ರೊಮಾಂಟಿಕ್ ಮಾಲ್ಡೀವ್ಸ್

ಮಾಲ್ಡೀವ್ಸ್, ಹಿಂದೂಮಹಾಸಾಗರದ ಒಡಲಿನಲ್ಲಿರುವ, 750 ಕಿ.ಮೀ. ಉದ್ದಗಲದ 1192 ಹವಳ-ದ್ವೀಪಸಮೂಹ. 99% ಇಸ್ಲಾಮ್ ಧರ್ಮೀಯರಿರುವ ಇಲ್ಲಿನ ಸಂಸ್ಕೃತಿ, ಶ್ರೀಲಂಕ, ದಕ್ಷಿಣ ಭಾರತ ಮತ್ತು ಅರಬ್ ರಾಷ್ಟ್ರಗಳ ಪ್ರಭಾವಕ್ಕೆ ಒಳಗಾಗಿದೆ.

ರೊಮಾಂಟಿಕ್ ಮಾಲ್ಡೀವ್ಸ್

ಪ್ರಣಯಕ್ಕೆ ಅತ್ಯಂತ ಪ್ರಶಸ್ತ ತಾಣ ಯಾವುದು? ಇಂಟರ್‍ನೆಟ್‍ನಲ್ಲಿ ಹುಡುಕಾಡಬೇಡಿ. ‘ವಲ್ರ್ಡ್ ಟ್ರಾವೆಲ್ ಅವಾಡ್ರ್ಸ್’ ನಲ್ಲಿ ಜಗತ್ತಿನ ಅತ್ಯಂತ ಪ್ರಶಸ್ತ ರೊಮಾಂಟಿಕ್ ತಾಣವೆಂದು, ಸತತವಾಗಿ ಬಿರುದು ಗಳಿಸುತ್ತಿರುವ ಮಾಲ್ಡೀವ್ಸ್, ಈ ಸ್ಪರ್ದೆಯಲ್ಲಿ ಹಿಂದೆ ಸರಿಸಿದ ಜನಪ್ರಿಯ ಸ್ಥಳಗಳೆಂದರೆ-ಬಾಲಿ, ಸೆಶೆಲ್ಸ್, ಮಾರಿಷಸ್, ವೆನಿಸ್, ಹವಾಯ್, ಪ್ಯಾರಿಸ್ ಇತ್ಯಾದಿ. ಆದ್ದರಿಂದಲೇ, ಇಂಟರ್ ನ್ಯಾಷನಲ್ ಟ್ರಾವೆಲ್ ಮ್ಯಾಗಜಿನ್ ಸೇರಿದಂತೆ, ಅನೇಕ ಪತ್ರಿಕೆಗಳ ಅಭಿಪ್ರಾಯದಂತೆ ಮಾಲ್ಡೀವ್ಸ್, ಹನಿಮೂನ್‍ಗೆ ಅತ್ಯಂತ ಸೂಕ್ತ.

ಅಷ್ಟೇ ಅಲ್ಲ! ಕೆನಡ ದೇಶದಲ್ಲಿನ ‘ನ್ಯೂ 7 ವಂಡರ್ಸ್ ಅಫ್ ನೇಚರ್’ ಪ್ರತಿಷ್ಟಾನದ ವತಿಯಿಂದ 7 ಅದ್ಭುತಗಳನ್ನು ನಿರ್ಧರಿಸುವುದಕ್ಕಾಗಿ, ಜಗತ್ತಿನಾದ್ಯಂತ ಗುರುತಿಸಿದ ಅಂತಿಮ ಸ್ಥಳಗಳಲ್ಲಿ, ಮಾಲ್ಡೀವ್ಸ್ ಸಹ ಒಂದು. ಆದ್ದರಿಂದಲೇ, 3.5 ಲಕ್ಷ ಜನಸಂಖ್ಯೆಯಿದ್ದರೂ, ವರ್ಷಕ್ಕೆ 5 ಲಕ್ಷ ಪ್ರವಾಸಿಗರು ಬರುತ್ತಿರುವುದು ಮಾಲ್ಡೀವ್ಸ್‍ನ ಬೃಹತ್ ಜನಪ್ರಿಯತೆಗೆ ಸಾಕ್ಷಿ.

ಬೋಟ್, ಇಲ್ಲಿನ ರಾಷ್ಟ್ರೀಯ ವಾಹನ

ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಆಶ್ಚರ್ಯ! ಕಾರು, ಟ್ಯಾಕ್ಸಿ, ಬಸ್ಸುಗಳಿಲ್ಲ; ಬರೀ ದೋಣಿಗಳು, ಕಿರುನೌಕೆಗಳು. ಏಕೆಂದರೆ, ಮಾಲ್ಡೀವ್ಸಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿರುವಿದೇ ಒಂದು ದ್ವೀಪದಲ್ಲಿ. ಪ್ರಯಾಣಿಕರನ್ನು ಹತ್ತಿರದ ಮಾಲೆ ಅಥವಾ ರೆಸಾರ್ಟ್ ದ್ವೀಪಗಳಿಗೆ ಕರೆದೊಯ್ಯಲು, ಬೋಟ್ ಇಲ್ಲಿನ ರಾಷ್ಟ್ರೀಯ ವಾಹನ. ನಾವು ಇಳಿದುಕೊಳ್ಳಬೇಕಿದ್ದ ರೆಸಾರ್ಟಿನ ಪ್ರತಿನಿಧಿ ಇಳಿಯಾಸ್ ಭಿತ್ತಿಪತ್ರದೊಡನೆ ಹಾಜರಿದ್ದರು.

