Q & A for Students – January 2022

Q1. ಬಿಎಸ್‌ಸಿ (ಸಿಎಸ್), ಬಿಸಿಎ ಮತ್ತು ಎಂಸಿಎ ಕೋರ್ಸ್ಗಳಲ್ಲೂ ಕಂಪ್ಯೂಟರ್ ವಿಜ್ಞಾನ (ಸಿಎಸ್), ಮಾಹಿತಿ ವಿಜ್ಞಾನ (ಐಎಸ್) ವಿಷಯಗಳನ್ನು ಕಲಿಸಲಾಗುತ್ತದೆ. ಹಾಗಾಗಿ ಈ ಕೋರ್ಸ್ಗಳಿಗೂ ಎಂಜಿನಿಯರಿAಗ್ (ಸಿಎಸ್/ಐಎಸ್) ಕೋರ್ಸ್ಗಳಿಗೂ ಇರುವ ವ್ಯತ್ಯಾಸಗಳೇನು?

ಎಂಜಿನಿಯರಿಂಗ್ (ಸಿಎಸ್/ಐಎಸ್), ಬಿಎಸ್‌ಸಿ (ಸಿಎಸ್), ಬಿಸಿಎ ಮತ್ತು ಎಂಸಿಎ ಕೋರ್ಸ್ಗಳಲ್ಲಿ ಕಲಿಸುವ ಮೂಲ ವಿಷಯ ಒಂದೇ ಆದರೂ ವ್ಯತ್ಯಾಸಗಳಿವೆ.

ಎಂಜಿನಿಯರಿಂಗ್ ಕೋರ್ಸ್ಗಳು ಕಂಪ್ಯೂಟರ್ ವಿಜ್ಞಾನದ ತಾಂತ್ರಿಕತೆಯತ್ತ ಹೆಚ್ಚು ಕೇಂದ್ರೀಕೃತವಾಗಿರುತ್ತದೆ. ಹಾಗೂ, ಮೊದಲ ಎರಡು ಸೆಮಿಸ್ಟರ್‌ಗಳಲ್ಲಿ ಮೂಲ ಎಂಜಿನಿಯರಿAಗ್ ಕೋರ್ಸ್ಗಳ ವಿಷಯಸೂಚಿಯಿರುತ್ತದೆ. ಮೂರನೇ ಸೆಮಿಸ್ಟರ್‌ನಿಂದ ನೀವು ಆಯ್ಕೆ ಮಾಡಿರುವ ವಿಷಯದ ಕಲಿಕೆ ಪ್ರಾರಂಭವಾಗುತ್ತದೆ.

ಎಂಸಿಎ ಕೋರ್ಸ್, ಕಂಪ್ಯೂಟರ್ ವಿಜ್ಞಾನದ ಸಿದ್ಧಾಂತಗಳು ಮತ್ತು ಅಪ್ಲಿಕೇಷನ್ಸ್ ಕುರಿತು ಹೆಚ್ಚು ಕೇಂದ್ರೀಕೃತವಾಗಿರುತ್ತದೆ. ಎಂಸಿಎ ಕೋರ್ಸ್ ಅರ್ಹತೆಗೆ ಯಾವುದಾದರೂ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಪದವಿ ಅಥವಾ ಪಿಯುಸಿ ಪರೀಕ್ಷೆಯಲ್ಲಿ ಗಣಿತವನ್ನು ಓದಿರಬೇಕು. ಬಿಎಸ್‌ಸಿ (ಸಿಎಸ್) ಅಥವಾ ಬಿಸಿಎ ನಂತರ ಎಂಸಿಎ ಮಾಡುವುದರಿಂದ ಕಂಪ್ಯೂಟರ್ ವಿಜ್ಞಾನದ ಅರಿವು, ಪರಿಣತಿ ಸ್ವಲ್ಪ ಮಟ್ಟಿಗಿದ್ದು ಎಂಸಿಎ ಕೋಸ್ ಸುಲಭವಾಗುತ್ತದೆ. ಎಂಜಿನಿಯರಿಂಗ್ ಮಾಡಲು ನಾಲ್ಕು ವರ್ಷಗಳು ಬೇಕಾದರೆ, ಪದವಿ ಕೋರ್ಸ್ ನಂತರ ಎಂಸಿಎ ಮಾಡಲು ಐದು ವರ್ಷಗಳಾಗುತ್ತದೆ. ಉದ್ಯಮ ವಲಯದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಮಹತ್ವವನ್ನು ಎಂಜಿನಿಯರಿಂಗ್ ಪದವಿಗೆ ನೀಡುವುದು ಸಾಮಾನ್ಯ.

ಒಟ್ಟಾರೆ ಹೇಳುವುದಾದರೆ, ಪಿಯುಸಿ ನಂತರ ಎಂಜಿನಿಯರಿಂಗ್ ಮಾಡುವುದು ಉತ್ತಮ ಆಯ್ಕೆ. ಆದರೆ, ಈಗಾಗಲೇ ಪದವಿ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳು ಎಂಸಿಎ ಮಾಡಿ ಎಂಜಿನಿಯರಿAಗ್ ಕೋರ್ಸಿಗೆ ಸರಿಸಮಾನವೆನ್ನಬಹುದಾದ ತಜ್ಞತೆಯನ್ನು ಪಡೆದುಕೊಳ್ಳಬಹುದು.

Q2. ನಾನು ಡಿಪ್ಲೊಮಾ (ಅನಿಮೇಷನ್) ಮುಗಿಸಿ ನಂತರ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದೇನೆ. ಈಗ ನನಗೆ ಬಿಎಸ್‌ಸಿ ಮಾಡುವ ಆಸೆ; ಆದರೆ ಮನೆಯಲ್ಲಿ ಒಪ್ಪ್ಪುತ್ತಿಲ್ಲ. ಕೆಲಸಕ್ಕೆ ಸೇರೋಣವೆಂದರೆ, ಅಷ್ಟಾಗಿ ಇಂಗ್ಲಿಷ್ ಬರುವುದಿಲ್ಲ. ದಯವಿಟ್ಟು ಪರಿಹಾರ ತಿಳಿಸಿ.

ಮುಂದೆ ವಿದ್ಯಾಭ್ಯಾಸವನ್ನು ಮುಂದುವರೆಸಬೇಕೇ ಅಥವಾ ಕೆಲಸಕ್ಕೆ ಸೇರಬೇಕೇ ಎನ್ನುವುದನ್ನು ನಿರ್ಧರಿಸಿ, ಅದರಂತೆ ಮುಂದುವರೆಯಿರಿ. ಇಂಗ್ಲಿಷ್ ಕಲಿಕೆ ಕುರಿತ ಮಾರ್ಗದರ್ಶನವನ್ನು ಕಳೆದ ತಿಂಗಳ 27ನೇ ತಾರೀಖಿನ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ.

Q3. ನಾನು ಈಗ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಆಗಿದ್ದೇನೆ. ಬಿಎಸ್‌ಸಿ ಪದವಿ ಮುಗಿಸಿದ್ದು, ಶಿಕ್ಷಕನಾಗುವ ಆಸೆ ಇದೆ. ಮುಂದಿನ ಮಾರ್ಗ ತಿಳಿಸಿ.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಲು ಪದವಿಯ ನಂತರ ಬಿಇಡಿ ಮಾಡಿ ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇದಕ್ಕೆ ಮುನ್ನ, ಖಾಸಗಿ ಶಾಲೆಗಳಲ್ಲಿ ಅಥವಾ ಟ್ಯೂಷನ್ ಕೇಂದ್ರಗಳಲ್ಲಿ ಶಿಕ್ಷಕರಾಗಲು ಪ್ರಯತ್ನಿಸಿ, ಈ ವೃತ್ತಿ ನಿಮಗೆ ಸರಿಹೊಂದುವುದೇ ಎಂದು ಪರೀಕ್ಷಿಸಿ.

