Q & A for students – Week 8

 1. ನಾನು ಕಮರ್ಷಿಯಲ್ ಪೈಲಟ್ ಆಗಬೇಕೆಂದುಕೊಂಡಿದ್ದೇನೆ. ಆದರೆ ಆರ್ಥಿಕ ಸಮಸ್ಯೆಯಿದೆ. ಒಬಿಸಿಗೆ  ಅನ್ಯವವಾಗುವ ಸ್ಕಾಲರ್‍ಶಿಪ್ ಸೌಲಭ್ಯಗಳಿವೆಯೇ?

ಚವಾಣ್, ಮೈಸೂರು.

 • ನಾನು ದ್ವಿತೀಯ ಸೈನ್ಸ್ ಪಿಯುಸಿ ಈಗಷ್ಟೇ ಮುಗಿಸಿದ್ದು ಕಮರ್ಷಿಯಲ್ ಪೈಲಟ್ ಆಗಬೇಕೆಂದುಕೊಂಡಿದ್ದೇನೆ. ಕಮರ್ಷಿಯಲ್ ಪೈಲಟ್ ಲೈಸೆಂಸ್ (ಸಿಪಿಎಲ್) ನಂತರ ಏರ್‍ಲೈನ್ಸ್‍ನಲ್ಲಿ ಉದ್ಯೋಗ ಸಿಗಬಹುದೇ? ಬಿಎಸ್‍ಸಿ ಏವಿಯೇಷನ್ ಎಲ್ಲಿ ಮಾಡಬಹುದು? ಪೈಲಟ್ ಉದ್ಯೋಗಕ್ಕೆ ಭವಿಷ್ಯ ಹೇಗಿದೆ.

ಗೀತ ಗಣೇಶ್, ಬೆಂಗಳೂರು.

 • ಕಮರ್ಷಿಯಲ್ ಪೈಲಟ್ ಆಗಲು ಅನುಕೂಲವಾಗುವ ಅನೇಕ ಕೋರ್ಸ್‍ಗಳಿವೆ. ಉದಾಹರಣೆಗೆ ಬಿಎಸ್‍ಸಿ (ಏವಿಯೇಷನ್), ಬಿಟೆಕ್ (ಏರೋಸ್ಪೇಸ್ ಎಂಜಿನಿಯರಿಂಗ್) ಇತ್ಯಾದಿ. ಆದರೆ, ಈ ಪದವಿಗಳ ಆಧಾರದ ಮೇಲೆ ಸಿಪಿಎಲ್ ಸಿಗುವುದಿಲ್ಲ; ಆದರೆ, ಸ್ವಲ್ಪ ಸುಲಭವಾಗಬಹುದು. ಸಿಪಿಎಲ್‍ಗಾಗಿ ಡಿಜಿಸಿಎ ಅನುಮೋದಿತ ಸಂಸ್ಥೆಗಳಲ್ಲಿ ತರಬೇತಿ ಪಡೆದು ಕನಿಷ್ಠ 200 ಗಂಟೆಗಳಷ್ಟು ಹಾರಾಟದ ನಂತರ ಸಿಪಿಎಲ್‍ಗೆ ಪ್ರಯತ್ನಿಸಬಹುದು.

ಈಗ ಕೋವಿಡ್ ಕಾರಣದಿಂದ ಏರ್‍ಲೈನ್ಸ್ ಉದ್ದಿಮೆ ಸಂಕಷ್ಟದಲ್ಲಿದೆ. ಆದರೆ, ಇನ್ನೆರಡು ಮೂರು ವರ್ಷಗಳಲ್ಲಿ ಪುನಶ್ಚೇತನಗೊಂಡು ಪ್ರಗತಿಯ ಹಾದಿಗೆ ಬರುವ ನಿರೀಕ್ಷೆಯಿದೆ.

ಒಬಿಸಿ ವರ್ಗದ ಸಿಪಿಎಲ್ ಕೋರ್ಸ್ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ಸೌಲಭ್ಯವಿದೆ. ಹೆಚ್ಚಿನ ವಿವರಗಳಿಗೆ ಗಮನಿಸಿ: http://socialjustice.nic.in/SchemeList/Send/4?mid=32549

 • ಫುಲ್ ಸ್ಟ್ಯಾಕ್ ಡೆವಲಪರ್ ಕೋರ್ಸ್ ಮತ್ತು ವೆಬ್ ಡಿಸೈನೆರ್/ಡೆವಲಪರ್ ನಡುವಿನ ವ್ಯತ್ಯಾಸ, ಮಾಹಿತಿ ಮತ್ತು ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ.

