Q & A for Students – August 2022

Q1. ನನ್ನ ಮಗಳು ಮೊದಲ ವರ್ಷದ ಪಿಯುಸಿ (ಪಿಸಿಎಂಬಿ) ಓದುತ್ತಿದ್ದು, ದ್ವಿತೀಯ ಪಿಯುಸಿ ನಂತರ, ಯಾವ ಕೋರ್ಸ್ ಓದಿದರೆ ಯಾವ ನೌಕರಿ ಪಡೆಯಬಹುದು ಎಂಬ ಮಾಹಿತಿಯನ್ನು ದಯಮಾಡಿ ತಿಳಿಸಿ ಕೊಡಿ.

ವಿದ್ಯಾರ್ಥಿಗಳ ಆಸಕ್ತಿ, ಅಭಿರುಚಿ ಮತ್ತು ಸ್ವಾಭಾವಿಕ ಪ್ರತಿಭೆಯಂತೆ ವೃತ್ತಿಯೋಜನೆಯನ್ನು ಮಾಡಿ ಅದಕ್ಕೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಬೇಕು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/c/EducationalExpertManagementCareerConsultant

Q2. ನಾನು ಪಿಯುಸಿ (ವಿಜ್ಞಾನ) ಮಾಡಿದ್ದೇನೆ. ಐಎಎಸ್ ಆಫೀಸರ್ ಆಗಬೇಕೆಂಬ ಹಂಬಲವಿದೆ. ಪದವಿಯಲ್ಲಿ ಕಲಾ ವಿಭಾಗ ತೆಗೆದುಕೊಂಡರೆ ಹೆಚ್ಚಿನ ಅಂಕ ಪಡೆದು, ರ‍್ಯಾಂಕ್ ಪಡೆಯಲು ಸಾಧ್ಯವಾಗುತ್ತದೆ ಎಂದುಕೊAಡಿದ್ದೇನೆ. ಆದರೆ, ಕಡಿಮೆ ಉದ್ಯೋಗಾವಕಾಶದ ಕಾರಣ, ಮನೆಯವರು ಕಲಾ ವಿಭಾಗ ತೆಗೆದುಕೊಳ್ಳಲು ಬಿಡುತ್ತಿಲ್ಲ. ಸಲಹೆ ಕೊಡಿ ಸರ್.

ಯುಪಿಎಸ್‌ಸಿ ಕಠಿಣವಾದ ಮೂರು ಹಂತದ ಪರೀಕ್ಷೆ. ಈ ಪರೀಕ್ಷೆಯಲ್ಲಿ ನಿಮ್ಮ ಆಸಕ್ತಿಯ ಅನುಸಾರ, ಯಾವ ಐಚ್ಛಿಕ ವಿಷಯವನ್ನು ತೆಗೆದುಕೊಳ್ಳಬೇಕೆಂದು ಈಗಲೇ ನಿರ್ಧರಿಸಿದರೆ, ಪದವಿ ಹಂತದಲ್ಲಿ ಯಾವ ವಿಭಾಗ ತೆಗೆದುಕೊಳ್ಳಬಹುದೆಂದು ನಿರ್ಧರಿಸಬಹುದು. ವಿಜ್ಞಾನ ವಿಭಾಗದಲ್ಲೇ ಮುಂದುವರೆದರೆ, ಯುಪಿಎಸ್‌ಸಿ ಜೊತೆಗೆ ಇನ್ನಿತರ ಅವಕಾಶಗಳನ್ನೂ ಅನ್ವೇಷಿಸಬಹುದು. ಹಾಗೂ, ಕಲಾ ವಿಭಾಗದಲ್ಲಿ ಕಡಿಮೆ ಉದ್ಯೋಗಾವಕಾಶಗಳಿವೆ ಎನ್ನುವುದು ತಪ್ಪು ಅಭಿಪ್ರಾಯ.

Q3. ನಾನು ಬಿ.ಎಸ್ಸಿ (ಪಿಸಿಎಂಸಿ) ಮಾಡಿದ್ದೇನೆ. ಈಗ ಎಂ.ಎಸ್ಸಿ (ಭೂಗೋಳಶಾಸ್ತç) ಮಾಡಬೇಕು ಅಂದುಕೊಂಡಿದ್ದೇನೆ. ಇದರಿಂದ ಅನುಕೂಲ ಆಗಬಹುದೇ? ಈ ನಿರ್ಧಾರ ಸರಿಯೇ?

ಸಾಮಾನ್ಯವಾಗಿ, ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಸ್ವಾಭಾವಿಕ ಪ್ರತಿಭೆಯಂತೆ ವೃತ್ತಿಯೋಜನೆಯನ್ನು ಮಾಡಿ, ಅದಕ್ಕೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಬೇಕು. ವೃತ್ತಿಯೋಜನೆಯನ್ನು ಮಾಡದೆ ಕೋರ್ಸ್ ಆಯ್ಕೆ ಮಾಡಿದರೆ, ಇಂತಹ ಗೊಂದಲಗಳಿAದ, ಮುಂದಿನ ಬದುಕಿನ ಬಗ್ಗೆ ಆತಂಕಗಳು ಮೂಡುವುದು ಸಹಜ. ಈಗಲೂ, ಕಾಲ ಮಿಂಚಿಲ್ಲ; ನಿಮ್ಮ ಭವಿಷ್ಯದ ಕನಸಿನಂತೆ, ವೃತ್ತಿ ಯೋಜನೆಯನ್ನು ಮಾಡಿ, ಅದರಂತೆ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=MHnPg_sp6E0

Q4. ನಾನು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದೇನೆ. ಪೂರಕ ಪರೀಕ್ಷೆ ಬರೆದ ನಂತರ, ಏನು ಮಾಡಬಹುದು ತಿಳಿಸಿ ಸರ್.

ಪರೀಕ್ಷೆಯ ನಿರಾಸೆ ಯನ್ನು ಒಂದು ಸಣ್ಣ ಹಿನ್ನಡೆಯಂತೆ ಭಾವಿಸಿ. ಮುಖ್ಯವಾಗಿ, ಪರೀಕ್ಷೆಯಲ್ಲಿನ ವಿಫಲತೆಯ ಕಾರಣಗಳನ್ನು ಮೌಲ್ಯಮಾಪನ ಮಾಡಿ, ಮುಂದೆ ಹೀಗಾಗದಂತೆ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಿ. ಪೂರಕ ಪರೀಕ್ಷೆಯ ನಂತರ, ಜೀವನದ ಕನಸುಗಳು ಮತ್ತು ನಿಮ್ಮ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು, ಸೂಕ್ತವಾದ ವೃತಿಯೋಜನೆಯನ್ನು ಮಾಡಿ, ಅದರಂತೆ ಮುಂದಿನ ಕೋರ್ಸ್ ಆಯ್ಕೆಗಳಿರಲಿ. ಜೀವನದ ಪಾಠಶಾಲೆಯಲ್ಲಿ ಯಶಸ್ಸು ನಿಮ್ಮದಾಗಲಿ.

Q5. ಸರ್, ನಾನು ಬಿ.ಎಸ್ಸಿ (ಪಿಸಿಎಂ) ಮುಗಿಸಿ, ಕೆಎಎಸ್‌ಗೆ ತಯಾರಿ ನಡೆಸಿದ್ದೇನೆ. ಆದರೆ, ಆದರೆ ಈ ಸಲ ಎಂ.ಎಸ್ಸಿ (ಗಣಿತ) ಮಾಡಬೇಕು ಎಂದುಕೊAಡಿದ್ದೇನೆ. ಕೆಎಎಸ್ ತಯಾರಿ ಮುಂದುವರಿಸಲೇ ಅಥವಾ ಎಂ.ಎಸ್ಸಿ ಮಾಡಲೇ ಗೊತ್ತಾಗುತ್ತಿಲ್ಲ. ಎಂ.ಎಸ್ಸಿ (ಗಣಿತ)ದಲ್ಲಿ ಮುಂದುವರಿದರೆ ಉದ್ಯೋಗಾವಕಾಶಗಳು ಹೇಗಿವೆ ತಿಳಿಸಿ.

ಎಂ.ಎಸ್ಸಿ (ಗಣಿತ) ಪದವೀಧರರಿಗೆ ಬೇಡಿಕೆಯಿದ್ದು, ಸಾಕಷ್ಟು ಉದ್ಯೋಗಾವಕಾಶಗಳಿವೆ. ಖಾಸಗಿ ಕ್ಷೇತ್ರದ ಐಟಿ, ರಿಸರ್ಚ್ ಸಂಸ್ಥೆಗಳಲ್ಲಿ, ವೃತ್ತಿಯ ಅವಕಾಶಗಳಿವೆ. ಇದಲ್ಲದೆ, ಕೆಎಎಸ್/ಐಎಎಸ್ ಮಾಡಿ ಸರ್ಕಾರಿ ವಲಯದ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬಹುದು. ಎಂ.ಎಸ್ಸಿ ನಂತರ, ಡಾಕ್ಟರೇಟ್ ಮಾಡಿದರೆ ಶಿಕ್ಷಕ ವೃತ್ತಿಯ ಆಕರ್ಷಕ ಅವಕಾಶಗಳಿವೆ. ಹಾಗಾಗಿ, ಎಂ.ಎಸ್ಸಿ ಜೊತೆಗೆ ಕೆಎಎಸ್ ಪರೀಕ್ಷೆಗೆ ತಯಾರಿಯನ್ನೂ ಮಾಡಬಹುದೇ ಎಂದು ಪರಿಶೀಲಿಸಿ.