Q4. ನಾನು ಬಿಕಾಂ ಪದವಿ ಮುಗಿಸಿದ್ದೇನೆ. ಪಿಎಸ್‌ಐ ಆಗಬೇಕು ಅಂತ ಅಂದುಕೊಂಡಿದ್ದೇನೆ. ಹಾಗೂ, ಅದರ ತಯಾರಿಯ ಜೊತೆಗೆ ಎಂಕಾA ಮಾಡಬೇಕು ಎಂದುಕೊಂಡಿದ್ದೇನೆ. ಈ ನಿರ್ಧಾರ ಸರಿಯೇ ಅಥವಾ ನನ್ನ ಪಿಎಸ್‌ಐ ಆಗುವ ಗುರಿಗೆ ಅಡ್ಡವಾಗಲಿದೆಯೇ? ಎಂಕಾಂ ಮಾಡುವುದರಿಂದ ಬೇರೆ ಯಾವ ಅವಕಾಶಗಳು ಸಿಗಲಿವೆ, ದಯಮಾಡಿ ತಿಳಿಸಿ.

ವೃತ್ತಿಯೋಜನೆಯಂತೆ ಪಿಎಸ್‌ಐ ಪರೀಕ್ಷೆಗೆ ತಯಾರಾಗುತ್ತಿರುವ ನಿಮಗೆ ಎಂಕಾA ಅಗತ್ಯವಿದೆಯೇ ಎಂದು ಇನ್ನೊಮ್ಮೆ ಯೋಚಿಸಿ. ಆದರೆ, ಎರಡನ್ನೂ ಮಾಡಬೇಕೆನಿಸಿದರೆ ಸಮಯವನ್ನು ನಿಭಾಯಿಸುವುದು ಕಷ್ಟವೇನಲ್ಲ. ಎಂಕಾಂ ನಂತರ ಬ್ಯಾಂಕಿಂಗ್, ಇನ್ಶ್ಯೂರೆನ್ಸ್, ಇನ್ವೆಸ್ಟ್ಮೆಂಟ್, ಕಸ್ಟಮ್ಸ್, ಅಕೌಂಟಿಂಗ್, ಟ್ಯಾಕ್ಸೇಷನ್ ಇತ್ಯಾದಿ ವಲಯಗಳಲ್ಲಿ ಉದ್ಯೋಗಾವಕಾಶಗಳಿವೆ. ಸಮಯದ ನಿರ್ವಹಣೆ ಕುರಿತ ಹೆಚ್ಚಿನ ಮಾರ್ಗದರ್ಶನಕ್ಕೆ ಈ ವೀಡಿಯೊ ವೀಕ್ಷಿಸಿ:

Q5. ನಾನು ಬಿಎ ಓದುತ್ತಿದ್ದೇನೆ. ಬ್ಯಾಂಕ್‌ನಲ್ಲಿ ಇರುವ ಕೆಲಸಗಳ ಬಗ್ಗೆ ತಿಳಿಸಿ.

ನಾನು ಮೊದಲನೇ ವರ್ಷದ ಬಿಎ ಓದುತ್ತಿದ್ದೇನೆ. ನನಗೆ ಬ್ಯಾಂಕ್‌ನಲ್ಲಿ ಕೆಲಸ ಮಾಡಲು ಇಷ್ಟ. ಆದರೆ ಬಿಎ ನಂತರ ಬ್ಯಾಂಕ್‌ನಲ್ಲಿ ಕೆಲಸ ಮಾಡಲು ಸಾಧ್ಯವಾಗುವುದೇ? ಈ ಬಗ್ಗೆ ದಯವಿಟ್ಟು ತಿಳಿಸಿಕೊಡಿ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ, ಬಿಎ ಪದವಿಯ ನಂತರ ಇನ್‌ಸ್ಟಿಟ್ಯೂಟ್ ಅಫ್ ಬ್ಯಾಂಕಿAಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ನಡೆಸುವ ಪ್ರೊಬೆಷನರಿ ಆಫೀಸರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬ್ಯಾಂಕಿಂಗ್ ವೃತ್ತಿಯನ್ನು ಅನುಸರಿಸಬಹುದು. ಐಬಿಪಿಎಸ್ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದಂತೆ ಮೂರು ಹಂತಗಳಿರುತ್ತದೆ. ಬಿಎ ಪದವಿಯನ್ನು ಮುಗಿಸುವುದರೊಳಗೆ ಬ್ಯಾಂಕಿಂಗ್ ಮತ್ತು ಫೈನಾನ್ಸ್ ಸಂಬAಧಿತ ಅರೆಕಾಲಿಕ ಕೋರ್ಸ್ಗಳನ್ನು ಮಾಡುವುದರಿಂದ ಈ ಕ್ಷೇತ್ರದಲ್ಲಿನ ಸವಾಲುಗಳು ಮತ್ತು ಅವಕಾಶಗಳ ಅರಿವಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ನೆರವಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಗಮನಿಸಿ: https://ibps.in/

Q6. ನಾನು ಬಿಎಸ್‌ಸಿ ಎರಡನೇ ವರ್ಷದಲ್ಲಿ ಓದುತ್ತಿದ್ದೀನಿ. ಇದರ ಜೊತೆಗೆ ನಾನು ಯುಪಿಎಎಸ್‌ಸಿ ಪರೀಕ್ಷೆಗೆ ಯಾವ ರೀತಿಯಲ್ಲಿ ಅಭ್ಯಾಸ ಮಾಡಬೇಕು. ದಯವಿಟ್ಟು ಮಾರ್ಗದರ್ಶನ ನೀಡಿ.

Q7. ಸರ್, ನಾನು ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು. ಆದರೆ ನನ್ನ ಒಂದು ವರ್ಷದ ಪದವಿ ಕೋರ್ಸ್ ಬಾಕಿ ಇದೆ. ಆದರೆ, ಈಗ ಯುಪಿಎಸ್‌ಸಿ ಪ್ರವೇಶ ಹೇಗೆ? ಓದುವುದು ಹೇಗೆ?

ಯಾವುದಾದರೂ ಪದವಿ ಕೋರ್ಸ್ ಉತ್ತೀರ್ಣರಾದ ನಂತರ ಯುಪಿಎಸ್‌ಸಿ ಪರೀಕ್ಷೆ ಬರೆಯಬಹುದು. ಯುಪಿಎಸ್‌ಸಿ ಪರೀಕ್ಷೆಯ ತಯಾರಿ ಕುರಿತು ಕಳೆದ ವರ್ಷದ ಜೂನ್ 28ನೇ ತಾರೀಖಿನ ಪ್ರಶ್ನೋತ್ತರದಲ್ಲಿ ಮತ್ತು ಪ್ರಭಂದ ರಚನೆಯ ಬಗ್ಗೆ ಕಳೆದ ವರ್ಷದ ಆಗಸ್ಟ್ 30ನೇ ತಾರೀಖಿನ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/how-to-succeed-in-entrance-exams/

Q8. ಸರ್, ನಾನು ತೆಲಂಗಾಣದವನು. ನನ್ನ ಎಲ್ಲಾ ಗುರುತಿನ ಚೀಟಿಗಳಲ್ಲಿ ತೆಲಂಗಾಣದ ವಿಳಾಸವಿದೆ. ಆದರೆ ನಾನು 8ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಕರ್ನಾಟಕದಲ್ಲಿ ಓದಿದ್ದೇನೆ. ನಾನು ಈಗ ಕೆಪಿಎಸ್‌ಸಿ, ಕೆಎಸ್‌ಪಿ ಕೆಲಸಗಳಿಗೆ ಅರ್ಜಿ ಸಲ್ಲಿಸಬಹುದೇ? ಅನ್ಯ ರಾಜ್ಯದವರಿಗೆ ಕರ್ನಾಟಕದಲ್ಲಿ ಮೀಸಲಾತಿ ಇದೆಯೇ?

