1000 ದ್ವೀಪಗಳು

ಪ್ರಣಯಕ್ಕೊಂದು ತಾಣ, ಮದುವೆಗೊಂದು ಅರಮನೆ, ಮಧುಚಂದ್ರಕ್ಕೊಂದು ದ್ವೀಪ ಸಾವಿರ ಕನಸುಗಳ, ಸಾವಿರ ದ್ವೀಪಗಳು

ಹುಣ್ಣಿಮೆಯ ಬೆಳದಿಂಗಳು; ಪ್ರಶಾಂತ, ನಿರ್ಮಲ ವಾತಾವರಣ. ನಿಮಗೇ ಮೀಸಲಾದ ಆಧುನಿಕ ಸೌಕರ್ಯಗಳ ಬಂಗಲೆ; ಸುತ್ತಲೂ ಹೇರಳವಾದ ಜಲ ಮತ್ತು ವನರಾಶಿ. ತಂಗಾಳಿ ಬೀಸುತ್ತಿರಲು, ನೀವು ಮತ್ತು ನಿಮ್ಮ ಪ್ರಿಯತಮೆಯ ಏಕಾಂತಕ್ಕೆ, ಪ್ರಣಯಕ್ಕೆ ಅಡ್ಡಿಯಾಗಲು ದೂರದೂರದಲ್ಲೂ ಯಾರೂ ಇಲ್ಲ. ಹೀಗಿದ್ದಲ್ಲಿ, ಪ್ರತಿವರ್ಷ ಹರುಷ ತರುವ ಉಗಾದಿಯಂತೆ, ಮಧುಚಂದ್ರವೂ ಮತ್ತೆ ಮತ್ತೆ ನಮ್ಮೆಲ್ಲರ ಜೀವನದಲ್ಲೂ ಮರಳಬಹುದಲ್ಲವೇ? ಇದು ಮರುಳು ಮಾಡುವ ಮಾಯಾಲೋಕವಲ್ಲ; ಕಲ್ಪನೆಗೂ ಸಿಲುಕದ ಕನಸಿನ ಲೋಕವಲ್ಲ. ಸ್ವಚ್ಛ ನಿಸರ್ಗದ ಈ ವಿಸ್ಮಯ ಲೋಕದ ಅನುಭವ ನಿಜಕ್ಕೂ ನಿಮ್ಮದಾಗಬಲ್ಲದು!

Piಛಿಣuಡಿe oಜಿ Isಟಚಿಟಿಜಕೆನಡ ಮತ್ತು ಅಮೇರಿಕ ದೇಶಗಳ ಮಧ್ಯದಲ್ಲಿರುವ ದ್ವೀಪಸಮೂಹಕ್ಕೆ ‘1000 ಐಲಾಂಡ್ಸ್’ [1000 ದ್ವೀಪಗಳು] ಎಂದು ಕರೆಯುತ್ತಾರೆ. ಇಲ್ಲಿನ ಮೂಲ ನಿವಾಸಿಗಳು ಈ ಪ್ರದೇಶವನ್ನು ಮಾನಿಟೋನ ಅಂದರೆ ‘ಎ ಗಾರ್ಡನ್ ಅಫ್ ದಿ ಗ್ರೇಟ್ ಸ್ಪಿರಿಟ್’ ಎಂದು ಕರೆಯುತ್ತಿದ್ದರು. 1812ರ ಅಮೇರಿಕದ ಸ್ವಾತಂತ್ರ ಕ್ರಾಂತಿಯ ಬಳಿಕ ಬ್ರಿಟೀಶರ ಬಗ್ಗೆಯೇ ಒಲವಿದ್ದ ಜನ, ಈ ದ್ವೀಪಗಳಿಗೆ ವಲಸೆಯಾಗಿದ್ದರು. ದ್ವೀಪದ ಇಲ್ಲಿನ ವ್ಯಾಖ್ಯಾನವೇನೆಂದರೆ, ವರ್ಷವಿಡೀ ಸುತ್ತಲೂ ನೀರಿದ್ದು, ಕನಿಷ್ಠ ಒಂದು ಚದರ ಅಡಿಯಷ್ಟಾದರೂ ಭೂಮಿಯಿರಬೇಕು; ಅಂದರೆ ಒಂದು ಗಿಡ, ಮರಕ್ಕೆ ಸಾಕಾಗುವಷ್ಟು. ಇಲ್ಲಿ ಒಂದೇ ಮರವಿರುವ, ಒಂದೇ ಮನೆಯಿರುವ [ಜಸ್ಟ್ ರೂಮ್ ಎನಫ್] ಪುಟ್ಟದಾದ ದ್ವೀಪಗಳೂ ಮತ್ತು ವಿಸ್ತಾರವಾದ ದ್ವೀಪಗಳೂ ಇವೆ.

ಇಂತಹ ವಿಸ್ಮಂiÀi ಲೋಕಕ್ಕೆ ಪಯಣಿಸಿದ ನಾವು ನಿಜಕ್ಕೂ ಭಾಗ್ಯಶಾಲಿಗಳು. ಟೊರೊಂಟೊ ನಗರದಿಂದ ಒಂದು ಗಂಟೆಯ ಪ್ರಯಾಣದ ನಂತರ, ಕಿಂಗ್‍ಸ್ಟನ್ ಸಮೀಪದ ಗನನೋಕ್ವೆಯೆಂಬ ಪುಟ್ಟ ಪಟ್ಟಣ ಸೇರಿದಾಗ ಬೆಳಗ್ಗೆ 11 ಗಂಟೆ. ಆದರೆ ನಮ್ಮ ಕ್ರೂಸ್ ಇದ್ದದ್ದು ಮದ್ಯಾಹ್ನ 12ಕ್ಕೆ. ಹಾಗಾಗಿ ಸುತ್ತಮುತ್ತ ಓಡಾಡಿ ನೆನಪಿನ ಕಾಣಿಕೆಗಳನ್ನು ಖರೀದಿಸಿದೆ. ಅಲ್ಲಿನ ಅಂಗಡಿಯಲ್ಲೊಂದು ಕುತೂಹಲಕಾರಿ ವಿಷಯ ತಿಳಿಯಿತು. ಕಾಣಿಕೆಗಳನ್ನು ಖರೀದಿಸಿದ ನಂತರ ಮಾರಾಟಗಾರ್ತಿ ಕೇಳಿದಳು, ‘ನಿಮ್ಮಲ್ಲೊಂದು ಲೂನಿ ಇದೆಯೇ?’ ಲೂನಿ ಏನೆಂದು ನನಗೆ ತಿಳಿಯಲಿಲ್ಲ. ಆಮೇಲೆ ನಗದು ಪೆಟ್ಟಿಗೆಯಿಂದ ಒಂದು ಕೆನಡಿಯನ್ ಡಾಲರ್ ತೆಗೆದು ವಿವರಿಸಿದಳು. ಚಿನ್ನದ ಬಣ್ಣದ ಕಂಚಿನ ಲೇಪನದ ಕೆನಡದ ಒಂದು ಡಾಲರ್ ನಾಣ್ಯದ ಮೇಲೊಂದು ‘ಲೂನ್’ ಎಂಬ ಹಕ್ಕಿಯ ಚಿತ್ರವಿದೆ. ಆದ್ದರಿಂದ, ಕೆನಡದ ಒಂದು ಡಾಲರಿನ ನಾಣ್ಯವನ್ನು ‘ಲೂನಿ’ ಎಂದೂ ಕರೆಯುತ್ತಾರೆ.

