ಪ್ರೇರಣೆ: ಸಿದ್ಧಿಗೆ ಸಂಜೀವಿನಿ

ವೃತ್ತಿ ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಹಂಬಲ ಅತ್ಯವಶ್ಯ. ಆ ಕನಸುಗಳನ್ನು ಸಾಕಾರಗೊಳಿಸಲು ಸಕಾರಾತ್ಮಕವಾಗಿ ಪರಿಶ್ರಮಪಡಬೇಕಾಗುತ್ತದೆ. ಈ ಪರಿಶ್ರಮಕ್ಕೆ ಪ್ರೇರಣೆಯೇ ಪ್ರಚೋದನೆ. ಉದಾಹರಣೆಗೆ ಬೋನಸ್, ಕಮೀಷನ್, ಪ್ರಶಂಸೆ, ಶ್ಲಾಘನೆಗಳು ಬಾಹ್ಯ ಪ್ರಪಂಚದ ಈ ಸಾಧನಗಳು ತಾತ್ಕಾಲಿಕ. ಮನೋವಿಜ್ಞಾನಿಗಳ ಅಭಿಪ್ರಾಯದಂತೆ ಆಂತರಿಕ ಪ್ರೇರಣೆ ಹೆಚ್ಚು ಪರಿಣಾಮಕಾರಿ ಮತ್ತು ಶಾಶ್ವತ.

ಪ್ರೇರಣೆಯನ್ನು ಬೆಳೆಸಿಕೊಳ್ಳುವುದು ಹೇಗೆ?

ಕಲಿತ ವಿದ್ಯೆಗೂ, ನಿಮ್ಮಲ್ಲಿರುವ ಕೌಶಲ್ಯಗಳಿಗೂ ಸರಿಹೊಂದುವಂತ, ನಿಮ್ಮ ಇಷ್ಟ, ಅಭಿರುಚಿಗೆ ಸ್ಪಂದಿಸುವಂತ, ವೃತ್ತಿಯನ್ನು ಗುರುತಿಸಬೇಕು. ಏಕೆಂದರೆ, ಒಲವಿಲ್ಲದ ವೃತ್ತಿ ನೀರಸಮಯ; ಅಂತಹ ವೃತ್ತಿಯಲ್ಲಿ ಯಶಸ್ಸು ಅಸಾಧ್ಯ. ಆದ್ದರಿಂದ, ಮೊಟ್ಟಮೊದಲ ಹೆಜ್ಜೆಯೆಂದರೆ, ನಿಮಗೆ ಒಲವಿರುವಂತಹ, ನಿಮ್ಮ ಸ್ವಾಭಾವಿಕ ಪ್ರತಿಭೆ ಅರಳುವಂತಹ ವೃತ್ತಿಯನ್ನು ಆರಿಸಿಕೊಳ್ಳಿ.

ಉದಾಹರಣೆಗೆ, ಮಾಹಿತಿ ತಂತ್ರಜ್ಞಾನ ದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಿದೆ. ಈ ಕ್ಷೇತ್ರದ ಯಶಸ್ಸಿಗೆ ಅಗತ್ಯವಾದ ವಿದ್ಯೆ, ಬೌದ್ಧಿಕ ಸಾಮಥ್ರ್ಯವನ್ನು ಬೆಳೆಸಿಕೊಳ್ಳಿ. ಈ ಕ್ಷೇತ್ರದಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ಗುರಿಗಳನ್ನು ನಿರ್ಧರಿಸಿ. ಸುಮಾರು ಹತ್ತು ವರ್ಷಗಳಲ್ಲಿ, ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರ ಮುಖ್ಯಸ್ಥರಾಗಬೇಕೆನ್ನುವ ಧ್ಯೇಯ ನಿಮ್ಮದಾದರೆ, ಗುರಿಯನ್ನು ಸಾಧಿಸಿದ ಬಳಿಕ ನಿಮಗೂ, ನಿಮ್ಮ ಕುಟುಂಬಕ್ಕೂ ಸಿಗುವ ಪ್ರಯೋಜನ, ಜೀವನ ಶೈಲಿ, ಅಂತಸ್ತು, ಸ್ಥಾನಮಾನಗಳ ಬಗ್ಗೆ ಯೋಚಿಸಿ. ಈ ರೀತಿ, ಯಾವುದೇ ವೃತ್ತಿಯನ್ನು ಅನುಸರಿಸುವುದರಿಂದಾಗುವ ವೈಯಕ್ತಿಕ, ಕೌಟುಂಬಿಕ, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗಳೇ ಯಶಸ್ಸಿನ ಅಳತೆಗೋಲುಗಳೇ ಎಂದು ನಿರ್ಧರಿಸಿ. ವೃತ್ತಿಯ ವಿವಿಧ ಹಂತಗಳನ್ನು ತಲುಪಿದ್ದಂತೆ, ಈ ಅಳತೆಗೋಲುಗಳು ಬದಲಾಗಿ ಮೇಲ್ಮಟ್ಟದ, ಆದರ್ಶಪ್ರಾಯ ಗುರಿಯತ್ತ ನಾವು ಶ್ರಮಿಸಬೇಕು. ಇದೇ ವೃತ್ತಿಪರತೆಯ ಮುಖ್ಯ ಲಕ್ಷಣ.

