ಇತಿಹಾಸದ ಕಾಲುದಾರಿಯಲ್ಲಿ…

ಜಗತ್ತಿನ ಅತ್ಯಂತ ಪುರಾತನ ನಾಗರಿಕತೆಯಲ್ಲೊಂದಾದ ಗ್ರೀಸ್ ದೇಶದ ರಾಜಧಾನಿ ಅಥೆನ್ಸ್‍ಗೆ ವ್ಯವಹಾರದ ನಿಮಿತ್ತ ಭೇಟಿ ಮಾಡುವ ಅವಕಾಶ ಒದಗಿ ಬಂದಿತ್ತು. ಜಗತ್ತಿನ ನಾಗರಿಕತೆ ಬೆಳೆದು ಬಂದ ಇತಿಹಾಸದ ಹಿನ್ನೆಲೆಯಲ್ಲಿ ಈ ದೇಶಕ್ಕೆ ಪ್ರವಾಸ ಮಾಡುವುದು ಅತ್ಯಂತ ಮಹತ್ವದ್ದು. ಅಧ್ಯಯನಕ್ಕೆ ಅಥವಾ ಕಲ್ಪನೆಯ ಓರೆನೋಟಕ್ಕೆ ಗ್ರೀಸ್, ಇಟಲಿ, ಈಜಿಪ್ಟ್ ದೇಶಗಳ ಭೇಟಿ ಅತ್ಯವಶ್ಯ. ಎಲ್ಲಕ್ಕಿಂತ ಹೆಚ್ಚಿನದಾಗಿ, ಗ್ರೀಕ್ ನಾಗರಿಕತೆ ಇಡೀ ಯೂರೋಪಿನ ಶೈಕ್ಷಣಿಕ, ವೈಜ್ಞಾನಿಕ, ಕಲೆ, ಸಂಗೀತ, ಸಂಸ್ಕೃತಿಗೆ ಅಡಿಪಾಯ. ಇದು ಪ್ರಜಾಪ್ರಭುತ್ವದ ತವರೂರು ಕೂಡ!


ಗ್ರೀಸ್, ಜಗತ್ತಿಗೆ ನೀಡಿರುವ ಕೊಡುಗೆ ಅಪಾರ. ‘ಆಡು ಮುಟ್ಟದ ಸೊಪ್ಪಿಲ್ಲ, ಗ್ರೀಕರು ಮುಟ್ಟದ ವಿಷಯವಿಲ್ಲ’, ಎನ್ನುವಂತೆ ಫಿಲಾಸಫಿ, ಫಿಸಿಕ್ಸ್, ಜಾಮಿಟ್ರಿ, ಅರ್ಥ್‍ಮೆಟಿಕ್ಸ್, ಜಿಯೋಗ್ರಫಿ, ಮ್ಯೂಸಿಕ್, ಕಾಮಿಡಿ, ಟ್ರಾಜಿಡಿ, ಡೆಮೋಕ್ರಸಿ, ರಿಪಬ್ಲಿಕ್, ಪಾಲಿಟಿಕ್ಸ್ ಹೀಗೆ ಅನೇಕ ವಿಷಯಗಳ ನಾಮಕರಣ, ಅಧ್ಯಯನ, ಸಂಶೋಧನೆಗಳಾಗಿದ್ದು ಮೊದಲು ಗ್ರೀಸ್‍ನಲ್ಲಿ. ಆದ್ದರಿಂದಲೇ, ಇದೊಂದು ಸಕಲ ಜ್ಞಾನಗಳ ಭಂಢಾರ!

ಒಂದು ಕಾಲದಲ್ಲಿ, ನಮ್ಮ ಹಿಮಾಲಾಯದ ತಪ್ಪಲಿನವರೆಗೂ ವಿಸ್ತರಿಸಿದ್ದ ಗ್ರೀಸ್ ಸಾಮ್ರಾಜ್ಯದ ಮಹಾನಾಯಕ ಅಲೆಕ್ಸಾಂಡರ್ ದಿ ಗ್ರೇಟ್, ತಯಾರಾಗಿದ್ದೇ ತತ್ವಜ್ಞಾನಿ ಮತ್ತು ವಿಜ್ಞಾನಿ, ಮತ್ತೊಬ್ಬ ಗ್ರೀಕ್, ಅರಿಸ್ಟಾಟಲ್‍ನ ಗರಡಿಯಲ್ಲಿ. ಅದೇ ರೀತಿ ಸಾಕ್ರಟೀಸ್, ಪ್ಲೇಟೊರಂತಹ ಮಹಾ ತತ್ವಜ್ಞಾನಿಗಳನ್ನೂ, ಆರ್ಕಿಮಿಡಿಸ್, ಪೈಥಾಗರಸ್‍ರಂತಹ ಗಣಿತ ಶಾಸ್ತ್ರಜ್ಞರನ್ನೂ, ಹಿಪ್ಪೊಕ್ರೇಟ್ಸ್‍ನಂತಹ ಮಹಾ ವೈದ್ಯನನ್ನೂ ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಜಗತ್ತಿಗೆ ನೀಡಿದ ಮಹಾನ್ ದೇಶ ಗ್ರೀಸ್.

