Q & A for Students – September 2021

Q&A for 6th September

Q1. ನಾನು ಪಿಯುಸಿ ಓದುತ್ತಿದ್ದೇನೆ. ಮುಂದೆ ಅಪರಾಧ ಶಾಸ್ತ್ರ ಮತ್ತು ಮನಶ್ಯಾಸ್ತ್ರ ವಿಷಯದಲ್ಲಿ ಆಸಕ್ತಿ ಇದೆ. ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿ.

ಅಪರಾಧ ಶಾಸ್ತ್ರದ ಅಧ್ಯಯನದಲ್ಲಿ ಅಪರಾಧ, ನಡವಳಿಕೆಯ ಕಾರಣಗಳು ಮತ್ತು ತಡೆಗಟ್ಟುವಿಕೆ, ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆ, ಕಾನೂನು, ಮನೋವಿಶ್ಲೇಷಣೆ ಇತ್ಯಾದಿ ವಿಷಯಗಳಿರುತ್ತದೆ. ಮನಶ್ಯಾಸ್ತ್ರ, ವಿಧಿ ವಿಜ್ಞಾನ, ಸಮಾಜ ಶಾಸ್ತ್ರ ಅಪರಾಧ ಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯಗಳು. ಅಪರಾಧ ಶಾಸ್ತ್ರದ ಪದವಿ ಕೋರ್ಸ್‍ಗಳನ್ನು ಸಾಮಾನ್ಯವಾಗಿ ವಿಜ್ಞಾನ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು ಪಿಯುಸಿ ನಂತರ ಮಾಡಬಹುದು. ಈಗ ಅನುಷ್ಟಾನಗೊಳ್ಳುತ್ತಿರುವ ನೂತನ ಶಿಕ್ಷಣ ನೀತಿಯ ಅನುಸಾರ ಐಚ್ಛಿಕ ವಿಷಯವಾಗಿಯೂ ಅಧ್ಯಯನ ಮಾಡುವ ಸಾಧ್ಯತೆ ಇದೆ.

ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸ್ವಾಭಾವಿಕವಾದ ಒಲವು ಮತ್ತು ಆಸಕ್ತಿಯಿದ್ದು ವಿವೇಚನೆ, ದತ್ತಾಂಶ ಸಂಗ್ರಹಣೆ ಮತ್ತು ನಿರ್ವಹಣೆ, ತಾರ್ಕಿಕ ಪ್ರತಿಪಾದನಾ ಕೌಶಲ, ವಿಶ್ಲೇಷಣಾ ಮತ್ತು ಸಂಶೋಧನಾ ಕೌಶಲ, ಸಮಯ ಪ್ರಜ್ಞೆ ಇತ್ಯಾದಿ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಬೇಡಿಕೆಯಿರುವ ಈ ಕ್ಷೇತ್ರದಲ್ಲಿ ಪರಿಣತಿ ಪಡೆಯಲು ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಲು ಸ್ನಾತಕೋತ್ತರ ಪದವಿಯನ್ನು ಮಾಡುವುದು ಒಳ್ಳೆಯದು. ವಿದ್ಯಾಭ್ಯಾಸದ ನಂತರ ಸಂಶೋಧನಾ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಪತ್ತೇದಾರಿ ಸಂಸ್ಥೆಗಳು,  ಪೋಲೀಸ್ ಇಲಾಖೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಕಾಲೇಜುಗಳಲ್ಲಿ ವೃತ್ತಿಯನ್ನು ಅರಸಬಹುದು.

Q2. ನಾನು ಬಿಎ ಅಂತಿಮ ವರ್ಷದ ವಿದ್ಯಾರ್ಥಿ. ಬಿಯೆಡ್, ಎಂಎಸ್‍ಡಬ್ಲ್ಯು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ  ಯಾವುದನ್ನು ಮಾಡಿದರೆ ಬೇಗನೆ ಜೀವನದಲ್ಲಿ ಉತ್ತಮವಾದ ಸ್ಥಾನ ಗಳಿಸಬಹುದು ಎಂಬುದನ್ನು ತಿಳಿಸಿ.

ಯಾವುದೇ ವೃತ್ತಿಯಲ್ಲಿ ಯಶಸ್ಸನ್ನು ಗಳಿಸಲು ವೃತ್ತಿ ಸಂಬಂಧಿತ ಜ್ಞಾನ ಮತ್ತು ಕೌಶಲಗಳ ಜೊತೆಗೆ ಸಕಾರಾತ್ಮಕ ಆಲೋಚನೆ, ನಿಷ್ಠೆ, ಪ್ರಾಮಾಣಿಕತೆ, ಸ್ವಯಂಪ್ರೇರಣೆ ಮತ್ತು ಆತ್ಮವಿಶ್ವಾಸವಿರಬೇಕು.  ಇವೆಲ್ಲವನ್ನೂ ನಿಮ್ಮಲ್ಲಿ ಬೆಳೆಸಿಕೊಂಡರೆ, ಸ್ವಾಭಾವಿಕವಾಗಿಯೇ ನಿಮ್ಮ ಕಾರ್ಯಾಚರಣೆ ನಿರೀಕ್ಷೆಯಂತಿರುತ್ತದೆ ಮತ್ತು ಕಾಲಕ್ರಮೇಣ ವೃತ್ತಿಯಲ್ಲಿ ಯಶಸ್ಸನ್ನು ಗಳಿಸಬಹುದು.