ಬದುಕಿನಲ್ಲಿ ನಾವು ಏನನ್ನು ನೋಡಬಯಸುತ್ತೇವೋ, ಅದೇ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಾಣುತ್ತದೆ. ಆದ್ದರಿಂದಲೇ ಸಕಾರಾತ್ಮಕ ದೃಷ್ಟಿಕೋನ ಉಳ್ಳವರಾಗಬೇಕು ಮತ್ತು ನಿಮ್ಮ ಸಾಮಥ್ರ್ಯದಲ್ಲಿ ನಂಬಿಕೆ, ವಿಶ್ವಾಸವನ್ನು ಇಟ್ಟುಕೊಳ್ಳಬೇಕು.
ಮನೋವಿಜ್ಞಾನಿಗಳ ಅಭಿಪ್ರಾಯದಂತೆ ಸ್ವ-ಸಲಹೆಗಳು [Auto Suggestion], ಆಂತರಿಕ ಪ್ರೇರಣೆಗೆ ಪ್ರಯೋಜನಕಾರಿ. ಉದಾಹರಣೆಗೆ, ‘ನಾನು ಶ್ರದ್ಧೆಯಿಂದ ಪ್ರತಿನಿತ್ಯ ಅಭ್ಯಾಸ ಮಾಡಿದರೆ ಈ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಲ್ಲೆ’, ‘ಏಷ್ಟೇ ಕಷ್ಟವಾದರೂ ನಾನು ನನ್ನ ವೃತ್ತಿಯ ಗುರಿಯಿಂದ ವಿಮುಖನಾಗುವುದಿಲ್ಲ’, ಎನ್ನುವ ಚಿಂತನೆಗಳು ನಿಮಗೆ ಪ್ರೇರಣಕಾರಿ.

ಸಾಧಕರ ಕಥೆಗಳು ಪ್ರೇರಣಕಾರಿ

ಮಹಾತ್ಮ ಗಾಂಧಿಯವರ ಆತ್ಮಕಥೆ ಎಲ್ಲರಿಗೂ ತಿಳಿದಿದೆ. ದೇಶಕ್ಕೆ ಸ್ವಾತಂತ್ರ ತಂದುಕೊಡುವ ಅವರ ಕಠಿಣ ಪರಿಶ್ರಮದ ಹಿಂದೆ, ಆಂತರಿಕ ಪ್ರೇರಣೆ ಪ್ರಮುಖವಾಗಿತ್ತು. ಅದೇ ರೀತಿ ಸ್ವಾಮಿ ವಿವೇಕಾನಂದ, ಎ.ಪಿ.ಜೆ. ಅಬ್ದುಲ್ ಕಲಾಮ್, ಎನ್.ಆರ್. ನಾರಾಯಣಮೂರ್ತಿ, ಸ್ಟೀವ್ ಜಾಬ್ಸ್, ಬಿಲ್ ಗೇಟ್ಸ್‍ರಂತಹ ಮಹಾನ್ ಸಾಧಕರ ಕಥೆಗಳು ಕುತೂಹಲಕಾರಿ ಮತ್ತು ಪ್ರೇರಣಕಾರಿ. ಹೊರನೋಟಕ್ಕೆ ಗೋಚರಿಸದ ಅವರ ಸಾಧನೆಯ ಹಿಂದಿನ ಒಳಗುಟ್ಟನ್ನು ಅರಿಯಲು, ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡಿ.

ಯಶಸ್ಸಿನ ಸೂತ್ರಗಳನ್ನು ಪ್ರತಿಬಿಂಬಿಸುವಂತ ಪುಸ್ತಕಗಳು ಮತ್ತು ಚಲನಚಿತ್ರಗಳು ಈಗ ಮಾರುಕಟ್ಟೆಯಲ್ಲಿವೆ. ಸಾಧಕರ ಸ್ಪೂರ್ತಿಯುತ ಕಥೆಗಳು, ವಿಡಿಯೋ, ಚಲನಚಿತ್ರಗಳು, ನಿಮ್ಮಲ್ಲಿಯೂ ಸಾಧಿಸುವ ಛಲ ಹುಟ್ಟಿಸುತ್ತದೆ. ಇಂತಹ ಆಸಕ್ತಿ, ಅಭಿರುಚಿಗಳಿಂದ ಆಂತರಿಕ ಪ್ರೇರಣೆ ಸೃಷ್ಟಿಯಾಗುತ್ತದೆ. ವ್ಯಕ್ತಿತ್ವ ತರಬೇತಿ ಶಿಬಿರಗಳಲ್ಲಿ ವಿಡಿಯೋ, ಚಲನಚಿತ್ರಗಳ ಭಾಗಗಳನ್ನು ವೀಕ್ಷಿಸಿ, ಸಂವಹನ ಕೌಶಲ, ಮನೋಭಾವ, ಪ್ರೇರಣೆ ಇತ್ಯಾದಿಗಳ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿ, ವ್ಯಕ್ತಿತ್ವದಲ್ಲಿ ಈ ಅಂಶಗಳನ್ನು ಅಳವಡಿಸಿಕೊಳ್ಳುವಂತೆ ಉತ್ತೇಜಿಸಲಾಗುತ್ತದೆ.

