ಆಧುನಿಕ ಜಗತ್ತಿನ ಅದ್ಭುತ: ಸೂಯೆಜ್ ಕಾಲುವೆ

ಸೂಯೆಜ್ ಕಾಲುವೆಯ ದಡದಲ್ಲಿ ನಿಂತು ಸಾಗುತ್ತಿರುವ ಹಡಗುಗಳನ್ನು ನೋಡಿದಾಗ, ಪಿರಮಿಡ್‍ಗಳ ಸನಿಹದಲ್ಲಿದ್ದಾಗ ಆದ ಮರೆಯಲಾಗದ ವಿಸ್ಮಯಕಾರೀ ಅನುಭವವೇ ಆಯಿತು. ಪಿರಮಿಡ್ ಮಾನವನ ಬುದ್ಧಿಶಕ್ತಿಯ ಸಂಕೇತ ಮತ್ತು ಇಂದಿಗೂ ಪುರಾತನ ಪ್ರಪಂಚದ ಉಳಿದಿರುವ ಏಕೈಕ ಅದ್ಭುತ. ಹಾಗೆ0iÉುೀ ಸೂಯೆಜ್ ಕಾಲುವೆ ಸಹ, ಆಧುನಿಕ ಪ್ರಪಂಚದ ಒಂದು ಅದ್ಭುತ. ಈ ಎರಡೂ ಅದ್ಭುತಗಳ ನಡುವೆ ಇರುವುದೊಂದು ಭವ್ಯವಾದ ಪರಂಪರೆ, ಇತಿಹಾಸವುಳ್ಳ, ಈಜಿಪ್ಟಿನ ನಾಗರೀಕತೆ.


ದುಬೈ ಮುಖಾಂತರ ಬೆಳಗ್ಗೆ ಎಂಟು ಗಂಟೆಗೆ ಕೈರೊ ತಲುಪಿದಾಗ, ಮುಂಜಾನೆಯ ಮಂಜಿನ ವಾತಾವರಣ. ವಿಮಾನ ನಿಲ್ದಾಣದಿಂದ ಹೊರಬಂದಾಗ ನಮ್ಮ ಗೈಡ್ ಒಸಾಮ ಕಾಯುತ್ತಿದ್ದ. ನಮ್ಮ ಪ್ರವಾಸದ ಎಲ್ಲಾ ಸೂಚನೆಗಳನ್ನು ಅವನು ಕೊಟ್ಟ ತಕ್ಷಣ ಕೇಳಿದೆ. “ಸೂಯೆಜ್ ಕೆನಾಲ್‍ಗೆ ಪ್ರವಾಸ ಇರುವುದಿಲ್ಲವೇ?”. ಆದಿಮಾನವನ ಬುದ್ಧಿಶಕ್ತಿಯ ಸಂಕೇತವಾಗಿದ್ದ ಈಜಿಪ್ಟಿನ ಪಿರಮಿಡ್‍ಗಳನ್ನು ನೋಡಲು ಜಗತ್ತಿನೆಲ್ಲೆಡೆಯಿಂದ ಕೈರೊಗೆ ಹೇರಳವಾಗಿ ಬರುವ ಪ್ರವಾಸಿಗರು ಆಧುನಿಕ ಜಗತ್ತಿನ ಅಧ್ಬುತ ನಿರ್ಮಾಣದಲ್ಲೊಂದಾದ ಸೂಯೆಜ್ ಕಾಲುವೆಗೆ ಸಾಮಾನ್ಯವಾಗಿ ಹೋಗುವುದಿಲ್ಲ ಎಂದು ಒಸಾಮ ಉತ್ತರಿಸಿದಾಗ ಅಶ್ಚರ್ಯವಾಯಿತು.