ಹಾಗಾಗಿ, ನಿಮ್ಮ ಸಾಮಥ್ರ್ಯ, ಪ್ರತಿಭೆ ಮತ್ತು ಆಸಕ್ತಿಯ ಆಧಾರದ ಮೇಲೆ ನಿಮಗೆ ಸರಿಹೊಂದುವ, ಇಷ್ಟಪಡುವ  ವೃತ್ತಿಯನ್ನು  ಗುರುತಿಸಿ, ಸಂಬಂಧಪಟ್ಟ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಿ. ಸಾಧ್ಯವಾದರೆ, ಯುಪಿಎಸ್‍ಸಿ  ಪರೀಕ್ಷೆಯ ಮುಖಾಂತರ ಐಎಎಸ್ ಅಧಿಕಾರಿಯಾಗಲು ಪ್ರಯತ್ನಿಸಿ.

Q3. ನಾನು ಪಿಎಸ್‍ಐ ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ಇದರ ಸಂಪೂರ್ಣ ವಿಷಯಸೂಚಿ ಬಗ್ಗೆ ತಿಳಿಸಿ.

ಕರ್ನಾಟಕ ಪಿಎಸ್‍ಐ ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳ ವಿವರ ಮತ್ತು ವಿಷಯಸೂಚಿಗೆ  ಗಮನಿಸಿ: https://prepp.in/karnataka-police-exam

Q4. ನಾನು 28 ವರ್ಷದ ಸಿಎಸ್ ಎಂಜಿನಿಯರಿಂಗ್ ಪದವೀಧರ. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಆಸಕ್ತಿಯಿದೆ. ಆದರೆ ಪ್ರಸ್ತುತ ಒಂದು ಪ್ರತಿಷ್ಠಿತ ಪತ್ರಿಕೆಯಲ್ಲಿ ವರದಿಗಾರನಾಗಿದ್ದೇನೆ. ಈ ಕೆಲಸದಲ್ಲಿ ಪೂರ್ಣ ವಿಶ್ವಾಸವಿಲ್ಲ. ನನ್ನ ಮುಂದಿನ ನಿರ್ಧಾರಗಳ ಬಗ್ಗೆ ಗೊಂದಲವಿದೆ, ನಾನು ಏನು ಮಾಡಿದರೆ ಒಳಿತು ಎಂಬುದರ ಬಗ್ಗೆ ದಯವಿಟ್ಟು ತಿಳಿಸಿ.

ಆಸಕ್ತಿ ಮತ್ತು ಆತ್ಮವಿಶ್ವಾಸವಿಲ್ಲದ ವೃತ್ತಿಯಿಂದ ಬದುಕು ನೀರಸವಾಗುತ್ತದೆ. ಆದ್ದರಿಂದಲೇ, ಸಾಮಥ್ರ್ಯ ಮತ್ತು ಆಸಕ್ತಿಯ ಆಧಾರದ ಮೇಲೆ ವೃತ್ತಿಯ ಆಯ್ಕೆಯಿರಬೇಕು. ಮುಖ್ಯವಾಗಿ, ನಿಮ್ಮ ಈಗಿನ ವೃತ್ತಿಯಲ್ಲಿ ವಿಶ್ವಾಸ ಕಳೆದುಕೊಳ್ಳಲು ಕಾರಣಗಳನ್ನು ಗುರುತಿಸಿ, ನಿಮ್ಮ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಂಡು ಈಗಿರುವ ವೃತ್ತಿಯನ್ನು ಮುಂದುವರಿಸಬಹುದೇ ಎಂದು ಪರಿಶೀಲಿಸಿ.

ಸಿಎಸ್ ಬೇಡಿಕೆಯಲ್ಲಿರುವ ಕ್ಷೇತ್ರ. ಹಾಗಾಗಿ, ಈ ಕ್ಷೇತ್ರದಲ್ಲಿನ ನಿಮ್ಮ ಜ್ಞಾನ ಮತ್ತು ವೃತ್ತಿ ಸಂಬಂಧಿತ ಕೌಶಲಗಳನ್ನು ಪರಿಷ್ಕರಿಸಿ ಖಾಸಗಿ ಕ್ಷೇತ್ರದಲ್ಲಿ ಅಥವಾ ಯುಪಿಎಸ್‍ಸಿ/ಕೆಪಿಎಸ್‍ಸಿ ಗಳಂತಹ ಪರೀಕ್ಷೆಗಳ ಮುಖಾಂತರ ಸರ್ಕಾರಿ  ವೃತ್ತಿಯನ್ನು ಅರಸಿ. ಇನ್ನೂ ಗೊಂದಲಗಳಿದ್ದರೆ, ವೃತ್ತಿ ಸಮಾಲೋಚಕರನ್ನು ಸಂಪರ್ಕಿಸಿ. 

Q5. ಸರ್, ನನಗೆ ಬಿಎಸ್‍ಸಿ (ಸಿಬಿಝೆಡ್)  ಪದವಿ ಮುಗಿಸಿದ ಮೇಲೆ ಎಂಎಸ್‍ಸಿ ಕುರಿತು ಆಸಕ್ತಿ ಇಲ್ಲ. ಬೇರೆ ಯಾವ ಕೋರ್ಸ್ ಮಾಡಬಹುದು ತಿಳಿಸಿ.

ಬಿಎಸ್‍ಸಿ ನಂತರ ನಿಮ್ಮ ಭವಿಷ್ಯದ ಯೋಜನೆಯ ಪ್ರಕಾರ ಮಾಡಬಹುದಾದ ಕೋರ್ಸ್/ವೃತ್ತಿಗಳೆಂದರೆ ಎಂಬಿಎ, ಬಿಎಡ್, ಎಂಎಸ್‍ಸಿ (ಅಸಂಪ್ರದಾಯಕ ವಿಷಯಗಳು- ಪರಿಸರ ವಿಜ್ಞಾನ, ಜೀವ ವಿಜ್ಞಾನ, ಆಹಾರ ವಿಜ್ಞಾನ, ಅರಣ್ಯ ಶಾಸ್ತ್ರ, ವಿಧಿ ವಿಜ್ಞಾನ, ತಳಿ ವಿಜ್ಞಾನ ಇತ್ಯಾದಿ), ಇಂಟಗ್ರೇಟೆಡ್ ಪಿಎಚ್‍ಡಿ, ಪ್ಯಾರಾ ಮೆಡಿಕಲ್ ಮತ್ತು ಕ್ಲಿನಿಕಲ್ ಕೋರ್ಸ್‍ಗಳು, ಕೃಷಿ ಸಂಶೋಧನೆ ಕೋರ್ಸ್‍ಗಳು ಮತ್ತು ಅನೇಕ ಅಲ್ಪಾವಧಿ ಕೋರ್ಸ್‍ಗಳೂ ಇವೆ. ಹಾಗೂ, ನೇರವಾಗಿ ಸ್ಪರ್ಧಾತ್ಮಕ ಕೋರ್ಸ್‍ಗಳ ಮುಖಾಂತರ ನಿಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.

