ ನನಗೆ ಸಾಕಶ್ಟು ರಿಯಲ್ ಎಸ್ಟೇಟ್ ಕಂಪನಿಗಳ ಸೇಲ್ಸ್ ಎಗ್ಸಿಕುಟಿವ್ಸ್ಗಳು ಸಿಕ್ಕರು.ಸಿಗದಿಲ್ಲದಲ್ಲಿ ನಾನು ಬಿಡಬೇಕಲ್ಲ!

ದುಬೈನಲ್ಲಿ ಕೆಲಸ ಮಾಡುವ ವೈಖರಿಯ ಪರಿಚಯ ಆದದ್ದು ನನಗೆ ಈಗಲೆ. ನನ್ನ ಮತ್ತು ನನಗೆ ಬೇಕಾದ ಏರಿಯಗಳ ವಿವರಗಳನ್ನು ಪಡೆದ ಮೇಲೆ ಬಹಳ ಸುಲಭವಾಗಿ ಫೆÇೀನಿನಲ್ಲಿಯೇ ಉತ್ತರವನ್ನೂ ಕೊಟ್ಟೇಬಿಟ್ಟರು!ನಮ್ಮ ಹತ್ತಿರ ನಿಮಗೆ ಒಪ್ಪುವಂತ ಮನೆಗಳು ಇದೆ, ಆದರೆ ಇದರ ಬಗ್ಗೆ ನಾವು ಕೇವಲ ಶನಿವಾರ ಮಾತ್ರ ತೋರಿಸಿ ಮಾತಾಡಬಹುದು ಎಂದಾಗ ನನಗೆ ಆಶ್ಚರ್ಯವಾಯಿತು. ಮಾರ್ಕೆಟಿಂಗ್ನಲ್ಲಿ 23ವರುಷಗಳ ಸತತ ಕೆಲಸ ಮಾಡಿ, ಅದರ ಎಲ್ಲಾ ಮರ್ಮಗಳನ್ನೂ ಅರಿತು ಮತ್ತು ನೂರಾರು ಯುವಕರಿಗೆ ಮಾರ್ಕೆಟಿಂಗ್ ಮಾಡುವುದು ಹೇಗೆ ಎಂದು ಟ್ರೈನಿಂಗ್ ಕೊಟ್ಟಿದ್ದ ನನಗೆ ಈತರಹದ ಅನುಭವ ಆಗಿರಲಿಲ್ಲ. ಗ್ರಾಹಕರ ತ್ರುಪ್ತಿಯಲ್ಲಿಯೇ ಯವುದೇ ಕಂಪನಿಯ ಮತ್ತು ತಮ್ಮ ಅಭಿವ್ರುದ್ದಿಯೆಂದೂ ಯಾವ ಸಮಯದಲ್ಲೇ ಆಗಲಿ, ಅದು ರಜಾ ದಿನಗಲ್ಲಾದರೂ ಸರಿ, ನಾವು ಸಮಯ ಬಂದಾಗ ಗ್ರಾಹಕರ ಅಥವಾ ಕಂಪನಿಯ ಕೆಲಸ ಮಾಡಲು ಮುಂದೆ ಬರಬೇಕು ಎಂದುಕೊಂಡು ಅದನ್ನೇ ಎಲ್ಲರಿಗೂ ಹೇಳುತ್ತ ಬಂದಿದ್ದ ನನಗೆ ನಿಜಕ್ಕೂ ಬೇರೊಂದು ಅನುಭವ. ಆದರೆ ಇದರ ಹಿಂದಿರುವ ಕಾರಣಗಳ ಅರಿವಾಗಲು ಸಮಯವಾಗಲಿಲ್ಲ.