Q6. ಸಂಖ್ಯಾಶಾಸ್ತçದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಇಂಟೀರಿಯರ್ ಡಿಸೈನ್ ಕೋರ್ಸ್ ಮಾಡಲು ಮನಸ್ಸು ಮಾಡಿದ್ದೇನೆ. ಯಾವ ಕಾಲೇಜು ಸೂಕ್ತ ಎಂದು ಹೇಳಬಹುದೇ?

ಸಂಖ್ಯಾಶಾಸ್ತçದಲ್ಲಿ ಸ್ನಾತಕೋತ್ತರ ಪದವಿಯ ನಂತರ, ನೀವು ಬೇರೊಂದು ವಿಭಾಗದ ಕೋರ್ಸ್ ಮಾಡಲು ಬಲವಾದ ಕಾರಣಗಳಿರಬೇಕು. ಹಾಗಾಗಿ, ನಿಮ್ಮ ನಿರ್ಧಾರ ಸರಿಯೇ ಎಂದು ಮತ್ತೊಮ್ಮೆ ಅವಲೋಕಿಸಿ. ಉತ್ತಮ ಕಾಲೇಜು ಆಯ್ಕೆ ಪ್ರಕ್ರಿಯೆ ಕುರಿತ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ:

Q7. ನಾನು ದ್ವಿತೀಯ ಪಿಯುಸಿ ನಂತರ, ಹಿಂದಿ ಪ್ರಚಾರ ಸಮಿತಿ ನಡೆಸುವ ಹಿಂದಿ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ಇದನ್ನು ಪದವಿ ಎಂದು ಪರಿಗಣಿಸಬಹುದೇ? ಪದವಿ ಬೇಕೆಂದು ಕರೆಯುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವೆ?

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಪದವಿ ಕೋರ್ಸ್ಗೆ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಾನ್ಯತೆಯನ್ನು ಕಳೆದ ವರ್ಷ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ:

https://www.news18.com/news/education-career/ugc-approves-degrees-conferred-by-dakshina-bharat-hindi-prachar-sabha-4060058.html

Q8. ನಾನು ಬಿ.ಎಸ್ಸಿ (ಪಿಸಿಎಂ) ಪದವಿಯನ್ನು 2014ರಲ್ಲಿ ಪಡೆದಿದ್ದೆ. ಆರ್ಥಿಕ ಕಾರಣಗಳಿಂದಾಗಿ, ಟೈರ್ ಕಂಪನಿಯೊAದರಲ್ಲಿ ಕೆಲಸ ಮಾಡುತ್ತಿದ್ದೇನೆ. ಕಲಿತ ವಿಷಯಕ್ಕೂ ಇದಕ್ಕೂ ಯಾವುದೇ ಸಂಬAಧವಿಲ್ಲ. ಹಾಗಾಗಿ ಮ್ಯಾನೇಜರ್‌ನಿಂದ ನಿತ್ಯ ಬೈಗುಳ ತಿನ್ನುವಂತಾಗಿದೆ. ಈಗಾಗಲೇ ನನ್ನ ವಯಸ್ಸು 33. ಮುಂದಿನ ಭವಿಷ್ಯದ ಬಗ್ಗೆ ಚಿಂತೆಯಾಗಿದೆ ಸರ್. ಏನು ಮಾಡಬೇಕು ಹೇಳಿ.

ವೃತ್ತಿಯಲ್ಲಿ ಯಶಸ್ಸನ್ನು ಗಳಿಸಲು ವೃತ್ತಿ ಸಂಬAಧಿತ ಜ್ಞಾನ ಮತ್ತು ಕೌಶಲಗಳ ಜೊತೆಗೆ, ಸಕಾರಾತ್ಮಕ ಆಲೋಚನೆ, ನಿಷ್ಠೆ, ಪ್ರಾಮಾಣಿಕತೆ, ಸ್ವಯಂಪ್ರೇರಣೆ ಮತ್ತು ಆತ್ಮವಿಶ್ವಾಸವಿರಬೇಕು. ಆಗಲೇ, ನಿಮ್ಮ ಕಾರ್ಯಕ್ಷಮತೆ ನಿರೀಕ್ಷೆಯಂತಿರುತ್ತದೆ. ಆದರೆ, ನಿಮ್ಮ ಕಾರ್ಯಕ್ಷಮತೆಯಲ್ಲಿ ಕುಂದುಕೊರತೆಗಳಿದ್ದರೆ ಅಥವಾ ಮೇಲಧಿಕಾರಿಗಳು ಅತೃಪ್ತರಾಗಿದ್ದರೆ, ಮುಕ್ತವಾಗಿ ಚರ್ಚಿಸಬೇಕು ಅಥವಾ ಸ್ವಯಂ-ಮೌಲ್ಯಮಾಪನ ಮಾಡಿಕೊಂಡು ಕಾರಣಗಳನ್ನೂ, ಪರಿಹಾರಗಳನ್ನೂ ಕಂಡುಕೊಳ್ಳಬೇಕು. ಈ ಪ್ರಕ್ರಿಯೆ ಕಷ್ಟವೆನಿಸಿದರೆ, ಸಂಕೋಚವಿಲ್ಲದೆ ಈ ಅಂಕಣದ ಮೂಲಕ ನಮ್ಮನ್ನು ಸಂಪರ್ಕಿಸಿ.

Q9. ಇದೇ ವರ್ಷ ಬ್ಯಾಂಕ್ ಕೆಲಸದಿಂದ ನಿವೃತ್ತಿಯಾಗಿದ್ದೇನೆ. 2018ರಲ್ಲಿ ದೂರ ಶಿಕ್ಷಣದ ಮೂಲಕ ಮೂರು ವರ್ಷಗಳ ಕಾಲ ಬಿ.ಎಸ್ಸಿ (ಮನಃಶಾಸ್ತç) ಪದವಿಯನ್ನು ಮಾಡಿ, ಈಗ ಎಂ.ಎಸ್ಸಿ (ಮನಃಶಾಸ್ತç) ಮಾಡುತ್ತಿದ್ದು, 3ನೇ ಸೆಮಿಸ್ಟರ್ ಮುಗಿದಿದೆ. ಈ ವಯಸ್ಸಿನಲ್ಲಿ ನನಗೆ ಮನಃಶಾಸ್ತçಜ್ಞನಾಗಿ ಕೆಲಸ ಸಿಗುವುದು ಸಾಧ್ಯವೇ?

ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿಮಗೆ ಅಪಾರವಾದ ಅನುಭವವಿದೆ. ಹಾಗಾಗಿ, ಈ ಅನುಭವದ ಜೊತೆಗೆ, ಮನಃಶಾಸ್ತçದ ಜ್ಞಾನ ಮತ್ತು ಸಂಬAಧಿತ ಕೌಶಲಗಳಾದ ವಿಶ್ಲೇಷಾತ್ಮಕ ಕೌಶಲ, ಸಮಸ್ಯೆಯನ್ನು ಬಗೆಹರಿಸುವ ಕೌಶಲ, ಸಂವಹನ, ಅನುಭೂತಿ, ಅಂತರ್-ವೈಯಕ್ತಿಕ ನೈಪುಣ್ಯ ಇತ್ಯಾದಿಗಳನ್ನು ಬೆಳೆಸಿಕೊಂಡು, ಬ್ಯಾಂಕಿAಗ್ ಕ್ಷೇತ್ರದಲ್ಲಿ ಪೂರ್ಣಾವಧಿ/ಅರೆಕಾಲಿಕ ಕೆಲಸಗಳನ್ನು ಅರೆಸಬಹುದು. ಹೆಚ್ಚಿನ ಮಾರ್ಗದರ್ಶನ ಅಗತ್ಯವೆನಿಸಿದರೆ, ಈ ಅಂಕಣದ ಮೂಲಕ ನಮ್ಮನ್ನು ಸಂಪರ್ಕಿಸಿ.

Q10. ದ್ವಿತೀಯ ಪಿಯುಸಿ (ಪಿಸಿಎಂಎಸ್) ಮುಗಿಸಿ, ಫಾಮರ್ಸಿಯಲ್ಲಿ ಡಿಪ್ಲೊಮಾ ಮಾಡುತ್ತಿದ್ದೇನೆ. ಮುಂದೆ, ಯಾವ ಕೋರ್ಸ್ ಮಾಡಿದರೆ ಸೂಕ್ತ? ಎರಡು ವರ್ಷದ ಕೋರ್ಸ್ಗೆ ಸಲಹೆ ಕೊಡಿ ಸರ್.