Q&A for 13th September, 2021

Q1. ಕಳೆದ ಹತ್ತು ವರ್ಷಗಳಿಂದ ರಾಜ್ಯ ಸರಕಾರದಲ್ಲಿ ಶುಶ್ರೂಷಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ವೃತ್ತಿಯಲ್ಲಿ ಯಾವುದೇ ಬಡ್ತಿ ಇಲ್ಲ. ವೃತ್ತಿ ಸಮಾಧಾನಕರವಾಗಿಲ್ಲ; ಯಾವುದೇ ರಜೆ ಸಿಗುತ್ತಿಲ್ಲ. ತಂದೆ ತಾಯಿಯವರನ್ನು ನೋಡಿಕೊಳ್ಳುವುದಕ್ಕೆ ಆಗುತ್ತಿಲ್ಲ. ಈ ನಸಿರ್ಂಗ್ ಸೇವೆಯ ಬದಲು ನಾನು ಬೇರಾವ ವೃತ್ತಿಯನ್ನು ಮಾಡಬಹುದು.

ವೃತ್ತಿಯಲ್ಲಿ ಯಶಸ್ಸನ್ನು ಗಳಿಸಲು ವೃತ್ತಿ ಸಂಬಂಧಿತ ಜ್ಞಾನ ಮತ್ತು ಕೌಶಲಗಳ ಜೊತೆಗೆ ಸಕಾರಾತ್ಮಕ ಆಲೋಚನೆ, ನಿಷ್ಠೆ, ಪ್ರಾಮಾಣಿಕತೆ, ಸ್ವಯಂಪ್ರೇರಣೆ ಮತ್ತು ಆತ್ಮವಿಶ್ವಾಸವಿರಬೇಕು. ಹಾಗಿದ್ದರೆ ಮಾತ್ರ, ನಿಮ್ಮ ಕಾರ್ಯಾಚರಣೆ ನಿರೀಕ್ಷೆಯಂತಿರುತ್ತದೆ. ಆದರೆ, ವೃತ್ತಿಯಲ್ಲಿ ಕುಂದುಕೊರತೆಗಳಿದ್ದರೆ, ಅತೃಪ್ತಿಯಿದ್ದರೆ ಮೇಲಧಿಕಾರಿಗಳೊಡನೆ ಮುಕ್ತವಾಗಿ ಚರ್ಚಿಸಬೇಕು ಅಥವಾ ಸ್ವಯಂ-ಮೌಲ್ಯಮಾಪನ ಮಾಡಿಕೊಂಡು ಕಾರಣಗಳನ್ನೂ ಪರಿಹಾರಗಳನ್ನೂ ಕಂಡುಕೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ವೃತ್ತಿಯಲ್ಲೂ ಯಶಸ್ಸನ್ನು ಗಳಿಸಲು ಕಷ್ಟವಾಗಬಹುದು.

ನೀವು ಈಗಿರುವ ವೃತ್ತಿ ಸಂಬಂಧಿತ ಅನೇಕ ಪ್ಯಾರಾ ಮೆಡಿಕಲ್ ವೃತ್ತಿಗಳಿವೆ. ನಿಮ್ಮ ಸ್ವಾಭಾವಿಕ ಆಸಕ್ತಿಯ ಅನುಸಾರ ಡಿಪ್ಲೊಮಾ/ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಮಾಡಿ ವೃತ್ತಿಯನ್ನು ಬದಲಾಯಿಸಬಹುದು. ಇನ್ನೂ ಗೊಂದಲವಿದ್ದರೆ, ವೃತ್ತಿ ಸಮಾಲೋಚಕರನ್ನು ಸಂಪರ್ಕಿಸಿ.

Q2. ನಾನು ಎಂಎ (ಅರ್ಥ ಶಾಸ್ತ್ರ) ಮುಗಿಸಿ ಪೊಲೀಸ್ ಹೋಮ್ ಗಾಡ್ರ್ಸ್ ಕೆಲಸ ಮಾಡಿದ್ದೇನೆ. ನನಗೆ ಅಪರಾಧ ಶಾಸ್ತ್ರದಲ್ಲಿ ಆಸಕ್ತಿ ಇದೆ. ಈ ಕೋರ್ಸ್ ಬಗ್ಗೆ ಮತ್ತು ಈ ಕುರಿತ ಪುಸ್ತಕಗಳ ಬಗ್ಗೆ ತಿಳಿಸಿ.

ಅಪರಾಧ ಶಾಸ್ತ್ರದ ಕೋರ್ಸ್ ಕುರಿತು ಇದೇ ತಿಂಗಳ 6ನೇ ತಾರೀಖಿನ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ. ಅಪರಾಧ ಶಾಸ್ತ್ರ ಸಂಬಂಧಿತ ಅನೇಕ ವಿಷಯಗಳಿವೆ ಹಾಗಾಗಿ, ನಿಮಗೆ ಆಸಕ್ತಿಯಿರುವ ವಿಷಯದ ಅನುಸಾರ ಪುಸ್ತಕಗಳನ್ನು ಆರಿಸಿಕೊಳ್ಳಬೇಕು.

