ಸಮಯದ ನಿರ್ವಹಣೆ ಹೇಗೆ?

ಕೆಲವು ದಿನಗಳ ಹಿಂದೆ, ಸಮಾರಂಭವೊಂದಕ್ಕೆ ಆಹ್ವಾನಿಸಲು ಸ್ನೇಹಿತರೊಬ್ಬರ ಮನೆಗೆ ಹೋದಾಗ ನಡೆದ ಘಟನೆಯಿದು. ಮನೆಯಲ್ಲಿನ ನಿಶ್ಯಬ್ದದ ವಾತಾವರಣವನ್ನು ಕಂಡು ಕಾರಣ ಕೇಳಿದಾಗ, ಣ”ಮುಂದಿನ ವಾರದಿಂದ, ಸತೀಶ್‍ನ ಪರೀಕ್ಷೆಯಿದೆ; ಓದುತ್ತಿದ್ದಾನೆ. ಸ್ವಲ್ಪ ಅವನ ತಯಾರಿ ಹೇಗಿದೆ ವಿಚಾರಿಸಿ ನೋಡಿ” ಎಂದರು, ಸ್ನೇಹಿತರು.

ಸತೀಶನ ಕೊಠಡಿಗೆ ಹೋದರೆ ಆಶ್ಚರ್ಯ ಕಾದಿತ್ತು. ಸ್ಟಡಿ ಟೇಬಲ್ಲಿನ ಮೇಲೆ ಎಲ್ಲಾ ಪುಸ್ತಕಗಳನ್ನು ಹರಡಿಕೊಂಡು ಕುಳಿತಿದ್ದ ಸತೀಶ್ ತನ್ನ ಕಷ್ಟವನ್ನು “ಯಾಕೋ ಏನೋ, ಓದಲು ಆಗುತ್ತಿಲ್ಲ. ಓದಿದರೂ ತಲೆಗೆ ಹತ್ತುತ್ತಿಲ್ಲ, ಅಂಕಲ್” ಎಂದು ಹೇಳುತ್ತಾ ತನ್ನ ಸಮಸ್ಯೆಯನ್ನು ತೋಡಿಕೊಂಡ.

ಅನೇಕ ವಿಧ್ಯಾರ್ಥಿಗಳದ್ದೂ ಇದೇ ಸಮಸ್ಯೆ. ಪರೀಕ್ಷೆಗಳು ಹತ್ತಿರವಾಗುತ್ತಿದ್ದಂತೆ, ಮಾನಸಿಕ ಒತ್ತಡ ಹೆಚ್ಚಾಗುವುದು ಸಹಜ. ಇಂತಹ ಸನ್ನಿವೇಶದಲ್ಲಿ ಸುತ್ತಲೂ ಪುಸ್ತಕಗಳನ್ನು ಹರಡಿಕೊಂಡು, ಯಾವುದನ್ನು ಓದಬೇಕು, ಯಾವುದನ್ನು ಬಿಡಬೇಕೆನ್ನುವ ಗೊಂದಲಮಯ ವಾತಾವರಣದಲ್ಲಿ ಓದಲು ಅಸಾಧ್ಯ; ಏಕೆಂದರೆ, ಪರಿಣಾಮಕಾರಿ ಕಲಿಕೆಗೆ ಏಕಾಗ್ರತೆ ಇರಲೇಬೇಕು.

ನೀವು ವಿಧ್ಯಾರ್ಥಿಗಳಾಗಿದ್ದು, ಸತೀಶ್‍ನಂತೆ ಪರೀಕ್ಷೆಯ ಸಮಯದಲ್ಲಿ ತೀರ್ವ ಒತ್ತಡಕ್ಕೆ ಒಳಗಾಗಿ, ಏಕಾಗ್ರತೆಯಿಲ್ಲದೆ ಬಳಲುತ್ತಿದ್ದೀರಾ? ಕೋರ್ಸಿನ ಪ್ರಾಜೆಕ್ಟ್ ವರದಿಯನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಲು ಪ್ರಯಾಸ ಪಡುತ್ತೀರಾ? ಕಾಲೇಜಿನ ಉಪನ್ಯಾಸಗಳನ್ನು ಆಗಾಗ್ಗೆ ತಪ್ಪಿಸಿಕೊಂಡು, ಇನ್ನಿತರ ಕಾರ್ಯಗಳಿಗೆ ಸಮಯವನ್ನು ಬಿಡುವು ಮಾಡಿಕೊಳ್ಳುತ್ತಿದ್ದೀರಾ? ಇಂತಹ ಸಮಸ್ಯೆಗಳಿದ್ದಲ್ಲಿ, ನಿಮಗೆ ಸಮಯದ ನಿರ್ವಹಣೆಯ ಕಲೆಯನ್ನು ಅರಿತು, ಅದನ್ನು ಪರಿಪಾಲಿಸುವ ಅಗತ್ಯವಿದೆ.