ಡಿಪ್ಲೊಮಾ ನಂತರ, ನಾಲ್ಕು ವರ್ಷದ ಬಿ.ಫಾರ್ಮಾ ಕೋರ್ಸ್ನ ಎರಡನೇ ವರ್ಷಕ್ಕೆ (ಲ್ಯಾಟರಲ್ ಎಂಟ್ರಿ) ಸೇರಬಹುದು. ಅಥವಾ, ನಿಮಗಿಷ್ಟವಿರುವ ವೃತ್ತಿ ಸಂಬAಧಿತ ಕೌಶಲಾಭಿವೃದ್ಧಿಗೆ, ಅರೆಕಾಲಿಕ ಕೋರ್ಸ್ಗಳನ್ನು ಮಾಡಿ, ಸರ್ಕಾರಿ/ಖಾಸಗಿ ಕ್ಷೇತ್ರದಲ್ಲಿ ವೃತ್ತಿಯನ್ನು ಅರಸಬಹುದು

Q11. ಬಿ.ಎಸ್ಸಿ (ಸಿಬಿಝೆಡ್) ಮಾಡುತ್ತಿದ್ದು, ಮುಂದೆ ರಸಾಯನ ಶಾಸ್ತçದಲ್ಲಿ ಎಂ.ಎಸ್ಸಿ ಮಾಡಬೇಕೆಂದಿದ್ದೇನೆ. ಸದ್ಯಕ್ಕೆ ಜಾಮ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಜಾಮ್ ಪರೀಕ್ಷೆ ಕುರಿತು ಹೆಚ್ಚಿನ ಮಾಹಿತಿ ಬೇಕು. ಇದಕ್ಕೆ ತರಬೇತಿ ಬೇಕಾಗುತ್ತದೆಯೇ ತಿಳಿಸಿ.

ಜಾಯಿಂಟ್ ಅಡ್ಮಿಷನ್ ಟೆಸ್ಟ್ ಫಾರ್ ಮಾಸ್ಟರ್ಸ್ (ಜಾಮ್) ಮುಖಾಂತರ ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ (ಐಐಟಿ), ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಸೈನ್ಸ್ ( ಐಐಎಸ್ಸಿ) ಮುಂತಾದ ದೇಶದ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನ ವಿಭಾಗದ ಸ್ನಾತಕೋತ್ತರ ಕೋರ್ಸ್ಗಳಿಗೆ ಪ್ರವೇಶವನ್ನು ಪಡೆಯಬಹುದು. ಕಠಿಣವಾದ ಈ ಪರೀಕ್ಷೆಗೆ ಏಕಾಗ್ರತೆ, ಸಮಯದ ನಿರ್ವಹಣೆ, ಪರಿಶ್ರಮದ ಜೊತೆಗೆ ವಿಷಯವಾರು ತಂತ್ರಗಾರಿಕೆಯೂ ಅಗತ್ಯವಾಗುತ್ತದೆ. ಇದನ್ನು ನಿಭಾಯಿಸಲು ಕಷ್ಟವೆನಿಸಿದರೆ, ತರಬೇತಿಯನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.collegedekho.com/exam/iit-jam/how-to-prepare

Q12. ನಾನು ಪಿಎಸ್‌ಐ ಆಗುವ ಆಸೆ ಹೊಂದಿದ್ದೇನೆ. ನಾನು ಪಿಎಸ್‌ಐ ಆದ ಮೇಲೆ ನನ್ನ ಜೀವನ ಶೈಲಿ ಹೇಗಿರಬಹುದು ? ನನ್ನ ಕುಟುಂಬಕ್ಕೆ ಸಮಯ ಕೊಡಲಾಗುವುದೇ? ದಿನಕ್ಕೆ ಎಷ್ಟು ಸಮಯ ಕೆಲಸ ಇರುತ್ತೆ? ನಾನು ಪಿಎಸ್‌ಐ ಆಗಲು ನನ್ನಲ್ಲಿ ಏನಿರಬೇಕು? ಸರ್, ದಯವಿಟ್ಟು ಕೆಲಸದ ಬಗ್ಗೆ ಮಾಹಿತಿ ನೀಡಿ.

ನಮ್ಮ ಸಮಾಜದಲ್ಲಿ ನೆಮ್ಮದಿ ಮತ್ತು ಶಾಂತಿಯ ಸ್ಥಾಪನೆಗಾಗಿ ಹಗಲಿರುಳೂ ಪೊಲೀಸ್ ಇಲಾಖೆ ಶ್ರಮಿಸುತ್ತದೆ. ಈ ನಿಟ್ಟಿನಲ್ಲಿ, ಇಲಾಖೆಯ ಉದ್ಯೋಗಿಗಳು ಸಂದರ್ಭಕ್ಕೆ ತಕ್ಕಂತೆ ಸ್ವಯಂ-ಪ್ರೇರಿತರಾಗಿ ಅಥವಾ ಮೇಲಧಿಕಾರಿಗಳ ಸೂಚನೆ/ಆದೇಶದಂತೆ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ. ಹಾಗಾಗಿ, ನಿಗದಿತ ವೇಳೆಯಲ್ಲಿಯೇ ಕೆಲಸ ಮಾಡುವ ಪರಿಪಾಠ ಎಲ್ಲಾ ಸಂದರ್ಭದಲ್ಲೂ ಕಾರ್ಯಸಾಧ್ಯವಲ್ಲ. ಆದ್ದರಿಂದ, ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಸಮತೋಲನವನ್ನು ಸಾಧಿಸಬೇಕಾದರೆ ವೃತ್ತಿಯಲ್ಲಿ ಆಸಕ್ತಿ, ಅಭಿರುಚಿ, ಕೌಶಲಗಳ ಜೊತೆಗೆ ಕುಟುಂಬದ ಬೆಂಬಲ ಇರಬೇಕು.

ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್‌ಐ) ಆಗಲು ಯಾವುದಾದರೂ ಪದವಿಯ ಜೊತೆ ನಾಯಕತ್ವದ ಕೌಶಲ, ದಿಟ್ಟತನ, ಸಹಭಾಗಿತ್ವದ ಕೌಶಲ, ಉತ್ತಮ ಸಂವಹನ, ಪರಿಶೋಧನಾ ಕೌಶಲ, ಸಮಸ್ಯೆಗಳನ್ನು ಪರಿಹರಿಸುವ ಕೌಶಲಗಳ ಜೊತೆ ಸಕಾರಾತ್ಮಕ ಧೋರಣೆಯಿರಬೇಕು; ಹಾಗೂ, ಮಾನಸಿಕ ಮತ್ತು ದೈಹಿಕ ಸದೃಡತೆಯಿರಬೇಕು. ಪ್ರಮುಖವಾಗಿ, ಈ ವೃತ್ತಿ ನಿಮಗೆ ಒಪ್ಪುತ್ತದೆಯೇ ಎಂದು ಖಚಿತವಾಗಬೇಕು. ಪಿಎಸ್‌ಐ ಕೆಲಸಕ್ಕೆ ಸೇರಿದ ನಂತರ, ನಿಮ್ಮ ಕಾರ್ಯಕ್ಷಮತೆ ಮತ್ತು ಸೇವಾ ಜೇಷ್ಠತೆಯನ್ನು ಪರಿಗಣಿಸಿ, ಮುಂದಿನ ಹುದ್ದೆಗೆ ಬಡ್ತಿಯನ್ನು ನಿರೀಕ್ಷಿಸಬಹುದು.

ಕರ್ನಾಟಕ ಪೊಲೀಸ್ ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳ ವಿವರ ಮತ್ತು ವಿಷಯಸೂಚಿಗೆ ಗಮನಿಸಿ: https://prepp.in/karnataka-police-exam

Q13. ಸರ್, ನಾನು ಬಿಎ (ಅರ್ಥಶಾಸ್ತç) ಓದುತ್ತಿದ್ದು, ಯುಪಿಎಸ್‌ಸಿ ಬರೆಯುವ ಆಸೆ ಇದೆ. ಕಠಿಣವಾದ ಈ ಪರೀಕ್ಷೆಯ ತಯಾರಿಗೆ, ಹೆಚ್ಚಿನ ಸಮಯ ಬೇಕಾಗುವುದರಿಂದ, ಎಂಎ (ಅರ್ಥಶಾಸ್ತç) ಮಾಡಬೇಕೆಂದಿದ್ದೇನೆ. ಅರ್ಥಶಾಸ್ತç ಕ್ಷೇತ್ರದ ಉದ್ಯೋಗಾವಕಾಶಗಳೇನು? ಅರ್ಥಶಾಸ್ತçದಲ್ಲಿ ಡಾಕ್ಟರೇಟ್ ಮಾಡಿದರೆ ಯಾವ ಅವಕಾಶಗಳಿವೆ?