ಪಿರಮಿಡ್‍ಗಳು ಪುರಾತನ ಜಗತ್ತಿನ ಉಳಿದಿರುವ ಏಕೈಕ ಅದ್ಭುತವಾಗಿರುವುದರಿಂದ ಆಯಸ್ಕಾಂತದಂತೆ ಎಲ್ಲೆಡೆಯಿಂದ ಪ್ರವಾಸಿಗರನ್ನು ತನ್ನೆಡೆ ಆಕರ್ಷಿಸುತ್ತದೆ, ನಿಜ. ಆದರೆ, ಹೆಚ್ಚಿನ ಭಾರತೀಯರಿಗೆ ತಿಳಿಯದಿರುವ ವಿಷಯವೇನೆಂದರೆ ಸೂಯೆಜ್ ಕಾಲುವೆಯ ಇತಿಹಾಸಕ್ಕೂ, ಭಾರತದ ಮಹತ್ವದ ಇತಿಹಾಸಕ್ಕೂ ಸಂಬಂಧವಿದೆ. ಇದಲ್ಲದೆ, ಸಾವಿರಾರು ವರ್ಷಗಳ ಕಾಲ ಪ್ರಕೃತಿಯ ಜೊತೆ ಹೋರಾಡಿ, ನಿರಂತರವಾದ ವೈಫಲ್ಯಗಳನ್ನೂ ಲೆಕ್ಕಿಸದೆ, ಮಾನವ ಸಂಶೋಧಿಸಿ ನಡೆಸಿದ ಸತತವಾದ ಪ್ರಯತ್ನಗಳು ಕೊನೆಗೊಮ್ಮೆ ಫಲ ತೋರಿದ ರೋಮಾಂಚನಕಾರಿ ಕಥೆ ಇದೆ. ಯೂರೋಪಿನ ರಾಜಮಹಾರಾಜರ ತಂತ್ರ-ಕುತಂತ್ರಗಳ ಜೊತೆಗೆ ಬ್ರಿಟೀಶ್ ಸಾಮ್ರಾಜ್ಯದ ವಸಾಹತುಶಾಹೀ ದಬ್ಬಾಳಿಕೆಯ ಕರಾಳ ಛಾಯೆ ಇದೆ. ಹಾಗಾಗಿ, ಸೂಯೆಜ್ ಕಾಲುವೆಯನ್ನು ನೋಡಲು ನನಗೆ ಸಹಜವಾದ ಕುತೂಹಲ ಮತ್ತು ಕಾತರವಿತ್ತು.

ಮಾರನೆಯ ದಿನ ಸೂಯೆಜ್ ಕಾಲುವೆಗೆ ಹೋಗಲು ನಿರ್ಧಾರವಾಯಿತು. ನನ್ನ ಪಾಲಿಗೆ ಅದೊಂದು ಅವಿಸ್ಮರಣೀಯ ದಿನ. ಸೂಯೆಜ್ ಕಾಲುವೆ ನೋಡಲು ನನ್ನ ಉಕ್ಕುತ್ತಿದ್ದ ಉತ್ಸಾಹಕ್ಕೆ ನಾವಿಳಿದುಕೊಂಡಿದ್ದ ಹಿಲ್ಟನ್ ಹೋಟೆಲ್ ಸೇರಿದಂತೆ ಎಲ್ಲೂ ಸರಿಯಾದ ಪ್ರತಿಕ್ರಿ0iÉು ಸಿಕ್ಕಿರಲಿಲ್ಲ. ನಮ್ಮ ಕಾರಿನ ಚಾಲಕ ಅಸೀ¥sóï, ಕೈರೊ ಏರ್‍ಪೆÇೀರ್ಟ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಹೆಮ್ಮೆಯಿಂದ ಹೇಳಿದ: “ನಿಮ್ಮ ಬಲಕ್ಕೆ ಅಕ್ಟೋಬರ್ ವಾರ್ ಪೆನೋರಮ ಇದೆ. ಇದು 1973ರ ಇಸ್ರೇಲ್ ನಡುವಿನ ಯುದ್ಧದಲ್ಲಿ ಈಜಿಪ್ಟಿನ ವಿಜಯದ ಸಂಕೇತ. ಈ ಜನಪ್ರಿಯ ಸ್ಮಾರಕದ ಬಗ್ಗೆ ನಾನಾಗಲೇ ತಿಳಿದುಕೊಂಡಿದ್ದೆ ಯಾದ್ದರಿಂದ, ಅಷ್ಟೇನೂ ಕುತೂಹಲವಿರಲಿಲ್ಲ.