Q3. ನಾನು ಪಿಯುಸಿ ಓದಿದ್ದೇನೆ ಹಾಗೂ 2018 ರಿಂದ ಕರ್ನಾಟಕ ರಾಜ್ಯ ಪೆÇಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನನಗೆ ಪಿಎಸ್‍ಐ ಆಗಬೇಕೆಂಬ ಆಸೆ ಇದೆ. ಪದವಿ ಮಾಡುತ್ತಿದ್ದೇನೆ. ಮುಂದೇನು ಮಾಡಬೇಕೆಂದು ತಿಳಿಸಿ.

Q4. ನಾನು ಬಿಎಸ್‍ಸಿ ಅಂತಿಮ ವರ್ಷದ ವಿದ್ಯಾರ್ಥಿ. ಪಿಎಸ್‍ಐ ಪರೀಕ್ಷೆಯ ದೈಹಿಕ ಮಾನದಂಡಗಳೇನು?

ಪೊಲೀಸ್ ಇಲಾಖೆಯಲ್ಲಿ ಕನಿಷ್ಠ 5 ವರ್ಷಗಳ  ಸೇವೆಯ ನಂತರ, ಪಿಎಸ್‍ಐ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಪಿಎಸ್‍ಐ ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳ ವಿವರ, ದೈಹಿಕ ಮಾನದಂಡಗಳು ಮತ್ತು ವಿಷಯಸೂಚಿಗೆ  ಗಮನಿಸಿ: https://prepp.in/karnataka-police-exam

Q5. ನಾನು ದ್ವೀತಿಯ ಪಿಯುಸಿ (ವಿಜ್ಞಾನ) ದಲ್ಲಿ ಎರಡು ಬಾರಿ ಅನುತ್ತೀರ್ಣನಾಗಿ ಈಗಷ್ಟೇ ಉತ್ತೀರ್ಣನಾಗಿದ್ದೇನೆ. ನನಗೆ ಮುಂದಿನ ನಿರ್ಧಾರಗಳ ಬಗ್ಗೆ ಗೊಂದಲವಿದೆ. ಏನು ಮಾಡಿದರೆ ಒಳಿತು?

ನೀವು ಇಷ್ಟ ಪಡುವ ವೃತ್ತಿಗೂ, ನಿಮ್ಮಲ್ಲಿರುವ ಪ್ರತಿಭೆಗೂ ಸಾಮ್ಯತೆ ಇರಬೇಕು. ನಿಮ್ಮ ಸಾಮರ್ಥ್ಯ ಮತ್ತು ಆಸಕ್ತಿಯ ಆಧಾರದ ಮೇಲೆ ಮೊದಲು ಸೂಕ್ತವಾದ ವೃತ್ತಿ ಮತ್ತು ಅದರಂತೆ ಕೋರ್ಸ್ ಆಯ್ಕೆಯಿರಲಿ.

ಪಿಯುಸಿ (ವಿಜ್ಞಾನ) ನಂತರ ವೃತ್ತಿಯ ಆಯ್ಕೆಯಂತೆ ಮಾಡಬಹುದಾದ ಕೋರ್ಸ್‍ಗಳೆಂದರೆ ಎಂಬಿಬಿಎಸ್, ಬಿಇ/ಬಿಟೆಕ್/ಬಿಆರ್ಕ್, ಬಿಎಸ್‍ಸಿ (50ಕ್ಕೂ ಹೆಚ್ಚು ವಿಷಯಗಳು), ಬಿಎಸ್‍ಸಿ-ಕೃಷಿ/ಫಾರ್ಮ್ ಸಂಬಂಧಿತ, ಬಿಎಸ್‍ಸಿ-ಪ್ಯಾರಾ ಮೆಡಿಕಲ್, ಬಿಫಾರ್ಮ, ಬಿಸಿಎ, ಬಿಬಿಎ, ಎಂಬಿಎ (ಇಂಟಗ್ರೇಡೆಡ್), ಬಿಕಾಂ, ಸಿಎ, ಎಸಿಎಸ್ ಇತ್ಯಾದಿ.

Q6. ನಾನು ಬಿಎಸ್‍ಸಿ (ಪಿಸಿಎಂ) ದ್ವಿತೀಯ ವರ್ಷ ಓದುತ್ತಿದ್ದೇನೆ. ಪ್ರೌಢಶಾಲೆಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ್ದೇನೆ. ಮುಂದೆ ಯುಪಿಎಸ್‍ಸಿ ಪರೀಕ್ಷೆ ಬರಿಯಬೇಕೆಂದಿದ್ದೇನೆ. ಯಾವ ವಿಷಯಗಳನ್ನು ಓದಬೇಕು ಮತ್ತು ಹೇಗೆ ತಯಾರಿ ನಡೆಸಬೇಕು ತಿಳಿಸಿ.

ಯುಪಿಎಸ್‍ಸಿ ಕುರಿತ ಪ್ರಶ್ನೆಗಳನ್ನು ಇದೇ ವರ್ಷದ ಜೂನ್ 21 ಮತ್ತು ಜೂನ್ 28ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ.

Q&A for 20th September, 2021

Q1. ಸರ್, ನಾನು ಬಿಕಾಂ ಪದವಿಯನ್ನು ಮುಗಿಸಿ ಬಿಪಿಇಡಿ ಮಾಡಲು ಬಯಸುತ್ತಿದ್ದೇನೆ. ಇದನ್ನು ಯಾವ ವಿಶ್ವವಿದ್ಯಾಲಯದಲ್ಲ್ಲಿ ಮಾಡಿದರೆ ಒಳ್ಳೆಯದು; ಇದರ ಅವಕಾಶಗಳೇನು?