ಎಂಎ (ಅರ್ಥಶಾಸ್ತç) ಕೋರ್ಸ್ ನಂತರ ಬೇಡಿಕೆಯಲ್ಲಿರುವ ಈ ಕ್ಷೇತ್ರದಲ್ಲಿ, ನಿಮ್ಮ ಆಸಕ್ತಿಯ ಅನುಸಾರ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. ಶಿಕ್ಷಣ, ಬ್ಯಾಂಕಿAಗ್, ಹಣಕಾಸು, ಸಂಶೋಧನೆ ಮತ್ತು ವಿಶ್ಲೇಷಣೆ, ಬಂಡವಾಳ ಹೂಡಿಕೆ, ಮಾಧ್ಯಮ, ವಿಷಯಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಅವಕಾಶಗಳಿವೆ. ಹಾಗೂ, ಯುಪಿಎಸ್‌ಸಿ/ಕೆಪಿಎಸ್‌ಸಿ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ವಲಯದಲ್ಲೂ ವೃತ್ತಿಯನ್ನು ಅರಸಬಹುದು. ಡಾಕ್ಟರೇಟ್ ಮಾಡಿದರೆ, ಶಿಕ್ಷಕ ವೃತ್ತಿಯಲ್ಲಿ ಅವಕಾಶಗಳಿವೆ.

ಪ್ರಮುಖವಾಗಿ, ನೀವು ಸ್ವಯಂ-ಮೌಲ್ಯಮಾಪನ ಮಾಡಿಕೊಂಡು ಯಾವ ವೃತ್ತಿ ನಿಮಗೆ ಸರಿಹೊಂದುತ್ತದೆ ಎಂದು ನಿರ್ಧರಿಸಿ, ವೃತ್ತಿಯೋಜನೆಯನ್ನು ಮಾಡಿದರೆ, ಅದರಂತೆ ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

https://www.youtube.com/c/EducationalExpertManagementCareerConsultant

Q14. ನಾನು ಪದವಿಯಲ್ಲಿ ಪತ್ರಿಕೋದ್ಯಮ ಮತ್ತು ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡಿದ್ದೇನೆ. ಮುಂದೆ ಏನು ಮಾಡಬಹುದು? ಯಾವ ಕೆಲಸ ಸೂಕ್ತ ಎಂದು ತಿಳಿಸಿ.

ಪದವಿ ಕೋರ್ಸ್ನಲ್ಲಿ ಪತ್ರಿಕೋದ್ಯಮ ಓದುತ್ತಿರುವುದರಿಂದ ನಿಮಗೆ ಈ ವಲಯದಲ್ಲಿ ಆಸಕ್ತಿ, ಅಭಿರುಚಿ ಇದೆ ಎಂದು ಭಾವಿಸಿದ್ದೇನೆ.

ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಪದವಿಯನ್ನು ಮಾಡುವುದರ ಜೊತೆಗೆ ವೃತ್ತಿ ಸಂಬAಧಿತ ಕೌಶಲಗಳಾದ ಸಂವಹನ (ಓದುವಿಕೆ, ಬರವಣಿಗೆ, ಮಾತುಗಾರಿಕೆ, ನಿರೂಪಣೆ ಇತ್ಯಾದಿ), ಭಾಷಾ ಪರಿಣತಿ, ವಿಶ್ಲೇಷಾತ್ಮಕ ಕೌಶಲ, ದಿಟ್ಟತನ, ಸಮಯದ ನಿರ್ವಹಣೆ ಇತ್ಯಾದಿಗಳನ್ನೂ ಬೆಳೆಸಿಕೊಳ್ಳಬೇಕು. ಯಾವುದೇ ವಿಚಾರವನ್ನು ಒಪ್ಪಿಕೊಳ್ಳುವ ಮುನ್ನ ತನಿಖೆ ಅಥವಾ ಪರಿಶೋಧನೆ ಮಾಡುವ ಮನಸ್ಥಿತಿ ಇರಬೇಕು. ಇದಲ್ಲದೆ, ಬೇರೆ ವೃತ್ತಿಗಳಿಗೆ ಹೋಲಿಸಿದರೆ ಪತ್ರಕರ್ತರಿಗೆ ಹೆಚ್ಚಿನ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯಿರುವುದು ಸಹಜ; ಹಾಗಾಗಿ, ಪ್ರಾಮಾಣಿಕತೆ, ನಿಷ್ಠೆ, ಬದ್ದತೆಯನ್ನು ನಿಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಳ್ಳಬೇಕು.

ಅತ್ಯಂತ ವಿಸ್ತಾರವಾದ ಈ ಕ್ಷೇತ್ರದಲ್ಲಿ ಮುದ್ರಣ ಮಾಧ್ಯಮ (ದಿನ ಪತ್ರಿಕೆಗಳು, ನಿಯತಕಾಲಿಕೆಗಳು ಇತ್ಯಾದಿ), ಟೆಲಿವಿಷನ್, ರೇಡಿಯೊ, ಸಾಮಾಜಿಕ ಮಾಧ್ಯಮ, ವೆಬ್‌ಸೈಟ್ಸ್, ಬ್ಲಾಗ್ಸ್, ವಿಡಿಯೊ, ಪಾಡ್‌ಕಾಸ್ಟ್ ಇತ್ಯಾದಿ ವಲಯಗಳಲ್ಲಿದ್ದು, ನಿಮ್ಮ ಆಸಕ್ತಿ, ಅಭಿರುಚಿಯಂತೆ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು. ಹೆಚ್ಚಿನ ತಜ್ಞತೆಗಾಗಿ, ಸಂಬAಧಿತ ವಿಷಯದಲ್ಲಿ ಡಿಪ್ಲೊಮಾ/ಸ್ನಾತಕೋತ್ತರ ಕೋರ್ಸ್ ಮಾಡಬಹುದು.

Q15. ಡಿಫಾರ್ಮಾ ಕೋರ್ಸ್ ಮುಗಿಸಿದ್ದೇನೆ. ಬಿಫಾರ್ಮಾ ಮಾಡುವ ಮನಸ್ಸಿದೆ. ಆದರೆ, ಅದನ್ನು ಮಾಡಿದರೆ ಕೆಲಸ ಸಿಗುತ್ತದೆಯೇ ತಿಳಿಸಿ ಸರ್.

ಡಿಫಾರ್ಮಾ ನಂತರ ನಾಲ್ಕು ವರ್ಷದ ಬಿಫಾರ್ಮಾ ಕೋರ್ಸಿನ ಎರಡನೇ ವರ್ಷಕ್ಕೆ (ಲ್ಯಾಟರಲ್ ಎಂಟ್ರಿ) ಸೇರಬಹುದು.

ಬಿಫಾರ್ಮಾ ಕೋರ್ಸ್ ರಾಸಾಯನಿಕ ವಿಜ್ಞಾನ, ಆರೋಗ್ಯ, ಔಷದೋಪಚಾರ ಮತ್ತು ಸ್ವಾಸ್ಥ÷್ಯಕ್ಕೆ ಸಂಬAಧಿಸಿದ ಬೇಡಿಕೆಯಲ್ಲಿರುವ ಕ್ಷೇತ್ರ. ಈ ಪದವಿಯ ನಂತರ ಸರ್ಕಾರಿ ಮತ್ತು ಖಾಸಗಿ ವಲಯದ ಆಸ್ಪತ್ರೆಗಳು, ಫಾರ್ಮಾ ಕಂಪನಿಗಳು, ಸಂಶೋಧನಾ ಸಂಸ್ಥೆಗಳು, ಆರೋಗ್ಯ ಮತ್ತು ಡ್ರಗ್ ಕಂಟ್ರೋಲ್ ಇಲಾಖೆಗಳು, ಲ್ಯಾಬೋರೇಟರಿಗಳು, ಕಾಲೇಜುಗಳು, ಮೆಡಿಕಲ್ ಟ್ರಾನ್ಸ್ಕ್ರಿಪ್ಷನ್ ಸಂಸ್ಥೆಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವೃತ್ತಿಯ ಅವಕಾಶಗಳಿವೆ. ಹಾಗೂ, ಡಿಫಾರ್ಮಾ/ಬಿಫಾರ್ಮಾ ನಂತರ ಲೈಸೆನ್ಸ್ ಪಡೆದು ಸ್ವಂತ ಔಷದ ಮಳಿಗೆ ತೆರೆಯುವ ಅವಕಾಶವಿದೆ.

Q16. ನಾಲ್ಕು ವರ್ಷದ ಪದವಿಯನ್ನು (ಎನ್‌ಇಪಿ) ಮಾಡಿದರೆ, ಎಂಎ ಮತ್ತು ಪಿಎಚ್‌ಡಿ ಕೋರ್ಸುಗಳು ಎಷ್ಟು ವರ್ಷ ಇರುತ್ತವೆ?