ವಾಸ್ತವವಾಗಿ ಈ ಸ್ಮಾರಕ ಈಜಿಪ್ಟಿನ ಒಂದು ಬೃಹತ್ ಪ್ರಚಾರಕಾರ್ಯ ಮಾತ್ರವೇ! ಇಸ್ರೇಲ್ ದೇಶದೊಡನೆ ಹೋರಾಡಿ, ಕ್ರಮೇಣ ಬಳಲಿ ಸೋಲಿನ ಅಂಚಿನಲ್ಲಿದ್ದ ಈಜಿಪ್ಟಿಗೆ ವಿಶ್ವ ಸಂಸ್ಥೆಯ ಪ್ರವೇಶದಿಂದ ಆದ ಕದನವಿರಾಮ, ತನ್ನ ಗೌರವವನ್ನು ಕಾಪಾಡಿಕೊಳ್ಳಲು ಸಹಾಯವಾಗಿತ್ತು. ಸೂಯೆಜ್ ಕಾಲುವೆ ಸಹ ಯುದ್ಧದ ಕಾರಣಗಳಲ್ಲೊಂದಾಗಿ, ಯುದ್ಧದಲ್ಲಿ ಸೂಯೆಜ್‍ಕಾಲುವೆ ಧ್ವಂಸವಾಗಿ, ಮತ್ತೆ ಸಂಚಾರಕ್ಕೆ ಯೋಗ್ಯವಾಗಿದ್ದು, ವರ್ಷಗಳ ದುರಸ್ತಿಯ ನಂತರವೇ. ಸೂಯೆಜ್ ಕಾಲುವೆ ವಿಷಯದಲ್ಲಿರದ ಆಸಕ್ತಿ ಅದನ್ನು ಕುರಿತಾದ ಯುದ್ಧದ ಸ್ಮಾರಕವನ್ನು ಕುರಿತಿರುವುದು ವಿಪರ್ಯಾಸವೇ ಸರಿ. ದೃಷ್ಟಿಹೀನ ದೇಶಾಭಿಮಾನದಲ್ಲಿ ಕೆಲವೊಮ್ಮೆ ನಾಗರಿಕರು ತಮ್ಮ ವೈಚಾರಿಕೆಯನ್ನು ಕಳೆದುಕೊಳ್ಳುವುದು ತಪ್ಪಾದರೂ, ಅದು ಬಹುತೇಕ ದೇಶಗಳಲ್ಲಿನ ವಾಸ್ತವದ ಸಂಗತಿ.

ಕೈರೊ ಹೊರವಲಯದಿಂದ 120 ಕಿ.ಮೀ. ದೂರವಿರುವ ಸೂಯೆಜ್‍ನಗರದೆಡೆ ಕಾರು ಸಂಚರಿಸುತ್ತಿದ್ದಂತೆ, ನನ್ನ ಸ್ಮೃತಿಪಟಲದಲ್ಲಿ ಸೂಯೆಜ್‍ಕಾಲುವೆಯ ಇತಿಹಾಸದ ನೆನಪುಗಳು ಬರತೊಡಗಿದವು.

ಪಶ್ಚಿಮ ಏಷ್ಯಾ ಪ್ರಪಂಚದ ಮೂರು ಪ್ರಮುಖ ಧರ್ಮಗಳ ತವರೂರು. ಈ ಪ್ರದೇಶಗಳನ್ನು ಮತ್ತು ಆಫ್ರಿಕ ಖಂಡವನ್ನು ವಿಭಜಿಸಿರುವುದೇ ಕೆಂಪು ಸಮುದ್ರ. ಈ ಸಮುದ್ರದ ಎಲ್ಲೆಯಲ್ಲಿರುವ ಸೂಯೆಜ್ ಕೊಲ್ಲಿಯನ್ನು ದಾಟಿದರೆ ಸಿಗುವುದೇ ಸೂಯೆಜ್ ನಗರ. ಇಲ್ಲಿಂದ ಮೆಡಿಟರೇನಿಯನ್ ಸಮುದ್ರದ ತೀರದಲ್ಲಿರುವ ಉತ್ತರದ ಸೈದ್ ಬಂದರಿಗೆ 200 ಕಿ.ಮೀ. ದೂರ. ಭಾರತಕ್ಕೆ ಯೂರೋಪಿನ ಜೊತೆ ಶತಮಾನಗಳಿಂದಲೂ ವ್ಯಾಪಾರದ ಸಂಬಂಧವಿದ್ದದ್ದು ಎಲ್ಲರಿಗೂ ತಿಳಿದ ವಿಷಯ. ಆದರೆ, ಏಷ್ಯಾ ಖಂಡದಿಂದ ಭಾರತವೂ ಸೇರಿದಂತೆ ಯೂರೋಪ್ ರಾಷ್ಟ್ರಗಳಿಗೆ ನೇರವಾದ ಜಲಮಾರ್ಗವಿರದೆ, ಸರಕು ಸಾಗಣೆಗೆ ಆಫ್ರಿಕ ಖಂಡವನ್ನು ಸುತ್ತಿ [ ಕೇಪ್ ಅ¥sóï ಗುಡ್ ಹೋಪ್] ಬಳಸಿಕೊಂಡು ಹೋಗಬೇಕಾದ ಅನಿವಾರ್ಯವಿತ್ತು; ಅಥವಾ ಸೂಯೆಜ್ ವರೆಗೆ ಸರಕುಗಳನ್ನು ಹಡಗುಗಳಲ್ಲಿ ಒಯ್ದು, ಅಲ್ಲಿಂದ ಸೈದ್ ಬಂದರಿಗೆ ಭೂಮಾರ್ಗದಲ್ಲಿ ಸಾಗಿಸಿ, ಮತ್ತೆ ಹಡಗುಗಳಲ್ಲಿ ಯೂರೋಪಿಗೆ ರವಾನಿಸಬೇಕಾದ ಪರಿಸ್ಥಿತಿಯಿತ್ತು. ಈ ಎರಡರಲ್ಲಿ ಯಾವುದೇ ಮಾರ್ಗವನ್ನು ಅನುಸರಿಸಿದರೂ, ಹೆಚ್ಚಿನ ಸಮಯ, ವೆಚ್ಚ ಮತ್ತು ಅನಾನುಕೂಲತೆ ಇದ್ದು, ವಾಣಿಜ್ಯದ ಪ್ರಗತಿಗೆ ತೀರ್ವವಾದ ಅಡಚಣೆಯಾಗಿತ್ತು. ಆದ್ದರಿಂದಲೇ ಸೂಯೆಜ್ ಕಾಲುವೆಯ ನಿರ್ಮಾಣ ಆನಾದಿ ಕಾಲದಿಂದಲೂ ಮಾನವ ಜನಾಂಗಕ್ಕೊಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು.