ನಮಗಿರುವ ಮಾಹಿತಿಯಂತೆ, ಕೆಪಿಎಸ್ ನೇಮಕಾತಿಗೆ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು ಮತ್ತು ಈ ಬಗ್ಗೆ ವಾಸಸ್ಥಳ/ನಿವಾಸಿ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಕೆಪಿಎಸ್‌ಸಿ ಪರೀಕ್ಷೆಯನ್ನು ಅನ್ಯ ರಾಜ್ಯದವರೂ ಬರೆಯಬಹುದು. ಕನ್ನಡ ಭಾಷೆಯನ್ನು ಓದುವ, ಬರೆಯುವ ಮತ್ತು ಮಾತನಾಡುವ ಪರಿಣತಿ ಇರಬೇಕು ಹಾಗೂ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಯಾವುದೇ ಮೀಸಲಾತಿ ಇರುವುದಿಲ್ಲ.

Q9. ಸರ್, ನಾನು ಪಿಯುಸಿ ಪರೀಕ್ಷೆಯನ್ನು ಮಹಾರಾಷ್ಟçದಲ್ಲಿ ಮಾಡಿದ್ದು ಅಂಕಪಟ್ಟಿಯಲ್ಲಿ ನನ್ನ ಹೆಸರನ್ನು ತಪ್ಪಾಗಿ ನಮೂದಿಸಲಾಗಿದೆ. ಹಾಗಾಗಿ, ಕರ್ನಾಟಕದಲ್ಲಿ ಮಾಡಿರುವ ಪದವಿ ಪರೀಕ್ಷೆಯ ಅಂಕಪಟ್ಟಿಯಲ್ಲೂ ಇದೇ ರೀತಿ ತಪ್ಪಾಗಿದೆ. ಪರಿಹಾರ ತಿಳಿಸಿ.

ಪಿಯುಸಿ ಅಂಕಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸುವ ವ್ಯವಸ್ಥೆ ಇದೆ. ಇದಕ್ಕಾಗಿ, ನಿಗದಿತ ಅರ್ಜಿ ನಮೂನೆಯ ಪ್ರಕಾರ ಕಾಲೇಜಿನ ಮುಖಾಂತರ ಮಹಾರಾಷ್ಟç ರಾಜ್ಯ ಪ್ರೌಢ ಶಿಕ್ಷಣ ಮಂಡಳಿಗೆ ಅರ್ಜಿ ಸಲ್ಲಿಸಿ. ಅದೇ ರೀತಿ, ಪದವಿ ಅಂಕಪಟ್ಟಿಯ ಲೋಪದೋಶಗಳನ್ನು ಸರಿಪಡಿಸಲು ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿ.

Q10. ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಪರೀಕ್ಷೆಯ ಕೊನೆಯ ಪ್ರಾಯೋಗಿಕ ಪರೀಕ್ಷೆ ಬರೆದು ನಿಲ್ಲಿಸಿದ್ದೇನೆ. ಈಗ ನಾನು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಬೇಕು. ಹಾಗಾದರೆ, ಏನು ಮಾಡಬೇಕು?

ನಮಗಿರುವ ಮಾಹಿತಿಯಂತೆ ಅನುತ್ತೀರ್ಣ ಅರ್ಜಿ ಅಥವಾ ಹಿಂದಿನ ಎಂಸಿಎ ( ಮಾರ್ಕ್ಸ್ಕಾರ್ಡ್ ಕಮ್ ಅಪ್ಲಿಕೇಷನ್) ಆಧಾರದ ಮೇಲೆ ಪರೀಕ್ಷಾ ಶುಲ್ಕವನ್ನು ಕಾಲೇಜಿನ ಮುಖಾಂತರ ಕಟ್ಟಿ ಪರೀಕ್ಷೆಯನ್ನು ಬರೆಯಬೇಕು. ಹೆಚ್ಚಿನ ವಿವರಗಳಿಗಾಗಿ ನಿಮ್ಮ ಕಾಲೇಜನ್ನು ಸಂಪರ್ಕಿಸಿ.

Q11. ಸರ್, ಬಿಟೆಕ್ (ಆಹಾರ ತಂತ್ರಜ್ಞಾನ) ಕೋರ್ಸ್ ಅವಕಾಶಗಳೇನು?

ಬೆಳೆಯುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ನಗರೀಕರಣ, ಬದಲಾಗುತ್ತಿರುವ ಜೀವನ ಶೈಲಿ ಇತ್ಯಾದಿ ಕಾರಣಗಳಿಂದ ಆಹಾರ ಸಂಸ್ಕರಣಾ ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿದೆ. ಕಚ್ಛಾ ಧಾನ್ಯಗಳು ಮತ್ತು ಇನ್ನಿತರ ಆಹಾರ ಪದಾರ್ಥಗಳ ಸಂಗ್ರಹಣೆ, ಶುದ್ಧೀಕರಣ, ಸಂಸ್ಕರಣೆ, ಸುರಕ್ಷತೆ ಮತ್ತು ಸೂಕ್ತ ಪ್ಯಾಕಿಂಗ್ ನಂತರ ಬಳಕೆಗೆ ಯೋಗ್ಯ ರೀತಿಯಲ್ಲಿ ಸಿದ್ದಪಡಿಸುವ ಕಾರ್ಯಗಳಲ್ಲಿ ಆಹಾರ ತಂತ್ರಜ್ಞಾನ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ, ಆಹಾರ ತಂತ್ರಜ್ಞಾನ ಕ್ಷೇತ್ರದ ಪದವೀಧರರಿಗೂ ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ, ಈ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ, ಬಿಟೆಕ್ (ಆಹಾರ ತಂತ್ರಜ್ಞಾನ) ಕೋರ್ಸ್ ಮಾಡಿ, ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.

ಈ ಕೋರ್ಸ್ ನಂತರ, ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಆಹಾರ ಪದಾರ್ಥ ಮತ್ತು ಪಾನೀಯ ತಯಾರಿಕಾ ಉದ್ದಿಮೆಗಳು, ಆಹಾರ ಸಂಬಂಧಿತ (ಕೃತಕ ಮತ್ತು ನೈಸರ್ಗಿಕ ಸಂರಕ್ಷಕಗಳು, ಬಣ್ಣಗಳು, ಸ್ವಾದಗಳು ಇತ್ಯಾದಿ) ಉದ್ದಿಮೆಗಳು, ಕೃಷಿ ಉದ್ದಿಮೆಗಳು, ಸಾವಯವ ಉದ್ದಿಮೆಗಳು, ಹೋಟೆಲ್ಸ್ ಮತ್ತು ರೆಸ್ಟೋರೆಂಟ್ಸ್, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಫಾರ್ಮಾ ಉದ್ದಿಮೆಗಳು, ಸಂಶೋಧನಾ ಸಂಸ್ಥೆಗಳು, ಆಹಾರ ಪರೀಕ್ಷಾ ಪ್ರಯೋಗಾಲಯಗಳು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವಿಪುಲವಾದ ಉದ್ಯೋಗಾವಕಾಶಗಳಿವೆ. ಬಿಟೆಕ್ ನಂತರ ಎಂಟೆಕ್ ಮಾಡಿ, ಈ ಕ್ಷೇತ್ರದಲ್ಲಿ ಹೆಚ್ಚಿನ ತಜ್ಞತೆಯನ್ನು ಪಡೆಯಬಹುದು. ವೃತ್ತಿಯ ಅನುಭವದ ನಂತರ ಸ್ವಂತ ಉದ್ದಿಮೆಯನ್ನೂ ಪ್ರಾರಂಭಿಸಬಹುದು.