ನಮ್ಮ ಗುಂಪಿನಲ್ಲಿ ಬಹಳಷ್ಟು ಮಂದಿ ಶಾಕಾಹಾರಿಗಳು; ಆದ್ದರಿಂದ, ಹತ್ತಿರದಲ್ಲೇ ಇದ್ದ ರೆಸ್ಟೋರೆಂಟಿನಲ್ಲಿ ಕ್ರೂಸ್ ಮುಗಿಸಿ ಬರುವ ವೇಳೆಗೆ ಶಾಕಾಹಾರಿ ಪಿಟ್ಜಾ ವ್ಯವಸ್ಥೆ ಮಾಡಿದ ನಮ್ಮ ಮಾರ್ಗದರ್ಶಕರ ಮುಂದಾಲೋಚನೆಗೆ ಬೇರೆ ನಿದರ್ಶನ ಬೇಕೆ?

1000 ಐಲಾಂಡ್ಸ್ ಕ್ರೂಸ್

ಮಧ್ಯಾಹ್ನ 12ಕ್ಕೆ ಹೊರಟ ಕ್ರೂಸ್‍ನಲ್ಲಿ ಸುಮಾರು 80 ಪ್ರವಾಸಿಗಳು. ಒಂದು ಓಪನ್ ಡೆಕ್, ಕೆಫೆ ಮತ್ತು ಎರಡು ಹವಾ ನಿಯಂತ್ರಿತ ಡೆಕ್‍ಗಳಿಂದ ಸುಸಜ್ಜಿತವಾದ ಸ್ಪೀಡ್‍ಬೋಟಿನಲ್ಲಿ, ‘1000 ದ್ವೀಪಗಳ’ ಬಗ್ಗೆ ವಿವರಿಸಲು ಧ್ವನಿವರ್ಧಕದ ವ್ಯವಸ್ಥೆ. ಈ ಪ್ರದೇಶ ಆರ್ಟಿಕ್ ಸಾಗರಕ್ಕೆ ಸಮೀಪವಿದ್ದು, ಸಾವಿರಾರು ವರ್ಷಗಳ ಹಿಂದೆ, ನೀರ್ಗಲ್ಲಿನ ಪರ್ವತಗಳ [ಗ್ಲೇಸಿಯರ್] ಕೊರೆತದಿಂದ ಸಾವಿರಾರು ದ್ವೀಪಗಳು ಉದ್ಭವಿಸಿದೆ ಎನ್ನಲಾಗುತ್ತದೆ. ಐಸ್‍ಯುಗದ ಅಂತ್ಯದ ಒಂದು ಪರಿಣಾಮವೇ ಮಹಾ ಸರೋವರಗಳು. ಈ ಮಹಾ ಸರೋವರಗಳಲ್ಲಿ ಮುಖ್ಯವಾದದ್ದು ಒಂಟಾರಿಯೊ. ಈ ಸರೋವರದಿಂದ ಶುರುವಾಗಿ ಸುಮಾರು 1197 ಕಿ.ಮೀ.ಗಳಷ್ಟು ದೂರದ ಅಟ್ಲಾಂಟಿಕ್ ಸಾಗರವನ್ನು ಸೇರುವ ಸೇಂಟ್ ಲಾರೆಂಸ್ ನದಿಯ ಪ್ರದೇಶದಲ್ಲಿರುವ 1793 ನೈಸರ್ಗಿಕ ದ್ವೀಪಗಳ ಸಮೂಹ, ‘1000 ಐಲಾಂಡ್ಸ್’ ಎಂದೇ ಜನಪ್ರಿಯವಾಗಿದೆ. ಲಾರೆಂಸ್ ನದಿಯ ಪಶ್ಚಿಮಕ್ಕೆ ಕೆನಡಾದ ಒಂಟಾರಿಯೊ ರಾಜ್ಯ ಮತ್ತು ಪೂರ್ವಕ್ಕೆ ಅಮೇರಿಕದ ನ್ಯೂಯಾರ್ಕ್ ರಾಜ್ಯಗಳಿದ್ದು, ಈ ಪ್ರದೇಶಕ್ಕ್ನೆ ಎರಡೂ ದೇಶಗಳಿಂದ ಪ್ರವೇಶಿಸಬಹುದು.

