ಆಪ್ಟಿಟ್ಯೂಡ್ ಟೆಸ್ಟ್: ಯಶಸ್ಸಿಗೆ ಮೊದಲ ಹೆಜ್ಜೆ

ಎಲ್ಲ ವೃತ್ತಿಪರ ಕಾಲೇಜುಗಳಲ್ಲಿ 2012ನೇ ಸಾಲಿನ ಕ್ಯಾಂಪಸ್ ಸೆಲೆಕ್ಷನ್ ಸಡಗರ ಶುರುವಾಗುತ್ತಿದೆ. ಸಾಮಾನ್ಯವಾಗಿ ಕಂಪನಿಗಳು, ಆಪ್ಟಿಟ್ಯೂಡ್ ಟೆಸ್ಟ್ ನಂತರ, ಗುಂಪು ಚರ್ಚೆ ಮತ್ತು ಸಂದರ್ಶನಗಳನ್ನು ನಡೆಸಿ, ವಿಧ್ಯಾರ್ಥಿಗಳ ಕ್ಯಾಂಪಸ್ ಸೆಲೆಕ್ಷನ್ ಮಾಡುತ್ತಾರೆ.

ಮಹತ್ವದ ಈ ವಿಷಯವನ್ನು ಚರ್ಚಿಸುತ್ತಿರುವಾಗ ಕಳೆದ ಸಾಲಿನ ಕ್ಯಾಂಪಸ್ ಸೆಲೆಕ್ಷನ್‍ನ ಉದಾಹರಣೆಯೊಂದನ್ನು ಉಲ್ಲೇಖಿಸುವುದು ಸೂಕ್ತವೆನಿಸುತ್ತದೆ.

ರಾಜೇಶ್ ಎಂಜಿನಿಯರಿಂಗ್ ನಂತರ, ಬೆಂಗಳೂರಿನ ಪ್ರಖ್ಯಾತ ಕಾಲೇಜೊಂದರಲ್ಲಿ ಎಂ.ಬಿ.ಎ. ಮಾಡುತ್ತಿದ್ದ; ಮೊದಲಿನಿಂದಲೂ, ಯಾವುದಾದರೂ ಪ್ರಖ್ಯಾತ ಐ.ಟಿ. ಕಂಪನಿ ಸೇರಿ, ವಿದೇಶದಲ್ಲಿ ವೃತ್ತಿಯನ್ನು ಮುಂದುವರಿಸುವ ಹಂಬಲ. ದೇಶದ ಅತ್ಯುನ್ನತ ಐ.ಟಿ. ಕಂಪನಿಯೊಂದು, ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯೆಯ ಮೊದಲ ಹಂತವಾದ, ಆಪ್ಟಿಟ್ಯೂಡ್ ಟೆಸ್ಟ್ ನಡೆಸುತ್ತಿದ್ದರು. ಒಳ್ಳೆಯ ವಿಧ್ಯಾರ್ಥಿಯಾಗಿದ್ದ ರಾಜೇಶ್‍ಗೆ ಸೆಲೆಕ್ಷನ್ ಬಗ್ಗೆ ವಿಶ್ವಾಸವಿತ್ತು; ಆದರೆ, ಅವನ ನಿರೀಕ್ಷೆ ಹುಸಿಯಾಗಿ, ಕಟ್ ಆಫ್‍ಗಿಂತ ಕಡಿಮೆ ಗ್ರೇಡ್ ಗಳಿಸಿ, ಸೆಲೆಕ್ಷನ್‍ನ ಪ್ರಥಮ ಹಂತದಲ್ಲೇ, ವಿಫಲನಾಗಿದ್ದ. ಈ ಹಿನ್ನಡೆಯಿಂದ ವ್ಯಾಕುಲನಾಗಿ, ಕ್ರಮೇಣ ತೀರ್ವ ಖಿನ್ನತೆಗೂ ಒಳಗಾಗಿದ್ದ ರಾಜೇಶ್‍ನ್ನು ಸಮಾಧಾನ ಪಡಿಸಿ, ಟೆಸ್ಟ್ ಬಗ್ಗೆ ಸಂಪೂರ್ಣವಾಗಿ ವಿಚಾರಿಸಿದ ನಂತರ ತಿಳಿದ ಸಾರಾಂಶವಿಷ್ಟು:

  • ಟೆಸ್ಟ್‍ನಲ್ಲಿದ್ದ 70 ಪ್ರಶ್ನೆಗಳ ಪೈಕಿ, ರಾಜೇಶ್ ಉತ್ತರಿಸಿದ್ದು 56. ಅದರಲ್ಲಿ 52 ಸರಿಯಿದ್ದು, 4 ನೆಗಟಿವ್ ಅಂಕಗಳಿಂದ, ಅವನು ಗಳಿಸಿದ 69%, ಐ.ಟಿ. ಕಂಪನಿ ನಿರ್ಧರಿಸಿದ್ದ 70%ಕ್ಕೆ ಕಮ್ಮಿಯಿದ್ದು, ಪ್ರವೇಶ ಪ್ರಕ್ರಿಯೆಯಿಂದ ಹೊರಬಂದಿದ್ದ.
  • ರಾಜೇಶ್ ಪದ ಗ್ರಹಿಕೆ [ವರ್ಬಲ್ ರೀಸನಿಂಗ್] ವಿಭಾಗದಲ್ಲಿ ಹೆಚ್ಚಿನ ಸಮಯವನ್ನು ಕಳೆದು ಸಂಖ್ಯಾ ಗ್ರಹಿಕೆ [ನ್ಯೂಮರಿಕಲ್ ರೀಸನಿಂಗ್] ವಿಭಾಗದಲ್ಲಿ ಕಾಲಾವಕಾಶವಿಲ್ಲದಂತಾಗಿ, ಉತ್ತರಿಸಬಹುದಿದ್ದ ಅನೇಕ ಪ್ರಶ್ನೆಗಳನ್ನು ಬಿಟ್ಟಿದ್ದ.ರಾಜೇಶ್ ಎಂಜಿನಿಯರಿಂಗ್ ಪದವೀಧರನಾಗಿ, ಅವನ ಮೊದಲ ಆದ್ಯತೆ ಸಂಖ್ಯಾ ಗ್ರಹಿಕೆ ವಿಭಾಗವಾಗಬೇಕಿತ್ತು.
  • ಟೆಸ್ಟ್‍ನ ಎಲ್ಲಾ ಪ್ರಶ್ನೆಗಳನ್ನೂ ಉತ್ತರಿಸಬೇಕೆಂಬ ಅವನ ತಂತ್ರ, ಸಮಯದ ಅಭಾವದಿಂದ ಉಲ್ಟಾ ಹೊಡೆದಿತ್ತು.

ಆಪ್ಟಿಟ್ಯೂಡ್ ಟೆಸ್ಟ್‍ಗಳಲ್ಲಿ, ಅನೇಕ ಪ್ರತಿಭಾವಂತ ವಿಧ್ಯಾರ್ಥಿಗಳದೂ ಇದೇ ಪಾಡಾಗಿರುವುದನ್ನು ನಾನು ಸ್ವತಃ ನೋಡಿದ್ದೀನಿ. ಇಂತಹ ಆಘಾತಗಳಿಂದ ಪಾರಾಗಬೇಕಾದರೆ, ಕ್ಯಾಂಪಸ್ ಸೆಲೆಕ್ಷನ್‍ನ ಪ್ರಕ್ರಿಯೆಯನ್ನು ಅರಿತು, ಸೂಕ್ತ ಕಾರ್ಯತಂತ್ರವನ್ನು ರೂಪಿಸುವುದು ಅಗತ್ಯ.