ನೂತನ ರಾಷ್ಟಿçÃಯ ಶಿಕ್ಷಣ ನೀತಿಯ ಪ್ರಕಾರ ಮೂರು ವರ್ಷದ ನಂತರ ಪದವಿ ನೀಡಲಾಗುತ್ತದೆ. ನಾಲ್ಕನೇ ವರ್ಷವನ್ನು ಸಂಶೋಧನೆಗೆ ಮೀಸಲಾಗಿಟ್ಟರೆ, ಕೋರ್ಸ್ ನಂತರ ಪದವಿ (ಸಂಶೋಧನೆ) ನೀಡಲಾಗುತ್ತದೆ. ನಾಲ್ಕು ವರ್ಷದ ಪದವಿಯ ನಂತರ ಸ್ನಾತಕೋತ್ತರ ಕೋರ್ಸ್ಗಳು ಒಂದು ವರ್ಷದ್ದಾಗಿರುತ್ತದೆ. ಹಾಗೂ, ಪದವಿಯ (ಸಂಶೋಧನೆ) ನಂತರ, ಸಿಜಿಪಿಎ (ಕ್ಯೂಮುಲೇಟಿವ್ ಗ್ರೇಡ್ ಪಾಯಿಂಟ್ ಆವರೇಜ್) 7.5 ಇದ್ದಲ್ಲಿ, ನೇರವಾಗಿ ಪಿಎಚ್‌ಡಿ ಮಾಡಲು ಅರ್ಹತೆ ಸಿಗುತ್ತದೆ. ಸಂಶೋಧನೆಯ ವಿಷಯವನ್ನು ಆದರಿಸಿ, ಪಿಎಚ್‌ಡಿ ಮಾಡಲು 2-6 ವರ್ಷ ಬೇಕಾಗಬಹುದು.

Q17. ನಾನು ಕನ್ನಡ ಭಾಷೆಯ ಶಿಕ್ಷಕನಾಗಿ ಪ್ರೌಢಶಾಲೆಯಲ್ಲಿ ಕೆಲಸ ಮಾಡುತಿದ್ದೇನೆ. ನಾನು ಎಂಎ (ಕನ್ನಡ) ಪದವಿಯನ್ನು ಪಡೆದಿದ್ದೇನೆ. ಈಗ, ನನಗೆ ಪತ್ರಿಕೋದ್ಯಮದಲ್ಲಿ ಆಸಕ್ತಿ ಇದೆ. ಹಾಗಾಗಿ ಒಂದು ವರ್ಷದ ಪತ್ರಿಕೋದ್ಯಮ ಪದವಿಯನ್ನು ಮಾಡಲಿಚ್ಛಿಸಿದ್ದೇನೆ. ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ವರದಿ ಮಾಡಲು ಅನುಕೂಲ ಆಗಬಹುದೆ? ವೃತ್ತಿಯ ಜೊತೆಗೆ ಈ ಪ್ರವೃತ್ತಿಯನ್ನು ಅನುಸರಿಸಬಹುದೆ?

ನಿರಂತರವಾದ ಜ್ಞಾನಾರ್ಜನೆ ಮತ್ತು ಕೌಶಲಾಭಿವೃದ್ಧಿಯಿಂದ ವ್ಯಕ್ತಿತ್ವ ಇನ್ನೂ ಹೆಚ್ಚು ಅಭಿವೃದ್ಧಿಯಾಗುತ್ತದೆ. ನಿಮಗೆ ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವುದರಿಂದ ಪದವಿಯ ಜೊತೆಗೆ ಸಂವಹನ (ಓದುವಿಕೆ, ಬರವಣಿಗೆ, ಮಾತುಗಾರಿಕೆ, ನಿರೂಪಣೆ ಇತ್ಯಾದಿ), ವಿಶ್ಲೇಷಾತ್ಮಕ ಕೌಶಲ, ಸಮಯದ ನಿರ್ವಹಣೆ ಇತ್ಯಾದಿ ಕೌಶಲಗಳನ್ನೂ ಬೆಳೆಸಿಕೊಂಡರೆ, ನೀವು ಮಾಡಬೇಕೆಂದಿರುವ ಇನ್ನಿತರ ಚಟುವಟಿಕೆಗಳಿಗೆ ಸಹಾಯವಾಗುತ್ತದೆ.

ವೃತ್ತಿ ಮತ್ತು ಪ್ರವೃತ್ತಿಗಳೆರಡೂ ಬದುಕಿಗೆ ಅವಶ್ಯಕ. ಆಸಕ್ತಿ, ಅಭಿರುಚಿಯಿರುವ ಪ್ರವೃತ್ತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಮುಂದೆ ಪ್ರವೃತ್ತಿಯನ್ನೇ ವೃತ್ತಿಯನ್ನಾಗಿಸಿಕೊಂಡು, ಬದುಕಿನಲ್ಲಿ ಯಶಸ್ಸನ್ನೂ, ಸಂತೃಪ್ತಿಯನ್ನೂ ಗಳಿಸಿರುವ ಅನೇಕ ಉದಾಹರಣೆಗಳಿವೆ. ಶುಭಹಾರೈಕೆಗಳು.

Q18. ನಾನು ಬಿಕಾಂ ಪದವಿ ಮುಗಿಸಿ ಸ್ನಾತಕೋತ್ತರ ಪದವಿಯನ್ನು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ದೂರ ಶಿಕ್ಷಣದ ಮೂಲಕ ಪಡೆಯುತ್ತಿದ್ದೇನೆ. ಐಬಿಪಿಎಸ್ ನಡೆಸುವ ಬ್ಯಾಂಕ್ ಪರೀಕ್ಷೆಗೆ ಹಾಜರಾಗುವುದು ಉತ್ತಮವೋ ಅಥವಾ ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗುವುದು ಉತ್ತಮವೋ?

ನೀವು ಗುರುತಿಸಿರುವ ಎರಡೂ ವೃತ್ತಿಗಳಿಗೆ ಉಜ್ವಲವಾದ ಭವಿಷ್ಯವಿದೆ. ಯಾವುದೇ ವೃತ್ತಿಯಲ್ಲಿ ಯಶಸ್ಸನ್ನು ಗಳಿಸಲು ವೃತ್ತಿ ಸಂಬAಧಿತ ಜ್ಞಾನ ಮತ್ತು ಕೌಶಲಗಳ ಜೊತೆಗೆ ಸಕಾರಾತ್ಮಕ ಆಲೋಚನೆ, ನಿಷ್ಠೆ, ಪ್ರಾಮಾಣಿಕತೆ, ಸ್ವಯಂಪ್ರೇರಣೆ ಮತ್ತು ಆತ್ಮವಿಶ್ವಾಸವಿರಬೇಕು. ಇವೆಲ್ಲವನ್ನೂ ನಿಮ್ಮಲ್ಲಿ ಬೆಳೆಸಿಕೊಂಡರೆ, ಸ್ವಾಭಾವಿಕವಾಗಿಯೇ ನಿಮ್ಮ ಕಾರ್ಯಾಚರಣೆ ನಿರೀಕ್ಷೆಯಂತಿರುತ್ತದೆ ಮತ್ತು ಕಾಲಕ್ರಮೇಣ ವೃತ್ತಿಯಲ್ಲಿ ಯಶಸ್ಸನ್ನು ಗಳಿಸಬಹುದು.

ಹಾಗಾಗಿ, ನಿಮ್ಮ ಸಾಮರ್ಥ್ಯ, ಪ್ರತಿಭೆ ಮತ್ತು ಆಸಕ್ತಿಯ ಆಧಾರದ ಮೇಲೆ ಗುರುತಿಸಿರುವ ಎರಡು ಆಯ್ಕೆಗಳಲ್ಲಿ, ನಿಮಗೆ ಹೆಚ್ಚು ಸರಿಹೊಂದುವ, ಇಷ್ಟಪಡುವ ವೃತ್ತಿಯನ್ನು ಗುರುತಿಸಿ, ಅದರಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/c/EducationalExpertManagementCareerConsultant

Q19. ಸರ್, ನಾನು ಬಿಎ (ಸಮಾಜಶಾಸ್ತç) ಓದುತ್ತಿದ್ದು, ಮುಂದೆ ಎಂಎಸ್‌ಡಬ್ಲ್ಯು ಮಾಡುವ ಆಸೆ ಇದೆ. ಇದನ್ನು ಮಾಡಿದರೆ ಯಾವ ಉದ್ಯೋಗಾವಕಾಶಗಳಿವೆ?

ಒಂದು ಸಂಸ್ಥೆಯ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಎಲ್ಲಾ ಪ್ರಯತ್ನಗಳನ್ನು ಕೇಂದ್ರೀಕರಿಸಿ, ಯೋಜನೆಗಳನ್ನು ನಿಷ್ಠೆಯಿಂದ ಕಾರ್ಯಗತಗೊಳಿಸುವುದೇ ಆಡಳಿತ ವರ್ಗದ ಮೂಲ ಉದ್ದೇಶ. ಈ ನಿಟ್ಟಿನಲ್ಲಿ, ಮಾನವ ಸಂಪನ್ಮೂಲದ ನಿರ್ವಹಣೆ ಸಂಸ್ಥೆಗಳ ಕಾರ್ಯಾಚರಣೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. ಹಾಗಾಗಿ, ಎಂಎಸ್‌ಡಬ್ಲೂ÷್ಯ ಪದವೀಧರರಿಗೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಮಾನವ ಸಂಪನ್ಮೂಲದ ಅಭಿವೃದ್ಧಿ ಮತ್ತು ನಿರ್ವಹಣೆ, ಕಾರ್ಮಿಕ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ, ಸಮುದಾಯದ ಅಭಿವೃದ್ಧಿ ಇತ್ಯಾದಿ ವಲಯಗಳಲ್ಲಿ ವ್ಯಾಪಕವಾದ ಉದ್ಯೊಗಾವಕಾಶಗಳಿವೆ.