ಕ್ರೂಸ್ ಹೊರಟ ನಿಮಿಷಗಳಲ್ಲೇ, ಈ ದ್ವೀಪಗಳ ಸೌಂದರ್ಯ, ವೈವಿಧ್ಯ ನಮ್ಮನ್ನು ಬೆರಗಾಗಿಸಿತು. ವಿವಿಧ ಆಕಾರದ ಮತ್ತು ಸುತ್ತಳತೆಯ ದ್ವೀಪಗಳ ದೃಶ್ಯ, ನಮ್ಮ ಕಣ್ಮನಗಳನ್ನಾವರಿಸಿತು. ಕೇವಲ ಒಂದು ಪುಟ್ಟ ಮನೆಯಿರುವ ದ್ವೀಪಗಳಿಂದ ಹಿಡಿದು ಹೋಟೆಲ್, ರೆಸಾರ್ಟ್‍ಗಳಿರುವ ದ್ವೀಪಗಳಿವೆ. ಅನೇಕ ದ್ವೀಪಗಳು ಶ್ರೀಮಂತರ ಖಾಸಗೀ ಒಡೆತನದಲ್ಲಿದ್ದು ಪ್ರಪಂಚದ ಅತ್ಯಂತ ಶ್ರೀಮಂತರ ವಿಲಾಸೀ ಜೀವನದ ಒಳನೋಟ ಕಾಣುವುದು ಈ ದ್ವೀಪಗಳಲ್ಲೇ. ಹೆಸರಾಂತ ಚಲನಚಿತ್ರ ತಾರೆಯರು, ಉದ್ಯಮಿಗಳು, ರಾಜಕಾರಣಿಗಳು, ಕ್ರೀಡಾಪಟುಗಳೂ ಸೇರಿದಂತೆ ಜಗತ್ತಿನ ಎಲ್ಲಾ ಶ್ರೀಮಂತರಿಗೆ, ಈ ದ್ವೀಪಗಳ ಒಡೆತನ ವಿಹಾರಕ್ಕೆ ಮಾತ್ರವಲ್ಲದ್ಲೇ, ವಿಲಾಸೀ ಜೀವನಕ್ಕೆ ಅಗತ್ಯವಾದ ಪ್ರತಿಷ್ಟೆಯನ್ನೂ ನೀಡುತ್ತದೆ.

ಜಾರ್ಜ್ ಮತ್ತು ಲೂಯಿಸ್ ಪ್ರೇಮ ಕತೆ

ಇಲ್ಲಿರುವ ಸಾವಿರಾರು ದ್ವೀಪಗಳಲ್ಲಿ ನೋಡಲೇಬೇಕಾದದ್ದು ಅಮೇರಿಕ ಪ್ರದೇಶದ ಹಾರ್ಟ್ ಐಲಾಂಡ್. ಈ ದ್ವೀಪದಲ್ಲಿನ ಬೋಲ್ಡ್ಟ್ ಕ್ಯಾಸೆಲ್ ಕತೆ ಕೇಳಿದಾಗ ತಾಜ್‍ಮಹಲ್ ಕಟ್ಟಿದ ಶಹಜಹಾನ್‍ನ ನೆನಪಾಯಿತು. ನ್ಯೂಯಾರ್ಕಿನ ಹೋಟೆಲ್‍ಗಳಲ್ಲಿ ಅತ್ಯಂತ ಪ್ರತಿಷ್ಟಿತ ಮತ್ತು ಹೆಸರಾದದ್ದು, ವಾಲ್ಡಾರ್ಫ್ ಅಸ್ಟೋರಿಯ. ಇದರ ಪಾಲುದಾರರೂ, ಆಗರ್ಭ ಶ್ರೀಮಂತರೂ ಆದ ಜಾರ್ಜ್ ಸಿ. ಬೋಲ್ಡ್ಟ್ 1900ರಲ್ಲಿ, ಹಾರ್ಟ್ ಐಲಾಂಡಿನಲ್ಲಿ 120 ಕೋಣೆಗಳ ಅರಮನೆಯನ್ನು, ತಮ್ಮ ಹೆಂಡತಿ ಲೂಯಿಸ್‍ಗಾಗಿ ನಿರ್ಮಿಸಲು ಪ್ರಾರಂಭಿಸಿದರು. ಭವ್ಯವಾದ ಗ್ರಾನೈಟಿನ ಈ ಅರಮನೆಯ ಆವರಣದಲ್ಲಿ ಇಟಾಲಿಯನ್ ಉದ್ಯಾನವನ, ಸೊಗಸಾದ ಸೇತುವೆ, ಕುತೂಹಲ ಕೆರಳಿಸುವ ಸುರಂಗ ಮಾರ್ಗ, ವಿದ್ಯುಜ್ಜನಕ ಕೇಂದ್ರ, ಇತ್ಯಾದಿಗಳ ನಿರ್ಮಾಣಕ್ಕೆ, ಸುಮಾರು 300 ಜನ ಶ್ರಮಿಸುತ್ತಿದ್ದರು. ಆದರೆ, 1904ರಲ್ಲಿ ಹಠಾತ್ತಾಗಿ ಲೂಯಿಸ್ ಮರಣಹೊಂದಿದ ಮೇಲೆ ಬೋಲ್ಡ್ಟ್ ಅತೀವ ದುಃಖದಿಂದ ಅರಮನೆಯ ಕೆಲಸವನ್ನು ನಿಲ್ಲಿಸಿದರು. ಲೂಯಿಸ್ ಸಾವಿನಿಂದ ಕೊರಗುತ್ತಿದ್ದ ಬೋಲ್ಡ್ಟ್ ಮತ್ತೆ ಹಾರ್ಟ್ ಐಲಾಂಡಿಗೆ ಬರಲಿಲ್ಲವಾದರೂ, ಅಪೂರ್ಣವಾದ ಅರಮನೆಯನ್ನು ತಮ್ಮ ಪ್ರೀತಿಯ ಕುರುಹಾಗಿ ಸ್ಮಾರಕದಂತೆ ಉಳಿಸಿಕೊಂಡರು. ಆದರೆ, ಸುಮಾರು 73 ವರ್ಷಗಳ ನಿರ್ಲಕ್ಷ್ಯದಿಂದ ಈ ಅರಮನೆ ಪ್ರಕೃತಿಯ ವಿಕೋಪಕ್ಕೆ ಆಹುತಿಯಾಗಿ, ಶಿಥಿಲವಾಗಿತ್ತು. ಕೊನೆಗೆ, 1977ರಲ್ಲಿ ಅಸ್ತಿತ್ವಕ್ಕೆ ಬಂದ ‘1000 ಐಲಾಂಡ್ಸ್’ ಬ್ರಿಡ್ಜ್ ಸಂಸ್ಥೆ, ಈ ಆಸ್ತಿಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು, ಅರಮನೆಯ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಗೆ ಕೋಟ್ಯಾಂತರ ಡಾಲರುಗಳನ್ನು ವೆಚ್ಚ ಮಾಡಿ, ಪ್ರವಾಸಿಗರಿಗೆ ಸಂದರ್ಶಿಸಲು ಅವಕಾಶ ಕಲ್ಪಿಸಿದೆ. ಒಂದು ಅಪರೂಪದ ಪ್ರೇಮಕತೆಯನ್ನು ಪ್ರತಿಬಿಂಬಿಸುವ ಈ ದ್ವೀಪವನ್ನು, ‘ಹಾರ್ಟ್ ಐಲಾಂಡ್’ ಎಂದು ಹೆಸರಿಸಿರುವುದು ಅತ್ಯಂತ ಸೂಕ್ತವಾಗಿದೆ. ಈಗ, ಅದ್ಭುತವಾದ ಬೋಲ್ಡ್ಟ್ ಕ್ಯಾಸೆಲ್, 1000 ಐಲಾಂಡ್ಸ್‍ನ ಮುಖ್ಯ ಆಕರ್ಷಣೆ.