ಅಥೆನ್ಸ್‍ಗೆ ಬೆಂಗಳೂರಿನಿಂದ ದುಬೈ ಮುಖಾಂತರ ಸುಮಾರು ಹತ್ತು ಗಂಟೆಗಳ ಪ್ರಯಾಣ. ಅಥೆನ್ಸ್ ವಿಮಾನ ನಿಲ್ದಾಣ ವಿಶೇಷವೆನಿಸಲಿಲ್ಲ. ನಾವು ಭಾಗವಹಿಸಬೇಕಿದ್ದ ಸಮಾವೇಶ ಹಾಗೂ ವಸತಿ ಸಮುದ್ರ ತೀರದ ಪ್ರತಿಷ್ಠಿತ ವೆಸ್ಟಿನ್ ರೆರ್ಸಾರ್ಟ್‍ನಲ್ಲಿ ಕಾದಿರಿಸಲಾಗಿತ್ತು. ರೆಸಾರ್ಟಿನ ಪ್ರತಿನಿಧಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಂತೆ, ಮೊದಲ ನೋಟದಲ್ಲಿ ಆಥೆನ್ಸ್ ನಮ್ಮ ಮಂಗಳೂರಿನಂತಿದೆಯೆನಿಸಿತು; ಗುಡ್ಡಗಾಡುಗಳ ತಿರುವು ಮುರುವುಗಳನ್ನು ದಾಟಿ, ಬಯಲು ಪ್ರದೇಶವನ್ನು ತಲುಪಿದಾಗ ಕಂಡ ಕಡುನೀಲಿ ವರ್ಣದ ಏಗಿಯನ್ ಸಮುದ್ರದ ದೃಶ್ಯ ಅಮೋಘವಾಗಿತ್ತು. ಹೋಟೆಲ್ ಪ್ರತಿನಿಧಿ ಬೀಚಿನ ಪಕ್ಕದಲ್ಲಿ ಕಾಣುತ್ತಿದ್ದ ರೆಸಾರ್ಟ್‍ನ್ನು ತೋರಿಸಿ, ‘ಅದೇ ವೆಸ್ಟಿನ್’ ಎಂದಾಗ ನಮಗೆ ಕಾತರದ ಸಡಗರ. ಗ್ರೀಸ್ ಪ್ರವಾಸಕ್ಕೆ ಸಹೋದ್ಯೋಗಿ ಅಜಯ್ ಜೊತೆಯಿದ್ದರು.

ಅಥೆನ್ಸ್‍ನಲ್ಲಿ ನೋಡಲೇಬೇಕಾದ ಸ್ಥಳಗಳು

ಅಥೆನ್ಸಿನ ವಿಶೇಷತೆಯೆಂದರೆ, ಮುಖ್ಯ ಪ್ರೇಕ್ಷಣೀಯ ಸ್ಥಳಗಳು ನಗರದ ಮಧ್ಯ ಭಾಗದಲ್ಲಿಯೇ ಇದೆ. ಹಾಗಾಗಿ, ಸಾವಿರಾರು ವರ್ಷಗಳ ಪುರಾತನ ನಾಗರಿಕತೆ ಮತ್ತು ನೂತನ ಅಥೆನ್ಸಿನ ಜನಜೀವನವನ್ನು, ಬಹುತೇಕ ಕಾಲ್ನಡಿಗೆಯಲ್ಲಿಯೇ ಅನ್ವೇಷಿಸಬಹುದು. ಇಲ್ಲಿನ ಹವಾಗುಣ ಇನ್ನಿತರ ಯೂರೋಪ್ ನಗರಗಳಂತಲ್ಲ; ವಿಪರೀತ ಚಳಿ ಅಥವಾ ಸೆಕೆಯಿಲ್ಲದೆ, ಮಿತವಾಗಿರುವ ತಾಪಮಾನ, ನಿಜಕ್ಕೂ ಆಪ್ಯಾಯಮಾನ.

