ಸಂದರ್ಶನ: ಆತ್ಮವಿಶ್ವಾಸವೇ ಸರ್ವಸ್ವ

ಅಚ್ಚುಕಟ್ಟಾದ ಬಯೋಡೇಟ ತಯಾರಿಸಿ ಉದ್ಯೋಗಕ್ಕೆ ಸೂಚಿಸಿರುವ ಅರ್ಹತೆ ನಿಮ್ಮಲ್ಲಿ ತಕ್ಕ ಮಟ್ಟಿಗಾದರೂ ಇದ್ದಲ್ಲಿ, ಸಂದರ್ಶನದ ಕರೆ ಖಚಿತ. ಈಗ ಉದ್ಯೋಗಾವಕಾಶಗಳು ಅಧಿಕವಾಗಿದ್ದರೂ, ಸೆಲೆಕ್ಷನ್ ಸ್ಪರ್ದಾತ್ಮಕವಾಗಿರುತ್ತದೆ. ಹಾಗಾಗಿ, ಸಂದರ್ಶನದ ಆತಂಕ, ಭೀತಿ ಕಾಲೇಜಿನ ಮೋಜಿನ ದಿನಗಳನ್ನು ಮುಗಿಸಿ ವೃತ್ತಿಜೀವನಕ್ಕೆ ಕಾಲಿಡುತ್ತಿರುವ ವಿದ್ಯಾರ್ಥಿಗಳಿಗಷ್ಟೇ ಅಲ್ಲ; ಅನುಭವಿ ಅಭ್ಯರ್ಥಿಗಳದ್ದೂ ಇದೇ ಪಾಡು.

ಸಂದರ್ಶನದ ಮೊದಲ ಮೂವತ್ತು ಸೆಕೆಂಡುಗಳಲ್ಲಿ ನುರಿತ ಸಂದರ್ಶಕರು ನಿಮ್ಮ ವ್ಯಕ್ತಿತ್ವದ ಅಂದಾಜು ಮಾಡುವ ಪರಿಣತಿ ಹೊಂದಿರುತ್ತಾರೆ. ಅನುಚಿತವಾದ ವೇಶಭೂಷಣ ಅಥವಾ ಕಂಪನಿ, ಉದ್ಯೋಗದ ಬಗ್ಗೆ ಮಾಹಿತಿಯೇ ಇಲ್ಲದಿರುವ ಅಭ್ಯರ್ಥಿಗಳು ತಕ್ಷಣವೇ ತಿರಸ್ಕೃತರಾಗುವುದಲ್ಲಿ ಆಶ್ಚರ್ಯವೇನಿಲ್ಲ.