ಬಿಪಿಇಡಿ ಕೋರ್ಸ್ ದೈಹಿಕ ಮತ್ತು ಮಾನಸಿಕ ಆರೋಗ್ಯ,  ಮತ್ತು ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಸವಿಸ್ತಾರವಾದ ಶಿಕ್ಷಣವನ್ನು ನೀಡಿ, ಈ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುವು ಮಾಡುತ್ತದೆ. ಈ ಪದವಿಯ ನಂತರ ಶಾಲಾ ಕಾಲೇಜುಗಳು, ಜಿಮ್ ಮತ್ತು ಫಿಟ್‍ನೆಸ್ ಸಂಸ್ಥೆಗಳು, ಕ್ರೀಡೆ ಮತ್ತು ಸಂಬಂಧಿತ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಎನ್‍ಜಿಒ ಸಂಸ್ಥೆಗಳು, ಇತ್ಯಾದಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದೈಹಿಕ ಶಿಕ್ಷಣ ಅತ್ಯಗತ್ಯ.

ಪದವಿಯ ನಂತರ ಬಿಪಿಇಡಿ  ಸಾಮಾನ್ಯವಾಗಿ ಎರಡು ವರ್ಷದ ಕೋರ್ಸ್ ಆಗಿದ್ದರೂ ಕೆಲವೆಡೆ ಒಂದು ವರ್ಷದ ಕೋರ್ಸ್ ಸಹಾ ಲಭ್ಯ. ಕೆಲವು ವಿಶ್ವವಿದ್ಯಾಲಯಗಳಲ್ಲಿ ದೈಹಿಕ ಶಿಕ್ಷಣದ ಜೊತೆಗೆ ಕ್ರೀಡಾ ವಿಜ್ಞಾನವನ್ನೂ ಸೇರಿಸಿ ಕೋರ್ಸಿನ ಮೌಲ್ಯವನ್ನು ವೃದ್ಧಿಸಲಾಗಿದೆ. ಸಾಮಾನ್ಯವಾಗಿ, ಕೋರ್ಸ್ ಪ್ರವೇಶಕ್ಕೆ ಮುನ್ನ ಅಭ್ಯರ್ಥಿಗಳ ದೈಹಿಕ ಸಾಮಥ್ರ್ಯ, ದಾಢ್ರ್ಯತೆ ಮತ್ತು ಸದೃಢತೆಯನ್ನು ಪರೀಕ್ಷಿಸಲಾಗುತ್ತದೆ. ಹಾಗಾಗಿ, ನಿಮ್ಮ ಆಸಕ್ತಿ ಮತ್ತು ವೃತ್ತಿ ಜೀವನದ ಯೋಜನೆಯ ಅನುಸಾರ ವಿಶ್ವವಿದ್ಯಾಲಯದ ಆಯ್ಕೆ ಮಾಡಬಹುದು.

Q2. ನಾನು ಕರ್ನಾಟಕ ಚಿತ್ರ ಕಲಾ ಪರಿಷತ್ ಕಾಲೇಜಿನಲ್ಲಿ ಆರ್ಟ್ ಹಿಸ್ಟರಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದೇನೆ. ಪಿಎಚ್‍ಡಿ ಯಾವ ವಿಷಯದಲ್ಲಿ ಮಾಡಬಹುದು ಎಂದು ತಿಳಿಸಿ. ಆರ್ಟ್ ಹಿಸ್ಟರಿ ವಿಭಾಗದ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿ.

ಪಿಎಚ್‍ಡಿ ಸಂಶೋಧನೆ ಕುರಿತು ಸಾಕಷ್ಟು ಸಂಪಲ್ಮೂಲನಗಳು ಇದ್ದರೂ ಸಹ ವಿಷಯವನ್ನು  ನಿರ್ಧರಿಸುವುದು ಸುಲಭವಲ್ಲ.  ವಿಷಯದ ಪ್ರಸ್ತುತತೆ, ವಿಷಯದ ಕುರಿತು ಸ್ವಾಭಾವಿಕವಾದ ಒಲವು ಮತ್ತು ಪ್ರೇರಣೆಯ ಜೊತೆಗೆ ಮಾರ್ಗದರ್ಶಕರ ಸಕಾರಾತ್ಮಕ ಅಭಿಪ್ರಾಯ ಮತ್ತು ಬೆಂಬಲವಿರಬೇಕು. ಹಾಗಾಗಿ, ವಿಷಯದ ಕುರಿತು ಪ್ರಾಥಮಿಕ ಸಂಶೋಧನೆ ಅಗತ್ಯ.

ಪಿಎಚ್‍ಡಿ ನಂತರ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕ ವೃತ್ತಿ, ಸಂಶೋಧನೆ,  ಆರ್ಟ್ ಡಿಸೈನರ್, ಇಂಟೀರಿಯರ್ ಡಿಸೈನರ್, ಚಿತ್ರೋದ್ಯಮ ಮತ್ತು ಮನರಂಜನಾ ಕ್ಷೇತ್ರ, ಮ್ಯೂಸಿಯಮ್ಸ್,  ಸ್ವಯಂ ಉದ್ಯೋಗ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು.

Q3. ಪದವಿಯ ನಂತರ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಸ್ಪರ್ದಾತ್ಮಕ ಪರೀಕ್ಷೆ ಒಳ್ಳೆಯದೇ ಅಥವಾ ಕೋರ್ಸ್ ಒಳ್ಳೆಯದೇ?

Q4. ನಾನು ಬಿಎಸ್‍ಸಿ ಮೊದಲ ವರ್ಷ ಓದುತ್ತಿದ್ದೇನೆ. ಪದವಿ ನಂತರ ಮುಂದೆ ಯಾವ ಪರೀಕ್ಷೆಗಳನ್ನು ಬರೆಯಬೇಕು. ಅದಕ್ಕಾಗಿ ಯಾವ ಪುಸ್ತಕಗಳನ್ನು ಓದಬೇಕು ತಿಳಿಸಿ.