ಆಕ್ರೊಪೊಲಿಸ್

ನಗರದ ಕೇಂದ್ರದಲ್ಲಿ, ಚಾರಿತ್ರಿಕ ಮತ್ತು ಪುರಾತನ ಅವಶೇಷಗಳಿರುವ ಎತ್ತರದ ಪ್ರದೇಶವೇ ಆಕ್ರೊಪೊಲಿಸ್ [ಗ್ರೀಕ್ ಭಾಷೆಯಲ್ಲಿ-ಎತ್ತರದಲ್ಲಿರುವ ಪಟ್ಟಣ]. ಅಥೆನ್ಸ್ ಹಾಗೂ ಗ್ರೀಸ್ ನಾಗರಿಕತೆಯ ಪರಿಚಯದ ಆರಂಭಕ್ಕೆ ಆಕ್ರೋಪೊಲಿಸ್ ಉಚಿತವಷ್ಟೇ ಅಲ್ಲ, ಅನಿವಾರ್ಯವೂ ಹೌದು. ಹಾಗಾಗಿ, ನಾವು ಸಿಂಟಾಗ್ಮ ಮೆಟ್ರೊ ನಿಲ್ದಾಣದಲ್ಲಿಳಿದು, ಆಕ್ರೊಪೊಲಿಸ್‍ನತ್ತ ನಡೆಯಲಾರಂಭಿಸಿದೆವು. ಎಲ್ಲೆಡೆಯಿಂದ ಕಾಣುತ್ತಿದ್ದ ಆಕ್ರೊಪೊಲಿಸ್‍ನ ವಿವಿಧ ಕಟ್ಟಡಗಳ ಅಸಾಧಾರಣ ಪ್ರಭಾವವನ್ನೂ, ನಗರದ ಸ್ವರೂಪವನ್ನೂ, ಅವಲೋಕಿಸುತ್ತಾ, ಅಕ್ರೋಪೊಲಿಸ್ ಶಿಖರದ ದಕ್ಷಿಣದ ಅಡಿಯನ್ನು ತಲುಪಿದೆವು. ಅಲ್ಲಿಂದ ವಿಶಾಲವಾದ ಕಾಲುದಾರಿಯಲ್ಲಿ ಮತ್ತೆ ಮೂವತ್ತು ನಿಮಿಷ ನಡೆದರೆ, ಆಕ್ರೊಪೊಲಿಸ್ ಶಿಖರದ ತುದಿಯಲ್ಲಿ ಸಿಗುವುದೇ ಪಾರ್ಥಿನಾನ್.

ಪಾರ್ಥಿನಾನ್

ಮಹತ್ವಾಕಾಂಕ್ಷೆಯಿಂದ ಕಟ್ಟಿದ ಗ್ರೀಸ್ ಸಾಮ್ರಾಜ್ಯದ ಅಸ್ತಿತ್ವದ ಕುರುಹಾಗಿ ಉಳಿದಿರುವ ಪಾರ್ಥಿನಾನ್, ಗ್ರೀಕ್ ದೇವತೆ ಅಥಿನಗೆ ಸಮರ್ಪಿಸಿರುವ ದೇಗುಲ. ಗ್ರೀಸ್ ಸಾಮ್ರಾಜ್ಯದ ಸುವರ್ಣಯುಗದ ಪ್ರತೀಕವಾಗಿ ಪೆರಿಕಲ್ಸ್ ಕಟ್ಟಿಸಿದ ಪಾರ್ಥಿನಾನನ್ನು ರಚಿಸಿದ ಶಿಲ್ಪಿ ಫಿಡಾಸ್. ಪಾರ್ಥಿನಾನ್ ದೇಗುಲದ ಅಡಿಯಲ್ಲಿ ನಿಂತು, ಈ ಬೃಹತ್ ಕಟ್ಟಡದ ಮೇಲೆ ಕಣ್ಣಾಡಿಸಿದಾಗ ಡೋರಿಕ್ ವಾಸ್ತುಶಿಲ್ಪದ ಉತ್ಕೃಷ್ಟತೆಯ ಅರಿವಾಯಿತು. 34 ಅಡಿ ಎತ್ತರದ 69 ಭಾರಿ ಸ್ಥಂಭಗಳ ಮೇಲಿನ ಮಾಳಿಗೆಯ ಕಟ್ಟಡ ಸುಮಾರು ಹದಿನಾರು ವರ್ಷಗಳು ನಿರ್ಮಾಣದಲ್ಲಿತ್ತಂತೆ. ಕ್ರಿಸ್ತಪೂರ್ವ 432ರಲ್ಲಿ ಪೂರ್ಣಗೊಂಡ ಪಾರ್ಥಿನಾನ್‍ನ ಕಲಾತ್ಮಕ ವಾಸ್ತುಬಂಧಕ್ಕೆ ಉಪಯೋಗಿಸಿರುವ ಶ್ವೇತವರ್ಣದ ಮಾರ್ಬಲ್ 22000 ಟನ್‍ಗಳಷ್ಟು!

