ಬದುಕಿನ ಸೂತ್ರಗಳನ್ನೂ ಕಲಿಸುವ ಎಂ.ಬಿ.ಎ.

ಕೆಲವು ದಶಕಗಳ ಹಿಂದೆ, ಹೆಚ್ಚಿನ ವಿಧ್ಯಾರ್ಥಿಗಳು ಎಂಜಿಯನಿಯರಿಂಗ್ ಅಥವಾ ವೈದ್ಯಕೀಯ ಶಿಕ್ಷಣವನ್ನೇ ಬಯಸುತ್ತಿದ್ದರು. ಆದರೆ, ಜಾಗತೀಕರಣದ ಪರಿಣಾಮವಾಗಿ ಇಂದು ಎಂ.ಬಿ.ಎ. ಅತ್ಯಂತ ಜನಪ್ರಿಯ ಸ್ನಾತಕೋತ್ತರ ಪಧವಿ. ನೀವೇಕೆ ಎಂ.ಬಿ.ಎ. ಮಾಡಲು ಇಚ್ಛಿಸುತ್ತೀರಿ ಎಂದು ಕ್ಯಾಟ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅನೇಕ ವಿಧ್ಯಾರ್ಥಿಗಳನ್ನು ಪ್ರಶ್ನಿಸಿದಾಗ ಬಂದ ಉತ್ತರಗಳಿವು:

“ಎಂಜಿಯನಿಯರಿಂಗ್ ನಂತರವೂ ಎಂ.ಬಿ.ಎ.ಮಾಡುತ್ತಾರೆ. ಆದ್ದರಿಂದ ನೇರವಾಗಿ ಎಂ.ಬಿ.ಎ. ಮಾಡುವುದೇ ಉತ್ತಮ-ಆಕಾಶ್”

“ನನ್ನ ಕಾಲೇಜಿನ ಕೌನ್ಸೆಲರ್‍ರ ಸಲಹೆಯಂತೆ ಎಂ.ಬಿ.ಎ. ಮಾಡುತ್ತೇನೆ-ಅeóÁದ್”.

“ಎಂ.ಬಿ.ಎ. ನಂತರ ಕ್ಯಾಂಪಸ್ ಮುಖಾಂತರವೇ ಕೆಲಸ ಸಿಗುತ್ತದೆ-ಸೌಮ್ಯ”.

“ನನ್ನ ಅನೇಕ ಸ್ನೇಹಿತರು ಎಂ.ಬಿ.ಎ. ಮಾಡುತ್ತಿದ್ದಾರೆ; ಆದ್ದರಿಂದ ನಾನೂ ಅದನ್ನೇ ಮಾಡುತ್ತೇನೆ-ಲೆಸ್ಲೀ”

ಎಂ.ಬಿ.ಎ. ನಂತರ ಕೆಲಸಗಳು ಸುಲಭವಾಗಿ ಸಿಗುವುದು ನಿಜವಾದರೂ, ಅದೊಂದೇ ಕಾರಣಕ್ಕೆ ಎಂ.ಬಿ.ಎ. ಮಾಡುವುದು ಸೂಕ್ತವಲ್ಲ. ನೀವು ಆರಿಸುವ ಕೋರ್ಸಿಗೆ ಸಂಬಂಧಿಸಿದ ವೃತ್ತಿಯ ಬಗ್ಗೆ-ಮಾರುಕಟ್ಟೆಯ ಬೇಡಿಕೆ, ಉದ್ಯೋಗಾವಕಾಶಗಳು ಸವಾಲುಗಳು, -ನಿಮಗೆ ಸಮಗ್ರವಾದ ಮಾಹಿತಿಯಿದ್ದು, ಈ ವೃತ್ತಿಯ ಬಗ್ಗೆ ನಿಮಗೆ ಆಸಕ್ತಿ, ಅಭಿರುಚಿಯೂ ಇರಬೇಕು. ಈ ರೀತಿ, ನಿಮ್ಮ ಕೋರ್ಸ್ ಆಯ್ಕೆಗೆ ಪ್ರಬಲವಾದ ಕಾರಣಗಳಿರಬೇಕು; ಪುಷ್ಟೀಕರಣಗಳಿರಬೇಕು.

