Q & A for students – Week 7

1.         ನಾನು ಈಗ 2ನೇ ಸೆಮಿಸ್ಟರ್ ಎಂಜಿನಿಯರಿಂಗ್ (ಇಸಿ) ಮಾಡುತ್ತಿದ್ದೀನಿ. ರೈಲ್ವೇಸ್ ಪರೀಕ್ಷೆ ಮತ್ತು ತಯಾರಿ ಬಗ್ಗೆ ಮಾಹಿತಿ ನೀಡಿ.

ಶ್ರೇಯಸ್ ದೇಶ್‍ಪಾಂಡೆ, ಬೆಂಗಳೂರು

ರೈಲ್ವೇಸ್ ಹುದ್ದೆಗಳ ನೇಮಕಾತಿ, ಮೂರು ಹಂತದ ಪರೀಕ್ಷೆಗಳ ಮೂಲಕ ನಡೆಯುತ್ತದೆ.

  1. ಕಂಪ್ಯೂಟರ್ ಬೇಸ್ಡ್ ಟೆಸ್ಟ್ ಹಂತ-1: ಎಲ್ಲಾ ಹುದ್ದೆಗಳಿಗೆ ಅನ್ವಯ.
  2. ಕಂಪ್ಯೂಟರ್ ಬೇಸ್ಡ್ ಟೆಸ್ಟ್ ಹಂತ-2: ಆಯಾ ಹುದ್ದೆಗಳಿಗೆ ಅನ್ವಯವಾಗುವ ಪರೀಕ್ಷೆ.
  3. ವೈದ್ಯಕೀಯ ಪರೀಕ್ಷೆ/ದಾಖಲೆಗಳ ಪರಿಶೀಲನೆ.

ಈ ಎಲ್ಲಾ ಪರೀಕ್ಷೆಗಳನ್ನು 21 ವಲಯಗಳಲ್ಲಿರುವ ರೈಲ್ವೇಸ್ ರೆಕ್ರೂಟ್‍ಮೆಂಟ್ ಬೋರ್ಡ್ ನಡೆಸುತ್ತದೆ ಮತ್ತು ಅರ್ಹತೆಯ ಆಧಾರದ ಮೇಲೆ ನೇಮಕಾತಿ ಆಗುತ್ತದೆ. ಆದರೆ, ಕೆಲವೊಮ್ಮೆ ಕೆಳಹಂತದ ಹುದ್ದೆಗಳಿಗೆ ಅರ್ಹತೆಯ ಆಧಾರದ ಮೇಲೆ ನೇರ ನೇಮಕಾತಿ ಆಗುವುದೂ ಉಂಟು.

ಪರೀಕ್ಷೆಯ ಮಾದರಿ, ವಿಷಯಸೂಚಿಕೆ ಮತ್ತು ಹೆಚ್ಚಿನ ವಿವರಗಳಿಗಾಗಿ ಗಮನಿಸಿ: http://rrcb.gov.in/

2.         ನಾನು 2ನೇ ಪಿಯುಸಿ ಮುಗಿಸಿ ಪ್ಯಾರಾಮೆಡಿಕಲ್ ಮಾಡಿ ಯುಪಿಎಸ್ಸಿ ಪರೀಕ್ಷೆ ಬರೆಯಬಹುದಾ?

ಹೆಸರು, ಊರು ತಿಳಿಸಿಲ್ಲ.

ಯುಪಿಎಸ್‍ಸಿ ಪರೀಕ್ಷೆಯನ್ನು ಪ್ಯಾರಾಮೆಡಿಕಲ್ ಸೇರಿದಂತೆ ಯಾವುದೇ ಪದವಿಯ ನಂತರ ಬರೆಯಬಹುದು.

3.         ನಾನು ಈಗಷ್ಟೇ ದ್ವಿತೀಯ ಪಿಯುಸಿ ಸೇರಿದ್ದೇನೆ. ನನಗೆ ವಿಎಫ್ಎಕ್ಸ್, ಅನಿಮೇಷನ್, ಗೇಮ್ ಡಿಸೈನಿಂಗ್ನಲ್ಲಿ ಮುಂದುವರಿಯಬೇಕು ಎಂದು ಆಸಕ್ತಿ ಇದೆ.    ದ್ವಿತೀಯ ಪಿಯುಸಿ ನಂತರ ಯಾವ ಕೋರ್ಸ್ ಮಾಡಿದರೆ ಉತ್ತಮ?

ಪ್ರಜ್ವಲ್, ಊರು ತಿಳಿಸಿಲ್ಲ.