ಪಾರ್ಥಿನಾನ್ ಅಂದರೆ, ಅಥಿನ ಕನ್ನಿಕೆಗೆ ಮೀಸಲಾದ ದೇಗುಲ; ನಮ್ಮಲ್ಲಿನ ಕನ್ಯಾಕುಮಾರಿ ದೇವಾಲಯದಂತೆ. ಹಾಗೂ ಕನ್ಯಾಕುಮಾರಿ ಪಟ್ಟಣದಂತೆಯೇ, ಅಥೆನ್ಸ್‍ನ ಮೂರೂ ದಿಕ್ಕಿನಲ್ಲಿ ಸಾಗರ ಆವರಿಸಿದೆ. ಮೂಲತಃ ಬಂಗಾರದ ಪಟ್ಟಿಗಳಿಂದ ನಿರ್ಮಿಸಿದ ಈ ದೇವತೆಯ ವಿಗ್ರಹವನ್ನು, ನೂರೈವತ್ತು ವರ್ಷಗಳ ನಂತರ ಸೈನಿಕರ ವೇತನ, ಭತ್ಯಕ್ಕಾಗಿ ಬಂಗಾರವನ್ನು ಮಾರಿ, ಕಂಚಿನಿಂದ ಮಾರ್ಪಾಡು ಮಾಡಬೇಕಾದ ದುಸ್ಥಿತಿ ಬಂತೆಂದು ಹೇಳಲಾಗುತ್ತದೆ. ಆದರೆ, 1500 ವರ್ಷಗಳ ಹಿಂದೆ ರೋಮನ್ನರ ದಾಳಿಗೆ ತುತ್ತಾಗಿದ್ದ ಪಾರ್ಥಿನಾನ್‍ನಲ್ಲಿ ಇಂದು ಕಂಚಿನ ಪ್ರತಿಮೆಯೂ ಸಹ ಇಲ್ಲ.

ಪರ್ಶಿಯ, ರೋಮ್, ಈಜಿಪ್ಟ್ ದೇಶಗಳ ನಿರಂತರ ಆಕ್ರಮಣಗಳಿಂದ ಅಥೆನ್ಸ್ ಧ್ವಂಸವಾಗಿದ್ದು ಅನೇಕ ಬಾರಿ. ಆದರೂ, ಆಳಿದುಳಿದಿರುವ ಪಾರ್ಥಿನಾನ್‍ನ ಅವಶೇಷವೇ ಅತ್ಯಂತ ಪರಿಣಾಮಕಾರಿ ಮತ್ತು 2445 ವರ್ಷಗಳಷ್ಟು ಹಿಂದೆಯೇ ಇಂತಹ ದೇಗುಲಗಳ ನಿರ್ಮಾಣವಾಗುತ್ತಿತ್ತೇ ಎಂಬ ಆಲೋಚನೆ ನಿಜಕ್ಕೂ ಬೆರಗಾಗಿಸುವಂತದ್ದು. ನವಮಾನವನ ಕಲ್ಪನೆಯ ಪರಿಮಿತಿಯನ್ನು ಮೀರುವ ಅಥೆನ ದೇವತೆಯ ಪಾರ್ಥಿನಾನ್ ದೇಗುಲದ ಪ್ರತಿರೂಪವನ್ನು ಈಗ ಅಮೇರಿಕದ ನಾಶ್‍ವಿಲ್ಲೆಯನ್ನು ನಿರ್ಮಿಸಲಾಗಿದೆ.

ಆಂಫಿ ಥಿಯೇಟರ್

ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾದ ಆಕ್ರೊಪೊಲಿಸ್‍ನ ಕಟ್ಟಡಗಳು ನಿಜಕ್ಕೂ ವಿಸ್ಮಯಕಾರಿ. ಗ್ರೀಸ್ ನಾಗರಿಕತೆಯ ಭವ್ಯತೆ ಮತ್ತು ಪ್ರಗತಿಪರ ಸಮಾಜಕ್ಕೊಂದು ನಿದರ್ಶನದಂತಿರುವುದು ಇಲ್ಲಿನ ಆಂಫಿ ಥಿಯೇಟರ್. ಸುಮಾರು 1850 ವರ್ಷಗಳ ಹಿಂದೆ, ಅಥೆನ್ಸಿನ ಶ್ರೀಮಂತ ಮನೆತನದ ಹೆರೊಡಿಸ್ ಆಟ್ಟಿಕಸ್ ತನ್ನ ಪತ್ನಿ ರೆಜಿಲಳ ನೆನಪಿನಲ್ಲಿ ಕಟ್ಟಿಸಿದ ಬಯಲು ರಂಗಮಂದಿರವೇ, ಓಡಿಯನ್ ಅಫ್ ಹೆರೊಡಿಸ್ ಅಟ್ಟಿಕಸ್.