ಥಾಮಸ್ ಎಡಿಸನ್‍ರವರ ಮಾತೊಂದಿದೆ, “ದೇಹಕ್ಕೆ ವ್ಯಾಯಾಮದ ಅಗತ್ಯ ಇರುವಂತೆ, ಮೆದುಳಿಗೆ ಅಧ್ಯಯನ ಅವಶ್ಯ”. ಆದರೆ, ಇರುವ ಸಮಯವನ್ನು ದೈನಂದಿನ ಮಾಮೂಲಿ ಕೆಲಸಗಳು, ಅಧ್ಯಯನ, ವ್ಯಾಯಾಮ, ಮನರಂಜನೆ, ವಿಶ್ರಾಂತಿಗಳೆಲ್ಲಕ್ಕೂ ಬಳಸಿಕೊಳ್ಳುವುದು ಸಾಧ್ಯವೇ ಎನ್ನುವುದು ಎಲ್ಲಾ ವಿಧ್ಯಾರ್ಥಿಗಳ ಮನಸ್ಸಿನಲ್ಲಿರುವ ಮುಖ್ಯ ಪ್ರಶ್ನೆ.

ಸಮಯದ ನಿರ್ವಹಣೆ, ಹೇಗೆ?

ಸಮಯದ ನಿರ್ವಹಣೆಯಿಂದ, ಶೈಕ್ಷಣಿಕ ಮತ್ತು ವೃತ್ತಿ ಬದುಕಿನಲ್ಲಿ ಯಶಸ್ವಿಯಾಗುವುದು ಸುಗಮವಾಗುತ್ತದೆ. ಹಾಗೂ ಜ್ಞಾನಾರ್ಜನೆಗೂ, ಆಟಪಾಠಗಳಿಗೂ, ಮನರಂಜನೆಗೂ ಮತ್ತು ವಿಶ್ರಾಮಕ್ಕೂ ಸಮಯವನ್ನು ಹೊಂದಿಸಿ, ನಿಮ್ಮ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ.

ಕಾಲೇಜು ಪರಿಸರದಲ್ಲಿ “ನನಗೆ ಟೈಮೇ ಇಲ್ಲ” ಎಂದು ಅಸೈನ್‍ಮೆಂಟ್‍ಗಳನ್ನೂ ಸಂಶೋಧನೆಯ ಕೆಲಸಗಳನ್ನೂ ಸಮಯದಲ್ಲಿ ನಿರ್ವಹಿಸಲಾಗದೆ, ಜೊತೆಗೆ ಉಪನ್ಯಾಸಗಳನ್ನು ತಪ್ಪಿಸಿಕೊಳ್ಳುತ್ತಾ, ಅರ್ಥವಿಲ್ಲದ ಸಬೂಬು ಹೇಳುತ್ತಲೇ ಬದುಕುವ ವಿದ್ಯಾರ್ಥಿಗಳನ್ನೂ ಮತ್ತು ಇರುವ ಸಮಯದಲ್ಲೇ ಎಲ್ಲಾ ಕೆಲಸಗಳಿಗೂ ಸಮಯವನ್ನು ಸರಿಹೊಂದಿಸಿಕೊಂಡು, ಮುನ್ನಡೆಯುವ ವಿದ್ಯಾರ್ಥಿಗಳನ್ನೂ ನಾವು ನೋಡುವುದು ಸಹಜ. ಇಂತಹ ವಿದ್ಯಾರ್ಥಿಗಳ ಸಮಯದ ನಿರ್ವಹಣೆಯ ಯಶಸ್ಸಿನ ಗುಟ್ಟೇನು?