ನೀವು ನೀಡಿರುವ ಮಾಹಿತಿಯ ಪ್ರಕಾರ ವೃತ್ತಿಯ ಯೋಜನೆಯನ್ನು ಮಾಡಿದ್ದೀರಾ ತಿಳಿಯದು. ವೃತ್ತಿಯ ಯೋಜನೆಯಿಲ್ಲದೆ ಕೋರ್ಸ್ ಆಯ್ಕೆ ಮಾಡಿದರೆ ಇಂತಹ ಗೊಂದಲಗಳು ಸ್ವಾಭಾವಿಕ. ಈಗಲೂ, ನಿಮ್ಮ ಸಾವi.ಥ್ರ್ಯ ಮತ್ತು ಆಸಕ್ತಿಯ ಆಧಾರದ ಮೇಲೆ ಸೂಕ್ತವಾದ ವೃತ್ತಿಯ ಯೋಜನೆಯನ್ನು ಮಾಡಿದರೆ, ವಿದ್ಯಾಭ್ಯಾಸವನ್ನು ಮುಂದುವರಿಸಬೇಕಾ ಅಥವಾ ಸ್ಪರ್ದಾತ್ಮಕ ಪರೀಕ್ಷೆಗಳ ಮೂಲಕ ವೃತ್ತ್ತಿಯನ್ನು ಅರಸಬೇಕಾ ಎನ್ನುವುದು ಅರಿವಾಗುತ್ತದೆ ಮತ್ತು ಮುಂದಿನ ಹಾದಿ ಸ್ಪಷ್ಟವಾಗುತ್ತದೆ.

Q5. ಈಗ ಅಂತಿಮ ವರ್ಷದ ಪದವಿ (ಬಿಎಸ್‍ಸಿ) ಓದುತ್ತಿದ್ದೇನೆ. ನನಗೆ ಯುಪಿಎಸ್‍ಸಿ ಪರೀಕ್ಷೆ ಬರೆದು ಒಳ್ಳೆಯ ಕೆಲಸಕ್ಕೆ ಹೋಗುವ ಆಸೆ. ಆದರೆ ನಾನು ಓದುತ್ತಿರುವ ಪದವಿಗೂ ಹಾಗೂ ಆಯ್ಕೆ ಮಾಡಿಕೊಂಡಿರುವ ಪರೀಕ್ಷೆಗೂ ಸಂಬಂಧವಿಲ್ಲ. ನಾನು ಏನು ಮಾಡಬೇಕು?

ಮೊದಲು ವೃತ್ತಿ ಜೀವನದ ಯೋಜನೆಯನ್ನು ಮಾಡಿ ಅದರಂತೆ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದರೆ ಇಂತಹ ಸಮಸ್ಯೆಗಳು ಉದ್ಭವವಾಗುತ್ತಿರಲಿಲ್ಲ.  ಯುಪಿಎಸ್‍ಸಿ ಪರೀಕ್ಷೆಯನ್ನು ಯಾವುದೇ ಪದವಿಯ ನಂತರ ಮಾಡಬಹುದು. ಹಾಗಾಗಿ, ನಿಮ್ಮೆಲ್ಲಾ ಚೈತನ್ಯ ಮತ್ತು ಪರಿಶ್ರಮವನ್ನು ಯುಪಿಎಸ್‍ಸಿ ಪರೀಕ್ಷೆಯ ತಯಾರಿಯತ್ತ ಕೇಂದ್ರೀಕರಿಸಿ, ಅದರಲ್ಲಿ ಯಶಸ್ಸನ್ನು ಗಳಿಸಿ. ಅಗತ್ಯವಿದ್ದರೆ, ಯುಪಿಎಸ್‍ಸಿ ಪರೀಕ್ಷೆಯ ತರಬೇತಿ ಪಡೆಯಿರಿ. ಶುಭಹಾರೈಕೆಗಳು.

Q6. ನಾನು ಪಿಯುಸಿಯಲ್ಲಿ ಒಂದು ಬಾರಿ ಅನುತ್ತೀರ್ಣಳಾಗಿ ಅನಂತರ ಉತ್ತೀರ್ಣಳಾದೆ. ಆದರೆ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇರುವ ಕಾರಣ ದುಡಿಯಬೇಕಾದ ಪರಿಸ್ಥಿತಿಯಲ್ಲಿದ್ದೇನೆ. ಹಾಗಾಗಿ ನನಗೆ ಎಸ್‍ಡಿಎ ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿ ಅಥವಾ ಬೇರೆ ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿ ನೀಡಿ.

ಕರ್ನಾಟಕ ಸರ್ಕಾರದ ಎಸ್‍ಡಿಎ ಮತ್ತು ಇನ್ನಿತರ ಹುದ್ದೆಗಳ ಸ್ಪರ್ದಾತ್ಮಕ ಪರೀಕ್ಷೆಗಳ ವಿವರಗಳಿಗಾಗಿ ಗಮನಿಸಿ: https://prepp.in/kpsc-exam

Q7. ಸರ್, ನನಗೆ ಅಪ್ಪ ಅಮ್ಮ ಇಲ್ಲ. ನಾನೇ ಕೆಲಸ ಮಾಡಿ ಓದುತ್ತಿದ್ದೇನೆ. ಈಗ ನಾನು ಬಿಕಾಂ ಮೊದಲನೇ ವರ್ಷ. ನನಗೆ ಅಕೌಂಟ್ಸ್‍ನಲ್ಲಿ ಪ್ರಾಕ್ಟೀಸ್‍ಗೆ ಹೋಗಬೇಕೋ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಬೇಕೋ ಗೊಂದಲವಿದೆ? ನಾನು ಏನು ಮಾಡಬೇಕು ತಿಳಿಸಿ.