Q12. ನಾನು ಬಿಸಿಎ ಮುಗಿಸಿದ್ದೇನೆ. ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು ಅಂದುಕೊಂಡಿದ್ದೇನೆ. ಆದರೆ, ಎಂಸಿಎ ಕೋರ್ಸ್ ಸೇರುವುದೋ ಅಥವಾ ಕೆಲಸಕ್ಕೆ ಸೇರಿ ಪರೀಕ್ಷೆಗೆ ಸಿದ್ದತೆ ನಡೆಸುವುದೋ ಎನ್ನುವ ಗೊಂದಲದಲ್ಲಿದ್ದೇನೆ. ನಿಮ್ಮ ಸಲಹೆ ನೀಡಿ.

ನೀವು ತಿಳಿಸಿರುವ ಎರಡೂ ವೃತ್ತಿಯ ಆಯ್ಕೆಗಳಿಗೆ ಉಜ್ವಲ ಭವಿಷ್ಯವಿದೆ. ಹಾಗಾಗಿ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಿ.

Q13. ನಾನು ಡಿಪ್ಲೊಮಾ (ಸಿವಿಲ್) ವಿದ್ಯಾರ್ಥಿ. ನಾನು ಈಗಾಗಲೇ ಡಿಸಿಇಟಿ ಪರೀಕ್ಷೆ ಬರೆದು ಮುಂದಿನ ಹಂತದ ಸೀಟು ಹಂಚಿಕೆಯಲ್ಲಿ ಭಾಗವಹಿಸಿದ್ದೇನೆ. ಆದರೆ, ಡಿಪ್ಲೊಮಾ ನಂತರ ಮುಂದೇನು ಮಾಡಬೇಕು ಎಂಬ ಗೊಂದಲವಿದೆ. ಬಿಇ ಮಾಡಿದರೆ 3 ವರ್ಷ ಆಗುತ್ತದೆ. ಅತಿ ಕಡಿಮೆ ಸಮಯದಲ್ಲಿ ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರಬೇಕು. ಡಿಪ್ಲೊಮಾ ನಂತರ ಬಿಇ ಕೋರ್ಸ್ ಆಯ್ಕೆಗಳ ಮಾಹಿತಿ ನೀಡಿ.

ಡಿಪ್ಲೊಮಾ (ಸಿವಿಲ್) ನಂತರ ಸಂಬAಧಿತ ವಿಷಯಗಳಲ್ಲಿ ಎಂಜಿನಿಯರಿAಗ್ ಕೋರ್ಸ್ (ಸಿವಿಲ್, ಟ್ರಾನ್ಸ್ಪೋರ್ಟೇಷನ್, ಎನ್ವಿರಾನ್ಮೆಂಟ್, ಕಂಸ್ಟçಕ್ಷನ್ ಇತ್ಯಾದಿ) ಮಾಡಬಹುದು. ಅಥವಾ, ಸಿವಿಲ್ ಎಂಜಿನಿಯರಿAಗ್ ಸಂಬAಧಿತ ಕೆಲಸಕ್ಕೆ ಸೇರಿ ಎರಡು ವರ್ಷದ ಅನುಭವದ ನಂತರ ಎಂಜಿನಿಯರಿAಗ್ ಕೋರ್ಸ್ ಅನ್ನು ಸಂಜೆ ಕಾಲೇಜಿನ ಮುಖಾಂತರ ಮಾಡಬಹುದು.

Q14. ನಾನು ಅಂತಿಮ ವರ್ಷದ ಪದವಿ (ವಿಜ್ಞಾನ) ವಿದ್ಯಾರ್ಥಿಯಾಗಿದ್ದು, ಪದವಿಯ ನಂತರ ಯಾವ ಕೋರ್ಸ್ಗೆ ಹೋಗಬೇಕೆಂಬ ಗೊಂದಲದಲ್ಲಿದ್ದೇನೆ. ಎಂಎಸ್‌ಸಿ ಮಾಡಬೇಕೇ ಅಥವಾ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದೋ ತಿಳಿಯುತ್ತಿಲ್ಲ. ಆದರೆ, ಇನ್ನು ಮೂರು ವರ್ಷದ ಒಳಗೆ ನಾನು ದುಡಿಯಬೇಕಿದೆ. ಈ ಎರಡರಲ್ಲಿ, ಯಾವ ದಾರಿ ಸೂಕ್ತ ತಿಳಿಸಿ.

ಎಂಎಸ್‌ಸಿ ನಂತರದ ವೃತ್ತಿಯ ಅವಕಾಶಗಳಿಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಇರುವ ವೃತ್ತಿಯ ಅವಕಾಶಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಯಾವ ಆಯ್ಕೆ ಮಾಡಿದರೂ ಸಹ, ಮೂರು ವರ್ಷದೊಳಗೆ ದುಡಿಯಲು ಪ್ರಾರಂಭಿಸಬಹುದು. ಹಾಗಾಗಿ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿಯಂತೆ ನಿಮಗೆ ಸರಿಹೊಂದುವ ವೃತ್ತಿಯೋಜನೆಯನ್ನು ತಯಾರಿಸಿ. ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವೀಡಿಯೋ ವೀಕ್ಷಿಸಿ:

Q15. ಬಿಎಸ್‌ಸಿ (ಕೃಷಿ ವ್ಯಾಪಾರ ನಿರ್ವಹಣೆ) ಕೋರ್ಸ್ ಬಗ್ಗೆ ಮಾಹಿತಿ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ.

ಬಿಎಸ್‌ಸಿ (ಕೃಷಿ ವ್ಯಾಪಾರ ನಿರ್ವಹಣೆ) ಕೃಷಿ ಉತ್ಪನ್ನಗಳ ವ್ಯವಸಾಯ, ಮಾರಾಟ ಮತ್ತು ನಿರ್ವಹಣೆಗೆ ಬೇಕಾಗುವ ಜ್ಞಾನ ಮತ್ತು ಕೌಶಲಗಳನ್ನು ಕಲಿಸುವ ನಾಲ್ಕು ವರ್ಷದ ಕೋರ್ಸ್.

ನಮ್ಮ ದೇಶದಲ್ಲಿ ಬೆಳೆಗಳ ಹಾಳಾಗುವಿಕೆ, ಪ್ರವಾಹ, ಕೀಟಗಳು, ರೋಗಗಳು ಇತ್ಯಾದಿ ಕಾರಣಗಳಿಂದ ಪ್ರತಿ ವರ್ಷ ಸುಮಾರು ಶೇ 20 ಕ್ಕೂ ಹೆಚ್ಚು ಬೆಳೆ ನಾಶವಾಗುತ್ತದೆ. ಹಾಗಾಗಿ, ಕೃಷಿ ಸಂಬಂಧಿತ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಅಧಿಕ ಇಳುವರಿ, ಸಮಯದ ಉಳಿತಾಯ, ಉತ್ಪಾದನಾ ವೆಚ್ಚದ ಕಡಿತ, ಉತ್ಪನ್ನಗಳ ಸಂರಕ್ಷಣೆ, ಸಂಸ್ಕರಣೆ, ಸಾಗಣೆ ಮತ್ತು ಮಾರಾಟ ನಿರ್ವಹಣೆ ಕುರಿತ ಅತ್ಯಂತ ಉಪಯುಕ್ತ ಮಾಹಿತಿಯನ್ನು ಈ ಕೋರ್ಸ್ ನಲ್ಲಿ ನೀಡಲಾಗುತ್ತದೆ. ಹಾಗಾಗಿ, ಈ ಕೋರ್ಸ್ ಮಾಡಿರುವ ಪದವೀಧರರಿಗೆ ಹೆಚ್ಚಿನ ಬೇಡಿಕೆಯಿದೆ.