ಕ್ಯಾಂಪಸ್ ಪ್ರಕ್ರಿಯೆ

ಸಾಮಾನ್ಯವಾಗಿ ಎಲ್ಲಾ ಪ್ರತಿಷ್ಟಿತ ಕಂಪನಿಗಳೂ, ಮೊದಲು ವೈಜ್ಞಾನಿಕ ಮಾಪನಗಳುಳ್ಳ ಆಪ್ಟಿಟ್ಯೂಡ್ ಟೆಸ್ಟ್ ನಡೆಸಿ, ಈ ಸುತ್ತಿನಲ್ಲಿ ಪಾಸಾದ ಅಭ್ಯರ್ಥಿಗಳ ಸಾಮಥ್ರ್ಯವನ್ನು, ಅರ್ಹತೆಯನ್ನು ಮುಂದಿನ-ಸಾಮೂಹಿಕ ಚರ್ಚೆ ಮತ್ತು ವೈಯಕ್ತಿಕ ಸಂದರ್ಶನ-ಹಂತದಲ್ಲಿ ನಿರ್ಣಯಿಸುತ್ತಾರೆ. ಈ ಟೆಸ್ಟ್‍ಗಳು ಸ್ಪರ್ದಾತ್ಮಕವಾಗಿದ್ದು, ಪ್ರಶ್ನೆಪತ್ರಿಕೆಯಲ್ಲಿ ವಿವಿಧ ಭಾಗಗಳಿರುತ್ತವೆ. ಪ್ರಶ್ನೆಗಳ ಉತ್ತರವಾಗಿ ಅನೇಕ ಆಯ್ಕೆಗಳಿದ್ದು, ವಿಮರ್ಷೆಯಲ್ಲಿ ಸಮಯವನ್ನು ಕಳೆಯದೆ, ಸರಿಯಾದ ಆಯ್ಕೆಯನ್ನು ತಟ್ಟನೇ ಆರಿಸಿ, ಮುಂದಿನ ಪ್ರಶ್ನೆ ಅಥವಾ ವಿಭಾಗಕ್ಕೆ ಗಮನ ಹರಿಸುವುದೇ ಸರಿಯಾದ ತಂತ್ರ.

ಆದ್ದರಿಂದ, ನೀವು ವಿಧ್ಯಾಭ್ಯಾಸದ ಅಂತಿಮ ಘಟ್ಟದಲ್ಲಿದ್ದು, ಕ್ಯಾಂಪಸ್ ಸೆಲೆಕ್ಷನ್‍ನ ನಿರೀಕ್ಷಣೆಯಲ್ಲಿದ್ದರೆ, ಇಲ್ಲಿನ ವಿವರಣೆಗಳು, ಸೂಚನೆಗಳಿಂದ ವೈಯಕ್ತಿಕ ಕಾರ್ಯತಂತ್ರವನ್ನು ರೂಪಿಸಬಹುದು.

ನಿಮ್ಮ ಸಾಮಥ್ರ್ಯಗಳೇನು?

ಮೊಟ್ಟಮೊದಲನೆಯದಾಗಿ ನಿಮ್ಮ ಅಭಿರುಚಿ ಮತ್ತು ಸಾಮಥ್ರ್ಯವನ್ನು ಅರಿಯಿರಿ. ಈ ಅರಿವೇ, ನೀವು ಸೂಕ್ತವಾದ ವೃತ್ತಿಯನ್ನು ಆರಿಸುವುದರಲ್ಲಿ ಮಾರ್ಗದರ್ಶಿ. ಸಾಮಾನ್ಯವಾಗಿ, ಕ್ಯಾಂಪಸ್ ಸೆಲೆಕ್ಷನ್‍ಗೆ ಬರುವ ಕಂಪನಿಗಳು, ಉದ್ದಿಮೆಗಳು ನಿಮ್ಮ ಸಾಮಥ್ರ್ಯ, ವೃತ್ತಿ ಒಲವು, ವ್ಯಕ್ತಿತ್ವ ಇತ್ಯಾದಿಗಳನ್ನು ಆಪ್ಟಿಟ್ಯೂಡ್ ಟೆಸ್ಟ್ ಮುಖಾಂತರ ಪರೀಕ್ಷಿಸಿ, ನಿಮ್ಮ ವ್ಯಕ್ತಿಚಿತ್ರವನ್ನು [ಪೆÇ್ರಫೈಲ್] ಅರಿತು, ಉದ್ಯೋಗದ ದೃಷ್ಟಿಯಲ್ಲಿ, ನಿಮ್ಮ ಯೋಗ್ಯತೆ ಮತ್ತು ಸಫಲತೆಯ ಸಾಧ್ಯತೆಯನ್ನು, ಅಂದಾಜು ಮಾಡುತ್ತಾರೆ.