ಮಧುಸೂಧನ್, ಬೆಂಗಳೂರು.

ವೆಬ್ ಡಿಸೈನರ್ ಕೋರ್ಸ್‍ಗಳಲ್ಲಿ ಡಿಸೈನ್ ಸಂಬಂಧಿತ ತಂತ್ರಜ್ಞಾನವನ್ನು ಕಲಿಸಲಾಗುತ್ತದೆ; ಹಾಗಾಗಿ ಇದೊಂದು ಸೃಜನಾತ್ಮಕ ವೃತ್ತಿ.  ಫುಲ್ ಸ್ಟ್ಯಾಕ್ ಡೆವಲಪರ್ಸ್, ಫ್ರಂಟ್ ಎಂಡ್ ಮತ್ತು ಬ್ಯಾಕ್ ಎಂಡ್ ಕೆಲಸಗಳಿಗೆ ಅನ್ಯಯವಾಗುವ ಎಲ್ಲಾ ತಂತ್ರಜ್ಞಾನಗಳಲ್ಲಿ ಪರಿಣತಿ ಹೊಂದಿರುತ್ತಾರೆ.  ಹಾಗಾಗಿ, ವೆಬ್ ಡಿಸೈನ್ ಕೋರ್ಸ್ ಒಂದು ಸೀಮಿತ ವಲಯದ ಡಿಸೈನ್ ತಂತ್ರಜ್ಞಾನಗಳಿಗೆ  ಸಂಬಂಧಿಸಿದ್ದು ಫುಲ್ ಸ್ಟ್ಯಾಕ್ ಡೆವಲಪರ್ ಕೋರ್ಸ್ ದತ್ತಾಂಶ, ಸರ್ವರ್, ಸಿಸ್ಟಮ್ಸ್, ಗ್ರಾಹಕ ಸಂಬಂಧಿತ ಬಹುಬಗೆಯ ಕೌಶಲಗಳನ್ನು ಕಲಿಸುವ ಸಮಗ್ರವಾದ ಕೋರ್ಸ್. ಹಾಗಾಗಿ, ಫುಲ್ ಸ್ಟ್ಯಾಕ್ ಡೆವಲಪರ್‍ಗಳಿಗೆ ಹೆಚ್ಚಿನ ಬೇಡಿಕೆಯಿದೆ.

 • ನಾನು ಈಗ ದ್ವಿತೀಯ ಪಿಯುಸಿ (ಸೈನ್ಸ್) ಓದುತ್ತಿದ್ದೇನೆ. ನಾನು ಸಿಎ ಮಾಡಲು ಸಾಧ್ಯವೇ?

ನಿತೀಶ್, ಹೊನ್ನಾಳಿ.

ಪಿಯುಸಿ (ಸೈನ್ಸ್) ಮುಗಿಸಿ ಸಿಎ ಫೌಂಡೇಷನ್ ಕೋರ್ಸ್ ಮಾಡಬೇಕು. ನಂತರ ಇಂಟರ್‍ಮೀಡಿಯೆಟ್ ಮತ್ತು ಫೈನಲ್ ಕೋರ್ಸ್‍ಗಳನ್ನು ಮಾಡಬೇಕು. ಹೆಚ್ಚಿನ ವಿವರಗಳಿಗೆ ಗಮನಿಸಿ: https://www.icai.org/

 • ನಾನು ಪಿಯುಸಿ ಮುಗಿಸಿ ಸಿಇಟಿಗೆ ತಯಾರಿ ನಡೆಸುತ್ತಿದ್ದೇನೆ. ಯಾವ ಎಂಜಿನಿಯರಿಂಗ್ ಕೋರ್ಸಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳಿವೆ?

ಬೃಂದಾ, ಮೈಸೂರು.

 • ನಾನು ಪ್ರಥಮ ಪಿಯುಸಿ ಓದುತ್ತಿದ್ದೇನೆ. ಬಿಟೆಕ್(ಕಂಪ್ಯೂಟರ್ ಸೈನ್ಸ್) ಕೋರ್ಸ್ ಮಾಡಿದರೆ ಒಳ್ಳೆಯದೇ? ಬಿಟೆಕ್ ಮತ್ತು ಬಿಇ ಕೋರ್ಸ್‍ಗಳ ವ್ಯತ್ಯಾಸ ಮತ್ತು ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ.

ಪವನ್, ಶಿವಮೊಗ್ಗ.