ಈ ಕೋರ್ಸ್ ನಂತರ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಕೃಷಿ ಉದ್ದಿಮೆಗಳು, ಆಹಾರ ಸಂಬAಧಿತ ಉದ್ದಿಮೆಗಳು, ಸಾವಯವ ಉದ್ದಿಮೆಗಳು, ರಸಗೊಬ್ಬರ ಮತ್ತು ಕೀಟನಾಶಕ ಸಂಸ್ಥೆಗಳು, ಕೃಷಿ ಯಂತ್ರೋಪಕರಣಗಳು, ಬ್ಯಾಂಕಿAಗ್, ಸಂಶೋಧನಾ ಸಂಸ್ಥೆಗಳು, ಪ್ರಯೋಗಾಲಯಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ.

ಹಾಗೂ ನಿಮಗೆ ಅಭಿರುಚಿಯಿದ್ದಲ್ಲಿ, ಜ್ಞಾನ ಮತ್ತು ಕೌಶಲಗಳ ಸದುಪಯೋಗದಿಂದ ಸ್ವಂತ ಕೃಷಿ ಆರಂಭಿಸಿ, ಪ್ರಯೋಗಶೀಲ ರೈತರಾಗಿ, ನಾಡಿನ ಇನ್ನಿತರ ರೈತರಿಗೂ ಮಾದರಿಯಾಗಬಹುದು.

ನಾನು ಎಂಜಿನಿಯರಿAಗ್ 5 ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದು, ಸಿವಿಲ್ ಎಂಜಿನಿಯರಿAಗ್ ಲೈಸೆನ್ಸ್ ಪಡೆದುಕೊಳ್ಳಬೇಕಿದೆ. ಅದನ್ನು ಪಡೆದುಕೊಳ್ಳುವ ದಾರಿ ಯಾವುದು?

ಸಿವಿಲ್ ಲೈಸೆನ್ಸ್ ವಿವರಗಳಿಗಾಗಿ ಗಮನಿಸಿ: https://www.governmentofficework.com/how-to-get-civil-contractor-license-in-karnataka

ನಾನು ಎಂಎಸ್‌ಸಿ (ಕೃಷಿ) ಪದವಿಯನ್ನು ಪೂರ್ಣಗೊಳಿಸಿರುತ್ತೇನೆ. ನನಗೆ ಐಎಎಸ್ ಅಧಿಕಾರಿ ಆಗಬೇಕೆಂಬ ಕನಸಿದೆ. ಆದರೆ ಪಿಎಚ್.ಡಿ (ಕೃಷಿ) ಮಾಡಿದರೆ ಪ್ರೊಫೆಸರ್ ಆಗಿ ಕೆಲಸ ಸಿಗುವ ಸಾಧ್ಯತೆ ಹೆಚ್ಚಿದೆ. ಈ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು ಎಂದು ಗೊತ್ತಾಗುತ್ತಿಲ್ಲ.

ನೀವು ತಿಳಿಸಿರುವ ಎರಡೂ ವೃತ್ತಿಯ ಆಯ್ಕೆಗಳಿಗೆ ಉಜ್ವಲ ಭವಿಷ್ಯವಿದೆ. ಹಾಗಾಗಿ, ನಿಮ್ಮ ಸ್ವಾಭಾವಿಕ ಆಸಕ್ತಿ, ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಿ.

Q16. ಸರ್, ನಾನು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮೊದಲ ವರ್ಷದ ವಿದ್ಯಾರ್ಥಿ. ನಾನು ಎಸ್‌ಡಿಎ ಪರೀಕ್ಷೆ ಬರೆದಿದ್ದು ಎಸ್‌ಡಿಎ ಗೆ ಆಯ್ಕೆಯಾದರೆ, ಎಂಜಿನಿಯರಿAಗ್ ಕೋರ್ಸ್ ಮುಂದುವರಿಸುವುದು ಸಾಧ್ಯವೇ?

ಮೆಕ್ಯಾನಿಕಲ್ ಎಂಜಿನಿಯರಿಂಗ್ ನಾಲ್ಕು ವರ್ಷದ ಪೂರ್ಣಾವಧಿ ಕೋರ್ಸ್. ಹಾಗಾಗಿ, ನಮಗಿರುವ ಮಾಹಿತಿಯಂತೆ, ಎಸ್‌ಡಿಎ ವೃತ್ತಿಯಲ್ಲಿದ್ದುಕೊಂಡು ಎಂಜಿನಿಯರಿಂಗ್ ಕೋರ್ಸ್ ಅನ್ನು ಮುಂದುವರಿಸುವುದು ಸಾಧ್ಯವಿಲ್ಲ. ಹಾಗೂ, ಎಸ್‌ಡಿಎ ವೃತ್ತಿ ಮತ್ತು ಎಂಜಿನಿಯರಿಂಗ್ ವೃತ್ತಿಗಳ ಯಶಸ್ಸಿಗೆ ಬೇಕಾಗುವ ಜ್ಞಾನ, ಕೌಶಲ ಮತ್ತು ಅಭಿರುಚಿಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಆದ್ದರಿಂದ, ನಿಮ್ಮ ಸ್ವಾಭಾವಿಕ ಪ್ರತಿಭೆ, ಅಭಿರುಚಿ ಮತ್ತು ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವೃತ್ತಿಯೋಜನೆಯನ್ನು ತಯಾರಿಸಿ, ಅದರಂತೆ ನಿರ್ಧರಿಸುವುದು ಸೂಕ್ತ.

Q17. ಬಿಟೆಕ್ (ಆಹಾರ ತಂತ್ರಜ್ಞಾನ ) ಆದ ಮೇಲೆ ಎಂ.ಟೆಕ್ ಮಾಡುವುದು ಕಡ್ಡಾಯವೇ? ಬಿಟೆಕ್ ಆದ ಮೇಲೆ ಉದ್ಯೋಗ ಸಿಗುವುದಿಲ್ಲವೇ?

ಬಿಟೆಕ್ ಮಾಡಿದ ನಂತರ ಆಹಾರ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಪುಲವಾದ ಉದ್ಯೋಗಾವಕಾಶಗಳಿವೆ. ಹಾಗಾಗಿ, ಹೆಚ್ಚಿನ ತಜ್ಞತೆ ಬೇಕಿದ್ದರೆ ಮಾತ್ರ ಎಂ.ಟೆಕ್ ಮಾಡಬಹುದು.

Q18. ನಾನು ಪ್ರಸ್ತುತ ಎಂಎಸ್‌ಸಿ (ತೋಟಗಾರಿಕೆ) ಪದವಿಯನ್ನು ಮಾಡುತ್ತಿದ್ದೇನೆ. ಮುಂದೆ ಪಿಎಚ್.ಡಿ ಮಾಡಿ ಸಹಾಯಕ ಪ್ರಾಧ್ಯಾಪಕನಾಗಬೇಕು ಎನ್ನುವುದೇ ನನ್ನ ಬಾಲ್ಯದ ಕನಸು. ಆದರೆ, ಸಾಕಷ್ಟು ಪದವೀಧರರು ನಿರುದ್ಯೋಗಿಗಳಾಗಿರುವುದರಿಂದ ಪಿಎಚ್.ಡಿ ಮಾಡುವುದು ವ್ಯರ್ಥ ಅನಿಸುತ್ತಿದೆ. ಏನು ಮಾಡಬೇಕು ಎಂದು ತೋಚುತ್ತಿಲ್ಲ. ದಯಮಾಡಿ ಸಲಹೆ ನೀಡಿ.