ಪ್ರತಿ ಮುಂಜಾನೆ ಏಳುತ್ತಿದ್ದಂತೆ ಎಲ್ಲರಿಗೂ ಸಮಾನವಾಗಿ ಸಿಗುವ, 24 ಗಂಟೆಗಳ ಸಮಯವನ್ನು ಸಮರ್ಥವಾಗಿ ನಿರ್ವಹಿಸಲು ಚೈತನ್ಯಭರಿತ ಉತ್ಸಾಹವಿರಬೇಕು; ನಿರ್ದಿಷ್ಟವಾದ ಗುರಿಯನ್ನು ಸಾದಿಸಲು ಸಕಾರಾತ್ಮಕ ಮನೋಭಾವವಿರಬೇಕು; ಎಲ್ಲಕ್ಕಿಂತ ಹೆಚ್ಚಿನದಾಗಿ, ಸಮಯವನ್ನು ಸೂಕ್ತವಾಗಿ ಬಳಸಲು ಯೋಜನಾ ಶಕ್ತಿ ಮತ್ತು ಅದನ್ನು ಪರಿಪಾಲಿಸುವ ಶಿಸ್ತಿರಬೇಕು. ಸಮಯದ ಪರಿಪಾಲನೆಗೆ ಮತ್ತು ಶಿಸ್ತಿಗೆ ಅತ್ಯಂತ ಹೆಸರುವಾಸಿಯಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರು ಹೇಳಿರುವಂತೆ, “ಕಾಲವನ್ನು ನಾವು ಪಾಲಿಸಿದರೆ, ಅದು ನಮಗೆ ವಿಧೇಯವಾಗಿರುತ್ತದೆ”.

ಹೆಸರಾಂತ ಲೇಖಕ ಸ್ಟೀಫನ್ ಕೋವಿ ಸಮಯದ ನಿರ್ವಹಣೆಯ ತತ್ವ, ಸಿದ್ಧಾಂತಗಳ ಬಗ್ಗೆ ಕೂಲಂಕುಷವಾಗಿ ತಮ್ಮ ಪುಸ್ತಕಗಳಲ್ಲೂ, ಲೇಖನಗಳಲ್ಲೂ ಕೆಳಕಂಡಂತೆ ವಿವರಿಸಿದ್ದಾರೆ.

ಸಮಯವನ್ನು ನಿರ್ವಹಿಸುವ ಮೊದಲು, ನಿಮ್ಮ ದೈನಂದಿನ ದಿನಚರಿಯ ಎಲ್ಲಾ ಕೆಲಸಗಳ ಪಟ್ಟಿಯನ್ನು ತಯಾರಿಸಬೇಕು. ಇದರಲ್ಲಿ ಕಾಲೇಜು ತರಗತಿಗಳು, ತರಬೇತಿ, ವ್ಯಾಯಾಮ, ಹವ್ಯಾಸ, ಆಟ, ಅಭ್ಯಾಸ, ಪ್ರಯಾಣ, ಮನರಂಜನೆ, ಮನೆಯ ಮತ್ತು ವೈಯಕ್ತಿಕ ಕೆಲಸಗಳು ಸೇರಿದಂತೆ ಎಲ್ಲವೂ ಸೇರಿರಬೇಕು. ಆ ನಂತರ ಈ ಕೆಲಸಗಳ ಪ್ರಾಮುಖ್ಯತೆಯಂತೆ, ಅವುಗಳ ಆದ್ಯತೆಯನ್ನು-ತುರ್ತಾಗಿ ಮಾಡಬೇಕಾದ ಅಥವಾ ತಡವಾಗಿ ಮಾಡಬಹುದಾದ ಕೆಲಸಗಳಂತೆ ಗುರುತಿಸಿ ಚತುಷ್ಕೋನದ ನಾಲ್ಕು ಭಾಗಗಳಲ್ಲಿ ವಿಂಗಡಿಸಬಹುದು [ಈ ಲೇಖನದಲ್ಲಿರುವ ನಕ್ಷೆಯನ್ನು ಗಮನಿಸಿ].