ಎಂ.ಬಿ.ಎ. ಕೋರ್ಸಿನಲ್ಲಿರುವ ವಿಷಯಗಳೇನು?

ಆದರೆ, ಜನಪ್ರಿಯವಾಗಿರುವ ಎಂ.ಬಿ.ಎ. ಕೋರ್ಸಿನಲ್ಲಿ ಸಿಗುವ ಶಿಕ್ಷಣವಾದರೂ ಏನು? ತೀರ್ವವಾದ ಪೈಪೋಟಿಯಿರುವ ಇಂದಿನ ಮಾರುಕಟ್ಟೆ ಅವಲಂಬಿತ ಉದ್ಯಮದ ಸವಾಲುಗಳನ್ನು ಎದುರಿಸಲು, ನಿಮಗೆ ಸಿಗುವ ತರಬೇತಿಯ ರೂಪುರೇಷೆಗಳೇನು? ಇದಲ್ಲದೆ, ಎಂ.ಬಿ.ಎ.ನಲ್ಲಿ ಕಲಿಯುವ ತತ್ವಗಳು, ಸೂತ್ರಗಳು ಬದುಕಿನಲ್ಲಿ ಉಪಯುಕ್ತವೇ? ಎಂ.ಬಿ.ಎ. ಮಾಡಬಯಸುವ ವಿಧ್ಯಾರ್ಥಿಗಳು, ಮುಖ್ಯವಾದ ಈ ಅಂಶಗಳನ್ನು ಅರಿಯಬೇಕು.

ಒಂದು ಉದ್ಯಮದ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಎಲ್ಲಾ ಪ್ರಯತ್ನಗಳನ್ನು ಕೇಂದ್ರೀಕರಿಸಿ, ಯೋಜನೆಗಳನ್ನು ನಿಷ್ಟೆಯಿಂದ ಕಾರ್ಯಗತಗೊಳಿಸುವುದೇ ಮಾನೇಜ್‍ಮೆಂಟ್‍ನ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು ಸಮಗ್ರವಾದ ತಿಳುವಳಿಕೆಯನ್ನು-ಮಾರುಕಟ್ಟೆಯ ನಿರ್ವಹಣೆ, ಹಣಕಾಸಿನ ಆಡಳಿತ, ಆಯವ್ಯಯ ಶಾಸ್ತ್ರ, ಬಂಡವಾಳ ಪೂರೈಕೆ, ಉತ್ಪಾದನೆ ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆ- ಎಂ.ಬಿ.ಎ. ಕೋರ್ಸಿನಲ್ಲಿ ನೀಡಲಾಗುತ್ತದೆ. ಇದಲ್ಲದೆ, ಉದ್ಯಮಗಳಲ್ಲಿ ನಿಮಗೆ ಪ್ರಾಯೋಗಿಕವಾದ ತರಬೇತಿಯನ್ನು ಪ್ರಾಜೆಕ್ಟ್ ಮುಖಾಂತರ ನೀಡುವುದರಿಂದ ಕಲಿಕೆ ಪರಿಪೂರ್ಣವಾಗುತ್ತದೆ. ನಿಮ್ಮ ನೈಪುಣ್ಯತೆ ಮತ್ತು ಚತುರತೆ ವರ್ಧಿಸಿ, ಯಾವುದೇ ಕೆಲಸವನ್ನು ನಿಭಾಯಿಸುವ ಆತ್ಮವಿಶ್ವಾಸ ಬೆಳೆಯುತ್ತದೆ.