ಉತ್ತಮ ಪ್ರಾಧ್ಯಾಪಕರಾಗಲು ವಿಷಯದ ಕುರಿತು ಆಳವಾದ ಜ್ಞಾನದ ಜೊತೆಗೆ ಸಂವಹನ ಕೌಶಲ, ಸಮಯದ ನಿರ್ವಹಣೆ, ತಾಳ್ಮೆ, ಸಹನೆ, ನಾಯಕತ್ವದ ಕೌಶಲ ಮತ್ತು ಈ ವೃತ್ತಿಯ ಬಗ್ಗೆ ಅಭಿರುಚಿಯಿರಬೇಕು. ಇವೆಲ್ಲವೂ ನಿಮ್ಮಲ್ಲಿದ್ದು, ಈ ವೃತ್ತಿಯನ್ನು ಸಮರ್ಥವಾಗಿ ನಿಭಾಯಿಸುವ ಆತ್ಮವಿಶ್ವಾಸವಿದ್ದರೆ, ನಿಮ್ಮ ಬಾಲ್ಯದ ಕನಸನ್ನು ಸಾಕಾರಗೊಳಿಸಲು ಪ್ರಯತ್ನಿಸಿ. ಆದರೆ, ಈ ವೃತ್ತಿ ಸಂಬಂಧವಾಗಿ ಇನ್ನೂ ಸಂಶಯ, ಆತಂಕಗಳಿದ್ದಲ್ಲಿ, ಎಂಎಸ್‌ಸಿ ನಂತರ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿರುವ ವೈವಿಧ್ಯಮಯ ಅವಕಾಶಗಳನ್ನು ಬಳಸಿಕೊಂಡು, ನಿಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.

Q19. ಕೃತಕ ಬುದ್ದಿಮತ್ತೆ (ಎಐ) ಮತ್ತು ರೊಬೊಟಿಕ್ಸ್ನಿಂದ ಉದ್ಯೋಗ ನಷ್ಟವಾಗುತ್ತಿದೆಯೇ ಅಥವಾ ಸೃಷ್ಟಿಯಾಗುತ್ತಿದೆಯೇ?

ಕೃತಕ ಬುದ್ದಿಮತ್ತೆಯನ್ನು ಉಪಯೋಗಿಸಿ, ಯಂತ್ರಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯವನ್ನು ನಿರ್ವಹಿಸುವಂತೆ ಮಾಡಿ, ಮಾನವ ಸಂಪಲ್ಮೂಲನವನ್ನು ಇನ್ನೂ ಹೆಚ್ಚು ಫಲದಾಯಕ ಕಾರ್ಯಗಳಿಗೆ ನಿಯೋಜಿಸಲಾಗುತ್ತದೆ. ಉದಾಹರಣೆಗಳು: ವಿಮಾನಗಳಲ್ಲಿನ ಆಟೋಪೈಲಟ್, ಸ್ವಯಂಚಾಲಿತ ಕಾರುಗಳು, ಸಂಚಾರ ನಿರ್ವಹಣೆ, ಟ್ಯಾಕ್ಸಿ ಸೇವೆಗಳು, ಇಮೇಲ್ಸ್, ಸಾಮಾಜಿಕ ಮಾಧ್ಯಮಗಳು, ಆನ್‌ಲೈನ್ ಶಾಪಿಂಗ್ ಇತ್ಯಾದಿ. ಹಾಗೆಯೇ, ಕೃತಕ ಬುದ್ದಿಮತ್ತೆ, ಮೆಷಿನ್ ಲರ್ನಿಂಗ್ ಇತ್ಯಾದಿ ಸಿದ್ಧಾಂತಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡು, ಸಾಮಾನ್ಯವಾಗಿ ಮಾನವರು ಮಾಡುವ ಅನೇಕ ಕೆಲಸಗಳನ್ನು ಯಂತ್ರಗಳಿಂದ ಮಾಡಿಸುವುದೇ ರೊಬೊಟಿಕ್ಸ್. ಈ ರೋಬೊಗಳನ್ನು ಪ್ರತಿನಿತ್ಯದ ಸಾಮಾನ್ಯ ಕೆಲಸಗಳಿಗೂ ಮತ್ತು ಅತಿ ಹೆಚ್ಚಿನ ನಿಖರತೆಯ ಅಗತ್ಯವಿರುವ ಕೆಲಸಗಳಿಗೂ ಉಪಯೋಗಿಸಬಹುದು. ಮಾನವರಿಗೆ ಹೋಲಿಸಿದರೆ, ಈ ರೋಬೊಗಳ ಕಾರ್ಯಕ್ಷಮತೆ ಅತಿ ಹೆಚ್ಚಾಗಿರುವುದರಿಂದ, ಒಂದು ಅಂದಾಜಿನ ಪ್ರಕಾರ, ಇನ್ನು ಐದು ವರ್ಷಗಳಲ್ಲಿ ಸುಮಾರು ಶೇ 30 ಮಾನವನ ಉದ್ಯೋಗಗಳು ರೋಬೊಗಳ ಪಾಲಾಗಲಿದೆ! ಉದಾಹರಣೆಗಳು: ಕಾಲ್ ಸೆಂಟರ್ಸ್, ಗ್ರಾಹಕ ಸಂಬಂಧ ನಿರ್ವಹಣೆ, ಆಟೊಮೊಬೈಲ್, ವೆಲ್ಡಿಂಗ್, ಪೇಂಟಿಂಗ್, ಜವಳಿ ಮತ್ತು ವಸ್ತ್ರೋದ್ಯಮ, ಪ್ಯಾಕಿಂಗ್, ಸಾಮಾನು ಸಾಗಣೆ ಮತ್ತು ನಿರ್ವಹಣೆ, ಸುರಕ್ಷತೆ ಮತ್ತು ಭದ್ರತೆ, ಶಿಕ್ಷಣ, ಅಡುಗೆ ಕೆಲಸಗಳು, ರೆಸ್ಟೋರೆಂಟ್ ಸೇವೆಗಳು ಇತ್ಯಾದಿ.

ಅನೇಕ ಕ್ಷೇತ್ರಗಳಲ್ಲಿ, ಹೆಚ್ಚುವರಿದ ಯಾಂತ್ರೀಕರಣದ ಪರಿಣಾಮವಾಗಿ, ನಿನ್ನೆಯವರೆಗೂ ಇದ್ದ ಕೆಲಸಗಳು ಇಂದು ಮಾಯವಾಗುತ್ತಿವೆ; ಮುಂದಿನ ದಿನಗಳ ಕೆಲಸಗಳಿಗೆ ಅಗತ್ಯವಿರುವ ಕೌಶಲಭರಿತ ಮಾನವಸಂಪಲ್ಮೂಲನ ಇಂದು ತಯಾರಾಗುತ್ತಿಲ್ಲ. ಹಾಗಾಗಿ, ಕೆಲಸಕ್ಕಾಗಿ ಹೆಣಗಾಡುತ್ತಿರುವ ಉದ್ಯೋಗಾರ್ಥಿಗಳು ಒಂದೆಡೆಯಾದರೆ, ಕೌಶಲಭರಿತ ಅಭ್ಯರ್ಥಿಗಳೇ ಸಿಗುತ್ತಿಲ್ಲವೆಂಬ ಆತಂಕ ಉದ್ಯೋಗದಾತರದ್ದು. ಪರಿಣಾಮವಾಗಿ ನಿರುದ್ಯೋಗದ ಸಮಸ್ಯೆ ಉಲ್ಬಣಗೊಂಡು ಗ್ರಾಹಕರ ಕೊಳ್ಳುವ ಸಾಮರ್ಥ್ಯ ಕ್ರಮೇಣ ಕಮ್ಮಿಯಾಗುತ್ತಿದೆ.

ವಿಶ್ವ ಆರ್ಥಿಕ ವೇದಿಕೆಯ ಕಳೆದ ವರ್ಷದ ವರದಿಯಂತೆ 2025 ರ ಸಮಯಕ್ಕೆ ಜಗತ್ತಿನ 85 ದಶಲಕ್ಷ ಕೆಲಸಗಳು ಮಾನವರಿಂದ ಯಂತ್ರಗಳ ಪಾಲಾಗಲಿದೆ; ಆದರೆ, ಇದೇ ಸಮಯದಲ್ಲಿ ಆರ್ಥಿಕ ಅಭಿವೃದ್ಧಿಯಿಂದ 97 ದಶಲಕ್ಷ ನೂತನ ಕೆಲಸಗಳೂ ಸೃಷ್ಟಿಯಾಗಲಿದೆ. ಎರಡು ದಶಕಗಳ ಹಿಂದೆ, ಕಂಪ್ಯೂಟರ್ ಬಳಕೆ ಸಾರ್ವತ್ರಿಕವಾದಾಗ ಉದ್ಯೋಗ ನಷ್ಟಗಳಾದರೂ ಮಾನವನ ಕಾರ್ಯಕ್ಷಮತೆ ಹೆಚ್ಚಾಗಲು ಕಾರಣವೂ ಆಯಿತು. ಇಂದು, ಕಂಪ್ಯೂಟರ್, ಸ್ಮಾರ್ಟ್ ಫೋನ್‌ಗಳಿಲ್ಲದೆ ವೃತ್ತಿಜೀವನ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಈ ಸಾಧನಗಳು ನಮ್ಮ ಜೀವನವನ್ನು ಆವರಿಸಿಕೊಂಡಿದೆ. ಹಾಗಾಗಿ, ಹೊಸ ಆವಿಷ್ಕಾರಗಳು, ಯಂತ್ರೋಪಕರಣಗಳು, ಸಾಧನಗಳು ಅಬಿವೃದ್ಧಿಯ ಪಥದಲ್ಲಾಗುವ ಬೆಳವಣಿಗೆಗಳು. ಪರಿಣಾಮವಾಗಿ, ನೂತನ ತಂತ್ರಜ್ಞಾನದ ಅಳವಡಿಕೆ ಉದ್ಯಮಗಳಲ್ಲಿ ಆಗುತ್ತಿದ್ದಂತೆ, ಭವಿಷ್ಯದ ಉದ್ಯೋಗಗಳ ಸ್ವರೂಪ, ಗುಣಲಕ್ಷಣಗಳು ಬದಲಾಗುವುದೂ ಒಂದು ಸಹಜ ಪ್ರಕ್ರಿಯೆ.

ಭವಿಷ್ಯದ ಉದ್ಯೋಗಗಳಿಗೆ ವಿಮರ್ಶಾತ್ಮಕ ಚಿಂತನೆ, ವಿಶ್ಲೇಷಾತ್ಮಕ ಕೌಶಲ, ಸಕ್ರಿಯ ಕಲಿಕೆ, ಸ್ವಯಂ-ನಿರ್ವಹಣೆ ಇತ್ಯಾದಿ ಪ್ರಾಥಮಿಕ ಕೌಶಲಗಳು ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಇದರರ್ಥ, ಸಾಂಪ್ರದಾಯಿಕ ಕ್ಷೇತ್ರಗಳ ಅವಕಾಶಗಳು ಇರುವುದಿಲ್ಲ ಎಂದಲ್ಲ; ಆದರೆ, ನೂತನ ಅವಕಾಶಗಳತ್ತ ಗಮನವನ್ನು ಹರಿಸಿ, ನಿಮ್ಮ ಸಾಮರ್ಥ್ಯ, ಅಭಿರುಚಿಗೆ ತಕ್ಕಂತೆ ವೃತ್ತಿ ಮತ್ತು ಅದರಂತೆ ನಿಮ್ಮ ಶಿಕ್ಷಣದ ಆಯ್ಕೆ ಮತ್ತು ಕೌಶಲಾಭಿವೃದ್ಧಿಯಿರಲಿ ಎಂದು.

Q20. ಕಂಪ್ಯೂಟರ್ ವಿಜ್ಞಾನ ಹಾಗೂ ಅಥವಾ ಮಾಹಿತಿ ವಿಜ್ಞಾನದ ಕೋರ್ಸ್ಗಳು ಎಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬAಧಪಟ್ಟಿದ್ದೇ ಅಥವಾ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಪಟ್ಟಿದ್ದೇ? ನಮ್ಮ ದೇಶಕ್ಕೆ ಅನುಗುಣವಾದ ಎಂಜಿನಿಯರಿಂಗ್‌ನ ಇತರ ಕೋರ್ಸ್ಗಳ ಕುರಿತು ಮಾಹಿತಿ ನೀಡಿ.

ಎಲ್ಲಾ ಎಂಜಿನಿಯರಿಂಗ್ ಕೋರ್ಸ್ಗಳು ವಿಜ್ಞಾನ ಕ್ಷೇತ್ರಕ್ಕೆ ಸಂಬAಧಪಟ್ಟ ಕೋರ್ಸ್ಗಳು ಅಥವಾ ಔದ್ಯೋಗಿಕ ವಿಜ್ಞಾನದ ಕೋರ್ಸ್ಗಳೆಂದು ಹೇಳಬಹುದು.

ಈಗ ಸುಮಾರು ಐವತ್ತಕ್ಕೂ ಹೆಚ್ಚು ಎಂಜಿನಿಯರಿಂಗ್ ಕೋರ್ಸ್ಗಳಿವೆ. ಈ ಎಲ್ಲಾ ಕೋರ್ಸ್ಗಳಲ್ಲಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟಿçಕಲ್, ಎಲೆಕ್ಟ್ರಾನಿಕ್ಸ್, ಕೆಮಿಕಲ್, ಆರ್ಕಿಟೆಕ್ಚರ್, ಬಯೋಟೆಕ್, ಆಟೊಮೊಬೈಲ್, ಇನ್‌ಸ್ಟುçಮೆಂಟೇಷನ್, ಮೈನಿಂಗ್ ಇತ್ಯಾದಿ ಕೋರ್ಸ್ಗಳ ಉಪಯುಕ್ತತೆ ಹೆಚ್ಚಾಗಿ ನಮ್ಮ ದೇಶದ ಉದ್ಯಮಗಳಿಗೆ ಸಂಬAಧಪಟ್ಟದ್ದು. ಕಂಪ್ಯೂಟರ್ ವಿಜ್ಞಾನ ಸೇರಿದಂತೆ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕಿರುವ ಬೇಡಿಕೆ ಕೇವಲ ನಮ್ಮ ದೇಶಕ್ಕೆ ಸೀಮಿತವಾಗದೆ ಹೆಚ್ಚಿನ ವ್ಯವಹಾರ, ಆದಾಯ ಬೇರೆ ರಾಷ್ಟçಗಳ ಉದ್ಯಮಗಳಿಂದಲೇ ಎನ್ನುವುದನ್ನು ನಾವು ಗಮನಿಸಬೇಕು. ಆದ್ದರಿಂದಲೇ, ಬೇರೆ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಹೋಲಿಸಿದರೆ, ಈ ಕ್ಷೇತ್ರ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಹಾಗಾಗಿ, ಆಯಾ ಉದ್ಯಮಗಳ ಅಭಿವೃದ್ಧಿಯಂತೆ ಮಾನವ ಸಂಪಲ್ಮೂಲನದ ಬೇಡಿಕೆ ಮತ್ತು ಬೇಡಿಕೆಯಂತೆ ಪೂರೈಕೆಯಿರುವುದು ಸಹಜ.