ಮದುವೆಗೊಂದು ಅರಮನೆ, ಮದುಚಂದ್ರಕ್ಕೊಂದು ದ್ವೀಪ

ಇಂತಹ ಪ್ರತಿಷ್ಟಿತ ಶ್ರೀಮಂತರ ದ್ವೀಪಗಳಲ್ಲಿ ನಮಗೆಲ್ಲಿಯ ಪ್ರವೇಶ ಎಂದು ತಿಳಿಯಬೇಡಿ. ಮುಂದುವರಿದ ದೇಶಗಳ ಆರ್ಥಿಕ ಪರಿಸ್ಥಿತಿಯ ಹಿನ್ನಡೆಯಲ್ಲಿ, ಕೆಲವೊಮ್ಮೆ ಇಲ್ಲಿನ ಸೌಕರ್ಯಗಳು ಅಗ್ಗವೆನಿಸಿ ಅಚ್ಚರಿಯಾಗುವುದು ಸಹಜ. ಇದೀಗ, ಬೋಲ್ಡ್ಟ್ ಕ್ಯಾಸೆಲ್ ಆವರಣ ಮದುವೆ ಸಮಾರಂಭಗಳಿಗೆ ಕೂಡ ಲಭ್ಯ! ಮದುವೆ ಸಮಾರಂಭಕ್ಕೆ ಬೋಲ್ಡ್ಟ್ ಕ್ಯಾಸೆಲ್‍ನ ಆವರಣದ ಬಾಡಿಗೆ ಕೇವಲ 150 ಡಾಲರ್-ಅಂದರೆ 7000/- ರೂಪಾಯಿಗಳು! ಇದಲ್ಲದೆ ಪ್ರತಿಯೊಬ್ಬ ಅತಿಥಿಗೂ ತಗಲುವ ಸಾಮಾನ್ಯ ಪ್ರವೇಶ ಶುಲ್ಕ 7/- ಡಾಲರ್. ನಿಮ್ಮ ಮದುವೆಗೆ ಬರುವ ಬಂಧು, ಮಿತ್ರರಿಗೆ ಊಟ, ವಸತಿ, ಪ್ರಯಾಣ, ಇತ್ಯಾದಿಗಳನ್ನು ಸಂಘಟಿಸಲು, ಸಮಾರಂಭ ಸ್ಮರಣೀಯವಾಗುವಂತೆ ಮಾಡಲು, ಇಲ್ಲಿ ವಿಶೇಷ ಅಯೋಜಕರಿದ್ದಾರೆ.

ಇಲ್ಲಿನ ದ್ವೀಪಗಳಲ್ಲಿ ಉಳಿದುಕೊಳ್ಳಲು ದಿನಕ್ಕೆ 4000/- ರೂಪಾಯಿಗಳಿಂದ ಹಿಡಿದು, ನಿಮ್ಮ ಆಯವ್ಯಯಕ್ಕೂ, ಅಭಿರುಚಿಗೂ, ಅವಧಿಗೂ ಹೊಂದುವಂತ ಪ್ಯಾಕೇಜ್‍ಗಳು ಸಿಗುತ್ತವೆ. ಖಾಸಗೀ ದ್ವೀಪಗಳ ಬಂಗಲೆಗಳು, ಹೋಟೆಲ್, ರೆಸಾರ್ಟ್‍ಗಳಲ್ಲಿ ಆಧುನಿಕ ಜೀವನಕ್ಕೆ ಬೇಕಾಗುವ ಸಂಸ್ಕರಿಸಿದ ನೀರು, ವಿದ್ಯುಚ್ಛಕ್ತಿ, ಅಡಿಗೆ ಅನಿಲ, ಇತ್ಯಾದಿಗಳ ಸೌಕರ್ಯವಿದೆ. ಮೊಬೈಲ್ ಹಾಗೂ ಇಂಟರ್ನೆಟ್ ಸಂಪರ್ಕವೂ ಅಡೆಚಡೆಯಿಲ್ಲದೆ ಸಿಗುತ್ತದೆ. ಇದಲ್ಲದೆ, ಇಲ್ಲಿನ ಬಯಲುಗಳಲ್ಲಿ, ಪ್ರಕೃತಿಯ ಮಡಿಲಲ್ಲಿ ಕ್ಯಾಂಪಿಂಗ್ ಮಾಡುವ ಅವಕಾಶಗಳೂ ಇದೆ.

