Q & A for students – Week 11

1. ಪದವಿ ಮುಗಿಸಿಕೊಂಡು ಪಿಎಸ್‍ಐ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಪ್ರಬಂಧ ಬರೆಯುವುದು ಹೇಗೆ? ಯಾವ ವಿಷಯದ ಮೇಲೆ ಬರೆದರೆ ಪೂರ್ಣ ಅಂಕ ಸಿಗುತ್ತದೆ?

 ಕೃಷ್ಣಮೂರ್ತಿ ಟಿ.ಎಸ್., ಹುಣಸಗಿ, ಯಾದಗಿರಿ.

2.         ನಾನು ಪದವಿಯನ್ನು ಮುಗಿಸಿ ಪಿಎಸ್‍ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ಆದರೆ, ಎಷ್ಟು ಓದಿದರೂ ಉತ್ತರಗಳು ನೆನಪಿಗೆ ಬರುವುದಿಲ್ಲ. ಏನು ಮಾಡಬೇಕು?

ಕನಕರಾಯ, ಕೊಪ್ಪಳ.

ಪರೀಕ್ಷೆಗೆ ಹೇಗೆ ಓದಬೇಕು ಎನ್ನುವುದನ್ನು ಇದೇ ತಿಂಗಳ 23ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ. ಪರೀಕ್ಷೆಯಲ್ಲಿ ಸೂಚಿಸಿದ ವಿಷಯದ ಮೇಲೆ ಪ್ರಬಂಧ ಬರೆಯುವುದರ ಬಗ್ಗೆ ಈ ಸಲಹೆಗಳನ್ನು ಗಮನಿಸಿ:

•          ಪ್ರಬಂಧ ರಚನೆಯಲ್ಲಿ ಪೀಠಿಕೆ,  ವಿಷಯದ ಮಂಡನೆ ಮತ್ತು ಪ್ರತಿಪಾದನೆ ಹಾಗೂ ಮುಕ್ತಾಯದ ಹಂತಗಳನ್ನು ಅನುಸರಿಸಿ.

•          ಪ್ರಚಲಿತ ವಿದ್ಯಮಾನಗಳ ಬಗ್ಗೆ ದಿನಪತ್ರಿಕೆ, ಸುದ್ದಿ ವಾಹಿನಿ,  ಇತ್ಯಾದಿಗಳಿಂದ ನಿರಂತರವಾಗಿ ಮಾಹಿತಿಯನ್ನು ಸಂಗ್ರಹಿಸಿ.

•          ಸ್ವಂತ ಆಲೋಚನೆಗಳಿಂದಲೂ ವಿಮರ್ಶಾತ್ಮಕ ಕೌಶಲ್ಯದಿಂದಲೂ ವಿಷಯದ ಮಂಡನೆ ಮಾಡಬೇಕು.

•          ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಷ್ಟಿತ ಸಂಸ್ಥೆಗಳ ಸಂಶೋಧನೆಗಳ, ಸಮೀಕ್ಷೆಗಳ ಅಂಕಿ ಅಂಶಗಳನ್ನು,  ವರದಿಯನ್ನು, ಸಾರಾಂಶವನ್ನು, ಉದಾಹರಣೆಗಳನ್ನು ಉಲ್ಲೇಖಿಸಿದರೆ ಪ್ರಬಂಧದ ಮೌಲ್ಯ ವೃದ್ಧಿಯಾಗುತ್ತದೆ.

•          ನಿಷ್ಪಕ್ಷವಾದ ಆಲೋಚನೆಗಳು, ಪರ್ಯಾಯ ಚಿಂತನೆಗಳಿದ್ದು ಪ್ರಬಂಧ ಸವಿಸ್ತಾರವಾಗಿಯೂ, ವಿಶಿಷ್ಟವಾಗಿಯೂ ಮೂಡಿ ಬಂದು ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತಿರಬೇಕು.

•          ಪರೀಕ್ಷೆಗೆ ಮುಂಚೆ ಪ್ರಬಂಧಗಳನ್ನು ಬರೆದು ಸ್ವಯಂ ವಿಮರ್ಶೆಗೆ ಒಳಪಡಿಸಿ. ಇದರಿಂದ ವಿಷಯಗಳ ಸಂಗ್ರಹಣೆ, ಸೂಕ್ತ ಪದಗಳ ಬಳಕೆ ಮತ್ತು ಸಮಯದ ನಿರ್ವಹಣೆಯ ಬಗ್ಗೆ ಅರಿವು ಮೂಡಿ, ಇನ್ನೂ ಉನ್ನತ ಮಟ್ಟದ ಪ್ರಬಂಧಗಳನ್ನು ಬರೆಯಲು ಸಾಧ್ಯವಾಗುತ್ತದೆ.

