Q&A for students – Week 4

ಎಂಬಿಎ ಕೋರ್ಸ್ ಮಾಹಿತಿ, ಪ್ರವೇಶ ಹೇಗೆ?

1. ನಾನು ಸ್ನಾತಕೋತ್ತರ ಎಂಜಿನಿಯರಿಂಗ್ ಪದವಿಯನ್ನು ಮುಗಿಸಿದ್ದೇನೆ. ಎಂಬಿಎ ಕೋರ್ಸ್‍ನ ಮಾಹಿತಿ, ಪ್ರವೇಶ ಮತ್ತು ಸ್ಕಾಲರ್‍ಶಿಪ್ ಬಗ್ಗೆ ತಿಳಿಸಿ.

ಉದ್ಯಮಗಳ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದೇ ಮ್ಯಾನೇಜ್‍ಮೆಂಟ್‍ನ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು, ಸಮಗ್ರವಾದ ಜ್ಞಾನ ಮತ್ತು ಕೌಶಲಗಳನ್ನು ಎಂಬಿಎ ಕೋರ್ಸಿನಲ್ಲಿ ನೀಡಲಾಗುತ್ತದೆ. ಇದಲ್ಲದೆ, ಉದ್ಯಮಗಳಲ್ಲಿ ಪ್ರಾಯೋಗಿಕವಾದ ತರಬೇತಿಯನ್ನು ಪ್ರಾಜೆಕ್ಟ್‍ಗಳ ಮುಖಾಂತರ ನೀಡುವುದರಿಂದ ಕಲಿಕೆ ಪರಿಪೂರ್ಣವಾಗುತ್ತದೆ. ನಿಮ್ಮ ನೈಪುಣ್ಯತೆ ಮತ್ತು ಚತುರತೆ ವರ್ಧಿಸಿ, ಯಾವುದೇ ಕೆಲಸವನ್ನು ನಿಭಾಯಿಸುವ ಆತ್ಮವಿಶ್ವಾಸ ಬೆಳೆಯುತ್ತದೆ. ಒಟ್ಟಾರೆ, ಎಂಬಿಎ ಕಲಿಕೆಯ ವೈವಿಧ್ಯತೆಗಳಿಂದ ನಿಮ್ಮ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಆದ್ದರಿಂದಲೇ, ಎಂಬಿಎ ಕೋರ್ಸ್ ಜನಪ್ರಿಯ. ನಮ್ಮ ದೇಶದಲ್ಲಿ ಸುಮಾರು 5000ಕ್ಕೂ ಹೆಚ್ಚಿನ ಎಂಬಿಎ ಕಾಲೇಜುಗಳಿದ್ದು, ಸಿಎಟಿ, ಪಿಜಿಸಿಯಿಟಿ ಗಳಂತಹ ಪರೀಕ್ಷೆಗಳ ಮೂಲಕ ಪ್ರವೇಶದ ಆಯ್ಕೆಯಾಗುತ್ತದೆ. ಅರ್ಹತೆ, ಆದಾಯಗಳ ಆಧಾರದ ಮೇಲೆ ಅನೇಕ ಸ್ಕಾಲರ್‍ಶಿಪ್ ಯೋಜನೆಗಳಿವೆ. ನೀವು ಈಗಾಗಲೇ ಸ್ನಾತಕೋತ್ತರ ಪದವಿಯನ್ನು ಗಳಿಸಿರುವುದರಿಂದ, ಕೆಲಸಕ್ಕೆ ಸೇರಿ ವಾರಾಂತ್ಯದ ಎಗ್ಸಿಕ್ಯೂಟಿವ್ ಎಂಬಿಎ ಕೋರ್ಸ್‍ನ್ನು ಮಾಡುವ ಅವಕಾಶವೂ ನಿಮಗಿದೆ.

2. ನನ್ನ ತಂಗಿ ದ್ವಿತೀಯ ಪಿಯುಸಿ (ಆಟ್ರ್ಸ್) ಕನ್ನಡ ಮಾಧ್ಯಮದಲ್ಲಿ ಪೂರ್ಣಗೊಳಿಸಿದ್ದು, ಮುಂದೆ ಯಾವ ಕೋರ್ಸ್ ಆಯ್ದುಕೊಳ್ಳಬಹುದು? ಏನು ಭವಿಷ್ಯವಿದೆ? ಉತ್ತಮ ಉದ್ಯೋಗವಕಾಶಗಳ ಬಗ್ಗೆ ಸಲಹೆ ನೀಡಿ.

ನಿಮ್ಮ ಆದ್ಯತೆಯಂತೆ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಮುಂದುವರೆಸಬಹುದು ಅಥವಾ ಇಂಗ್ಲೀಷ್ ಮಾಧ್ಯಮಕ್ಕೆ ಬದಲಾಯಿಸಿಕೊಳ್ಳಬಹುದು. ಕನ್ನಡ ಭಾಷೆಯನ್ನು ಕಲಿಯುವ ಆಸಕ್ತಿಯಿದ್ದರೆ ಬಿಎ ಮಾಡಿ ಎಂಎ ಮಾಡಬಹುದು. ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯಿರುವ ವಿಷಯಗಳಲ್ಲಿ ಶಿಕ್ಷಣ ಮುಂದುವರೆಸುವುದು ಉತ್ತಮ. ಹಾಗೂ, ಶಿಕ್ಷಣದ ನಂತರದ ಬದುಕಿನ ಕನಸುಗಳೇನು ಎನ್ನುವುದರ ಬಗ್ಗೆ ಸ್ಪಷ್ಟತೆಯಿರಬೇಕು. ಆ ಕನಸುಗಳನ್ನು ನನಸಾಗಿಸಲು ಸೂಕ್ತವಾದ ವೃತ್ತಿಯ ಬಗ್ಗೆ ಮೊದಲೇ ನಿಶ್ಚಯಿಸಬೇಕು. ಏಕೆಂದರೆ, ಯಶಸ್ಸಿನ ಹಾದಿಯಲ್ಲಿ ವೈಯಕ್ತಿಕ ಬದುಕಿನ ಕನಸುಗಳೇ ಪ್ರೇರಣೆ.