ಪರಿಶ್ರಮದಿಂದ ಸಫಲತೆ

  • ಪರಿಪೂರ್ಣ ತಯಾರಿ: ನಿಮಗೆ ಉದ್ಯೋಗದ ಉತ್ಸುಕತೆಯಿರುವಂತೆ ಕಂಪನಿಯವರಿಗೂ ಉತ್ತಮ ಅಭ್ಯರ್ಥಿಗಳ ಅವಶ್ಯಕತೆಯಿರುತ್ತದೆ. ಕಂಪನಿಯಲ್ಲಿನ ಅವಕಾಶ ಮತ್ತು ಸವಾಲುಗಳ ಕುರಿತು, ಕಂಪನಿಯ ದೂರದೃಷ್ಟಿ, ಬಂಡವಾಳ, ನೀತಿ-ನಿಯಮ, ಕಾರ್ಯಾಚರಣೆ, ಆಯವ್ಯಯ, ಉತ್ಪನ್ನಗಳ ವಿವರ, ಮಾರುಕಟ್ಟೆಯ ಪಾಲು ಇತ್ಯಾದಿಗಳ ಮಾಹಿತಿ ಸಂಗ್ರಹಿಸಿದರೆ ಆತ್ಮವಿಶ್ವಾಸ ಸ್ವಾಭಾವಿಕವಾಗಿಯೇ ಮೂಡುತ್ತದೆ. ಆದರೆ, ನಿಮ್ಮ ನಡೆನುಡಿಯಲ್ಲಿ ಈ ಆತ್ಮವಿಶ್ವಾಸ ಅಹಂಕಾರದಂತೆ ಕಾಣದಿರಲಿ.
  • ಸ್ವಾಭಾವಿಕ ಆಂಗಿಕಭಾಷೆ: ಸಂದರ್ಶಕರ ಮೇಲೆ ಅತಿಯಾದ ಪರಿಣಾಮ ಬೀರಲು ಹೋದರೆ ಎಡವಟ್ಟಾಗಬಹುದು. ನುರಿತ ಸಂದರ್ಶಕರು ನಿಮ್ಮ ಹಾವಭಾವಗಳಿಂದ ಆಲೋಚನೆಗಳನ್ನು ಅರಿಯಬಲ್ಲರು. ಆದ್ದರಿಂದ, ನಿಮ್ಮ ದೇಹಭಾಷೆಗೂ [ಬಾಡಿ ಲ್ಯಾಂಗ್ವೇಜ್], ಆಲೋಚನೆಗಳಿಗೂ ಸಾಮ್ಯತೆಯಿದ್ದು, ಉತ್ತರಗಳಲ್ಲಿ ಪ್ರಾಮಾಣಿಕತೆಯಿರಲಿ. ದೇಹದ ನಿಲುವು ಮತ್ತು ಚಲನೆ, ನಿಮ್ಮೊಳಗಿನ ಸಕಾರಾತ್ಮಕ ಆಲೋಚನೆಗಳಿಗೆ ಪೂರಕವಾಗಿರಲಿ.
  • ಸಂದರ್ಶನದ ಕಾರ್ಯತಂತ್ರ: ವೈಯಕ್ತಿಕ, ಉದ್ಯೋಗ ಮತ್ತು ಕೌಶಲ ಸಂಬಂದಿತ ಪ್ರಶ್ನೆಗಳನ್ನು ಫನಲ್ ತಂತ್ರದಂತೆ ಕೇಳುತ್ತಾ ಹೋಗುವುದು ಸಂದರ್ಶಕÀರ ಸಾಮಾನ್ಯ ಕಾರ್ಯತಂತ್ರ. ಉದಾಹರಣೆಗೆ, ‘ನಿಮ್ಮ ಹವ್ಯಾಸಗಳೇನು’ ಎನ್ನುವ ಸಾಮಾನ್ಯ ಪ್ರಶ್ನೆಯ ಹಿಂದೆ ಅಡಕವಾಗಿರುವ ಉದ್ದೇಶ ನಿಮ್ಮ ಗ್ರಹಿಕೆಗೆ ಸಿಲುಕದಂತಿರಬಹುದು. ಇಂತಹ ಪ್ರಶ್ನೆಗಳನ್ನು ಉತ್ತರಿಸುತ್ತಾ ಹೋದಂತೆ, ಉತ್ತಮ ಹವ್ಯಾಸಗಳಿಲ್ಲದಿದ್ದರೆ, ನೀವು ಸೋಮಾರಿಯೆನ್ನುವ ಅಭಿಪ್ರಾಯ ಅಥವಾ ನಿಮ್ಮ ಕಾರ್ಯಕ್ಷಮತೆಯ ಬಗ್ಗೆ ನೀವೇ ಸಂದೇಹವನ್ನು ಮೂಡಿಸುವ ಸಾಧ್ಯತೆಗಳ ಬಗ್ಗೆ ಎಚ್ಚರವಿರಲಿ.
  • ಹಾಗೆಯೇ, ಸಂದರ್ಶಕರು ಉದ್ದೇಶಪೂರ್ವಕವಾಗಿ ಊಹಿತ ಸನ್ನಿವೇಶಗಳನ್ನು ಸೃಷ್ಟಿಸಿ, ಒತ್ತಡದ ಪ್ರಶ್ನೆಗಳಿಂದ ಅಭ್ಯರ್ಥಿಗಳ ಪ್ರತಿಕ್ರಿಯೆ ಮತ್ತು ಪರಿಪಕ್ವತೆಯನ್ನು ಗಮನಿಸುತ್ತಾರೆ. ಒತ್ತಡ ತರುವ ಪ್ರಶ್ನೆಗಳಿಂದ ಕಂಗಾಲಾಗದೆ, ಆತ್ಮವಿಶ್ವಾಸದಿಂದ ಉತ್ತರಿಸಿದರೆ, ನಿಮ್ಮ ವ್ಯಕ್ತಿತ್ವದ ಪ್ರೌಢತೆಯಿಂದ ಸಂದರ್ಶಕರ ಮೇಲೆ ಪ್ರಭಾವ ಬೀರಬಹುದು.
  • ಸಂದರ್ಶಕರ ಪ್ರಶ್ನೆಗಳು: ನಿಮ್ಮ ಕೌಟುಂಬಿಕ ಹಿನ್ನೆಲೆ, ಸಾಮಥ್ರ್ಯ ಮತ್ತು ದೌರ್ಬಲ್ಯಗಳು, ವ್ಯಕ್ತಿತ್ವzಲ್ಲಿನÀ ಸುಧಾರಣೆ, ಜೀವನದ ಧ್ಯೇಯ ಮತ್ತು ಸಾಧಿಸುವ ಮಾರ್ಗ, ಉದ್ಯೋಗದಲ್ಲಿನ ನಿರೀಕ್ಷೆ ಇತ್ಯಾದಿಗಳನ್ನು ಅವಲಂಬಿಸುತ್ತದೆ. ಇಂತಹ ಪ್ರಶ್ನೆಗಳನ್ನು ನಿರೀಕ್ಷಿಸಿ, ಸೂಕ್ತವಾಗಿ ಉತ್ತರಿಸಿ.
  • ಅಭ್ಯರ್ಥಿಗಳ ಪ್ರಶ್ನೆಗಳು: ಅಂತಿಮ ಘಟ್ಟದಲ್ಲಿ ಪ್ರಶ್ನೆಗಳೇನಾದರೂ ಇವೆಯೇ ಎಂದು ಸಂದರ್ಶಕರು ಕೇಳಿದಾಗ, ಸಮಯೋಚಿತವಾಗಿ ಜಾಣತನದ ಪ್ರಶ್ನೆಗಳನ್ನು ಕೇಳುವುದರಿಂದ ನಿಮ್ಮ ವ್ಯಕ್ತಿತ್ವದ ಬೇರೊಂದು ದೃಷ್ಟಿಕೋನವನ್ನು ಪರಿಚಯಿಸಿ, ನಿಮ್ಮ ಆಯ್ಕೆ ಖಚಿತವಾಗುವಂತೆ ಮಾಡಬಹುದು. ನೀವು ಕೇಳಬಹುದಾದ ಪ್ರಶ್ನೆಗಳು ತರಬೇತಿ, ವೈಯಕ್ತಿಕ ಬೆಳವಣಿಗೆ ಮತ್ತು ಪ್ರಗತಿ, ಮಾರಾಟ ಪ್ರಕ್ರಿಯೆ, ಗ್ರಾಹಕರ ಆಸಕ್ತಿ ಮತ್ತು ಅಭಿರುಚಿ, ತಂತ್ರಜ್ಞಾನ ಇತ್ಯಾದಿಗಳ ಕುರಿತಾಗಿರಲಿ. ಪ್ರಶ್ನೆಗಳನ್ನು ಕೇಳುವ ಧಾಟಿಯಲ್ಲಿ ಸೌಮ್ಯತೆ ಮತ್ತು ಅಸಕ್ತಿಯಿರಲಿ.