ದುಬೈ ಏಳು ಸಣ್ಣ ರಾಜ್ಯಗಳ ಒಂದು ಒಕ್ಕೂಟವಾದ ಯುನೈಟೆಡ್ ಅರಬ್ ಎಮಿರೇಟ್ಸ್ನ ಪ್ರಮುಖ ಅಂಗ.1971ರಲ್ಲಿ ಉದಯವಾದ ಈ ರಾಷ್ತ್ರ ಅಭಿವುದ್ಧಿಪರವಾದ ಯೋಜನೆಗಳು ಮತ್ತು ಸಂಪೂರ್ಣವಾದ ಇಮ್ಪ್ಲಿಮೆಂಟೇಶನ್ನಿಂದ ತೀವ್ರವಾದ ಬೆಳವಣಿಗೆಯನ್ನು ಎಲ್ಲಾ ಕ್ಷೇತ್ರದಲ್ಲೂ ಕಂಡಿದೆ. ಈ ದೇಶಗಳು ಕೇವಲ ಆಯಿಲ್ನಿಂದ ಮಾತ್ರ ಮುಂದೆ ಬಂದಿದೆ ಎಂಬ ತಪ್ಪು ನಂಬಿಕೆಗಳು ಸಾಮಾನ್ಯವಾಗಿ ಎಲ್ಲರಿಗೂ ಇರುವುದು ಸಹಜ. ವಾಸ್ತವವಾಗಿ ನಿಜಾಂಶ ಬೇರೆ. ಯುಎಇ ತನ್ನ ಎಕಾನಮಿಯಲ್ಲಿ ಬ್ಯಾಂಕಿಂಗ್, ಟ್ರೇಡಿಂಗ್, ಇನ್ಫ್ರಾಸ್ತ್ರಕ್ಚರ್ ಮತ್ತು ಸರ್ವಿಸಸ್ಗೆ ಬಹಳ ಪ್ರಾಮುಖ್ಯತೆಯನ್ನು ಕೊಟ್ಟು ರಾಷ್ಟ್ರದ ಎಕಾನಮಿಯನ್ನು ಬಲಿಶ್ಟವಾಗಿ ಮಾಡಿದೆ. ಸುಮಾರು ಹದಿನೇಳು ಅರಬ್ ರಾಶ್ಟ್ರಗಳಲ್ಲಿ ಯುಎಇಗೆ ಪ್ರತಿ ಪ್ರಜೆಯ ವಾರ್ಶಿಕ ಆದಾಯದಲ್ಲಿ ಎರಡನೇ ಸ್ಥಾನ.ಅದರೆ  ಪ್ರಪಂಚದ ಸುಮಾರು ನಾಲ್ಕನೇ ಒಂದು ಭಾಗದ ಆಇಲ್ ರಿಸವ್ರ್ಸ್ ಹೊಂದಿರುವ ಸೌದಿ ಅರೇಬಿಯಾಗೆ ಐದನೆ ಸ್ಥಾನ! ಏಕೆಂದರೆ ಸೌದಿಯಲ್ಲಿ ಹೆಚ್ಚಾಗಿ ಆಇಲ್ ಬಿಟ್ಟರೆ ಬೇರೆನಿಲ್ಲ.ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಸ್ಥಗಿತವಾದ ಆಇಲ್ನ ಬೆಲೆಯಿಂದ ಸೌದಿಯ ಪ್ರತಿ ಪ್ರಜೆಯ ವಾರ್ಶಿಕ ಆದಾಯ 8053[2002] ಡಾಲರ್.ಆದರೆ ಯುಎಇಯಲ್ಲಿ ಇದು ಎರಡುವರೆಯಶ್ಟು ಹೆಚ್ಚು, 20,509 ಡಾಲರ್[2002]. ಇದಲ್ಲದೆ ಕಳೆದ ಐದು ವರ್ಷಗಳಲ್ಲಿ ಯುಎಇಯಲ್ಲಿ ಈ ಸಂಖ್ಯೆ 15% ಹೆಚ್ಚಾದರೆ ಸೌದಿಯಲ್ಲಿ ಇದು ಬರೀ 6% ಹೆಚ್ಚಾಗಿದೆ.