ಉದಾಹರಣೆಗೆ, ನೀವು ಸಂಕೋಚ ಪ್ರವೃತ್ತಿಯವರಾದರೆ, ಮಾರ್ಕೆಟಿಂಗ್ ವೃತ್ತಿಯಲ್ಲಿ ಪಳಗಲು, ಸಾಕಷ್ಟು ಸಮಯ ಮತ್ತು ಪರಿಶ್ರಮ ಬೇಕಾಗುತ್ತದೆ. ಆದರೆ, ನೀವು ಯಾವಾಗಲೂ ಉಲ್ಲಾಸದಿಂದಿದ್ದು, ಹೊಸಬರೊಂದಿಗೂ ಸಲೀಸಾಗಿ, ಸಂಕೋಚವಿಲ್ಲದೆ ಮಾತನಾಡುವ ಚಾಕಚಕ್ಯತೆಯಿದ್ದರೆ, ಮಾರ್ಕೆಟಿಂಗ್ ವೃತ್ತಿಯಲ್ಲಿ ಸಫಲತೆಯನ್ನು ಶೀಘ್ರವಾಗಿಯೇ ಕಾಣಬಹುದು.

ನಿಮಗೆ ಸಂಶೋದನೆಯಲ್ಲಿ ಆಸಕ್ತಿಯಿದ್ದಲ್ಲಿ, ತಾರ್ಕಿಕ ಸಾಮಥ್ರ್ಯದ ಜೊತೆ ಏಕಾಗ್ರತೆಯೂ, ವೈಫಲ್ಯಗಳ ನಡುವೆ, ಛಲದಿಂದ ಮುಂದುವರಿಯುವ ಧೃಡತೆಯೂ ಇರಬೇಕು. ಅಧ್ಯಾಪಕರಾಗಬೇಕೆಂಬ ಅಪೇಕ್ಷೆಯಿದ್ದಲ್ಲಿ, ವಿಷಯ ಜ್ಞಾನ ಮತ್ತು ಭಾಷಾ ಬಳಕೆಯ ನಿಪುಣತೆಯ ಜೊತೆ ವೃತ್ತಿ ನಿಷ್ಟೆಯೂ, ಸೇವಾ ಮನೋಭಾವವೂ ಇರಬೇಕು. ಅದೇ ರೀತಿ, ರೇಡಿಯೋ ಜಾಕಿಯಾಗಬೇಕಿಂದಿದ್ದರೆ, ನಿಮ್ಮಲ್ಲಿ ಮಾತುಗಾರಿಕೆಯ ಕೌಶಲ ಮತ್ತು ಸಮಯ ಪ್ರಜ್ಞೆಯಿರಬೇಕು.

ಈ ರೀತಿ ಪ್ರತಿಯೊಂದೂ ಹುದ್ದೆಗೂ ನಿರ್ದಿಷ್ಟವಾದ ಕೌಶಲಗಳ, ಸಾಮಥ್ರ್ಯದ ಅವಶ್ಯಕತೆಗಳಿದ್ದು, ಮೂಲಭೂತವಾಗಿ ಅವುಗಳು ನಿಮ್ಮಲ್ಲಿವೆಯೇ ಎಂಬುದರ ಜೊತೆಗೆ, ನಿಮ್ಮ ಇತಿಮಿತಿಗಳನ್ನೂ ಸೆಲೆಕ್ಷನ್‍ನಲ್ಲಿ ಪರೀಕ್ಷಿಸುತ್ತಾರೆ. ನೀವು ಸೆಲೆಕ್ಟ್ ಆದರೆ, ಕಂಪನಿ ಸೇರಿದ ನಂತರ ಹೆಚ್ಚಿನ ತರಬೇತಿಯನ್ನು ನೀಡಲಾಗುತ್ತದೆ.