ಕಲಿಕೆಯ ವಿಧಾನಗಳು

ಎಂ.ಬಿ.ಎ.ನಲ್ಲಿ ಬೇರಾವ ಕೋರ್ಸುಗಳಲ್ಲಿರದ ನೂತನ ಮತ್ತು ಅತ್ಯಂತ ಪರಿಣಾಮಕಾರೀ ಕಲಿಕೆಯ ವಿಧಾನಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಉದಾಹರಣೆಗೆ, ತರಗತಿಯ ಉಪನ್ಯಾಸಗಳಲ್ಲದೆ ಅಸೈನ್‍ಮೆಂಟ್‍ಗಳು, ಉದ್ದಿಮೆಯ ಸನ್ನಿವೇಶಗಳನ್ನಾಧಾರಿತ ಕೇಸ್ ಸ್ಟಡೀಸ್, ಗುಂಪು ಚರ್ಚೆಗಳು, ವಾದ-ಪ್ರತಿವಾದಗಳು, ಮಾನೇಜ್‍ಮೆಂಟ್ ಆಟಗಳು ಮತ್ತು ಉದ್ಯಮಗಳ ಭೇಟಿಗಳಿರುತ್ತದೆ. ಹಾಗೂ, ಪರಿಣಿತ ಉದ್ಯಮಿಗಳ ಉಪನ್ಯಾಸ ಮತ್ತು ಒಡನಾಟದ ಅವಕಾಶಗಳಿರುತ್ತದೆ. ಇಂತಹ ಬಗೆಬಗೆಯ, ಭಿನ್ನವಾದ ಕಲಿಕೆಯ ವಿಧಾನಗಳಲ್ಲಿ ನೀವು ಸಕ್ರಿಯವಾಗಿ ಭಾಗವಹಿಸುವುದರಿಂದ ನಿಮ್ಮ ವ್ಯಕ್ತಿತ್ವದ ಮೇಲೆ ಅಗಾಧವಾದ ಪರಿಣಾಮ ಬೀರುವುದು ಸಹಜ. ನಿಮ್ಮ ಭಾಷೆ ಮತ್ತು ಮಾತುಗಾರಿಕೆಯ ಚಾತುರ್ಯದಿಂದ, ನಿಮ್ಮ ನಿರೂಪಣಾ ಶಕ್ತಿ ಉತ್ತಮಗೊಳ್ಳುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಆಯಾ ಸನ್ನಿವೇಶಕ್ಕೆ ತಕ್ಕಂತೆ ವರ್ತಿಸಿ, ಸವಾಲುಗಳನ್ನು ಎದುರಿಸುವ ಧೈರ್ಯ, ಮನೋಧರ್ಮ ನಿಮಗಿರುತ್ತದೆ.

ಆಕರ್ಷಕ ಅವಕಾಶಗಳು

ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ನಿರಂತರವಾಗಿ ಉತ್ತಮವಾಗುತ್ತಿದೆ. ಹಾಗಾಗಿ ವ್ಯಾಪಾರ, ಉದ್ಯಮಗಳು, ವಿಶೇಷವಾಗಿ ಐ.ಟಿ., ಐ.ಟಿ.ಇ.ಎಸ್., ಬಿ.ಟಿ., ಬ್ಯಾಂಕಿಂಗ್, ಹಣಕಾಸು ಮತ್ತು ಇನ್ಸೂರೆನ್ಸ್, ಹೋಟೆಲ್, ಹಾಸ್ಪಿಟಲ್, ರೀಟೇಲ್, ಶಿಕ್ಷಣ, ಮಾಧ್ಯಮಗಳೆಲ್ಲವೂ ಪ್ರಗತಿಯ ಹಾದಿಯಲ್ಲಿವೆ. ಜೊತೆಗೆ, ಇತರ ಉದ್ದಿಮೆಗಳಲ್ಲೂ ಅವಕಾಶಗಳು ಮುಂದುವರೆಯುತ್ತವೆ. ಈ ಕಾರಣಗಳಿಂದ ಎಂ.ಬಿ.ಎ. ಪದವೀಧರಿಗೆ ಬೇಡಿಕೆ ಕಮ್ಮಿಯಾಗುವ ಸಾಧ್ಯತೆಗಳಿಲ್ಲ. ಆದ್ದರಿಂದ, ಜನಪ್ರಿಯವಾಗಿರುವ ಎಂ.ಬಿ.ಎ. ಶಿಕ್ಷಣವನ್ನು ಮುಗಿಸಿ ಕ್ಯಾಂಪಸ್ ಮುಖಾಂತರ ಕೆಲಸಕ್ಕೆ ಸೇರಿ, ನಿಮ್ಮ ವೃತ್ತಿ ಜೀವನದ ಕನಸುಗಳನ್ನು ನನಸಾಗಿಸಿಕೊಳ್ಳಬಹುದು.