•          ಬರವಣಿಗೆ ಕಾಗುಣಿತ, ವ್ಯಾಕರಣ ದೋಷ ಮುಕ್ತವಾಗಿರಲಿ; ಓದಲು ಸುಲಭವಾಗಿರಲಿ.

3.         ನಾನು ದ್ವಿತೀಯ (ಪಿಯುಸಿ) ವಿಜ್ಞಾನ ವಿಭಾಗದಲ್ಲಿ ಮಾಡುತ್ತಿದ್ದೇನೆ. ಮುಂದೆ ಬಿಸಿಎ ಮತ್ತು ಎಂಸಿಎ ಮಾಡಬೇಕೆಂದುಕೊಂಡಿದ್ದೇನೆ. ಇದರ ವಿವರವನ್ನು ತಿಳಿಸಿ.

ಹೆಸರು ತಿಳಿಸಿಲ್ಲ, ಚಿಕ್ಕಮಗಳೂರು.

ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಯ ಪಥದಲ್ಲಿರುವ ಕ್ಷೇತ್ರ. ಹಾಗಾಗಿ, ಬಿಟೆಕ್ ಮತ್ತು ಬಿಸಿಎ ಪದವೀಧರರಿಗೆ ಬೇಡಿಕೆ ಇದೆ. ಮೂರು ವರ್ಷದ ಬಿಸಿಎ ಕೋರ್ಸಿನಲ್ಲಿ ವೃತ್ತಿನಿರತ ಇಂಗ್ಲೀಷ್, ಗಣಿತ, ಸಂಖ್ಯಾಶಾಸ್ತ್ರ ಸೇರಿದಂತೆ ಮಾಹಿತಿ ತಂತ್ರಜ್ಞಾನ ಸಂಬಂಧಿತ ವಿಷಯಗಳನ್ನು ಕಲಿಸಲಾಗುತ್ತದೆ. ಬಿಸಿಎ ನಂತರ ಕ್ಯಾಂಪಸ್ ನೇಮಕಾತಿಯ ಮುಖಾಂತರ ವೃತ್ತಿಯನ್ನು ಆರಂಭಿಸಬಹುದು ಅಥವಾ ಎರಡು ವರ್ಷದ ಎಂಸಿಎ ಕೋರ್ಸ್ ಮಾಡಬಹುದು. ಹಾಗಾಗಿ, ಕ್ಯಾಂಪಸ್ ನೇಮಕಾತಿಯಿರುವ ಕಾಲೇಜಿನಲ್ಲಿ ಬಿಸಿಎ ಮಾಡುವುದು ಉತ್ತಮ. ನೀವು ಸೇರಬಯಸುವ ಕಾಲೇಜನ್ನು ಅವಲಂಬಿಸಿ ಪ್ರವೇಶಾತಿ ನೇರವಾಗಿಯೂ ಕೆಲವೊಮ್ಮೆ ಪ್ರವೇಶ ಪರೀಕ್ಷೆಯ ಮುಖಾಂತರವೂ ಆಗುತ್ತದೆ.

4.         ನಾನು ದ್ವಿತೀಯ ಪಿಯುಸಿ ಮಾಡುತ್ತಿದ್ದೇನೆ. ಬಿಎಸ್‍ಸಿ (ಕೃಷಿ) ಮಾಡಿ ಐಎಎಸ್ ಅಧಿಕಾರಿಯಾಗಬೇಕೆಂಬ ಗುರಿ ಇದೆ. ಇದರ ಬಗ್ಗೆ ಮಾರ್ಗದರ್ಶನ ನೀಡಿ.

ಹೆಸರು, ಊರು ತಿಳಿಸಿಲ್ಲ.

ಐಎಎಸ್ ವೃತ್ತಿ ಕುರಿತ ಪ್ರಶ್ನೆಗಳನ್ನು ಇದೇ ವರ್ಷದ ಜೂನ್ 21 ಮತ್ತು ಜೂನ್ 28ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ.