ಆಪ್ಟಿಟ್ಯೂಡ್ ಟೆಸ್ಟ್ ಉದ್ದೇಶ, ರಚನೆ

ನನ್ನ ವೃತ್ತಿ ಜೀವನದಲ್ಲಿ ನಾನು ಅನೇಕ ಕ್ಯಾಂಪಸ್‍ಗಳಿಗೆ ಹೋಗಿ, ಈ ಪ್ರಕ್ರಿಯೆಗಳಲ್ಲಿ ಭಾಗಿಯಾಗಿದ್ದೀನಿ. ವೃತ್ತಿಯ ಅವಶ್ಯಕತೆಯಂತೆ, ಟೆಸ್ಟ್‍ಗಳನ್ನೂ, ಚರ್ಚೆ, ಸಂದರ್ಶನಗಳನ್ನೂ ಮಾಡುವುದು ಸಹಜ. ವೃತ್ತಿಯ ಅನುಭವದಿಂದ ಹೇಳುವುದಾದರೆ, ನಾನು ಸಾಮಥ್ರ್ಯದ ಜೊತೆ ಮನೋಭಾವಕ್ಕೂ ಪ್ರಾಧಾನ್ಯತೆ ಕೊಡುತ್ತಿದ್ದೆ. ಏಕೆಂದರೆ, ಯಶಸ್ಸು ಕೇವಲ ಸಾಮಥ್ರ್ಯದಿಂದಾಗುವದಲ್ಲ; ಮುಖ್ಯವಾಗಿ ಯಶಸ್ಸಿಗೆ ಸಾಮರ್ಥವನ್ನು ಯೋಗ್ಯ ರೀತಿಯಲ್ಲಿ ಬಳಸಲು ಸಕಾರಾತ್ಮಕ ಮನೋಭಾವವಿರಬೇಕು. ಸಾಮಥ್ರ್ಯವನ್ನು ತರಬೇತಿಯ ಮೂಲಕ ವೃದ್ಧಿಸಬಹುದು; ಆದರೆ, ಮನೋಭಾವ ನಿಮ್ಮ ಅಂತರಂಗದ್ದು.

ಸಾಮಾನ್ಯವಾಗಿ, ಇಂತಹ ಟೆಸ್ಟ್‍ಗಳಲ್ಲಿ ನಿಮ್ಮ ವಿಷಯ ಪರಿಣತೆ, ಇಂಗ್ಲೀಷ್ ಪರಿಣತೆ, ಸಂವಹನ ಕೌಶಲ, ತಾರ್ಕಿಕ ಆಲೋಚನಾ ಮತ್ತು ಕಲ್ಪನಾ ಶಕ್ತಿ, ಸಾಮಾನ್ಯ ಬೌದ್ಧಿಕ ಸಾಮಥ್ರ್ಯ, ಸಂಖ್ಯಾ ಮತ್ತು ಪದ ಗ್ರಹಿಕೆ, ವರ್ಗೀಕರಣ, ಮನೋಭಾವ, ಸ್ವಭಾವ, ನಡವಳಿಕೆ, ವಿಶ್ವಾಸಾರ್ಹತೆ ಇತ್ಯಾದಿಗಳನ್ನು ಪರೀಕ್ಷಿಸುವ ಪ್ರಶ್ನೆಗಳಿರುತ್ತದೆ. ಹಾಗೂ, ಮುಖ್ಯ ವಿಭಾಗಗಳಲ್ಲಿ ಕಡ್ಡಾಯವಾಗಿ ಇಂತಿಷ್ಟೇ ಅಂಕಗಳನ್ನು ಗಳಿಸಬೇಕೆಂದೂ, ಮತ್ತು ಒಟ್ಟಾರೆ ಗಳಿಸಬೇಕಾದ ಕಟ್ ಆಫ್ ಅಂಕಗಳ ಬಗ್ಗೆ ಕ್ಯಾಂಪಸ್‍ಗೆ ಬರುವ ಪ್ರತಿಯೊಂದು ಕಂಪನಿಯ ನಿಬಂಧನೆಯನ್ನು ತಿಳಿಯಿರಿ.

ಆಪ್ಟಿಟ್ಯೂಡ್ ಟೆಸ್ಟ್ ತಯಾರಿ ಹೇಗೆ?

ಪರೀಕ್ಷೆಯ ವಿನ್ಯಾಸವನ್ನು ಅರಿತು, ನಿರಂತರವಾಗಿ ಅಭ್ಯಾಸ ಮಾಡಿ. ವ್ಯಾಕರಣದ ಕೌಶಲವನ್ನು ತೀಕ್ಷ್ಣಗೊಳಿಸಿ. ಪತ್ರಿಕೆಗಳು, ಇಂಟರ್ನೆಟ್, ಟಿ.ವಿ. ವಾಹಿನಿಗಳ ಶಿಕ್ಷಣ ಸಂಬಂಧಿತ ಕಾರ್ಯಕ್ರಮಗಳ ಮೂಲಕ, ನಿಮ್ಮ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಿ. ಮತ್ತು ಆರೋಗ್ಯಕರ ಮನೋಭಾವವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿ.