ಎಂಜಿನಿಯರಿಂಗ್ ಕೋರ್ಸಿನಲ್ಲಿ ಹಲವಾರು ಸ್ಪೆಷಲೈಜೇಷನ್‍ಗಳಿವೆ. ಯಾವುದೇ ಸ್ಪೆಷಲೈಜೇಷನ್ ಮಾಡಿದರೂ ಸಹ,  ಕೋರ್ಸ್ ಫಲಿತಾಂಶ  ಉತ್ಕೃಷ್ಟವಾಗಿದ್ದರೆ ಬೇಡಿಕೆ ಇದೆ. ಕಂಪ್ಯೂಟರ್ ಸೈನ್ಸ್, ಐಟಿ, ರೊಬಾಟಿಕ್ಸ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್,  ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್, ಮೆಕ್ಯಾನಿಕಲ್ ಇತ್ಯಾದಿ ಕೋರ್ಸ್‍ಗಳಿಗೆ ಹೆಚ್ಚಿನ ಬೇಡಿಕೆ ಇದೆ.

ವಿಶ್ವವಿದ್ಯಾಲಯಗಳ ಸಂಪ್ರದಾಯ ಮತ್ತು ಆದ್ಯತೆಯಂತೆ ಎಂಜಿನಿಯರಿಂಗ್ ಕೋರ್ಸ್‍ಗಳನ್ನು ಬಿಟೆಕ್ ಅಥವಾ ಬಿಇ ಎಂದು ಗುರುತಿಸಲಾಗುತ್ತದೆ. ಹಾಗಾಗಿ, ಈಗ ನಾಮಾವಳಿಯ ಭಿನ್ನತೆಯನ್ನು ಬಿಟ್ಟರೆ ಕೋರ್ಸ್‍ಗಳಲ್ಲಿ ವ್ಯತ್ಯಾಸಗಳಿಲ್ಲ. ಹಾಗೂ, ಉದ್ಯೋಗದ ದೃಷ್ಟಿಯಿಂದ ಎರಡೂ ಕೋರ್ಸ್‍ಗಳಿಗೆ ಸರಿಸಮನಾದ ಮಾನ್ಯತೆಯಿದೆ.

ಎಂಜಿನಿಯರಿಂಗ್ ಕೋರ್ಸ್ ಮಾಡಲು ತಾರ್ಕಿಕ ಪ್ರತಿಪಾದನಾ ಕೌಶಲ, ಸಮಸ್ಯೆಗಳಿಗೆ ಪರಿಹಾರವನ್ನೊದಗಿಸುವ ಕೌಶಲ ಮತ್ತು ವಿಶ್ಲೇಷಣಾ ಕೌಶಲಗಳ ಜೊತೆಗೆ ಆಯಾ ಸ್ಪೆಷಲೈಜೇಷನ್ ಸಂಬಂಧಿತ ವಿಷಯಗಳಲ್ಲಿ ಆಸಕ್ತಿ ಮತ್ತು ಸ್ವಾಭಾವಿಕ ಪ್ರತಿಭೆ ಇರಬೇಕು.

 • ನಾನು ಎಂಬಿಎ ಮುಗಿಸಿದ್ದೇನೆ. ನಾನು ಕೆಎಸ್‍ಇಟಿ ಬರೆಯಬಹುದೇ? ಯಾವ ವಿಷಯದಲ್ಲಿ ಬರೆಯಬಹುದು?

ರಾಕೇಶ್, ಊರು ತಿಳಿಸಿಲ್ಲ.

ನೀವು ಕೆಎಸ್‍ಇಟಿ ಪರೀಕ್ಷೆಯನ್ನು ಮ್ಯಾನೇಜ್‍ಮೆಂಟ್ ವಿಷಯದಲ್ಲಿ ಬರೆಯಬಹುದು.

 • ನಾನು ಬಿಕಾಂ ಓದುತ್ತಿದ್ದೇನೆ. ಪಿಯುಸಿ ಅರ್ಹತೆಯ ಆಧಾರದ ಮೇಲೆ ರೈಲ್ವೆಯಲ್ಲಿ ಉದ್ಯೋಗ ಸಿಗಬಹುದೇ?

ಬಿಂದು ಯಮುನ, ಧಾರವಾಡ.