ಈ ಪ್ರದೇಶದಲ್ಲಿ ಅನೇಕ ಪ್ರವಾಸೀ ಆಕರ್ಷಣೆಗಳಿವೆ. ಬೋಲ್ಡ್ಟ್ ಕ್ಯಾಸೆಲ್ ಅಲ್ಲದೆ, ಕೆನಡ ಪ್ರದೇಶದ 1000 ಐಲಾಂಡ್ಸ್ ರಾಷ್ಟ್ರೀಯ ಉದ್ಯಾನವನವಿದೆ. 20 ದ್ವೀಪಗಳ ಸಮೂಹದಲ್ಲಿರುವ ಈ ಉದ್ಯಾನವನದಲ್ಲಿ ವಿರಳವಾದ ಮತ್ತು ವೈವಿಧ್ಯವಾದ ಅನೇಕ ವನ್ಯಜೀವಿಗಳನ್ನು ಸಂರಕ್ಷಿಸಲಾಗಿದೆ. ಇದಲ್ಲದೆ, ಎರಡೂ ರಾಷ್ಟ್ರಕ್ಕೆ ಸೇರಿದ ಹಲವಾರು ಉದ್ಯಾನವನಗಳಿವೆ. ಅಮೇರಿಕ ಪ್ರದೇಶದ ಕ್ಲೆಟನ್ ಸಮೀಪದಲ್ಲಿ ಅತ್ಯಂತ ಪುರಾತನ ಬೋಟ್ ಸಂಗ್ರಹಾಲಯವಿದೆ. ಇವೆಲ್ಲ ಕಾರಣಗಳಿಂದ, ಈ ನೈಸರ್ಗಿಕ ಅದ್ಭುತ ಮತ್ತು ಸಾಂಸ್ಕೃತಿಕ ಸಂಪತ್ತಿಗೆ, ಯುನೆಸ್ಕೊ ಸಂಸ್ಥೆಯ ವಿಶ್ವ ಪರಂಪರೆಯ ಸ್ಥಾನಮಾನ ಸಿಕ್ಕಿದೆ. ಮತ್ತು ಈ ಪ್ರದೇಶದ ಅಭಿವ್ರುದ್ಧಿ ಮತ್ತು ವಿಕಾಸಕ್ಕಾಗಿ ಎರಡೂ ದೇಶಗಳ ಜಂಟಿ ಆಶ್ರಯದ ಸಂಸ್ಥೆಯೊಂದು ಶ್ರಮಿಸುತ್ತಿದೆ.

ಫಲವತ್ತಾದ ಇಲ್ಲಿನ ಪ್ರದೇಶದಲ್ಲಿ ಸಾಕಷ್ಟು ವೈನ್ ತಯಾರಿಕಾ ಕೇಂದ್ರಗಳಿವೆ. ಹಾಗಾಗಿ ಕೆಲವು ವರ್ಷಗಳಿಂದ ನ್ಯೂಯಾರ್ಕ್ ರಾಜ್ಯದ ಕ್ಲೆಟನ್, ಅಲೆಕ್ಸಾಂಡ್ರಿಯ, ಮತ್ತಿತರ ದ್ವೀಪಗಳಲ್ಲಿ ವೈನ್ ಪ್ರವಾಸ ಜನಪ್ರಿಯವಾಗುತ್ತಿದೆ. ಸುಮಾರು 50 ಡಾಲರ್ ಕೊಟ್ಟು ಬುಕ್ ಮಾಡಿದರೆ ಸಾಕು; ಬೆಳಗಿನಿಂದ ಸಂಜೆಯವರೆಗೆ ನಿಮ್ಮ ಪ್ರಯಾಣ, ಊಟದ ಖರ್ಚಿನ ಜೊತೆಗೆ ವೈನ್ ರುಚಿಯನ್ನು ಅನುಭವಿಸುವ ಅವಕಾಶವಿರುತ್ತದೆ; ಮತ್ತು ನಿಮಗಿಷ್ಟವಾದ ವೈನ್ ಖರೀದಿಸಬಹುದು.

ಅತ್ಯಂತ ಚಿಕ್ಕ ಅಂತರರಾಷ್ಟ್ರೀಯ ಸೇತುವೆ!

ಕೆನಡ ಪ್ರದೇಶದ ಜûವಿಕಾನ್ ದ್ವೀಪದಲ್ಲಿ ಪುಟ್ಟದಾದ ಅವಳಿ ದ್ವೀಪಗಳಿವೆ. ಈ ದ್ವೀಪಗಳ ನಡುವೆ ಓಡಾಡಲು ಕೇವಲ 32 ಅಡಿ ಉದ್ದದ ಕಾಲುಸೇತುವೆ ಇದೆ. ಇದರಲ್ಲಿ ಸ್ವಲ್ಪ ದೊಡ್ಡ ದ್ವೀಪ ಕೆನಡ ಮತ್ತು ಸಣ್ಣ ದ್ವೀಪ ಅಮೇರಿಕ ದೇಶಗಳಿಗೆ ಸೇರಿದೆಯೆಂದೂ, ಈ ಕಾಲುಸೇತುವೆ ಅತ್ಯಂತ ಚಿಕ್ಕದಾದ ಅಂತರರಾಷ್ಟ್ರೀಯ ಸೇತುವೆಯೆಂದೂ, ಇಲ್ಲಿನ ಪ್ರವಾಸೀ ಉದ್ದಿಮೆಯ ವ್ಯಾಪಾರಿಗಳು ಬಲವಾಗಿ ಪ್ರಚಾರ ಮಾಡುತ್ತಾರೆ. ಆದರೆ ಇದನ್ನು ನಂಬಬೇಡಿ; ಎರಡೂ ದ್ವೀಪಗಳೂ ಕೆನಡ ಪ್ರದೇಶದಲ್ಲಿದೆಯಾದ್ದರಿಂದ, ಇದೊಂದು ಬರೀ ಕಟ್ಟುಕತೆ!