ನಿಮ್ಮಲ್ಲಿದೆ ಅಪಾರ ಶಕ್ತಿ

ಪ್ರಸಿದ್ಧ ಇಂಗ್ಲೀಷ್ ಲೇಖಕ ನೆಪೋಲಿಯನ್ ಹಿಲ್, ಕಳೆದ ಶತಮಾನದ ಸುಮಾರು 500ಕ್ಕೂ ಹೆಚ್ಚಿನ ಸಾಧಕರನ್ನು ಭೇಟಿ ಮಾಡಿ, ಅವರ ಯಶಸ್ಸಿನ ಸೂತ್ರಗಳನ್ನು ಅರಿತು, ‘ಥಿಂಕ್ ಅಂಡ್ ಗ್ರೊ ರಿಚ್’ ಎಂಬ ಅದ್ಭುತ ಪುಸ್ತಕವನ್ನು 1937ರಲ್ಲಿ ಪ್ರಕಟಿಸಿದ್ದರು. ಈವರೆಗೂ, ಈ ಪುಸ್ತಕದ ಸುಮಾರು 20ದಶಲಕ್ಷ ಪ್ರತಿಗಳು ಮಾರಾಟವಾಗಿದೆಯೆಂದು ಹೇಳಲಾಗುತ್ತದೆ. ನೆಪೋಲಿಯನ್ ಹಿಲ್‍ರವರ ಅಭಿಪ್ರಾಯದಂತೆ ನಿರಂತರವಾದ ಚಿಂತನೆಯಿಂದ ಗುರಿ, ಯೋಜನೆಗಳು ಸ್ಪಷ್ಟ ರೂಪ ತಳೆಯುತ್ತದೆ.

ಸಾಧನೆಯ ಹಾದಿಯಲ್ಲಿನ ಕಷ್ಟಗಳನ್ನೂ, ಸವಾಲುಗಳನ್ನೂ ಎದುರಿಸಿದಾಗ, ಪ್ರತಿಯೊಂದು ಹಂತವನ್ನು ಸೇರಿದಾಗ, ಆತ್ಮತೃಪ್ತಿಯುಂಟಾಗಿ, ಮೈಮನಗಳು ತಣಿದು, ಮುಂದಿನ ಹಂತಕ್ಕೆ ಸಜ್ಜಾಗುತ್ತೀರಿ.

ಆದ್ದರಿಂದ, ಕೆಲಸಗಳನ್ನು ಮಾಡಬೇಕಾದಾಗ ಆಲಸ್ಯದಿಂದ ಮುಂದೂಡುವುದು, ನಾಳೆ ಮಾಡಬಹುದೆಂಬ ಮನೋಧರ್ಮ ನಕಾರಾತ್ಮಕ. ಪ್ರಸಿದ್ಧ ಉದ್ಯಮಿ ವಾಲ್ಟ್ ಡಿಸ್ನಿ ಹೇಳಿರುವಂತೆ, “ನಾವು ನಿನ್ನೆಯದನ್ನು ಬದಲಿಸಲಾಗುವುದಿಲ್ಲ; ಏನು ಮಾಡುವುದಿದ್ದರೂ ಇಂದೇ ಮಾಡಬೇಕು. ನಾಳೆಯತ್ತ, ನಾವು ಇಟ್ಟುಕೊಳ್ಳಬೇಕಾಗಿರುವುದು ಆಶಯವಷ್ಟೇ”.
ಜೀವನದಲ್ಲಿ ಅಸಾಧ್ಯವೆನ್ನುವುದು ಯಾವುದೂ ಇಲ್ಲ; ಏಕೆಂದರೆ, ನಿಮ್ಮ ಅಂತರಂಗದ ಆಳದಲ್ಲಿದೆ ಅಪಾರ ಶಕ್ತಿ; ಅದರ ಮೂಲವೇ ಆಂತರಿಕ ಪ್ರೇರಣೆ.

Download PDF Document

                        

About author View all posts Author website

V Pradeep Kumar

Leave a Reply

Your email address will not be published. Required fields are marked *