ಮಾಲ್ಡೀವ್ಸಿಗೆ ನಾವು ಭೇಟಿ ಮಾಡಲು ಅನೇಕ ಕಾರಣಗಳಿದ್ದವು. ದಿನಪ್ರಂತಿ, ಹವಾಮಾನದ ಬಗ್ಗೆ-ಬೆಂಗಳೂರಿನಲ್ಲಿ ಬಿಸಿಲು, ಚಳಿ, ಮಳೆ ಹೆಚ್ಚಾಗಿರುವುದನ್ನೋ, ಅಥವಾ ಹಳ್ಳಿಗಳಲ್ಲಿ ಮಳೆಯಿಲ್ಲದೆ ಹಾಳಾಗುತ್ತಿರುವ ಬೆಳೆಗಳು-ಮಾತನಾಡುತ್ತಿರುತ್ತೇವೆ. ಆದರೆ, ಪ್ರಕೃತಿಯ ವಿಕೋಪ, ಯಾವ ಮಟ್ಟಕ್ಕೆ ಹೋಗಬಹುದೆನ್ನುವುದರ ಕಲ್ಪನೆಗೆ, ಮಾಲ್ಡೀವ್ಸಿಗೆ ಬರಬೇಕು. ಬಿಸಿಯಾಗುತ್ತಿರುವ ಪೃಥ್ವಿಯ ನೇರವಾದ ಪರಿಣಾಮದಿಂದ, ಸಾಗರದ ತಾಪಮಾನ ಮತ್ತು ನೀರಿನ ಮಟ್ಟ, ಇಲ್ಲಿ ಹೆಚ್ಚಾಗುತ್ತಿದೆಯೆಂದು ವರದಿಯಾಗಿದೆ. ಇಲ್ಲಿ ಭೂಮಿಯ ಸರಾಸರಿ ಎತ್ತರ ಸಮುದ್ರಮಟ್ಟದಿಂದ ಐದು ಅಡಿಯಷ್ಟೆ; ಗುಡ್ಡ, ಬೆಟ್ಟಗಳಿಲ್ಲದೆ, ಇಲ್ಲಿನ ದ್ವೀಪಗಳು ದೋಸೆಯಂತೆ ಚಪ್ಪಟೆಯಾಗಿವೆ.

ನಾವು ಹೋಗಬೇಕಿದ್ದ ರೆಸಾರ್ಟಿಗೆ ಒಂದು ಗಂಟೆಯ ಪಯಣ. ಅಲೆಗಳನ್ನು ಹಿನ್ನುಗ್ಗಿಸಿ ಬೋಟ್ ವೇಗವಾಗಿ ಚಲಿಸುತ್ತಿತ್ತು. ಮಾಲ್ಡೀವ್ಸ್ ಪ್ರಗತಿಯ ಹಾದಿಯಲ್ಲಿ ತೇಲಬಲ್ಲದೇ ಅಥವಾ ಮುಳುಗಡೆಯಾಗುವುದೇ ಎಂಬ ಪ್ರಶ್ನೆ ಕಾಡುತ್ತಿದ್ದುದರಿಂದ ಇಳಿಯಾಸ್‍ರನ್ನು ಕೇಳಿದೆ, “ಸಮುದ್ರಮಟ್ಟ ಏರುತ್ತಿರುವುದರಿಂದ ಜನಜೀವನದ ಮೇಲಿನ ಪರಿಣಾಮಗಳೇನು?”.

ಸುಮಾರು ಐವತ್ತರ ವಯಸ್ಸಿನ ಹಸನ್ಮುಖಿ ಇಳಿಯಾಸ್, ಉತ್ತರಿಸಿದ, “ಜೀವನ ಸಾಗುತ್ತಿದೆ.”

ಒಂದೆರಡು ಕ್ಷಣದ ಮೌನದ ನಂತರ, ದುಃಖದ ನಿಟ್ಟುಸಿರು ಬಿಡುತ್ತಾ ಹೇಳಿದ, “ನಮ್ಮ ಬಗ್ಗೆ ಚಿಂತೆಯಿಲ್ಲ; ಆದರೆ ಎರಡು ವಾರಗಳ ಹಿಂದೆಯಷ್ಟೇ ಹುಟ್ಟಿದ ನನ್ನ ಮೊಮ್ಮಗಳು ಆಲಿಷ ಮತ್ತು ಅವಳ ಸಂತತಿಯ ಬಗ್ಗೆ ಆತಂಕ, ಭಯವಿದೆ. ಅವರು ಈ ದೇಶದಿಂದ ಎಂದಾದರೂ ವಲಸೆ ಹೋಗಬೇಕಾಗುತ್ತದೆ”

ಇಳಿಯಾಸಿನ ಮಾತಿನಲ್ಲಿ ಉತ್ಪ್ರೇಕ್ಷೆ ಕಾಣಲಿಲ್ಲ. ಹಲವು ಪರಿಸರ ತಜ್ಞರ ಪ್ರಕಾರ, ಈ ಶತಮಾನದ ಅಂತ್ಯದೊಳಗೆ, ಮಾಲ್ಡೀವ್ಸ್ ಮುಳುಗಡೆಯಾಗುವ ಸಾಧ್ಯತೆಯಿದೆ.

ಮಾತು ಮುಂದುವರಿಸುತ್ತಾ, ಕೇಳಿದೆ, “ಈ ಆತಂಕದಿಂದ, ಅನಿಶ್ಚತೆಯಿಂದ ಪ್ರವಾಸೋದ್ಯಮ, ವ್ಯಾಪಾರದಲ್ಲಿ ಕುಸಿತವಾಗಿದೆಯೇ?”.

“ಇಲ್ಲ. ಅಲ್ಲಾನ ದಯೆ; ಈಗಂತೂ, ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಪ್ರವಾಸೋದ್ಯಮವೇ ಇಲ್ಲಿನ ಮುಖ್ಯ ವರಮಾನ. ವಿನಾಶದ ಅಂಚಿನಲ್ಲಿರುವ ನಮ್ಮ ದೇಶಕ್ಕೆ, ಆಸ್ಟ್ರೇಲಿಯ, ಜಪಾನ್, ಯೂರೋಪ್ ಮತ್ತು ಅಮೇರಿಕ ರಾಷ್ಟ್ರಗಳಿಂದಲೂ ಪ್ರವಾಸಿಗರು ಬರುತ್ತಿದ್ದಾರೆ”

ಇಳಿಯಾಸಿನ ದೇಹಭಾಷೆಯಲ್ಲಿ, ಪ್ರಕೃತಿಯ ವಿಕೋಪಕ್ಕೆ ಮುಂದುವರಿದ ರಾಷ್ಟ್ರಗಳು ಕಾರಣವೆಂಬ ವ್ಯಂಗ್ಯವಿರಲಿಲ್ಲ. ಆದರೆ, ಆ ಮಾತಿನಲ್ಲಿ ಸತ್ಯವಿದೆ.