ಅಭಿರುಚಿಯಂತೆ ಸವಲತ್ತುಗಳು, ಅಪಾರವಾದ ಆಯ್ಕೆಗಳು

ಮಧುಚಂದ್ರದಂತ ಅತ್ಯಂತ ವೈಯಕ್ತಿಕ ಅನುಭವಗಳಿಗೂ, ಏಕಾಂತ ಬಯಸುವ ಹಲವಾರು ಕ್ರಿಯಾತ್ಮಕ ಕಾರ್ಯಗಳಿಗೂ ಈ ದ್ವೀಪಗಳು ಸೂಕ್ತ. ಇಂಥ ರಮಣೀಯ ಸ್ಥಳದಲ್ಲಿ ನಿಮ್ಮ ಸಂಗಾತಿಯ ಜೊತೆ ಮನಸ್ಸಿಚ್ಛೆಯಿರುವಷ್ಟು ದೋಣಿ ವಿಹಾರ ಮಾಡಬಹುದು; ಇಲ್ಲಿರುವ ಸ್ಪಾಗಳಲ್ಲಿ ವಿಶ್ರಮಿಸಬಹುದು; ಬಂಗಲೆಯ ಹೊರಗೆ ನಿರ್ಮಲವಾದ ತಂಗಾಳಿಯಲ್ಲಿ, ನಿಮ್ಮ ಮೆಚ್ಚಿನ ಕಾದಂಬರಿಯನ್ನು ಓದಬಹುದು. ಪರಸ್ಪರ ಕೈ ಹಿಡಿದು ‘ಈ ಸಮಯ ಶೃಂಗಾರಮಯ…’ ಎಂದು ಸಮೃದ್ಧಿಯಾದ ಪ್ರಕೃತಿಯ ಏಕಾಂತದಲ್ಲಿ, ಅಡ್ಡಾಡುತ್ತಾ ಡುಯೆಟ್ ಹಾಡಬಹುದು.

ಇದಷ್ಟೇ ಅ¯್ಲ! ನೀವು ಕ್ರೀಡಾ ಪ್ರೇಮಿಗಳಾದರೆ ಇಲ್ಲಿ ನಿಮಗಿಷ್ಟವಾಗುವ ಅನೇಕ ಸಾಹಸ, ಜಲಕ್ರೀಡೆಗಳಿವೆ. ಅಥವಾ ಈ ಕ್ರೀಡೆಗಳನ್ನು ಕಲಿಯುವ ಆಸಕ್ತಿಯಿದೆಯೇ? ಅದಕ್ಕೂ ಇಲ್ಲಿ ವ್ಯವಸ್ಥೆಯಿದೆ. ನೀವು ಗಾಲ್ಫ್ ಪ್ರೇಮಿಗಳೇ? ಇಲ್ಲಿ ಗಾಲ್ಫ್ ಕ್ಲಬ್, ರೆಸಾರ್ಟ್‍ಗಳಿರುವ ಅನೇಕ ದ್ವೀಪಗಳಿವೆ. ಹಾಗೆಯೇ ಇಲ್ಲಿ ನೀವು ಫಿûಶಿಂಗ್ ಮಾಡಬಹುದು; ನೀವೇ ಹಿಡಿದ ಮೀನು ಇತ್ಯಾದಿಗಳಿಂದ ರುಚಿಕರ ಬಾರ್ಬಿಕ್ಯು ಮಾಡಬಹುದು. ಒಂದು ವೇಳೆ ಬಂಗಲೆಯಲ್ಲಿ ಅಡುಗೆ ಮಾಡಲು ಆಲಸ್ಯವೇ ಅಥವಾ ರೆಸ್ಟೋರೆಂಟಿನ ತಿಂಡಿತಿನಿಸು ಬೇಸರವಾಯಿತೇ? ಚಿಂತೆಯಿಲ್ಲ, ಸುತ್ತಮುತ್ತಲಿನ ರೆಸ್ಟೋರೆಂಟ್‍ಗಳಿಗೆ ಭೇಟಿ ನೀಡಿ ವೈವಿಧ್ಯಮಯ ಅಂತರಾಷ್ಟ್ರೀಯ ಅಡುಗೆಗಳನ್ನ್ನು ಆಸ್ವಾದಿಸಬಹುದು. ಇಷ್ಟಾದರೂ, ಅಲೆಕ್ಸಾಂಡ್ರಿಯ ನಗರದ ಸಮೀಪ, ಭಾರತೀಯ ಶೈಲಿಯ ರೆಸ್ಟೋರೆಂಟ್ ಸಹ ಇದೆ.
ಈ ದ್ವೀಪಗಳಿಗೆ ಕೆನಡ ಮತ್ತು ಅಮೇರಿಕ ದೇಶಗಳ ಎರಡೂ ಕಡೆಯಿಂದ ಪ್ರವೇಶಾಕಾಶವಿರುವುದರಿಂದ ನ್ಯೂಯಾರ್ಕ್ ಅಥವಾ ನ್ಯೂಜರ್ಸಿಯಿಂದ ಹಡಗಿನಲ್ಲಿ, ಖಾಸಗೀ ವಾಹನಗಳಲ್ಲಿ ಅಥವಾ ಟೊರೊಂಟೊ, ಒಟಾವ ನಗರಗಳಿಂದ ಸುಲಭವಾಗಿ ತಲಪಬಹುದು. ರಸ್ತೆ, ರೈಲು, ಮತ್ತಿತರ ಮೂಲಭೂತ ವ್ಯವಸ್ಥೆಗಳ ಉತ್ತಮ ಸಂಪರ್ಕವಿರುವುದರಿಂದ, 1000 ಐಲಾಂಡ್ಸ್ ಪ್ರದೇಶವನ್ನು ತಲಪಲು ಎರಡೂ ದೇಶಗಳ ನಿವಾಸಿಗಳಿಗೂ ಮತ್ತು ಪ್ರವಾಸಿಗಳಿಗೂ ಅನುಕೂಲ. ನಿಮ್ಮಲ್ಲಿ ಎರಡೂ ದೇಶದ ವೀಸ ಇದ್ದರೆ ಒಳ್ಳೆಯದು; ಇಲ್ಲದಿದ್ದರೂ ಚಿಂತಿಸುವ ಅಗತ್ಯವಿಲ್ಲ. ದ್ವೀಪಗಳಲ್ಲಿ ಇಳಿಸದೆ, ಸುತ್ತಾಡಿಸಿ ಈ ದ್ವೀಪಗಳ ವಿಶಾಲವಾದ ಅನುಭವವನ್ನು ನೀಡುವ ವ್ಯವಸ್ಥೆ ಇದೆ. ಇಲ್ಲಿ ಉಳಿದುಕೊಳ್ಳಲು, ನಿಮಗೆ ಹಿಡಿಸುವ, ಕಿಸೆಗೆ ಎಟಕುವ ಹೋಟೆಲ್ ಅಥವಾ ಖಾಸಗೀ ದ್ವೀಪವನ್ನು, ಪ್ರವಾಸೀ ಏಜೆಂಟರ ಅಥವಾ ಇಂಟರ್ನೆಟ್ ಮುಖಾಂತರ ಕಾಯ್ದಿರಿಸಿಕೊಳ್ಳಬಹುದು. ಹಾಗೂ, ನ್ಯೂಯಾರ್ಕಿನಿಂದ ನಯಾಗರ ಜಲಪಾತ ಮತ್ತು 1000 ಐಲಾಂಡ್ಸ್‍ಗೆ ಎರಡು ದಿನಗಳ ಪ್ರವಾಸಕ್ಕೆ ಕೇವಲ 112 ಡಾಲರ್ ಮಾತ್ರ-ಪ್ರಯಾಣ ಮತ್ತು ಹೋಟೆಲ್ ವೆಚ್ಚ ಸೇರಿದಂತೆ; ನೀವು ನೋಡಲು ಬಯಸುವ ಆಕರ್ಷಣೆಗಳ ಪ್ರವೇಶ ಶುಲ್ಕವನ್ನು ಬಿಟ್ಟು. ಈ ಪ್ರಯಾಣಕ್ಕೆ ಅಮೇರಿಕ ವೀಸ ಇದ್ದರೆ ಸಾಕು; ಕೆನಡ ವೀಸಾದ ಅಗತ್ಯವಿಲ್ಲ. ಇದೇ ರೀತಿ ಕೆನಡ ಪ್ರದೇಶಗಳಿಂದಲೂ ಅಮೇರಿಕ ವೀಸ ಅಗತ್ಯವಿಲ್ಲದ ಪ್ಯಾಕೇಜ್ ಟೂರ್‍ಗಳು ಲಭ್ಯ. ಈ ಪ್ರದೇಶದಲ್ಲಿ ನವೆಂಬರ್‍ನಿಂದ ಫೆಬ್ರವರಿಯವರೆಗೆ ಕೊರೆಯುವ ಚಳಿ; ಬೇರೆಲ್ಲ ತಿಂಗಳುಗಳಲ್ಲಿ ಪ್ರವಾಸಕ್ಕೆ ಸೂಕ್ತ.

ಈ ಪುಟ್ಟ ದ್ವೀಪಗಳನ್ನಾವರಿಸಿದ ಶುಭ್ರ ನೀರಿನ ನಿರಂತರ ಅಲೆಗಳ ನಾದದಲ್ಲಿ, ಉದಯಿಸುವ ಸೂರ್ಯನ ಕಿರಣದ ಸ್ಪರ್ಶದ ಹಿತ; ಸಂಜೆಗೆಂಪಿನ ತಂಗಾಳಿಯಲ್ಲಿ ಚಂದ್ರ ಮೂಡುತ್ತಿದ್ದಂತೆ, ಸಂಗಾತಿಯ ಒಲವಿನ, ಬೆಚ್ಚನೆಯ ಸ್ಪರ್ಷದ ಹಿತ. ನಿಜಕ್ಕೂ 1000 ಐಲಾಂಡ್ಸ್‍ನಲ್ಲಿ ಪ್ರೀತಿ ಸ್ವಾಭಾವಿಕವಾಗಿ ಮೂಡುತ್ತದೆ; ಒಲವು ನಮಗರಿಯದೆಯೇ ಬೆಳೆಯುತ್ತದೆ; ಇಲ್ಲಿನ ವಾತಾವರಣವೇ ಹಾಗೆ. ಹಾಗಾಗಿಯೇ, 1000 ಐಲಾಂಡ್ಸ್ ಪ್ರೇರೇಪಿಸಿದ ಪ್ರೇಮ ಕತೆಗಳು ಸಾವಿರಾರು. ಜಾರ್ಜ್ ಮತ್ತು ಲೂಯಿಸ್ ಬೋಲ್ಡ್ಟ್‍ರವರ ಅನುರಾಗ, ಅವರು ಕಟ್ಟಿದ ಕನಸಿನ ಅರಮನೆ, ಈ ಸಾವಿರಾರು ಪ್ರೇಮ ಕತೆಗಳಿಗೆ ಜೀವಂತ ಸಾಕ್ಷಿ. ಆದ್ದರಿಂದ, 1000 ಐಲಾಂಡ್ಸ್ ಪ್ರೀತಿ-ಪ್ರಣಯಕ್ಕೂ, ಮದುವೆ-ಮಧುಚಂದ್ರಕ್ಕೂ, ಸೂಕ್ತವೆಂದು ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ.

ಸ್ಪೀಡ್‍ಬೋಟಿನಲ್ಲಿ ನನ್ನವರೊಡನಿದ್ದರೂ, ನನ್ನ ಕನಸಿನ ಲೋಕದಲ್ಲಿ ಮುಳುಗಿ, ಸಮಯ ಸರಿದದ್ದೇ ತಿಳಿಯಲಿಲ್ಲ. ಲಾರೆಂಸ್ ನದಿಯ ನೀರನ್ನು ಸ್ಪೀಡ್‍ಬೋಟಿನ ಅಬ್ಬರ ಹಿನ್ನುಗ್ಗಿಸಿ, ಅಲೆಗಳ ಸಂಘರ್ಷದ ಸುರುಳಿಯನ್ನೆಬ್ಬಿಸಿತ್ತು. ಜಲರಾಶಿಯ ಮಧ್ಯೆ ಪುಟಿದೆದ್ದ ಸಾವಿರಾರು ದ್ವೀಪಗಳು ನನ್ನ ಮನಸಿನ ಸ್ಮೃತಿಪಟಲದ ಮೇಲೆ ಅಗಾಧವಾದ ಪ್ರಭಾವವನ್ನು ಮೂಡಿಸಿತ್ತು. ನಮ್ಮ ಮಧುಚಂದ್ರದ ಸುಂದರ ನೆನಪುಗಳನ್ನುಮೆಲುಕುಹಾಕಲು, ಮತ್ತೊಮ್ಮೆ ಸಾವಿರ ದ್ವೀಪಗಳ ಈ ನಾಡಿಗೆ ಬರಲು, ಮನಸ್ಸು ನಿಶ್ಚಯಿಸಿತ್ತು.