ಹಾಗಾಗಿ ಸೂಯೆಜ್ ಕಾಲುವೆಗೆ ಸಾಕಷ್ಟು ಪುರಾತನವಾದ ಇತಿಹಾಸವಿದೆ. ಸುಮಾರು ಕ್ರಿಸ್ತ ಪೂರ್ವ 1850 ರಲ್ಲಿ [3860 ವರ್ಷಗಳ ಹಿಂದೆ] ಪ್ರಾಯಶಃ ಮೊದಲ ಬಾರಿಗೆ ಕೆಂಪು ಸಮುದ್ರ ಮತ್ತು ಮೆಡಿಟರೇನಿಯನ್ ಸಾಗರವನ್ನು ಜೋಡಿಸುವ ಕಾಲುವೆಯ ನಿರ್ಮಾಣ ಶುರುವಾಯಿತು. ಆದರೆ, ಮರುಭೂಮಿಯ ಮರಳಿನ ಸುಂಟರಗಾಳಿ ಕಟ್ಟುತ್ತಿದ್ದ ಕಾಲುವೆಯನ್ನು ತುಂಬಿ, ನಿರ್ಮಾಣಕ್ಕೆ ಅಡ್ಡಿ ತಂದಿತಂತೆ. ಕಾಲಕ್ರಮೇಣ ಈಜಿಪ್ಟ್ ದೇಶ ಗ್ರೀಕ್, ¥sóÉ್ರಂಚ್ ಮತ್ತು ಅರಬರ ಪ್ರಭಾವಕ್ಕೆ ಬಂದರೂ, ಕಾಲುವೆಯ ನಿರ್ಮಾಣದ ಪ್ರಯತ್ನಗಳೇನೂ ನಿಲ್ಲಲಿಲ್ಲ. ಆದರೂ, ಎಲ್ಲಾ ಪ್ರಯತ್ನಗಳೂ ವಿಫಲವಾಯಿತಂತೆ.

ಮತ್ತೆ ಕ್ರಿಸ್ತ ಶಕ 18ನೇ ಶತಮಾನದಲ್ಲಿ ಕಾಲುವೆಯ ಕೆಲಸಕ್ಕೆ ತೀರ್ವವಾದ ಪ್ರಯತ್ನಗಳು ಪ್ರಾರಂಭವಾದವು. 1833ರಲ್ಲಿ ಭಾರತವನ್ನು ಆಳುತ್ತಿದ್ದ ಬ್ರಿಟೀಶರ ರಾಜ ಕಿಂಗ್ ವಿಲ್ಲಿಯಮ್-4, ವಿದೇಶಾಂಗ ವ್ಯವಹಾರದ ಕಾರ್ಯದರ್ಶಿ ಲಾರ್ಡ್ ಪಾಲ್ಮೆಸ್ಟೊನ್‍ರಿಗೆ ಪತ್ರವನ್ನು ಬರೆದರು. ಅದರ ಸಾರಾಂಶ: ಬ್ರಿಟನ್ನಿನಿಂದ ಭಾರತಕ್ಕೆ ಸಂಚಾರ, ಪತ್ರ ವ್ಯವಹಾರ ಮತ್ತು ಸರಕು ಸಾಗಣೆ ಸುಗಮವಾಗಲು ಸೂಯೆಜ್ ಕಾಲುವೆಯನ್ನು ನಿರ್ಮಿಸಬೇಕು; ಭಾರತವನ್ನು ಆಳುತ್ತಿರುವ ನಮ್ಮ [ಬ್ರಿಟೀಶರ] ಹಿತದೃಷ್ಟಿಯಿಂದ ಈಜಿಪ್ಟಿನ ಜತೆ ಸ್ನೇಹಹಸ್ತವನ್ನು ಚಾಚಬೇಕು”. ಆದರೆ ವಿಲ್ಲಿಯಮ್‍ರವರ ಸಲಹೆಗೆ ಸರ್ಕಾರೀ ವಲಯದಲ್ಲಿ ಹೆಚ್ಚಿನ ಮನ್ನಣೆ ಸಿಗದೆ, ಕಾಲುವೆಯ ಚಿಂತನೆ ಮುಂದುವರಿಯಲಿಲ್ಲ.