ಶಿಕ್ಷಣದ ನಂತರ, ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಸೇರಿದಂತೆ ಮಾಧ್ಯಮಗಳು, ಪ್ರಕಾಶನ ಸಂಸ್ಥೆಗಳು, ಚಿತ್ರೋಧ್ಯಮ, ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಇ-ಕಾಮರ್ಸ್, ಕೋಚಿಂಗ್ ತರಗತಿಗಳು, ಶಿಕ್ಷಣ ಸೇರಿದಂತೆ ಅನೇಕ ವಲಯಗಳಲ್ಲಿ ವೃತ್ತಿಯ ಅವಕಾಶಗಳಿವೆ.

3. ನನ್ನ ತಂಗಿಯ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮುಗಿದಿದೆ. ಸಿವಿಲ್ ಎಂಜಿನಿಯರಿಂಗ್ ಮಾಡಬೇಕು ಅನ್ನುವುದು ಅವಳ ಆಸೆ. ಅವಳ ಮುಂದಿನ ಮಾರ್ಗ ತಿಳಿಸಿ.

ಸಿವಿಲ್ ಎಂಜಿನಿಯರಿಂಗ್ ಕಾಲೇಜುಗಳ ಸಂಪನ್ಮೂಲಗಳು, ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಾಪಕ ವರ್ಗ, ಪ್ಲೇಸ್‍ಮೆಂಟ್ ಮಾಹಿತಿ, ಗ್ರಂಥಾಲಯ, ಶುಲ್ಕಗಳು ಇತ್ಯಾದಿಗಳ ಕುರಿತು ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸಿ, ವಿಶ್ಲೇಷಿಸಿ. ಪದವಿಯನ್ನು ಯಾವ ಕಾಲೇಜಿನಲ್ಲಿ ಮಾಡಬೇಕೆನ್ನುವುದರ ಆದ್ಯತೆಯ ಅನುಗುಣವಾಗಿ ಪ್ರವೇಶ ಪರೀಕ್ಷೆಗಳಿಗೆ ತಯಾರಾಗುವುದೇ ಮುಂದಿನ ಹಂತ. ಉದಾಹರಣೆಗೆ ಸಿಇಟಿ, ಜೆಇಇ ಇತ್ಯಾದಿ.

ಸಿವಿಲ್ ಎಂಜಿನಿಯರಿಂಗ್ ವಲಯದಲ್ಲಿ ಅನೇಕ ವೃತ್ತಿಗಳ ಅವಕಾಶಗಳಿವೆ. ಹಾಗಾಗಿ, ವೃತ್ತಿಯ ಆಯ್ಕೆ ಮತ್ತು ವೃತ್ತಿ ಜೀವನದ ಧ್ಯೇಯಗಳನ್ನು ನಿಶ್ಚಯಿಸಿ. ಈ ಆದ್ಯತೆಗಳಂತೆ, ಯಾವ ಹಂತದವರೆಗೆ ಓದಬೇಕು ಎನ್ನುವುದನ್ನು ಈಗಲೇ ನಿರ್ಧರಿಸುವುದು ಒಳ್ಳೆಯದು. ಶುಭಹಾರೈಕೆಗಳು.

4. ನಾನು ಬಿಎಸ್‍ಸಿ [ಪಿಸಿಎಂ] ಮಾಡಿದ್ದು, ಎಂಎಸ್‍ಸಿ [ಫಿಸಿಕ್ಸ್] ನಂತರದ ಅವಕಾಶಗಳ ಬಗ್ಗೆ ತಿಳಿಸಿ.

ಎಂಎಸ್‍ಸಿ [ಫಿಸಿಕ್ಸ್] ಕೋರ್ಸನ್ನು ನ್ಯೂಕ್ಲಿಯರ್ ಫಿಸಿಕ್ಸ್, ಬಯೋ ಫಿಸಿಕ್ಸ್, ಥರ್ಮೋಡೈನಾಮಿಕ್ಸ್, ಕ್ವಾಂಟಮ್ ಮೆಕಾನಿಕ್ಸ್ ಸೇರಿದಂತೆ ಅನೇಕ ವಿಷಯಗಳಲ್ಲಿ ಮಾಡಬಹುದು. ಎಂಎಸ್‍ಸಿ ನಂತರ  ಡಿಫೆನ್ಸ್, ಸ್ಪೇಸ್, ಏರೋಸ್ಪೇಸ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಐಟಿ, ರಿಸರ್ಚ್ ಹೀಗೆ ಅನೇಕ  ವಲಯಗಳ ಸಂಸ್ಥೆಗಳಲ್ಲಿ ವೃತ್ತಿಯ ಅವಕಾಶಗಳಿರುತ್ತವೆ. ಸರ್ಕಾರಿ ವಲಯದ ಅನೇಕ ಇಲಾಖೆಗಳಲ್ಲಿಯೂ ಅವಕಾಶಗಳಿವೆ. ಇದಲ್ಲದೆ, ಡಾಕ್ಟರೇಟ್ ಮಾಡಿ ಅಥವಾ ಎಂಎಸ್‍ಸಿ  ನಂತರವೂ ಶಿಕ್ಷಕ ವೃತ್ತಿಯನ್ನು ಆರಿಸಿಕೊಳ್ಳಬಹುದು.