ಆಪ್ಟಿಟ್ಯೂಡ್ ಟೆಸ್ಟ್‍ಗಳ ಪ್ರಶ್ನೆಪತ್ರಿಕೆಗಳು, ಗೈಡ್ ಇತ್ಯಾದಿಗಳು ಮಾರುಕಟ್ಟೆಯಲ್ಲೂ, ಇಂಟರ್ನೆಟ್‍ನಲ್ಲೂ ಸಿಗುತ್ತದೆ. ಈ ಟೆಸ್ಟ್‍ಗಳನ್ನು ವೈಯಕ್ತಿಕವಾಗಿ ಅಥವಾ ಸಹಪಾಠಿಗಳೊಂದಿಗೆ ಉತ್ತರಿಸುವುದರಿಂದ, ಪ್ರಶ್ನೆಪತ್ರಿಕೆಗಳ ಪರಿಚಯದ ಜೊತೆಗೆ ನಿಮ್ಮ ಸಾಮಥ್ರ್ಯ ಮತ್ತು ದೌರ್ಬಲ್ಯಗಳ ಅರಿವಾಗುತ್ತದೆ.

ಟೆಸ್ಟ್‍ಗೆ ಮುಂಚಿತವಾಗಿ, ಆಯಾ ಕಂಪನಿಗಳ ಸೆಲೆಕ್ಷನ್ ಪ್ರಕ್ರಿಯೆ ಮತ್ತು ಪ್ರಶ್ನೆಪತ್ರಿಕೆಗಳ ವಿನ್ಯಾಸವನ್ನು ಗಮನಿಸಿ, ವಿವಿಧ ಭಾಗಗಳಲ್ಲಿರುವ ಪ್ರಶ್ನೆಗಳಿಗೂ, ಒಟ್ಟು ಸಮಯಕ್ಕೂ ತುಲನೆ ಮಾಡಿ ಸೂಕ್ತವಾದ ತಂತ್ರವನ್ನು ರೂಪಿಸಿಕೊಳ್ಳಿ. ಈ ಕಾರ್ಯತಂತ್ರದಿಂದ, ಟೆಸ್ಟ್‍ಗಳನ್ನು 4-5 ಬಾರಿ ಪ್ರಾಕ್ಟೀಸ್ ಮಾಡಿ, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ.

ಟೆಸ್ಟ್‍ನ ದಿನ

ಟೆಸ್ಟ್‍ನ ದಿನದಂದು, ಉದ್ವೇಗ, ಆತಂಕಗಳಿಲ್ಲದೆ, ಮಾನಸಿಕ ಸಮತೋಲನ ಮತ್ತು ಆತ್ಮವಿಶ್ವಾಸದಿಂದಿರಲು ಪ್ರಯತ್ನಿಸಿ. ಇದರಿಂದ, ನಿಮ್ಮ ಕಾರ್ಯಕ್ಷಮತೆ ಹೆಚ್ಚುತ್ತದೆ.

ನೀವು ಮೊದಲೇ ರೂಪಿಸಿಕೊಂಡಿರುವ ಕಾರ್ಯತಂತ್ರವನ್ನು, ನಿಷ್ಟೆಯಿಂದ ಟೆಸ್ಟ್‍ನಲ್ಲಿ ಪರಿಪಾಲಿಸಿ. ನೀವು ಯಾವ ವಿಭಾಗದಲ್ಲಿ ಹೆಚ್ಚು ಪರಿಣಿತರೋ, ಮೊದಲು ಅಲ್ಲಿನ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಿ; ನಂತರ ಬೇರೆ ವಿಭಾಗಗಳಿಗೆ ಆದ್ಯತೆಯಂತೆ ಗಮನ ಹರಿಸಿ.

ಆದರೆ, ಉತ್ತರ ಗೊತ್ತಿಲ್ಲದ ಅನೇಕ ಪ್ರಶ್ನೆಗಳಿದ್ದರೆ? ಸಾಮಾನ್ಯವಾಗಿ, ಇಂತಹ ಪರೀಕ್ಷೆಗಳಲ್ಲಿ ನೆಗಟಿವ್ ಅಂಕಗಳಿರುತ್ತದೆ. ಮೇಲೆ ಉಲ್ಲೇಖಿಸಿದ ರಾಜೇಶ್‍ನ ಉದಾಹರಣೆಯಂತೆ, ನೆಗಟಿವ್ ಅಂಕಗಳಿಂದ ತೊಂದರೆಗೆ ಸಿಲುಕುವುದುಂಟು. ಹಾಗೆಂದು, ಬಹಳಷ್ಟು ಪ್ರಶ್ನೆಗಳನ್ನು ಬಿಡುವುದೂ ಸಮಂಜಸವಲ್ಲ. ಆದ್ದರಿಂದ, ವಾಡಿಕೆಯಂತಿರುವ ನಾಲ್ಕು ಆಯ್ಕೆಗಳಲ್ಲಿ, ಕನಿಷ್ಟ ಎರಡನ್ನಾದರೂ ತಿರಸ್ಕರಿಸಿ, ಉಳಿದ ಎರಡರಲ್ಲಿ ‘ಇಂಟೆಲಿಜೆಂಟ್ ಗೆಸ್’ ಮಾಡಿ. ಈ ತಂತ್ರದಿಂದ, ನೀವು ಹೆಚ್ಚಿನ ಅಂಕಗಳನ್ನು ಗಳಿಸುವ ವಿಶ್ವಾಸವಿರಬೇಕು.