ಅಕೌಂಟೆನ್ಸಿ ಕ್ಷೇತ್ರದಲ್ಲಿ ನಿಮಗೆ ಒಲವು ಮತ್ತು ಸ್ವಾಭಾವಿಕವಾದ ಪ್ರತಿಭೆಯಿದ್ದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಕೋರ್ಸ್ ಅತ್ಯುತ್ತಮ ಆಯ್ಕೆ. ಇದು ಸರಿಹೊಂದುವುದಿಲ್ಲವೆಂದರೆ ಎಸಿಎಸ್, ಐಸಿಡಬ್ಲ್ಯು, ಎಂಕಾಂ, ಎಂಬಿಎ ಕೋರ್ಸ್‍ಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಸ್ಪರ್ದಾತ್ಮಕ ಪರೀಕ್ಷೆಗಳ ಮೂಲಕ ವೃತ್ತಿಯನ್ನು ಅರಸಬಹುದು.

Q&A for 27th September, 2021

Q1. ನಾನು ಬಿಕಾಂ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು ಕೆಎಎಸ್ ಮಾಡಬೇಕು ಎಂದುಕೊಂಡಿದ್ದೇನೆ. ತಯಾರಿ ಹೇಗೆ ಮತ್ತು ಯಾವ ಪುಸ್ತಕಗಳನ್ನು ಓದಬೇಕು ಎಂಬ ಮಾಹಿತಿ ನೀಡಬಹುದೇ? – ಪ್ರಕಾಶ್, ಬಳ್ಳಾರಿ

ಸರ್ಕಾರಿ ವಲಯದ ಅನೇಕ ಉನ್ನತ ಹುದ್ದೆಗಳಿಗೆ ಕೆಎಎಸ್ ಏಕರೂಪದ ಪರೀಕ್ಷೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ ಸೇರಿದಂತೆ ಮೂರು ಹಂತದ ಪರೀಕ್ಷೆಯಿರುತ್ತದೆ. ಒಬ್ಬ ದಕ್ಷ ಆಡಳಿತಾಧಿಕಾರಿಗೆ ಇರಬೇಕಾದ ಪರಿಪೂರ್ಣ ಜ್ಞಾನ, ನಾಯಕತ್ವದ ಸಾಮಥ್ರ್ಯ, ಮನೋಧೋರಣೆ, ನೈತಿಕತೆ, ಪಾರದರ್ಶಕತೆ, ಸಮಯದ ನಿರ್ವಹಣೆ, ಶಿಸ್ತು, ಬದ್ಧತೆ, ಸಂವಹನಾ ಸಾಮಥ್ರ್ಯ, ತಾರ್ಕಿಕ ಯೋಚನಾ ಸಾಮಥ್ರ್ಯ, ಪ್ರೇರಣಾ ಕೌಶಲ  ಇತ್ಯಾದಿಗಳನ್ನು ಕೂಲಂಕಶವಾಗಿ ಪರೀಕ್ಷಿಸಲಾಗುತ್ತದೆ.

ಮುಖ್ಯ ಪರೀಕ್ಷೆಯಲ್ಲಿ ಕಡ್ಡಾಯವಾದ ಮತ್ತು ಐಚ್ಛಿಕ ವಿಷಯಗಳಿರುತ್ತದೆ. ಪ್ರಶ್ನೆಗಳು ಪದವಿಯ ಮಟ್ಟದ್ದಾಗಿರುತ್ತದೆ ಮತ್ತು ವಿವರಣಾತ್ಮಕ ಮಾದರಿಯಲ್ಲಿರುವುದರಿಂದ ಬರವಣಿಗೆ ಉತ್ಕೃಷ್ಟವಾದ ಗುಣಮಟ್ಟದ್ದಾಗಿರಬೇಕು.   ಈ ಎಲ್ಲಾ ಪರೀಕ್ಷೆಗಳ ಮಾದರಿ, ಪಠ್ಯಕ್ರಮ, ವಿಷಯದ ಅನುಸಾರ ಶಿಫಾರಸು ಮಾಡಿರುವ ಪುಸ್ತಕಗಳನ್ನು ತಿಳಿದುಕೊಂಡು ನಿಮ್ಮ ವೃತ್ತಿ ಯೋಜನೆಯ ಅನುಗುಣವಾಗಿ ಕಾರ್ಯತಂತ್ರವನ್ನು ರೂಪಿಸಬೇಕು. ಈ ಸಲಹೆಗಳ ಅನುಸಾರ ಸಿದ್ಧತೆಯಿರಲಿ:

  • ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು.
  • ಪರಿಶ್ರಮ, ಬದ್ಧತೆ, ಆತ್ಮ ವಿಶ್ವಾಸ ಮತ್ತು ಸಮಯದ ನಿರ್ವಹಣೆ ಅತ್ಯಗತ್ಯ
  • ಗೂಗಲ್ ಮತ್ತು ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿ ಮತ್ತು ಉಪಯುಕ್ತ ವಿಡಿಯೋಗಳನ್ನು ವೀಕ್ಷಿಸಿ.
  • ಕೆಎಎಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಪುನರಾವರ್ತನೆ ಮತ್ತು ಬರವಣಿಗೆ ಇರಬೇಕು.
  • ಸಾಮಾಜಿಕ ತಾಲತಾಣದಿಂದ ದೂರವಿದ್ದರೆ ಏಕಾಗ್ರತೆ ಸುಲಭ.
  • ಹೆಚ್ಚಿನ ವಿವರಗಳಿಗಾಗಿ ಗಮನಿಸಿ: https://testbook.com/kpsc-kas/syllabus

Q2. ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ ಶಾಸ್ತ್ರದಲ್ಲಿ ಪದವಿ ಮುಗಿಸಿದ್ದೇನೆ. ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವ ಇಲಾಖೆಗಳಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ದಯವಿಟ್ಟು ಮಾಹಿತಿ ನೀಡಿ. – ರಮೇಶ್ ಆರ್.ಕೆ., ಹಾವೇರಿ.

ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ ಶಾಸ್ತ್ರದ ಪದವಿಯ ನಂತರ ನೀವು ವೃತ್ತಿಯನ್ನು ಅರಸಬಹುದಾದ ಸರ್ಕಾರಿ ಕ್ಷೇತ್ರಗಳೆಂದರೆ ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು, ವಿಧಿ ವಿಜ್ಞಾನ  ಲ್ಯಾಬೋರೇಟರಿಗಳು, ಸಿಐಡಿ, ಸಿಬಿಐ, ಐಬಿ, ಪೋಲೀಸ್ ಇಲಾಖೆ, ನರ್ಕೋಟಿಕ್ಸ್ ಇಲಾಖೆ ಇತ್ಯಾದಿ.

Q3. ನಾನು ಪಿಯುಸಿ ಮಾಡಿಲ್ಲ. ಐಟಿಐ ಮಾಡಿ ಪದವಿ ಮುಗಿಸಿದ್ದೇನೆ. ಈ ಪದವಿಯ ಆಧಾರದ ಮೇಲೆ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದೇ? – ಲಕ್ಷ್ಮಣ್

Q4. ವರ್ಷದ ಡಿಪ್ಲೊಮಾ ನಂತರ ಮಾಡಿರುವ ಪದವಿ ಕೋರ್ಸ್‍ಗಳಿಗೆ ಮಾನ್ಯತೆ ಇರುತ್ತದೆ. ಹಾಗಾಗಿ, ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸಬಹುದು.

Q5. ನಾನು ಅಂತಿಮ ವರ್ಷದ ಬಿಎಸ್‍ಸಿ ಓದುತ್ತಿದ್ದೇನೆ. ನನ್ನ ಮುಂದಿನ ವ್ಯಾಸಂಗವನ್ನು ಎಂಎ (ಅಪರಾಧ ಶಾಸ್ತ್ರ) ಮಾಡಬಹುದೇ? ಎಲ್ಲಿ ಮಾಡಬಹುದೆಂದು ತಿಳಿಸಿ. – ಸುಷ್ಮಿತಾ ಕೆ.

ಸಾಮಾನ್ಯವಾಗಿ ಪದವಿಯಲ್ಲಿ ಓದಿರುವ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‍ಗಳನ್ನು ಮಾಡಬಹುದು. ಹಾಗಾಗಿ ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ನಿಯಮಾವಳಿಗಳಿವೆ.  ಆದರೂ, ಬಿಎಸ್‍ಸಿ ಆದ ಮೇಲೆ ಕೆಲವು ನಿಯಮಿತ ವಿಷಯಗಳಲ್ಲಿ ಮಾತ್ರ ಎಂಎ ಮಾಡುವ ಅವಕಾಶಗಳಿವೆ.

ಈಗ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ [2020] ಯಂತೆ ಸ್ನಾತಕೋತ್ತರ ಪದವಿ ಕೋರ್ಸ್‍ಗಳ ಉದ್ದೇಶ, ನಿಯಮ ಮತ್ತು ಪ್ರವೇಶ ಪ್ರಕ್ರಿಯೆಯಲ್ಲ್ಲಿ ತೀವ್ರವಾದ ಬದಲಾವಣೆಗಳಿವೆ ಮತ್ತು ಅನುಷ್ಠಾನದ ಪ್ರಕ್ರಿಯೆ ಈಗಷ್ಟೇ ಶುರುವಾಗುತ್ತಿದೆ. ಅಪರಾಧ ಶಾಸ್ತ್ರದಲ್ಲಿ ಎಂಎ ಅಥವಾ ಎಂಎಸ್‍ಸಿ ಕೋರ್ಸ್ ಕುರಿತು ನಿಖರವಾದ ಮಾಹಿತಿಗಾಗಿ ನೀವು ಇಚ್ಛಿಸುವ ವಿಶ್ವವಿದ್ಯಾಲಯದಲ್ಲಿ ವಿಚಾರಿಸಿ.

Q6. ನಾನು ಮೂರು ವರ್ಷಗಳ ಡಿಪ್ಲೊಮಾ ನಂತರ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಮುಗಿಸಿರುತ್ತೇನೆ. ನಾನು ಪಿಎಸ್‍ಐ ಹುದ್ದೆಗೆ ಅರ್ಜಿ ಸಲ್ಲಿಸಬಹುದು; ಆದರೆ, ಪಿಎಸ್ ಹುದ್ದೆಗೆ ಆಗುವುದಿಲ್ಲ. ಪಿಯುಸಿ ತತ್ಸಮಾನ ಕೋರ್ಸ್ ಯಾವುದೆಂದು ತಿಳಿಸಿ? – ಮಹಾಲಿಂಗಪ್ಪ, ಬಾಗಲಕೋಟೆ

ಮೂರು ವರ್ಷದ ಡಿಪ್ಲೊಮಾ ಕೋರ್ಸ್‍ನ್ನು ಪಿಯುಸಿಗೆ ತತ್ಸಮಾನವೆಂದು ಪರಿಗಣಿಸಲಾಗುತ್ತದೆ. ಕರ್ನಾಟಕ ಪೋಲಿಸ್ ಹುದ್ದೆಗಳಿಗೆ ಅರ್ಹತೆ, ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳ ವಿವರಗಳಿಗೆ  ಗಮನಿಸಿ: https://prepp.in/karnataka-police-exam