ಪಿಯುಸಿ ಅರ್ಹತೆಯ ಆಧಾರದ ಮೇಲೆ ರೈಲ್ವೆ ರೆಕ್ರೂಟ್‍ಮೆಂಟ್ ಬೋರ್ಡ್ ನಡೆಸುವ ಎನ್‍ಟಿಪಿಸಿ ಪರೀಕ್ಷೆಯ ಮುಖಾಂತರ ನಾನ್ ಟೆಕ್ನಿಕಲ್  ಹುದ್ದೆಗಳಿಗೆ ನೀವು ಪ್ರಯತ್ನಿಸಬಹುದು.

 1. ನಾನು ಬಿಎ ನಾಲ್ಕನೇ ಸೆಮಿಸ್ಟರ್ ಮುಗಿಸಿ ತದನಂತರ ಆರ್ಥಿಕ ಸಮಸ್ಯೆಗಳಿಂದ ಉಳಿದ ಸೆಮಿಸ್ಟರ್‍‌ಗಳನ್ನು ಮುಗಿಸಲಾಗಲಿಲ್ಲ. ಮುಂದೇನು ಮಾಡುವುದೆಂದು ತೋಚುತ್ತಿಲ್ಲ. ನಿಮ್ಮ ಸಲಹೆ ನೀಡಿ.

ವಿ ನರಸು ಮೌರ್ಯ, ಮರ್ಚಟಹಾಳ್

ಮೊದಲು, ಉಳಿದ ಸೆಮಿಸ್ಟರ್‍‌ಗಳನ್ನು ಮುಗಿಸುವ ಸಾಧ್ಯತೆಗಳನ್ನು ಪರಿಶೀಲಿಸಿ.

ಅದು ಸಾಧ್ಯವಿಲ್ಲದಿದ್ದರೆ, ಸಂಜೆ ಕಾಲೇಜು ಅಥವಾ ದೂರ ಶಿಕ್ಷಣದ ಮುಖಾಂತರ ಮಾಡಬಹುದಾದ ಅನೇಕ ಡಿಪ್ಲೊಮ, ಸರ್ಟಿಫಿಕೆಟ್, ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‍ಗಳಿವೆ. ಜೊತೆಗೆ, ಜಗತ್ತಿನ ಹೆಸರಾಂತ ವಿಶ್ವವಿದ್ಯಾಲಯಗಳು (ಭಾರತದ ವಿಶ್ವವಿದ್ಯಾಲಯಗಳೂ ಸೇರಿದಂತೆ) ನಡೆಸುವ ಮ್ಯಾಸ್ಸೀವ್ ಓಪನ್ ಆನ್‍ಲೈನ್ ಕೋರ್ಸ್‍ಗಳಿವೆ (ಎಂಒಒಸಿ). ಆದ್ದರಿಂದ, ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಅಗತ್ಯಗಳಿಗೆ ತಕ್ಕಂತೆ ಕೋರ್ಸ್ ಆಯ್ಕೆ ಮಾಡಿ ವಿದ್ಯಾಭ್ಯಾಸವನ್ನು ಮುಂದುವರಿಸಿ, ನಿಮ್ಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು.

 1. ಡಿಪ್ಲೊಮ (ಕಂಪ್ಯೂಟರ್ ಸೈನ್ಸ್) ನಂತರ ನಾನು ಅಗ್ರಿಕಲ್ಚರ್ ಎಂಜಿನಿಯರಿಂಗ್ ಮಾಡಬಹುದೇ?

ಸೌಂದರ್ಯ, ದಾವಣಗೆರೆ.

ಸಾಮಾನ್ಯವಾಗಿ 3 ವರ್ಷದ ಡಿಪ್ಲೊಮ ನಂತರ ಅದೇ ವಿಷಯದ ಎಂಜಿನಿಯರಿಂಗ್ ಕೋರ್ಸಿಗೆ ಅಥವಾ ಸಂಬಂಧಿತ ಕೋರ್ಸ್‍ಗಳಿಗೆ ಲ್ಯಾಟರಲ್ ಎಂಟ್ರಿಯ ಅವಕಾಶವಿದೆ. ಹಾಗಾಗಿ, ನೀವು ಮಾಡಿರುವ ಕಂಪ್ಯೂಟರ್ ಸೈನ್ಸ್ ಡಿಪ್ಲೊಮ ಆಧಾರದ ಮೇಲೆ ಅಗ್ರಿಕಲ್ಚರ್ ಎಂಜಿನಿಯರಿಂಗ್ ಕೋರ್ಸ್‍ಗೆ ಲ್ಯಾಟರಲ್ ಎಂಟ್ರಿಯ ಅವಕಾಶ ಅನುಮಾನ. ಖಚಿತವಾದ ಮಾಹಿತಿಗಾಗಿ ನೀವು ಸೇರ ಬಯಸುವ ವಿಶ್ವವಿದ್ಯಾಲಯದಲ್ಲಿ ವಿಚಾರಿಸಿ.