ಇತ್ತೀಚಿನ ವರ್ಷಗಳಲ್ಲಿ ಬಿಸಿಯಾಗುತ್ತಿರುವ ಪೃಥ್ವಿಯ ಪರಿಣಾಮ, ಪರಿಹಾರಗಳ ಬಗ್ಗೆ ಜಗತ್ತಿನಲ್ಲಿ ಸಾಕಷ್ಟು ಚರ್ಚೆಯೂ, ಕಲಹಗಳೂ ಆಗುತ್ತಿದೆ. ಈ ಎಲ್ಲ ಚರ್ಚೆ, ವಿವಾದಗಳಲ್ಲಿ ಮಾಲ್ಡೀವ್ಸ್ ದೇಶದ ರಾಷ್ಟ್ರಪತಿ, 44ರ ಹರಯದ, ಚೈತನ್ಯಯುತ ಮೊಹಮದ್ ನಶೀದ್, ಗಮನ ಸೆಳೆಯುತ್ತಿದ್ದಾರೆ. ಇವರ ಧ್ಯೇಯ ದೇಶನ್ನು 2020ರಲ್ಲಿ ಕಾರ್ಬನ್‍ರಹಿತವನ್ನಾಗಿ ಮಾಡುವುದು. ಅವರು ಇತ್ತೀಚೆಗಷ್ಟೇ ಹೇಳಿದ ಮಾತು, “ಮಾಲ್ಡೀವ್ಸ್‍ನ್ನು ಕಾರ್ಬನ್‍ರಹಿತ ಮಾಡಿ, ಜಗತ್ತನ್ನು ತಲ್ಲಣಗೊಳಿಸಿ, ಬೆದರಿಸುವ ಉದ್ದೇಶವಿಲ್ಲ; ಪರಿಸರ ಸಂರಕ್ಷಣೆಯಲ್ಲಿ, ಇದೊಂದು ಸರಿಯಾದ ಹೆಜ್ಜೆಯಷ್ಟೇ”.

‘ಅಂಡರ್ ವಾಟರ್ ಕ್ಯಾಬಿನೆಟ್ ಮೀಟಿಂಗ್ೀ’

ಭ್ರಷ್ಟಾಚಾರದ ಆರೋಪಗಳ ಸುಳಿಯಲ್ಲಿ ಒದ್ದಾಡುತ್ತಿರುವ ರಾಜಕಾರಣಿಗಳನ್ನು ನೋಡುತ್ತಿರುವ ನಮಗೆ, ಇದೊಂದು ಸೋಜಿಗದ ವಿಷಯ. ನಶೀದ್ ಎಷ್ಟು ಕ್ರಿಯಾಶೀಲರೆನ್ನುವುದಕ್ಕೆ ಉದಾಹರಣೆಯಂತೆ, 2009ನೇ ವರ್ಷದ ಅಕ್ಟೋಬರ್ 17ರಂದು, ಮಂತ್ರಿಮಂಡಲದ ಸಭೆಯನ್ನು ಸಾಗರದಾಳದಲ್ಲಿ ನಡೆಸಿದರು. ಎಲ್ಲ ಮಂತ್ರಿವರ್ಯರೂಂದಿಗೆ ನಶೀದ್, ಸ್ಕೂಬ ಡೈವಿಂಗಿನ ವಿಶೇಷ ಉಡುಪುಗಳನ್ನು ಧರಿಸಿ, ಸಾಗರದಾಳದಲ್ಲಿ ಸಭೆ ನಡೆಸಿ ಪರಿಸರವಾದಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಇದೇ ‘ಜಗತ್ತಿನ ಪ್ರಪ್ರಥಮ ಅಂಡರ್ ವಾಟರ್ ಕ್ಯಾಬಿನೆಟ್ ಮೀಟಿಂಗ್’!

ಇಳಿಯಾಸ್ ಆಕರ್ಷಕ ಮಾತುಗಾರ. ದ್ವೀಪಗಳನ್ನು ದಾಟುತ್ತಿದ್ದಂತೆ, ಸೂಕ್ತ ಮಾಹಿತಿಯನ್ನೂ, ವಿವರಗಳನ್ನೂ ನೀಡುತ್ತಿದ್ದ. ಮಾತಿನ ಮಧ್ಯೆ ನಾನು ಕೇಳಿದೆ,
“ನಶೀದ್ ಅವರು ಸಾಕಷ್ಟು ಕಾಳಜಿಯಿಂದ, ಶ್ರದ್ಧೆಯಿಂದ ಕೆಲಸಗಳನ್ನು ಮಾಡುತ್ತಿದ್ದಾರೆಯಲ್ಲವೇ?”

ತಕ್ಷಣ ಇಳಿಯಾಸ್ “ನೀವು ಹೇಳುವುದು ನಿಜ. ರಾಷ್ಟ್ರಪತಿ ನಶೀದ್‍ರ ವಿವೇಕದ ಮಾತುಗಳು ಜಗತ್ತಿನ ಗಮನ ಸೆಳೆಯುವಲ್ಲಿ ಯಶಸ್ವಿ; ಆದರೆ, ಇದರಿಂದ ನಮ್ಮ ಭವಿಷ್ಯವನ್ನು ಬದಲಾಗಿಸಲಾಗೀತೆ?”.

ಅವನ ಮಾತುಗಳಲ್ಲಿ ನಿಜವಿರಬಹುದು. ಆದರೆ, ನಶೀದ್ “ನಮ್ಮ ನಾಗರಿಕರು ನಿರ್ಗತಿಕರಾಗಿ ವಲಸೆ ಹೋಗುವ ಅಗತ್ಯವಿಲ್ಲ” ಎಂದು ಹೇಳುತ್ತಾ, ಕಾರ್ಯಪ್ರವುತ್ತರಾಗಿದ್ದಾರೆ. ಹೊಸದೊಂದು ದ್ವೀಪವನ್ನು ನಿರ್ಮಿಸುವುದಲ್ಲದೆ, ಹತ್ತಿರದ ಶ್ರೀಲಂಕ, ಭಾರತವಷ್ಟೇ ಅಲ್ಲ, ದೂರದ ಆಸ್ಟ್ರೇಲಿಯದಲ್ಲೂ ನಾಗರಿಕರು ಜಮೀನು ಖರೀದಿಸುವ ಅವಕಾಶವನ್ನು ಸೃಷ್ಠಿಸುತ್ತಿದ್ದಾರೆ.