5.         ನಾನು 10ನೇ ತರಗತಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದೇನೆ. ಮುಂದೆ ಕಾಮರ್ಸ್ ತೆಗೆದುಕೊಳ್ಳಬೇಕೆಂದುಕೊಂಡಿದ್ದೇನೆ. ನಿಮ್ಮ ಸಲಹೆ ಬೇಕು.

ಹೆಸರು, ಊರು ತಿಳಿಸಿಲ್ಲ.

6.         ನಾನು ಬಿಕಾಂ ಓದುತ್ತಿದ್ದು, ನಂತರ ಯಾವ ಕೋರ್ಸ್ ಮಾಡಬೇಕೆಂದು ತಿಳಿಸಿ.

ಮಂಜುನಾಥ್, ಊರು ತಿಳಿಸಿಲ್ಲ.

ಕಾಮರ್ಸ್ ವಿಸ್ತಾರವಾದ ಕ್ಶೇತ್ರ. ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿ ಈ ಕ್ಷೇತ್ರದಲ್ಲಿದ್ದು ಭವಿಷ್ಯದಲ್ಲಿ ಯಾವ ವೃತ್ತಿಯನ್ನು ಅರಸಬೇಕು ಎನ್ನುವುದರ ಬಗ್ಗೆ ಸ್ಪಷ್ಟವಾದ ಕಲ್ಪನೆ ಮತ್ತು ಯೋಜನೆಯಿರಬೇಕು. ಹಾಗಿದ್ದಲ್ಲಿ, ಪಿಯುಸಿ ನಂತರ ಈಗ ಬೇಡಿಕೆಯಲ್ಲಿರುವ ಬಿಕಾಂ ಕೋರ್ಸ್ ಮಾಡಬಹುದು ಅಥವಾ ಪಿಯುಸಿ ನಂತರ ನೇರವಾಗಿ ವೃತ್ತಿಪರ ಕೋರ್ಸ್‍ಗಳಾದ ಸಿಎ, ಎಸಿಎಸ್, ಐಸಿಎಂಎ ಕೋರ್ಸ್‍ಗಳನ್ನು ಮಾಡಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು. ಬಿಕಾಂ ನಂತರವಾದರೆ,  ನೇರವಾಗಿ ಈ ಕೋರ್ಸ್‍ಗಳ ಇಂಟರ್‍ಮೀಡಿಯೆಟ್ ಪರೀಕ್ಷೆಯನ್ನು ಬರೆಯಬಹುದು.

7.         ನಾನು ಎಂಎಸ್‍ಸಿ (ಗಣಿತ) ಕೋರ್ಸಿಗೆ ಮಾನಸಗಂಗೋತ್ರಿಯಲ್ಲಿ 2016ರಲ್ಲಿ ಪ್ರವೇಶಾತಿ ಪಡೆದು ಕೆಲಸಕ್ಕೆ ಸೇರಿದ ಕಾರಣದಿಂದ 2019ರಲ್ಲಿ ಎರಡನೇ ವರ್ಷಕ್ಕೆ ಕೆಎಸ್‍ಒಯು ಮುಕ್ತ ಗಂಗೋತ್ರಿಯಲ್ಲಿ ಪ್ರವೇಶಾತಿಯನ್ನು ಪಡೆದೆ. ಕಳೆದ ವರ್ಷ ಪರೀಕ್ಷೆ ನಡೆಯದೆ ಸೆಪ್ಟೆಂಬರ್‍ನಲ್ಲಿ ಪರೀಕ್ಷೆ ನಡೆಯಲಿದೆ. ನನ್ನ ಸ್ನಾತಕೋತ್ತರ ಪದವಿ ಪಡೆಯಲು ನಾಲ್ಕು ವರ್ಷ ಮೀರುವುದರಿಂದ ನನ್ನ ಪದವಿಗೆ ಮಾನ್ಯತೆ ದೊರೆಯುವುದೇ? ದಯವಿಟ್ಟು ಪರಿಹಾರ ತಿಳಿಸಿ.

ಪವನ್ ಕುಮಾರ್, ಊರು ತಿಳಿಸಿಲ್ಲ.

ನಿಮ್ಮ ಸ್ನಾತಕೋತ್ತರ ಪದವಿಗೆ ನಾಲ್ಕು ವರ್ಷಗಳಾಗಿರುವುದಕ್ಕೆ ಸಕಾರಣಗಳಿರುವುದರಿಂದ ಮಾನ್ಯತೆಯ ತೊಂದರೆ ಉದ್ಭವಿಸುವುದಿಲ್ಲ.