ಯಶಸ್ವಿ ಬದುಕಿನ ಸೂತ್ರಗಳೇನು?

ಎಂ.ಬಿ.ಎ. ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಈ ತತ್ವಗಳ ಆಧಾರದ ಮೇಲೆ, ನೀವು ವೃತ್ತಿ ಮತ್ತು ಖಾಸಗೀ ಜೀವನಗಳೆರಡರಲ್ಲೂ ಯಶಸ್ಸು ಸಾಧಿಸಬಹುದು. ಆದ್ದರಿಂದ, ಈ ಕೆಳಗೆ ವಿವರಿಸಿರುವ ಅಂಶಗಳನ್ನು ಗಮನಿಸಿ.

ತರ್ಕಬದ್ಧ ಆಲೋಚನೆ

ಎಂ.ಬಿ.ಎ. ಕಲಿಕೆಯಿಂದ ನಿಮ್ಮ ಆಲೋಚನಾ ಕ್ರಮವೇ ಬದಲಾಗುತ್ತದೆ. ಏಕೆಂದರೆ, ಉದ್ದಿಮೆಗಳಲ್ಲಿ ಸಂಪನ್ಮೂಲಗಳ ಕೊರತೆಗಳೂ, ಅನೇಕ ಕಷ್ಟಗಳೂ, ಮಾರುಕಟ್ಟೆಯ ಸವಾಲುಗಳೂ ಎದುರಾಗುವುದು ಸಾಮಾನ್ಯ. ತಾಳ್ಮೆ ಕಳೆದುಕೊಳ್ಳದೆ, ನಿಮ್ಮ ಉದ್ದಿಮೆಯ ಶಕ್ತಿ, ಸಾಮಥ್ರ್ಯ, ಆತಂಕ ಮತ್ತು ದೌರ್ಬಲ್ಯಗಳನ್ನು ಗಮನಿಸಿ, ಮಾರುಕಟ್ಟೆಯ ಅವಕಾಶಗಳು ಮತ್ತು ಆ ಮೂಲಕ, ಉದ್ದಿಮೆಯ ಅಭಿವೃದ್ಧಿಯ ಬಗ್ಗೆ ಯೋಚಿಸಬೇಕಾಗುತ್ತದೆ. ಆಗಲೇ, ನೀವು ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಇಂತಹ ತರ್ಕಬದ್ಧ ಆಲೋಚನಾ ಕ್ರಮ, ನಿಮ್ಮ ಖಾಸಗೀ ಜೀವನದಲ್ಲೂ ಆವರಿಸಿ, ಯಾವುದೇ ಸಂದರ್ಭ, ಸನ್ನಿವೇಶಗಳಲ್ಲಿ ವಿವೇಚನೆಯಿಂದ ನಡೆಯುವ ಪ್ರವೃತ್ತಿ ನಿಮ್ಮದಾಗುತ್ತದೆ.