ಹೀಗಾಗಿ ಇಲ್ಲಿ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಿವೆ.ಇಲ್ಲಿ ಕೆಲಸವಲ್ಲದೆ ತಮ್ಮ ಕುಟುಂಬಕ್ಕೂ ಜೀವನ ಶೈಲಿಗೂ ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ.ಸುಂದರವಾದ ಬೀಚ್ಗಳಿಗೆ ಹೋಗುವುದು, ಭವ್ಯವಾದ ಶಾಪಿಂಗ್ ಮಾಲ್ಸ್,ಡೆಸರ್ಟ್ ಸಫಾರಿಗಳಲ್ಲದೆ ಸಿನಿಮ, ಬಗೆಬಗೆಯ ರೆಸ್ಟೊರೆಂಟ್ಸ್,ಪಬ್ಸ್,ಡಿಸ್ಕೊ, ಇತ್ಯಾದಿ ಹವ್ಯಾಸಗಳಿಗೆ ಸಮಯವನ್ನು ತೆಗೆಯುವುದಾದರೂ ಹೇಗೆ? ಮತ್ತು ಸುಮಾರು ನಾಲ್ಕನೇ ಮೂರು ಭಾಗ ವಲಸೆ ಬಂದಿರುವ ಮತ್ತು ಹೆಚ್ಚಿನ ಆದಾಯದ ಜನ ಮಾಡುವುದಾದರೂ ಏನು?  ಇದರ ಪ್ರತಿಫಲವನ್ನು ಕೇವಲ 600 ಡಾಲರ್ ವಾರ್ಷಿಕ ಆದಾಯದ ಆರ್ಥಿಕವಾಗಿ ಇನ್ನೂ ಹಿಂದುಳಿದಿರುವ ರಾಷ್ಟ್ರದಿಂದ ಬಂದ ನಾನು ಮೊದಲನೇ ದಿನವೇ ಎದುರಿಸಬೇಕಾಯಿತು. ಆದರೂ ಹಿಡಿದ ಕೆಲಸವನ್ನು ಜಿಗಣೆಯಂತೆ ಹಿಂದೆ ಬಿದ್ದು ಮಾಡುವ ಮತ್ತು ಮಾಡಿಸಿಕೊಳ್ಳುವ ಜಾಯಮಾನದ ನನಗೆ ಕೊನೆಗೂ ಒಬ್ಬ ಬಡಪಾಯಿ ಗಂಟು ಬಿದ್ದ! ಮಧ್ಯಾನದ ಊಟದ ನಂತರ ನಾಲ್ಕು ಗಂಟೆಗೆ ಕೆಲವು ಮನೆಗಳನ್ನು ತೋರಿಸುತ್ತೇನೆ ಎಂದು ಭರವಸೆ ಕೊಡುವ ತನಕ ನಾನವನನ್ನು ಬಿಡಲಿಲ್ಲ.