ಮಾಲ್ಡೀವ್ಸ್ ಮುಳುಗಡೆಯಾಗುವುದರ ಬಗ್ಗೆ ವಾದ-ವಿವಾದಗಳಾಗುತ್ತಿವೆ. ಕೆಲವು ಪರಿಸರ ತಜ್ಞರು “ಸಮುದ್ರಮಟ್ಟದಲ್ಲಿ ಏರಿಕೆಯಾಗುತ್ತಿರುವ ಬಗ್ಗೆ ಖಚಿತವಾದ ಮಾಹಿತಿಯಿಲ್ಲ. ಆದ್ದರಿಂದ, ಮಾಲ್ಡೀವ್ಸ್ ಸರ್ಕಾರದ ವಾದ, ಪ್ರಚಾರತಂತ್ರವಷ್ಟೇ”, ಎನ್ನುತ್ತಾರೆ.

ಮರುಳುಮಾಡುವ ಮಾಲ್ಡೀವ್ಸ್

ಈ ವಾದದ ಸತ್ಯ-ಅಸತ್ಯಗಳೇನೇ ಇರಲಿ, ಇದೊಂದು ಸುಂದರ ಪ್ರಪಂಚವೆಂಬುದು ನಿರ್ವಿವಾದ. “ಅದೋ ನೋಡಿ, ನಮ್ಮ ರೆಸಾರ್ಟ್ ಬಂತು” ಎಂದು ಹತ್ತಿರದಲ್ಲೇ ಕಾಣುತ್ತಿದ್ದ ದ್ವೀಪವನ್ನು ತೋರಿಸುತ್ತಾ ಇಳಿಯಾಸ್ ಹೇಳಿದ. ತೆಂಗಿನ ಮತ್ತು ತಾಳೆ ಮರಗಳ ಮಧ್ಯೆ ಕೆಂಪು ಮತ್ತು ಕಂದು ಬಣ್ಣದ ಕಾಟೇಜ್‍ಗಳು, ದ್ವೀಪಕ್ಕೂ ಸಾಗರಕ್ಕೂ ನಡುವಿನ ಶ್ವೇತವರ್ಣದ ಮರಳನ್ನು ಆವರಿಸಿದ ಹಸಿರುನೀಲಿ ನೀರಿನ ದೃಶ್ಯ, ಮರುಳುಮಾಡುವಂತಿತ್ತು.

ಆಕರ್ಷಕವಾಗಿ ನಿರ್ಮಿಸಿದ್ದ ಜೆಟ್ಟಿಯಿಂದ, 50 ಮೀಟರ್ ದೂರದಲ್ಲಿದ್ದ ರೆಸಾರ್ಟಿನ ಪ್ರವೇಶದ್ವಾರದಲ್ಲಿಯೇ, ನಿರ್ವಾಹಕ ಜೋಸೆಫ್ ಸ್ವಾಗತಿಸಿದರು.

ನಾವು ತಂಪು ಪಾನೀಯವನ್ನು ಸ್ವೀಕರಿಸುತ್ತಿದ್ದಂತೆ, ಜೋಸೆಫ್ ಹೇಳಿದರು, “ನಿಮಗೆ ಆಕ್ಷೇಪಣೆಯಿಲ್ಲದಿದ್ದರೆ, ರೆಸಾರ್ಟಿನ ಪರಿಚಯವನ್ನು ಮಾಡಿಸುತ್ತೇನೆ”.

ರೆಸಾರ್ಟಿನಲ್ಲಿ ನಡೆಯುತ್ತಾ ಜೊಸೆಫ್, “ಒಂಬತ್ತು ಎಕರೆಯ ಈ ದ್ವೀಪದಲ್ಲಿ ಇರುವುದಿದೊಂದೇ ರೆಸಾರ್ಟ್. ನಿಮ್ಮ ಉಪಹಾರ ಮತ್ತು ಭೋಜನವನ್ನು ಇಲ್ಲೇ ಮಾಡುವುದು ಸೂಕ್ತ” ಎಂದು ಹೇಳುತ್ತಲೇ, ಅನಿತ ಕೇಳಿದಳು, “ನಿಮ್ಮಲ್ಲಿ ಭಾರತೀಯ ವೆಜಿಟೇರಿಯನ್ ಸಿಕ್ಕುತ್ತದೆಯೇ?”.

“ಅವಶ್ಯವಾಗಿ. ನಮ್ಮಲ್ಲಿ ಎಲ್ಲಾ ಅಡುಗೆಗಳನ್ನೂ ಮಾಡುತ್ತೇವೆ” ಎನ್ನುತ್ತಾ ಜೋಸೆಫ್ ನಮಗೊಂದು ವಿಶೇಷವಾದ ಸೌಲಭ್ಯವನ್ನು ಕೊಟ್ಟರು, “ನಮ್ಮಲ್ಲೀಗ ಹೆಚ್ಚು ಭಾರತೀಯ ಪ್ರವಾಸಿಗರಿಲ್ಲ. ಆದ್ದರಿಂದ, ನೀವು ನಮಗೆ ಉಪಾಹಾರ ಮತ್ತು ಭೋಜನದ ಆದ್ಯತೆಯನ್ನು ರಾತ್ರಿಯೇ ತಿಳಿಸಿದರೆ, ಮರುದಿನದ ಬಫೆಯಲ್ಲಿ ಆ ಭಕ್ಷ್ಯಗಳಿರುತ್ತದೆ”. ಆ ವ್ಯವಸ್ಥೆ ನಿಜಕ್ಕೂ ಮೆಚ್ಚುವಂತದ್ದು.