ಉದಾಹರಣೆಗೆ, ಕಾಲೇಜಿನ ಉಪನ್ಯಾಸಗಳು, ಕೋಚಿಂಗ್ ಕ್ಲಾಸುಗಳು, ಸಂಶೋಧನೆ, ಟ್ಯೂಶನ್, ಪ್ರಾಜೆಕ್ಟ್ ಮಹತ್ವದ ಕೆಲಸಗಳು ಮತ್ತು ಸಮಯಕ್ಕೆ ಸರಿಯಾಗಿ ತುರ್ತಾಗಿ ಮಾಡುವಂತಹ ಕಾರ್ಯಗಳಾದ್ದರಿಂದ ಚತುಷ್ಕೋನದ ಮೊದಲ ಭಾಗದಲ್ಲಿ ಗುರುತಿಸಬೇಕು.

ಇದೇ ಕ್ರಮದಲ್ಲಿ, ಪಟ್ಟಿಯಲ್ಲಿನ ಎಲ್ಲಾ ಕೆಲಸಗಳನ್ನು ಪ್ರಾಮುಖ್ಯತೆ ಮತ್ತು ತುರ್ತಾಗಿ/ತಡವಾಗಿ ಮಾಡಬಹುದಾದ ಆಧಾರದಂತೆ ಚತುಷ್ಕೋನದ 1, 2, 3, ಮತ್ತು 4 ಭಾಗಗಳಲ್ಲಿ ವರ್ಗೀಕರಿಸಿ.

ಈಗ ಎಲ್ಲಾ ಚತುಷ್ಕೋನದ ಭಾಗಗಳಲ್ಲಿರುವ ಚಟುವಟಿಕೆಗಳನ್ನು ಗಮನಿಸಿ. ಚತುಷ್ಕೋನದ ನಾಲ್ಕನೇ ಭಾಗದಲ್ಲಿ ಪ್ರಮುಖವಲ್ಲದ ಅನೇಕ ಚಟುವಟಿಕೆಗಳು ತುಂಬಿದ್ದು, ನಿಮ್ಮ ಅತ್ಯಮೂಲ್ಯವಾದ ಸಮಯದ ಸಾಕಷ್ಟು ಪ್ರಮಾಣವನ್ನು ಕಬಳಿಸಿರುವುದು ಬೆಳಕಿಗೆ ಬರುತ್ತದೆ. ಉದಾಹರಣೆಗೆ, ದಿನದಲ್ಲಿ ಪದೇ ಪದೇ ಮೊಬೈಲ್‍ನಲ್ಲಿ ಇಮೇಲ್ ಮತ್ತು ಫೇಸ್‍ಬುಕ್ ಅಪ್‍ಡೇಟ್‍ಗಳನ್ನು ನೋಡುವ ಅವಶ್ಯಕತೆ ಖಂಡಿತ ಇರುವುದಿಲ್ಲ. ಹೀಗೆ ಸ್ನೇಹಿತರೊಡನೆ ಮತ್ತು ಮನೆಯವರೊಡನೆ ಹರಟೆ, ಶಾಪಿಂಗ್ ಮಾಲ್‍ಗಳಲ್ಲಿನ ಸುತ್ತಾಟ, ಇಂಟರ್ನೆಟ್ ಚಾಟ್, ಇಮೇಲ್, ಫೇಸ್‍ಬುಕ್, ಹಗಲುನಿದ್ದೆ ಇತ್ಯಾದಿ ಮಹತ್ವವಲ್ಲದ ಚಟುವಟಿಕೆಗಳಿದ್ದು, ಸಮಯದ ನಿರ್ವಹಣೆಗೆ ಅಗಾಧವಾದ ಅವಕಾಶಗಳಿರುವುದು ಇಲ್ಲಿಯೇ. ಆದ್ದರಿಂದ, ಸಮಯದ ನಿರ್ವಹಣೆಯ ಮೊದಲ ಆದ್ಯತೆಯೇ ಇಲ್ಲಿರಬೇಕು. ಭಾಗ 4ರಲ್ಲಿ, ಸಮಯದ ದುರ್ಬಳಕೆಯಾಗದಂತೆ ನಿಯಂತ್ರಿಸಿ, ಉಳಿಸಿದ ಸಮಯವನ್ನು ಉನ್ನತ ಶಿಕ್ಷಣ ಮತ್ತು ವೃತ್ತಿಜೀವನದ ಕುರಿತಂತೆ, ಚಿಂತನೆಗೂ, ಯೋಜನೆಗೂ [ಭಾಗ 2] ಮೀಸಲಿಡಿ.