ಈವರೆಗೆ ಸಮಯ ಸುಮಾರು 1 ಘಂಟೆಯಾಗಿತ್ತು. ರಾತ್ರಿ ಪ್ರಯಾಣದ ಆಯಾಸ ಈಗ ತೋರುತ್ತಿತ್ತು.ಮಾಡಲು ಇನ್ನೇನೂ ಇರಲಿಲ್ಲ. ನನ್ನ ಸ್ನೇಹಿತರು ಬರಲು ಇನ್ನೂ ಸಮಯವಿತ್ತು.ನನ್ನ ಹಿಂದಿನ ಕೆಲಸದ ಮತ್ತು ಮುಂದಿನದರ ಬಗ್ಗೆ ಯೋಚಿಸುತ್ತಾ ಕೈಕಾಲು ಚಾಚಿ ಮಲಗಿಕೊಂಡೆ.ಕೆಲವಷ್ಟೇೀ ದಿನಗಳ ಕೆಳಗೆ ನಾನು ದುಬೈಗೆ ಬರುತ್ತೀನೆಂಬ ಕನಸೂ ಇರಲಿಲ್ಲ. ನನ್ನ ಜೀವನದ ಬಗ್ಗೆ ಸಾಕಷ್ಟು ಯೋಚನೆ ಮಾಡಿ ಅದರಂತೆ ಪ್ರಯತ್ನಗಳನ್ನೂ ಮಾಡಿದ್ದರೂ ಸಹ, ಕೊನೆಗೆ ಬಂದದ್ದನ್ನು ತ್ರುಪ್ತಿಯಿಂದ ಸ್ವೀಕರಿಸುವ ಸ್ವಭಾವದ ನನಗೆ ಜೀವನದಲ್ಲಿ ಆಗಾಗ್ಗೆ ಬರುವ ಆಶ್ಚರ್ಯಗಳ ಮತ್ತು ಅಘಾತಗಳ ಅರಿವಿತ್ತು. ನನ್ನ ಹೆಂಡತಿ ಅನಿತ ಕೆಲವು ತಿಂಗಳ ಹಿಂದೆ, ” ನೀವು ದುಬೈಗೆ ಹೋಗುತ್ತೀರೆಂದು ನನಗನಿಸುತ್ತಿದೆ” ಎಂದಾಗ ಮುಗುಳ್ನಕ್ಕಿ ಸುಮ್ಮನಾಗಿದ್ದ ನೆನಪು ಬಂತು.ಕೆಲವರಿಗೆ ಅದು ಹೇಗೆ ಈತರಹದ ಪ್ರಿಮೊನಿಶನ್ ಆಗುತ್ತದೆ ಎಂದು ಯೋಚಿಸುತ್ತಾ ಹಾಗೇ ಮಲಗಿದೆ. ಪ್ರಾಯಶಃ ಸ್ವಲ್ಪ ಸಮಯದ ನಂತರ ಇದ್ದಕಿದ್ದ ಹಾಗೆ ಎಚ್ಚರವಾಯಿತು. ಎಲ್ಲೋ ಎನೋ ತಪ್ಪಾದಂತೆ ಅರಿವು.ತಕ್ಷಣ ಎದ್ದು ನನ್ನ ಪರ್ಸ್ ತೆಗೆದೆ. ನನ್ನಲ್ಲಿದ್ದ ಡ್ಯೂಟಿ ಫಿû್ರೀ ಬಿಲ್ ಮತ್ತು ನನ್ನ ಹಣವನ್ನು ಚೆಕ್ ಮಾಡಿದೆ.ಅಘಾತವಾಯಿತು.ಮತ್ತೆ ಚೆಕ್ ಮಾಡಿದೆ.ಖಂಡಿತ ಅಚಾತುರ್ಯವಾಗಿತ್ತು.ನನಗೆ ಮತ್ತು ನನ್ನ ಸ್ನೇಹಿತರಿಗೆಂದು ಕೊಂಡಿದ್ದ ಸ್ಕಾಚ್ ಬಿಲ್ಲಿನಲ್ಲಿ ತಪ್ಪಾಗಿಹೋಗಿತ್ತು.ಎರಡು ಲೀಟರ್ನ ಪೆÇ್ರಮೊಶನ್ ಪ್ಯಾಕೆಟ್ ಕೊಂಡಿದ್ದ ನನಗೆ ನಾಲ್ಕು ಲೀಟರ್ನ ಬಿಲ್ಲಾಗಿತ್ತು. ಕಿವಿಯ ನೋವಿನ ಹಿನ್ನೆಲೆಯಲ್ಲಿ ಸರಿಯಾಗಿ ಚೆಕ್ ಮಾಡದೆ ಸುಮಾರು ಎರಡುವರೆ ಸಾವಿರ ರೂಪಾಯಿಯನ್ನು ಹೆಚ್ಚು ಕೊಟ್ಟು ಬಂದಿದ್ದೆ.ಮೊದಲ ದಿನವೇ ಹೀಗಾಯಿತಲ್ಲ ಎಂದು ಬೇಜಾರೂ ಆಯಿತು.