Q21. ನಾನು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿ. ಸಿಎ ಮಾಡಬೇಕು ಎಂದುಕೊಂಡಿದ್ದೇನೆ. ಮಾಡುವ ವಿಧಾನ ಮತ್ತು ಮಾಹಿತಿ ತಿಳಿಸಿ. ಸಿಎ ಕಲಿಯಲು ಎಷ್ಟು ಹಣ ಬೇಕಾಗುತ್ತದೆ? ಸಾಲ ತೆಗೆದುಕೊಳ್ಳಬಹುದೇ?

ಬಿಕಾಂ ಪರೀಕ್ಷೆಯಲ್ಲಿ ಶೇಕಡ 55 ಗಳಿಸಿದಲ್ಲಿ ಸಿಎ ಇಂಟರ್‌ಮೀಡಿಯೆಟ್ ಕೋರ್ಸಿಗೆ ನೇರವಾಗಿ ನೋಂದಾಯಿಸಿಕೊಂಡು, 3 ವರ್ಷದ ಆರ್ಟಿಕಲ್ ಟ್ರೈನಿಂಗ್‌ಗೆ ಸೇರಬೇಕು. ಇಂಟರ್‌ಮೀಡಿಯೆಟ್ ಪಾಸಾದ ನಂತರ ಫೈನಲ್ ಪರೀಕ್ಷೆಯಲ್ಲಿ ಪಾಸಾಗಬೇಕು. ಫೈನಲ್ ಪರೀಕ್ಷೆಗೆ ಮುಂಚೆ, ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಒಟ್ಟಾರೆ, ಸಿಎ ಕೋರ್ಸ್ ಮಾಡಲು ಕನಿಷ್ಟ 3-4 ವರ್ಷ ಬೇಕಾಗುತ್ತದೆ.

ಈ ವೃತ್ತಿಯಲ್ಲಿ ಯಶಸ್ವಿಯಾಗಲು ನಿಷ್ಠೆ, ಪ್ರಾಮಾಣಿಕತೆಯ ಜೊತೆಗೆ ಸಂಖ್ಯಾ ಕೌಶಲ, ವಿಶ್ಲೇಷಾತ್ಮಕ ಕೌಶಲ, ಆರ್ಥಿಕ ನಿರ್ವಹಣೆ ಮತ್ತು ವ್ಯಾಪಾರೋದ್ಯಮ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.

ಆರ್ಟಿಕಲ್ ಟ್ರೈನಿಂಗ್‌ ಅನ್ನು ಪ್ರತಿಷ್ಠಿತ ಆಡಿಟರ್ ಸಂಸ್ಥೆಗಳಲ್ಲಿ ಮಾಡುವುದು ಕಲಿಕೆಯ ದೃಷ್ಟಿಯಿಂದ ಸೂಕ್ತ. ಟ್ರೆöÊನಿಂಗ್ ಅವಧಿಯಲ್ಲಿ ತರಬೇತಿ ಭತ್ಯ ಸಿಗುತ್ತದೆ. ಹಾಗಾಗಿ, ಸಿಎ ಕೋರ್ಸ್ ಮಾಡಲು ಹೆಚ್ಚಿನ ಹಣದ ಅವಶ್ಯಕತೆ ಇರುವುದಿಲ್ಲ.

ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ. ಹಲವು ವರ್ಷಗಳ ಅನುಭವದ ನಂತರ ಸ್ವತಂತ್ರವಾಗಿ ಪ್ರಾಕ್ಟೀಸ್ ಮಾಡಬಹುದು. ಹೆಚ್ಚಿನ ವಿವರಗಳಿಗೆ ಗಮನಿಸಿ: https://icai.org/

Q22. ನಾನು ದ್ವಿತೀಯ ಪಿಯುಸಿ ಓದುತ್ತಿದ್ದು, ಎಥಿಕಲ್ ಹ್ಯಾಕರ್ ಆಗಬೇಕೆಂದು ತುಂಬಾ ಆಸೆ ಇದೆ. ಅದಕ್ಕಾಗಿ ಯಾವ ಕೋರ್ಸ್ ಮಾಡಬೇಕು? ಈ ಕ್ಷೇತ್ರದ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ.

ಸಂಸ್ಥೆಗಳ ಡಿಜಿಟಲ್ ಸುರಕ್ಷತೆಯನ್ನು ಸಮಗ್ರವಾಗಿ ಪರಿಶೀಲಿಸಿ, ಹಾರ್ಡ್ವೇರ್, ಸಾಫ್ಟ್ವೇರ್ ಮತ್ತು ನೆಟ್‌ವರ್ಕ್ಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಿ, ಸಂಸ್ಥೆಗಳ ಕಂಪ್ಯೂಟರ್ ವ್ಯವಸ್ಥೆಗಳನ್ನು ಆಂತರಿಕ/ಬಾಹ್ಯಲೋಕದ ಆಕ್ರಮಣಗಳಿಂದ ರಕ್ಷಿಸುವುದು, ಎಥಿಕಲ್ ಹ್ಯಾಕಿಂಗ್‌ನ ಮೂಲ ಉದ್ದೇಶ. ಪಿಯುಸಿ ನಂತರ ನೇರವಾಗಿ ಎಥಿಕಲ್ ಹ್ಯಾಕಿಂಗ್ ಕೋರ್ಸ್ ಮಾಡಬಹುದು; ಆದರೆ, ಹೆಚ್ಚಿನ ತಜ್ಞತೆಗಾಗಿ, ಕಂಪ್ಯೂಟರ್ ಸಂಬಂಧಿತ ಎಂಜಿನಿಯರಿಂಗ್ ಕೋರ್ಸ್ ನಂತರ ಎಥಿಕಲ್ ಹ್ಯಾಕಿಂಗ್ ಕೋರ್ಸ್ ಮಾಡುವುದು ಸೂಕ್ತ. ಕೋರ್ಸ್ ನಂತರ, ಖಾಸಗಿ ಕ್ಷೇತ್ರದ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು, ಎಥಿಕಲ್ ಹ್ಯಾಕಿಂಗ್ ಸಂಸ್ಥೆಗಳು, ಸಾಮಾಜಿಕ ಮಾಧ್ಯಮ, ಬ್ಯಾಂಕಿಂಗ್, ಇನ್ಸ್ಯೂರೆನ್ಸ್  ಮತ್ತು ಇನ್ವೆಸ್ಟ್ಮೆಂಟ್ ಸಂಸ್ಥೆಗಳು, ರಕ್ಷಣಾ ಮತ್ತು ಭದ್ರತಾ ಸಂಸ್ಥೆಗಳು, ಸೂಕ್ಷ ವಲಯದ ಸರ್ಕಾರಿ ಸಂಸ್ಥೆಗಳು ಮತ್ತು ಇಲಾಖೆಗಳೂ ಸೇರಿದಂತೆ ವಿಪುಲವಾದ ಉದ್ಯೋಗಾವಕಾಶಗಳಿವೆ.

ಕಂಪ್ಯೂಟರ್ ವ್ಯವಸ್ಥೆಗಳ ಕಾರ್ಯಾಚರಣೆ ಮತ್ತು ಭದ್ರತೆಗಳ ಕುರಿತು ಜ್ಞಾನ ಮತ್ತು ಕೌಶಲಗಳನ್ನು ಗಳಿಸಿ, ಬೇಡಿಕೆಯಲ್ಲಿರುವ ಈ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬಹುದು.

Q23. ಸರ್, ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೇಗೆ ಓದಬೇಕು ಎಂದು ತಿಳಿಸಿ?

ಪರಿಣಾಮಕಾರಿ ಓದುವಿಕೆ ಕುರಿತು ಕಳೆದ ವರ್ಷದ ಆಗಸ್ಟ್ 23 ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವೀಡಿಯೊ ವೀಕ್ಷಿಸಿ.