8.         ಕಾನೂನು ಪದವಿಯ ಕುರಿತು ಮಾಹಿತಿ ನೀಡಿ.

ಪ್ರಭಾವತಿ, ಊರು ತಿಳಿಸಿಲ್ಲ.

ಕಾನೂನು ವೃತ್ತಿಗಾಗಿ ಯಾವುದಾದರೂ ಪದವಿಯ ನಂತರ 3 ವರ್ಷದ ಎಲ್‍ಎಲ್‍ಬಿ ಕೋರ್ಸ್ ಅಥವಾ ಪಿಯುಸಿ ನಂತರ 5 ವರ್ಷದ ಇಂಟಗ್ರೇಡೆಡ್ ಕೋರ್ಸ್ ಮಾಡಬೇಕು.

ಸಾಮಾನ್ಯವಾಗಿ ಈ ಕೋರ್ಸ್‍ಗಳಿಗೆ ಸಿಎಲ್‍ಎಟಿ/ಎಲ್‍ಎಸ್‍ಎಟಿ ಪ್ರವೇಶ ಪರೀಕ್ಷೆ ಬರೆಯಬೇಕು. ಆದರೆ, ಕೆಲವು ಕಾಲೇಜುಗಳಲ್ಲಿ ನೇರವಾಗಿಯೂ ಪ್ರವೇಶಾತಿಯಾಗುತ್ತದೆ. ಪ್ರಮುಖವಾಗಿ, ನೀವು ಮಾಡುವ ಕೋರ್ಸಿಗೆ ಬಾರ್ ಕೌಂಸಿಲ್ ಅಫ್ ಇಂಡಿಯ ಮಾನ್ಯತೆಯಿರಬೇಕು.

9.         ನಾನು 2015ರಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಪದವಿಗೆ ಸೇರಿದೆ. ಪ್ರವೇಶ ಪಡೆದರೂ ಒಂದು ದಿನವೂ ತರಗತಿಗೆ ಹೋಗಲಿಲ್ಲ; ಕೋರ್ಸ್ ಮುಗಿಸಲೂ ಇಲ್ಲ. ನನ್ನ ಎಲ್ಲಾ ಮೂಲ ದಾಖಲೆಗಳೂ ಅಲ್ಲಿಯೇ ಇದ್ದು ವಾಪಸ್ ಪಡೆಯಲು ದಂಡ ಪಾವತಿಸಿ ಎನ್ನುತ್ತಿದ್ದಾರೆ. ಸಲಹೆ ನೀಡಿ.

ಸುರಿ ಗೋವಿಂದ್, ಊರು ತಿಳಿಸಿಲ್ಲ.

ಕೋರ್ಸ್ ಮುಂದುವರೆಸದ ನಿರ್ಧಾರ ಕುರಿತು ವಿಶ್ವವಿದ್ಯಾಲಯದ ನಿಯಮಗಳನ್ನು ನೀವು ಪಾಲಿಸಿದ್ದೀರಾ ಎಂದು ತಿಳಿಯದು. ಆದರೆ, ಯುಜಿಸಿಯ ನಿಯಮಾವಳಿಗಳಂತೆ ಮೂಲ ದಾಖಲೆಗಳನ್ನು ಮತ್ತು ಪ್ರವೇಶಾತಿ ಶುಲ್ಕಗಳನ್ನೂ ಸಹ ಕೆಲವು ನಿಭಂದನೆಗಳ ಅನ್ವಯ ವಿದ್ಯಾರ್ಥಿಗಳಿಗೆ ಹಿಂತಿರುಗಿಸಬೇಕು. ಹಾಗಾಗಿ, ಸಂಬಂಧಪಟ್ಟ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಸಂಪರ್ಕಿಸಿ. 

10.       ನಾನು ಸಿವಿಲ್ ಎಂಜಿನಿಯರಿಂಗ್ ಮಾಡಿ ಬ್ಯಾಂಕಿಂಗ್ ಕ್ಷೇತ್ರವನ್ನು ಸೇರಬೇಕೆಂದುಕೊಂಡಿದ್ದೇನೆ. ಅನೇಕ ಬ್ಯಾಂಕ್‍ಗಳು ವಿಲೀನವಾಗುತ್ತಿರುವುದರಿಂದ ಕ್ಷೇತ್ರದಲ್ಲಿ ಕೆಲಸಗಳು ಕಡಿಮೆಯಾಗಿ ಸ್ಪರ್ಧೆ ಹೆಚ್ಚಾಗಿ ಪರೀಕ್ಷೆ ಕಠಿಣವಾಗಬಹುದೇ?