ಯೋಜನಾ ಶಕ್ತಿ

ನಿಮ್ಮ ಜೀವನದ ಗುರಿಯನ್ನು ಯೋಜನೆಯೆಂಬ ವಾಹನದ ಮೂಲಕವೇ ತಲುಪಲು ಸಾದ್ಯ. ತರ್ಕಬದ್ಧ ಆಲೋಚನೆಯಿಂದ, ನಿಮ್ಮ ವೃತ್ತಿಗೆ ಸಂಬಂಧಿಸಿದ ಯೋಜನೆಗಳನ್ನು ಸರಾಗವಾಗಿ ರೂಪಿಸುವ ಶಕ್ತಿ ಬೆಳೆಯುತ್ತದೆ. ಈ ಶಕ್ತಿ ನಿಮ್ಮ ಜೀವನದ ಎಲ್ಲಾ ಖಾಸಗೀ ಯೋಜನೆಗಳನ್ನು ರೂಪಿಸಲು, ಅತ್ಯಂತ ಅಮೂಲ್ಯ. ಉದಾಹರಣೆಗೆ, ಮನೆ ಕೊಳ್ಳುವ ಅಥವಾ ಕಟ್ಟುವ ಯೋಜನೆಯಿರಬಹುದು, ಮದುವೆ-ಮಧುಚಂದ್ರವಿರಬಹುದು, ಹಣಕಾಸಿನ ನಿರ್ವಹಣೆಯಿರಬಹುದು. ಹೀಗೆ, ಅನೇಕ ಯೋಜನೆಗಳನ್ನು ರೂಪಿಸುವ ಬುದ್ಧಿವಂತಿಕೆ ಮತ್ತು ಅವುಗಳನ್ನು ನಿರ್ವಹಿಸುವ ಸಾಮಥ್ರ್ಯ ನಿಮ್ಮದಾಗಿರುತ್ತದೆ.

ಶಿಸ್ತು ಮತ್ತು ಸಮಯ ಪ್ರಜ್ಞೆ

ಅಶಿಸ್ತಿನ ಜೀವನದಲ್ಲಿ ಯಾವ ಗುರಿಯ ಸಾಧನೆಯೂ ಸಾಧ್ಯವಿಲ್ಲ; ಶಿಸ್ತು ನಿಮ್ಮ ಯೋಜನೆಗೂ, ಸಾಧನೆಗೂ ನಡುವಿನ ಸೇತುವೆ. ನಮ್ಮ ವೃತ್ತಿ ಮತ್ತು ಖಾಸಗೀ ದಿನಚರಿಯಲ್ಲಿ ಅನೇಕ ರೀತಿಯ, ವಿವಿಧ ಅದ್ಯತೆಗಳ ಕೆಲಸಗಳಿರುತ್ತದೆ. ನಮಗಿರುವ ಸಮಯದಲ್ಲಿ ದಿನನಿತ್ಯದ ಮಾಮೂಲು ಕೆಲಸಗಳನ್ನೂ, ಮಹತ್ವದ ಕೆಲಸಗಳನ್ನೂ ನಿರ್ವಹಿಸಲು ಬೇಕಾಗುವ ಶಿಸ್ತು, ಸಮಯ ಪ್ರಜ್ಞೆ ಮತ್ತು ಅದನ್ನು ಪರಿಪಾಲಿಸುವ ಕ್ರಮವನ್ನು ಎಂ.ಬಿ.ಎ. ಕಲಿಕೆ ನಿಮ್ಮಲ್ಲಿ ಮೂಡಿಸುತ್ತದೆ. ಈ ಶಿಸ್ತು ಮತ್ತು ಸಮಯ ಪ್ರಜ್ಞೆಯಿಂದ ವೃತ್ತಿಯ ಕರ್ತವ್ಯ, ಜವಾಬ್ದಾರಿಗಳನ್ನು ನಿರ್ವಹಿಸಿ, ಖಾಸಗೀ ಜೀವನಕ್ಕೆ ಅಗತ್ಯವಾದ ಸಮಯವನ್ನು ಹೊಂದಿಸಲೂ ಸಾಧ್ಯವಾಗುತ್ತದೆ. ಇಂದಿನ ಒತ್ತಡದ ಬದುಕಿನಲ್ಲಿ ನಿಮಗಿಷ್ಟವಿರುವ ಆಟ, ಕ್ರೀಡೆ, ಹವ್ಯಾಸಗಳಲ್ಲಿ ತೊಡಗುವುದು ಅರೋಗ್ಯಕರ.

ವಿಕಸಿತ ವ್ಯಕ್ತಿತ್ವ

ಎಂ.ಬಿ.ಎ. ಕಲಿಕೆಯ ವೈವಿಧ್ಯತೆಗಳಿಂದ ನಿಮ್ಮ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ನಿಮ್ಮ ಗ್ರಹಿಕೆ ಚುರುಕಾಗುತ್ತದೆ. ನಿಮ್ಮ ಮಾತುಗಾರಿಕೆಗೂ, ದೇಹ ಭಾಷೆಗೂ ಹೊಂದಿಕೆಯಾಗಿ, ಒಂದಕ್ಕೊಂದು ಪೂರಕವಾಗುತ್ತದೆ. ನಿಮ್ಮ ವೇಷಭೂಷಣ ಅಚ್ಚುಕಟ್ಟಾಗಿ, ನಿಮ್ಮ ವ್ಯಕ್ತಿತ್ವ ಆಕರ್ಷಣೀಯವಾಗುತ್ತದೆ. ಆಂತರಿಕ ಶಕ್ತಿ, ಸಾಮಥ್ರ್ಯವನ್ನು ಸರಿಯಾಗಿ ಪ್ರತಿಬಿಂಬಿಸಬೇಕಾದರೆ ವ್ಯಕ್ತಿತ್ವವೇ ಪ್ರಾಮುಖ್ಯ. ಆದ್ದರಿಂದಲೇ, ಅನೇಕ ವಿಧ್ಯಾರ್ಥಿಗಳೂ, ಉದ್ಯೋಗಸ್ಥರೂ ವ್ಯಕ್ತಿತ್ವದ ವಿಕಾಸಕ್ಕಾಗಿ ತರಬೇತಿ ಶಾಲೆಗಳ ಮೊರೆ ಹೋಗುತ್ತಾರೆ. ನೀವು ಎಂ.ಬಿ.ಎ. ಮಾಡುವುರಾದರೆ, ನಿಮಗೆ ಇದರ ಅವಶ್ಯಕತೆ ಇರುವುದಿಲ್ಲ; ಏಕೆಂದರೆ ಎಂ.ಬಿ.ಎ. ಕಲಿಕೆಯಲ್ಲಿಯೇ ವ್ಯಕ್ತಿತ್ವದ ವಿಕಾಸದ ತರಬೇತಿ ಸಿಗುತ್ತದೆ.

ಸಕರಾತ್ಮಕ ದೃಷ್ಟಿಕೋನ, ಮನೋಧರ್ಮ

ನಿಮ್ಮ ವೃತ್ತಿ ಮತ್ತು ಖಾಸಗೀ ಜೀವನದ ಅನೇಕ ಸಂದರ್ಭಗಳಲ್ಲಿ, ಧೃತಿಗೆಡಿಸುವಂತ ಘಟನೆಗಳಾಗಬಹುದು; ಅಡೆತಡೆಗಳಾಗಬಹುದು. ನಿಮ್ಮ ಲೆಕ್ಕಾಚಾರ, ನಿರೀಕ್ಷೆ ತಪ್ಪಿ ಯೋಜನೆಗಳು ತಲೆಕೆಳಗಾಗಬಹುದು. ಆದರೆ, ಇವಾವುವೂ ಶಾಶ್ವತವಲ್ಲವೆಂದೂ, ಸಂಕಷ್ಟಗಳನ್ನು ಛಲದಿಂದ, ಆತ್ಮವಿಶ್ವಾಸದಿಂದ ಎದುರಿಸುವ ನಿಟ್ಟಿನಲ್ಲಿ, ನಿಮ್ಮ ಉತ್ಸಾಹಭರಿತ ಸಕಾರಾತ್ಮಕ ಮನೋಧರ್ಮವೇ ಯಶಸ್ಸಿಗೆ ಮೂಲ. ಎಂ.ಬಿ.ಎ. ಕಲಿಕೆಯಲ್ಲಿ ಈ ಅಂಶಕ್ಕೆ ಹೆಚ್ಚಿನ ಒತ್ತುಕೊಡಲಾಗುತ್ತದೆ.

ಕಾಲೇಜು ಶಿಕ್ಷಣದಲ್ಲಿ ನೀವು ಏನು ಕಲಿಯುತ್ತೀರಿ ಎನ್ನುವುದರ ಜೊತೆಗೆ ಹೇಗೆ ಕಲಿಯುತ್ತೀರಿ ಎಂಬುದೂ ಮುಖ್ಯ. ಎಂ.ಬಿ.ಎ. ಶಿಕ್ಷಣ ಪದ್ದತಿ ನಿಮ್ಮ ಸರ್ವತೋಮುಖ ವ್ಯಕ್ತಿತ್ವದ ವಿಕಾಸಕ್ಕೆ ಬುನಾದಿ. ನೀವು ಇಲ್ಲಿ ಕಲಿಯುವ ಪಾಠಗಳು, ತತ್ವಗಳು, ಮೌಲ್ಯಗಳು ಜೀವನಕ್ಕೆ ಹತ್ತಿರ ಹಾಗೂ ಅತ್ಯವಶ್ಯಕ. ಆದ್ದರಿಂದಲೇ ಜೀವನದ ಕವಲುದಾರಿಗಳಲ್ಲಿ, ಸವಾಲುಗಳನ್ನು ಎದುರಿಸುವ ಆ ಕ್ಷಣಗಳಲ್ಲಿ, ಈ ಸೂತ್ರಗಳೇ ನಿಮಗೆ ಮಾರ್ಗದರ್ಶಿ. ಇದರ ನೆರವಿನಿಂದಲೇ, ವೃತ್ತಿ ಮತ್ತು ಖಾಸಗೀ ಜೀವನಗಳ ಒತ್ತಡಗಳನ್ನು ಸಮತೋಲನದಿಂದ ನಿಭಾಯಿಸಬಹುದು.

ಈ ಜೀವನವೇ ಒಂದು ಪಾಠಶಾಲೆ; ಇಲ್ಲಿ ನಿಮ್ಮ ಪರೀಕ್ಷೆ ನಿರಂತರ. ಹೆಸರಾಂತ ಪ್ರಾಧ್ಯಾಪಕರೂ ಮತ್ತು ದೇಶದ ರಾಷ್ಟ್ರಪತಿಗಳೂ ಆಗಿದ್ದ ಡಾಕ್ಟರ್ ಎಸ್. ರಾಧಾಕೃಷ್ಣನ್ ಹೇಳಿದಂತೆ, “ವಿದ್ಯೆಯ ಮುಖ್ಯ ಗುರಿಯೇನೆಂದರೆ, ಇತರೊಡನೆ ಕೂಡಿ ಬಾಳುವ ಕಲೆಯನ್ನು ಕಲಿಸುವುದು” ಆದ್ದರಿಂದ, ಜೀವನದ ಪಾಠಶಾಲೆಗೆ ಹೋಗುವ ಮುನ್ನ, ಎಂ.ಬಿ.ಎ. ಮಾಡಿ; ಸಾರ್ಥಕವಾದ ಮತ್ತು ತೃಪ್ತಿಕರವಾದ ಬದುಕು ನಿಮ್ಮದಾಗಬಲ್ಲದು.

Download PDF document

                                       

About author View all posts Author website

V Pradeep Kumar

Leave a Reply

Your email address will not be published. Required fields are marked *