ಚಟುವಟಿಕೆಗಳ ಆಗರ

ಪ್ರವಾಸಗಳು ಆಹ್ಲಾದಕರವಾಗಿರಬೇಕು; ತನುಮನದಲ್ಲಿ ಚೈತನ್ಯವನ್ನು ತುಂಬುವಂತಿರಬೇಕು. ಪ್ರವಾಸದಲ್ಲಿನ ಗಡಿಬಿಡಿಯ ದಿನಚರಿಯಿಂದ ಸುಸ್ತಾಗಿ ಮನೆ ಸೇರಿ, ರಜಾ ಹಾಕುವಂತಾಗಬಾರದು. ಇಲ್ಲಿ ಮುಂಜಾನೆಯಿಂದ ರಾತ್ರಿಯವರೆಗೆ ಹಲವಾರು ಸ್ಥಳಗಳನ್ನು, ಬೇರೆಡೆಯಂತೆ ಕೆಲವೊಮ್ಮೆ ಆಸಕ್ತಿಯಿಂದಲೂ, ವಿಧಿಯಿಲ್ಲದೆಯೂ ನೋಡುವ ಗೋಜಿಲ್ಲ. ನಾನು ಜೋಸೆಫ್‍ರನ್ನು ಕೇಳಿದೆ.
“ಪ್ರವಾಸಿಗರಿಗೆ ನಿಮ್ಮ ಸಲಹೆಗಳೇನು?”

“ಚಟುವಟಿಕೆಗಳೇ ಇಲ್ಲಿನ ಮುಖ್ಯ ಆಕರ್ಷಣೆ. ಪ್ಯಾರ ಸೇಲಿಂಗ್, ಸ್ಕೂಬ ಡೈವಿಂಗ್, ಯಾಚಿಂಗ್, ಕಯಾಕಿಂಗ್, ಸ್ನಾರ್ಕ್‍ಲಿಂಗ್‍ಗಳಂತ ವೈವಿಧ್ಯಮಯವಾದ ಎಲ್ಲ ವಯಸ್ಸಿನವರಿಗೂ ಸೂಕ್ತವಾದಂತಹ ಜಲಕ್ರೀಡೆಗಳಿವೆ. ಮುಖ್ಯವಾದ ದ್ವೀಪಗಳಿಗೆ ವಿಹಾರ ಹೋಗಬಹುದು. ಸ್ವಿಮ್ಮಿಂಗ್, ಜಿಮ್, ಸ್ಪಾ ಮತ್ತು ಗ್ರಂಥಾಲಯದಲ್ಲಿ ಕಾಲ ಕಳೆಯಬಹುದು”.

ಅಲ್ಲೇ ನಡೆದಾಡುತ್ತಿದ್ದ ಶೆಫರ್ ಕುಟುಂಬದವರಿಗೆ, ಜೋಸೆಫ್ ಪರಿಚಯ ಮಾಡಿಸಿದರು. ಆ ನಂತರ, ಜೋಸೆಫ್ “ಈ ಜರ್ಮನ್ ಕುಟುಂಬವನ್ನು ನೋಡಿ. ಕಳೆದ ಹದಿನೈದು ವರ್ಷಗಳಿಂದ, ಪ್ರತಿವರ್ಷ ನಮ್ಮ ರೆಸಾರ್ಟಿಗೆ ಬರುತ್ತಿದ್ದಾರೆ. ಬಂದಾಗಲೆಲ್ಲಾ, ನಾಲ್ಕು ವಾರವಿರುತ್ತಾರೆ” ಎಂದರು.

ನಿಜಕ್ಕೂ ಅಚ್ಚರಿಯಾಯಿತು. “ವಿವಿಧ ದೇಶಗಳ ಜನರನ್ನೂ, ಅವರ ಜೀವನಶೈಲಿಯನ್ನು ಗಮನಿಸುವ ಸದವಕಾಶ ನಿಮ್ಮದಾಗಿದೆ” ಎಂದೆ. ಮುಗುಳ್ನಗುತ್ತಾ, ಜೊಸೆಫ್ ಹೌದೆಂದರು.

ನಿಸರ್ಗದ ಮಾಯಾಲೋಕ

ಸಮುದ್ರಕ್ಕೆ ಹೊಂದಿಕೊಂಡಂತೆಯೇ ಇದ್ದ ನಮ್ಮ ಕಾಟೇಜನ್ನು ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಇಲ್ಲಿ ಓದುವ ಸಲುವಾಗಿಯೇ ಆಯ್ದ ಪುಸ್ತಕಗಳನ್ನು ತಂದಿದ್ದೆ ಮತ್ತು ಅನುಭವದ ಕೆಲವು ವಿಚಾರಗಳಿಗೆ ಬರವಣಿಗೆಯ ರೂಪವನ್ನೂ ಕೊಡಬೇಕಿತ್ತು. ಕಾಟೇಜ್ ಮುಂದಿನ ಹ್ಯಾಮಕ್‍ನಲ್ಲಿ ಓದಲಾರಂಬಿಸಿದೆ. ತಿಳಿನೀಲಿ ಆಕಾಶ, ತಂಗಾಳಿ, ಕಾಲಿನ ಕೆಳಗೆ ಹರಿವ ನೀರಿನ ಮತ್ತು ಹಕ್ಕಿಗಳ ಕಲರವದ ಹಿನ್ನೆಲೆಯಲ್ಲಿ ಓದುವ ಅನುಭವ ಹೊಸತಾಗಿತ್ತು. ಇಂತಹ ಪರಿಸರದಲ್ಲಿ ವಿಚಾರಗಳು ಸ್ವಾಭಾವಿಕವಾಗಿಯೇ ಅರಳುತ್ತವೆ. ಬರೆಯುವ ಮುನ್ನ, ತೆರೆದಿಟ್ಟ ಮನಸ್ಸಿನ ವಿಚಾರಗಳಿಗೂ, ಕಲ್ಪನೆಗೂ, ಇಂತಹ ಪರಿಸರ ಸೂಕ್ತ. ಸ್ವಲ್ಪ ಸಮಯದಲ್ಲಿಯೇ, ಸೂರ್ಯಾಸ್ತವಾಗಿ ರೆಸಾರ್ಟಿನ ಮತ್ತು ಜೆಟ್ಟಿಯ ದೀಪಗಳಿಂದ, ನೀರಿನಲ್ಲಿ ಮೂಡಿದ ಪ್ರತಿಬಿಂಬದಿಂದ ಈ ದ್ವೀಪ, ನಿಸರ್ಗದ ಮಾಯಾಲೋಕವೆನಿಸುತ್ತಿತ್ತು.