ಹೆಸರು, ಊರು ತಿಳಿಸಿಲ್ಲ.

ಬ್ಯಾಂಕಿಂಗ್ ಕ್ಷೇತ್ರ ತ್ವರಿತವಾಗಿ ಅಭಿವೃದ್ಧಿಯಾಗುತ್ತಿದ್ದು, ಈ ಕ್ಷೇತ್ರದಲ್ಲಿ ನೂತನ ಬ್ಯಾಂಕ್‍ಗಳೂ ಬರಲಿದೆ. ಹಾಗಾಗಿ, ಒಟ್ಟಾರೆ ಕೆಲಸಗಳು ಕಡಿಮೆಯಾಗಲಿದೆ ಎಂದೆನಿಸುವುದಿಲ್ಲ. ಆದರೆ, ಗ್ರಾಹಕರ ಆದ್ಯತೆಗಳಂತೆ ಬ್ಯಾಂಕಿಂಗ್ ಕೆಲಸಗಳ ವೈಶಿಷ್ಟ್ಯಗಳು ಮತ್ತು ವಿವರಣೆಗಳಲ್ಲಿ ಸುಧಾರಣೆಯಾಗುತ್ತಿದೆ.

11.       ನಾನು 2011ರಲ್ಲಿ ಪಿಯುಸಿ ಮುಗಿಸಿದ್ದೇನೆ. ಈಗ ನಾನು ಪದವಿ ಶಿಕ್ಷಣ ಪಡೆಯಬಹುದೇ?

ಹೆಸರು, ಊರು ತಿಳಿಸಿಲ್ಲ.

ವಿಶ್ವವಿದ್ಯಾಲಯಗಳಲ್ಲಿ ಪದವಿ ಪ್ರವೇಶಾತಿಗೆ ನಿಯಮಗಳ ಪ್ರಕಾರ ಗರಿಷ್ಟ ವಯಸ್ಸಿನ ಒಳಗಿರಬೇಕು. ಅದು ಸಾಧ್ಯವಿಲ್ಲದಿದ್ದರೆ, ಸಂಜೆ ಕಾಲೇಜು ಅಥವಾ ದೂರ ಶಿಕ್ಷಣದ ಮುಖಾಂತರ ಮಾಡಬಹುದಾದ ಅನೇಕ ಡಿಪ್ಲೊಮಾ, ಸರ್ಟಿಫಿಕೆಟ್, ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‍ಗಳಿವೆ. ಜೊತೆಗೆ, ಜಗತ್ತಿನ ಹೆಸರಾಂತ ವಿಶ್ವವಿದ್ಯಾಲಯಗಳು (ಭಾರತದ ವಿಶ್ವವಿದ್ಯಾಲಯಗಳೂ ಸೇರಿದಂತೆ) ನಡೆಸುವ ಮ್ಯಾಸ್ಸೀವ್ ಓಪನ್ ಆನ್‍ಲೈನ್ ಕೋರ್ಸ್‍ಗಳಿವೆ (ಎಂಒಒಸಿ). ಆದ್ದರಿಂದ, ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಅಗತ್ಯಗಳಿಗೆ ತಕ್ಕಂತೆ ಕೋರ್ಸ್ ಮಾಡಿ ನಿಮ್ಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು.

12.       ನಾನು ಪಿಯುಸಿ ಮುಗಿಸಿ ಎಂಜಿನಿಯರಿಂಗ್ ಮಾಡಬೇಕೆಂಬ ಆಸೆ. ಆದರೆ, ಆರ್ಥಿಕ ಸಮಸ್ಯೆಯಿರುವುದರಿಂದ ಕಡಿಮೆ ವೆಚ್ಚದಲ್ಲಿ ಕೋರ್ಸ್ ಮುಗಿಸುವ ಬಗ್ಗೆ ತಿಳಿಸಿ.

ಅಕ್ಷತ, ಊರು ತಿಳಿಸಿಲ್ಲ. ಆರ್ಥಿಕ ಸಮಸ್ಯೆಯ ಕುರಿತ ಪ್ರಶ್ನೆಯನ್ನು ಇದೇ ತಿಂಗಳ 16ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ.