ಸಮೂಹ ಚರ್ಚೆ: ಯಶಸ್ಸಿನ ಸೂತ್ರ

ಇದೊಂದು ಹನ್ನೆರಡು ವರ್ಷಗಳ ಹಿಂದೆ ನಡೆದ ಘಟನೆ. ನಾನು ಮುಖ್ಯಸ್ಥನಾಗಿದ್ದ ಕಂಪನಿಯೊಂದರಲ್ಲಿ ಕೆಲಸಕ್ಕಾಗಿ ಆಹ್ವಾನಿಸಿ, ಜಾಹೀರಾತು ನೀಡಿದ್ದೆವು. ಆದರೆ, ಆಶ್ಚರ್ಯವೆನ್ನುವಂತೆ ನೂರಾರು ಅಭ್ಯರ್ಥಿಗಳು ತಮ್ಮ ಅರ್ಜಿಗಳೊಂದಿಗೆ ನಮ್ಮ ಕಛೇರಿಗೆ ಹಾಜರ್! ಆಫೀಸಿನ ಸ್ವಾಗತಕಾರರ ಕೊಠಡಿ ತುಂಬಿ, ತರಾತುರಿಯಿಂದ ಹೆಚ್ಚಿನ ಆಸನಗಳನ್ನು ಏರ್ಪಾಡು ಮಾಡಿದರೂ, ನೂಕು ನುಗ್ಗಲು. ಇಂತಹ ಅಗಾಧವಾದ ಪ್ರತಿಕ್ರಿಯೆಯನ್ನು ನಿರೀಕ್ಷಿಸದೆ, ಮಾಡಿದ ತಪ್ಪು ನಮ್ಮದಾಗಿತ್ತು.

ಸೆಲೆಕ್ಷನ್ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ನಾನಾಗ ಹೂಡಿದ ಉಪಾಯವೇ, ಸಮೂಹ ಚರ್ಚೆ [ಗ್ರೂಪ್ ಡಿಸ್ಕಷನ್ ಅಥವಾ ಜಿ.ಡಿ.]. ತಕ್ಷಣ, ನಮ್ಮ ಕಛೇರಿಯ ಸಭಾಂಗಣಗಳಲ್ಲಿ ಎರಡು ಸಮೂಹ ಚರ್ಚೆಯನ್ನು ಆಯೋಜಿಸಿದೆವು. ಈ ನಿರ್ಧಾರವನ್ನು ಅಭ್ಯರ್ಥಿಗಳಿಗೆ ತಿಳಿಸುತ್ತಿದ್ದಂತೆ, ಅನಿರೀಕ್ಷಿತ ಪ್ರಕ್ರಿಯೆಯ ಘೋಷಣೆಯಿಂದ ಕಂಗಾಲಾದ ಅನೇಕ ಅಭ್ಯರ್ಥಿಗಳು, ಸ್ಥಳದಿಂದ ಪರಾರಿ!

ಹನ್ನೆರಡು ವರ್ಷಗಳ ಹಿಂದೆ, ಸಮೂಹ ಚರ್ಚೆಗಳನ್ನು ನೇಮಕಾತಿ ಪ್ರಕ್ರಿಯೆಯಲ್ಲಿ ಅಷ್ಟಾಗಿ ಬಳಸುತ್ತಿರಲಿಲ್ಲ. ಈ ಮಾತನ್ನು ಹೇಳುವ ಕಾರಣವಿಷ್ಟೇ; ಸಮೂಹ ಚರ್ಚೆಗಳು ಈಗ ಸಾಮಾನ್ಯವಾದರೂ, ಅನೇಕ ಯುವಕ, ಯುವತಿಯರಿಗೆ ಇದೊಂದು ಭಯ, ಭೀತಿ, ಆತಂಕ ಮೂಡಿಸುವ ಸೆಲೆಕ್ಷನ್ ಪ್ರಕ್ರಿಯೆ. ಆದರೆ, ಈ ಪ್ರಕ್ರಿಯೆಯಲ್ಲಿ ಕಂಪನಿಯವರು ಪರೀಕ್ಷಿಸುವುದೇನೆಂದನ್ನು ಅರಿತು ತಯಾರಾದರೆ, ಸಮೂಹ ಚರ್ಚೆಯನ್ನು ನೀವು ಸಲೀಸಾಗಿ ಎದುರಿಸಬಹುದು.

ನಿಮ್ಮ ವ್ಯಕ್ತಿತ್ವ ಹೇಗೆ?

ಕ್ಯಾಂಪಸ್ ಸೆಲೆಕ್ಷನ್‍ಗೆ ಬರುವ ಕಂಪನಿಗಳು ವೃತ್ತಿಯ ಅವಶ್ಯಕತೆಗಳಿಗೂ, ನಿಮ್ಮ ಸಾಮಥ್ರ್ಯ ಮತ್ತು ವ್ಯಕ್ತಿತ್ವದ ವೈಶಿಷ್ಟ್ಯತೆಗೂ ಹೋಲಿಸಿ, ನಿಮ್ಮ ಯೋಗ್ಯತೆ ಮತ್ತು ಸಫಲತೆಯ ಸಾಧ್ಯತೆಯನ್ನು, ಅಂದಾಜು ಮಾಡುತ್ತಾರೆ.

ಸಮೂಹ ಚರ್ಚೆಗಳೊಂದು ರೀತಿಯ ವ್ಯಕ್ತಿತ್ವ ಪರೀಕ್ಷೆಯ ವಿಧಾನ. ಸಾಮಾನ್ಯ ತಿಳುವಳಿಕೆ, ಸಂವಹನ ಕೌಶಲ, ಸಾಮಥ್ರ್ಯ ಮತ್ತು ನೀವು ಇತರರೊಂದಿಗೆ ಸಾಮರಸ್ಯದಿಂದ ಬೆರೆತು, ವೃತ್ತಿಯನ್ನು ಯಶಸ್ವಿಯಾಗಿ ನಿಭಾಯಿಸಬಲ್ಲಿರಾ ಎಂಬ ಮುಖ್ಯ ಅಂಶಗಳನ್ನೇ ಈ ಹಂತದಲ್ಲಿ ಪರೀಕ್ಷಿಸಲಾಗುತ್ತದೆ.

ಈ ಪ್ರಕ್ರಿಯೆಯಲ್ಲಿ ನಿಮ್ಮ ಮಾತೇ ನಿಮಗೆ ಬಂಡವಾಳ. ಈ ಚರ್ಚೆಗಳಲ್ಲಿ ಇಂಗ್ಲೀಷ್ ಭಾಷೆಯನ್ನು ಬಳಸುವುದು ಸಾಮಾನ್ಯ. ಹಾಗಾಗಿ, ಈ ಭಾಷೆಯಲ್ಲಿ ಸಂಕೋಚವಿಲ್ಲದೆ ಮಾತನಾಡುವ ಕೌಶಲವನ್ನು ವೃದ್ಧಿಸಿಕೊಳ್ಳಿ. ಆದರೆ, ಇಂಗ್ಲೀಷ್ ಭಾಷೆಯ ಪರಿಣತಿಯೇ ಸೆಲೆಕ್ಷನ್‍ಗೆ ನಿರ್ಣಾಯಕವಾಗುವುದಿಲ್ಲವೆನ್ನುವುದನ್ನೂ ಮರೆಯದಿರಿ.

ನೀವು ಈ ಎಲ್ಲ ಅಂಶಗಳ ಬಗ್ಗೆ ಗಮನವಿಟ್ಟು ಕಾರ್ಯತಂತ್ರವನ್ನು ರೂಪಿಸಿದರೆ, ನಿಮ್ಮ ಆತ್ಮ ವಿಶ್ವಾಸ ಹೆಚ್ಚುತ್ತದೆ. ನೀವೇ ರಚಿಸಿದ ವೈಯಕ್ತಿಕ ಕಾರ್ಯತಂತ್ರವನ್ನು ಸಮೂಹ ಚರ್ಚೆಯಲ್ಲಿ ಪರಿಪಾಲಿಸಿದರೆ, ನಿಮ್ಮ ಸೆಲೆಕ್ಷನ್ ಆಗುವುದರಲ್ಲಿ ಸಂದೇಹವಿಲ್ಲ.

ಸಮೂಹ ಚರ್ಚೆಯ ಪ್ರಕ್ರಿಯೆ

ನೀವು ಕಾಲೇಜಿನ ಚರ್ಚಾ ಸ್ಪರ್ದೆಗಳಲ್ಲಿ ಈವರೆಗೆ ಭಾಗವಹಿಸಿಲ್ಲದಿದ್ದರೆ, ಇಂತಹ ಚರ್ಚೆಗಳು ಸವಾಲೆನಿಸುವುದು ಸಹಜ. ಆದರೆ, ಈ ಬಗ್ಗೆ ತೀರ್ವವಾದ ಕಳವಳಕ್ಕೂ, ಮುಂದೇನಾಗುತ್ತೋ ಎಂಬ ಆತಂಕಕ್ಕೂ ಒಳಗಾಗಬೇಡಿ. ಏಕೆಂದರೆ, ಸಮೂಹ ಚರ್ಚೆಗೆ ಅತ್ಯಂತ ಸರಳವಾದ, ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ವಿಷಯಗಳನ್ನೇ ನೀಡುತ್ತಾರೆ.

ಚರ್ಚೆಯಲ್ಲಿ ಭಾಗವಹಿಸುವ 8-10 ಅಭ್ಯರ್ಥಿಗಳನ್ನು ಒಂದು ಕೊಠಡಿಯಲ್ಲಿ ಒಟ್ಟಾಗಿರಿಸಿ, ಒಂದು ಸಾಮಾನ್ಯ ವಿಷಯದ ಕುರಿತು, 15-20 ನಿಮಿಷಗಳ ಕಾಲಾವಧಿಯಲ್ಲಿ ಚರ್ಚಿಸಲು ಆದೇಶಿಸುತ್ತಾರೆ. ಉದಾಹರಣೆಗೆ, ನಮ್ಮ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಯ ಸಾಧ್ಯತೆ; ನಮ್ಮಲ್ಲಿ ಕ್ರಿಕೆಟ್ ಬಿಟ್ಟು ಬೇರೆ ಕ್ರೀಡೆಗಳೇಕೆ ಅಷ್ಟಾಗಿ ಬೆಳೆಯುತ್ತಿಲ್ಲ; ಒಲಂಪಿಕ್ ಕ್ರೀಡೆಗಳಲ್ಲಿ ಭಾರತವೇಕೆ ಹಿಂದುಳಿದಿದೆ; ಜಾಗತೀಕರಣದಿಂದ ಭಾರತಕ್ಕೆ ಅನುಕೂಲವಾಗಿದೆಯೇ ಅಥವಾ ಇಲ್ಲವೇ; ನಮ್ಮ ಯುವಜನಾಂಗದ ಸಮಸ್ಯೆಗಳು, ಈ ರೀತಿ ಪ್ರಚಲಿತ ವಿಷಯಗಳ ಬಗ್ಗೆ ಅಥವಾ ಕೆಲವೊಮ್ಮೆ ಅಪರೂಪವಾಗಿ ವೃತ್ತಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚೆಗೆ ನೀಡುತ್ತಾರೆ.

ಕಂಪನಿಯ ನಿರ್ವಾಹಕರು ಸಲಹೆ, ಸೂಚನೆಗಳನ್ನು ನೀಡಿದ ನಂತರ ಚರ್ಚೆ ಶುರು; ನಿಗದಿತ ಅವಧಿ ಮುಗಿದ ತಕ್ಷಣ ಚರ್ಚೆ ನಿಲ್ಲಿಸಬೇಕು. ಚರ್ಚೆಯಲ್ಲಿ ನಿರ್ವಾಹಕರು ಭಾಗಿಯಾಗುವುದಿಲ್ಲ ಅಥವಾ ನಿರೂಪಿಸುವುದಿಲ್ಲ. ಆದರೆ, ಚರ್ಚೆಯನ್ನು ಅತ್ಯಂತ ಗಮನವಿಟ್ಟು ಕೇಳುತ್ತಾ, ಅಭ್ಯರ್ಥಿಗಳ ಸಾಮಥ್ರ್ಯ ಮತ್ತು ವ್ಯಕ್ತಿತ್ವದ ಬಗ್ಗೆ ಟಿಪ್ಪಣಿಯನ್ನು ಮಾಡುವುದರಲ್ಲಿ ನಿರತರಾಗಿರುತ್ತಾರೆ.

ಸಮೂಹ ಚರ್ಚೆ-ಯಶಸ್ವಿ ತಂತ್ರಗಳೇನು?

ಸಮೂಹ ಚರ್ಚೆಯಲ್ಲಿ ಭಾಗವಹಿಸಿ, ಯಶಸ್ವಿಯಾಗುವುದು ಹೇಗೆ? ನಿಮ್ಮ ಪ್ರತಿಭೆ ಹೊರಬಂದು, ನೀವು ಸಾಧಕರಾಗಬೇಕಾದರೆ ಅದು ಪರಿಶ್ರಮದಿಂದಲೇ ಸಾಧ್ಯ. ಈ ಸೂತ್ರಗಳನ್ನು ಗಮನಿಸಿ; ನಿಮ್ಮ ಸಾಮಥ್ರ್ಯವನ್ನು ವೃದ್ಧಿಸಿ; ಸೂಕ್ತ ಕಾರ್ಯತಂತ್ರವನ್ನು ರೂಪಿಸಿ.

  • ನಿಮ್ಮ ವೇಷಭೂಷಣ ಸಾಂಪ್ರದಾಯಿಕವಾಗಿದ್ದು, ಅಚ್ಚುಕಟ್ಟಾಗಿರಲಿ.
  • ಸಾಧ್ಯವಾದರೆ, ಗುಂಪಿನ ಮಧ್ಯೆ ಆಸೀನರಾಗಿ; ಇದರಿಂದ, ಎಲ್ಲರನ್ನು ಗಮನಿಸಲು ಸುಲಭ.
  • ಇಂತಹ ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ, ಮೊದಲು ಚರ್ಚೆಯನ್ನು ಶುರು ಮಾಡುವರು, ನಿರ್ವಾಹಕರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. ಆದ್ದರಿಂದ, ಚರ್ಚೆಯನ್ನು ನೀವೇ ಶುರು ಮಾಡಿ. ವಿಷಯದ ಬಗ್ಗೆ ಅರಿವಿದ್ದಲ್ಲಿ, ಸಂಕ್ಷಿಪ್ತವಾಗಿ ನಿಮ್ಮ ವಾದವನ್ನು ಎಲ್ಲರ ಮುಂದಿಡಿ.
  • ಆದರೆ, ವಿಷಯದ ಬಗ್ಗೆ ನಿಮಗೆ ಅರಿವಿರದಿದ್ದರೇ? ಚಿಂತಿಸಬೇಡಿ; ಎಲ್ಲರಿಗೂ ಚರ್ಚೆಯನ್ನು ಕ್ರಮಬದ್ಧವಾಗಿ ಪಾಲಿಸಲು ಸಲಹೆಯನ್ನು ನೀಡಿ. ಉದಾಹರಣೆಗೆ, “ಸ್ನೇಹಿತರೆ, ಈಗ ಚರ್ಚೆಯನ್ನು ಪ್ರಾರಂಭಿಸೋಣ. ಎಲ್ಲರೂ ಒಬ್ಬೊಬ್ಬರಾಗಿ ಒಂದು ನಿಮಿಷದ ಮಿತಿಯಲ್ಲಿ ಮಾತನಾಡೋಣ. ಸತೀಶ್…ನೀವು ಮೊದಲು ಮಾತನಾಡಬಯಸುತ್ತೀರ?”. ಈ ರೀತಿ ಚರ್ಚೆಯ ಮುಂದಾಳತ್ವ ವಹಿಸಿ, ಚರ್ಚೆಯಲ್ಲಿ ಭಾಗವಹಿಸುವುದರಿಂದ, ನೀವು ನಿರ್ವಾಹಕರ ಮತ್ತು ಅಭ್ಯರ್ಥಿಗಳ ಗಮನವನ್ನು ಸೆಳೆಯುತ್ತೀರಿ. ಜೊತೆಗೆ, ಎಲ್ಲರೂ ಮಾತನಾಡುವಾಗ ನಿಮಗೆ ವಿಷಯದ ಸಂಪೂರ್ಣ ಮಾಹಿತಿ ಸಿಗುತ್ತದೆ.
  • ಚರ್ಚೆಯಲ್ಲಿ ನಿಮ್ಮ ಗಮನ ನಿರಂತರವಾಗಿರಲಿ; ಮುಖ್ಯ ಅಂಶಗಳನ್ನು ಟಿಪ್ಪಣಿ ಮಾಡಿಕೊಳ್ಳಿ.
  • ಇಂತಹ ಚರ್ಚೆಗಳಲ್ಲಿ ನಿಯಮಿತ ಕಾಲಾವಧಿಯಿರುತ್ತದೆ. ಆದ್ದರಿಂದ, ನಿಮ್ಮ ಅಭಿಪ್ರಾಯವನ್ನು ಮಂಡಿಸುವಾಗ, ಪ್ರಸಿದ್ಧ ವ್ಯಕ್ತಿಗಳ ಉಲ್ಲೇಖನಗಳನ್ನೂ, ಹೋಲಿಕೆಗಳನ್ನೂ ಬಳಸಿದರೆ, ನಿಮ್ಮ ಅಭಿಪ್ರಾಯಗಳಿಗೆ ಮನ್ನಣೆಯ ಜೊತೆಗೆ ನಿರ್ವಾಹಕರ ಮೇಲೆ ಉತ್ತಮ ಪರಿಣಾಮವಾಗುತ್ತದೆ.
  • ಕೆಲವೊಮ್ಮೆ, ನಿಮ್ಮ ಅಭಿಪ್ರಾಯಗಳನ್ನೇ ಬೇರೊಬ್ಬರು ಮಂಡಿಸಿದಾಗ, ನೀವು ಹೇಳುವುದಕ್ಕೇನೂ ಇಲ್ಲವಲ್ಲಾ ಎಂದು ಕಂಗಾಲಾಗಬೇಡಿ. ಇದಕ್ಕೆ ಪ್ರತಿಯಾಗಿ, “ನೀವು ಹೇಳುವುದನ್ನು ನಾನು ಒಪ್ಪುತ್ತೇನೆ” ಎಂದು ಹೇಳುತ್ತಾ, ನಿಮ್ಮ ವಾದವನ್ನು ಮುಂದುವರಿಸಿ.
  • ಇದೇ ರೀತಿ, ನಿಮ್ಮ ಅಭಿಪ್ರಾಯವನ್ನು ವಿರೋಧಿಸುವವರಿದ್ದರೆ ಚಿಂತಿಸಬೇಡಿ. ಧೈರ್ಯದಿಂದ, ನಿಮ್ಮ ವಾದವನ್ನು ಮಂಡಿಸಿ. ಯಶಸ್ಸು ನಿಮ್ಮ ಸಂವಹನ ಶಕ್ತಿಯನ್ನು ಅವಲಂಬಿಸುತ್ತದೆ. ನಿಮ್ಮ ಪರ ಮತ್ತು ವಿರೋಧಗಳ ಸಂಖ್ಯೆಯನ್ನಲ್ಲ.
  • ಸಾಮಾನ್ಯವಾಗಿ ಇಂತಹ ಚರ್ಚೆಗಳಲ್ಲಿ, ಎಲ್ಲಾ ಅಭ್ಯರ್ಥಿಗಳು ಮಾತನಾಡಲು ಪೈಪೋಟಿಯಿಂದ ಪ್ರಯತ್ನಿಸುತ್ತಾರೆ. ಆದ್ದರಿಂದ, ಕೆಲವೊಮ್ಮೆ ಗೊಂದಲ, ಕಲಹಗಳಾಗಬಹುದು; ಅಥವಾ ಜಗಳಗಂಟತನದ ಅಭ್ಯರ್ಥಿಗಳಿದ್ದು, ಸೌಮ್ಯ ಸ್ವಭಾವದ ಅಭ್ಯರ್ಥಿಗಳಿಗೆ ಮಾತನಾಡಲು ಅವಕಾಶವಿಲ್ಲದಾಗಬಹುದು. ಇಂತಹ ಸಂದರ್ಭಗಳಲ್ಲಿ ಚರ್ಚೆಯನ್ನು ನಿರ್ವಹಿಸಲು ನೀವು ಮುಂದಾಗಿ; ಚರ್ಚೆಯ ಸ್ವರೂಪವನ್ನು ಬದಲಾಯಿಸಿ, ನಿರೂಪಕರಾಗಲು ಪ್ರಯತ್ನಿಸಿ.
  • ಚಿರ್ಚೆ ಮುಗಿಯುವುದಕ್ಕೆ ಮುಂಚೆ, ಚರ್ಚೆಯ ಸಾರಾಂಶವನ್ನು, ಗುಂಪಿನ ಅಭಿಪ್ರಾಯವನ್ನು ಸ್ಪಷ್ಟವಾಗಿ ಒತ್ತಿಹೇಳಿ. ಈ ರೀತಿ ನಿಮ್ಮ ಗುಂಪಿನ ಅನಧಿಕೃತ ಪ್ರತಿನಿಧಿಯಂತೆ ವರ್ತಿಸುವುದರಿಂದ, ನಿಮ್ಮ ವ್ಯಕ್ತಿತ್ವ ಎದ್ದು ಕಾಣುತ್ತದೆ.

ಈ ಕಾರ್ಯತಂತ್ರಗಳಿಂದ ನಿಮ್ಮ ಸೆಲೆಕ್ಷನ್‍ನ ಸಾಧ್ಯತೆಗಳು ಹೆಚ್ಚಾಗುತ್ತದೆ. ಆದ್ದರಿಂದ, ಸಮೂಹ ಚರ್ಚೆಗಳಲ್ಲಿ ನೀವು ಸಕ್ರಿಯವಾಗಿ ಭಾಗವಹಿಸಬೇಕು. ಏಕೆಂದರೆ, ಈ ಪ್ರಕ್ರಿಯೆಯ ಉದ್ದೇಶವೇ, ಉತ್ತಮ ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಕರೆದೊಯ್ಯುವುದು. ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯೆಗಳಲ್ಲಿ ನಾನು ಗಮನಿಸಿರುವಂತೆ, ಕೆಲವೊಮ್ಮೆ ಉತ್ತಮ ಅಭ್ಯರ್ಥಿಗಳಲ್ಲಿ ತಾವೇ ಹೆಚ್ಚೆಂಬ ತಪ್ಪು ಮನೋಭಾವವಿದ್ದು, ಮೊಂಡು ಧೈರ್ಯದಿಂದ ತಮ್ಮ ಸೆಲೆಕ್ಷನ್ ಆಗಿಯೇ ತೀರುತ್ತದೆಯೆಂಬ ನಿರೀಕ್ಷೆಯಲ್ಲಿ, ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ. ಆದರೆ, ಉದ್ಯೋಗದ ಸೆಲೆಕ್ಷನ್‍ಗೆ, ಸಾಮಥ್ರ್ಯದ ಜೊತೆ ಮನೋಭಾವವೂ ಅಷ್ಟೇ ಮುಖ್ಯವೆಂದು ಎಲ್ಲಾ ಕಂಪನಿಗಳಲ್ಲೂ ಪರಿಗಣಿಸುತ್ತಾರೆ. ಹಾಗಾಗಿ, ಚರ್ಚೆಯಲ್ಲಿ ಭಾಗವಹಿಸದ ಯಾವ ಅಭ್ಯರ್ಥಿಯೂ, ಮುಂದಿನ ಹಂತವಾದ ಸಂದರ್ಶನಕ್ಕೆ ಸೆಲೆಕ್ಷನ್ ಆಗುವುದು ಅಸಂಭವ. 

ಯಶಸ್ಸಿಗೆ ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಈ ಕೌಶಲಗಳಲ್ಲಿ, ಸಂವಹನ ಕೌಶಲವೇ ಅತ್ಯಂತ ಪ್ರಮುಖ. ನೀವು ಪ್ರತಿಬಾರಿ ಮಾತನಾಡುವಾಗಲೂ, ನಿಮಗರಿವಿಲ್ಲದಂತೆಯೇ ನಿಮ್ಮ ಸಂವಹನ ಕೌಶಲದ ಪರೀಕ್ಷೆಯಾಗುತ್ತಿರುತ್ತದೆ. ಆದ್ದರಿಂದ, ಸಮಯೋಚಿತವಾಗಿ, ಸೂಕ್ತವಾದ ದೇಹಭಾಷೆಯನ್ನು ಬಳಸುತ್ತಾ, ಸರಿಯಾದ ಧ್ವನಿ ಮತ್ತು ಭಾವದಿಂದ ಮಾತನಾಡುವುದೇ, ನಾಯಕತ್ವದ ಲಕ್ಷಣ. ಈ ಕೌಶಲವನ್ನು ಶ್ರದ್ಧೆ ಮತ್ತು ನಿರಂತರ ಪ್ರಯತ್ನದಿಂದ, ಅಥವಾ ತರಬೇತಿಯ ಮುಖಾಂತರ ವೃದ್ಧಿಸಿಕೊಳ್ಳಬಹುದು.

ಕ್ಯಾಂಪಸ್ ಸೆಲೆಕ್ಷನ್‍ನ ಮೊದಲ ಹೆಜ್ಜೆ ಆಪ್ಟಿಟ್ಯೂಡ್ ಟೆಸ್ಟ್; ಆದರ ಎರಡನೇ ಹೆಜ್ಜೆಯೇ ಸಮೂಹ ಚರ್ಚೆ. ಕ್ಯಾಂಪಸ್ ಸೆಲೆಕ್ಷನ್‍ಗೆ ಬರುವ ಕಂಪನಿಗಳು ಮತ್ತು ಅಂತರರಾಷ್ಟ್ರೀಯ ಕಂಪನಿಗಳು ಅತ್ಯುತ್ತಮ ಶ್ರೇಣಿಯಲ್ಲಿರುತ್ತವೆ. ಒಳ್ಳೆಯ ತರಬೇತಿ, ಪ್ಯಾಕೇಜ್ ಮತ್ತು ಸೌಲಭ್ಯಗಳು ದೊರಕುವುದರಿಂದ, ಈ ಅವಕಾಶಗಳು ಯಶಸ್ಸಿಗೆ ಏಣಿಯಿದ್ದಂತೆ.

ನಿಮ್ಮಲ್ಲಿದೆ ಅಪಾರ ಶಕ್ತಿ!

ವೃತ್ತಿಯ ಯಶಸ್ಸಿಗೆ ನಿಮ್ಮ ಕಲಿಕೆಯ ಜೊತೆಗೆ, ಆಕರ್ಷಕ ವ್ಯಕ್ತಿತ್ವ, ಸಂವಹನ ಕೌಶಲ, ಸಕಾರಾತ್ಮಕ ಮನೋಧರ್ಮ ಅವಶ್ಯ. ಆದ್ದರಿಂದ, ನೀವು ಕಲಿಕೆಯ ಜೊತೆಯಲ್ಲಿ ಈ ಅಂಶಗಳ ಬಗ್ಗೆಯೂ ಗಮನ ಹರಿಸಬೇಕು. ಈ ರೀತಿಯ ಪ್ರಯತ್ನಗಳಿಂದ, ನಿಮ್ಮ ವ್ಯಕ್ತಿತ್ವದ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ.

ಸ್ವಾಮಿ ವಿವೇಕಾನಂದರವರು ಹೇಳಿದ ಉಕ್ತಿಯೊಂದನ್ನು ಗಮನಿಸಿ, “ಏಳು! ಎದ್ದೇಳು! ನಿನ್ನ ಭವಿಷ್ಯವನ್ನು ರೂಪಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊರು. ನಿನ್ನ ಉತ್ತರೋತ್ತರ ಶ್ರೇಯಸ್ಸಿಗೆ ಬೇಕಾದ ಎಲ್ಲ ಶಕ್ತಿ, ಸಾಮಥ್ರ್ಯಗಳೂ ನಿನ್ನೊಳಗೇ ಇವೆ. ನೋಡು, ಮನ ಮಾಡು. ಏಳು, ಎದ್ದೇಳು. ಭವ್ಯ ಭವಿಷ್ಯದ ನಿರ್ಮಾಣಕ್ಕೆ ಇಂದೇ ಅಡಿ ಇಡು.

ಆದ್ದರಿಂದ, ನಿಮ್ಮೆಲ್ಲರಲ್ಲೂ ಇರುವ ಅಪಾರವಾದ ಶಕ್ತಿಯನ್ನು ಗುರುತಿಸಿ, ರಚನಾತ್ಮಕವಾಗಿ ಉಪಯೋಗಿಸಿದರೆ, ಜೀವನದಲ್ಲಿ ಅಸಾಧ್ಯವೆನ್ನುವುದು ಯಾವುದೂ ಇಲ್ಲ. ನಿಮ್ಮ ವೃತ್ತಿ ಜೀವನಕ್ಕೊಂದು ಗುರಿಯಿರಲಿ; ಆ ಗುರಿಯನ್ನು ಸಾಧಿಸಲು ಸರಿಯಾದ ಮಾರ್ಗವನ್ನು ಆರಿಸಿ. ಗುರಿಯನ್ನು ಸರಿಯಾದ ಮಾರ್ಗದಲ್ಲೇ ಸಾಧಿಸುವ ಛಲವಿರಲಿ; ಗೆಲ್ಲುವ ಆಶಾಭಾವನೆ ಸದಾ ನಿಮ್ಮಲ್ಲಿರಲಿ.

Download PDF document

                        

About author View all posts Author website

V Pradeep Kumar

Leave a Reply

Your email address will not be published. Required fields are marked *