Q20. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರೆ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅರ್ಹರೇ? ಹಾಗೂ ಈ ವಿಶ್ವವಿದ್ಯಾಲಯದ ಮಾನ್ಯತೆ ಬಗ್ಗೆ ತಿಳಿಸಿ.

ವಿಶ್ವವಿದ್ಯಾಲಯದ ಧನಸಹಾಯ ಆಯೋಗ (ಯುಜಿಸಿ) ನಿಯಮದ ಪ್ರಕಾರ ರಾಷ್ಟಿçÃಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್), ‘ಎ’ ಶ್ರೇಣಿಯ ಮಾನ್ಯತೆ ಪಡೆದಿರುವ ಎಲ್ಲ ವಿಶ್ವವಿದ್ಯಾಲಯಗಳಿಗೂ ದೂರ ಶಿಕ್ಷಣ ಕೋರ್ಸ್ ಆರಂಭಿಸಲು ಅನುಮತಿ ನೀಡುತ್ತದೆ ಮತ್ತು ಮಾನ್ಯತೆ ಪಡೆದ ಕೋರ್ಸ್ನ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಸರ್ಕಾರಿ ಉದ್ಯೋಗಗಳಿಗೆ ಅರ್ಹತೆ ಸಿಗುತ್ತದೆ. ಹಾಗಾಗಿ, ವಿಶ್ವವಿದ್ಯಾಲಯಗಳು ದೂರ ಶಿಕ್ಷಣ ಮತ್ತು ಆನ್‌ಲೈನ್ ಮೂಲಕ ನಡೆಸುವ ಕೋರ್ಸ್ಗಳಿಗೆ ದೂರ ಶಿಕ್ಷಣ ಬ್ಯೂರೊ, ಯುಜಿಸಿ ರವರ ಮಾನ್ಯತೆಯನ್ನು ಪಡೆದಿರಬೇಕು. ಪ್ರತಿ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗುವಂತೆ ಮಾನ್ಯತೆ ಪಡೆದಿರುವ ಕೋರ್ಸ್ಗಳ ಪಟ್ಟಿಯನ್ನು ದೂರ ಶಿಕ್ಷಣ ಬ್ಯೂರೊ, ಯುಜಿಸಿ ಸಂಸ್ಥೆಯ ಜಾಲತಾಣದಲ್ಲಿ ಪ್ರಕಟಿಸುತ್ತದೆ. ಈ ಜಾಲತಾಣದಲ್ಲಿ ಕಳೆದ ಹಲವಾರು ವರ್ಷಗಳಿಗೆ ಅನ್ವಯವಾಗುವ ಮಾನ್ಯತೆ ಪಡೆದ ಕೋರ್ಸ್ಗಳ ಮಾಹಿತಿಯೂ ಲಭ್ಯ. ಉದಾಹರಣೆಗೆ 2022-23ನೇ ಶೈಕ್ಷಣಿಕ ವರ್ಷದಲ್ಲಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 9 ಪದವಿ ಕೋರ್ಸ್ಗಳಿಗೂ ಮತ್ತು 33 ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೂ ಮಾನ್ಯತೆ ನೀಡಲಾಗಿದೆ. ಹಾಗಾಗಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅಥವಾ ಯಾವುದೇ ವಿಶ್ವವಿದ್ಯಾಲಯದ ದೂರ ಶಿಕ್ಷಣ/ಆನ್‌ಲೈನ್ ಕೋರ್ಸ್ಗೆ ಸೇರುವ ಮೊದಲು ಈ ಜಾಲತಾಣದಲ್ಲಿನ ಮಾಹಿತಿಯನ್ನು ಪರಾಮರ್ಶಿಸಿ: https://deb.ugc.ac.in/Search/preview?id=HEI-U-0228

Q21. ನಾನು ಬಿಎಸ್ಸಿ ಪದವಿ ಮುಗಿಸಿದ್ದೇನೆ. ಮುಂದೆ ಯಾವ ಕೆಲಸಗಳಿಗೆ ಅರ್ಜಿ ಸಲ್ಲಿಸಬಹುದು ಅಂತ ದಯವಿಟ್ಟು ಹೇಳಿ ಸರ್.

ನೀವು ಯಾವ ವಿಭಾಗದಲ್ಲಿ ಬಿಎಸ್ಸಿ ಮಾಡಿದ್ದೀರಿ ಎಂದು ತಿಳಿಸಿಲ್ಲ. ಸುಮಾರು ನೂರಕ್ಕೂ ಹೆಚ್ಚಿನ ವಿಭಾಗಗಳಲ್ಲಿ ಬಿಎಸ್ಸಿ ಕೋರ್ಸ್ ಮಾಡಬಹುದು. ಉದಾಹರಣೆಗೆ, ಬಿಎಸ್ಸಿ (ಹಲವಾರು ವಿಷಯಗಳಲ್ಲಿ), ಬಿಎಸ್ಸಿ (ಆನರ್ಸ್), ಬಿಎಸ್ಸಿ (ಕಂಪ್ಯೂಟರ್ ಸೈನ್ಸ್), ಬಿಎಸ್ಸಿ (ಕೃಷಿ), ಬಿಎಸ್ಸಿ (ಡೇಟಾ ಸೈನ್ಸ್), ಬಿಎಸ್ಸಿ (ಪರಿಸರ ವಿಜ್ಞಾನ), ಬಿಎಸ್ಸಿ (ಪ್ಯಾರಾ ಮೆಡಿಕಲ್) ಇತ್ಯಾದಿ. ಬಿಎಸ್ಸಿ ಪದವಿಯ ವಿಭಾಗಗಳ ಆಧಾರದ ಮೇಲೆ ಆಯಾ ಕ್ಷೇತ್ರಗಳಲ್ಲಿ ವ್ಯಾಪಕವಾದ ಉದ್ಯೋಗಾವಕಾಶಗಳಿವೆ. ಹೆಚ್ಚಿನ ಮಾರ್ಗದರ್ಶನ ಅಗತ್ಯವೆನಿಸಿದರೆ ಈ ಅಂಕಣದ ಮೂಲಕ ನಮ್ಮನ್ನು ಸಂಪರ್ಕಿಸಿ.

Q22. ಪ್ರಸ್ತುತ ನಾನು ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. 2020ರಲ್ಲಿ ಬಿಇಡಿ ನಾಲ್ಕನೇ ಸೆಮಿಸ್ಟರ್ ಓದುತ್ತಿರುವಾಗ ನನಗೆ ಪೊಲೀಸ್ ಕೆಲಸ ಸಿಕ್ಕಿತು. ನಾನು ಪೊಲೀಸ್ ತರಬೇತಿಯಲ್ಲಿದ್ದಾಗ ಕೋವಿಡ್ ಕಾರಣದಿಂದ ಅಂತಿಮ ಸೆಮಿಸ್ಟರ್ ಪರೀಕ್ಷೆ ಬರೆಯಲು ಆಗಲಿಲ್ಲ; ಆದರೆ, 2022 ವರ್ಷದ ಪರೀಕ್ಷೆ ಬರೆದು ಅಂತಿಮ ಸೆಮಿಸ್ಟರ್‌ನಲ್ಲಿ ಉತ್ತೀರ್ಣನಾಗಿರುತ್ತೇನೆ. ಹಾಗಾದರೆ, ನನ್ನ ಬಿಇಡಿ ಪದವಿ ಸರಿಯಾಗಿದೆಯೇ? ನಾನು ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯಬಹುದೇ ತಿಳಿಸಿ?

ನೀವು ನೀಡಿರುವ ಮಾಹಿತಿಯಂತೆ ಬಿಇಡಿ ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೀರಿ. ಹಾಗಾಗಿ, ನೀವು ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಬರೆಯಬಹುದು.

Q23. ಕರ್ನಾಟಕದಲ್ಲಿನ ಲ್ಯಾಂಡ್ ಸರ್ವೆ ಕೋರ್ಸ್ ಕಲಿಸುವ ಐಟಿಐ ಕಾಲೇಜುಗಳ ಮಾಹಿತಿ ಮತ್ತು ಆ ಕಲಿಕೆಯಿಂದ ದೊರೆಯಬಹುದಾದ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಲು ತಮ್ಮಲ್ಲಿ ವಿನಂತಿ.