ರಾತ್ರಿ ರೆಸಾರ್ಟಿನ ಹೊರಾಂಗಣದಲ್ಲಿ, ಮಾಲ್ಡೀವ್ಸಿನ ಜಾನಪದ ಕಾರ್ಯಕ್ರಮವಿತ್ತು. ಇಲ್ಲಿನ ‘ದಿವೆಹಿ’ ಭಾಷೆ ಅರ್ಥವಾಗದಿದ್ದರೂ, ನೃತ್ಯ-ಸಂಗೀತದ ಸಂಯೋಜನೆ ಮೈಮರೆಸುವಂತಿತ್ತು. ವಿವಿಧ ಸಂಸ್ಕೃತಿಯ ಪ್ರವಾಸಿಗರು ಕಾರ್ಯಕ್ರಮದಲ್ಲಿ ಒಟ್ಟಾಗಿ, ಲವಲವಿಕೆಯಿಂದ ಭಾಗವಹಿಸಿದ್ದು, ‘ಈ ಜಗತ್ತೊಂದು ಕುಟುಂಬ’ವೆನ್ನುವ ನಮ್ಮ ಹಿತೋಪದೇಶದ ಸಾರಾಂಶವನ್ನು ಎತ್ತಿತೋರಿಸುವಂತಿತ್ತು.

ಮೀನು ಪ್ರಿಯರಿಗೆ ಬೋನಸ್!

ಮರುದಿನ ಜನಜೀವನದ ಪರಿಚಯವನ್ನು ಅರಿಯಲು ಕೆಲವು ದ್ವೀಪಗಳಿಗೆ ಹೊರಟೆವು. ಇಲ್ಲಿ 1200 ದ್ವೀಪಗಳಿದ್ದರೂ, ಜನವಸತಿಯಿರುವುದು 200ರಲ್ಲಿ ಮಾತ್ರ. ಸಮುದ್ರವೇ ಇಲ್ಲಿನ ಜನರ ಜೀವ; ಅದರ ಉತ್ಪನ್ನಗಳೇ ಜೀವನಾಧಾರ. ಇಲ್ಲಿನ ಸಮುದ್ರತೀರದಲ್ಲಿ ಮೀನುಗಾರರು ವಿಶ್ರಮಿಸಲು ಅಲ್ಲಲ್ಲಿ ಮರದ ಆಸನಗಳನ್ನು ನಿರ್ಮಿಸಿದ್ದಾರೆ. ಸಂಜೆಯ ನಂತರ, ಪ್ರವಾಸಿಗರಿಗೆ ಮೀನು ಹಿಡಿಯುವ ನೈಪುಣ್ಯತೆಯನ್ನು ಕಲಿಸುವ ವ್ಯವಸ್ಥೆಯಿದೆ. ಇಲ್ಲಿ ಟೂನ, ಷಾರ್ಕ್, ಬಾರಕುಡ, ಡಾಲ್ಫಿನ್ ಸೇರಿದಂತೆ 1000ಕ್ಕೂ ಹೆಚ್ಚು ವೈವಿಧ್ಯದ ಮೀನುಗಳಿವೆ. ಹಾಂ! ನಿಮ್ಮಲ್ಲಿ ಫಿಶಿಂಗ್ ಚಾತುರ್ಯವಿದೆಯೇ? ಚಾತುರ್ಯವಿದ್ದು, ಮೀನುಗಳನ್ನು [ಹಿಡಿದರೆ?], ನೀವೇ ಬಾರ್ಬಿಕ್ಯು ಮಾಡಿ ಸವಿಯುವ ಅವಕಾಶವಿದೆ.

ಆ ರಾತ್ರಿ, ಜೋಸೆಫ್‍ರಿಂದ ನಮಗಾಗಿ ಬೀಚಿನಲ್ಲಿ ವಿಶೇಷ ವ್ಯವಸ್ಥೆ. ಸೌಮ್ಯವಾದ ಅಲೆಗಳಿಂದ ಪ್ರಶಾಂತವಾಗಿದ್ದ ಸಮುದ್ರ, ಮೈ ಸೋಕುತ್ತಿದ್ದ ತಂಗಾಳಿ, ಬಾರ್ಬಿಕ್ಯು ಮತ್ತು ರುಚಿಕರ ಅಡುಗೆಯ ಜೊತೆಗೆ ಹೋಟೆಲಿನ ಗಿಟಾರ್ ವಾದಕ ನಮಗಿಷ್ಟವಿದ್ದ ಹಾಡುಗಳನ್ನು ನುಡಿಸುತ್ತಿದ್ದ. ಈ ಮೋಹಕ ತಾಣದ ಪ್ರೈವೇಟ್ ಡಿನ್ನರ್, ಮಧುಚಂದ್ರದ ನಮ್ಮ ನೆನಪುಗಳನ್ನು ಹಸಿರಾಗಿಸಿ, ಜರ್ಮನ್ ದಂಪತಿಗಳಂತೆ, ನಾವೂ ಮರಳಿ ಮಾಲ್ಡೀವ್ಸಿಗೆ ಬರಬೇಕೆನ್ನುಸುತ್ತಿತ್ತು.