ಸ್ಪಷ್ಟವಾದ ಗುರಿ, ಸಾಧಿಸುವ ಛಲ ಮತ್ತು ಗೆಲ್ಲುವ ಆತ್ಮವಿಶ್ವಾಸವಿದ್ದರೆ, ಉಜ್ವಲ ಭವಿಷ್ಯ ನಿಮ್ಮದಾಗಬಲ್ಲದು.

ಸಂದರ್ಶನದ ಸೂತ್ರಗಳು 

  • ಕಂಪನಿ ಮತ್ತು ಉದ್ಯೋಗದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ.
  • ಆಡಂಬರವಿಲ್ಲದೆ ವೇಶಭೂಷಣ ಅಚ್ಚುಕಟ್ಟಾಗಿರಲಿ; ಆಭರಣ, ಪರಿಮಳದ ಬಳಕೆಯಲ್ಲಿ ಮಿತಿಯಿರಲಿ; ಮುಗುಳ್ನಗೆಯಿರಲಿ.
  • ಪ್ರಶ್ನೆಗಳನ್ನು ನಿರೀಕ್ಷಿಸಿ; ಪ್ರಾಮಾಣಿಕವಾಗಿ, ಆತ್ಮವಿಶ್ವಾಸದಿಂದ ಉತ್ತರಿಸಿ.
  • ಶೈಕ್ಷಣಿಕ, ಉದ್ಯೋಗ ಮತ್ತು ಸಾಮಾನ್ಯ ಜ್ಞಾನ ಪ್ರಸ್ತುತವಿರಲಿ.

ಸ್ಥಳದಲ್ಲೇ ನೇಮಕಾತಿಯಾದರೆ, ಉದ್ಯೋಗವನ್ನು ಸ್ವೀಕರಿಸುವ ಮುನ್ನ ನಿಯಮ-ನಿಬಂಧನೆಗಳನ್ನು ಅರಿಯಿರಿ.

Download PDF document

                  

About author View all posts Author website

V Pradeep Kumar

Leave a Reply

Your email address will not be published. Required fields are marked *