ಫ್ರಾನ್ಸಿನ ರಾಜ ನೆಪೆÇೀಲಿಯನ್ ಬೊನಪಾರ್ಟೆಗೂ ಸಹ ಸೂಯೆಜ್ ಕಾಲುವೆಯ ನಿರ್ಮಾಣ ದೀರ್ಘ ಕಾಲದ ಕನಸಾಗಿತ್ತು. ಮೊದಲಾಗಿ ಈಜಿಪ್ಟ್ ಫ್ರಾನ್ಸಿನ ಆಳ್ವಿಕೆಯಲ್ಲಿದ್ದುದರಿಂದ ಕಾಲುವೆಯ ಚಿಂತನೆಗೆ ಚಾಲನೆ ಸಿಕ್ಕಿತು. ಇದರ ಪೂರ್ವಭಾಗಿಯಾಗಿ ನಡೆಸಿದ ಸಂಶೋಧನೆಯಲ್ಲಿ ಕೆಂಪು ಸಮುದ್ರ ಮೆಡಿಟರೇನಿಯನ್ ಸಾಗರಕ್ಕಿಂತ 30 ಅಡಿ ಹೆಚ್ಚಿನ ಎತ್ತರದಲ್ಲಿದೆ0iÉುಂಬ ತಪ್ಪು ಮಾಹಿತಿಯ ಆಧಾರದಿಂದ ಈ ಕಾಲುವೆಯನ್ನು ನಿರ್ಮಾಣ ಮಾಡಿದರೆ, ಲಕ್ಷಾಂತರ ಎಕರೆಗಳ ನೈಲ್ ನದಿಯ ನೀರಾವರಿ ಪ್ರದೇಶ ನಾಶವಾಗುತ್ತದೆಂಬ ಶಂಕೆಯಿಂದ, ಕಾಲುವೆಯ ಕೆಲಸವನ್ನು ನಿಲ್ಲಿಸಲಾಯಿತು.

ಹೀಗಾಗಿ ಸೂಯೆಜ್ ಕಾಲುವೆ ಮಾನವನ ಬುದ್ಧಿಶಕ್ತಿಗೂ, ಧೃಡತೆಗೂ, ಕಾರ್ಯಕ್ಷಮತೆಗೂ ಒಂದು ದೊಡ್ಡ ಸವಾಲಾಗಿತ್ತು. 1830ರಲ್ಲಿ ಸೈದ್‍ರವರು ಈಜಿಪ್ಟಿನ ಯುವರಾಜರಾಗಿದ್ದಾಗ ಕೈರೊನಲ್ಲಿ ಫ್ರಾನ್ಸಿನ ರಾಯಭಾರಿಯಾಗಿದ್ದವರು ಫರ್ಡಿನೆಂಡ್ ಡಿ ಲೆಸ್ಸೆಪ್ಸ್. ಇವರಿಬ್ಬರ ಪರಿಚಯ ಸ್ನೇಹವಾಗಿ ಪರಿಣಮಿಸಿತು. ಮುಂದೆ ಲೆಸ್ಸೆಪ್ಸ್‍ರವರು 1854ರಲ್ಲಿ ಫ್ರಾನ್ಸ್ ವಿದೇಶೀ ಸೇವೆಯಿಂದ ನಿವೃತ್ತಿಯಾದಾಗ ಸೈದ್‍ರವರು ಈಜಿಪ್ಟಿನ ಮಹಾರಾಜರಾಗಿದ್ದರು. ನೆಪೆÇೀಲಿಯನ್‍ರವರ ಸೂಯೆಜ್ ಕಾಲುವೆಯ ಕನಸಿನ ಅರಿವಿದ್ದ ಲೆಸ್ಸೆಪ್ಸ್, ಸೈದ್‍ರವರ ಜೊತೆಗೂಡಿ ಸೂಯೆಜ್‍ಕಾಲುವೆಯ ನಿರ್ಮಾಣದ ಹೊಸ ಸವಾಲನ್ನು ಸ್ವೀಕರಿಸಿದರು. ಲೆಸ್ಸೆಪ್ಸ್ ಇಂಜಿನಿಯರ್ ಆಗಿರಲಿಲ್ಲವಾದರೂ ಅಸಾಧಾರಣ ಬುದ್ಧಿಶಕ್ತಿ, ವಿವೇಚನೆಗಳಿಂದ ಅತ್ಯುನ್ನತ ವ್ಯವಸ್ತಾಪಕರೆಂದು ಹೆಸರಾಗಿದ್ದವರು. ಅವರ ಮುಂದಾಳತ್ವದಲ್ಲಿ 1855ರಲ್ಲಿ ಸೂಯೆಜ್‍ಕೆನಾಲ್ ಕಂಪನಿ ಅಸ್ತಿತ್ವಕ್ಕೆ ಬಂದು, ಕೊನೆಗೂ ಕಾಲುವೆಯ ನಿರ್ಮಾಣ ಆರಂಭವಾಯಿತು.