ಮುಂಜಾನೆ ರೆಸಾರ್ಟಿನಲ್ಲಿ ನಡೆದಾಡುವಾಗ ಸಿಕ್ಕ ಏಷಿಯಾದ ಪ್ರವಾಸಿಗರ ಮುಗುಳ್ನಗೆಯ ಹೆಲೊ, ಯೂರೋಪ್ ಮತ್ತು ಅಮೇರಿಕ ದೇಶದವರ ಮಂದಹಾಸಕ್ಕೆ ವಿರುದ್ಧವಾಗಿ ಅರಬ್ ಪ್ರವಾಸಿಗರಿಂದ ಯಾವ ಪ್ರತಿಕ್ರಿಯೆಯೂ ಬರುತ್ತಿರಲಿಲ್ಲ. ಇದಕ್ಕೆ ಹೊರತೆಂಬಂತೆ, ಶೆಫರ್ ದಂಪತಿಗಳು ನಿಂತು, ಎಲ್ಲಾ ಸೌಖ್ಯವೇ ಎಂದು ವಿಚಾರಿಸಿದರು.

ರೊಮಾಂಚನಕಾರಿ ಪಾರಾಸೇಲಿಂಗ್

ಪಾರಾಸೇಲಿಂಗ್ ಮೊದಲೇ ರೋಮಾಂಚನಕಾರಿ; ಇನ್ನು ರೊಮಾಂಟಿಕ್ ಮಾಲ್ಡೀವ್ಸಿನಲ್ಲಿ ಕೇಳಬೇಕೇ? ಪಾರಾಚೂಟಿನಲ್ಲಿ ಪ್ರಿಯತಮೆಯೊಡನೆ ಡಬಲ್ಸ್ ಕೂಡಿ, ಪ್ರಣಯ ಹಕ್ಕಿಗಳಂತೆ ರೊಮಾಂಟಿಕ್ ಮೂಡಿನಲ್ಲಿ ಡುಯಟ್ ಹಾಡುತ್ತಾ, ಮನಸೋ ಇಚ್ಛೆ ಹಾರಾಡಬಹುದು.
ಆ ದಿನದ ಕಾರ್ಯಕ್ರಮದಂತೆ, ನಾವು ಪ್ಯಾರಾಸೇಲಿಂಗ್ ಮಾಡುವರಿದ್ದೆವು. ವಿಸ್ತಾರವಾದ ಸಾಗರ ಪ್ರದೇಶದಲ್ಲಿ, ನನ್ನನ್ನು ಹಾರಲು ಸಜ್ಜುಗೊಳಿಸಿ, ನಿಯಂತ್ರಣವನ್ನು ಸಡಿಲಗೊಳಿಸುತ್ತಿದ್ದಂತೆ, ಉಬ್ಬುತ್ತಿದ್ದ ಪಾರಾಚೂಟ್ ಮೇಲೇರಿ, ಆಕಾಶದಲ್ಲಿ ಹಾರುವ ಅನುಭವವಾಯಿತು. ನಿಮಿಷಗಳಲ್ಲಿ ಸುಮಾರು 1000 ಅಡಿಯ ಎತ್ತರಕ್ಕೇರಿ, ಅಂತರಿಕ್ಷದಿಂದ ಕಾಣಿಸುತ್ತಿದ್ದ ದ್ವೀಪಸಮೂಹದ ದೃಶ್ಯ ಅಮೋಘವಾಗಿತ್ತು.

ಆಕಾಶದಲ್ಲಿ ಹಾರುವುದು ಅತಿ ರೋಮಾಂಚನಕಾರಿ. ಆದರೆ, ಹಕ್ಕಿಯಂತೆ ಆಕಾಶದಲ್ಲಿ ಹಾರುತ್ತಿದ್ದರೂ, ಅವುಗಳಿಗಿರುವ ಹಿಡಿತ, ನಿಯಂತ್ರಣ ನನ್ನಲ್ಲಿರಲಿಲ್ಲ; ಆ ನಿಯಂತ್ರಣವಿದ್ದುದು ಬೋಟಿನ ನಾವಿಕನಲ್ಲಿ. ಕಾಣದ ನಿಯಂತ್ರಣ ಸಡಿಲವಾದಾಗ ಮೇಲೇರುವ, ಬಿಗಿಯಾದಾಗ ಕೆಳಗಿಳಿಯುವ, ಬೋಟ್ ಚಲಿಸುವ ದಿಕ್ಕಿನಲ್ಲೇ ನಮ್ಮನ್ನೂ ಸೆಳೆಯುವ, ಆ ಅನುಭವ ಬದುಕಿಗೆ ಹತ್ತಿರವಿತ್ತು. ಜೀವನದಲ್ಲಿ ಎಷ್ಟೇ ಯಶಸ್ವಿಯಾದರೂ, ಕಾಣದ ಶಕ್ತಿಯೊಂದು, ಬದುಕಿನಲ್ಲಿ ಅಗೋಚರವಾದ ಗುರಿಯತ್ತ ನಮ್ಮನ್ನು ಸೆಳೆಯುತ್ತಿರುತ್ತದೆ. ನಮ್ಮ ಇರವು-ಅರಿವಿನ ವಾಸ್ತವತೆಯಿಂದ ಮನಸ್ಸು ಹಗುರಾಗಿ, ನವಚೈತನ್ಯ ತುಂಬಿ ಇನ್ನಷ್ಟು ಹಾರಾಡುವ ಎನಿಸುತ್ತಿತ್ತು.

ಅಂದಿನ ಸುಡುಬಿಸಿಲು ಕಣ್ಣಿಗೆ ಹೊಡಿಯುವಂತಿದ್ದರೂ, ಚದುರಿದ ಮೋಡಗಳು ಆಗಿಂದಾಗ್ಗೆ ಸೂರ್ಯನ ಪ್ರಖರವನ್ನು ತಡೆದು, ಮನಸ್ಸಿಗೆ ಮುದ ನೀಡುತ್ತಿತ್ತು. ಆಷ್ಟರಲ್ಲಿ, ಸಮಯ ಮುಗಿದು ಪಾರಾಚೂಟ್ ಕೆಳಗಿಳಿಯತೊಡಗಿತು. ಕೆಳಗಿಸುವ ಪ್ರಕ್ರಿಯೆಯ ಬಗ್ಗೆ ತಿಳಿಸಲೇಬೇಕು. ನೀವು ಸಾಹಸ ಪ್ರವೃತ್ತಿಯವರಾದರೆ, ನೀರಿನಲ್ಲಿ ಇಳಿಸಿ, ಮೇಲಕ್ಕೆತ್ತಿ, ಮತ್ತೆ ನೀರಿನೊಂದಿಗೆ ಆಟವಾಡಿಸಿ, ಬೋಟಿನ ಮೇಲಿಳಿಸುತ್ತಾರೆ. ಅಥವಾ, ನೇರವಾಗಿ ಬೋಟಿನ ಮೇಲೆ ‘ಸೇಫ್ ಲ್ಯಾಂಡಿಂಗ್’ ಮಾಡಿಸುತ್ತಾರೆ.