ಕೆಲಸಗಳನ್ನು ಮುಂದೂಡುವ ಪ್ರವೃತ್ತಿ

ಮಾನವನ ಕಲ್ಪನಾ ಮತ್ತು ಯೋಚನಾ ಶಕ್ತಿ ಅಪಾರವಾದದ್ದು. ಹಾಗೆಯೇ, ಅನೇಕ ವಿಷಯಗಳ ಕುರಿತು ಚಿಂತಿಸುತ್ತಾ, ಯೋಜನೆಗಳನ್ನು ಮಾಡುತ್ತಿರುವುದು ಸಹಜ. ನಾಳೆ ಬೆಳಗ್ಗೆ ಬೇಗನೆ ಎದ್ದು ಪರೀಕ್ಷೆಯ ತಯಾರಿ ಮಾಡೋಣ ಎಂತಲೋ ಅಥವಾ ಕ್ಲಿಷ್ಟವಾದ ವಿಷಯದ ಬಗ್ಗೆ ಸುದೀರ್ಘವಾದ ಅಧ್ಯಯನ ಮಾಡೋಣ ಎನ್ನುವ ಹಲವಾರು ಮನಸ್ಸಿನ ಉದ್ದೇಶಗಳು, ಹೊಸವರ್ಷದ ಸಂಕಲ್ಪಗಳಂತೆ ಕಾರ್ಯಗತವಾಗದೇ ಉಳಿಯುತ್ತವೆ. ಅಸಾಧ್ಯವಾದ ಅನೇಕ ಯೋಜನೆಗಳನ್ನು ಹಾಕಿಕೊಳ್ಳುವುದು, ಕೆಲಸಗಳನ್ನು ಮುಂದೂಡುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ನಾವು ಮಾಡುವ ಯೋಜನೆಗಳು ನಿರ್ಧಿಷ್ಟವಾಗಿಯೂ, ಸಾಧಿಸುವಂತೆಯೂ ಇರಬೇಕು. ಖ್ಯಾತ ಲೇಖಕ ನೆಪೋಲಿಯನ್ ಹಿಲ್ ಹೇಳುವಂತೆ, ಕನಸುಗಳನ್ನು ಕಾಣುವ ಶೇಕಡಾ 98% ಜನರಿಗೆ, ಅವರ ಸಾಮಥ್ರ್ಯದಲ್ಲಿಯೇ ಪ್ರಬಲವಾದ ನಂಬಿಕೆಯಿರುವುದಿಲ್ಲ. ಹಾಗಾಗಿಯೇ ಅವರ ಕನಸುಗಳು ಸಾಕಾರವಾಗಳಿಸುವ ಅವಕಾಶ ಮತ್ತು ಸಾಮಥ್ರ್ಯವಿದ್ದರೂ, ಅವುಗಳನ್ನು ಕಾರ್ಯರೂಪಕ್ಕೆ ತರಲಾಗುವುದಿಲ್ಲ ಎನ್ನುತ್ತಾರೆ.