ಕರ್ನಾಟಕದ ಐಟಿಐ ಕಾಲೇಜುಗಳು ನಡೆಸುವ ಸರ್ವೆಯರ್ ಡಿಪ್ಲೊಮಾ ಕೋರ್ಸ್ ಎರಡು ವರ್ಷದ್ದಾಗಿರುತ್ತದೆ. ಕೋರ್ಸ್ ನಂತರ ಸರ್ಕಾರದ ಲೋಕೋಪಯೋಗಿ ಇಲಾಖೆಗಳು, ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಗಳು, ರಾಷ್ಟಿçÃಯ ಹೆದ್ದಾರಿ ನಿರ್ಮಾಣ ಸಂಸ್ಥೆಗಳು, ರಿಯಲ್ ಎಸ್ಟೇಟ್ ಕಂಪನಿಗಳು ಇತ್ಯಾದಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ.

http://emptrg.kar.nic.in/ITI/

Q24. ನಾನು ಬಿಕಾಂ 2ನೇ ವರ್ಷ ಓದುತ್ತಿದ್ದು ಈಗಿನಿಂದಲೇ ಐಎಎಸ್‌ಗೆ ತಯಾರಿ ಪ್ರಾರಂಭಿಸಬೇಕು ಎಂದುಕೊAಡಿದ್ದೇನೆ. ಇದಕ್ಕೆ ಕೋಚಿಂಗ್ ಅವಶ್ಯಕತೆ ಇದೆಯೇ?

ಸ್ಪರ್ಧಾತ್ಮಕ ಪರೀಕ್ಷೆಗೆ ಸ್ವಯಂ-ಅಧ್ಯಯನದಿAದ ತಯಾರಾಗುವುದೇ ಅಥವಾ ಕೋಚಿಂಗ್ ಸೆಂಟರ್ ಸೇರಬೇಕೇ ಎನ್ನುವುದು ಕ್ಲಿಷ್ಟವಾದ ಆಯ್ಕೆ. ಎರಡೂ ಬಗೆಯ ಪ್ರಯತ್ನಗಳಿಂದ ಇಂತಹ ಪರೀಕ್ಷೆಗಳಲ್ಲಿ ಯಶಸ್ವಿಯಾದವರು ಇರುವುದರಿಂದ ಈ ಗೊಂದಲ ಸಹಜ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸಲು ಯೋಜನಾ ಶಕ್ತಿ, ಏಕಾಗ್ರತೆ, ಪರಿಶ್ರಮ, ಸಮಯದ ನಿರ್ವಹಣೆ, ನಿರಂತರ ಅಭ್ಯಾಸ, ಪರಿಣಾಮಕಾರಿ ಓದುವಿಕೆ ಮತ್ತು ಮಾರ್ಗದರ್ಶನವಿರಬೇಕು. ಇವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಶಕ್ತಿಯಿದ್ದರೆ ಸ್ವಯಂ-ಅಧ್ಯಯನದಿAದಲೂ ಯಶಸ್ಸನ್ನು ಗಳಿಸಬಹುದು. ಹಾಗಾಗಿ, ಅಂತಿಮ ನಿರ್ಧಾರ ನಿಮ್ಮದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

Q25. ಸ್ವಪ್ರೇರಣೆ ಹೊಂದುವುದು ಹೇಗೆ?

ಸ್ವಪ್ರೇರಣೆಯೆಂದರೆ, ನಮ್ಮ ಗುರಿಗಳತ್ತ ನಮ್ಮನ್ನು ಕ್ರಿಯಾತ್ಮಕವಾಗಿಸುವ ಚಾಲನಾ ಶಕ್ತಿ. ಏಕೆಂದರೆ, ಅತ್ಯಂತ ಶಕ್ತಿಶಾಲಿಯಾದ ಆಂತರಿಕ ಪ್ರೇರಣೆಯೇ ನಮ್ಮ ಸ್ಪೂರ್ತಿಗೂ, ಚೈತನ್ಯಕ್ಕೂ, ಕಾರ್ಯತತ್ಪರತೆಗೂ ಮೂಲ. ಪ್ರೇರಣೆ, ಬದುಕಿನ ಕನಸುಗಳನ್ನು ಕಾಣುವುದರ ಜೊತೆಗೆ ನಮ್ಮಲ್ಲಿ ಅವುಗಳನ್ನು ಸಾಧಿಸುವ ಛಲ, ಆತ್ಮವಿಶ್ವಾಸವನ್ನು ಹುಟ್ಟುಹಾಕುತ್ತದೆ. ಈ ಸಲಹೆಗಳನ್ನು ಗಮನಿಸಿ:

  • ಬದುಕಿನ ಗುರಿಗಳು: ಸ್ಪಷ್ಟವಾದ, ಸಾಧಿಸಬಹುದಾದ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಗುರಿಗಳು ದೃಢವಾಗಿದ್ದರೆ, ಸ್ವಯಂ ಪ್ರೇರಣೆ ತಾನೇ ತಾನಾಗಿ ಮೂಡುತ್ತದೆ.
  • ಸವಾಲುಗಳನ್ನು ನಿರೀಕ್ಷಿಸಿ: ಸಾಧನೆಯ ಹಾದಿಯಲ್ಲಿ ಅನೇಕ ಅಡಚಣೆಗಳು, ವೈಫಲ್ಯಗಳು, ವಿಳಂಬಗಳು ಸರ್ವೇಸಾಮಾನ್ಯ.
  • ಸಕಾರಾತ್ಮಕ ಪರಿಸರ: ಸುತ್ತಮುತ್ತಲಿನ ಪರಿಸರ ಸಕಾರಾತ್ಮಕವಾಗಿರಲಿ.
  • ವಿಡಿಯೊ, ಪುಸ್ತಕಗಳು: ಸಾಧಕರ ಕುರಿತ ಪುಸ್ತಕಗಳನ್ನು ಓದುವುದರಿಂದಲೂ, ವಿಡಿಯೊಗಳನ್ನು ವೀಕ್ಷಿಸುವುದರಿಂದಲೂ, ಸಾಧಕರ ಯಶಸ್ಸಿನ ಹಿಂದಿರುವ ಪರಿಶ್ರಮದ ಕಥೆಗಳಿಂದ ನಿಮ್ಮ ಉತ್ಸಾಹವನ್ನೂ, ಸ್ವಪ್ರೇರಣೆಯನ್ನೂ ಬೆಳೆಸಿಕೊಳ್ಳಬಹುದು.
  • ಸಾಧನೆಯ ಮೈಲಿಗಲ್ಲುಗಳು: ನಿಮ್ಮ ಸಾಧನೆಗಳ ಹಿಂದಿರುವ ಪರಿಶ್ರಮ, ಕಾರಣಗಳನ್ನು ಆಗಿಂದಾಗ್ಗೆ ಅವಲೋಕಿಸಿ, ಸುಧಾರಣೆಗಳನ್ನು ಅಳವಡಿಸಿ.

ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/self-motivation/

Q26. ನಾನು ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್) ಪದವಿಯ ನಂತರ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಎಸ್‌ಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ. ಕಡಿಮೆ ಸಮಯದಲ್ಲಿ ಸಿದ್ಧತೆ ಹೇಗಿರಬೇಕು ಎಂದು ತಿಳಿಸಿ. ಜೊತೆಗೆ, ಸ್ನಾತಕೋತ್ತರ ಪದವಿಯನ್ನು ಯಾವ ವಿಷಯದಲ್ಲಿ ಪಡೆದರೆ ಸರ್ಕಾರಿ ಕೆಲಸ ಪಡೆಯಲು ಹೆಚ್ಚಿನ ಅವಕಾಶಗಳಿವೆ?

ಪರೀಕ್ಷೆಯ ಮಾದರಿ, ಪಠ್ಯಕ್ರಮ, ವಿಷಯದ ಅನುಸಾರ ಶಿಫಾರಸು ಮಾಡಿರುವ ಪುಸ್ತಕಗಳನ್ನು ತಿಳಿದುಕೊಂಡು ನಿಮ್ಮ ವೃತ್ತಿ ಯೋಜನೆಯ ಅನುಗುಣವಾಗಿ ಕಾರ್ಯತಂತ್ರವನ್ನು ರೂಪಿಸಬೇಕು. ಈ ಸಲಹೆಗಳ ಅನುಸಾರ ಸಿದ್ಧತೆಯಿರಲಿ:

  • ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು.
  • ಪರಿಶ್ರಮ, ಬದ್ಧತೆ, ಆತ್ಮ ವಿಶ್ವಾಸ ಮತ್ತು ಸಮಯದ ನಿರ್ವಹಣೆ ಅತ್ಯಗತ್ಯ.
  • ಗೂಗಲ್ ಮತ್ತು ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿ ಮತ್ತು ಉಪಯುಕ್ತ ವಿಡಿಯೊಗಳನ್ನು ವೀಕ್ಷಿಸಿ.
  • ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಪುನರಾವರ್ತನೆ ಮತ್ತು ಬರವಣಿಗೆ ಇರಬೇಕು.
  • ಸಾಮಾಜಿಕ ತಾಲತಾಣದಿಂದ ದೂರವಿದ್ದರೆ ಏಕಾಗ್ರತೆ ಸುಲಭ.