ಸ್ಟಿಂಗ್‍ರೆ ಫೀಡಿಂಗ್

ಸಂಜೆ ರೆಸಾರ್ಟಿನ ಬೀಚಿನಲ್ಲಿ ಆಶ್ಚರ್ಯಕರ ಅನುಭವ. ದಿನಚರಿಯಂತೆ, ನಿಗದಿತ ಸಮಯಕ್ಕೆ 30-40 ಷಾರ್ಕ್ ಜಾತಿಯ ‘ಸ್ಟಿಂಗ್‍ರೆ’ ಎಂಬ ಕಡಲ ಮೀನುಗಳು ಬರುತ್ತವೆ. ನೀರಿನಿಂದ ಮೇಲಕ್ಕೆ ಜಿಗಿಯುವ ಮೀನುಗಳು ಹಿಡಿಯುವಂತೆ ಆಹಾರವನ್ನು ಎಸೆಯುವುದೊಂದು ಚಟುವಟಿಕೆ. ವರ್ಷಗಳಿಂದ ಇದೇ ಕೆಲಸದಲ್ಲಿರುವ ಬಾಂಗ್ಲಾದೇಶದ ಜಿûಯ, ಸ್ಟಿಂಗ್‍ರೆ ಬಗ್ಗೆ ವಹಿಸಬೇಕಾದ ಎಚ್ಚರಿಕೆಗಳನ್ನು ತಿಳಿಸಿದ. ಸ್ಟಿಂಗ್‍ರೆ ಸಾಮಾನ್ಯವಾಗಿ ಸ್ನೇಹಜೀವಿ! [ಆದರೆ ಹೆಸರಾಂತ ವನ್ಯಜೀವಿ ತಜ್ಞ ಸ್ಟೀವ್ ಇರ್ವಿನ್‍ನ್ನು, ಆಕಸ್ಮಿಕವಾಗಿ ಐದು ವರ್ಷಗಳ ಹಿಂದೆ ಇರಿದು ಸಾಯಿಸಿದ್ದು ಸ್ಟಿಂಗ್‍ರೆ ಎಂಬುದನ್ನೂ ಮರೆಯಲಾಗದು]. ಇವುಗಳ ಮೈ ಮುಟ್ಟುವುದು, ಆಹಾರ ನೀಡುವುದು ಉಲ್ಲಾಸಕರ.

ಮಾರನೆಯ ದಿನದ ಸಮಯವನ್ನು ವಿಶ್ರಾಮಕ್ಕಾಗಿ ಹವಣಿಸಿದ್ದೆವು. ಇಲ್ಲಿನ ಸ್ಪಾದಲ್ಲಿ ಬಾಲಿನೀಸ್, ಥಾಯ್, ಚೈನೀಸ್, ಸ್ವೀಡಿಶ್ ಮತ್ತು ಆಯುರ್ವೇದದ ಮಾಲೀಶ್ ಮಾಡುತ್ತಾರೆ. ಮಕ್ಕಳಿಗೂ, ವಯಸ್ಕರಿಗೂ, ವೃದ್ಧರಿಗೂ ಇಷ್ಟವಾಗುವಂತ ಚಟುವಟಿಕೆಗಳಿರುವ ಮಾಲ್ಡೀವ್ಸ್ ಎಲ್ಲ ಪ್ರವಾಸಿಗರಿಗೂ ಪ್ರಶಸ್ತ.

ಮನತಣಿಸುವ ಮಾಲ್ಡೀವ್ಸ್‍ಗೆ ಬೆಂಗಳೂರಿನಿಂದ ಕೇವಲ ಎರಡು ಗಂಟೆಗಳ ಪ್ರಯಾಣ. ಇಲ್ಲಿಗೆ ಹೋಗಿಬರುವ ವೆಚ್ಚವೂ ಹೆಚ್ಚಲ್ಲ. ಆದರೆ, ಇಲ್ಲಿನ ಪರಿಸರದ ಅಪರೂಪದ ಅನುಭವಗಳು ವೈಶಿಷ್ಟ್ಯಪೂರ್ಣ. ಯಾಂತ್ರಿಕ ಬದುಕಿನ ಒತ್ತಡದಿಂದ ಮುಕ್ತವಾಗಿ, ಮನೋಲ್ಲಾಸದೊಂದಿಗೆ ಮನೋವಿಕಾಸವನ್ನೂ ಮಾಡುವಂತಹ ಸ್ಥಳ ಮಾಲ್ಡೀವ್ಸ್.

ಇಂತಹ ಉತ್ಕೃಷ್ಟ ಸ್ಥಳದ ವರ್ಣನೆಯನ್ನು ಅಕ್ಷರಗಳಲ್ಲಿ ಬಣ್ಣಿಸುವುದು ಅಸಾಧ್ಯ; ಆ ದೃಶ್ಯ ವೈಭವದಲ್ಲಿ ವಿಹರಿಸುತ್ತಾ ಮಧುಚಂದ್ರದ ಹಳೆಯ ನೆನಪುಗಳನ್ನು ರೊಮಾಂಟಿಕ್ಕಾಗಿ ಮೆಲುಕುಹಾಕಲು, ಅಥವಾ ಸುಯೋಗದಿಂದ ಮಧುಚಂದ್ರದ ಸಡಗರದಲ್ಲಿದ್ದರೆ, ಅಥವಾ ಜಸ್ಟ್ ಟು ರಿಲಾಕ್ಸ್, ನೀವು ಮಾಲ್ಡೀವ್ಸ್‍ಗೆ ಹೋಗಿಬನ್ನಿ.

Download PDF Document

About author View all posts Author website

V Pradeep Kumar

Leave a Reply

Your email address will not be published. Required fields are marked *