ಮನಸ್ಸಿದ್ದರೆ ಮಾರ್ಗ

ಮನಸ್ಸಿದ್ದರೆ ಮಾರ್ಗವೆಂಬುದು ಜನಪ್ರಿಯ ನುಡಿಗಟ್ಟು ಮಾತ್ರವಲ್ಲ; ಅದರಲ್ಲಿದೆ ಮಾನವನ ಅಂತರಾಳದಲ್ಲಿರುವ ಅಪಾರವಾದ ಶಕ್ತಿಯನ್ನು ಕೇಂದ್ರೀಕರಿಸಿ, ಗುರಿಯನ್ನು ಮುಟ್ಟುವ ಗುಟ್ಟು. ಆದರೂ, ಅದೇಕೆ ಎಲ್ಲರಿಗೂ ತಮ್ಮ ಗುರಿಯನ್ನು ಸೇರಲಾಗುವುದಿಲ್ಲ?

ಕಳೆದ ಶತಮಾನದ ಪ್ರಭಾವೀ ಲೇಖಕರಲ್ಲೊಬ್ಬರಾದ ನೆಪೋಲಿಯನ್ ಹಿಲ್ ಸುಮಾರು 500 ಸಾಧಕರೊಡನೆ ನಡೆಸಿದ ಸಂಶೋಧನೆಯ ನಂತರ ಬರೆದ, ‘ಥಿಂಕ್ ಅಂಡ್ ಗ್ರೋ ರಿಚ್’ ಪುಸ್ತಕದಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆ. ಅವರ ಪ್ರಕಾರ, ಸುಮಾರು 98% ಜನರಲ್ಲಿ ತಮ್ಮ ಸಾಮಥ್ರ್ಯದ ಅರಿವು ಮತ್ತು ವಿಶ್ವಾಸವೇ ಇರುವುದಿಲ್ಲ. ಹಾಗಾಗಿ, ಅಂತಹವರು ತಮ್ಮ ಗುರಿಯತ್ತ ಪ್ರಯತ್ನವನ್ನೇ ಮಾಡುವುದಿಲ್ಲ.

ಜೀವನದ ಸವಾಲುಗಳು

ಮಾನವನ ಚೈತನ್ಯಕ್ಕೆ, ಬುದ್ಧಿಶಕ್ತಿಗೆ ಮಿತಿಯಿಲ್ಲ; ಇಲ್ಲದ ಆ ಮಿತಿಯನ್ನು ನಕಾರಾತ್ಮಕ ಆಲೋಚನೆಗಳಿಂದ ನಾವೇ ಸ್ವತಃ ನಿರ್ಮಿಸುತ್ತೇವೆ. ಇದನ್ನು ತಡೆಯಲು, ಕನಸುಗಳು ಮಹತ್ವಾಕಾಂಶೆಯಾಗಬೇಕು. ಸಾಮಾನ್ಯವಾಗಿ, ಜೀವನದಲ್ಲಿ ಈ ಸವಾಲುಗಳು ಸ್ವಾಭಾವಿಕ:

  • ಅಭಿರುಚಿ ಮತ್ತು ಆಸಕ್ತಿಗೆ ಅನುಗುಣವಾಗಿ ವೃತ್ತಿಯ ಆಯ್ಕೆ
  • ವೃತ್ತಿಗೆ ಅನುಗುಣವಾಗಿ ಕೋರ್ಸ್ ಮತ್ತು ಕಾಲೇಜ್/ಯೂನಿವರ್ಸಿಟಿ ಆಯ್ಕೆ
  • ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಂತೃಪ್ತಿ

ಈ ಸವಾಲುಗಳನ್ನು ಎದುರಿಸಲು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕಾದರೆ, ನಮ್ಮ ಪರಿಸ್ಥಿತಿ ಮತ್ತು ಪರಿಸರದ ಬಗ್ಗೆ ಸಕಾರಾತ್ಮಕ ಮನೋಭಾವವಿರಬೇಕು. ಹಾಗಾಗಿ, ಯಶಸ್ಸಿಗೆ ಸಕಾರಾತ್ಮಕ ಮನೋಭಾವವೇ ಮುಖ್ಯ.

ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಹೇಗೆ ?

ಜೀವನ ವಿಧಾನವೆಂಬ ಕೈಪಿಡಿ ಎಲ್ಲೂ ಸಿಗುವುದಿಲ್ಲ. ತಪ್ಪುಗಳಾಗುವುದು ಸಹಜ; ಆದರೆ, ತಪ್ಪುಗಳನ್ನು ಪುನರಾವರ್ತನೆಗೊಳಿಸದೆ, ಅಲ್ಪಾವಧಿಯ ಸೋಲುಗಳನ್ನು ಜೀವನದ ಪಾಠಗಳಂತೆ ಪರಿಗಣಿಸಿ, ದೀರ್ಘಾವಧಿಯ ಯಶಸ್ಸಿನತ್ತ ಗಮನ ಹರಿಸಬೇಕು.

ದೃಷ್ಟಿಕೋನವನ್ನು ಬದಲಾಯಿಸಿ

ವೈಯಕ್ತಿಕ ಸನ್ನಿವೇಶಗಳಲ್ಲಿ, ಪರಿಸರದಲ್ಲಿ ಏನನ್ನು ನೋಡಬಯಸುತ್ತೇವೆಯೋ, ಅದೇ ಕಾಣುವುದು ಸಹಜ. ಕೆಲವರಿಗಂತೂ ಬೇರೆಯವರಿಗೆ ಗೋಚರಿಸದ ತಪ್ಪುಗಳನ್ನು ಹುಡುಕುವುದೇ ಜಾಯಮಾನ; ಟೀಕೆ ಮಾಡುವುದೇ ಕಸುಬು. ಸನ್ನಿವೇಶಗಳ ಬಗ್ಗೆ, ಸಹೋದ್ಯೋಗಿಗಳ ಬಗ್ಗೆ, ಗುರಿಯ ಸಾಧನೆಯ ಬಗ್ಗೆ ಆಶಾವಾದಿಗಳಾಗಬೇಕು. ಆಗಲೇ, ಚೈತನ್ಯ ವೃದ್ಧಿಸಿ, ಸಾಮಥ್ರ್ಯದ ಸದುಪಯೋಗವಾಗಿ, ಗುರಿಯತ್ತ ನಾವು ಸಾಗಬಹುದು.

ಕೆಲಸಗಳನ್ನು ಮುಂದೂಡದಿರಿ

ಮುಂದೂಡುವ ಪ್ರವೃತ್ತಿಯಿಂದ ಕಾಲಹರಣೆಯಾಗಿ, ನಕಾರಾತ್ಮಕ ಧೋರಣೆ ಬೆಳೆಯುತ್ತದೆ; ಕಾರ್ಖಾನೆ, ಆಫೀಸ್‍ಗಳಲ್ಲಿನ ಉತ್ಪಾದಕತೆ, ಯೋಜನೆಗೆ ವ್ಯತಿರಿಕ್ತವಾಗುತ್ತದೆ; ದಕ್ಷತೆ ಕುಂಠಿತವಾಗುತ್ತದೆ.ಗಾದೆಯೊಂದರಂತೆ, ಅಂಗುಲದಷ್ಟು ಸಮಯ, ಅಂಗುಲದಷ್ಟು ಬಂಗಾರವಿದ್ದಂತೆ; ಆ ಅಂಗುಲದಷ್ಟು ಸಮಯವನ್ನು, ಅಂಗುಲದಷ್ಟು ಬಂಗಾರದಿಂದ ಕೊಳ್ಳಲು ಸಾಧ್ಯವಿಲ್ಲ. ನಿನ್ನೆಯದನ್ನು ಬದಲಿಸಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ಕೆಲಸಗಳನ್ನು ಮುಂದೂಡುವ ಆಲೋಚನೆ ಹಾನಿಕಾರಕ. ಪ್ರಾಶಸ್ತ್ಯಕ್ಕನುಗುಣವಾಗಿ ಸಮಯವೆನ್ನುವ ಅಮೂಲ್ಯವಾದ ಸಂಪನ್ಮೂಲವನ್ನು ಬಂಡವಾಳದಂತೆ ಬಳಸಿದರೆ, ಪ್ರತಿಫಲ ನಿಮ್ಮದಾಗುತ್ತದೆ.

ಕಲಿಯುವುದು ನಿರಂತರವಾಗಿರಲಿ

ಬೌದ್ಧಿಕ ಶಿಕ್ಷಣದಿಂದ ಹೆಚ್ಚಿನ ವೇತ£ದ ಕೆಲಸಗಳು ಸಿಗಬಹುದು; ಸಂತೃಪ್ತಿಯ ಜೀವನವಲ್ಲ.ಉದಾಹರಣೆಗೆ, ಮಾಹಿತಿ ತಂತ್ರಜ್ಞಾನ ಮತ್ತು ಇನ್ನಿತರ ನೂತನ ಕ್ಷೇತ್ರಗಳಲ್ಲಿ ಇಂದಿನ ಯುವಜನಾಂಗಕ್ಕೆ ಹೆಚ್ಚಿನ ಆದಾಯವಿರಬಹುದು; ಆದರೆ, ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನವಿಲ್ಲದೆ, ಪರಸ್ಪರ ಭಿನ್ನಾಭಿಪ್ರಾಯ, ವೈಮನಸ್ಯ, ಮನಸ್ತಾಪಗಳಿಂದ ಚಿಂತೆ, ಖಿನ್ನತೆಗಳಿಂದ ಬಳಲುತ್ತಿರುವುದು ಕೂಡಾ ಅಷ್ಟೇ ಸತ್ಯ.ಇಂದಿನ ಮಾಹಿತಿ ಯುಗದಲ್ಲಿ ತಂತ್ರಜ್ಞಾನ ಕ್ಷಿಪ್ರವಾಗಿ ಬದಲಾಗುತ್ತಿದೆ. ಆದ್ದರಿಂದ, ಕಲಿಕೆ ಪ್ರಸ್ತುತವಾಗಿರಬೇಕು; ನಿರಂತರವಾಗಿರಬೇಕು ಮತ್ತು ಮೌಲ್ಯಾಧರಿತವಾಗಿರಬೇಕು.

ಸ್ವಗೌರವವನ್ನು ಬೆಳೆಸಿಕೊಳ್ಳಿ

ನಿಮ್ಮ ಬಗ್ಗೆ ನಿಮಗೆ ಹೇಗೆ ಅನಿಸುತ್ತದೆ ಎನ್ನುವುದೇ ಸ್ವಗೌರವ. ನಕಾರಾತ್ಮಕ ಸ್ವಗೌರವವುಳ್ಳವರಿಗೆ ತಮ್ಮ ಬಗ್ಗೆಯೇ ಒಳ್ಳೆಯ ಅಭಿಪ್ರಾಯವಿರುವುದಿಲ!ಸಕಾರಾತ್ಮಕ ಭಾವನೆ, ಸ್ವಗೌರವವಿಲ್ಲದ ಉದ್ಯೋಗಿಗಳಿಗೆ, ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳೊಡನೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವುದು ಕ್ಲಿಷ್ಟ. ನಾವು ಆತ್ಮ ಗೌರವದಿಂದ ಆಶಾವಾದಿಗಳಾದರೆ, ಗುರಿಯತ್ತ ಕಾರ್ಯಪ್ರವೃತ್ತರಾಗಬಹುದು.ಸಕಾರಾತ್ಮಕ ಭಾವನೆಗಳನ್ನು ಹರಡಿ: ಉದ್ಯೋಗದ ವಾತಾವರಣದಲ್ಲಿ ಸದಾ ತಪ್ಪುಗಳನ್ನು ಹುಡುಕುವ, ಇಮೇಲ್, ಚಾಟ್, ಗಾಸಿಪ್‍ಗಳಲ್ಲಿಯೇ ಕಾಲಹರಣ ಮಾಡುವ, ಗಾಳಿಮಾತುಗಳನ್ನು ಪ್ರಸರಿಸುವ, ನಕಾರಾತ್ಮಕ ಭಾವನೆಗಳ, ದುಶ್ಚಟಗಳ ಸಹೋದ್ಯೋಗಿಗಳಿಂದ ದೂರವಿರಬೇಕು. ಆದ್ದರಿಂದ, ಸದ್ಗುಣ ಮತ್ತು ಸದ್ಭಾವನೆಗಳನ್ನು ಬೀರುವ ಸಹೋದ್ಯೋಗಿಗಳೊಡನೆ ನಿಕಟವಾದ ಸಂಬಂಧವಿರಲಿ. ದಕ್ಷತೆಯನ್ನು ಪ್ರಚೋದಿಸುವ ಭಾವನೆಗಳನ್ನು ಹರಡಿ, ರಚನಾತ್ಮಕವಾದ ಸಲಹೆಗಳಿಂದ ಮೇಲಧಿಕಾರಿಗಳ ಗಮನವನ್ನು ಸೆಳೆದು ವಿಶ್ವಾಸವನ್ನು ಗಳಿಸಿದರೆ, ವೃತ್ತಿಯಲ್ಲಿ ಪ್ರಗತಿ ಖಂಡಿತ.

ಬಾಳಿಗೊಂದು ಗುರಿ ಇರಲಿ

ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ನಿರ್ದಿಷ್ಟವಾದ, ಸ್ಪಷ್ಟವಾದ, ಸಾಧಿಸಬಹುದಾದ, ಮತ್ತು ಅಳೆಯಬಹುದಾದ ಗುರಿಯಿರಬೇಕು. ಏಕೆಂದರೆ, ನಾವೇನಾಗಬೇಕೆಂದು ಕಲ್ಪಿಸಿಕೊಂಡಿರುತ್ತೇವೆಯೋ, ಅದರ ಚಿತ್ರಣ ಸುಪ್ತಮನಸ್ಸಿರುತ್ತದೆ. ಆ ಸುಪ್ತಮನಸ್ಸನ್ನು ಜಾಗೃತಗೊಳಿಸಿ, ಕಾರ್ಯಪ್ರವೃತ್ತರಾದರೆ ಮಾತ್ರ ಗುರಿ ಸೇರಲು ಸಾಧ್ಯ.

ಸ್ವಾಮಿ ವಿವೇಕಾನಂದರು ಹೇಳಿರುವಂತೆ, ನಮ್ಮ ಮನಸ್ಸಿನಲ್ಲಿದೆ ಅಪಾರವಾದ ಶಕ್ತಿ. ಬಾಳಿಗೊಂದು ಗುರಿ ಇದ್ದರೆ, ನಮ್ಮಲ್ಲಿರುವ ಸುಪ್ತ ಶಕ್ತಿಗಳನ್ನು ಆ ಗುರಿಯೆಡೆಗೆ ಕೇಂದ್ರೀಕರಿಸಿ, ವೃತ್ತಿಯಲ್ಲಿ ಯಶಸ್ಸು ಮತ್ತು ಜೀವನದಲ್ಲಿ ಸಾರ್ಥಕತೆಯನ್ನು ಸಾಧಿಸಬಹುದು.

Download PDF Document

                                       

About author View all posts Author website

V Pradeep Kumar

Leave a Reply

Your email address will not be published. Required fields are marked *