ನಿಮಗಿಷ್ಟವಿರುವ ಮತ್ತು ವೃತ್ತಿಯ ನಿರ್ವಹಣೆಗೆ ಅನುಕೂಲವಾಗುವಂತಹ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡುವುದು ಸೂಕ್ತ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://sscportal.in/

Q27. ಸರ್, ನಾನು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಮುಗಿಸಿದ್ದೇನೆ. ಮುಂದೆ ಯಾವ ಕೋರ್ಸ್ ಮಾಡಬೇಕೆಂದು ತಿಳಿಯುತ್ತಿಲ್ಲ. ಆದ್ದರಿಂದ, ನನಗೆ ಯಾವ ಕೋರ್ಸ್ ಮಾಡಿದರೆ ಸೂಕ್ತ ಹಾಗೂ ಕೋರ್ಸ್ ಪ್ರಾಮುಖ್ಯತೆ ಬಗ್ಗೆ ತಿಳಿಸಿ.

ಬಿಪಿಟಿ, ಬಿ.ಎಸ್ಸಿ (ಪ್ಯಾರಾ ಮೆಡಿಕಲ್), ಬಿಇ, ಬಿಟೆಕ್, ಬಿ.ಎಸ್ಸಿ, ಬಿ.ಎಸ್ಸಿ (ಆನರ್ಸ್), ಬಿ.ಎಸ್ಸಿ (ಕೃಷಿ ಇತ್ಯಾದಿ), ಬಿ.ಡಿಸೈನ್, ಬಿಸಿಎ, ಬಿಬಿಎ, ಎನ್‌ಡಿಎ ಇತ್ಯಾದಿ. ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯನ್ನು ಗಮನಿಸಿ, ನಿಮಗೆ ಸರಿಹೊಂದುವ ವೃತ್ತಿಯನ್ನು ಗುರುತಿಸಿ, ಅದರಂತೆ ಸೂಕ್ತವಾದ ಕೋರ್ಸ್ ಆಯ್ಕೆ ಮಾಡಬೇಕು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/c/EducationalExpertManagementCareerConsultant

Q28. ನಾನು ಬಿಕಾಂ ಪದವಿ ಮುಗಿಸಿದ್ಧೇನೆ. ರಾಜ್ಯಶಾಸ್ತçದಲ್ಲಿ ಎಂಎ ಮಾಡಬೇಕು ಎಂದಿದ್ದೇನೆ. ಅದು ಸಾಧ್ಯವೇ?

ಸಾಮಾನ್ಯವಾಗಿ ಸ್ನಾತಕೋತ್ತರ ಪದವಿ ಕೋರ್ಸ್ ಮಾಡಲು ಅದೇ ವಿಷಯವನ್ನು ಅಥವಾ ಸಂಬAಧಪಟ್ಟ ವಿಷಯವನ್ನು ಪದವಿ ಕೋರ್ಸ್ನಲ್ಲಿ ಓದಿರಬೇಕು. ಆದರೂ, ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ (ದೆಹಲಿ ವಿಶ್ವವಿದ್ಯಾಲಯ, ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯ ಇತ್ಯಾದಿ) ರಾಜ್ಯಶಾಸ್ತçವನ್ನು ಪದವಿ ಕೋರ್ಸ್ನಲ್ಲಿ ಓದಿಲ್ಲದಿದ್ದರೂ ಎಂಎ ಕೋರ್ಸ್ ಅನ್ನು ರಾಜ್ಯಶಾಸ್ತçದಲ್ಲಿ ಮಾಡಲು ಅವಕಾಶವಿದೆ. ಹಾಗೂ, ದೂರ ಶಿಕ್ಷಣದ ಮೂಲಕವೂ ಎಂಎ (ರಾಜ್ಯಶಾಸ್ತç) ಮಾಡಬಹುದು.

Q29. ಸರ್, ನಾನು ಎಂಬಿಬಿಎಸ್ ಮಾಡಬೇಕು ಎಂದುಕೊAಡಿದ್ದೇನೆ. ಜೊತೆಗೆ ಬ್ಯಾಡ್ಮಿಂಟನ್ ಆಟಗಾರನೂ ಹೌದು. ವೈದ್ಯನೂ ಆಗಿ ಆಟಗಾರನೂ ಆಗಲು ಬಯಸುತ್ತೇನೆ. ದಯವಿಟ್ಟು ಸಲಹೆ ನೀಡಿ.

ಆಧುನಿಕ ಜಗತ್ತಿನಲ್ಲಿ ಯಾವುದೇ ಉದ್ಯೋಗ ಅಥವಾ ವೃತಿಯಲ್ಲಿ ಒತ್ತಡ ಸಾಮಾನ್ಯವೆಂದೇ ಹೇಳಬಹುದು. ಅದರಲ್ಲೂ, ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಒತ್ತಡದ ಜೊತೆ ಅನಿಶ್ಚಿತ ಕೆಲಸದ ವೇಳೆಯಿಂದ ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಸಮತೋಲನವನ್ನು ಸಾಧಿಸುವುದು ಸವಾಲಾಗಬಹುದು. ಆದರೆ, ವೃತ್ತಿಯ ಜವಾಬ್ದಾರಿಗಳನ್ನು ನಿಭಾಯಿಸುತ್ತಾ, ಸಮಯದ ನಿರ್ವಹಣೆಯಿಂದ ಆಸಕ್ತಿ, ಅಭಿರುಚಿಯಿರುವ ಪ್ರವೃತ್ತಿಯಲ್ಲೂ ಸಕ್ರಿಯವಾಗಿ ನಿಮ್ಮನ್ನು ತೊಡಗಿಸಿಕೊಂಡರೆ, ವೃತ್ತಿಯಲ್ಲಿ ಯಶಸ್ಸು ಮತ್ತು ಬದುಕಿನಲ್ಲಿ ಸಂತೃಪ್ತಿಯನ್ನು ಸಾಧಿಸುವುದು ಸುಲಭವಾಗುತ್ತದೆ. ಆದ್ದರಿಂದಲೇ, ವೃತ್ತಿ ಮತ್ತು ಪ್ರವೃತ್ತಿಗಳೆರಡೂ ಬದುಕಿಗೆ ಅವಶ್ಯಕ. ಹಾಗಾಗಿ, ವೈದ್ಯಕೀಯ ವೃತ್ತಿಯ ಜೊತೆಗೆ ಬ್ಯಾಡ್ಮಿಂಟನ್ ಆಟಗಾರರಾಗುವ ನಿಮ್ಮ ಆಲೋಚನೆ ಸೂಕ್ತವಾಗಿದೆ.

Q30. ನಾನು ಈಗಾಗಲೇ ಬಿಬಿಎಂ ಪದವೀಧರನಾಗಿದ್ದು, ಅನಂತರ ಎಂಕಾA ಮುಗಿಸಿದ್ದೇನೆ. ಈ ಪದವಿ ಮುಂದೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹವಾಗುತ್ತದೆಯೇ?

ನೀವು ಎಂಕಾಂ ಪದವಿಯಲ್ಲಿ ಕನಿಷ್ಠ ಶೇಕಡಾ 55 ಗಳಿಸಿದ್ದರೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆ ಸಿಗುತ್ತದೆ.

Q31. ನಾನು ಎಂ.ಎಸ್ಸಿ (ಸಸ್ಯಶಾಸ್ತç) ಮಾಡಿದ್ದೇನೆ. ಸರ್ಕಾರಿ ಕೆಲಸ ಮಾಡಬೇಕೆಂದು 3 ವರ್ಷ ಮಾಡಿದ ಪ್ರಯತ್ನ ಸಫಲವಾಗಿಲ್ಲ. ನನಗೆ ಶಿಕ್ಷಕ ವೃತ್ತಿ ಇಷ್ಟವಿಲ್ಲ; ಬೇರೆ ಖಾಸಗಿ ಕೆಲಸಗಳ ಬಗ್ಗೆ ಮಾಹಿತಿ ನೀಡಿ.

ಎಂ.ಎಸ್ಸಿ (ಸಸ್ಯಶಾಸ್ತç) ಪದವಿಯ ನಂತರ ಬಯೋಟೆಕ್ನಾಲಜಿ, ಔಷಧ, ಆಹಾರ, ನರ್ಸರಿಗಳು, ಪರಿಸರ, ಪ್ರಯೋಗಾಲಯಗಳು, ಸಂಶೋಧನೆ ಮುಂತಾದ ವಲಯಗಳಲ್ಲಿ ವೃತ್ತಿಯನ್ನು ಅರಸಬಹುದು. ಹಾಗೂ, ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ, ಎನರ್ಜಿ ರಿಸರ್ಚ್ ಇನ್‌ಸ್ಟಿಟ್ಯೂಟ್, ವೈಲ್ಡ್ ಲೈಫ್ ಪ್ರೊಟೆಕ್ಷನ್ ಸೊಸೈಟಿ ಮುಂತಾದ ಸಂಸ್ಥೆಗಳಲ್ಲಿಯೂ ವೃತ್ತಿಯನ್ನು ಅರಸಬಹುದು.