ಪರಿಣಾಮಕಾರಿ ಕಲಿಕೆ

ವಿದ್ಯೆಯೆಂದರೆ ಕೇವಲ ಓದು, ಬರಹ, ಪರೀಕ್ಷೆಗಳಷ್ಟೇ ಅಲ್ಲ; ವಿದ್ಯೆಯ ಮೂಲ ಉದ್ದೇಶ ಜ್ಞಾನಾರ್ಜನೆ. ಕಾಲೇಜಿನಲ್ಲಿ ಹೇಗೆ ಕಲಿಸುತ್ತಾರೆ ಎಂಬುದರ ಜೊತೆಗೆ ನೀವು ಹೇಗೆ ಕಲಿಯುತ್ತೀರ ಎಂಬುದು ಮುಖ್ಯ. ಅಧ್ಯಾಪಕರೊಂದಿಗೆ ದೈಹಿಕ ಭಾಷೆ, ನಿಲುವು, ಕಣ್ಣುಸಂಪರ್ಕ, ಮುಖಭಾವ ಮುಂತಾದ ಅಮೌಖಿಕ ಸಂವಹನದ ಸಂಜ್ಞೆಗಳಿಂದ ಪ್ರತಿಕ್ರಿಯಿಸುತ್ತಾ, ಉಪನ್ಯಾಸವನ್ನು ಕೇಳುವ ಅಭ್ಯಾಸವಿರಲಿ. ಏಕೆಂದರೆ, ಉಪನ್ಯಾಸವನ್ನು ಗಮನವಿಟ್ಟು ಕೇಳುವುದರಿಂದ, ನಿಮ್ಮ ಕಲಿಕೆ ಉತ್ತಮವಾಗಿ, ವಿಷಯದ ಸಂಪೂರ್ಣ ಅರಿವು ನಿಮ್ಮದಾಗುತ್ತದೆ. ಮುಖ್ಯವಾಗಿ, ಮನೆಯಲ್ಲಿ ಸ್ವತಃ ಓದಿ, ಅರ್ಥಮಾಡಿಕೊಳ್ಳುವ ಶ್ರಮ ಕಮ್ಮಿಯಾಗುವುದಲ್ಲದೆ, ಇದರಿಂದಾಗಬಹುದಾದ ಮಾನಸಿಕ ಒತ್ತಡವನ್ನೂ ತಪ್ಪಿಸಬಹುದು. ಆದ್ದರಿಂದ, ಕ್ಷುಲ್ಲಕ ಕಾರಣಗಳಿಂದ ತರಗತಿಗೆ ಗೈರುಹಾಜರಾಗದಿರಿ.

ಭೂಮಿಯಲ್ಲಿ ನಾವು ಜನಿಸಿದ ಕ್ಷಣದಿಂದಲೇ ಶುರುವಾಗುವ, ಸಮಯದ ಗೊಂಬೆಯ ಟಿಕ್‍ಟಿಕ್‍ನ ವೇಗದ ಜೀವನದಲ್ಲಿ, ವಿಳಂಬ ಪ್ರವೃತ್ತಿ ನಮಗೇ ಹಾನಿಕರ. ವಿದ್ಯಾರ್ಥಿ ಜೀವನ ಸುಲಭವಲ್ಲ; ಆದರೆ, ಕಠಿಣ ಪರಿಶ್ರಮವಿಲ್ಲದೆ ಇಂದಿನ ಸ್ಪರ್ದಾತ್ಮಕ ಜಗತ್ತಿನಲ್ಲಿ ಗೆಲ್ಲುವುದು ಸಾಧ್ಯವಿಲ್ಲ.

ಚೀನಿ ಗಾದೆಯೊಂದರಂತೆ, ಅಂಗುಲದಷ್ಟು ಸಮಯ, ಅಂಗುಲದಷ್ಟು ಬಂಗಾರವಿದ್ದಂತೆ; ಆದರೆ, ಆ ಅಂಗುಲದಷ್ಟು ಸಮಯವನ್ನು, ಅಂಗುಲದಷ್ಟು ಬಂಗಾರದಿಂದ ಕೊಳ್ಳಲು ಸಾಧ್ಯವಿಲ್ಲ. ನಾವು ನಿನ್ನೆಯದನ್ನು ಬದಲಿಸಲು ಸಾಧ್ಯವಿಲ್ಲ. ನಾವು ಏನು ಮಾಡುವುದಿದ್ದರೂ ಇಂದೇ ಮಾಡಬೇಕು. ಆದ್ದರಿಂದ, ಗುರಿಯ ಸಾಧನೆಯಲ್ಲಿ, ಸಮಯವೆನ್ನುವ ಅತ್ಯಂತ ಅಮೂಲ್ಯವಾದ ಸಂಪನ್ಮೂಲವನ್ನು ಬಂಡವಾಳದಂತೆ ಬಳಸಿದರೆ, ಅದರ ಪ್ರತಿಫಲವೂ ನಿಮ್ಮದಾಗುವುದರಲ್ಲಿ ಸಂಶಯವಿಲ್ಲ.

Download PDF document

                     

About author View all posts Author website

V Pradeep Kumar

Leave a Reply

Your email address will not be published. Required fields are marked *