ಯಶಸ್ಸಿನ ಸೂತ್ರಗಳು

ಮೊದಲ ಉದ್ಯೋಗ ಕ್ಯಾಂಪಸ್‍ನಲ್ಲಿಯೇ ಸಿಕ್ಕಿದರೆ, ವೃತ್ತಿಯಲ್ಲಿ ನಿಮ್ಮ ಯಶಸ್ಸು ಖಚಿತ. ಕ್ಯಾಂಪಸ್‍ಗೆ ಬರುವ ಕಂಪನಿಗಳು, ಉದ್ದಿಮೆಗಳು ಉನ್ನತ ಶ್ರೇಣಿಯಲ್ಲಿದ್ದು, ನಿಮ್ಮ ವೃತ್ತಿಜೀವನವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಅತ್ಯುತ್ತಮ ತರಬೇತಿ, ಪ್ಯಾಕೇಜ್ ಮತ್ತು ಸೌಲಭ್ಯಗಳು ಲಭ್ಯವಾಗಿ, ನೀವು ವೃತ್ತಿಯಲ್ಲಿನ ಯಶಸ್ಸನ್ನು ಶೀಘ್ರವಾಗಿ ಪಡೆಯಬಹುದು.

ನಿಮ್ಮ ಮುಂದಿರುವ ಕ್ಯಾಂಪಸ್ ಸೆಲೆಕ್ಷನ್‍ನಂತಹ ಅವಕಾಶಗಳೇ, ವೃತ್ತಿಜೀವನದ ಯಶಸ್ಸಿಗೆ ಏಣಿಯಿದ್ದಂತೆ. ಅದರ ಮೊದಲ ಮೆಟ್ಟಿಲೇ, ಆಪ್ಟಿಟ್ಯೂಡ್ ಟೆಸ್ಟ್ ಅಥವಾ ಸ್ಪರ್ದಾತ್ಮಕ ಪರೀಕ್ಷೆಗಳು. ಇಂತಹ ಉತ್ತಮ ಅವಕಾಶಗಳನ್ನು ರಾಜೇಶ್ ಮಾಡಿದಂತಹ ಸಣ್ಣ ತಪ್ಪುಗಳಿಂದ ಕಳೆದು ನಿರಾಶರಾಗಬೇಡಿ.

ನೀವು ಸಾಧಕರಾಗಬೇಕಾದರೆ ನಿರಂತರ ಅಭ್ಯಾಸ ಮತ್ತು ಪರಿಶ್ರಮದಿಂದಲೇ ಸಾಧ್ಯ. ಇಲ್ಲಿ ಸೂಚಿಸಿರುವ ಸೂತ್ರಗಳನ್ನು ಗಮನಿಸಿ; ನಿಮ್ಮ ಸಾಮಥ್ರ್ಯವನ್ನು ವೃದ್ಧಿಸಿ; ಸೂಕ್ತ ಕಾರ್ಯತಂತ್ರವನ್ನು ರೂಪಿಸಿ. ಆತ್ಮವಿಶ್ವಾಸದಿಂದ ಈ ಟೆಸ್ಟ್‍ಗಳನ್ನು ಎದುರಿಸಿ; ಗೆಲ್ಲುವ ಆಶಾಭಾವನೆ ಸದಾ ನಿಮ್ಮಲ್ಲಿರಲಿ.

Download PDF document

                                       

About author View all posts Author website

V Pradeep Kumar

Leave a Reply

Your email address will not be published. Required fields are marked *