ಒಮ್ಮೆ ಕಣ್ಣುಮುಚ್ಚಿ ಊಹಿಸಿ; ಯೋಚಿಸಿ. ನಮ್ಮ ಸುಂದರ ಕನಸುಗಳನ್ನು ನನಸಾಗಿಸುವ, ಈ ಸೋಜಿಗ ಜಗತ್ತಿಗೆ ಹೋಗಲು ಕಾರಣಗಳೇ ಬೇಕಿಲ್ಲ.

1000 ದ್ವೀಪಗಳ ಆಕರ್ಷಣೆಗಳು

ಹಾರ್ಟ್ ಐಲಾಂಡ್
[ಅಮೇರಿಕ]
ಬೋಲ್ಡ್ಟ್ ಕ್ಯಾಸೆಲ್, ಇಟಾಲಿಯನ್ ಉದ್ಯಾನವನ, ಪವರ್ ಹೌಸ್,
ಕ್ಲೆಟನ್ [ಅಮೇರಿಕ]ಬೋಟ್ ಮ್ಯೂಸಿಯಮ್, 1000 ಐಲಾಂಡ್ಸ್ ಮ್ಯೂಸಿಯಮ್, ಆರ್ಟ್ ಸೆಂಟರ್,
ಬ್ರೊಕ್‍ವಿಲ್ [ಕೆನಡ]ಜಲ ಕ್ರೀಡೆಗಳು, ಗಾಲ್ಫ್, ಪ್ರಾಚೀನ ಕಲಾಕೃತಿಗಳು
ಗನನೋಕ್ವೆ [ಕೆನಡ]ಜಲ ಕ್ರೀಡೆಗಳು, ನಾಟಕಗಳು, ಗಾಲ್ಫ್, ಕಸಿನೊ, ಬೋಲ್ಡ್ಟ್ ಕ್ಯಾಸೆಲ್ ಪ್ರವಾಸ
ಅಲೆಕ್ಸಾಂಡ್ರಿಯ [ಅಮೇರಿಕ]ಬೋಟಿಂಗ್, ಹೆಲಿಕಾಪ್ಟರ್ ಸವಾರಿಗಳು, ಬೋಲ್ಡ್ಟ್ ಕ್ಯಾಸೆಲ್ ಪ್ರವಾಸ, ಟೆನ್ನಿಸ್, ರೆಸ್ಟೋರೆಂಟ್‍ಗಳು
ಕಿಂಗ್‍ಸ್ಟನ್ [ಕೆನಡ]ಬೋಟಿಂಗ್, ಟ್ರಾಲಿ ಟೂರ್, ¥sóÉÇೀರ್ಟ್ ಹೆನ್ರಿ, ರೆಸ್ಟೋರೆಂಟ್‍ಗಳು, ಡಿನ್ನರ್ ಕ್ರೂಸ್,
ಜûವಿಕಾನ್ ದ್ವೀಪ [ಕೆನಡ]ಅವಳಿ ದ್ವೀಪಗಳು,  ಕೇವಲ 32 ಅಡಿಯ ಸೇತುವೆ
ಅಂತರರಾಷ್ಟ್ರೀಯ ಸೇತುವೆಕೆನಡ/ಅಮೇರಿಕ ದೇಶಗಳ ನಡುವಿನ ಸೇತುವೆ. ಪಾದಚಾರಿ ಮಾರ್ಗವಿದೆ.

1000 ಐಲಾಂಡ್ಸ್ [ಅಮೇರಿಕ/ಕೆನಡ]

ದ್ವೀಪಗಳುಒಟ್ಟು 1793
ಹತ್ತಿರದ ನಗರಗಳು ಮತ್ತು ಪ್ರಯಾಣದ ಸಮಯಬಫೆಲೊ [4 ಗಂಟೆ] ನ್ಯೂಯಾರ್ಕ್ [6.5 ಗಂಟೆ] ಟೊರೊಂಟೊ [ 3 ಗಂಟೆ] ಮಾಂಟ್ರೀಲ್ [2.5 ಗಂಟೆ]
ವಾತಾವರಣಕನಿಷ್ಠ -15 ಡಿ. ಸೆಂ. [ಜನವರಿ];
ಗರಿಷ್ಠ +25 ಡಿ.ಸೆಂ.[ಜುಲೈ]
ಸ್ಥಳೀಯ ಸಮಯGMT -5 hours
IST -10.5 hours
ಹೋಟೆಲ್ [ಇಬ್ಬರಿಗೆ]ದಿನಕ್ಕೆ $90 ರಿಂದ
ದ್ವೀಪಗಳ ಬಂಗಲೆಗಳು
[4 ಜನರಿಗೆ]
ವಾರಕ್ಕೆ $600 ರಿಂದ
ಕ್ಯಾಂಪಿಂಗ್ [ 4 ಜನರಿಗೆ]ದಿನಕ್ಕೆ $25 ರಿಂದ
ಅಂದಾಜು ಪ್ರಯಾಣದ ವೆಚ್ಚ
ಬೆಂಗಳೂರು-ಟೊರೊಂಟೊ -ಬೆಂಗಳೂರು
ಬೆಂಗಳೂರು – ನ್ಯೂಯಾರ್ಕ್ – ಬೆಂಗಳೂರು
Rs 69,000 – Rs 58,000
ಹೆಚ್ಚಿನ ಮಾಹಿತಿwww.visit1000islands.com
www.1000islandsinfo.com

ಪ್ರಪಂಚದ ಕೆಲವು ದ್ವೀಪ ರಾಷ್ಟ್ರಗಳು

ರಾಷ್ಟ್ರಗಳುದ್ವೀಪಗಳ ಸಂಖ್ಯೆ
ಇಂಡೋನೇಶಿಯ17508
ಫಿಲಿಪ್ಪೀನ್ಸ್7107
ಜಪಾನ್6852
ಮಾಲ್ಡೀವ್ಸ್1192
ಮಲೇಶಿಯ878

Download PDF Document

About author View all posts Author website

V Pradeep Kumar

Leave a Reply

Your email address will not be published. Required fields are marked *