ಡ್ಯೂಟಿ ಫ್ರೀ ಬಿಲ್ಲಿನಲ್ಲಿನ ಟೆಲಿಫೆÇೀನ್ ನಂಬರ್ ಹುಡುಕಿದೆ.ಡಯಲ್ ಮಾಡಿದ ತಕ್ಷಣ ಆ ಕಡೆಯಿಂದ ಉತ್ತರ ಬಂದಿತು.ಪ್ರಾಯಶಃ ಪೂರ್ವ ಏಶಿಯ ಕಡೆಯಿಂದ ಬಂದ ಹುಡುಗಿ ಇರಬಹುದು. ಅವಳ ಇಂಗ್ಲೀಶ್ ಉಚ್ಛಾರಣೆಯನ್ನು ಅರ್ಥಮಾಡಿಕೊಂಡು ವಿವರಿಸಲು ಸಾಕಷ್ಟು ಪ್ರಯತ್ನ ಪಡಬೇಕಾಯಿತು.ಆದರೂ “ನಿಮ್ಮ ದೂರನ್ನು ಪರಿಶೀಲಿಸಿ ಮತ್ತೆ ನಿಮಗೆ ಫೆÇೀನ್ ಮಾಡುತ್ತೇವೆ” ಎಂಬ ಅವಳ ಮಾತಿನ ಸಾರಾಂಶ ತಿಳಿಯಿತು.ಹೇಳಿದಂತೆ ಹದಿನೈದು ನಿಮಿಶಗಳಲ್ಲಿ ಫೆÇೀನ್ ಬಂತು.ಇನ್ನಷ್ಟು ವಿವರಗಳನ್ನು ಕೇಳಿಕೊಂಡು ಮತ್ತೆ ನಿಮಗೆ ಫೆÇೀನ್ ಮಾಡುತ್ತೀವಿ ಎಂಬ ಭರವಸೆ. ನನಗೆ ಕಾಯುವ ತಾಳ್ಮೆ ಇರಲಿಲ್ಲ. ರೂಮಿನಲ್ಲಿ ಆಕಡೆಯಿಂದ ಈಕಡೆಯಂತೆ ಓಡಾಡುತ್ತ ಇಪ್ಪತ್ತು ನಿಮಿಷಗಳನ್ನು ಕಳೆದೆ.ಮತ್ತೆ ಫೆÇೀನ್ ಮಾಡಿದೆ. ಅತ್ಯಂತ ಸಮಾಧಾನಕರವಾದ ಉತ್ತರ ಬಂತು.”ಕ್ಷಮಿಸಿ! ನಮ್ಮಿಂದ ತಪ್ಪಾದಂತಿದೆ. ದಯವಿಟ್ಟು ನೀವು ಮತ್ತೆ ಡ್ಯೂಟಿ ಫ್ರೀ ಶಾಪಿಗೆ ಬನ್ನಿ. ನಿಮ್ಮ ಬಿಲ್ಲನ್ನು ನೋಡಿ ನಿಮಗೆ ಹಣವನ್ನು ವಾಪಸ್ ಮಾಡುತ್ತೇವೆ” ಎಂದಾಗ ಆಶ್ಚರ್ಯಕರವಾದ ಸಂತೋಶವಾಯಿತು. ತಕ್ಷಣ ಚೇತರಿಸಿಕೊಂಡು ಲೆಕ್ಕ ಹಾಕಿ ಉತ್ತರಿಸಿದೆ. “ನೋಡಿ ನಾನು ಈ ಊರಿಗೆ ಹೊಸಬ.ಮತ್ತು ನನಗೆ ಅಲ್ಲಿಗೆ ಬರಲು ಸಮಯದ ಅಭಾವ ಇರುವುದರಿಂದ ನನ್ನ ಹೋಟೆಲಿಗೆ ನೀವು ಹಣವನ್ನು ಕಳುಹಿಸಿ” ಎಂದು ನಯವಾಗಿಯೇ ಕೇಳಿಕೊಂಡೆ.ಆದರೆ ಇದಕ್ಕೆ ಅವಳು ಸುಲಭವಾಗಿ ಒಪ್ಪಲಿಲ್ಲ.ಮತ್ತದೇ ಪ್ರಶ್ಣೆ;ಈದಿನ ಗುರುವಾರ. ಆದ್ದರಿಂದ ಕಳುಹಿಸಲು ಆಗುವುದಿಲ್ಲ ಎಂದು ಅವಳು. ಬಿಡಲು ನಾನು ತಯಾರಿಲ್ಲ. ಕೊನೆಗೂ ಅವಳು ಕಳುಹಿಸಲು ಒಪ್ಪುವಂತೆ ಮಾಡಿದೆ.ಸಂಜೆ ಸುಮಾರು ನಾಲ್ಕರ ಹೊತ್ತಿಗೆ ಕಳುಹಿಸುವುದೆಂದೂ ಮತ್ತು ಆ ಹಣವನ್ನು ರಿಸೆಪ್ಷನ್ನಲ್ಲಿ ಕೊಡುವುದೆಂದೂ ಒಪ್ಪಂದವಾಯಿತು.

ನನ್ನ ಸ್ನೇಹಿತರು ಕೊನೆಗೂ ಬಂದಾಗ ಸುಮಾರು ಮೂರು ಗಂಟೆ.ತಕ್ಷಣ ಟಾಕ್ಸಿಯಲ್ಲಿ ಊಟಕ್ಕೆಂದು ಹೊರಟೆವು.ಇಲ್ಲಿ ಮೂರು ಟಾಕ್ಸಿ ಕಂಪನಿಗಳಿವೆ.ಪಿಕಪ್ ಮಾಡುವುದಕ್ಕೆ 3 ಧಿರಾಮ್[ಸುಮಾರು ನಲವತ್ತು ರೂಪಾಯಿಗಳು] ಮತ್ತು ಪ್ರತಿ ಕಿಲೊಮೀಟರಿಗೆ 1.50 ಧಿರಾಮ್[ ಸುಮಾರು ಇಪ್ಪತ್ತು ರೂಪಾಯಿಗಳು] ಮೊದಲ ಸಾರಿ ಟಾಕ್ಸಿಯಲ್ಲಿ ಕುಳಿತಾಗ ಎಧೆ ಧಸಕ್ ಎನ್ನುವುದು ಸಹಜ. ಆದರೆ ಎಲ್ಲಾ ಒಳ್ಳೆಯ ಕಾರುಗಳು. ಜಪಾನಿನ ಟೊಯೋಟ ಕಂಪನಿಯ ಕ್ಯಾಮರಿ, ಅಮೇರಿಕದ ಫೆÇೀರ್ಡ್ ಕಂಪನಿಯ ಮೊಂಡಿಯೊ ಅಥವ ಯುರೋಪಿನ ಪ್ಯಿಜೋ.ಎಲ್ಲಾ ಭವ್ಯವಾದ ಕಾರುಗಳು.ದುಬೈನ ಟಾಕ್ಸಿಗಳು,ಇಲ್ಲಿನ ಸುಂದರವಾದ ಕಟ್ಟಡಗಳು ಹಾಗು ಇಲ್ಲಿನ ರಸ್ತೆಗಳನ್ನು ನೋಡಿ ನನ್ನದೇ ಆದ ಗುಂಗಿನಲಿದ್ದ ನನಗೊಂದು ಪ್ರಶ್ಣೆಯಿಂದ ಎಚ್ಚರವಾಯಿತು.

“ಎಲ್ಲಿಗೆ ಹೋಗೊಣ ಊಟಕ್ಕೆ?” ಕೇಳಿದರು ನನ್ನ ಸ್ನೇಹಿತರು.

ಬಹಳಶ್ಟು ಪ್ರವಾಸ ಮಾಡಿದ್ದರೂ ಸಹ ನನ್ನ ಆದ್ಯತೆ ಇದ್ದದ್ದು ಭಾರತೀಯ ಅಡುಗೆಗೆ.ಅದರಲ್ಲೂ ದಕ್ಷಿಣ ಭಾರತದದ್ದು.

“ಎಲ್ಲಾದರೂ ಸರಿ” ಎಂದು ಉತ್ತರಿಸಿದೆ.ನನ್ನ ಮನಸ್ಸು ಮುಂದಿನ ಮನೆ ಹುಡುಕುವ ಯೋಚನೆಯಲ್ಲಿತ್ತು.ನನ್ನ ಸ್ನೇಹಿತರೇ ನಿರ್ಣಯ ಮಾಡಿದರು.

ಸುಮಾರು ನಾಲ್ಕು ಕಿಲೊಮೀಟರ್ಗಳ ಪ್ರಯಾಣದ ನಂತರ ಕರಾಮ ಎಂಬ ಏರಿಯಾದಲ್ಲಿ ಇಳಿದಾಗ ನೋಡಿದೆ. ವೀನಸ್ ಎಂಬ ಉಡುಪಿಯ ರೆಸ್ಟೋರೆಂಟ್.ಎಷ್ಟೋ ವರುಷಗಳ ಹಿಂದೆ ಮೊದಲು ಮುಂಬೈ ಸೇರಿದ ಉಡುಪಿಯ ಭಟ್ಟರು ಕಾಲ ಕ್ರಮೇಣ ದೇಶ ವಿದೇಶಗಳಲ್ಲೂ ಪ್ರಖ್ಯಾತಿ ಪಡೆದಿದ್ದರು.ಕಳೆದ ಎರಡು ವರುಷಗಳ ಹಿಂದೆ ಸಿಂಗಪೂರಿಗೆ ಹೋಗಿದ್ದಾಗ ಬಾಯಿ ಕೆಟ್ಟು ರಾತ್ರಿ ಎಲ್ಲರ ಕಣ್ಣು ತಪ್ಪಿಸಿ ನಾವು ಕೆಲವೊಬ್ಬರು ಉಡುಪಿ ಹೋಟಲಿಗೆ ಹೋಗಿ ಇಡ್ಲಿ ದೋಸೆ ತಿಂದ ನೆನಪೂ ಬಂತು. ಆದರೆ ಯಾರಿಗೂ ದುಬೈನಲ್ಲಿ ಬಾಯಿ ಕೆಡುವ ಸಾಡತೆ ಇಲ್ಲ. ಸುಮಾರು ನಾಲ್ಕನೇ ಮೂರು ಭಾಗ ವಲಸೆ ಬಂದವರೇ ಇರುವ ದುಬೈನಲ್ಲಿ ಎಲ್ಲಾ ದೇಶಗಳ, ಎಲ್ಲ ರುಚಿಗಳ ರೆಸ್ಟೋರೆಂಟ್ಗಳಿವೆ.ಲೆಬನೀಸ್, ಅರಬ್, ಚೈನೀಸ್, ಜಾಪನೀಸ್, ಮೆಕ್ಸಿಕನ್, ಥಾಇ,ಅಮೇರಿಕನ್, ಫಾಸ್ಟ್ ¥sóÀÅಡ್ ಅಲ್ಲದೆ ನಮ್ಮದೇ ಆದ ಕೇರಳೀಯ, ಗುಜರಾತಿ,ಮೊಘಲೈ, ಗೋವನ್ ಮತ್ತು ಉಡುಪಿಯೂ ಸೇರಿದಂತೆ ಯಾವ ಬಾಯಿಗೂ ಯಾವ ರುಚಿಗೂ ಮೋಸ ಇಲ್ಲ. ಊಟ ಶುದ್ಧ ಉಡುಪಿಯ ಶೈಲಿಯಲ್ಲಿತ್ತು.ವಾತಾವರಣ ಬೆಂಗಳೂರಿನಂತೆ.ಹಸಿದ ಹೊಟ್ಟೆಗೆ ಬೇರೊಂದು ದೇಶದಲ್ಲಿ ಇನ್ನೇನು ಬೇಕು?…

ಸುಮಾರು ನೂರು ಪುಟಗಳ ಈ ಲೇಖನವನ್ನು ಓದುವ ಅಥವಾ ಪ್ರಕಟಿಸುವ ಇಚ್ಛೆಯಿದ್ದಲ್ಲಿ, ದಯವಿಟ್ಟು ಸಂಪರ್ಕಿಸಿ.

            

About author View all posts Author website

V Pradeep Kumar

Leave a Reply

Your email address will not be published. Required fields are marked *