ಈ ಎಂಜಿನಿಯರಿಂಗ್ ಕೋರ್ಸಿನಲ್ಲಿ ಕೃಷಿ ಮತ್ತು ಕೃಷಿ ಉದ್ಯಮಗಳ ದಕ್ಷತೆಯನ್ನು ಸುಧಾರಿಸಲು ಹಾಗೂ ನೈಸರ್ಗಿಕ ಮತ್ತು ನವೀಕರಿಸಬಹುದಾದ ಸಂಪಲ್ಮೂಲನಗಳ ಸುಸ್ಥಿತಿಯನ್ನು ಖಚಿತಪಡಿಸಲು ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಿದ್ಧಾಂತ ಮತ್ತು ತತ್ವಗಳನ್ನು ಬಳಸಲಾಗುತ್ತದೆ.

 1. ನಾನು ಪಿಯುಸಿ ಸೈನ್ಸ್ ಮಾಡುತ್ತಿದ್ದೇನೆ. ಮುಂದೆ ಬ್ಯಾಂಕ್ ಸೇರಬೇಕಾದರೆ ಯಾವ ಕೋರ್ಸ್ ಮಾಡಬೇಕು?

ಪ್ರಭಾಕರ್ ರೆಡ್ಡಿ, ಊರು ತಿಳಿಸಿಲ್ಲ.

ನೀವು ಬಿಕಾಂ (ಬ್ಯಾಂಕಿಂಗ್ ಅಂಡ್ ಫೈನಾನ್ಸ್) ಮಾಡಬಹುದು. ಆದರೆ, ಯಾವುದೇ ಪದವಿಯ ನಂತರವೂ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಹುದ್ದೆಗಳಿಗೆ ಪ್ರಯತ್ನಿಸಬಹುದು. ಪದವಿಯ ನಂತರ ಐಬಿಪಿಎಸ್ ಅಥವಾ ಆಯಾ ಬ್ಯಾಂಕ್ ನಡೆಸುವ ಅರ್ಹತಾ ಪರೀಕ್ಷೆಯ ಮುಖಾಂತರ ನೇಮಕಾತಿ ಆಗುತ್ತದೆ.

 1. ನಾನು ಬಿಬಿಎ ಮಾಡುತ್ತಿದ್ದೇನೆ. ಬಿಬಿಎ ಪದವೀಧರರಿಗೆ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯಲ್ಲಿ ಕೆಲಸ ಸಿಗಬಹುದೇ?

ಧೀರಜ್ ಎಂ, ಬೆನಕನಹಳ್ಳಿ.

ಸಾಮಾನ್ಯವಾಗಿ ಬಿಕಾಂ ಪದವೀಧರರನ್ನು ಅಥವಾ ಆರ್ಟಿಕಲ್ ತರಬೇತಿಗೆ ನೋಂದಾಯಿಸಿರುವರನ್ನು  ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಗಳು ನೇಮಕಾತಿ ಮಾಡುವ ವಾಡಿಕೆಯಿದೆ.

 1. ನಾನು ಬಿಎಸ್‍ಸಿ ಕೋರ್ಸನ್ನು 2015 ರಲ್ಲಿ ಸೇರಿ ಎರಡು ವರ್ಷ ಮುಗಿಸಿ ಸರ್ಕಾರಿ ನೌಕರಿಯಲ್ಲಿದ್ದೇನೆ. ನೌಕರಿಯಲ್ಲಿದ್ದುಕೊಂಡು ಮೂರನೇ ವರ್ಷ ಮುಗಿಸಬಹುದೇ?

ಸಿದ್ದು, ವಿಜಯಪುರ.

ನೀವು ನೀಡಿರುವ ಮಾಹಿತಿಯಂತೆ ನೌಕರಿಯಲ್ಲಿದ್ದುಕೊಂಡು ಕೋರ್ಸ್ ಮುಗಿಸಲು ಸಾಧ್ಯವಿಲ್ಲವೆನಿಸುತ್ತದೆ. ಆದರೆ, ನೀವು ಉದ್ಯೋಗದಲ್ಲಿರುವ ಇಲಾಖೆಯಿಂದ ಅಧ್ಯಯನ ರಜೆ ಮಂಜೂರಾತಿ ಸಾಧ್ಯವೇ ಎಂದು ಪರಿಶೀಲಿಸಿ.