ವೇದಿಕೆಯ ಹಿಂಬಾಗದ ಮೂರು ಅಂತಸ್ತಿನ ಕಟ್ಟಡ ಈಗ ಶಿಥಿಲವಾಗಿದೆ. ಆದರೂ ರಂಗಮಂದಿರದ ಉಪಯೋಗಕ್ಕೆ ಅಡ್ಡಿಯಿಲ್ಲ. ವಿಶ್ವ-ಸುಂದರಿ ಸ್ಪರ್ದೆ, ಗ್ರೀಕ್ ಕಿಬೋರ್ಡ್ ಮಾಂತ್ರಿಕ ಯಾನಿ, ಸರ್ ಎಲ್ಟನ್ ಜಾನ್‍ರಂತಹ ಕಲಾವಿದರ ಪ್ರತಿಷ್ಟಿತ ಕಾರ್ಯಕ್ರಮಗಳಿಗೆ ಇದೇ ಸೂಕ್ತವಾದ ವೇದಿಕೆ.

ಮ್ಯೂಸಿಯಮ್‍ಗಳ ನಗರ

ಯೂರೋಪಿನ ಪುರಾತನ ನಾಗರಿಕತೆಯ ಪ್ರತೀಕವೆಂಬಂತೆ, ಎಲ್ಲಾ ನಗರಗಳಲ್ಲೂ ಹಲವಾರು ಮ್ಯೂಸಿಯಮ್‍ಗಳಿರುವುದು ಸಹಜ. ಅದರಲ್ಲೂ ಸುಮಾರು 5000 ವರ್ಷಗಳ ಇತಿಹಾಸವಿರುವ ಅಥೆನ್ಸ್‍ನಲ್ಲಿ ಹೆಚ್ಚೇನಿಲ್ಲ; ಕೇವಲ 44 ಮ್ಯೂಸಿಯಮ್‍ಗಳಿವೆ! ಇವೆಲ್ಲವನ್ನೂ ನೋಡಲು ಸಾಧ್ಯವಿಲ್ಲವಾದ್ದರಿಂದ, ನೂತನವಾಗಿ ನಿರ್ಮಿಸಿರುವ ಆಕ್ರೊಪೊಲಿಸ್ ಮ್ಯೂಸಿಯಮ್ ಹಾಗೂ ಪ್ಲಾಕ ಹಾದಿಯಲ್ಲಿನ ಅಗೋರ ಮ್ಯೂಸಿಯಮ್‍ಗಳನ್ನು ನೋಡಬಹುದು.

ಪ್ಲಾಕ

ಆಕ್ರೊಪೊಲಿಸ್‍ನಿಂದ ಕೆಳಗಿಳಿಯಲು ಹತ್ತೇ ನಿಮಿಷ. ಇಳಿಯುತ್ತಿದ್ದಂತೆ, ಅಥೆನ್ಸಿನ ಓಲ್ಡ್ ಟೌನಿನ ವಿಶಿಷ್ಟ ಅನುಭವ. ಬೆಂಗಳೂರಿನ ಬಳೇಪೇಟೆ, ಚಿಕ್ಕಪೇಟೆಯಂತಹ ಸಂದಿಗೊಂದಿಗಳ ಅಂಗಡಿಗಳಲ್ಲಿನ ನೆನಪಿನ ಕಾಣಿಕೆಯ ವಸ್ತುಗಳು, ಸಾಧನಗಳು, ಕುಶಲಕರ್ಮಿ ಸಾಮಗ್ರಿಗಳು, ಬಟ್ಟೆಬರೆಗಳು ಗಮನ ಸೆಳೆಯುತ್ತವೆ. ಹಾಂ! ಇಲ್ಲಿನ ವಸ್ತುಗಳನ್ನು ಖರೀದಿಸಲು ಬೆಲೆ ಹೆಚ್ಚಿರಬಹುದೆಂಬ ಭೀತಿ ಮಾತ್ರ ಬೇಡ. ಏಕೆಂದರೆ, ನಮ್ಮೂರಿನಂತೆ ಇಲ್ಲಿಯೂ ಲೀಲಾಜಾಲವಾಗಿ ಚೌಕಾಸಿ ಮಾಡಬಹುದು.

ಪ್ಲಾಕ ರಸ್ತೆಬದಿಯ ಪುಟ್ಟ ಕಾಫಿ ಕೆ¥sóÉಗಳು, ಬಾರ್‍ಗಳಲ್ಲಿ ಲೋಕಾಭಿರಾಮವಾಗಿ ಮಾತುಕತೆಯಲ್ಲಿ ತೊಡಗಿರುವ ಗ್ರಾಹಕರು, ಅಲ್ಲಿನ ಅನೌಪಚಾರಿಕತೆಯ ವಾತಾವರಣವನ್ನು ನೋಡಿದಾಗ, ನಾವೂ ಕೂಡೋಣವೇ ಎನ್ನಿಸುವುದು ಸಹಜ. ಇಲ್ಲಿ ಅಡ್ಡಾಡುವಾಗ ದಾರಿ ತಪ್ಪಿದರೆ ಆತಂಕ ಪಡುವಷ್ಟಿಲ್ಲ; ಎಲ್ಲೆಡೆಯಿಂದಲೂ ಕಾಣುವ ಆಕ್ರೊಪೊಲಿಸ್‍ನ ಉತ್ತರಕ್ಕಿರುವ ಪಾರ್ಲಿಮೆಂಟ್‍ನತ್ತ ನಡೆದರೆ ಮೆಟ್ರೊ, ಬಸ್ ನಿಲ್ದಾಣಗಳು ಸಿಗುತ್ತವೆ.

ಒಲಂಪಿಕ್ ಸ್ಟೇಡಿಯಮ್

ವಿಶ್ವದಾದ್ಯಂತ ನಡೆಯುವ ಕ್ರೀಡಾಕೂಟಗಳಲ್ಲಿ ಒಲಂಪಿಕ್ಸ್ ಅಗ್ರಶ್ರೇಣಿಯದೆನ್ನುವುದು ನಿರ್ವಿವಾದ. ಆದರೆ, ಒಲಂಪಿಕ್ಸ್‍ಗೆ 2789 ವರ್ಷಗಳ ಇತಿಹಾಸವಿದೆಯೆಂದು ಎಲ್ಲರಿಗೂ ಅರಿವಿರಲಾರದು. ಕ್ರಿಸ್ತಪೂರ್ವ 776ರಲ್ಲಿ ಹೆರಾಕ್ಲಸ್ ತನ್ನ ತಂದೆ ಜಿûೀಯಸ್‍ರ ನೆನಪಿನಲ್ಲಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಒಲಂಪಿಕ್ ಕೀಡಾಕೂಟವನ್ನು ಆಯೋಜಿಸಿದ ಎಂದು ಹೇಳಲಾಗುತ್ತದೆ. ಹೆರಾಕ್ಲಸ್ ನಿರ್ಮಿಸಿದ ಕ್ರೀಡಾಂಗಣವನ್ನು ‘ಸ್ಟೇಡಿಯನ್’ ಎಂದೂ ಹೆಸರಿಸಿಡಲಾಯಿತು.

ಪ್ರಾರಂಭದ ವರ್ಷಗಳಲ್ಲಿ ಅಥ್ಲೆಟಿಕ್ಸ್‍ಗೆ ಹೆಚ್ಚಿನ ಪ್ರಾಮುಖ್ಯತೆಯಿದ್ದು, ಕಾಲಕ್ರಮೇಣ ಒಲಂಪಿಕ್ ಸ್ಪರ್ದೆಯ ರೂಪರೇಷೆಗಳು ವಿಸ್ತಾರವಾಯಿತು. ಈ ಕಾಲಘಟ್ಟದಲ್ಲಿ ನಡೆಯುತ್ತಿರುವ ಆಧುನಿಕ ಒಲಂಪಿಕ್ಸ್‍ನ ಪಿತಾಮಹ, ಫ್ರಾನ್ಸಿನಲ್ಲಿ ಜನಿಸಿದ ಪಿಯರೆ ಕ್ಯುಬರ್ತಿನ್. ಸ್ಥಗಿತವಾಗಿದ್ದ ಒಲಂಪಿಕ್ಸ್‍ನ್ನು, ಅತ್ಯಂತ ಶ್ರಮವಹಿಸಿ 1896ರಲ್ಲಿ ಅಥೆನ್ಸ್‍ನಲ್ಲಿ ಮತ್ತೆ ಶುರು ಮಾಡಿಸಿದಾಗ ಕ್ಯುಬರ್ತಿನ್ ರಚಿಸಿದ ಧ್ಯೇಯ,’ಗೆಲ್ಲುವುದಷ್ಟೇ ಅಲ್ಲ; ಹೋರಾಡುವುದೂ ಕೂಡ ಬಾಳಿನಲ್ಲಿ ಅತಿ ಮುಖ್ಯವಾಗಿದೆ. ಎದುರಾಳಿಗೆ ಸಮರ್ಥ ರೀತಿಯಲ್ಲಿ ಸ್ಪರ್ದೆ ನೀಡುವುದೂ ಅತ್ಯಂತ ಪ್ರಮುಖವಾದುದು &ಡಿsquo, ಸಾರ್ವಕಾಲಿಕ ಸತ್ಯ. ಇಂತಹ ಅಭೂತಪೂರ್ವ ಇತಿಹಾಸವಿರುವ ಒಲಂಪಿಕ್ಸ್ ಸ್ಟೇಡಿಯಮ್ಮನ್ನು ನೋಡದೆ ಬರಲಾದೀತೆ?

ನಗರದ ಕೇಂದ್ರ ಭಾಗದಲ್ಲೇ ಇರುವ ಈ ಸ್ಟೇಡಿಯಮ್ಮನ್ನು ಕ್ರಿಸ್ತಪೂರ್ವ 329 ಮತ್ತು 2004ರ ಒಲಂಪಿಕ್ಸ್ ಸಂದರ್ಭವೂ ಸೇರಿದಂತೆ, ನಾಲ್ಕು ಬಾರಿ ಜೀರ್ಣೋದ್ಧಾರ ಮಾಡಲಾಗಿದೆ. ಮೊದಲಿದ್ದ ಮರದ ಸೋಪಾನಗಳನ್ನು ಮಾರ್ಬಲ್‍ಗೆ ಬದಲಾಗಿಸಲಾಗಿದ್ದು, ಈಗ 45000 ಪ್ರೇಕ್ಷಕರು ಆಸೀನರಾಗಬಹುದು. ನಾಶ್‍ವಿಲ್ಲೆಯಲ್ಲಿರುವ ಪಾರ್ಥಿನಾನ್‍ನಂತೆ, ಈ ಸ್ಟೇಡಿಯಮ್‍ನ ಪ್ರತಿರೂಪ ಅಮೇರಿಕದ ಹಾವರ್ಡ್‍ನಲ್ಲಿ ನಿರ್ಮಿಸಲಾಗಿದೆ.

ಸಾವಿರಾರು ವರ್ಷಗಳ ನಾಗರಿಕತೆಯ ವಿಸ್ತಾರವಾದ ಪರಿಚಯಕ್ಕೆ ಇಲ್ಲಿರುವ ಚಾರಿತ್ರಿಕ ಸ್ಥಳಗಳು ಹಲವಾರು. ಆದರೆ, ಸಮಯದ ಒತ್ತಡವಿರುವ ಸಾಮಾನ್ಯ ಪ್ರವಾಸಿಗಳಿಗೆ ಸ್ಥೂಲವಾದ ಅವಲೋಕನ ಮಾತ್ರ ಸಾಧ್ಯ. ಈ ದೃಷ್ಟಿಯಿಂದ, ಇಲ್ಲಿ ಭೇಟಿ ಮಾಡಬಹುದಾದ ಇನ್ನಿತರ ಸ್ಥಳಗಳೆಂದರೆ, ಒಲಂಪಿಯನ್ ಜಿûೀಯಸ್ ಟೆಂಪಲ್, ಸಿಂಟಾಗ್ಮಸ್ಕೇರ್, ಪಾರ್ಲಿಮೆಂಟ್, ರಾಯಲ್ ಪಾಲೇಸ್, ಅನಾನಿಮಸ್ ಸೋಲ್ಜರ್ಸ್ ಮೆಮೋರಿಯಲ್, eóÁಪ್ಪಿಯನ್ ಹಾಲ್. ಇವೆಲ್ಲವನ್ನು ಎರಡು ದಿನಗಳಲ್ಲಿ ನೋಡಲು ಸಾಧ್ಯ.