ಆದರೆ, ಸೂಯೆಜ್ ಕಾಲುವೆಯ ಇತಿಹಾಸವನ್ನು ಪ್ರತಿಪಾದಿಸುವಂತೆ ಈ ಪ್ರಯತ್ನವೂ ಸಹ ತೊಂದರೆಗಳಿಂದ ಹೊರತಾಗಿರಲಿಲ್ಲ. ಅಲ್ಲಿಯವರೆಗೂ ಬ್ರಿಟೀಶರಿಗಿದ್ದ ಕಾಲುವೆಯ ಆಸಕ್ತಿ, ಫ್ರಾನ್ಸಿನ ಪ್ರಾಬಲ್ಯ ಹೆಚ್ಚುತ್ತದೆಂಬ ಕಾರಣದಿಂದ, ತಕ್ಷಣವೇ ತಣ್ಣಗಾಗಿ ದೂರ ಸರಿದರು. ಹಲವಾರು ಬಾರಿ ಅಡ್ಡಿ, ಆತಂಕಗಳು ನಿರ್ಮಾಣ ನಿಲ್ಲಿಸಲು ಕಾರಣವಾಯಿತಾದರೂ, 11 ವರ್ಷಗಳ ನಂತರ, ನಿರ್ಮಾಣ ಮುಕ್ತಾಯಗೊಂಡು 17ನೇ ನವೆಂಬರ್ 1869ರಂದು ಫ್ರಾನ್ಸಿನ ರಾಣಿ ಯೂಜಿನ್‍ರವರಿಂದ ಅತ್ಯಂತ ಅದ್ದೂರಿ ಸಮಾರಂಭದಲ್ಲಿ, ಸೂಯೆಜ್ ಕಾಲುವೆ ಸಂಚಾರಕ್ಕೆ ಉದ್ಘಾಟನೆಯಾಯಿತು.

ಮೆಡಿಟರೇನಿಯನ್ ಸಾಗರಕ್ಕೂ ಕೆಂಪು ಸಮುದ್ರಕ್ಕೂ ಸಂಪರ್ಕ ಕಲ್ಪಿಸಿದ ಸೂಯೆಜ್ ಕಾಲುವೆ ಜಗತ್ತಿನ ಇತಿಹಾಸದಲ್ಲಿ ಒಂದು ಹೊಸ ತಿರುವನ್ನೇ ಕೊಟ್ಟಿತೆಂದರೆ ತಪ್ಪಾಗಲಾರದು. ವಾಣಿಜ್ಯದ ಅಭಿವ್ರುದ್ಧಿಗೆ ದಾರಿಯಾದಂತೆಯೇ ಯೂರೋಪಿಯನ್ನರ ಪ್ರಭುತ್ವಕ್ಕೂ ಒಂದು ಹೊಸ ಶಕ್ತಿಯನ್ನೇ ಒದಗಿಸಿತು. ಅಲ್ಲಿಯವರೆಗೂ ಯೂರೋಪ್ ಪ್ರದೇಶಗಳಿಂದ ಆಫ್ರಿಕಾ ಖಂಡವನ್ನೆಲ್ಲಾ ಸುತ್ತಿ ಭಾರತಕ್ಕೆ ಬರುತ್ತಿದ್ದ ಸಂಚಾರ ಮತ್ತು ಸರಕು ಸಾಗಣೆ ಹಡಗುಗಳು, ಈಗ ನೇರವಾಗಿ ಸೂಯೆಜ್ ಕಾಲುವೆಯ ಮುಖಾಂತರ ಬರುವಂತಾಯಿತು. ಲಂಡನ್ನಿನಿಂದ ಭಾರತಕ್ಕೆ [ಬೊಂಬಾಯಿ] ದೂರ 8200 ಕಿ.ಮೀ. ಕಡಿಮೆಯಾಗಿ ಪ್ರಯಾಣದ ಸಮಯ ಮತ್ತು ಸಾಗಣೆಯ ವೆಚ್ಚದಲ್ಲಿ ಸಾಕಷ್ಟು ಉಳಿತಾಯವಾಗಿತ್ತು. ಮುಖ್ಯವಾಗಿ, ಪ್ರಪಂಚದ ಪ್ರಗತಿಗೆ ಸೂಯೆಜ್‍ಬುನಾದಿಯಾಗಿತ್ತು. ಹಾಗಾಗಿ ಜಗತ್ತಿನ ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಳನ್ನು ವಿಶ್ಲೇಷಿಸುವಾಗ, ಸೂಯೆಜ್ ಕಾಲುವೆಯನ್ನು ಉಲ್ಲೇಖಿಸಿರದೆ ಸಾಧ್ಯವೇ ಇಲ್ಲ.

ಸೂಯೆಜ್ ಕಾಲುವೆಯ ದೀರ್ಘವಾದ ಇತಿಹಾಸವನ್ನು ನೆನಪುಮಾಡಿಕೊಳ್ಳುತ್ತಿದ್ದಂತೆ ನಮ್ಮ ಕಾರು ಈಜಿಪ್ಟಿನ ಮರಳುಗಾಡುಗಳನ್ನು ದಾಟಿ ಎರಡು ಗಂಟೆಗಳ ಪ್ರಯಾಣದ ನಂತರ ಸೂಯೆಜ್ ಗಡಿಗೆ ತಲುಪಾಗಿತ್ತು. ಸುಮಾರು 5 ಲಕ್ಷ ಜನಸಂಖ್ಯೆಯ ನಗರ ಪ್ರದೇಶವನ್ನು ದಾಟಿದ ಮೇಲೆ ಸುಂದರವಾದ ಸೂಯೆಜ್ ಕೆನಾಲ್ ಸಂಸ್ಥೆಯ ಸಮುದಾಯದ ಮನೆಗಳ ದೃಶ್ಯ ಯೋರೋಪಿನ ನಗರವೊಂದಕ್ಕೆ ಬಂದಂತಯೇ ಅನಿಸಿತ್ತು.

ದೂರದಿಂದಲೇ ಕಾಲುವೆಯ ನೀರು ಕಂಡಾಗ ಎನೋ ಉಲ್ಲಾಸ. ಎರಡು ಸಮುದ್ರಗಳ ಸಂಪರ್ಕಿಸುವ, ಪ್ರಪಂಚದಲ್ಲೇ ಅತಿ ದೊಡ್ಡದಾದ ಸೂಯೆಜ್ ಕಾಲುವೆಯ ಉದ್ದ 193 ಕಿ.ಮೀ.[ಚಾನೆಲ್‍ಗಳನ್ನು ಸೇರಿ]. ಇದರ ಅಗಲ 673 ಅಡಿ ಮತ್ತು 79 ಅಡಿಯ ಆಳ. ಪ್ರಪಂಚದ ಸುಮಾರು 7-8% ಸರಕು ಸಾಗಾಣಿಕೆಯಾಗುವುದು ಸೂಯೆಜ್ ಕಾಲುವೆಯ ಮೂಲಕವೇ. ಈ ಕಾಲುವೆ ಕಟ್ಟಲು ಈಜಿಪ್ಟ್ ಮಾಡಿದ ಖರ್ಚು 450 ಮಿಲಿಯನ್ ಫ್ರೆಂಚ್ ಫ್ರಾಂಕ್. [ಸುಮಾರು 1125 ಕೋಟಿ ರೂಪಾಯಿಗಳು, 1858-1869ರಲ್ಲಿ. ಈಗ ಎಷ್ಟಾಗಬಹುದು, ಲೆಕ್ಕ ಹಾಕಿ ನೋಡಿ!].

ಆದರೆ ಬಡ ರಾಷ್ಟ್ರವಾದ ಈಜಿಪ್ಟಿಗೆ ಇಂತಹ ಬೃಹತ್ ಯೋಜನೆಯನ್ನು ಆರ್ಥಿಕವಾಗಿ ನಿರ್ವಹಿಸುವ ಸಾಮಥ್ರ್ಯವಿರದೆ ಸಾಲದ ಹೊರೆ ಹೆಚ್ಚಾಗಿತ್ತು. ಬ್ರಿಟೀಶರ ಪ್ರಭುತ್ವದಲ್ಲಿದ್ದ ಭಾರತದ ಮೇಲಿನ ಆರ್ಥಿಕ ಮತ್ತು ರಾಜಕೀಯದ ಹತೋಟಿಗೆ ಸೂಯೆಜ್‍ಕಾಲುವೆಯ ಅಧಿಕಾರದ ಮಹತ್ವವನ್ನು ಗ್ರಹಿಸಿದ ಬ್ರಿಟೀಶರು ಸೂಯೆಜ್ ಕೆನಾಲ್ ಸಂಸ್ಥೆಯ ಪಾಲುಗಾರಿಕೆಯನ್ನು ಈಜಿಪ್ಟಿನವರಿಂದ ಖರೀದಿಸಿದರು. ಹೀಗಾಗಿ ಸೂಯೆಜ್ ಕೆನಾಲ್ ಸಂಸ್ಥೆ 1956ರವರೆಗೆ ಬ್ರಿಟೀಶ್ ಮತ್ತು ಫ್ರಾನ್ಸಿನವರ ಹಿಡಿತದಲ್ಲಿತ್ತು.