ಈ ಸೃಜನಾತ್ಮಕ ಕ್ಷೇತ್ರಗಳಲ್ಲಿ ಆಸಕ್ತಿಯಿದ್ದರೆ ಈ ಕ್ಷೇತ್ರದ ಸ್ಪೆಷಲೈಜೇಷನ್ ಅಂದರೆ ವಿಎಫ್ಎಕ್ಸ್, ಅನಿಮೇಷನ್, ಗೇಮ್ ಡಿಸೈನಿಂಗ್ ಮತ್ತು ಡೆವೆಲಪ್‍ಮೆಂಟ್ ಇರುವ ಬಿಎಸ್‍ಸಿ ಕೋರ್ಸ್ ಮಾಡಬಹುದು. ಈ ಕ್ಷೇತ್ರಗಳಲ್ಲಿ  ಸಾಕಷ್ಟು ವೈವಿಧ್ಯತೆಗಳಿವೆ ಮತ್ತು ಅದರಂತೆ ಉದ್ಯೋಗದ ಅವಕಾಶಗಳಿವೆ. ಹಾಗಾಗಿ, ನಿಮಗೆ ಯಾವ ಸ್ಪೆಷಲೈಜೇಷನ್‍ನಲ್ಲಿ ಆಸಕ್ತಿಯಿದೆ ಎಂದು ತಿಳಿದು, ಅದರಂತೆ ಕೋರ್ಸ್ ಮತ್ತು ಕಾಲೇಜು ಆಯ್ಕೆ ಮಾಡಬಹುದು.

4.         ನಾನು ಎನ್ಐಡಿ ಸ್ನಾತಕೋತ್ತರ ಸಂದರ್ಶನವನ್ನು ಮುಗಿಸಿದ್ದೇನೆ. ನಾನು ಎಸ್ಟಿ ವರ್ಗಕ್ಕೆ ಸೇರಿದ್ದು ಒಂದು ವೇಳೆ ಪಾಸಾದರೆ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಿ. ಇದಕ್ಕೆ ಉದ್ಯೋಗದ ಅವಕಾಶ ಹೇಗಿದೆ?

ಹೆಸರು ತಿಳಿಸಿಲ್ಲ, ತುಮಕೂರು

ಅರ್ಹತೆ, ಆದಾಯದ ಆಧಾರದ ಮೇಲೆ  ಎನ್‍ಐಡಿ ಮತ್ತು ಫೋರ್ಡ್ ಫೌಂಡೇಷನ್ ಸ್ಕಾಲರ್‌ಶಿಪ್ ಸೌಲಭ್ಯಗಳಿವೆ. ಹೆಚ್ಚಿನ ಮಾಹಿತಿಗಾಗಿ ಎನ್‍ಐಡಿ ಸಂಸ್ಥೆಯಲ್ಲಿ ವಿಚಾರಿಸಿ. ಹಾಗೂ, ನಿಮ್ಮ ವರ್ಗಕ್ಕೆ ಮತ್ತು ಎನ್‍ಐಡಿ ವಿದ್ಯಾರ್ಥಿಗಳಿಗೆ  ಅನ್ವಯವಾಗುವ ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನ, ಪುಸ್ತಕಗಳು, ಉಚಿತ ಕಂಪ್ಯೂಟರ್  ಮತ್ತು ಸ್ಕಾಲರ್‌ಶಿಪ್  ಯೋಜನೆಗಳಿವೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: http://socialjustice.nic.in/SchemeList/Send/27?mid=24541

ಎನ್‍ಐಡಿ ಸ್ನಾತಕೋತ್ತರ ಕೋರ್ಸ್ ನಂತರ ಡಿಸೈನ್ ಸಂಬಂಧಿತ ಉದ್ಯೋಗಾವಕಾಶಗಳು ಅನೇಕ ಕ್ಷೇತ್ರಗಳಲ್ಲಿ ಲಭ್ಯ. ಉದಾಹರಣೆಗೆ ಫ್ಯಾಷನ್, ಟೆಕ್ಸ್‍ಟೈಲ್, ಲೆದರ್, ಅಪರೆಲ್, ಪ್ರಾಡಕ್ಟ್ಸ್, ಸೆರಾಮಿಕ್, ಫರ್ನಿಚರ್ ಇತ್ಯಾದಿ. ಹಾಗೂ, ಎನ್‍ಐಡಿ ಸಂಸ್ಥೆಯಲ್ಲಿ ಪ್ಲೇಸ್‍ಮೆಂಟ್ ಸೆಲ್ ಸಹಾ ಕಾರ್ಯ ನಿರ್ವಹಿಸುತ್ತಿದೆ.