ಗ್ರೀಸ್‍ನ ಇನ್ನೊಂದು ಪ್ರಮುಖ ಪ್ರವಾಸಿ ತಾಣ ಸಾಂಟೊರಿನಿ. 1500 ವರ್ಷಗಳ ಹಿಂದೆ, ಜ್ವಾಲಾಮುಖಿಗೆ ತುತ್ತಾದ ಸಮುದ್ರತೀರದ ಈ ಪಟ್ಟಣ ಜಗತ್ತಿನ ಅತ್ಯಂತ ವೈಶಿಷ್ಟಪೂರ್ಣ ರೊಮಾಂಟಿಕ್ ತಾಣಗಳಲ್ಲೊಂದಾಗಿದೆ. ಆದ್ದರಿಂದಲೇ, ಸಾಂಟೊರಿನಿಯಲ್ಲಿ ಹಾಲಿವುಡ್ ಮತ್ತು ಬಾಲಿವುಡ್ ಚಿತ್ರೀಕರಣ ಸರ್ವೇಸಾಮಾನ್ಯ. ಅಥೆನ್ಸಿಂದ 280 ಕಿ.ಮಿ. ದೂರದಲ್ಲಿರುವ ಸಾಂಟೊರಿನಿಗೆ ಕಿರುನೌಕೆ, ಬಸ್ ಅಥವಾ ವಿಮಾನದಲ್ಲೂ ಹೋಗಬಹುದು.

ಅಥೆನ್ಸ್ ಪ್ರವಾಸಕ್ಕಿದು ಸುಸಮಯ

ಪ್ರವಾಸದ ಕೊನೆಯ ದಿನ ವೆಸ್ಟಿನ್‍ನ ಸಮುದ್ರ ತೀರದಲ್ಲಿ ಸೂರ್ಯಾಸ್ತದ ಸೊಬಗನ್ನು ಸವಿಯುತ್ತಿದ್ದಾಗ, ಗ್ರೀಸ್‍ನ ಇಂದಿನ ಆರ್ಥಿಕ ಹಿನ್ನಡೆ ನೆನಪಿಗೆ ಬಂತು. ಇಡೀ ಯೂರೋಪ್ ಒಕ್ಕೂಟ ಇಂದು ಆರ್ಥಿಕ ಹಿನ್ನಡೆಯಲ್ಲಿದ್ದು, ಇದಕ್ಕೆ ಗ್ರೀಸ್ ಮೂಲ ಕಾರಣವೆನ್ನುವುದು ವಿಷಾದಕರ. ಆದರೂ, ಅತ್ಯಂತ ಪುರಾತನ ನಾಗರಿಕತೆಗಳಲ್ಲೊಂದಾದ ಗ್ರೀಸ್‍ಗೆ ಇಂತಹ ಹಿನ್ನಡೆಗಳು, ಆಘಾತಗಳು, ಆತಂಕಗಳು ಹೊಸದೇನಲ್ಲ. ತನ್ನ ದೀರ್ಘ ಇತಿಹಾಸದಲ್ಲಿ ಸತತವಾಗಿ ಪರಕೀಯರ ಆಕ್ರಮಣಕ್ಕೊಳಗಾಗಿಯೂ ಸಹ, ತನ್ನ ನಾಗರಿಕತೆಯನ್ನು ಪುನರುಜ್ಜೀವನಗೊಳಿಸುತ್ತಾ ಬಂದಿರುವ ಗ್ರೀಸ್ ಮತ್ತೆ ಪ್ರಗತಿಯತ್ತ ಸಾಗಬಲ್ಲದು.

ಪ್ರವಾಸೋಧ್ಯಮ ಇಲ್ಲಿ ಪ್ರಮುಖವಾಗಿದ್ದು, ವಿಮಾನ, ಹೋಟೆಲ್ ದರಗಳಲ್ಲಿ ಈಗ ಕಡಿತವಾಗಿದೆ. ಅಥೆನ್ಸ್ ಪ್ರವಾಸ ಕೇವಲ ವ್ಯವಹಾರ ಅಥವಾ ಮನೋಲ್ಲಾಸಕ್ಕೆ ಮಾತ್ರ ಸೀಮಿತವಾಗದು; ಸಾವಿರಾರು ವರ್ಷಗಳಿಂದ ಮಾನವ ನಡೆದು ಬಂದ ಹಾದಿಯ ಜೀವಂತ ಚಿತ್ರಣವಿಲ್ಲಿದೆ. ನಮ್ಮ ಕಲ್ಪನಾ ಶಕ್ತಿಗೆ ಸವಾಲೆನಿಸಿ, ಅಚ್ಚರಿಯಿಂದ ಬೆರಗಾಗಿಸುವ ಈ ವಿಸ್ಮಯಕಾರಿ ಜ್ಞಾನಭಂಢಾರವನ್ನು ಹತ್ತಿರದಿಂದ ನೋಡಿ, ತಿಳಿದು, ಅನುಭವಿಸಲು ಪ್ರವಾಸಿಗಳಿಗೆ ಇದೊಂದು ಸುಸಮಯ.

Download PDF document

About author View all posts Author website

V Pradeep Kumar

Leave a Reply

Your email address will not be published. Required fields are marked *