1956ರಲ್ಲಿ ಈಜಿಪ್ಟಿನ ಅಧ್ಯಕ್ಷ ಅಬ್ದುಲ್ ನಾಜರ್ ಸೂಯೆಜ್ ಕಾಲುವೆಯನ್ನು ವಶಕ್ಕೆ ತೆಗೆದುಕೊಂಡು, ರಾಷ್ಟ್ರೀಕರಣ ಮಾಡಿದರು. ಆದರೆ ರಾಷ್ಟ್ರೀಕರಣದಿಂದ ಸಮಸ್ಯೆ ಬಗೆಹರಿಯಲಿಲ್ಲ; ಇನ್ನೂ ಹೆಚ್ಚು ಬಿಗಡಾಯಿಸಿತು. ಬ್ರಿಟನ್ ಮತ್ತು ಫ್ರಾನ್ಸಿನ ಬೆಂಬಲದಿಂದ ಇಸ್ರೇಲ್, ಈಜಿಪ್ಟಿನೊಡನೆ ಯುದ್ಧಕ್ಕೆ ನಿಂತು, ಮತ್ತೊಮ್ಮೆ ವಿಶ್ವ ಸಂಸ್ಥೆ ಮತ್ತು ಕೆನಡದ ರಾಯಭಾರಿ ಲೆಸ್ಟರ್ ಪಿಯರ್ಸನ್‍ರವರ ಪ್ರಯತ್ನದಿಂದ ಆರು ದಿನಗಳ ಭೀಕರ ಯುದ್ಧ ಕೊನೆಗೊಂಡಿತು. ಪಿಯರ್ಸನ್‍ರವರಿಗೆ 1957ರಲ್ಲಿ ನೋಬಲ್ ಶಾಂತಿ ಪ್ರಶಸ್ತಿ ದೊರಕಿತು. ಇದು ಸೂಯೆಜ್ ಕಾಲುವೆಯ ರೋಮಾಂಚನಕಾರೀ ಇತಿಹಾಸ.

ಸುಂದರವಾದ ಅಟಗ ಬೆಟ್ಟದ ತಪ್ಪಲಿನಲ್ಲಿರುವ ಸೂಯೆಜ್‍ಈಜಿಪ್ಟಿನ ಪ್ರಮುಖ ಬಂದರು. ಭಾರತ ಮತ್ತು ಯೋರೋಪ್ ನಡುವಿನ ಸರಕು ಸಾಗಣೆ ಮತ್ತು ಪಯಣ [ಕ್ರೂಸ್] ಸೂಯೆಜ್ ಮುಖಾಂತರವೇ. ಸೂಯೆಜ್ ಆಯಕಟ್ಟಿನ ಸ್ಥಳದಲ್ಲಿ ನಿಂತು ಸಾಗುತ್ತಿರುವ ಹಡಗುಗಳನ್ನು ನೋಡಿದಾಗ, ಪಿರಮಿಡ್‍ಗಳ ಸನಿಹದಲ್ಲಿದ್ದಾಗ ಆದ ಮರೆಯಲಾಗದ ವಿಸ್ಮಯಕಾರೀ ಅನುಭವವೇ ಆಯಿತು. ಪಿರಮಿಡ್ ಮಾನವನ ಬುದ್ಧಿಶಕ್ತಿಯ ಸಂಕೇತ ಮತ್ತು ಇಂದಿಗೂ ಪುರಾತನ ಪ್ರಪಂಚದ ಉಳಿದಿರುವ ಏಕೈಕ ಅದ್ಭುತ. ಹಾಗೆ0iÉುೀ ಸೂಯೆಜ್ ಕಾಲುವೆ ಸಹ, ಆಧುನಿಕ ಪ್ರಪಂಚದ ಒಂದು ಅದ್ಭುತ. ಈ ಎರಡೂ ಅದ್ಭುತಗಳ ನಡುವೆ ಇರುವುದೊಂದು ಭವ್ಯವಾದ ಪರಂಪರೆ, ಇತಿಹಾಸವುಳ್ಳ, ಈಜಿಪ್ಟಿನ ನಾಗರಿಕತೆ.

Download PDF document

About author View all posts Author website

V Pradeep Kumar

Leave a Reply

Your email address will not be published. Required fields are marked *